- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ಹೃದಯಪುಷ್ಪಮರಂದವಾತ್ಮಕೆ ನಿಜಾನಂದ |ಉದಿಪುದಾ ರಸ ಸುಂದರದ ಕಿರಣ ಸೋಕೆ ||ಬದುಕಿನೊಳ್ ಕವಿತೆಯೊಳ್ ಕಲೆಗಳೊಳ್ ಪ್ರಕೃತಿಯೊಳ್ |ಪುದಿದಿರ್ಪ ಕಾಂತಿಯದು – ಮಂಕುತಿಮ್ಮ ||
ಡಾ. ಡಿ.ವಿ.ಗುಂಡಪ್ಪ
ಕಲೆಯೊಂದನ್ನು ಆಸ್ವಾದಿಸುವ ಮನೋಭಾವವಿಲ್ಲದಿದ್ದರೆ ಅಂತಹ ಮನುಜನ ಬಾಳು ಪಶುವಿಗಿಂತಲೂ ಭಿನ್ನವಾಗಲು ಸಾಧ್ಯವೇ ಇಲ್ಲ. ಅನ್ನ, ಅರಿವೆ, ಅಂದಣ, ಕಾಂಚಾಣಗಳ ಬೇಟೆಯಾಡುವುದನ್ನಷ್ಟೇ ಬದುಕಿನ ಚಟುವಟಿಕೆಗಳೆಂದು ನಂಬಿದರೆ ಆಗ ನಾವು ಶಿಲಾಯುಗದಲ್ಲಿರುವಂತೆಯೇ ಭಾಸವಾಗುತ್ತದೆ. ಮನುಷ್ಯನನ್ನು ಹೆಚ್ಚು ಮಾನವೀಯಗೊಳಿಸುವ ಚಟುವಟಿಕೆಯೆಂದರೆ ಕಲೆ. ಅದು ಅವನನ್ನು ಆತ್ಮಮುಖಿಯಾಗಿಸುತ್ತದೆ. ದಿನ ನಿತ್ಯದ ಹುಲುಬದುಕಿನ ಸ್ವ ಕೇಂದ್ರಿತ ಚಟುವಟಿಕೆಗಳಲ್ಲಿ ಅಂಟಿಕೊಂಡ ಕಲ್ಮಶಗಳನ್ನು ಒಂದಿಷ್ಟಾದರೂ ತೊಳೆದು ನಮ್ಮ ಆತ್ಮಗಳನ್ನು ಪರಿಶುದ್ಧಗೊಳಿಸುವ ದೈವಿಕ ಕ್ರಿಯೆ ಎಂದರೆ ಅದು ಕಲೆ. ಸಂಗೀತ, ನೃತ್ಯ, ನಾಟಕ, ಚಿತ್ರ, ಶಿಲ್ಪ, ಅಭಿನಯ ಇವೆಲ್ಲವು ನಮ್ಮನ್ನು ಅಮೃತಂಗಮಯಗೊಳಿಸುವ ಪರಿಕರಗಳು.
ಇವುಗಳಲ್ಲಿ ಯಕ್ಷಗಾನವು ಅಭಿನಯ, ನೃತ್ಯ, ಸಂಗೀತ, ಸಾಹಿತ್ಯಗಳೆಲ್ಲದರ ಹದವಾದ ಮಿಶ್ರಣವಾಗಿದ್ದು ಅದರಲ್ಲಿ ತೊಡಗಿಕೊಂಡ ಕಲಾವಿದರು ಹಾಗೂ ಪ್ರೇಕ್ಷಕರು ಇಬ್ಬರನ್ನೂ ತನ್ನ ಕಕ್ಷೆಗೆ ತೆಗೆದುಕೊಂಡು ರಸಾನುಭೂತಿಯ ಮಾಯೆಯಲ್ಲಿ ಮೀಯಿಸುತ್ತದೆ. ತಾಳ-ಲಯ-ನಾಟ್ಯ-ಹಸ್ತಾಭಿನಯ-ಮುಖಾಭಿನಯ-ಮಾತು ಇವೆಲ್ಲವುಗಳಿಂದ ಕೂಡಿದ ಪ್ರದರ್ಶನದಲ್ಲಿ ಹಿಮ್ಮೇಳದ ಮೂವರು ಕಲಾವಿದರು ಹಾಗೂ ಮುಮ್ಮೇಳದ ಪಾತ್ರಧಾರಿಗಳು ಕೊಡ ಮಾಡುವ ಕಲಾನುಭವವನ್ನು ಪ್ರೇಕ್ಷಕರು ಆಸ್ವಾದಿಸುತ್ತಾರೆ. ಆ ಪಾತ್ರದೊಳಗೆ ತಮಗರಿವಿಲ್ಲದೇ ತಾವೂ ಪ್ರವೇಶ ಮಾಡಿ ಒಂದಾಗಿರುತ್ತಾರೆ.
