- ಮುಟ್ಟಾಳೆ - ಜುಲೈ 11, 2020
- ರಂಜಾನ್ ತಿಂಗಳು ಮತ್ತು ಈದ್ ಹಬ್ಬ - ಮೇ 24, 2020
- ಆಮಿನಾದ ಮತ್ತು ಮಿಸ್ರಿ ಮಾಲೆ - ಏಪ್ರಿಲ್ 24, 2020
ಮುಸ್ಲಿಮರ ಪವಿತ್ರ ಮಾಸ ರಂಜಾನ್.
ತಿಂಗಳು ಪೂರ್ತಿ ವೃತಾನುಷ್ಟಾನ ಮಾಡಿದ ನಂತರದ ತಿಂಗಳು ಒಂದನೇ ತಾರೀಕು ಹಬ್ಬ. ಊರ ಭಾಷೆಯಲ್ಲಿ ಹೇಳೋದಾದ್ರೆ ಪೆರ್ನಾಲ್/ ಈದ್ ಹಬ್ಬ.
ಎಲ್ಲರಂತೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವುದೆಂದರೆ ನನಗೂ ಸಂಭ್ರಮ ..
ಬಾಲ್ಯದ ಆ ದಿನಗಳ ಬಗ್ಗೆ ಒಂದಿಷ್ಟು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ ..
ಮೊದ ಮೊದಲು ನನಗೂ ದಿನವಿಡೀ ಉಪವಾಸ ಇರೋದೆಂದ್ರೆ ತುಂಬಾ ಕಷ್ಟವಾಗುತ್ತಿದ್ದರೂ ಬರಬರುತ್ತಾ ಅದು ಅಭ್ಯಾಸವಾಗಿ ಬಿಟ್ಟಿತ್ತು.
ಶಾಲಾ ದಿನಗಳಲ್ಲಿ ಯಾರಿಗೂ ತಿಳಿಯದಂತೆ ಕಣ್ಣು ತಪ್ಪಿಸಿ ದೂರ ಹೋಗಿ ಊಟ ಮಾಡಿ ಬಂದ ದಿನಗಳಿಗಂತೂ ಕೊರತೆಯಿರಲಿಲ್ಲ. ಇದರಲ್ಲಿ ಈಗಲೂ ನನ್ನನ್ನು ಒಡ ಹುಟ್ಟಿದವರು ತಮಾಷೆ ಮಾಡುವ ವಿಷಯವಿದೆ .. ಹೇಳುತ್ತೇನೆ ನೋಡಿ .. 🙂
ಮನೆಯಿಂದ ವೃತಾನುಷ್ಟಾನ ಮಾಡಿ ಕಾಲೇಜಿಗೆ ಹೋಗಿದ್ದೆ. ಆದರೆ ಮಧ್ಯಾಹ್ನ ವಿಪರೀತಿ ಹಸಿವು ಬಾಯಾರಿಕೆ ಆದಾಗ ಕಾಲೇಜು ಪಕ್ಕದ ಗೂಡಂಗಡಿಯ ಬದಿಯಲ್ಲಿ ನಾನು ಬಾಳೆ ಹಣ್ಣು ಮತ್ತು ಸೋಡಾ ಕುಡಿದು ಹಸಿವು/ದಣಿವಾರಿಸಿ ಕೊಂಡಿದ್ದೆ.
ಸಂಧ್ಯಾ ಹೊತ್ತಿಗೆ ಮನೆಗೆ ಬಂದು ಉಪವಾಸಿಗನಂತೆ ಎಲ್ಲರೊಂದಿಗೂ ಬೆರೆತು ತಿಂಡಿ ತಿನ್ನತೊಡಗಿದ್ದೆ.
ಆವಾಗ ಅಮ್ಮ ಕೇಳಿದ್ರು .. “ಗೂಡಂಗಡಿಯ ಬಾಳೆ ಹಣ್ಣು ತಿಂದಾಗ ಹಸಿವು ನೀಗಲಿಲ್ಲವೇ ..” ನನಗೆ ಆಶ್ಚರ್ಯ ಕಾದಿತ್ತು .. ಇವರಿಗೆ ಹೇಗಪ್ಪಾ ತಿಳಿದುದು ಎಂದು .. !!!
ಆದರೆ ಪಕ್ಕದಲ್ಲೇ ನನ್ನ ಸಹೋದರ ನಗುತಿದ್ದ .. ಆತ ಬಸ್ಸಿನಲ್ಲಿ ಯಾತ್ರೆ ಮಾಡುವಾಗ ನಾನು ಅಲ್ಲಿ ಅವಿತು ತಿನ್ನುವುದನ್ನು ಕಣ್ಣಾರೆ ಕಂಡು ಮನೆಯಲ್ಲಿ ವರದಿ ಒಪ್ಪಿಸಿದ್ದ … !!!
ಇನ್ನು ಹಬ್ಬದ ಬಗ್ಗೆ ಹೇಳಬೇಕೆಂದರೆ .. ಅಂದಿನ ಹಾಗೂ ಇಂದಿನ ಹಬ್ಬಗಳಲ್ಲಿನ ವ್ಯತ್ಯಾಸ .. ಅದು ಅಜಗಜಾಂತರ ..
ಅಂದು ಎಲ್ಲವೂ ನೈಜವಾಗಿತ್ತು . ಬಾಲ್ಯದ ಸಂತಸದ ಕ್ಷಣಗಳಿತ್ತು .. ಮುಗ್ದತೆ ಯಿತ್ತು .
ಹಬ್ಬಕ್ಕೆ ಸಡಗರದ ತಯಾರಿ ನಡೆಸುತಿದ್ದೆವು. ಹೊಸ ಬಟ್ಟೆ ಸಿಗುವ ಕನಸು ಕಾಣುತ್ತಿದ್ದೆವು. ಮದಿರಂಗಿ(ಗೋರಂಟಿ) ಹಾಕುವ ಸಂಪ್ರದಾಯವಿತ್ತು .. ಹಬ್ಬದ ದಿನದಂದು ಗೆಳೆಯರೆಲ್ಲರೂ ಸೇರಿ ತಾವು ಎಷ್ಟು ದಿವಸ ಉಪವಾಸವಿದ್ದೆವು ಎಂದೂ ಸಂಖ್ಯೆ ಒಪ್ಪಿಸಬೇಕಾಗಿತ್ತು ..
ಅದರಲ್ಲಿ ಹೆಚ್ಚುದಿನ ಉಪವಾಸವಿದ್ದವ ಹೀರೋ ಆಗಿ ಮೆರೆಯುತ್ತಿದ್ದ .. ಕೆಲವರು ಮೂರು . ನಾಲ್ಕು .. ಹನ್ನೊಂದು .. ಹನ್ನೆರದು.. ಅದರಲ್ಲೂ ಇನ್ನೊಂದು ವಿಶೇಷವೆಂದರೆ ಅರ್ಧ ದಿನ ಉಪವಾಸ .. ಮಧ್ಯಾಹ್ನದವರೆಗೆ ಏನೂ ತಿನ್ನದೇ ಮಧ್ಯಾಹ್ನ ಊಟ ಮಾಡಿದರೆ ಆ ದಿನದ ಉಪವಾಸವನ್ನು ಅರ್ಧ ಉಪವಾಸ ಎಂದು ಪರಿಗಣಿಸುತ್ತಿದ್ದೆವು .. !!!
ಹಬ್ಬದ ಹಿಂದಿನ ರಾತ್ರಿ ಮದರಂಗಿ ಹಚ್ಚುವ ಸಂಪ್ರದಾಯ .. ಇಂದಿನಂತೆ ಅಂದಿನ ದಿನಗಳಲ್ಲಿ ಟ್ಯೂಬ್ ಮದರಂಗಿ ಇರಲಿಲ್ಲ . ಗಿಡದಿಂದ ಎಲೆಗಳನ್ನು ಕೀಳಿ ಗ್ರೈಂಡ್ ಮಾಡಬೇಕಿತ್ತು .. ಮದರಂಗಿ ಗಿಡ ಎಲ್ಲರ ಮನೆಯಲ್ಲೂ ಇರುತ್ತಿರಲಿಲ್ಲ .. ಅದಕ್ಕೆ ಇನ್ನಾರದೋ ಮನೆಯ ಹಿತ್ತಲಿಗೆ ಹೋಗಬೇಕಾಗಿತ್ತು ..
ಇಂತಹ ಸಂದರ್ಭದಲ್ಲಿ ನೆನಪಾಗುವುದು ನಮ್ಮ ಮನೆಯ ಕೂಗಳತೆ ದೂರದಲ್ಲಿರುವ ಸುಲಾಯರ/ ಶೆಟ್ಟರ ಮನೆ.
ಆ ಮನೆ ತುಂಬಾ ಹಳೆಯದಾಗಿದ್ದರೂ ಹೊಸ ಮನೆ ಎಂದು ಹೆಸರು.
