ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮುಂಬಯಿ ಕನ್ನಡಿಗರ ಜ್ಞಾನ ದೇಗುಲ- ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ

ನಮ್ಮ ದೇಶದ ಅತ್ಯಂತ ಹಳೆಯ ವಿಶ್ವವಿದ್ಯಾಲಯಗಳಲ್ಲಿ ಮುಂಬಯಿ ವಿಶ್ವವಿದ್ಯಾಲಯವೂ ಒಂದು. 1857 ರಲ್ಲಿ ಆರಂಭವಾದ ಮುಂಬಯಿ ವಿಶ್ವವಿದ್ಯಾಲಯ ಅನೇಕ ದೃಷ್ಟಿಯಿಂದ ಜಾಗತಿಕ ಮನ್ನಣೆ ಗಳಿಸಿಕೊಂಡಿದೆ. ಮುಂಬಯಿ ವಿಶ್ವವಿದ್ಯಾಲಯ ದೇಶದ ಮುಂಚೂಣಿಯಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂಬುದು ಮಹತ್ವದ ಸಂಗತಿ. ಕನ್ನಡಕ್ಕೂ, ಕರ್ನಾಟಕಕ್ಕೂ, ಮುಂಬಯಿ ವಿಶ್ವವಿದ್ಯಾಲಯಕ್ಕೂ ಇರುವ ನಂಟು ವಿಶೇಷವಾದುದು. ಶ್ಯಾಮರಾವ್ ವಿಠ್ಠಲ ಕೈಕಿಣಿ ಮತ್ತು ರಾ.ಹ. ದೇಶಪಾಂಡೆ ಅವರು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಡುವದರಲ್ಲಿ ಪ್ರಮುಖ ಪಾತ್ರವಹಿಸಿದವರು. ಇವರ ಜತೆಗೆ ಮುಂಬಯಿ ಕನ್ನಡಿಗರು, ಗಣ್ಯ ವಿದ್ವಾಂಸರು, ಸಾಹಿತಿಗಳು ಹಾಗೂ ಮುಂಬಯಿಯ ಎಲ್ಲ ಸಂಘ-ಸಂಸ್ಥೆಗಳು ಸೇರಿಕೊಂಡು ಕನ್ನಡ ಅಧ್ಯಯನ ಪೀಠದ ಸ್ಥಾಪನೆಗೆ ಒತ್ತಾಸೆಯಾಗಿ ನಿಂತಿದ್ದರ ಫಲವಾಗಿ ಮುಂಬಯಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕನ್ನಡ ಅಧ್ಯಯನಕ್ಕೆ ಸಾಕಷ್ಟು ಪೆÇ್ರೀತ್ಸಾಹ ಸಿಕ್ಕಿತ್ತು. ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳ ಒಪ್ಪಂದದ ಮೆರೆಗೆ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮರಾಠಿ ವಿಭಾಗದ ಸ್ಥಾಪನೆಯಾಯಿತು. 1979 ರಲ್ಲಿ ಆರಂಭಗೊಂಡ ಕನ್ನಡ ವಿಭಾಗಕ್ಕೆ ಈಗ ನಲ್ವತ್ತೆರಡರ ಹರೆಯ. ಪೆÇ್ರ.ಚಿದಂಬರ ದೀಕ್ಷಿತ, ಶ್ರೀನಿವಾಸ ಹಾವನೂರ, ತಾಳ್ತಜೆ ವಸಂತಕುಮಾರ್, ಜಿ.ಎನ್.ಉಪಾಧ್ಯ ಇವರುಗಳು ಈ ಕನ್ನಡ ವಿಭಾಗದ ಬೆಳೆವಣಿಗೆಗೆ ತಮ್ಮ ಅಮೋಘವಾದ ಕಾಣಿಕೆ ಇತ್ತಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಉನ್ನತ ಅಧ್ಯಯನ, ಆಳವಾದ ಸಂಶೋಧನೆ ಮತ್ತು ಪ್ರಬುದ್ಧ ಗ್ರಂಥಗಳ ಪ್ರಕಟಣೆ ಹಾಗೂ ನಿರಂತರವಾದ ಕನ್ನಡ ಕಲಿಕೆಯ ಕೋರ್ಸ್‍ಗಳ ಉಸ್ತುವರಿ ಹೀಗೆ ಹತ್ತು ಹಲವು ಕಾರ್ಯಗಳಿಂದ ತನ್ನದೇ ಆದ ಚಹರೆಯನ್ನು ಪಡೆದು ಕೊಂಡಿದೆ. ಈ ವರೆಗೆ ವಿಭಾಗದ ಮೂಲಕ 46 ಮಂದಿ ಪಿಎಚ್.ಡಿ ಹಾಗೂ 82 ಮಂದಿ ಎಂ.ಫಿಲ್ ಪದವಿ ಪಡೆದುಕೊಂಡಿದ್ದಾರೆ. ನಾಡಿನ ಇತರ ವಿಶ್ವವಿದ್ಯಾಲಯಗಳಿಗಿಂತ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ವಿಭಿನ್ನ, ವಿಶಿಷ್ಟತೆಯಿಂದ ಕಾರ್ಯ ನಿರ್ವಹಿಸುತ್ತಿದೆ.

ಕನ್ನಡ ವಿಭಾಗದ ಮುಖ್ಯಸ್ಠರು ಡಾ. ಜಿ. ಎನ್. ಉಪಾಧ್ಯ

1857 ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಪ್ರಾರಂಭವಾದುದು. ಅಲ್ಲಿ ಇಂಗ್ಲೀಷ್ ಭಾಷೆಯೊಡನೆ ಸಂಸ್ಕೃತ ಹಾಗೂ ಪರ್ಶಿಯನ್ ಭಾಷೆಗಳಿಗೆ ಮಾತ್ರ ಸ್ಥಾನ ಕಲ್ಪಿಸಲಾಗಿತ್ತು. 1902 ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅಧಿಕೃತವಾಗಿ ಸ್ನಾತಕೋತ್ತರ ಮಟ್ಟದಲ್ಲಿ ಕನ್ನಡಕ್ಕೆ ಸ್ಥಾನ ದೊರಕಿತು. ಆದರೆ, ನಿಜವಾಗಿಯೂ ಸ್ನಾತಕ ಮಟ್ಟದಲ್ಲಿ ಮುಂಬಯಿ ವಿಶ್ವವಿದ್ಯಾಲಯವನ್ನು ಕನ್ನಡ ಪ್ರವೇಶಿಸಿದ್ದು 1921 ರಲ್ಲಿಯೇ. 1921 ರಲ್ಲಿ ಭಾರತೀಯ ಭಾಷೆಗೆ ಒಂದು ಅಧ್ಯಯನ ಮಂಡಳಿಯ ನೇಮಕವಾಯಿತು. ಆ ವರ್ಷವೇ ಎಂ.ಎ ಪರೀಕ್ಷೆಯಲ್ಲಿ ಕೆಲವು ವಿಷಯಗಳ ಪ್ರಶ್ನೆಪತ್ರಿಕೆಗಳಿಗೆ ಭಾರತೀಯ ಭಾಷೆಗಳಲ್ಲಿ ಉತ್ತರಿಸುವ ಅನುಮತಿ ದೊರೆಯಿತು. 1922 ರಲ್ಲಿ ಮರಾಠಿ, ಗುಜರಾತಿ ಮತ್ತು ಕನ್ನಡಕ್ಕೆ ಪ್ರತ್ಯೇಕ ಅಧ್ಯಯನ ಮಂಡಳಗಳನ್ನು ರಚಿಸಿ ವಿಶೇಷ ಪೆÇ್ರೀತ್ಸಾಹ ನೀಡುವಂತೆ ಮಾಡಿದುದು ಒಂದು ಪ್ರಮುಖ ದಾಖಲೆ. 1923 ರಿಂದ ಎಂ.ಎ ಪರೀಕ್ಷೆಗೆ ಭಾರತೀಯ ಭಾಷೆಗಳನ್ನು ಮುಖ್ಯ ವಿಷಯವನ್ನಾಗಿ ಆಯ್ಕೆ ಮಾಡಲು ಸಾಧ್ಯವಾದುದು ಮುಂಬಯಿ ಕನ್ನಡಿಗರಿಗೆ ಬಹಳಷ್ಟು ಪ್ರಯೋಜನಕಾರಿಯಾಯಿತು. ವರಕವಿ ದ.ರಾ.ಬೇಂದ್ರೆ ಅವರೇ ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಮೊಟ್ಟಮೊದಲು ಎಂ.ಎ. ಪದವೀದರರಾದುದು ತುಂಬ ಅಭಿಮಾನದ ವಿಷಯ.

