ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬನ್ನಿ,ಮತ್ತೆ ಬನ್ನಿ-ರೂಮಿ ಕವಿತೆಗಳು

ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಅವರಿಂದ ಒಂದು ಹೆಜ್ಜೆ ದೂರ
ಇಡುವುದು
ನಿನ್ನ ಸನಿಹಕ್ಕೆ ಒಂದು ಹೆಜ್ಜೆ
ಎಂದಾದರೆ ನಡೆಯುತ್ತಲೇ ಇರುವೆ


ಇತರರು ಹೇಳಿದಂತೆ ಮಾಡುತ್ತಿದ್ದೆ
ಕುರುಡನಾಗಿದ್ದೆ
ಇತರರು ಕರೆದಾಗ ಬರುತ್ತಿದ್ದೆ
ಕಳೆದುಹೋಗಿದ್ದೆ
ಆಮೇಲೆ ನಾನು ಎಲ್ಲರನ್ನೂ ತೊರೆದೆ
ನನ್ನನ್ನು ಕೂಡ…
ಆಗ ಎಲ್ಲರೂ ಸಿಕ್ಕರು ನನಗೆ
ನಾನು ಕೂಡ


ಬನ್ನಿ, ಬನ್ನಿ,
ನೀವು ಯಾರೇ ಆಗಿದ್ದರೂ!

ಭರವಸೆಯನ್ನು ಬಿಡಬೇಡಿ,
ನೀವು ನಿಮ್ಮ ಶಪಥಗಳನ್ನು
ನೂರಾರು ಸಲ ಮುರಿದಿದ್ದರೂ ಕೂಡ.

ಬನ್ನಿ, ಮತ್ತೆ ಬನ್ನಿ!


ನಾನು ಯಾವ ಮತಕ್ಕೂ
ಸೇರಿದವನಲ್ಲ. ನನ್ನ ಮತ
ಪ್ರೇಮ. ಪ್ರತಿಯೊಂದು
ಹೃದಯವೂ ನನ್ನ ಮಂದಿರ



ನಾನು ಸತ್ತಿದ್ದೆ, ಆಮೇಲೆ ಸಜೀವ.
ಅಳುತ್ತ ಆಮೇಲೆ ನಗುತ್ತ.
ಪ್ರೇಮದ ಶಕ್ತಿ ನನ್ನೊಳಗೆ ಬಂದಿತು
ನಾನಾದೆ ಸಿಂಹದಂತೆ ಭೀಷಣ
ಸಂಜೆಯ ತಾರೆಯಂತೆ ಮೃದು


ಮೌನವಾಗಿರಿ,
ಏಕೆಂದರೆ
ಮೌನದ ಲೋಕ
ವಿಶಾಲ, ಸಮೃದ್ಧ


ನಾವು ಪ್ರೀತಿಸುವ ಚೆಲುವು
ನಮ್ಮ ಗೈಮೆಯೇ ಆಗಿರಲಿ
ಮೊಳಕಾಲೂರಿ ನೆಲವನ್ನು ಚುಂಬಿಸಲು
ಇವೆ ನೂರಾರು ದಾರಿ


ಕಲ್ಪಿಸಿಕೊಳ್ಳಿ, ಆದರೆ ಎಚ್ಚರವಿರಲಿ
ನಿಮ್ಮ ಎಲ್ಲ ನೋಟಗಳು
ಪ್ರಾರ್ಥನೆಯ ಒಂದು ರೂಪ.


ನಿನ್ನ ಬೆಳಕಿನಲ್ಲಿ ನಾನು ಪ್ರೇಮಿಸುವುದ ಕಲಿಯುವೆ
ನಿನ್ನ ಚೆಲುವಿನಲ್ಲಿ ಕವಿತೆ ಬರೆಯುವುದನ್ನು
ನೀನು ನನ್ನೆದೆಯೊಳಗೆ ನರ್ತಿಸುವೆ
ಯಾರೂ ನೋಡುವುದಿಲ್ಲ ಅಲ್ಲಿ ನಿನ್ನ
ನಾನು ಕೆಲವೊಮ್ಮೆ ನೋಡುವೆ ಮತ್ತು
ಆ ದೃಶ್ಯವೇ ಹೀಗೆ ಕಲೆಯಾಗುತ್ತದೆ.


ಕನ್ನಡಕ್ಕೆ- ಡಾ. ಗೋವಿಂದ ಹೆಗಡೆ.