- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಸಾಧಾರಣ ಈ ಹತ್ತು ವರ್ಷಗಳಲ್ಲಿ ರೇಟಿಂಗ್ ಪದ ಗೊತ್ತಿರದವರು ಇಲ್ಲವೆನ್ನಬಹುದು. ಯಾವುದಕ್ಕೂ ನಿಮ್ಮನ್ನು ರೇಟಿಂಗ್ ಕೊಡಿ ಎನ್ನುವುದು ವಾಡಿಕೆಯಾಗಿ ಬಿಟ್ಟಿದೆ. ಊಬರ್ ಓಲಾಗಳ ಕ್ಯಾಬ್ ಬುಕ್ ಮಾಡುವುದು ನಮ್ಮ ಸಮಾಜದ ಅಂಗವಾಗಿ ಹೋಗಿದೆ. ನೀವು ನಿಮ್ಮ ಟ್ರಿಪ್ ಮುಗಿಸಿ, ಹಣಕೊಟ್ಟು ಇಳಿದ ತಕ್ಷಣ ನಿಮ್ಮ ಮೊಬೈಲ್ ತೆರೆಯ ಮೇಲೆ ನೀವು ಮುಗಿಸಿದ ಈ ಟ್ರಿಪ್ಪಿನ ಡ್ರೈವರ್ ಬಗ್ಗೆ ನಿಮ್ಮ ರೇಟಿಂಗ್ ಕೊಡಿ ಎನ್ನುವ ಒಕ್ಕಣೆ ಕಾಣುತ್ತದೆ. ಕೆಲ ವರ್ಷದ ಹಿಂದೆ ಡ್ರೈವರ್ ಗಳು ಇಳಿಯುವ ಮೊದಲು “ ಸರ್! ಫೈವ್ ಸ್ಟಾರ್ ಕೊಡಿ” ಅಂತ ಕೇಳುವುದಿತ್ತು. ಈಗ ಅವರೇನೂ ಕೇಳುವುದಿಲ್ಲ. ಪಂಚ ತಾರೆಗಳು ಬರದಿದ್ದರೂ ಅವರಿಗಾಗುವ ನಷ್ಟ ಏನೂ ಇಲ್ಲ ಅಂತ ಅವರಿಗೆ ತಿಳಿದುಬಂದಿದೆ. ಆದರೆ ಓಲಾ, ಊಬರ್ ಕಂಪೆನಿಗಳು ನಿಮ್ಮನ್ನು ಬಿಡುವುದಿಲ್ಲ.
ಈ ರೇಟಿಂಗಿನ ಧೋರಣೆ ವಿಚಿತ್ರ. ಈ ಓಲಾ, ಊಬರ್ ಗಳ ಡ್ರೈವರ್ ಗಳಿಗೆ ಐದು ನಕ್ಷತ್ರದ ರೇಟಿಂಗ್ ಕೊಟ್ಟರೆ ಅದು ಮತ್ತೇನೂ ಕೇಳುವುದಿಲ್ಲ. ಆದರೆ ನೀವು ಸ್ವಲ್ಪ ಚೌಕಾಶಿ ಮಾಡಿ ನಾಲ್ಕು ಕೊಟ್ಟರೆ ಅದು ಕಾರಣ ಕೇಳುತ್ತದೆ. ಯಾಕೆ ಏನು ಅಂತ. ಒಂದು ರೀತಿ ನಿಮ್ಮ ನಿರ್ಣಯವನ್ನು ಪ್ರಶ್ನಿಸಿದಂತೆ. ಅದಕ್ಕೆ ಕಾರಣಗಳನ್ನು ಹುಡುಕುವುದಕ್ಕಿಂತ ಎಲ್ಲಿ ಕಿರಿಕಿರಿ ಅಂತ ಅದನ್ನ ಬದಲಾಯಿಸಿ ಮತ್ತೊಂದು ತಾರೆಯನ್ನ ಹಾಕಿ ಮುಗಿಸುವವರೇ ಜಾಸ್ತಿ.