ಡಿ.ಎಸ್.ಕರ್ಕಿಯವರಿಗೆ ‘ಕನ್ನಡ ಛಂದೋವಿಕಾಸ’ ಮಹಾಪ್ರಬಂಧಕ್ಕೆ ಮುಂಬಯಿ ವಿಶ್ವವಿದ್ಯಾಲಯದಿಂದ ಮೊಟ್ಟಮೊದಲು ಡಾಕ್ಟರೇಟ್ ಪದವಿ ದೊರೆತುದು ಹೆಮ್ಮೆಯ ವಿಚಾರ. 1954 ರಿಂದ 1979 ರವರೆಗೆ ಕನ್ನಡ ಅಧ್ಯಯನ ರೂಪಾರೆಲ್ ಕಾಲೇಜಿನಲ್ಲಿ ನಡೆಯುತ್ತಿತ್ತು. ಪೆÇ್ರ.ಚಿದಂಬರ ದೀಕ್ಷಿತರು ಅಲ್ಲಿ ಪ್ರಾಧ್ಯಾಪಕರಾಗಿದ್ದರು. ಅಂದು ಮುಂಬಯಿಯ ಪ್ರಭಾವಶಾಲಿ ಕನ್ನಡಿಗರ ಮುಂದಾಳುತನದಿಂದ, ಕಾಲೇಜುಗಳ ಕನ್ನಡ ಪ್ರಾಧ್ಯಾಪಕರು, ಹಿರಿಕಿರಿಯ ಸಾಹಿತಿಗಳ ಬೆಂಬಲ ಇವರೆಲ್ಲರ ಸಂಯುಕ್ತ ಪ್ರಯತ್ನದ ಫಲವಾಗಿ ಅಧಿಕೃತವಾಗಿ 1979 ರಲ್ಲಿ ಕನ್ನಡ ವಿಭಾಗ ಆರಂಭವಾಯಿತು.

ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸ್ಥಾಪನೆಯ ಮೊದಲು ಸ್ನಾತಕೋತ್ತರ ಅಧ್ಯಯನ ರೂಪಾರೆಲ್ ಕಾಲೇಜಿನಲ್ಲಿ ನಡೆಯುತ್ತಿತ್ತು. ಅಲ್ಲಿ ಪೆÇ್ರ.ಚಿದಂಬರ ದೀಕ್ಷಿತರು ಪ್ರಾಧ್ಯಾಪಕರಾಗಿದ್ದರು. ರೂಪಾರೆಲ್ ಕಾಲೇಜಿನ ಒಂದು ಸಣ್ಣ ಕೊಠಡಿಯಲ್ಲಿ ಎಂ.ಎ ತರಗತಿಗಳು ನಡೆಯುತ್ತಿದ್ದವು. ದೀಕ್ಷಿತರು ವಿದ್ಯಾಥಿರ್s ಪ್ರಿಯರಾಗಿದ್ದರು. ಅಂದಿನ ಎಂ.ಎ ವಿದ್ಯಾಥಿರ್sಗಳು ತಮ್ಮ ಗುರುಗಳಾದ ಚಿದಂಬರ ದೀಕ್ಷಿತರಿಗೆ ಸ್ವಂತದ ಕನ್ನಡ ವಿಭಾಗ ಇಲ್ಲದಿರುವ ವ್ಯಥ್ಯೆಯನ್ನು ತೋಡಿಕೊಂಡರು. ದೀಕ್ಷಿತರಿಗೂ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸ್ಥಾಪನೆಯಾಗಬೇಕೆಂಬ ಆಸೆ ಬಹು ದಿನದಿಂದಲೇ ಇತ್ತು. ವಿದ್ಯಾಥಿರ್sಗಳ ಬೆಂಬಲದೊಂದಿಗೆ ಕನ್ನಡ ವಿಭಾಗದ ಸ್ಥಾಪನೆಗೆ ಮುಂದಾದರು. ತನ್ನ ಎಲ್ಲ ಕಾರ್ಯಕಲಾಪಗಳನ್ನೂ ಅಲಕ್ಷ್ಯಿಸಿ ವಿಭಾಗದ ಸ್ಥಾಪನಾಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಡಾ.ಶೇಷೋ ಬ್ಯಾತನಾಳ ಅವರು ಕೂಡ ದೀಕ್ಷಿತರ ಜೊತೆ ಸೇರಿಕೊಂಡರು. ಗಣ್ಯ ವ್ಯಕ್ತಿಗಳು, ಜನಸಾಮಾನ್ಯರಾದ ಮುಂಬಯಿ ಕನ್ನಡಿಗರು ಹಾಗೂ ಮುಂಬಯಿಯ ಎಲ್ಲ ಸಂಘ-ಸಂಸ್ಥೆಗಳು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸ್ಥಾಪನೆಗಾಗಿ ಬಿರುಸಾದ ಹೋರಾಟವನ್ನು ನಡೆಸಿದರು. ಕರ್ನಾಟಕ ಸಂಘ ಮಾಟುಂಗಾದ ಸ್ಥಾಪನಾಧ್ಯಕ್ಷರಲ್ಲಿ ಒಬ್ಬರಾದ ವರದರಾಜ ಆದ್ಯರು ಈ ಹೋರಾಟಕ್ಕೆ ತೀವ್ರ ಗತಿ ಒದಗಿಸಿದರು. ಅದರಿಂದಾಗಿ ಅಂದಿನ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಜಿ.ವಿ.ಕೆ ರಾವ್ ಅವರ ಸೂಕ್ತ ಸಲಹೆ ಮೇರೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮರಾಠಿ ಮತ್ತು ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಸ್ಥಾಪನೆಯಾಯಿತು. ಹೀಗೆ 1979 ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಸ್ಥಾಪನೆಗೊಂಡಿತು. ವಿಭಾಗದ ಉದ್ಘಾಟನೆ ಮಾಡಲು ಕನ್ನಡದ ಖ್ಯಾತ ಲೇಖಕ, ಕಾದಂಬರಿಕಾರ ಶಿವರಾಮ ಕಾರಂತರು ಬಂದಿದ್ದರು. “ಅಧ್ಯಯನ ಪೀಠ ಆರಂಭಿಸಿದೊಡನೆ ಹೊಣೆಗಾರಿಕೆ ಮುಗಿಯುವುದಿಲ್ಲ. ಸಂಶೋಧನೆ ಕಾರ್ಯ ನಿರಂತರ ನಡೆಯುವಂತೆ ನೋಡಿಕೊಳ್ಳುವುದು ಮುಖ್ಯ” ಎಂದು ಶಿವರಾಮ ಕಾರಂತರು ಕನ್ನಡ ವಿಭಾಗವು ಮುಂದೆ ಬೆಳೆದು ಅಭಿವೃದ್ಧಿಯಾಗಿ ಶಾಶ್ವತವಾಗಿ ನೆಲೆಗೊಳ್ಳಬೇಕೆಂದು ನುಡಿದಿದ್ದರು. ಕಾರಂತರು ಆಡಿದ ಮಾತಿನಂತೆ ಇಂದು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಒಳ ಹೊರನಾಡಿನಲ್ಲಿ ಸಂಶೋಧನ ಅಧ್ಯಯನಗಳಿಂದ ತುಂಬ ಪ್ರಸಿದ್ಧಿ ಪಡೆದಿದೆ.
