- ಮೃಗಶಿರೆಯ ನೆನಪೂ;ಕಾಳುಮೆಣಸೂ.. - ಮೇ 24, 2020
ಸುಮ್ಮನೆ ಕುಳಿತವನಿಗೆ ಏಕೋ ಮೃಗಶಿರಾ ನೆನಪಾದಳು. ನಿಮಗೆ ಗೊತ್ತಿರುವಂತೆ ಮೃಗಶಿರೆಯೆಂದರೆ ಮಳೆ ನಕ್ಷತ್ರ. ಮಳೆಗಾಲದ ಆರಂಭ ಹೆಚ್ಚಾಗಿ ಮೃಗಶಿರಾ ಮಳೆಯಿಂದಲೇ ಆಗುತ್ತದೆ. ಮೇ ತಿಂಗಳ ಅಂತ್ಯದಿಂದ ಜೂನ್ ತಿಂಗಳ ಆರಂಭದವರೆಗೂ ಈ ನಕ್ಷತ್ರದಲ್ಲಿಯೇ ಮಳೆಗಾಲ. ಬಿರುಬಿಸಿಲ ಬೇಗೆಗೆ ಬೆಂದ ಇಳೆ, ಮೃಗಶಿರೆಯ ಆಗಮನದೊಂದಿಗೆ ಹಸಿರಿನಿಂದ ಮೈದುಂಬಿಕೊಳ್ಳಲು ಅನುವಾಗುತ್ತಾಳೆ. ಕೃಷಿ ಚಟುವಟಿಕೆಗಳು ಗರಿಗೆದರುವ ಕಾಲವಿದು. ನಮ್ಮ ಪ್ರಾಚೀನರು ಬೀಜ ಬಿತ್ತನೆಗೆ, ಸಸಿ ನೆಡಲು ಇದು ಪ್ರಶಸ್ತ ಕಾಲವೆಂದು ಗುರುತಿಸಿದ್ದರು. ಈ ಸಮಯದಲ್ಲಿ ನೆಟ್ಟ ಸಸಿಗಳು ಸಮೃದ್ಧವಾಗಿ ಬೆಳೆಯುತ್ತವೆಂಬುದು ಅನೇಕರ ಅನುಭವ. ಇವತ್ತಿನ ಆಧುನಿಕ ಕೃಷಿ ವಿಜ್ಞಾನವೂ ಇದನ್ನೇ ಅನುಮೋದಿಸುತ್ತದೆ.
ಇತ್ತೀಚಿನ ಕೆಲ ವರ್ಷಗಳಿಂದ ಈ ಮೃಗಶಿರೆ ಬಂದೊಡನೆ ನನಗೂ ಸಂಭ್ರಮ. ಅದು ಹೇಗೋ ತೋಟದಲ್ಲಿ ಕಾಳುಮೆಣಸಿನ ಬಳ್ಳಿಗಳನ್ನು ನೆಡಬೇಕೆಂಬ ಹಂಬಲ ಹುಟ್ಟಿತ್ತು. ಸಾಂಬಾರ ಪದಾರ್ಥಗಳ ರಾಣಿ ಎನ್ನಿಸಿಕೊಂಡ ಈ ಕಾಳುಮೆಣಸಿನ ಬಗೆಗೆ ತಿಳಿಯದವರು ಅತಿವಿರಳ. ಯುರೋಪಿಯನ್ನರನ್ನು ಭಾರತದೆಡೆಗೆ ಆಕರ್ಷಿಸಿದ ಸಾಂಬಾರ ಪದಾರ್ಥಗಳಲ್ಲಿ ಇದೂ ಒಂದು. ಔಷಧೀಯ ಗುಣಗಳನ್ನೂ ಹೊಂದಿರುವ ಇದು, ಪಾಶ್ಚಾತ್ಯರ ಮಾಂಸದ ಅಡುಗೆಗಳನ್ನು ರುಚಿಕಟ್ಟುಗೊಳಿಸಲು ಯಥೇಚ್ಛ ಬಳಕೆಯಾಗುತ್ತದೆ. ಕೆಲ ವರ್ಷಗಳ ಹಿಂದೆ ಮಲೆನಾಡಿನ ಅಡಿಕೆ ಮರಗಳನ್ನು ಅಪ್ಯಾಯಮಾನವಾಗಿ ತಬ್ಬಿದ್ದ ಬೆಳೆ ಇದು. ಕಪ್ಪು ಬಂಗಾರವೆಂದು ಕರೆಸಿಕೊಂಡು, ಮಲೆನಾಡಿನ ತೋಟಿಗರ ಆಪದ್ಧನವಾಗಿಯೂ ಸಂರಕ್ಷಿಸಲ್ಪಡುತ್ತಿತ್ತು. ನಂತರದ ದಿನಗಳಲ್ಲಿ, ದರ ಕುಸಿತ, ಕೊಳೆ ರೋಗಗಳ ಕಾರಣದಿಂದ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತು. ಮತ್ತೆ ಸ್ಥಳೀಯ ರೈತರು, ಸಂಘ ಸಂಸ್ಥೆಗಳ ಪ್ರಯತ್ನದೊಂದಿಗೆ ಸ್ವಲ್ಪ ಸುಧಾರಣೆ ಕಂಡಿತು. ಮೈಸೂರಿನ ವಿಜ್ಞಾನಿ ಡಾ.