ಪೇಳುವೆನೀ ಕಥಾಮೃತವಾ… ಎಂಬ ಸಾಲಿನ ಹಿಂದೆಯೇ ಆರ್ಭಟದ ಚಂಡೆ ಮದ್ದಳೆಯ ಬಿಡ್ತಿಗೆ ಹೊಡೆದದ್ದು ಕೇಳಿದೊಡನೆ ಒಹೋ ಕತೆ ಶುರುವಾಯ್ತು ಅಂತಲೇ ಲೆಕ್ಕ. ಯಾವ ಕತೆಯಾದರೂ ಅದು ಕಥಾಮೃತವೇ. ಏಕೆಂದರೆ ಅದೇ ಅದೇ ರಾಮಾಯಾಣ ಮಹಾಭಾರತದ ಕತೆಗಳನ್ನು ಲಾಗಾಯ್ತಿನಿಂದ ಕೇಳುತ್ತಿದ್ದೇವೆ. ಯಕ್ಷಗಾನವಿರಲಿ ತಾಳಮದ್ದಲೆಯಿರಲಿ ಮತ್ತದೇ ಕತೆಗಳು. ಅವೇ ಅವೇ ಪಾತ್ರಗಳು. ಅವೇ ಪದ್ಯಗಳು. ಕೇಳಿ ಕೇಳಿ ಬಾಯಿಪಾಠವಾಗಿವೆ ಎಂದರೂ ತಪ್ಪಿಲ್ಲ. ಆದರೆ ಪ್ರತಿ ಸಲವೂ ನಮಗದು ಹೊಸ ಪ್ರಸಂಗದ ಹಾಗೇ ಭಾಸವಾಗುತ್ತವೆ. ಏಕೆಂದರೆ ಅವು ಕಥಾಮೃತಗಳು. ಹಾಗದರೆ ಅಮೃತ ಎಲ್ಲಿದೆ? ಕತೆಯಲ್ಲಿದೆಯಾ? ಎಂದರೆ ಅಲ್ಲ.
ಗೊತ್ತಿದ್ದ ಕತೆಯನ್ನು ಅವತ್ತಿನ ಪಾತ್ರಧಾರಿ ಅಥವಾ ಅರ್ಥಧಾರಿ ತನ್ನ ತರ್ಕದಿಂದ, ಮಾತಿನ ಕೌಶಲ್ಯದಿಂದ, ಭಾವಸಾಗರ ಮಂಥನಾ ಕ್ರಮದಿಂದ ಕ್ಷಣಕ್ಷಣವೂ ಹೊಸತುಗೊಳಿಸುತ್ತ ಅಮೃತಗೊಳಿಸುತ್ತಾನೆ. ಅದಕ್ಕಾಗಿ ಪ್ರತಿ ಪ್ರಸಂಗದ ಇಂತಹ ಭಾವೋದ್ದೀಪಕ ಕ್ಷಣಗಳು ಕೇಳುಗನಲ್ಲೊಂದು ಅನಿರ್ವಚನೀಯ ಉಲ್ಲಾಸ ಹುಟ್ಟಿಸುತ್ತ ಅಮೃತಂಗಮಯ ಯಾತ್ರೆ ಮಾಡಿಸುತ್ತವೆ.