1979ರಲ್ಲಿ ಸ್ಥಾಪನೆಯಾದ ಕನ್ನಡ ವಿಭಾಗಕ್ಕೆ ಪ್ರೊ.ಚಿದಂಬರ ದೀಕ್ಷಿತರು ಮೊದಲನೆಯ ಮುಖ್ಯಸ್ಥರಾದರು. ಅವರು ರಚನಾತ್ಮಕ ಕಾರ್ಯಕ್ರಮಗಳನ್ನು ಹಾಕಿಕೊಂಡು ವಿಭಾಗಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಕನ್ನಡ ವಿಭಾಗದ ಕಾರ್ಯವ್ಯಾಪ್ತಿಯ ರೂಪುರೇಷೆ, ಬೋಧನೆ, ಸಂಶೋಧನೆಗಳು ಉತ್ತಮ ರೀತಿಯಲ್ಲಿ ನಡೆಯುವಂತೆ ನೋಡಿಕೊಂಡರು. 1982 ರಲ್ಲಿ ದೀಕ್ಷಿತರು ವಿಭಾಗದ ಹುದ್ದೆಯಿಂದ ನಿವೃತ್ತರಾದರು. ಆಮೇಲೆ ಸ್ವಲ್ಪಕಾಲ ಡಾ.ಎಚ್.ಎಸ್.ಬಿಳಿಗಿರಿಯವರು ವಿಭಾಗದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಕವಿಯಾಗಿ, ಭಾಷಾವಿಜ್ಞಾನಿಯಾಗಿ ಹೆಸರು ಮಾಡಿದ್ದರು. ಅವರು ಅಲ್ಲಿಯ ಭಾಷಾವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಕನ್ನಡದವರೇ ಆದುದರಿಂದ ಕನ್ನಡ ವಿಭಾಗದ ಹೊಣೆಯನ್ನು ಅವರಿಗೆ ವಹಿಸಿಕೊಡಲಾಯಿತು. ಎರಡು ವರ್ಷಗಳ ಕಾಲಾವಧಿಯ ಹೊಣೆಯನ್ನು ಅವರು ಹೊತ್ತುಕೊಂಡು ಕನ್ನಡಾಭಿಮಾನವನ್ನು ತೋರಿಸಿದ್ದಾರೆ. ಮುಂಬಯಿ ಕನ್ನಡಿಗರು ಕೂಡ ವಿಭಾಗ ಉಳಿಯುವಂತೆ ನೋಡಿಕೊಂಡಿದ್ದಾರೆ. ತಾವು ಯಾವುದೇ ಸರಕಾರಿ ಕಛೇರಿಯಲ್ಲಿ ದುಡಿಯಲಿ, ಶಾಲೆ, ಕಾಲೇಜು, ಪ್ಯಾಕ್ಟರಿಗಳಲ್ಲಿ ದುಡಿಯಲಿ, ದಿನಗೂಲಿ ಮಾಡುತ್ತಾ, ಹೋಟೆಲುಗಳಲ್ಲಿ ದುಡಿಯುತ್ತಾ ಮುಂಬಯಿ ಕನ್ನಡಿಗರ ಒಳ್ಳೆಯ ಮನಸ್ಸುಗಳು ತಮಗೇನೂ ಲಾಭವಿಲ್ಲದೆ ಇದ್ದರೂ, ವಿಭಾಗದಲ್ಲಿ ಎಂ.ಎ. ತರಗತಿಗಳಿಗೆ ಪ್ರವೇಶ ಪಡೆದು ಅದು ಬಡವಾಗದಂತೆ ನೋಡಿಕೊಂಡಿರುವುದು ಈಗ ಇತಿಹಾಸ.

1984 ರಲ್ಲಿ ಶ್ರೀನಿವಾಸ ಹಾವನೂರ ಅವರು ವಿಭಾಗದ ಮುಖ್ಯಸ್ಥರಾಗಿ ಬಂದರು. ಅವರ ಕಾರ್ಯ ತತ್ಪರತೆಯಿಂದಾಗಿ ಹೊರನಾಡಿನ ವಿಶ್ವವಿದ್ಯಾಲಯಗಳಿಗಿಂತ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಉತ್ತಮ ವಿಭಾಗವೆಂದು ಪ್ರಸಿದ್ಧಿ ಪಡೆಯಿತು. ಸ್ವತಃ ಸಂಶೋಧಕರಾಗಿದ್ದ ಅವರು ವಿಭಾಗಕ್ಕೆ ಸ್ವತಂತ್ರ ಗ್ರಂಥ ಭಂಡಾರವನ್ನು ಸ್ಥಾಪಿಸಿದರು. ಅಲ್ಲಿ ಹೊಸ ಹೊಸ ಆಕರ ಗ್ರಂಥಗಳು ಬಂದು ಸೇರುವಂತೆ ವ್ಯವಸ್ಥೆ ಮಾಡಿದರು. ಕನ್ನಡ ಕಲಿಕೆಯ ಸರ್ಟಿಫಿಕೇಟ್ ಕೋರ್ಸ್, ಎಂ.ಫಿಲ್ ಅಧ್ಯಯನಗಳಿಗೆ ಅವಕಾಶವನ್ನು ಕಲ್ಪಿಸಿದರು. ಹೊರನಾಡಿನ ವಿಧ್ಯಾರ್ಥಿಗಳು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಕಡೆಗೆ ಆಕರ್ಷಿಸುವಂತೆ ಅನೇಕ ರೂಪುರೇಷೆಗಳನ್ನು ಆಯೋಜಿಸಿದರು. ನಾಡಿನ ಸಾಹಿತಿ, ವಿದ್ವಾಂಸರನ್ನು ವಿಭಾಗಕ್ಕೆ ಆಮಂತ್ರಿಸಿ ಉಪನ್ಯಾಸಗಳು ನಡೆಯುವಂತೆ ನೋಡಿಕೊಂಡರು. ವಿದ್ವಾಂಸರ ಉಪನ್ಯಾಸಗಳನ್ನು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖಾಂತರವೇ ಮುದ್ರಿಸಿದರು. ಇಂಥ ಗ್ರಂಥಗಳು ಈಗಲೂ ವಿದ್ಯಾಥಿರ್sಗಳಿಗೆ ಮಾರ್ಗದರ್ಶನ ಗ್ರಂಥಗಳಾಗಿ ಗ್ರಂಥ ಭಂಡಾರದಲ್ಲಿವೆ. ಹೀಗೆ ಅವರು ವಿಶೇಷ ಉಪನ್ಯಾಷಗಳು, ವಿಚಾರ ಸಂಕಿರಣಗಳು, ಗ್ರಂಥ ಪ್ರಕಟಣೆಗಳು ವಿಭಾಗದ ಗ್ರಂಥಾಲಯದ ಸಂವರ್ಧನೆ ಹಾಗೂ ಜನಸಂಪರ್ಕದಂತಹ ಚಟುವಟಿಕೆಗಳಿಂದ ವಿಭಾಗವನ್ನು ಕ್ರಿಯಾಶೀಲವಾಗಿರಿಸಿದ್ದರು.