ಇದಷ್ಟೇ ಅಲ್ಲ. ಸಕ್ಕರೆ ಕಾಯಿಲೆ ಇರುವ ನಾನು ಪ್ರತಿ ಆರು ತಿಂಗಳಿಗೊಮ್ಮೆ ಎಲ್ಲ ಚೆಕಪ್ ಗಳನ್ನು ಮಾಡಿಸಿಕೊಳ್ಳುತ್ತೇನೆ. ಪ್ರತಿ ಸಲವೂ ಎಲ್ಲ ಟೆಸ್ಟ್ ಗಳು ಆಗಿ ರಿಪೋರ್ಟ್ ಕೊಡುವಾಗ ಅಲ್ಲಿಯ ಸಿಬ್ಬಂದಿಯವರು ತಮ್ಮ ಸೈಟ್ ಅಡ್ರೆಸ್ ಹೇಳಿ ರೇಟಿಂಗ್ ಕೊಡಲು ಕೇಳಿಕೊಳ್ಳುತ್ತಾರೆ. ಹೈದರಾಬಾದಿನ ಏಕಛತ್ರಾಧಿಪತ್ಯದಂತಿರುವ ವಿಜಯಾ ಡಯಾಗ್ನಸ್ಟಿಕ್ಸ್ ಅವರು ಸಹ ಆನ್ ಲೈನಿನಲ್ಲಿ ರಿಪೋರ್ಟ್ ಕಳಿಸಿದ ಮೇಲೆ “ನಮ್ಮನ್ನು ರೇಟ್ ಮಾಡಿ” ಅಂತ ಮತ್ತೊಂದು ಮೆಸೇಜ್ ಮಾಡುತ್ತಾರೆ. ಹೀಗೆ ಸೇವೆ ಸಲ್ಲಿಸುವ ಪ್ರತಿ ಏಜನ್ಸಿಯೂ ತಮ್ಮ ರೇಟಿಂಗ್ ಗಳ ಬಗ್ಗೆ ತುಂಬಾ ಎಚ್ಚರವಾಗಿರುತ್ತದೆ. ಅಪರೂಪಕ್ಕೊಮ್ಮೆ ನಾವು ಕೊಡುವ ಸಲಹೆಗಳಿಗೆ ಅವರ ಧನ್ಯವಾದ ಬರುತ್ತದೆ..
ನಾವಿರುವ ಅಲ್ಟ್ರಾ ಮೋಡರ್ನ್ ಫ್ಲಾಟು ಇರುವುದು ಒಂದು ದೊಡ್ಡ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ ನಲ್ಲಿ. ಇಲ್ಲಿಯ ಮನೆ ಒಡತಿಯರೆಲ್ಲರೂ ಸೇರಿ ಒಂದು ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದಾರೆ. ಅದರಲ್ಲಿ ಹೆಚ್ಚು ಭಾಗ ಮೆಸೇಜ್ ಬರೋದು ಕೆಲಸದವರ ಬಗ್ಗೆಯೇ. ಇವರೆಲ್ಲ ಸೇರಿ ಒಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಕೆಲಸದವರಲ್ಲಿ ಯಾರಾದರೂ ಕೆಲಸ ಕಳ್ಳರು, ಸಿಡುಕಿನವರು, ಕೈ ಭದ್ರ ಇಲ್ಲದವರು ಆದ ಕೆಲಸದವರ ಬಗ್ಗೆ ಆ ಪರಿಸ್ಥಿತಿ ಎದುರಿಸಿದವರು ಒಂದು ಮೆಸೇಜ್ ಹಾಕಿ, ಇಂಥವರ ಬಗ್ಗೆ ಜಾಗ್ರತೆಯಿಂದ ಇರಿ ಎಂದು ಎಚ್ಚರಿಸುತ್ತಾರೆ. ಇದು ಒಂದು ಥರಾ ಕೆಲಸದವರನ್ನು ಹೆದರಿಸುವ ಆಯುಧವೂ ಆಗಿದೆ ಎನ್ನಿ. ಈಗ ಚಾಲ್ತಿಯಲ್ಲಿರುವ ರೇಟಿಂಗ್ ವಿಧಾನವನ್ನನುಸರಿಸುತ್ತ “ ನಿನ್ನ ರೇಟಿಂಗ್ ಕಮ್ಮಿ ಕೊಡ್ತೀನಿ ನೋಡು” ಎಂದು ಹೆದರಿಸುತ್ತಾರೆ ಮನೆಯೊಡತಿಯರು.
