ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಯುವ ಜನತೆಗೆ ಬೇಕು ಆಪ್ತಸಮಾಲೋಚನೆ

ಸುಮಾ ವೀಣಾ

ಹಡಗಿಗೊಬ್ಬ ನಾವಿಕ,ಗುಂಪಿಗೊಬ್ಬ ನಾಯಕ, ಆನೆಗೊಬ್ಬ ಅಂಕುಶ ಹಿಡಿದ ಮಾವುತ ಇರುವಂತೆ ಪಡ್ಡೆ ಹುಡುಗರನ್ನು ನೈತಿಕತೆ, ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬ ಸೂತ್ರದಲ್ಲಿ ಬಂಧಿಸಲು, ಗುರುಗಳು, ಮಾರ್ಗದರ್ಶಕರು, ಹಿತೈಷಿಗಳು, ಸ್ನೇಹಿತರು ಬೇಕು ಇಲ್ಲವೆಂದರೆ ಯುವಜನತೆಯ ಬದುಕು ಸೂತ್ರ ಹರಿದ ಗಾಳಿ ಪಠದಂತೆ ಆಗುತ್ತದೆ.

“ಮಜ್ಜಿಗೆಯಲ್ಲಿ ಇರುವ ಬೆಣ್ಣೆಕೆಡುವುದಿಲ್ಲ, ಅಂಕೆಯಲ್ಲಿರುವ ಹೆಣ್ಣು ಕೆಡುವುದಿಲ್ಲ” ಅನ್ನುವುದನ್ನು ಇನ್ನೂ ವಿಸ್ತಾರವಾಗಿ “ಅಂಕೆಯಲ್ಲಿರುವ ಯುವ ಜನತೆ ಕೆಡುವುದಿಲ್ಲ” ಎನ್ನಬಹುದು.

ಸಾವಿರದ ಮುನ್ನೂರು ವರ್ಷದ ಹಿಂದೆಯೇ ಮುಂದಾಲೋಚನೆಯಿಂದ ಬರೆದ ನಾಗವರ್ಮನ ‘ಕರ್ನಾಟಕ ಕಾದಂಬರಿ’ಯ ಸಾಲುಗಳು ಇಂದಿಗೂ ಅತ್ಯಂತ ಪ್ರಸ್ತುತ ಎಂಬುದನ್ನು ಸಮರ್ಥಿಸಿಕೊಳ್ಳುವ ಮೂಲಕ ಯುವಜನರನ್ನು ಆಪ್ತಸಮಾಲೋಚನೆಯತ್ತ ಸೆಳೆಯುವ ಕಿರು ಪ್ರಯತ್ನ ಈ ಲೇಖನ.
ಚಂದ್ರಾಪೀಡನೆಂಬ ರಾಜಕುಮಾರ ಅಚ್ಛೋದ ಸರೋವರದ ತೀರದಿಂದ ಬರಲೊಪ್ಪದ ವೈಶಾಂಪಯನನ್ನು ಕರೆತರಲು ತನ್ನ ತಂದೆ ತಾಯಿಯ ಅಪ್ಪಣೆ ಪಡೆದು ಇಂದ್ರಾಯುಧವೆಂಬ ಕುದುರೆಯನ್ನೇರಿ ಹೊರಡುತ್ತಾನೆ. ಅದನ್ನು ಕವಿ

ಮಂಗಳ ಹಯವೆಂದೋಲೈಸಿದ
ನಿಳಾಧಿನಾಥಂಗೆ ಪಾರಾಶೀಕಾಧೀಶಂ
ಎಂದು ಭಿನ್ನವಿಸುವುದುಂ ನೃಪರೂಪಚದ್ರಂ ತಂದೆಯಾಜ್ಞೆಯಂ ತಲೆಯೊಳ್
ತಾಳ್ದು ಪೊರಮಡಲೆಂದಭಿನವಜಳಧರಧ್ವಾನ ಗಭೀರವಚನದಿನಿಂದ್ರಾಯುಧಮಂ ಪುಗಿಸೆಂದು ಬೆಸಸಿದಾಗಳ್