1986 ರಲ್ಲಿ ತಾಳ್ತಜೆ ವಸಂತಕುಮಾರ್ ಅವರು ವಿಭಾಗದಲ್ಲಿ ಉಪನ್ಯಾಸಕರಾಗಿ ನಿಯುಕ್ತಿಗೊಂಡರು. ಇವರು ಬೋಧನೆ, ಸಂಶೋಧನೆ, ಕಾರ್ಯಾಕಲಾಪಗಳ ಸಂಯೋಜನೆ, ನಿರ್ವಹಣೆ ಇವುಗಳಲ್ಲಿ ಹಾವನೂರರವರಿಗೆ ನೆರವಾದರು. ಹಾವನೂರವರ ನಿವೃತ್ತಿಯ ನಂತರ ತಾಳ್ತಜೆ ವಸಂತಕುಮಾರರು 1989 ರಿಂದ ವಿಭಾಗದ ಮುಖ್ಯಸ್ಥರಾಗಿ ಹಾವನೂರರು ಹಾಕಿಕೊಟ್ಟ ತಳಪಾಯವನ್ನು ಸಾಕಷ್ಟು ವಿಸ್ತಾರವಾಗಿ ಹಮ್ಮಿ ಕೊಂಡರು. ವಿಶೇಷ ಉಪನ್ಯಾಷಗಳು, ವಿಚಾರ ಸಂಕಿರಣಗಳು, ಕಮ್ಮಟಗಳು, ಕೃತಿಗಳ ಪ್ರಕಟಣೆ ಹೀಗೆ ಅನೇಕ ನೆಲೆಗಳಲ್ಲಿ ವಿಭಾಗ ಮತ್ತಷ್ಟು ಕ್ರಿಯಾಶೀಲವಾಗುವಂತೆ ಮಾಡಿದರು. 2001 ರ ಬಳಿಕ ವಿಶ್ವವಿದ್ಯಾಲಯ ಅಂಗೀಕರಿಸಿದ ಮುಖ್ಯಸ್ಥ ಹುದ್ಧೆಯ ಆವರ್ತನ ನಿಯಮದಂತೆ ಜಿ.ಎನ್.ಉಪಾಧ್ಯ ಅವರು ಮೂರು ವರ್ಷ ವಿಭಾಗದ ಮುಖ್ಯಸ್ಥರಾಗಿ ಹೊಣೆಗಾರಿಕೆ ವಹಿಸಿಕೊಂಡರು. ನಂತರ 2004 ರಿಂದ 2007ರ ವರೆಗೆ ಪುನಃ ತಾಳ್ತಜೆ ವಸಂತಕುಮಾರ್ ಅವರು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಆಮೇಲೆ 2007 ರಿಂದ ಇಲ್ಲಿಯವರೆಗೆ ಜಿ.ಎನ್.ಉಪಾಧ್ಯ ಅವರು ವಿಭಾಗದ ಹೊಣೆಯನ್ನು ವಹಿಸಿಕೊಂಡಿದ್ದಾರೆ. ಇವರು ಹಾವನೂರ, ತಾಳ್ತಜೆ ವಸಂತಕುಮಾರರಂತೆ ಸಂಶೋಧಕರಾಗಿ ಹೆಸರು ಮಾಡಿದ್ದಾರೆ. ಕನ್ನಡ ವಿಭಾಗವನ್ನು ಮುಂಬಯಿ ಕನ್ನಡಿಗರ ಆಕರ್ಷಣೆಯ ಕೇಂದ್ರವನ್ನಾಗಿ ರೂಪಿಸುವಲ್ಲಿ ಡಾ. ಉಪಾಧ್ಯರ ಸೇವೆ ಅನನ್ಯವಾಗಿದೆ. ಕನ್ನಡ ವಿಭಾಗದ ಬೆಳವಣಿಗೆಯಲ್ಲಿ ಸ್ಥಳೀಯ ಕಾಲೇಜುಗಳ ಪ್ರಾಧ್ಯಾಪಕರಾದ ಡಾ.ಸುನೀತಾ ಶೆಟ್ಟಿ, ಡಾ.ಜಿ.ಡಿ.ಜೋಶಿ, ಡಾ.ಸಂಜೀವ ಶೆಟ್ಟಿ ಮೊದಲಾದವರು ಕೈ ಜೋಡಿಸಿದ್ದಾರೆ. ಅಲ್ಲದೆ ಸದ್ಯದಲ್ಲಿ ಡಾ.ಜೀವಿ ಕುಲಕರ್ಣಿ, ಡಾ.ವಿಶ್ವನಾಥ ಕಾರ್ನಾಡ್, ಡಾ.ಕೆ.ರಘುನಾಥ್ ಮೊದಲಾದವರು ಸಂದರ್ಶಕ ಪ್ರಾಧ್ಯಾಪಕರಾಗಿ ವಿಭಾಗವನ್ನು ಮುನ್ನಡೆಸಲೂ ಸಹಕರಿಸಿದ್ದಾರೆ, ಸಹಕರಿಸುತ್ತಿದ್ದಾರೆ. ಶ್ರೀಮತಿ ಪೂರ್ಣಿಮಾ ಶೆಟ್ಟಿ ಅವರು ಸಹಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿವರಾಜ ಎಂ.ಜಿ, ರಮಾ ಉಡುಪ, ಮಧುಸೂಧನ್ ರಾವ್ ಇವರು ವಿಭಾಗದ ಸಂಶೋಧನ ಸಹಾಯಕರಾಗಿದ್ದಾರೆ.