ಇದಕ್ಕೆ ತಮ್ಮ ಬಂಡಾಯ ತೋರಿದ ಕೆಲಸದವರು ಸಹ ಒಂದು ಇಂಥ ಗ್ರೂಪ್ ಮಾಡಿಕೊಂಡಿದ್ದಾರಂತೆ. ತಂತ್ರಜ್ಞಾನ ಬಳಸುವುದರಲ್ಲಿ ತಾವೇನೂ ಕಮ್ಮಿ ಇಲ್ಲ ಎನ್ನುತ್ತ ಅವರುಗಳು ಯಾವ ಮನೆಯಲ್ಲಿ ಜಾಸ್ತಿ ಕಿರುಕುಳ ಕೊಡುತ್ತಾರೆ, ಯಾವ ಮನೆಯಲ್ಲಿ ಸಂಬಳ ಮೊದಲನೆಯ ತಾರೀಕಿಗೆ ಕೊಡದೆ ತಡ ಮಾಡುತ್ತಾರೆ, ಯಾರ ಮನೆಯಲ್ಲಿ ಜನ ಜಾಸ್ತಿ, ಕೆಲಸ ಜಾಸ್ತಿ, ಯಾರ ಮನೆಗ ನೆಂಟರ ಉಪಟಳ ಜಾಸ್ತಿ, ಯಾರ ಮನೆಗಳಲ್ಲಿ ಶಿಸ್ತಿನ ಬಗ್ಗೆ ಭಾಷಣ ಕೊಡುತ್ತಾರೆ ಮುಂತಾದವುಗಳ ಬಗ್ಗೆ ಆ ಗ್ರೂಪಲ್ಲಿ ಮಾಹಿತು ಕೊಡುತ್ತ, ತಮ್ಮ ಭಗಿನಿಯರನ್ನು ಎಚ್ಚರಿಸುತ್ತಾರಂತೆ. ಇವುಗಳ ಮೇಲೆ ಅವರು ಮನೆಗಳಿಗೆ ರೇಟಿಂಗ್ ಕೊಡುತ್ತಾರಂತೆ. ಈ ರೇಟಿಂಗ್ ಏನಾದರೂ ಕಳಪೆಯಾದಲ್ಲಿ ಕೆಲಸದವರು ಸಿಗುವುದೇ ಕಷ್ಟ. “ವಾಟರ್ ವಾಟರ್ ಎವೆರಿ ವೇರ್, ನಾಟ್ ಅ ಡ್ರಾಪ್ ಟು ಡ್ರಿಂಕ್” ಎಂದ ಹಾಗೆ ಕಾಂಪ್ಲೆಕ್ಸಿನಲ್ಲಿ ಹಲವಾರು ಕೆಲಸದವರು ಕಂಡರೂ ನಿಮ್ಮ ಮನೆಗೆ ಅವರು ಬರುವುದಿಲ್ಲ. ಇದು ಅಪಾರ್ಟ್ ಮೆಂಟಿನಲ್ಲಿಯ ರೇಟಿಂಗ್ ಪ್ರಭಾವ.