ಎಂದು ನಿರೂಪಿಸಿದ್ದಾನೆ. ಇಲ್ಲಿ “ಮಂಗಳ ಹಯ” ಎಂದರೆ “ಕುದುರೆ” ಅರ್ಥಾತ್ ಇಂದಿನ “ಬೈಕು”ಗಳು ಎನ್ನಬಹುದು ಅನ್ನಿಸುತ್ತದೆ. ಅದರಲ್ಲೂ “ಪಾರಾಶೀಕಾಧೀಶಂ” ಅಂದರೆ ಪಾರಸಿ ದೇಶದ ಅರಸು ಬಳುವಳಿಯಾಗಿ ಕೊಟ್ಟ ಕುದುರೆ ಅಂದರೆ ಆಮದು ಮಾಡಿಕೊಂಡ ವಿದೇಶಿ ಐಷಾರಾಮಿ ಬೈಕುಗಳೆಂದು ಅರ್ಥೈಸಿಕೊಳ್ಳಬಹುದು.

ಆಗ ದ್ವಿಚಕ್ರವಾಹನಗಳಿರಲಿಲ್ಲ ರಾಜರಿಗೆ ರಾಜಕುಮಾರರಿಗೆ ವಿದೇಶಿ ಅರಸರು ಒಳ್ಳೆ ತಳಿಯ ಹಯ (ಕುದುರೆ)ಗಳನ್ನು ಕೊಡುತ್ತಿದ್ದರು ಎಂಬುದನ್ನು ಇತಿಹಾಸದ ಹಿನ್ನೆಲೆಯಿಂದ ಗಮನಿಸಬಹುದು. ಅಂತಹ ಕುದರೆಯೇರಿ ತಂದೆ ತಾಯಿಗಳ ಮಾತನ್ನು ಗಮನದಲ್ಲಿಟ್ಟುಕೊಂಡವನು ಚಂದ್ರಾಪೀಡ. ಈಗ ಎಷ್ಟು ಯುವಕರು ತಂದೆ ತಾಯಿಗಳ ಮಾತನ್ನು ಕೇಳುತ್ತಾರೆ ಎಂಬುದೇ ಪ್ರಶ್ನೆ. ನಾಗವರ್ಮ ಕುದುರೆಯ ಮೇಲೆ ಚಂದ್ರಾಪೀಡ ಹೇಗೆ ಹೋದ ಎಂಬುದನ್ನು “ಅನಿಲ, ಗರುಡ, ಜವಮೆನಿಸಿದುದಂ” ಎಂದು ಬರೆಯುತ್ತಾನೆ. ನಮ್ಮು ಯುವಕರೂ ಹಾಗೆ ಅನಿಲವೇಗವಾಗಿಯೇ ಅಂದರೆ ಅತ್ಯಂತ ವೇಗವಾಗಿ ಹೋಗುವುದು. ಇಲ್ಲಿ ಈ ಕ್ಷಣ ಕಾಣಿಸಿದರೆ ಕಣ್ಣು ಮುಚ್ಚಿ ತೆಗೆಯುವುದರಲ್ಲಿ ಎಷ್ಟೋ ದೂರದಲ್ಲಿ ಕಂಡೂ ಕಾಣದ ಹಾಗೆ ಮಾಯವಾಗಿ ಬಿಡುತ್ತಾರೆ.

ಯೌವ್ವನದ ಮದದಿಂದ ಹುಡುಗರು ಅದೇ ಯಾಂತ್ರಿಕ ಯೌವ್ವನ ತುಂಬಿದ ಬೈಕುಗಳೆಂಬ ಹಯಗಳನ್ನೇರಿ ಯಮಲೋಕ ವಾಸಿಯಾಗುತ್ತಿದ್ದಾರೆ. ಹಿಂದಿನಿಂದ ಭಾರೀ ವಾಹನವೇನಾದರೂ ಬಂದು ಇವರ ಮೇಲೆ ಸವಾರಿ ಮಾಡಿದರೆ ಗಾಡಿ,ಬಾಡಿ ಎರಡೂ ಸಿಗುವುದಿಲ್ಲ.
ಆದರೆ ಆಧುನಿಕ ನಾಗರಿಕತೆ, ನವ ನಾಗರಿಕತೆ, ಅತಿನಾಗರಿಕತೆ ಎನಾದರೂ ಕರೆಯೋಣ ನಮ್ಮ ಹುಡುಗರಿಗೆ ವಿದೇಶಿ ಐಷಾರಾಮಿ ಬೈಕುಗಳೇ ಬೇಕು. .