ಈ ಕಾರಣಕ್ಕಾಗಿಯೇ ತಾಳಮದ್ದಲೆಯಲ್ಲಿ ಭಾಗವಹಿಸಿದವರನ್ನು ಕರಯುವುದು “ಅರ್ಥಧಾರಿ” ಎಂದು. ಅವನು ಅರ್ಥವನ್ನು ಕೇವಲ ಹೇಳುವವನಲ್ಲ ಧರಿಸಿದವನು. ಯಕ್ಷಗಾನದಲ್ಲಿ ಅವನು ಪಾತ್ರಧಾರಿ. ಅವನ ಪಾಲ್ಗೊಳ್ಳುವಿಕೆಯಲ್ಲಿ ಯಾವುದೋ ಪ್ರಸಂಗದ ಯಾವುದೋ ಪಾತ್ರದ ಮಾತುಗಳನ್ನು ನಾಟಕದಲ್ಲಿ ಆಡಿದಂತೆ ಆಡಿದರೆ ನಡೆಯುವುದಿಲ್ಲ. ಅವನೊಳಗಿನ ಅರ್ಥವೊಂದು ಅವನ ಮಾತು, ಅಭಿನಯ, ಭಾವಾಭಿವ್ಯಕ್ತಿಗಳಿಂದ ಹೊರ ಹೊಮ್ಮಿ ಅಲ್ಲಿ ಆ ಘಳಿಗೆಯಲ್ಲಿ ನೆರೆದ ಪ್ರೇಕ್ಷಕ ಸಮೂಹಕ್ಕೆ ಸಂವಹನಗೊಂಡು ಅವರೊಳಗಿನ ಅರ್ಥವನ್ನು ಕಾಲ-ದೇಶ-ಸಂದರ್ಭಗಳನ್ನು ಮೀರಿ ಸ್ಫುರಿಸುವಂತೆ ಮಾಡುತ್ತದೆ. ಆಗ ತಾಳಮದ್ದಲೆಯ ಪ್ರಸಂಗ “ಆಗುತ್ತದೆ” ಅಂದರೆ ಸಂಭವಿಸುತ್ತದೆ. ಆದ್ದರಿಂದ ತಾಳಮದ್ದಲೆಯನ್ನು ಮಾಡುವುದಲ್ಲ. ಅದು “ಆಗುವುದು”. ಅದಕ್ಕೆ ಹಿಮ್ಮೇಳ, ಪಾತ್ರಧಾರಿ ಹಾಗೂ ಪ್ರೇಕ್ಷಕ ಈ ಮೂವರ ತೊಡಗಿಕೊಳ್ಳುವಿಕೆ ಮುಖ್ಯವಾಗಿರುತ್ತದೆ.