ವೇಣುಗೋಪಾಲರಿಂದ ಪುನಶ್ಚೇತನ ಶಿಭಿರಗಳೂ ನಡೆದವು. ಹೊಸ ಹೊಸ ತಳಿಗಳ ಶೋಧ, ಅಭಿವೃಧ್ಧಿಗಳಾದವು. ಕೃಷೀ ಪದ್ಧತಿಗಳಲ್ಲಿ ಸುಧಾರಣೆಗಳೂ, ಪ್ರಯೋಗಗಳೂ ನಡೆದವು. ಇವರೆಲ್ಲರ ಪ್ರಯತ್ನದೊಂದಿಗೆ ಕಾಳುಮೆಣಸಿನ ಬಳ್ಳಿಗಳು ತೋಟಗಳಲ್ಲಿ ಉಸಿರಾಡತೊಡಗಿದವು. ಅದೇ ಸಂದರ್ಭದಲ್ಲಿ ಮೃಗಶಿರಾ ಮಳೆಯ ದಿನಗಳಲ್ಲಿ ಬಳ್ಳಿಗಳನ್ನು ತರಲು ತಿರುಗಾಡುವುದು ನನಗೆ ವಿಶಿಷ್ಟ ಅನುಭವವಾಗಿತ್ತು. ಮಾವನೊಡನೆ ಕಾನಸೂರಿನಿಂದ ಆರಂಭಿಸಿ, ಹೆಗ್ಗಾರು, ಹರ್ತೆಬೈಲು, ಬಾಳೆಕೊಪ್ಪ, ಹೆಗ್ಗರ್ಣಿ, ಹುಗ್ಗಿಗದ್ದೆ, ಹೀಗೆ ಹತ್ತಾರು ಊರುಗಳಿಗೆ ಭೇಟಿ ಕೊಡುತ್ತಿದ್ದೆ. ಇಲ್ಲೆಲ್ಲ ಅನೇಕ ಕೃಷಿ ಸಾಧಕರು, ಅನುಭವಿಗಳು, ಕಸಿ ತಜ್ಞರು, ತಳಿ ಸಂಗ್ರಾಹಕರು ಇವರೆಲ್ಲರ ಒಡನಾಟ ಅಪ್ಯಾಯಮಾನ ಅನುಭವ. ಸಣ್ಣಗೆ ಸುರಿವ ಮಳೆಯಲ್ಲಿ ತೋಟಗಳಲ್ಲಿ, ಕೃಷಿಕರ ಅನುಭವಕ್ಕೆ ಕಿವಿಯಾಗುವುದು…ಅದೊಂಥರದ ಖುಷಿ. ಮಣ್ಣಿನೊಂದಿಗೆ ಬೆರೆತ ಬದುಕೊಂದು ಸಂಭ್ರಮದ ಸಾಮಗಾನ. ಗದ್ದೆ ತೋಟಗಳಲ್ಲಿ ಓಡಾಡುತ್ತ ತೊಡಗಿಕೊಳ್ಳುವುದು ಬದುಕಿನ ಸೊಗಸನ್ನು ಹೆಚ್ಚಿಸಬಲ್ಲುದು. ಇವೆಲ್ಲ ಪ್ರೇರಣೆಗಳಿಗೆ ಪಕ್ಕಾಗಿ, ನಾನೂ ನೂರಾರು ಬಳ್ಳಿಗಳನ್ನು ತಂದು ನೆಟ್ಟಿದ್ದೆ. ಕಳೆದ ವರ್ಷದ ಘೋರ ಮಳೆಗಾಲಕ್ಕೆ ಬಹುತೇಕ ಸಸಿಗಳು ಕೊಳೆತು ಹೋದವು. ಈಗ ದರವೂ ಲೆಕ್ಕ ತಪ್ಪಿತು. ವಿಶೇಷ ಆಸ್ಥೆ ವಹಿಸಿ ಬೆಳೆಸಿದ್ದ ಬಳ್ಳಿಗಳೀಗ ಸೊರಗತೊಡಗಿವೆ. ಮತ್ತೆ ಮಲೆನಾಡಿನ ರೈತರೂ ಕಾಳುಮೆಣಸಿನ ಕೃಷಿಯಲ್ಲಿ ಆಸಕ್ತಿ ಕಳೆದುಕೊಳ್ಳತೊಡಗಿದ್ದಾರೆ. ನಾನಂತೂ ಮತ್ತೆ ಮೃಗಶಿರಾ ಮಳೆಯ ಆಗಮನದ ನೀರೀಕ್ಷೆ ಯಲ್ಲಿದ್ದೇನೆ. ಈ ವರ್ಷವಾದರೂ ಕಾಳುಮೆಣಸು ಕೈಹಿಡಿದೀತೋ….??!! ನೋಡಬೇಕು..!!!
ಹೆಚ್ಚಿನ ಬರಹಗಳಿಗಾಗಿ
ಚಾಚಾ ನೆಹರು ಮತ್ತು ನಮ್ಮ ಮಕ್ಕಳು
ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು
ಹಿಂದಿ ಹೇರಿಕೆ ಸರಿಯೇ?