ಈ ರೇಟಿಂಗಿನ ಭೂತ ಹೊಟೆಲ್ ಗಳು, ರಿಸಾರ್ಟ್ ಗಳು, ರೆಸ್ಟಾರೆಂಟ್ ಗಳು, ಡಾಕ್ಟರ್ ಗಳು ಆಸ್ಪತ್ರೆಗಳು, ಡಯಾಗ್ನಸ್ಟಿಕ್ ಸೆಂಟರ್ ಗಳು, ಕಾರ್ಪೊರೇಟ್ ಆಶ್ರಯದಲ್ಲಿ ಸೇವೆಗಳು ಸಲ್ಲಿಸುವ ಪ್ಲಂಬಿಂಗ್, ಎಲೆಕ್ಟ್ರಿಕಲ್, ಎಲೆಕ್ಡ್ತ್ರಾನಿಕ್ಸ್, ಕಾರ್ಪೆಂಟರ್ ಇವುಗಳು ಇವೆಲ್ಲವೂ ತಮ್ಮ ಸೈಟಿನಲ್ಲೋ ಅಥವಾ ಲಿಂಕುಗಳಲ್ಲೋ ತಮ್ಮ ಸೇವೆಗಳನ್ನು ಒಂದರಿಂದ ಐದು ಅಥವಾ ಹತ್ತರ ಸ್ಕೇಲಿನಲ್ಲಿ ನಿಮ್ಮ ರೇಟಿಂಗ್ ಕೊಡಿ ಎಂದು ಒತ್ತಾಯಿಸುತ್ತಾರೆ. ಇನ್ನೂ ಕೆಲವರು ಒಂದ ರಿಂದ ಹತ್ತರ ವರೆಗೆ ಶ್ರೇಣೀಕರಣ ಮಾಡಿ ನಮ್ಮ ತಲೆ ಕೆಡಿಸುತ್ತಾರೆ. ಕನ್ನಡ ಪ್ರೇಮಿಗಳು ರೇಟಿಂಗ್ ಗಳ ಈ ಶ್ರೇಣೀಕರಣಳನ್ನು ಈ ರೀತಿ ಹೆಸರಿಸಿದ್ದಾರೆ. ಪಂಚತಾರಾ- ಅತ್ಯುತ್ತಮ, ಚತುಷ್ತಾರಾ- ಉತ್ತಮ, ತ್ರಿತಾರಾ- ಸಾಧಾರಣ, ದ್ವಿತಾರಾ- ಅಡ್ಡಿ ಇಲ್ಲ, ಏಕತಾರಾ- ಕಳಪೆ. ಕನ್ನಡ ಬಾರದ ಹಲವಾರು ಇತರೆ ಭಾಷಿಗರು ತಾರೆಗಳ ಆಧಾರದ ಮೇಲೆ ರೇಟಿಂಗ್ ಕೊಟ್ಟು ನಡೆ ಎನ್ನುತ್ತಾರೆ ಅಂದುಕೊಳ್ಳಿ.
ಶಾಲಾ ಮಕ್ಕಳಿಗೂ ರೇಟಿಂಗ್ ಬೇರೇ ತರಾ ಇರತ್ತೆ. ಇವರಿಗೆ ಎ+, ಎ, ಬಿ+ ಹೀಗೆ ಗ್ರೇಡುಗಳು. ಅಪ್ಪ ಅಮ್ಮನ ಮುಂದೆ ನಿಂತು ಸಿ ಗ್ರೇಡ್ ತಂದುಕೊಂಡ ಮಗುವಿನ ಪಾಡು ಹೇಳಲು ಸಾಧ್ಯವಿಲ್ಲ. ಅಂಥ ಮಕ್ಕಳ ತಂದೆತಾಯಿಗಳನ್ನ ಪಿಟಿಎಮ್ (ಪೇರೆಂಟ್ಸ್ ಟೀಚರ್ ಮೀಟಿಂಗ್) ನಲ್ಲಿ ಕರೆದು ಸಖತ್ತಾಗಿ ಕ್ಲಾಸು ತೊಗೊಳ್ತಾರೆ ಶಾಲಾ ಮುಖ್ಯೋಪಾಧ್ಯಾಯರು. ಇನ್ನೂ ಪೇರೆಂಟ್ಸಿಗೆ ರೇಟಿಂಗ್ ಅಥವಾ ಗ್ರೇಡ್ ಕೊಡುವುದರ ಬಗ್ಗೆ ಏನೂ ಮಾಹಿತಿ ಹೊರಬಂದಿಲ್ಲ. ಇಲ್ಲಾಂದ್ರೆ ಅದಕ್ಕೂ ಪರದಾಡಬೇಕಾಗುತ್ತದೆ.