ಹಾಗಾಗಿ ನೂರಾರು ವರ್ಷಗಳಿಂದ ಅದೇ ಕರ್ಣನಿಗಾಗಿ ಅದೇ ಪ್ರೇಕ್ಷಕ ಪ್ರತಿ ಸಲ ಹೊಸ ಹೊಸದಾಗಿ ಕನಿಕರಿಸಿ ಅಳತ್ತಾನೆ. ಅದೇ ದುರ್ಯೋಧನನಿಗಾಗಿ ಮತ್ತೆ ಹೊಸ ಹೊಸದಾಗಿ ಕೋಪಗೊಳ್ಳುತ್ತಾನೆ. ಮತ್ತೆ ಮತ್ತೆ ಪೇಟ ಕಟ್ಟಿದ ಭಾಗವತರು ಪೇಳುವೆನೀ ಕಥಾಮೃತವ ಅನ್ನುತ್ತಾರೆ. ಯಕ್ಷಗಾನವನ್ನು ಕೇವಲ ಕರಾವಳಿ, ಶಿವಮೊಗ್ಗ ಜಿಲ್ಲೆಗಳ ಸೀಮಿತ ಪ್ರದೇಶದ ಕಲೆಯಾಗಿ ದೂರವಿಟ್ಟರೆ ಕನ್ನಡಿಗರಿಗೇ ನಷ್ಟ. ಏಕೆಂದರೆ ಯಕ್ಷಗಾನದ ಅಭ್ಯಾಸದಿಂದ ಸಿಗುವ ತಾಳ-ಶ್ರುತಿ-ಲಯ ಜ್ಞಾನ ಇಡೀ ಬದುಕಿಗೇ ಒಂದು ಸೂತ್ರವನ್ನು ಕಲ್ಪಿಸಿ ಕೊಡುತ್ತದೆ. ಪೌರಾಣಿಕ ಪಾತ್ರಗಳಿಗೆ ಅರ್ಥ ಹೇಳುವಾಗ ದೊರಕುವ ಶಬ್ದ ಸಂಪತ್ತು ಹೆಚ್ಚಿನ ಪರಿಶ್ರಮವಿಲ್ಲದೇ ಒಬ್ಬ ಸಾಹಿತಿಯಾಗಲು ನೆರವಾಗುತ್ತದೆ. ಶೃತಿ ಸೇರಿಸಿ ಏರಿಳಿತದ ಧಾಟಿಯಲ್ಲಿ ಮಾತಾಡುವ ಅಭ್ಯಾಸದಿಂದ ಸ್ಫಷ್ಟವಾದ ವ್ಯಾಕರಣಶುದ್ಧ ಉಚ್ಛಾರದ ವಾಕ್ಚಾತುರ್ಯವನ್ನು ಒದಗಿಸಿ ಕೊಡುತ್ತದೆ. ನಿಲ್ಲುವ- ಕೂರುವ-ನಡೆಯುವ ಭಂಗಿಗಳಲ್ಲೂ ಗಮನ ಸೆಳೆಯುವ ಠೀವಿಯೊಂದು ಅಚ್ಚೊತ್ತುತ್ತದೆ.
ಪುರಾಣದ ಪಾತ್ರಗಳ ನೀತಿ, ನಿಜಾಯಿತಿ, ಔದಾರ್ಯಗಳು ನಾವು ಬಯಸದೇ ಇದ್ದರೂ ನಮಗರಿವಿಲ್ಲದೇ ಎದಯೊಳಗಿಳಿದು ನಮ್ಮ ವ್ಯಕ್ತಿತ್ವದ ಭಾಗವಾಗಿ ಬಿಡುತ್ತವೆ. ಹೀಗೆ ಕೇವಲ ಒಂದು ಕಲೆಯನ್ನು ಅಭ್ಯಾಸ ಮಾಡಿದಾಗ ಮನರಂಜನೆಯ ಜೊತೆ ಜೊತೆಗೆ ನೃತ್ಯ, ಅಭಿನಯ, ಆಂಗಿಕ ಚಲನೆ, ಮಾತು, ವಿಚಾರ, ನಡೆ-ನುಡಿ ಎಲ್ಲದರಲ್ಲಿಯೂ ಗುರುತರವಾದ ಸುಧಾರಣೆ ಸಾಧ್ಯ ಅಂತಾದರೆ ಆ ಕುರಿತು ಪ್ರತಿಯೊಬ್ಬರೂ ಗಮನ ಹರಿಸುವುದರಲ್ಲಿ ತಪ್ಪೇನಿದೆ? ಇಂತಹ ಕಲೆಯ ಆರಾಧನೆಯಲ್ಲಿ ಗಂಡು-ಹೆಣ್ಣು, ಮೇಲು-ಕೀಳು, ಉತ್ತರ-ದಕ್ಷಿಣ, ಹಳ್ಳಿ-ಪಟ್ಟಣ ಅಂತೆಲ್ಲ ಭೇದ ಹುಡುಕಿದರೆ ಅದು ಮೂರ್ಖರ ಹುಚ್ಚಾಟವೇ ಸರಿ.