ನಮ್ಮಿಬ್ಬರ ಮನೆ/ಕುಟುಂಬದ ಮಧ್ಯೆ ಅನ್ಯೋನ್ಯ ಸಂಬಂಧ .. ಈ ಸ್ನೇಹ ಅಜ್ಜ ಮುತ್ತಜ್ಜರ ಕಾಲದಿಂದಲೇ ಬಂದದ್ದು ಎಂದು ಹೇಳುತ್ತಿದ್ದರು.
ಆ ಮನೆಯ ಅಮ್ಮ ಮೊದಲೇ ನಮಗಾಗಿ ಮದಿರಂಗಿ ಎಲೆಗಳನ್ನು ಕಿತ್ತು ತೆಗೆದಿಡುತ್ತಿದ್ದರು .. ಯಾಕೆಂದರೆ ಹಬ್ಬದ ದಿನ ಖಾತರಿಯಾದರೆ ಎಲ್ಲ ಜನರೂ ಆ ಹಿತ್ತಲಿಗೆ ಲಗ್ಗೆಯಿಡುತ್ತಿದ್ದರು ..ದಿನದ ಕೊನೆಗೆ ಗಿಡ ಬೊಳಾಗುತ್ತಿತ್ತು.
ಆ ಹೊಸಮನೆಯಲ್ಲಿ ನಾಲ್ಕೈದು ನಾಯಿಗಳಿತ್ತು .. ನಮಗೆ ಅದರದ್ದು ಮಾತ್ರ ಭಯ .. !!!
ಈ ಭಯವನ್ನು ಅರಿತೇ .. ನಮ್ಮನ್ನು ದೂರದಿಂದ ಕಂಡಾಗಲೇ ಮನೆಯೊಡೆಯ .. “ಮಾಸ್ಟರ ಮಕ್ಳು ಬರ್ತಿದ್ದಾರೆ … ನಾಯಿಯನ್ನು ಕಟ್ಟಿಹಾಕು “ಎಂದು ಆಳುಗಳಿಗೆ ಆಜ್ಞೆ ಮಾಡುತ್ತಿದ್ದರು. ನಾಯಿಗಳು ಸಂಕೋಲೆಗಳಲ್ಲಿ ಬಂಧನ ವಾದದ್ದು ಖಾತ್ರಿಯಾದ ನಂತರವೇ ನಾವು ಹಿತ್ತಲಿಗೆ ಹೆಜ್ಜೆ ಹಾಕುತ್ತಿದ್ದೆವು .. !!
ನಾಯಿಯೆಂದರೆ ಭಯಪಡಲು ಬಲವಾದ ಕಾರಣವೊಂದಿದೆ .. ಅಂದು ಬಾಲ್ಯದಲ್ಲಿ ಒಮ್ಮೆ ನಾನು ಶಾಲೆಯಿಂದ ನಡೆದು ಬರುತ್ತಿದ್ದಾಗ ನಾಯಿಯೊಂದು ಬೆನ್ನಟ್ಟಿ ಪರಚಿ ಹಾಕಿತ್ತು . ಅಂದಿನಿಂದ ಶುರುವಾಗಿತ್ತು ಭಯ. ಒಂದು ಸತ್ಯವನ್ನು ಇಂದು ಹೇಳುತ್ತಿದ್ದೇನೆ .. “ಈಗಲೂ ನಾಯಿಯೆಂದರೆ ಭಯ .. ಇದನ್ನು Dog ಫೋಬಿಯ ಎನ್ನಬಹುದೇನೋ … “
ಕೇವಲ ಮದಿರಂಗಿ ಕಿತ್ತು ತಂದರೆ ಸಾಕಾಗುತ್ತಿರಲಿಲ್ಲ .. ಅದನ್ನು ಚೆನ್ನಾಗಿ ಅರೆದು ನಂತರ ಅದಕ್ಕೆ ಕೆಂಪು ಬಣ್ಣ ಬರಲು ಟೀ ಹುಡಿ, ಹಲಸಿನ ಮರದ ಕಾಂಡದ ತಿಗುಡು/ತೊಗಟೆ, ಕೆಂಪು ಬಣ್ಣದ ಇರುವೆಗಳು .. ಇದನ್ನೆಲ್ಲಾ ಮಿಕ್ಸ್ ಮಾಡುತ್ತಿದ್ದೆವು .. !!! ಬಣ್ಣ ಕೆಂಪಾಗಲು ಏನೆಲ್ಲಾ ಸೇರಿಸಬೇಕೆಂದು ಬಾಲ್ಯ ಗೆಳೆಯರಿಂದ ರೆಸೀಪ್ /recipe ಮೊದಲೇ ಕೇಳಿ ತಿಳಿದುಕೊಳ್ಳುತ್ತಿದ್ದೆವು .. !!!