ಈ ರೇಟಿಂಗ್ ಗಳು ನಾವು ಅವರ ಸೇವೆಗಳನ್ನು ಉಪಯೋಗಿಸಿಕೊಳ್ಳಲು ಮಾನ ದಂಡಗಳಾಗಿ ಕೆಲಸ ಮಾಡುತ್ತವೆ. ಯಾವುದಕ್ಕೂ ನೆಟ್ ನಲ್ಲಿ ಸಿಗುವ ಮಾಹಿತಿಯ ಮೇಲೆ ತಮ್ಮ ನಿರ್ಣಯಗಳನ್ನು ತೆಗೆದುಕೊಳ್ಳುವ ಇಂದಿನ ತಲೆಮಾರಿನ ಯುವ ಪೀಳಿಗೆ ಈ ರೇಟಿಂಗ್ ಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಕೊಡುವ ಹೇಳಿಕೆಗಳಂತೆಯೇ ನಂಬುತ್ತಾರೆ. ಹಿರಿಯರು ಅವರ ನಿರ್ಣಯಗಳ ಪೂರ್ವಾ ಪರಗಳನ್ನು ಪ್ರಶ್ನಿಸಿದಾಗ ಅವರ ಉತ್ತರ ಒಂದೇ “ನೆಟ್ ನಲ್ಲಿ ಒಳ್ಳೆ ರೇಟಿಂಗ್ ಇದೆ.” ಮನೆಯಲ್ಲಿ ಹಿರಿಯರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲು, ತಪಾಸಣೆ ಮಾಡಿಸಲು, ಪ್ರವಾಸಕ್ಕೆ ಹೋದಾಗ ತಂಗಲು, ಯಾವುದಾದರೂ ಹೊಸ ವಸ್ತುವನ್ನು ಕೊಳ್ಳಲು ಹೀಗೆ ಯಾವುದಕ್ಕೂ ರೇಟಿಂಗ್ ಅವರಿಗೆ ಆಲಂಬನವಾಗುತ್ತದೆ. ನಾವು ಅಮೆಝೋನ್ , ಫ್ಲಿಪ್ಕಾರ್ಟ್ ಗಳಲ್ಲಿ ಕೂಡ ರೇಟಿಂಗ್ ಆಧಾರದ ಮೇಲೆ ವಸ್ತುಗಳನ್ನು ಆರ್ಡರ್ ಮಾಡುವ ಪರಿಪಾಠ ಇದೆ.
ಆದರೆ ರಿಯಾಲಿಟಿ ಶೋಗಳಲ್ಲಿಯ ಮೆಸೇಜುಗಳ ಮೇಲೆ ವಿಜೇತರನ್ನು ನಿರ್ಣಯಿಸುವ ಹಾಗೆ ಇವುಗಳಲ್ಲೂ ಆಯಾ ಸಂಸ್ಥೆಗಳು ಪುಸಲಾಯಿಸಿ ರೇಟಿಂಗ್ ಗಳನ್ನು ಕೊಡಿಸಿ ತಮ್ಮ ಸ್ಥಾನವನ್ನು ಭದ್ರಮಾಡಿಕೊಳ್ಳುವುದಕ್ಕೆ ಕಮ್ಮಿ ಏನಿಲ್ಲ. ಎಲ್ಲ ರೇಟಿಂಗ್ ಗಳು ಗ್ರಾಹಕರು ಅಥವಾ ಸೇವೆಗಳನ್ನು ಪಡೆದವರು ಮನಸಾರೆ ಅಥವಾ ಅವುಗಳ ಯೋಗ್ಯತೆಗನುಸಾರ ಕೊಟ್ಟಿರಬಹುದು ಎಂದು ಎಣಿಸುವುದು ಭ್ರಮೆ ಅಂತಲೇ ಹೇಳಬಹುದು. ಅಲ್ಲಿ ಕಾಣುವ ನಕ್ಷತ್ರಗಳಿಗೆ ಎಷ್ಟರ ಮಟ್ಟಿಗೆ ಮಾನ್ಯತೆ ಕೊಡಬೇಕು ಎನ್ನುವುದು ಅವರವರಿಗೆ ಬಿಟ್ಟಿದ್ದಾಗಿದೆ. ಅನೇಕ ಬಾರಿ ರೇಟಿಂಗ್ ಅನ್ನು ಕೂಡ ಖರೀದಿಸಲಾಗುತ್ತದೆ. ಕೃತ್ರಿಮವಾಗಿ ಸೃಷ್ಟಿಸಲಾಗುತ್ತದೆ. ಇದು ಅಂತರ್ಜಾಲದಲ್ಲಿ ಸಿಗುವ ಮಾಹಿತಿಯಷ್ಟೇ ಚರ್ಚೆಗೊಳಗಾಗ ಬಹುದಾದ ಅಂಶ ಎನ್ನಬಹುದು.