ಯಕ್ಷಗಾನದಲ್ಲಿ ತೊಡಗಿಕೊಳ್ಳಲು ಕಲಾವಿದನ ತಯಾರಿಯ ಕುರಿತಾಗಿ ಗಮನಿಸಬೇಕಾದ ಸಂಗತಿಯೆಂದರೆ ಶರೀರ, ಶಾರೀರ, ಕುಣಿತ, ಅಭಿನಯ, ಮಾತು-ವಿಚಾರ ಇವೆಲ್ಲದರ ಕುರಿತಾದಂತೆ ಕಲಿಕೆ, ಅಭ್ಯಾಸ. ಸಿದ್ಧ ಪಠ್ಯದಿಂದ ಬಾಯಿಪಾಠ ಮಾಡುವ ಕ್ರಮಕ್ಕಿಂತ ಸ್ವಂತ ಓದು, ವಿಚಾರಗಳ ಆಧಾರದ ಮೇಲೆ ಆಯಾ ಪ್ರಸಂಗದಲ್ಲಿ ಆಶು ಮಾತನಾಡುವ ಕ್ರಮಕ್ಕೆ ಒಗ್ಗಿಕೊಂಡರೆ ಪ್ರತಿ ಪ್ರದರ್ಶನವೂ ವಿಭಿನ್ನವಾದ ಪರಿಣಾಮಗಳಿಂದ ಆಕರ್ಶಕವಾಗುತ್ತದೆ. ಹಾಗೂ ಈ ಅಭ್ಯಾಸದಿಂದ ವ್ಯಕ್ತಿತ್ವದಲ್ಲೊಂದು ವಾಙ್ಮಯ ಆತ್ಮವಿಶ್ವಾಸ ಮನೆ ಮಾಡುತ್ತದೆ. ಹೀಗೆ ವ್ಯಕ್ತಿತ್ವ ವಿಕಾಸದಲ್ಲಿ ಯಕ್ಷಗಾನದ ಸಕಾರಾತ್ಮಕ ಕೊಡುಗೆಯನ್ನು ಮನಗಂಡವರು ತಮ್ಮ ಮಕ್ಕಳಿಗೆ ಕಲಿಸಲು ಖಂಡಿತ ಹಿಂದೇಟು ಹಾಕುವುದಿಲ್ಲ. ಏಕೆಂದರೆ ಇವತ್ತಿನ ಸಾಮಾಜಿಕ ಬದುಕು ಬೇಡುತ್ತಿರುವುದೇ ಸಂವಹನ ಕೌಶಲ್ಯವನ್ನು. ಉತ್ತಮ ಸಂಬಂಧ ನಿರ್ವಹಣಾ ಚಾತುರ್ಯ ಹಾಗೂ ಮಾತುಗಾರಿಕೆಯ ಗುಣಾತ್ಮಕ ಸುಧಾರಣೆಗೆ ಅನುವು ಮಾಡಿಕೊಡುವ ಈ ಕಲೆಯನ್ನು ನಾವು ಪ್ರೀತಿಸಿದರೆ ಮುಂದಿನ ತಲೆಮಾರು ಪುರಸ್ಕರಿಸುತ್ತದೆ.