ಡಿ.ಎಸ್.ಕೆ ಬೆನೆಲ್ಲೆ, ರಾಯಲ್ ಎನ್ ಫೀಲ್ಡ್, ಜಾವಾ, ಜಾವಾ ಪೇರಕ್, ಕೆಟಿಎಂನಂಥ ಬೈಕುಗಳೇ ಬೇಕು ಅದೂ ಫೇಸ್ ಬುಕ್ ಲೈವಲ್ಲಿ ರೈಡ್ ಮಾಡುವ ಹುಚ್ಚುತನ. ಪೋಲೀಸರ ಕಣ್ಣುತಪ್ಪಿಸಿ ವ್ಹೀಲಿಂಗ್, ಜಂಪಿಂಗ್, ರೋಲೊಂಗ್ ಮಾಡಹೋಗಿ ಅದೃಷ್ಟ ಕೆಟ್ಟು ಪ್ರಾಣಕಳೆದುಕೊಳ್ಳುತ್ತಾರೆ. ಇನ್ನೂ ಅದೃಷ್ಟ ಕೆಟ್ಟಿದ್ದರೆ ಕೈಕಾಲು ಕಳೆದುಕೊಂಡು ಜೀವಂತ ಶವವಾಗಿ ತಾವು ನರಳಿ ಮನೆಯವರನ್ನು ನರಳಿಸುತ್ತಾರೆ. ಏನು ಬಂತು ಪ್ರಯೋಜನ! ಕುಡಿತ ಡ್ರಗ್ಸ್ ಸೇವನೆಯಂತಹ ಕೆಟ್ಟ ಅಭ್ಯಾಸಗಳನ್ನು ರೂಢಿಸಿಕೊಂಡು ಅತೀವೇಗದ ದ್ವಿಚಕ್ರ ಚಾಲನೆಯಿಂದ ನಡುರಸ್ತೆಯ ಹೆಣಗಳಾಗಿ ಹೋಗುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಹೈದರಾಬಾದಿನ ಔಟರ್ ರಿಂಗ್ ರೋಡ್ ನಲ್ಲಿ 250 ಕಿಲೋಮೀಟರ್ ವೇಗದಲ್ಲಿ ಬೈಕ್ ಸವಾರಿ ಮಾಡ ಬಯಸಿದ್ದ ಆದರೆ ಅಪಘಾತಕ್ಕೀಡಾಗಿ ದುರ್ಮರಣ ಗೊಂಡ ಅಜರುದ್ದೀನ್ ಅವರ ಮಗ

ಅದನ್ನು ಕಂಡು ಸಂತಾಪ ಸೂಚಿಸುವ ನೆಪದಲ್ಲಿ ಸ್ನೇಹಿತರೆಂದು ಕರೆಸಿಕೊಳ್ಳುವರು “ ಮತ್ತೆ ಹುಟ್ಟಿ ಬಾ ಗೆಳೆಯ”, “ತರುಣಸಿಂಹ” ಎಂದು ನಾಯಕನಂತೆ ಬಿಂಬಿಸಿ ಅವನ ಫೋಟೊಗಳಿಗೆ ಹಾಲಿನ ಅಭೀಷೇಕ ಮಾಡುತ್ತಾರಲ್ಲ ಇವರೆಂಥ ಮೂರ್ಖರು. ಇವರನ್ನು ಸ್ನೇಹಿತರೆನ್ನಬಹುದೇ? ಕರೆದರೆ ಎಂಥ ಸ್ನೇಹಿತರು? ಮಕ್ಕಳನ್ನು ಕಳೆದುಕೊಂಡ ಪೋಷಕರ ಪಾಡೇನು ಎಂಬ ಪ್ರಶ್ನೆಗಳು ಬಹುವಾಗಿ ಕಾಡುತ್ತವೆ.