ಕನ್ನಡ ವಿಭಾಗಕ್ಕೆ ತನ್ನದೇ ಆದ ಸುಸಜ್ಜಿತ ಗ್ರಂಥಾಲಯವಿದೆ. ವಿಭಾಗದ ಗ್ರಂಥಾಲಯ ಸಂಶೋಧಕರಿಗೆ ಜ್ಞಾನದ ಖಣಿಯಾಗಿದೆ. ಇಲ್ಲಿ ಎಂ.ಎ, ಎಂ.ಫಿಲ್, ಪಿಎಚ್.ಡಿ ವ್ಯಾಸಂಗ ಮಾಡುವವರಿಗೆ ಉಪಯುಕ್ತ ಗ್ರಂಥಗಳಿವೆ. ವಿಭಾಗದ ಗ್ರಂಥಾಲಯದಲ್ಲಿ ಸುಮಾರು ಆರು ಸಾವಿರ ಗ್ರಂಥಗಳಿವೆ. ಕನ್ನಡ ಸಾಹಿತ್ಯಕ್ಕೆ ಮಾತ್ರ ಈ ಗ್ರಂಥಾಲಯ ಸೀಮಿತವಾಗಿಲ್ಲ. ಕನ್ನಡ ನಾಡು, ನುಡಿ, ಸಂಸ್ಕೃತಿ, ಧರ್ಮ, ಶಿಕ್ಷಣ ಮತ್ತು ಜೀವನ ಕಲೆ, ಇತಿಹಾಸ ಒಟ್ಟಿನಲ್ಲಿ ಕನ್ನಡ ಸಂಸ್ಕೃತಿಯ ಅಧ್ಯಯನಕ್ಕೆ ಪೆÇೀಷಕವಾದ ಗ್ರಂಥಗಳ ಸಂಗ್ರಹ ಇಲ್ಲಿದೆ. ಸಂಶೋಧಕರಿಗೆ, ಸಂಶೋಧನೆ ಕೈಗೊಳ್ಳುವವರಿಗೆ ಆಕರ ಗ್ರಂಥಗಳು ಕೂಡ ವಿಭಾಗದ ಗ್ರಂಥಾಲಯದಲ್ಲಿದೆ. ಕನ್ನಡದ ಕತೆ, ಕಾವ್ಯ, ಕಾದಂಬರಿ, ನಾಟಕ ಗ್ರಂಥಗಳ ಜೊತೆಗೆ ಹಿಂದಿ, ಮರಾಠಿ ಮತ್ತು ಇಂಗ್ಲೀಷ್ ಭಾಷೆಯ ಗ್ರಂಥಗಳು ಸಹ ಇಲ್ಲಿವೆ. ಖ್ಯಾತ ವಿದ್ವಾಂಸರಾದ ಎಸ್.ಆರ್. ಗುಂಜಾಳ ಅವರು ಗ್ರಂಥಾಲಯದ ಕಾರ್ಯದ ಬಗ್ಗೆ ಹೀಗೆ ಹೇಳಿದ್ದಾರೆ; “ಗ್ರಂಥವು ಬೇಕಾದಾಗ ಬೇಕಾದ ಹೊತ್ತಿನಲ್ಲಿ, ಬೇಕಾದ ಸ್ಥಳದಲ್ಲಿ ಮತ್ತು ಬೇಕಾದ ಪರಿಸ್ಥಿತಿಯಲ್ಲಿ ತಿಳುವಳಿಕೆ ನೀಡುವ ಸದಾ ಸಿದ್ಧಿ ಜ್ಞಾನ ನಿಧಿ” ಎಂಬ ಮಾತಿನ ಪ್ರಕಾರ ಕನ್ನಡ ವಿಭಾಗದ ಗ್ರಂಥಾಲಯವು ಕಾರ್ಯವನ್ನು ನಿರ್ವಹಿಸುತ್ತಿದೆ. ಕರ್ನಾಟಕದ ಪುಸ್ತಕ ಪ್ರಾಧಿಕಾರದಿಂದ ಸಾವಿರಾರು ಗ್ರಂಥಗಳು ವಿಭಾಗದ ಗ್ರಂಥಾಲಯಕ್ಕೆ ಪ್ರತಿವರ್ಷ ಸೇರ್ಪಡೆಯಾಗುತ್ತಿವೆ. ಅನೇಕ ಗಣ್ಯ ವ್ಯಕ್ತಿಗಳು ಗ್ರಂಥಾಲಯಕ್ಕೆ ದಾನ ರೂಪದಲ್ಲಿ ಗ್ರಂಥಗಳನ್ನು ನೀಡಿದ್ದಾರೆ, ನೀಡುತ್ತಿದ್ದಾರೆ. ವಿಭಾಗದ ಗ್ರಂಥಾಲಯ ಗ್ರಂಥಗಳ ಸಂಗ್ರಹದಿಂದ ದಿನದಿನೇ ಬೆಳೆಯುತ್ತಲೇ ಇದೆ. ವಿಭಾಗಕ್ಕೆ ಸಲ್ಲಿಸಿದ ಎಂ.ಫಿಲ್ ಮತ್ತು ಪಿಎಚ್.ಡಿ ಮಹಾಪ್ರಬಂಧಗಳು ಕೂಡ ವಿಭಾಗದ ಗ್ರಂಥಾಲಯದಲ್ಲಿ ಸಂಗ್ರಹ ರೂಪದಲ್ಲಿದೆ.
1979 ರಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸ್ಥಾಪನೆಯಾಯಿತು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಪ್ರಸಾರಾಂಗವಿಲ್ಲ. ಇದನ್ನು ಮನಗಂಡ ಕನ್ನಡ ವಿಭಾಗ ಗ್ರಂಥ ಪ್ರಕಟಣ ಕಾರ್ಯಕ್ಕೆ ಕೈ ಹಾಕಿ ಹೆಸರು ಮಾಡಿದೆ. ಕನ್ನಡ ವಾಙ್ಮಯಕ್ಕೆ ಅಮೂಲ್ಯವಾದ ಗ್ರಂಥಗಳನ್ನು ಪ್ರಕಟಿಸಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಪ್ರಸಿದ್ಧಿ ಪಡೆದಿದೆ.ಕನ್ನಡ ಸಾಹಿತ್ಯಕ್ಕೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ವಿಶಿಷ್ಟ ಕೊಡುಗೆಯನ್ನು ನೀಡಿದೆ. ಮುಂಬಯಿ ವಿಶ್ವವಿದ್ಯಾಲಯ 1986 ರಲ್ಲಿ ಭೀಮರಾವ್ ಚಿಟಗುಪ್ಪಿ ಅವರ ‘ಕವಿರಾಜಮಾರ್ಗ’ ಈ ಕೃತಿಗೆ ಡಿ.ಲಿಟ್ ಪದವಿಯನ್ನು ನೀಡಿ ಗೌರವಿಸಿದೆ. ಕನ್ನಡ ಸಾಹಿತ್ಯಲೋಕಕ್ಕೆ ಅನೇಕ ಸಂಶೋಧಕರನ್ನು ಪರಿಚಯಿಸಿದ ಕೀರ್ತಿ ವಿಭಾಗಕ್ಕೆ ಸಲ್ಲುತ್ತದೆ. ಶ್ರೀನಿವಾಸ ಹಾವನೂರ, ಸಂಜೀವ ಶೆಟ್ಟಿ, ಸುನೀತಾ ಶೆಟ್ಟಿ, ತಾಳ್ತಜೆ ವಸಂತಕುಮಾರ್, ವಿಶ್ವನಾಥ್ ಕಾರ್ನಾಡ್, ಜಿ.ಎನ್.ಉಪಾಧ್ಯ, ಮಮತಾ ರಾವ್, ಭರತ್‍ಕುಮಾರ್ ಪೆÇಲಿಪು, ಮರಿಯಪ್ಪ ನಾಟೇಕರ್, ಈಶ್ವರ ಅಲೆವೂರು, ಪೂರ್ಣಿಮಾ ಶೆಟ್ಟಿ ಮೊದಲಾದವರು ಸಂಶೋಧಕರಾಗಿ ಹೆಸರು ಮಾಡಿದ್ದಾರೆ. ಇದುವರೆಗೆ ವಿಭಾಗ 68ಕ್ಕಿಂತ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿ ಇತಿಹಾಸ ನಿರ್ಮಿಸಿದೆ. ಪ್ರಸಾರಾಂಗವಿಲ್ಲದಿದ್ದರೂ ವಿಭಾಗ ಈಗಲೂ ಪ್ರಕಟಣೆ ಕಾರ್ಯದಲ್ಲಿ ಕ್ರಿಯಾಶೀಲವಾಗಿದೆ. ವಿಭಾಗದ ಮೌಲಿಕ ಪಿಎಚ್.