(ಇತ್ತೀಚಿಗೆ ಮನೆಯಲ್ಲಿ ಇದರ ಬಗ್ಗೆ ಚರ್ಚಿಸುವಾಗ ಅಂದು ನಾವೆಷ್ಟು ಮುಗ್ದರು ಮತ್ತು ಮೂರ್ಖರಾಗಿದ್ದೆವು ಎಂದು ನಾವು ಹೇಳಿಕ್ಕೊಂಡು ತುಂಬಾ ನಕ್ಕಿದ್ದೆವು)
ಹಬ್ಬದ ದಿನದಂದು ಬಿಸಿನೀರಿನಲ್ಲಿ ಅಭ್ಯಂಜನ .. ಪ್ರತ್ಯೇಕ ಪ್ರಾರ್ಥನೆ ಇರುವ ಕಾರಣ ಸುಮಾರು ಎಂಟು ಗಂಟೆಗೆ ಮಸೀದಿಗೆ ತಲುಪಬೇಕು.
ಅಂದು ವಿಶೇಷ ಅಡಿಗೆ . .. ಅದರಲ್ಲೂ ಇಡ್ಲಿ ಮತ್ತು ಕೋಳಿ ಸಾರು ಕಡ್ಡಾಯ ..
ಜೊತೆಗೆ ಎಣ್ಣೆ ಖಾದ್ಯಗಳು ..
ಸ್ನಾನ ಮಾಡಿ, ಹೊಸ ಬಟ್ಟೆಯುಟ್ಟು ಗಾಂಭೀರ್ಯದಿಂದ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿ .. ತಮ್ಮ ಉಪವಾಸದ ಲೆಕ್ಕ ಗೆಳೆಯರಿಗೆ ಒಪ್ಪಿಸಿ, ಕಯ್ಯಲ್ಲಿ ಹಚ್ಚಿದ್ದ ಮದಿರಂಗಿಯ
ಬಣ್ಣಕ್ಕೆ ಮಾರ್ಕು ಪಡೆದು ಗೆಳೆಯರ ಮನೆಗೆ ಹೋಗಿ .. ಜೊತೆಗೆ ಅವರನ್ನು ತಮ್ಮ ಮನೆಗೂ ಕರೆದು ತಂದು ಸಂಭ್ರಮಿಸುತ್ತಿದ್ದ ಕಾಲವೊಂದಿತ್ತು .. !!
ಯುಗಾದಿ ಬಗ್ಗೆ ಹಾಡು ಇದೆಯಲ್ಲಾ …
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ … ಅಂತೆಯೇ ಪ್ರತಿ ವರುಷವೂ ಪೆರ್ನಾಲ್ ಬರುತಿದೆ …
ಇಂದಿಗೂ ಹಬ್ಬಗಳೆಂದರೆ ಮನಸ್ಸಿಗೆ ಖುಷಿ .
ಆದರೂ ಬಾಲ್ಯದ ದಿನಗಳೊಂದಿಗೆ ತುಲನೆ ಮಾಡುವಾಗ ನೀರಸವಾಗಿ ಕಾಣುತ್ತದೆ . ಬಹುಶಃ ಆ ಮುಗ್ದ ಮನಸಿನ ಭಾವನೆಗಳು ಮನದಲ್ಲಿ ಮನೆಮಾಡಿಕೊಂಡ ಕಾರಣವಿರಬಹುದು.
ಕೆಲವೊಮ್ಮೆ ಮನಬಿಚ್ಚಿ ನಗುವಾಗಲೂ ಕೃತಕದಂತೆ ಕಾಣುತ್ತದೆ .
ಆದರೂ ಹಬ್ಬವನ್ನು ಸಂಭ್ರಮದಲ್ಲಿ ಆಚರಿಸುತ್ತೇವೆ .. ನಮ್ಮ ಮುಂದೆ ನಿಂತಿರುವ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಇದೊಂದು ಅವಿಸ್ಮರಣೀಯ ಸಂಭ್ರಮವಾಗಲಿ ಎಂಬ ಆಶಯ ಮನದಲ್ಲಿ.
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