ಯುವಕರಲ್ಲಿ ಅಪಘಾತ ಪ್ರಕರಣಗಳು ಆತ್ಮ ಹತ್ಯಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಸಿಂಪಲ್ಲಾಗಿ ಹೇಳಬೇಕೆಂದರೆ ಸೋಶಿಯಲ್ ಸ್ಟೇಟಸ್ ಮತ್ತು ಎಕನಾಮಿಕ್ ಸ್ಟೇಟಸ್ ಇದ್ದು ಕೆಲವರನ್ನು ಮೃತ್ಯು ಕೂಪಕ್ಕೆ ತಳ್ಳಿದರೆ ಕೆಲವೊಮ್ಮೆ ಇವಿಲ್ಲದೆ ಕೆಲವರು ಮೃತ್ಯು ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ. ಒಟ್ಟಾರೆಯಾಗಿ ಯುವ ಸಮುದಾಯ ಎತ್ತ ಕಡೆಗೆ ಸಾಗುತ್ತಿದೆ ಎಂಬ ಯಕ್ಷ ಪ್ರಶ್ನೆ ಚಿಂತಕರನ್ನು ಭಾಧಿಸುತ್ತಿದೆ.
ಹದಿಹರೆಯದ ಎಳೆಯರ ಮನಸ್ಸನ್ನು ವಿಚಲಿತಗೊಳಿಸುತ್ತಾ ಇರುವುದು. ನಾಗವರ್ಮನೇ ಹೇಳಿರುವಂತೆ ಇಂದಿಗೂ ಅನ್ವಯವಾಗುವ “ತಮ” ಎಂಬ ರಕ್ತಬೀಜಾಸುರ.
ಕೈದೀವಿಗೆಯ ಬೆಳಗಿನಿಂ ಕಾಯ್ದೆಸೆವ ಸಹಸ್ರಕಿರಣನಿಂ
ಭೇದಿಸಲ್ ಏಗೈದೂಂ ಬಾರದು ದಲ್
ತವೆ ಮಾಯ್ದ ಈ ಜವ್ವನದ ಒಡಲೊಳ್ ಇಡಿದಿರ್ದ ತಮ

ಕಡ್ಡಿ ಮುರಿದಂತೆ ಕವಿ ಹೇಳುವ “ಪ್ರಾಯದ ಹುಡುಗರ ದೇಹದ ತಮ” ಇಷ್ಟೆಲ್ಲಾ ಅನಾಹುತಕ್ಕೆ ಕಾರಣವಾಗಿದೆ. ಇದನ್ನು ಜವ್ವನದ ಸೊಕ್ಕು ಎನ್ನಲೂ ಬಹುದು. ತಮದಲ್ಲಿ ಎದಿರು ಬರುವ ದೇವತೆಯೂ ಒಂದೇ ಸೈತಾನನೂ ಒಂದೇ ಎಂಬಂತಾಗಿದೆ.
ನಾಗವರ್ಮನೇ ಶುಕನಾಸನಿಂದ ಹೇಳಿಸಿರುವ ಇನ್ನೊಂದು ಬಹುಮುಖ್ಯಹಾಗು ಸರ್ವ ಕಾಲಕ್ಕೂ ಅನ್ವಯವಾಗುವಂಥ ಇನ್ನೊಂದು ಪದ್ಯದ ಸಾಲನ್ನು ಇಲ್ಲಿ ಉಲ್ಲೇಖಿಸಲೇಬೇಕು.

“ಪಿತೃಗಳುಪಾರ್ಜಿಸಿ ಇಟ್ಟ ಸಿರಿ, ಜವ್ವನದ ಏಳ್ಗೆ, ಹರೆಯದ ಸೊಕ್ಕು ,ಪೆರರಿರ್ಗಿಲ್ಲ ಎನಿಪ್ಪ ರೂಪು” ಈ ನಾಲ್ಕರಲ್ಲಿ( ತಂದೆ ಸಂಪಾದಿಸಿ ಇಟ್ಟ ಐಶ್ವರ್ಯ, ಯೌವ್ವನದ ಮದ ಹಾಗು ಶಕ್ತಿ, ಅಪ್ರತಿಮ ಸೌಂದರ್ಯ) ಯಾವುದಾದರೂ ಇಂದು ಇದ್ದರೂ ಯುವಜನತೆಯನು ಹಿಡಿದು ನಿಲ್ಲಿಸಲಾಗಲ್ಲ. ಅಂಥಹುದರಲ್ಲಿ ಈ ನಾಲ್ಕು ಒಬ್ಬನಲ್ಲಿಯೇ ಇದ್ದರೆ ಆಗುವುದಿಲ್ಲವೆ ಅಪಘಾತ, ಅತ್ಯಾಚಾರ, ಕೊಲೆ. ? ಈ ಮಾತುಗಳನ್ನು ಶುಕನಾಸ ಎಂಬ ಮಂತ್ರಿ ಚಂದ್ರಾಪೀಡನಿಗೆ ಆಪ್ತಸಮಾಲೋಚಕನಾಗಿ ಹೇಳುವ ಮಾತುಗಳು.