ಡಿ ಮಹಾಪ್ರಬಂಧಗಳು ಕೃತಿ ರೂಪದಲ್ಲಿ ಬೆಳಕು ಕಂಡಿದೆ. ಪ್ರಕಟಗೊಂಡ ಶೋಧ ಗ್ರಂಥಗಳಿಗೆ ಕನ್ನಡ ವಾಙ್ಮಯದಲ್ಲಿ ಮಹತ್ವದ ಸ್ಥಾನ ದೊರಕಿದೆ ಎಂಬುದು ಹೆಮ್ಮೆಯ ವಿಚಾರ. ಶೋಧ ಕೃತಿಗಳು, ವಿಮರ್ಶೆ, ವ್ಯಕ್ತಿಚಿತ್ರ, ಕಾವ್ಯ, ನಾಟಕ, ಅನುವಾದಿತ ಕೃತಿಗಳು, ಪ್ರಬಂಧಗಳು, ಆಂಗ್ಲ ಕೃತಿಗಳು ಇತ್ಯಾದಿ ಕೃತಿಗಳು ವಿಭಾಗದಿಂದ ಪ್ರಕಟಗೊಂಡಿವೆ. ವಿಭಾಗದ ಎಲ್ಲ ಗ್ರಂಥಗಳು ನಾಡಿನ ಗ್ರಂಥಾಲಯಗಳಿಗೆ ಹಾಗೂ ವಿಶ್ವವಿದ್ಯಾಲಯಗಳಿಗೆ ತಲುಪಿ ಅಲ್ಲಿಯ ವಾಚಕರಿಂದ ಪ್ರಶಂಸೆಯನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿ. ವಿಭಾಗದ ಪ್ರಕಟಣೆಯ ಕೃತಿಗಳಿಗೆ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳು ದೊರಕಿವೆ. ಜ್ಯೋತ್ಸ್ನಾ ಕಾಮತ್ ಅವರ ‘ಕರ್ನಾಟಕ ಶಿಕ್ಷಣ ಪರಂಪರೆ’ ಹಾಗೂ ಸಿ.ಎನ್.ರಾಮಚಂದ್ರನ್ ಅವರ ‘ಸ್ವರೂಪ ವಿಮರ್ಶೆ’ ಈ ಎರಡು ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ತಾಳ್ತಜೆ ವಸಂತಕುಮಾರರ ‘ಮುತ್ತಿನ ಸತ್ತಿಗೆ’ ಈ ಗ್ರಂಥಕ್ಕೆ 2002ರ ‘ಗೊರೂರು ಸಾಹಿತ್ಯ ಪ್ರಶಸ್ತಿ’ ಹಾಗೂ ಅವರ ಇನ್ನೊಂದು ಗ್ರಂಥವಾದ ‘ಬೌದ್ಧಾಯನ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಕವಿತಾ ಕೃಷ್ಣರವರು ರಚಿಸಿರುವ ‘ಚಿಣ್ಣರ ಚಿಲುಮೆ’ ಎಂಬ ಕವನ ಸಂಕಲನಕ್ಕೆ ‘ಜಿ.ಪಿ.ರಾಜರತ್ನಂ’ ಪುರಸ್ಕಾರ ಬಂದಿದೆ. ಜಿ.ಎನ್.ಉಪಾಧ್ಯ ಅವರ ‘ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ’ ಈ ಕೃತಿಯು ಸಾಹಿತ್ಯ ಪರಿಷತ್ತಿನ ರತ್ನಾಕರವರ್ಣಿ ಮುದ್ದಣ ಅನಾಮಿಕ ದತ್ತಿ ಬಹುಮಾನವನ್ನು ಪಡೆದುಕೊಂಡಿದೆ. ‘ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು’ ಈ ಗ್ರಂಥವೂ ಕೂಡ ‘ಬೆಟ್ಟದೂರು ಪ್ರತಿಷ್ಠಾನ ಪ್ರಶಸ್ತಿ’ ಪಡೆದುಕೊಂಡಿರುವುದು ವಿಭಾಗದ ಗ್ರಂಥ ಪ್ರಕಟಣೆಗೆ ಕಲಶ ಪ್ರಾಯವಾಗಿದೆ. ‘ಕರ್ನಾಟಕ ಸಂಸ್ಕೃತಿ-ಚಿಂತನ’ ಈ ಸಂಶೋಧನ ಕೃತಿಗೆ 2013 ರ ಸಾಲಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ವತಿಯಿಂದ ‘ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ’ ಲಭಿಸಿದೆ.
ಮರಾಠಿ ಓದುಗರ ದೃಷ್ಟಿಕೋನ ಇಟ್ಟುಕೊಂಡು ವಿಭಾಗ ಮರಾಠಿ ಕೃತಿಗಳನ್ನು ಪ್ರಕಟಿಸಿದೆ. ಹಾಗೂ ಮರಾಠಿ ಸಾಹಿತ್ಯದ ಗಣ್ಯ ಲೇಖಕರ ವ್ಯಕ್ತಿ ಚಿತ್ರ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಲಾಗಿದೆ. ‘ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ’, ‘ದೀಪ ಉಜಳೆ ಅಮ್ಚಾ ಘರಿ’ ಇವು ಮರಾಠಿ ಗ್ರಂಥಗಳಾಗಿವೆ. ‘ಪು.ಲ.ದೇಶಪಾಂಡೆ ವ್ಯಕ್ತಿ ಮತ್ತು ವಾಙ್ಮಯ’ ಇದು ಮರಾಠಿಯಿಂದ ಕನ್ನಡಕ್ಕೆ ಅನುವಾದಿತ ಕೃತಿಯಾಗಿದೆ. ಸಂಶೋಧಕರಾದ ಜಿ.ಎನ್.ಉಪಾಧ್ಯ ಅವರು ‘ಮಹಾರಾಷ್ಟ್ರ ಕರ್ನಾಟಕ ಆದಾನ ಪ್ರದಾನ’ ಎಂಬ ಬೃಹತ್ ಗ್ರಂಥ ರಚಿಸಿ ಉಭಯ ಭಾಷೆಗಳ ಸೌಹಾರ್ದತೆಯನ್ನು ತೋರಿಸಿಕೊಟ್ಟಿದ್ದಾರೆ. ಈ ಗ್ರಂಥವು ಕನ್ನಡ-ಮರಾಠಿ ಭಾಷೆಗಳ ಸಾಂಸ್ಕೃತಿಕ, ಸಾಹಿತ್ಯಿಕ ಕಥನವನ್ನು ಸಾರುವ ಮಹತ್ವದ ಕೃತಿಯಾಗಿದೆ. ‘ಅನುಭಾವ ಸಾಹಿತ್ಯದ ವಿಭಿನ್ನ ನೆಲೆಗಳು’ ಈ ಗ್ರಂಥವು ಕನ್ನಡ ಸಂತರು ಮತ್ತು ಮರಾಠಿ ಸಂತರ ಸಾಮಾಜಿಕ, ವೈಚಾರಿಕ ವಿಚಾರಗಳನ್ನು ಒಳಗೊಂಡ ಅಪೂರ್ವ ಕೃತಿಯಾಗಿದೆ. ಮೇಧಾ ಎಮ್.ಕುಲಕರ್ಣಿ ಅವರು ‘ಕರ್ನಾಟಕ ಮತ್ತು ಮಹಾರಾಷ್ಟ್ರದ ದೇವಾನುದೇವತೆಗಳು’ ಈ ಕೃತಿಯಲ್ಲಿ ಉಭಯ ರಾಜ್ಯಗಳ ನಡುವಿನ ಸೌಹಾರ್ದತೆಯನ್ನು ಧಾರ್ಮಿಕ ನೆಲೆಯಲ್ಲಿ ಅನಾವರಣಗೊಳಿಸಿದ್ದಾರೆ. ಉಭಯ ಭಾಷೆಯಗಳ ಕೊಂಡಿಯಾಗಿ ಕನ್ನಡ ವಿಭಾಗ ನಿಂತಿದೆ. ಕನ್ನಡ ಮತ್ತು ಮರಾಠಿ ಭಾಷೆಯ ಸಾಂಸ್ಕೃತಿಕ ಕೊಡುಕೊಳ್ಳುವಿಕೆ ಸಾಹಿತ್ಯಕವಾಗಿ ನೆರವೇರಿದೆ.