ಮುಂದಿನ ತಲೆಮಾರಿಗೆ ಕಲಾ ಪ್ರಕಾರವೊಂದನ್ನು ವರ್ಗಾಯಿಸುವ ಜವಾಬ್ದಾರಿಯನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಏಕೆಂದರೆ ನೂರಾರು ಕಲೆಗಳು ಅದನ್ನು ರೂಢಿಸುವವರು ಇಲ್ಲದೆ ನಿರ್ನಾಮವಾಗಿವೆ. ಮಲ್ಲಿಗೆ ಚಾಪೆ ಎಂಬ ಸುಂದರ ಚಾಪೆ ನೇಯುವ ಕಲೆಯನ್ನು ಬಲ್ಲ ಸಮುದಾಯದಲ್ಲಿ ಈಗ ಕೇವಲ ನಾಕೇ ಜನರು ಉಳಿದಿದ್ದಾರೆ. ಬಳಸದೇ ಬಿಟ್ಟರೆ ಮುಂದಿನ ತಲೆಮಾರಿಗೆ ಅಂಗಾಂಗಳೇ ವರ್ಗಾವಣೆಯಾಗುವುದಿಲ್ಲವೆಂದು ಡಾರ್ವಿನ್ನನ ವಿಕಾಸವಾದ ಹೇಳುತ್ತದೆ. ಇನ್ನು ಕಲೆ ಯಾವ ಲೆಕ್ಕ. ನಮ್ಮ ತಲೆಮಾರಿಗೆ ಒಳ್ಳೆಯದೆಂದು ಭಾಸವಾದ ಸಂಗತಿಗಳನ್ನು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ರೂಢಿಸುವುದು ನಮ್ಮ ಕರ್ತವ್ಯ ಕೂಡ. ಅದನ್ನು ಮುಂದೆ ಉಳಿಸಿಕೊಳ್ಳುವುದು ಬಿಡುವುದು ಅವರಿಗೆ ಬಿಟ್ಟಿದ್ದು.
ಕಡಲ ಭಾರ್ಗವ ಡಾ. ಶಿವರಾಮ ಕಾರಂತರು ಒಂದು ಸಂದರ್ಭದಲ್ಲಿ ಹೂಂಕರಿಸಿದ್ದು ಹೀಗೆ “ರಕ್ತಗತವಾಗಿ ಬರುವುದು ರೋಗ ಮಾತ್ರ, ಕಲೆ, ಪ್ರತಿಭೆ ಇವೆಲ್ಲ ಅಲ್ಲ.” ಆದರೆ ಬಾಲ್ಯದ ಕೌಟುಂಬಿಕ ವಾತಾವರಣದ ಸಕಲ ಅಂಶಗಳೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ನಿರೂಪಿತವಾದ ವೈಜ್ಞಾನಿಕ ಸತ್ಯ ತಂದೆ, ತಾಯಿ, ಅಜ್ಜ, ಅಜ್ಜಿ ಅಥವಾ ಮನೆಯ ಇತರ ಸದಸ್ಯರು ಯಾವುದಾದರೊಂದು ಕಲೆಯಲ್ಲಿ ತೊಡಗಿಸಿಕೊಂಡಿದ್ದರೆ ಮಗುವು ಸಹಜವಾಗಿ ಆ ಕುರಿತು ಆಕರ್ಷಿತವಾಗುತ್ತದೆ. ಕ್ರಮೇಣವಾಗಿ ತಾನೂ ಅದರಲ್ಲಿ ತೊಡಗಿಕೊಳ್ಳುತ್ತದೆ. ಆ ಆಸಕ್ತಿಗೆ ತಕ್ಕುದಾದ ಪ್ರೋತ್ಸಾಹ ಹಾಗೂ ಸೂಕ್ತ ಮಾರ್ಗದರ್ಶನ ಸಿಕ್ಕರೆ ಅದರಲ್ಲಿಯೇ ಸಾಧನೆ ಮಾಡಲು ಆರಂಭಿಸುತ್ತದೆ. ಈ ನಿಟ್ಟಿನಲ್ಲಿ ಪಾಲಕರ ಕರ್ತವ್ಯವೆಂದರೆ ತಮ್ಮ ಮಕ್ಕಳು ಯಾವುದರ ಕುರಿತು ಆಕರ್ಷಿತರಾಗಬೇಕೆಂದು ಯೋಚಿಸಿ ಅಂತಹುದೇ ವಾತಾವರಣವನ್ನು ನಿರ್ಮಿಸುವುದು. ಹಾಗೂ ಆ ಕಲೆಯಲ್ಲಿ ಕಲಿಕೆ, ಅಭ್ಯಾಸ, ಸಾಧನೆಗಳಿಗೆ ಅಗತ್ಯವಾದ ನೆರವು, ಅನುಕೂಲಗಳನ್ನು ಮಾಡಿಕೊಡುವುದು.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