ತಾರುಣ್ಯದ ಮದದಿಂದ ಆಗುವ ತಿಳಿಗೇಡಿತನ, ಸೂರ್ಯನ ಕಾಂತಿಯಿಂದಾಗಲಿ, ರತ್ನಗಳ ಹೊಳಪಿನಿಂದಾಗಲಿ ತೆಗೆಯಲು ಸಾಧ್ಯವಾಗುವುದಿಲ್ಲ. ದರ್ಪವೆಂಬ ತಾಪವನ್ನು ಇಳಿಸಲೂ ಆಗುವುದಿಲ್ಲ . ಇದನ್ನು ಪಂಪ “ಇನಿಯವು ಮೊದಲೊಳ್ ಮಂಜಿನ ಪನಿಯವೋಲ್ ಬಳಿಕೆಯ್ದೆ ಮುಳಿದು ಕೊಂದಿಕ್ಕುವುವಿಂತೆನೆಯೆನೆ ವಿಷಯ ಸುಖಾಸ್ವಾದನದೊಳ್ ಲಂಪಟರಿದೇಕೆಯೋ ನರಪಶುಗಳ್” ಎಂದಿರುವುದು.
ಚಂಪೂ ಕಾವ್ಯ ಷಡಕ್ಷರ ಕವಿಯ “ರಾಜಶೇಖರ ವಿಳಾಸ” ಇದರಲ್ಲಿ ಬರುವ 13ನೆ ಆಶ್ವಾಸದ ತಿರುಕೊಳವಿನಾಚಿಯ ಪ್ರಸಂಗದಲ್ಲಿ ಚೋಲಮಂಡಲಾಧಿಪತಿ ಸತ್ಯೇಂದ್ರಚೋಳ ಹಾಗು ಅಮೃತಮತಿಮಹಾದೇವಿಯರಿಗೆ ರಾಜಶೇಖರನೆಂಬ ಮಗ ಇರುತ್ತಾನೆ. ಇವನ ಸ್ನೇಹಿತ ಮಿತವಚನ ಅಂದರೆ ಮಂತ್ರಿಯ ಮಗ. ಇಬ್ಬರೂ ಸ್ನೇಹಿತರು ಆತ್ಮವೊಂದೇ ದೇಹ ಬೇರೆ ಎಂಬಂತೆ ಇರುತ್ತಾರೆ. ಸಿಂಧೂರಾಜ ಕಾಣಿಕೆಯಾಗಿ ಕುದುರೆಗಳನ್ನು ನೀಡಿರುತ್ತಾನೆ. ಅಂಥ ಕುದುರೆಗಳನ್ನು ವೇಗವಾಗಿ ಸವಾರಿ ಮಾಡಲು ಹೋದಾಗ ಪ್ರಾಣ ಸ್ನೇಹಿತರಿಂದ ಅನಾಹುತವೊಂದು ಸಂಭವಿಸುತ್ತದೆ. ಮಿತವಚನನ ಕುದುರೆ ತುಳಿತಕ್ಕೆ ಸಿಕ್ಕಿ ಶಿವಭಕ್ತೆ ತಿರುಕೊಳವಿನಾಚಿಯ ಮಗ ಶಂಕರ ಸಾಯುತ್ತಾನೆ. ವೇಗ ತರುವ ಆಪತ್ತು ವಿಪತ್ತುಗಳು ಇಂಥವೆ ಇಂಥ ಅನೇಕ ಘಟನೆಗಳನ್ನು ದಿನಬೆಳಗಾದರೆ ನೋಡುತ್ತೇವೆ.