ರೇಟಿಂಗ್ ಗಳು ವಿಶ್ವವ್ಯಾಪಿ. ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ಒರೆಗೆ ಹಚ್ಚಲು ಅಮೆರಿಕ ದೇಶ ಒಪ್ಪಿಗೆ ಕೊಟ್ಟ ಮೂರು ರೇಟಿಂಗ್ ಸಂಸ್ಥೆಗಳಿವೆ. ಮೂಡೀಸ್, ಫಿಚ್, ಸ್ಟಾಂಡರ್ಡ್ ಪೂರ್. ಇವುಗಳ ಕೆಲಸ ವಿಶ್ವದ ದೇಶಗಳ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸುತ್ತಿರುವುದು. ಯಾವುದಾದರೂ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಶುರುವಾದರೆ ಅದರ ರೇಟಿಂಗನ್ನು ಕಮ್ಮಿ ಮಾಡುತ್ತ ಅದರ ಜೊತೆಗೆ ಆರ್ಥಿಕ ವ್ಯವಹಾರಗಳನ್ನು ಇಟ್ಟುಕೊಂಡ ಇತರೆ ದೇಶಗಳಿಗೆ ಎಚ್ಚರಿಕೆ ಕೊಡುತ್ತವೆ. ಫ್ಯಾಕ್ಟರಿಗಳಲ್ಲಿರುವ ಕ್ವಾಲಿಟಿ ಕಂಟೋಲ್ ಗಳು ಇದ್ದ ಹಾಗೆ ಇವು. ಪ್ರಗತಿಶೀಲ ದೇಶಗಳೆಲ್ಲವೂ ಇವುಗಳ ರೇಟಿಂಗ್ ಕುಂದಬಾರದೆಂದು ಹೆಣಗಾಡುತ್ತವೆ. ಇವುಗಳ ರೇಟಿಂಗ್ ಗಳ ಪ್ರಭಾವ ದೇಶದ ಸ್ಟಾಕ್ ಮಾರ್ಕೆಟ್ ಸಹ ಬೀಳುತ್ತದೆ.
ಇದೇ ರೀತಿ ದೇಶದಲ್ಲಿಯ ಆರ್ಥಿಕ ಸಂಸ್ಥೆಗಳ ಆರೋಗ್ಯದ ಬಗ್ಗೆ ಮಾಹಿತಿ ಒದಗಿಸಿ ರೇಟಿಂಗ ಕೊಡಲು ಕ್ರಿಸಿಲ್, ಇಕ್ರಾ ಮೊದಲಾದ ಸಂಸ್ಥೆಗಳಿವೆ. ಇವುಗಳು ಸಣ್ಣ ಮತ್ತು ದೊಡ್ದ, ಕಂಪೆನಿಗಳಿಗೆ, ಸರಕಾರಕ್ಕೆ, ಹೂಡಿಕೆದಾರರಿಗೆ ಕಂಪೆನಿಗಳ ಬಗ್ಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತ ಅಪಾಯದ ಬಗ್ಗೆ ರೇಟಿಂಗ್ ಕೊಡುತ್ತವೆ. ಆ ಕಂಪೆನಿಗಳ ಜೊತೆ ವ್ಯವಹಾರ ಮಾಡಲು ಇವುಗಳ ರೇಟಿಂಗನ್ನು ಆಧಾರವಾಗಿರಿಸಿಕೊಳ್ಳಲಾಗುವುದು. ಬ್ಯಾಂಕುಗಳು ಈಗೀಗ ಸಾಲ ಕೊಡಲು ಸಿಬಿಲ್ ರೇಟಿಂಗನ್ನು ಆಧಾರವಾಗಿ ತೊಗೊಳ್ಳುತ್ತಾರೆ. ಸಿಬಿಲ್ ( ) ಸಂಸ್ಥೆ ಒಬ್ಬ ವ್ಯಕ್ತಿಯ ಆರ್ಥಿಕ ಚರಿತ್ರೆಯ ಆಧಾರದ ಮೇಲೆ ತಮ್ಮ ರೇಟಿಂಗ್ ಸ್ಕೋರ್ ಕೊಡುತ್ತದೆ. ಇದನ್ನು ಅವಲಂಬಿಸಿ ಬ್ಯಾಂಕುಗಳಾಗಲಿ, ಇತರೆ ಆರ್ಥಿಕ ಸಂಸ್ಥೆಗಳಾಗಲಿ ಸಾಲಗಳು ಕೊಡುತ್ತವೆ. ಆಗಾಗ ಸಾಲದ ಬಡ್ಡಿ ದರ ಸಹ ಈ ಸ್ಕೋರ್ ಮೇಲೆ ಆಧಾರ ಪಡುತ್ತದೆ. ಒಟ್ಟಾರೆ ನಾವು ಮಾಡುವ ಕೆಲಸದ ದಕ್ಷತೆ ಇತರರ ಅನಿಸಿಕೆಯ ಮತ್ತು ಅವರು ಅದಕ್ಕೆ ಕೊಡುವ ಮೌಲ್ಯದ ಮೇಲೆ ಅವಲಂಬಿಸಿರುತ್ತೆ. ಅದನ್ನ ಇತರರಿಗೆ ತಿಳಿಸುವ ಒಂದು ಸೂಚಿ ರೇಟಿಂಗ್. ಇದು ನಕ್ಷತ್ರಗಳಾಗಿರಬಹುದು ಅಥವಾ ಸ್ಕೋರ್ ಆಗಿರಬಹುದು.
ಮತ್ತೆ ಹಿಂದಿನ ತಲೆಮಾರಿನವರು ಈ ತರದ ರೇಟಿಂಗ್ ಗಳಿಲ್ಲದೇ ಕೆಲಸ ಮಾಡಿದ್ದಾರಾ?ಖಂಡಿತಾ ಇಲ್ಲ. ಅವರ ಕಾಲದ ರೇಟಿಂಗ್ ಗಳೆಂದರೆ ಸ್ನೇಹಿತರ, ಬಂಧುಗಳ, ಆತ್ಮೀಯರ ಬಾಯಿ ಮಾತು. ಅಥವಾ ಆ ಬೀದಿಯಲ್ಲಿಯ ಅಥವಾ ಚಿಕ್ಕದಾದರೆ ಊರಿನಲ್ಲಿಯ ಜನರ ಮಾತು. ಈ ಡಾಕ್ಟರ್ ತಮಗೆ ಒಳ್ಳೆ ಟ್ರೀಟ್ಮೆಂಟ್ ಕೊಟ್ಟಿದ್ದಾರೆ ಅಂತ ಗೊತ್ತಿದ್ದವರು ಹೇಳಿದರೆ ಅದೇ ರೇಟಿಂಗ್. ಗಾಂಧಿ ಬಜಾರದ ವಿದ್ಯಾರ್ಥಿ ಭವನದ ದೋಸೆಗೆ ಹಿಂದೆಲ್ಲ ಯಾರು ರೇಟಿಂಗ್ ಕೊಡುತ್ತಿದ್ದರು ಹೇಳಿ ? ಬೆಟ್ಟು ನೆಕ್ಕುತ್ತ ಹೊರಗಡೆಗೆ ಬಂದ ಗಿರಾಕಿಗಳ ಬಾಯಿಂದ ಬಾಯಿಗೆ ಹರಡಿದ್ದು ತಾನೇ! ಅಕ್ಕಸಾಲಿಗ, ದರ್ಜಿಗಳ ಹತ್ತಿರ ಹೋಗುವಾಗಲಂತೂ ಯಾರೋ ಒಬ್ಬರು ಶಿಪಾರಸು, ಅದೇ ಅವರ ರೇಟಿಂಗ್, ಇಲ್ಲದೇ ಹೋಗುವುದು ಇಲ್ಲವಾಗಿತ್ತು.