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮುಂಬಯಿ ಕನ್ನಡಿಗರ ಪ್ರೀತಿ ಆದರಗಳಿಗೆ ಪಾತ್ರವಾಗಿದೆ. ಕರ್ನಾಟಕದವರಿಗೆ ಮತ್ತು ಸ್ಥಳೀಯರಿಗೆ ಅನೇಕ ವೇದಿಕೆಗಳನ್ನು ವಿಭಾಗ ಕಲ್ಪಿಸಿ ಕೊಟ್ಟಿದೆ. ಕನ್ನಡ ಇತಿಹಾಸ ಕಂಡರಿಯದ ಕೆಲಸವನ್ನು ವಿಭಾಗ ಮಾಡುತ್ತಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗದು. ವಿಭಾಗ ಒಳನಾಡಿನ ವಿದ್ವಾಂಸರನ್ನು ಕರೆಯಿಸಿ ಸತ್ಕರಿಸುವ ಜೊತೆಗೆ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಸ್ಥಾನಮಾನ ನೀಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದು. ಮುಂಬಯಿ ಕವಿಗಳಿರಲಿ, ಕಥಾ ಲೇಖಕರಿರಲಿ, ಹಿರಿಯ ಶಿಕ್ಷಕರಿರಲಿ, ನಾಟಕರಂಗದವರಿರಲಿ ಅವರೆಲ್ಲರೂ ಜಿ.ಎನ್.ಉಪಾಧ್ಯ ಅವರಿಗೆ ಬೇಕು. ವಿವಿಧ ಸಂಘ- ಸಂಸ್ಥೆಗಳ ಮೂಲಕ ಸಮಾಜ ಸೇವೆ, ಕನ್ನಡ ಸೇವೆ ಮಾಡುವವರೂ ಬೇಕು. ಅವರೆಲ್ಲರನ್ನೂ ಗುರುತಿಸಿ ವಿಭಾಗಕ್ಕೆ ಕರೆಯಿಸಿ ಗೌರವಿಸುವ ಕೆಲಸವನ್ನು ಸಂಶೋಧಕರಾದÀ ಜಿ.ಎನ್.ಉಪಾಧ್ಯ ಅವರು ಮಾಡುತ್ತಿರುವುದು ದಾಖಲಾರ್ಹವಾಗಿದೆ. ಹೊರನಾಡಿನ ಮುಂಬಯಿಯಲ್ಲಿ ವಿಭಾಗವು ಕನ್ನಡವನ್ನು ಉಳಿಸುವ, ಬೆಳೆಸುವ ಕಾಯಕ ಮಾಡುತ್ತಿದೆ. ಕನ್ನಡೇತರರಿಗೆ, ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಕನ್ನಡ ಸರ್ಟಿಫಿಕೇಟ್ ಕೋರ್ಸ್ ಹಾಗೂ ಕನ್ನಡ ಡಿಪೆÇ್ಲೀಮಾ ತರಗತಿಗಳಲ್ಲಿ ಅನ್ಯ ಭಾಷಿಕರು ಕನ್ನಡವನ್ನು ಪ್ರೀತಿಯಿಂದ ಕಲಿಯುತ್ತಿದ್ದಾರೆ. ವಿಭಾಗ ಅನ್ಯ ಭಾಷಿಕರಿಗೆ ಕನ್ನಡದ ಕಂಪನ್ನು ಸಾಹಿತ್ಯದ ಸೊಗಡವನ್ನು ಉಣಬಡಿಸುತ್ತಿದೆ. ಕನ್ನಡೇತರರು, ಕನ್ನಡ ಬಾರದವರು ಕಸ್ತೂರಿ ಕನ್ನಡವನ್ನು ಕಲಿತುಕೊಂಡು ತಮ್ಮ ಜ್ಞಾನ ತೃಷೆಯನ್ನು ಹಿಂಗಿಸಿಕೊಂಡಿದ್ದಾರೆ. ಸದ್ಯದಲ್ಲಿ 80 ಕ್ಕಿಂತ ಹೆಚ್ಚು ವಿದ್ಯಾಥಿರ್sಗಳು ಎಂ.ಎ, ಎಂ.ಫಿಲ್, ಪಿಎಚ್.ಡಿ, ಡಿಪೆÇ್ಲೀಮಾ, ಸರ್ಟಿಫಿಕೆಟ್ ಕೋರ್ಸಿನ ಮೂಲಕ ಕನ್ನಡ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾಥಿರ್sಗಳು ಕನ್ನಡ ಭಾಷೆ ಕಲಿಯುವಲ್ಲಿ ನಿರತರಾಗಿರುವುದು ಅಭಿಮಾನದ ಸಂಗತಿ.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದೊಂದಿಗೆ ಮುಂಬಯಿ ಸಂಘ-ಸಂಸ್ಥೆಗಳು ಅನ್ಯೋನ್ಯ ಸಂಬಂಧ ಹೊಂದಿವೆ. ಕನ್ನಡ ವಿಭಾಗ ಕೇವಲ ಬೋಧನೆಯನ್ನು ಮಾಡದೆ ಸಂಘ-ಸಂಸ್ಥೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ವಿಶೇಷವಾದ ಸಂಗತಿ. ಇದಕ್ಕೆ ಮುಂಬಯಿ ಸಂಘ-ಸಂಸ್ಥೆಗಳು ಸಹಕಾರ ಸಹಯೋಗ ನೀಡುತ್ತಿವೆ. ಕನ್ನಡ ವಿಭಾಗವು ಸಂಘ-ಸಂಸ್ಥೆಗಳಿಂದ ದತ್ತಿಗಳನ್ನು ಪಡೆದುಕೊಂಡಿದೆ. ಸಂಘ-ಸಂಸ್ಥೆಗಳು ದತ್ತಿಗಳನ್ನು ನೀಡಿ ವಿಭಾಗಕ್ಕೆ ಉತ್ತೇಜನ ನೀಡುತ್ತಿರುವುದು ಉಲ್ಲೇಖಾರ್ಹ ಸಂಗತಿ. ಕನ್ನಡ ವಿಭಾಗದ ಸಾಹಿತ್ಯಿಕ, ಕಲಾತ್ಮಕ, ರಚನಾತ್ಮಕ ಚಟುವಟಿಕೆಗಳನ್ನು ಗಮನಿಸಿ ನಾಡಿನ ಹಿರಿಯರು, ಸಂಘ-ಸಂಸ್ಥೆಗಳು ದತ್ತಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಅವುಗಳ ಆಶ್ರಯದಲ್ಲಿ ಕನ್ನಡ ವಿಭಾಗ ವಿವಿಧ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕನ್ನಡ ವಿಭಾಗವು ಸಂಘ-ಸಂಸ್ಥೆಗಳಿಂದ, ಗಣ್ಯ ವ್ಯಕ್ತಿಗಳಿಂದ ಎಂಟು ದತ್ತಿನಿದಿಗಳನ್ನು ಪಡೆದು ಕೊಂಡಿದೆ.