ಅಡಿಗರು “ವರ್ಧಮಾನ” ಎಂಬ ಪದ್ಯದಲ್ಲಿ ಹೇಳುವಂತೆ ಕಿಲಾಡಿ ರಸ್ತೆಯ ತಿರುವು ಅಪಾಯಕಾರಿ ಎಂದು ತಂದೆ ಹೇಳಿದ ಮೇಲೂ ಅಪಘಾತ ಮಾಡಿಕೊಳ್ಳುವ ಹುಚ್ಚು ಮಗ ಇಂದಿಗೆ ಹರೆಯದ ಸೊಕ್ಕಲ್ಲಿರುವ ಯುವಜನತೆಯನ್ನು ಪ್ರತಿನಿಧಿಸುತ್ತಾನೆ.
ಇನ್ನೊಂದು ಪದ್ಯದಲ್ಲಿ ನಾಗವರ್ಮ
ಗುರುಜನದಲ್ಲಿ ಮಾಡಧಿಕಭಕ್ತಿಯನರ್ಚಿಸು ದೇವರಂ ಮುನೀಶ್ವರ ಪರಿಚರ್ಯೆಯೊಳ್ ಪಿರಿದು ಮಳ್ತಗೆಯಾಗು
ಎಂದಿದ್ದಾನೆ. ಇದನ್ನು ಹೇಳುವ ತಾಳ್ಮೆ ಕೇಳುವ ವ್ಯವಧಾನ ಯಾರಲ್ಲೂ ಇಲ್ಲ. ಅಂದರೆ ನೀತಿಪಾಠ ಇವತ್ತಿಗೆ ತಾಜಾತನ ಕಳೆದುಕೊಂಡ ಹಣ್ಣಿನಂತಾಗಿದೆ. ನೀತಿಯನ್ನು ಉದ್ಧೀಪಿಸುವ ರಸವತ್ತಾದ ಕತೆಗಳು ಹೇಳುವವರಿಲ್ಲದೆ ಮರೆಯಾಗಿವೆ. ಶೈಕ್ಷಣಿಕವಾಗಿ ಅವಲೋಕಿಸಿದರೆ ನಮ್ಮ ಪಠ್ಯಗಳು ಸಾಮಾಜಿಕ ಜವಾಬ್ದಾರಿಯ ಕುರಿತು ಹೆಚ್ಚು ಮಾತನಾಡದೆ ಇರುವುದು , ಕೇವಲ ಅಂಕಗಳಗಾಗಿ ಮೀಸಲಾಗಿರುವುದೂ ಸಮಾಜವನ್ನು ವಿಕೃತಗೊಳಿಸುತ್ತಿದೆ ಎನ್ನಬಹುದು.

ಭೋಗದ ವಿಪರೀತ ಸೆಳೆತ ನಮ್ಮ ಸಮಾಜವನ್ನು ಹಾಳು ಮಾಡುತ್ತಿದೆ ಹಾಗಾಗಿ ಮೋಸ,ಸುಲಿಗೆ,ವಂಚನೆ, ಅತ್ಯಾಚಾರ, ಕೊಲೆ, ಸಾಕ್ಷಿನಾಶ,ಕಾನೂನಿನ ಕಣ್ಣಿಗೆ ಮಣ್ಣೆರಚುವುದು ಮೊದಲಾದ ಕುಕೃತ್ಯಗಳ ಸರಮಾಲೆ ಸೃಷ್ಟಿಯಾಗಿದೆ. ಆಧುನಿಕ ಆಡಂಬರದ ವಿಲಾಸಿ ಬದುಕು ಅದನ್ನು ಬಿಡಿಸದಂತೆ ಕಗ್ಗಂಟನ್ನಾಗಿ ಮಾಡುತ್ತಿದೆ. ಮದ್ಯದ ಅಮಲು ತಂಬಾಕಿನ ಘಮಲಿನ ಘೀಳು, ಮಾದಕದ್ರವ್ಯಗಳ ಸೇವನೆ ಯವಕರನ್ನು ಇನ್ನೆಂದಿಗೂ ಏಳದಂತೆ ಬೀಳಿಸುತ್ತಿವೆ.

ಆಹಾರ ಕಂಡು ಗಾಳಕ್ಕೆ ಸಿಕ್ಕುವ ಮೀನಿನಂತೆ ಯುವಕರು ಕ್ಷಣಿಕ ಬದುಕಿನ ರಂಜನೆಗೆ ಸಂಪೂರ್ಣ ಶೈಕ್ಷಣಿಕ ಬದುಕು ಹಾಗು ಖಾಸಗಿ ಬದುಕನ್ನು ವ್ಯರ್ಥ ಮಾಡಿಕೊಂಡು ಪೋಷಕರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ಪೋಷಕರ ನಂಬಿಕೆ ಹಾಗು ಮೌಲ್ಯಗಳಿಗೆ ಎಳ್ಳು ನೀರು ಬಿಡುತ್ತಿದ್ದಾರೆ. ಮನುಷ್ಯನಾದವನು ಪಾಲಿಸಲೇಬೇಕಾದ ನೀತಿಸಂಹಿತೆಗಳ ಬಗ್ಗೆ ಸಮಾಜವಾಗಲಿ, ಸರಕಾರವಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ.

