ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

'ಮರೆತು ಹೋಗುವುದು' ಎಂಬ ವಿದ್ಯಮಾನದ ಸುತ್ತ ಹೀಗೊಂದು ಗಜ಼ಲ್ ಹೆಣೆದವರು ಡಾ.ಗೋವಿಂದ್ ಹೆಗಡೆಯವರು.
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಬೆಳ್ಳಗಿರುವುದು ಹಾಲಲ್ಲ ಮರೆತೇ ಹೋಗುತ್ತದೆ
ಮೃಗಜಲವು ನೀರಲ್ಲ ಮರೆತೇ ಹೋಗುತ್ತದೆ

ಹೇಗೆಲ್ಲ ಹಳ್ಳಕ್ಕೆ ಬೀಳಿಸಿ ನಗುವವರಿದ್ದಾರೆ
ಪಾಠ ಕಲಿತಿದ್ದೆಲ್ಲ ಮರೆತೇ ಹೋಗುತ್ತದೆ

ಹುಡುಹುಡುಕಿ ಅಲೆದು ಬಳಲಿದ್ದು ಎಷ್ಟು
ಸಿಕ್ಕಿದ್ದೆಲ್ಲ ಚಿನ್ನವಲ್ಲ,ಮರೆತೇ ಹೋಗುತ್ತದೆ

ದೇಶ ಸುತ್ತಿ ಕೋಶ ಓದಿ ದಿನ ಕಳೆದೆ ಗೆಳೆಯ
ನಿನ್ನನ್ನು ಕಾಣಲಿಲ್ಲ, ಮರೆತೇ ಹೋಗುತ್ತದೆ

ಈ ಕಪ್ಪೆಗಳ ವಟವಟಕ್ಕೆ ಏನು ಅರ್ಥ, ಸಖ
ಮಳೆಯ ಹಿತಶ್ರುತಿಯೆಲ್ಲ ಮರೆತೇ ಹೋಗುತ್ತದೆ

ನೀಲಿಯಲಿ ಕಣ್ಣ ನೆಟ್ಟು ಸೋತುಹೋದೆ ಜಂಗಮ
ಮಿನುಗಿದ್ದೆಲ್ಲ ತಾರೆಯಲ್ಲ, ಮರೆತೇ ಹೋಗುತ್ತದೆ