1.ಮೈಸೂರು ಅಸೋಸಿಯೇಶನ್ ಬಂಗಾರ ಹಬ್ಬದ ದತ್ತಿನಿಧಿ (1981)

  1. ಡಾ.ದ.ರಾ. ಬೇಂದ್ರೆ ಸಂಸ್ಮರಣ ದತ್ತಿನಿಧಿ (1988)
    3.ಕನ್ನಡ ವಿಭಾಗದ ದಶಮಾನೋತ್ಸವ ದತ್ತಿನಿಧಿ (1990)
    4.ಡಾ.ಎ.ಆರ್.ಆಚಾರ್ಯ ದತ್ತಿನಿಧಿ (1997)
    5.ಡೊಂಬಿವಲಿ ಕರ್ನಾಟಕ ಸಂಘದ ಕುಮಾರವ್ಯಾಸ ದತ್ತಿನಿಧಿ (1997)
  2. ಜಯ ಸುವರ್ಣ ದತ್ತಿನಿಧಿ (1998)
  3. ಎನ್.ಎಂ.ಅಮೀನ್ ದತ್ತಿನಿಧಿ (1999)
  4. ಸದಾನಂದ ಸುವರ್ಣ ಪ್ರಾಯೋಜಿತ ಶಿವರಾಮ ಕಾರಂತ ದತ್ತಿನಿಧಿ (2011) ನಾಡಿನ ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿ ದತ್ತಿ ಉಪನ್ಯಾಸಗಳನ್ನು ನಡೆಸಲಾಗುವುದು. ಸಾಹಿತ್ಯಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ ಸಂವಾದಗಳನ್ನು ಏರ್ಪಡಿಸಲಾಗುವುದು. ಕನ್ನಡ ವಿಭಾಗವು ಮಹತ್ವದ ಸಾಹಿತ್ಯ ಮತ್ತು ಸಾಹಿತ್ಯೇತರವಾದ ಪ್ರಮುಖ ವಿಷಯಗಳ ಕುರಿತು ದತ್ತಿ ಉಪನ್ಯಾಸಗಳನ್ನು ಆಯೋಜಿಸಿ ಜನಸಾಮಾನ್ಯರಿಗೂ ಮುಟ್ಟುವಂತೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ದತ್ತಿ ಉಪನ್ಯಾಸಗಳಿಂದ ಸಾಹಿತ್ಯಿಕ, ಸಂಶೋಧನಾತ್ಮಕ ಸಂದರ್ಭಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸಾರಿಸುತ್ತಿರುವುದು ಉಲ್ಲೇಖನೀಯ ಅಂಶ. ಕನ್ನಡ ವಿಭಾಗದಲ್ಲಿ ಎಂಟು ದತ್ತಿನಿಧಿಗಳು ಸ್ಥಾಪನೆಗೊಂಡಿವೆ. ಇದೊಂದು ಮಾದರಿಯ ಉಪಕ್ರಮವಾಗಿದೆ. ವಿಭಾಗ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ದತ್ತಿನಿಧಿಯ ಅಂಗವಾಗಿ ವಿಚಾರಗೋಷ್ಠಿ, ವಿಚಾರ ಸಂಕಿರಣ, ದತ್ತಿ ಉಪನ್ಯಾಸಗಳಂತಹ ಕಾರ್ಯಕ್ರಮಗಳನ್ನು ಜಂಟಿಯಾಗಿ ನಡೆಸುತ್ತದೆ. ಕರ್ನಾಟಕದ ಬೇರೆ ಬೇರೆ ವಿಶ್ವ ವಿದ್ಯಾಲಯಗಳಲ್ಲಿ ದತ್ತಿನಿಧಿಗಳಿವೆ. ಆದರೆ, ಇಲ್ಲಿಯ ಹಾಗೆ ಸಂಘ-ಸಂಸ್ಥೆಗಳೊಂದಿಗೆ ಕೈಜೋಡಿಸಿ ಕಾರ್ಯಕ್ರಮಗಳನ್ನು ನಡೆಸುವುದನ್ನು ಎಲ್ಲೂ ಕಾಣುವದಿಲ್ಲ. ಅದು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ನಡೆಯುತ್ತಿರುವುದು ಕನ್ನಡ ವಿಭಾಗದ ಧನಾತ್ಮಕ ಸಾಧನೆ.

ಕನ್ನಡ ವಿಭಾಗ ಜನಪರವಾಗಿದೆ. ವಿಭಾಗವು ಬರೇ ಪಾಠ ಪ್ರವಚನಕ್ಕೆ ಮಾತ್ರ ಸೀಮಿತವಾಗಿಲ್ಲ. ಮುಂಬಯಿಯ ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಸೇರಿಕೊಂಡು ಮೇಲಿಂದ ಮೇಲೆ ಜಂಟಿ ಕಾರ್ಯಕ್ರಮಗಳನ್ನು ವಿಭಾಗ ನಡೆಸುತ್ತಿದೆ. ಆ ಮೂಲಕ ಮುಂಬಯಿ ಕನ್ನಡಿಗರಿಗೆ ಕನ್ನಡ ವಿಭಾಗದೊಂದಿಗೆ ನೇರ ಸಂಪರ್ಕ ದೊರೆಯುವಂತೆ ಆಗಿದೆ. ವಿಭಾಗದ ಕಾರ್ಯಕ್ರಮಗಳಲ್ಲಿ ಸಿಬ್ಬಂದಿವರ್ಗ, ವಿದ್ಯಾರ್ಥಿ ವರ್ಗ, ವಿಧ್ಯಾರ್ಥಿ ಗಳು ಮಾತ್ರವೇ ಅಲ್ಲದೆ ಸಾಹಿತಿಗಳು, ಜನ ಸಾಮಾನ್ಯರೂ ಬಂದು ಪಾಲ್ಗೊಳ್ಳುವುದು ಸಾಮಾನ್ಯವೇ ಆಗಿದೆ. ‘ವಿಶ್ವವಿದ್ಯಾಲಯ ಸಾರ್ವಜನಿಕ ಸ್ವತ್ತು ಆಗಬೇಕು’ ಎಂಬ ವಿದ್ವಾಂಸರಾದ ಜಿ.ಎನ್.ಉಪಾಧ್ಯರ ಮಾತನ್ನು ಕನ್ನಡ ವಿಭಾಗ ಸಾರ್ಥಕಗೊಳಿಸಿದೆ. ಸಾಂಸ್ಕೃತಿಕ ರಾಯಭಾರಿಯಾಗಿ ವಿಭಾಗ ಕೆಲಸ ಮಾಡುತ್ತಿದೆ. ಮಹಾರಾಷ್ಟ್ರದಂತಹ ಹೊರರಾಜ್ಯದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪಾತ್ರ ಮಹತ್ತರವಾದುದು. ಮುಂಬಯಿ ವಿಶ್ವವಿದ್ಯಾಲಯ ಬರೇ ಶಿಕ್ಷಣ ಕೇಂದ್ರವಾಗಿ, ಸರಕಾರಿ ಇಲಾಖೆಯಾಗಿ ಜಡವಾಗದೇ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿದೆ. ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿಯ ಅಭಿಮಾನದ ಪ್ರತೀಕವಾಗಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವೂ ಹೊರನಾಡಿನಲ್ಲಿ ವಿಜೃಂಭಣೆಯಿಂದ ಕಂಗೊಳಿಸುತ್ತಿದೆ.