ಪೋಷಕರು ಮುದ್ದಿನಿಂದ ಕೋಲು ಹಿಡಿಯುತ್ತಿಲ್ಲ. ಶಿಕ್ಷಕರಿಗೆ ಕೋಲು ಹಿಡಿಯುವ ಹೊಡೆದು ಬುದ್ಧಿ ಹೇಳುವ ಅವಕಾಶವಿಲ್ಲ. ಹಾಗಾಗಿ ಅದೇ ಮಕ್ಕಳು ಯುವಕರಾದಾಗ ಲಾಠಿಯಿಂದ ಬುದ್ಧಿ ಕಲಿಯುವಂತಾಗಿದೆ ಅದೂ ಆಗದಿದ್ದರೆ ಗುಂಡಿನ ಗುರಿಗೆ ಬಲಿಯಾಗಬೇಕಾಗುತ್ತದೆ. ಅಂದ ಹಾಗೆ ನೀತಿಯ ಪಾಠವನ್ನು ಗುರುಗಳು, ಪೋಷಕರು ಹೇಳಿದರೆ ಕೇಳಿಸಿಕೊಳ್ಳುವ ತಾಳ್ಮೆ ನಮ್ಮ ಯುವಕರಲ್ಲಿ ಎಲ್ಲಿದೆ? ಇದೂ ಸವಾಲೇ ಸರಿ! ಹಾಗಾಗಿ ಎಳವೆಯಲ್ಲೇ ಮೌಲ್ಯಗಳಿಂದ ಮಕ್ಕಳನ್ನು ಮೌಲ್ಢ್ ಮಾಡಬೇಕಾಗಿದೆ. ನಾಗವರ್ಮ ತನ್ನ ಕೃತಿಯಲ್ಲಿ ಶುಕನಾಸನ ಮೂಲಕ ಉಪದೇಶಿಸುವ ಪ್ರಯತ್ನ ಮಾಡಿದ್ದಾನೆ ಹಾಗೆ ಚಂದ್ರಾಪೀಡ ಕೇಳಿದ.

ಆದರೆ ನಮ್ಮಲ್ಲಿ ನಾಗವರ್ಮರಿಲ್ಲ ಇರುವುದು “ನಗವರ್ಮರು”. ಶೈಕ್ಷಣಿಕ ಹಿತ ಚಿಂತಿಸುವವರಿಲ್ಲ ಬದಲಾಗಿ ಕ್ಷಣಿಕ ಹಿತಕ್ಕೆ ಹಾತೊರೆಯುತ್ತಾರೆ, ಚಂದ್ರಾಪೀಡರಿಲ್ಲ ಬದಲಾಗಿ “ತೊಂದ್ರಾಪೀಡಕರು”, ಸಮಾಜ ಪೀಡಕರೆ ಹೆಚ್ಚಿದ್ದಾರೆ. ಅಲ್ವೆ!

ಇನ್ನಾದರೂ ನೀತಿಯ ಗುಳಿಗೆಗಳನ್ನು ಕಾಲಕಾಲಕ್ಕೆ ನೀಡಬಲ್ಲ ಯುವಕರ ಬದುಕಿನ ಸೂತ್ರಗಳನ್ನು ನಿಭಾಯಿಸುವ ಪೋಷಕರು, ಗುರುಗಳು, ಹಿರಿಯರು, ಹಿತೈಷಿಗಳು , ಸ್ನೇಹಿತರು ಎನ್ನುವ ಆಪ್ತಸಮಾಲೋಚಕರು ಬೇಕಲ್ಲವೆ!
( ಕನ್ನಡ ಸಾಹಿತ್ಯದಲ್ಲಿಯೇ ಇರುವ ದ್ರವ್ಯವನ್ನು ಆಧುನಿಕ ಪರಿಭಾಷೆಗೆ ಹೊಂದಿಸುವ ಕಿರು ಪ್ರಯತ್ನ ಈ ಬರಹದಲ್ಲಿ)