ಹಾಗಂತ ಈ ರೇಟಿಂಗ್ ಗಳು ಉಪಯುಕ್ತ ಮಾಹಿತಿ ಕೊಡುವುದಿಲ್ಲ ಅಂತ ಅಲ್ಲ. ಆದರೆ ಅವುಗಳ ಮೇಲೆಯೇ ಆಧಾರ ಪಡುವುದು ಅಷ್ಟು ಒಳಿತಲ್ಲ ಅಂತ ನಾನು ಹೇಳುವುದು. ಸೇವೆಗಳನ್ನು ಬಳಸಿಕೊಳ್ಳಲು ಅಥವಾ ವಸ್ತುಗಳನ್ನು ಕೊಂಡುಕೊಳ್ಳಲು ಅವುಗಳೂ ಒಂದು ಉಪಕರಣ ಅಂತ ಎಣಿಸಿ ಅವುಗಳು ಕೊಡುವ ಮಾಹಿತಿಯನ್ನು ಸ್ವೀಕರಿಸಬೇಕೇ ವಿನಃ ಇಡೀ ಅವುಗಳನ್ನೇ ಆಧಾರವಾಗಿರಿಸಿಕೊಳ್ಳುವುದು ಸರಿಯಲ್ಲ. ಎಲ್ಲ ವಿಷಯಗಳಿಗೂ ಅದರದ್ದೇ ಆದ ಮಿತಿಗಳಿರುತ್ತವೆಂದು ತಿಳಿದುಕೊಂಡು ನಿರ್ಣಯಗಳು ತೆಗೆದುಕೊಳ್ಳ ಬೇಕು.
ಇಷ್ಟೆಲ್ಲ ರೇಟಿಂಗ್ ಗಳ ಬಗ್ಗೆ ಓದಿದ ಮೇಲೆ ನೀವು ನನ್ನ ಈ ಲೇಖನಕ್ಕೆ ಯಾವ ರೇಟಿಂಗ್ ಕೊಡುತ್ತೀರಿ? ಅತ್ಯತ್ತಮ ಎನ್ನುವ ಪಂಚತಾರಾ ರೇಟಿಂಗಂತೂ ಕೊಡುವುದಿಲ್ಲ. ಆದರೆ ಕಳಪೆ ಅಂತ ಕೊಡುವ ಮೊದಲು ಆಲೋಚಿಸಿ. ಒಬ್ಬ ಹುಮ್ಮಸ್ಸಿನಿಂದ ಬರೆಯುವ ಬರಹಗಾರನ ಹುರುಪನ್ನು ನೀವು ಮೊಟುಕುಗೊಳಿಸುತ್ತಿದ್ದೇರೇನೋ ಅಂತ!!
Excellent Sir!!! You have brought every nuance of *Rating* in the article. Should we say then – that this Article deserves FIVE star rating? And that our dearmost erudite scholar JSS Alumni is a versatle author?
🙏🙏🙏
Nice reading ….
ಲೇಖನದ ಕೆಲವು ಸಂಗತಿಗಳು ಚಿಂತನೆಗೆ ಒಡ್ಡುತ್ತವೆ. ಬಹಳ ಚೆನ್ನಾಗಿದೆ. ಅಭಿನಂದನೆಗಳು
ಕೆ.ವಿ.ರಾಜಲಕ್ಷ್ಮಿ
ಬೆಂಗಳೂರು.
ಈಗಿನ ಸರ್ವ ವ್ಯಾಪೀ ರೇಟಿಂಗ್ ನ ಬಗ್ಗೆ ಅದ್ಭುತವಾದ ಲೇಖನ/ satire. Satire ನ sanction ನ್ನು ಎಲ್ಲಿಯೂ ವಾಸ್ತವತೆಯ ಮತ್ತು ಸಮತೋಲನದ ಎಲ್ಲೆ ಮೀರಿಸಿಲ್ಲ. ಈ ಲೇಖನಕ್ಕೆ ನನ್ನ Five star ರೇಟಿಂಗ್.
ಅಭಿನಂದನೆಗಳು.