- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಸಮಾಜ ಪದವು ‘ಸಂ’, ಮತ್ತು ‘ಅಜತಿ’ ಎಂಬ ಎರಡು ಪದಗಳ ಸಂಯೋಜನೆಯಿಂದ ಬಂದಿದೆ. ‘ಸಂ’ ಎಂದರೆ ಒಟ್ಟುಗೂಡಿ ಎಂದೂ, ‘ಅಜತಿ’ ಎಂದರ ‘ಉತ್ಕೃಷ್ಟ’ವೆಂತಲೂ ಅರ್ಥ. ಅಂದರೆ ಒಟ್ಟುಗೂಡಿ ಉತ್ಕೃಷ್ಟವಾಗಿ ಮುಂದುವರೆಯುವ ಜನಸಮೂಹವೇ ‘ಸಮಾಜ’ ಎಂದು ತಿಳಿಯಬಹುದು. ಸಮಾಜವೆಂದರೆ ಸ್ಥೂಲ ಅರ್ಥದಲ್ಲಿ “ಹಲವು ಸಂಸ್ಥೆಗಳ ಒಕ್ಕೂಟ. ಜೊತೆಗೂಡಿ ಇರಬಹುದಾದ ವ್ಯಕ್ತಿಗಳನ್ನು ಒಟ್ಟುಗೂಡಿಸಿ, ಮಾನವರ ಭೌತಿಕ ಮತ್ತು ಭಾವನಾತ್ಮಕ ಜೀವನದ ಬೆಸುಗೆ ಬೆಸೆಯುವುದೇ ‘ಸಮಾಜ’. ಸಮಾಜದ ಚೌಕಟ್ಟಿನಲ್ಲಿ ಮಾತ್ರ ಮಾನವ ತನ್ನ ಬದುಕನ್ನು ವ್ಯವಸ್ಥಿತವಾಗಿ ರೂಪಿಸಿಕೊಳ್ಳಬಲ್ಲ. ಸಮಾಜದ ಹೊರತಾಗಿ ಮನುಷ್ಯನ ಜೀವನವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಆದ್ದರಿಂದ ಮನುಷ್ಯನ ವ್ಯಕ್ತಿತ್ವ ನಿರ್ಮಾಣದಲ್ಲಿ ಸಮಾಜದ ಪಾತ್ರ ಅತ್ಯಂತ ಮಹತ್ವವಾದುದು.
ಆದರೆ ಆಧುನಿಕತೆಯ ಆಡಂಬರದಲ್ಲಿ ಸವಿಸಮಾಜದ ರುಚಿಯನ್ನು ಮನುಷ್ಯ ಕಾಣದಾಗಿರುವುದು ವಿಷಾದನೀಯ. ಎಲ್ಲೆಡೆ ಕ್ರೌರ್ಯ, ದ್ವೇಷ, ಅಸೂಯೆಗಳು ಮನೆಮಾಡಿ ಮಾನವ-ಸಮಾಜದ ಅಳಿವಿಗೆ ಕಾರಣವಾಗಿತ್ತಿವೆ. ಅಂಥ ಸಮಾಜವನ್ನು ಪುನರುಜ್ಜೀವನ ಗೊಳಿಸಲು ಸಾಂಸ್ಕೃತಿಕ ಘಟಕದ ಅಂಗವೇ ಆಗಿರುವ ಸಾಹಿತಿಯು ಪ್ರಯತ್ನ ಪಡಬಹುದು. ಆ ಕಾಲದ ವೈಚಾರಿಕ ಪ್ರಣಾಳಿಕೆಗಳ ಮೂಲಕ ಅವನು ಪ್ರಭಾವಿತನಾಗಿ ಸಮಕಾಲೀನ ವ್ಯವಸ್ಥೆಯನ್ನು ಹೊಗಳುವುದಲ್ಲದೇ, ತೆಗಳುವುದರ ಮೂಲಕವೂ ಸಮಾಜವನ್ನು, ಸಾಮಾಜಿಕರನ್ನು ಸರಿದಾರಿಗೆ ತರಲು ಪ್ರಯತ್ನ ಪಡಬಹುದು. ಇದನ್ನೇ ‘ಸಾಹಿತ್ಯ ಸಮಾಜದ ಗತಿಬಿಂಬ’ ಎನ್ನುವುದು. ‘ಸ’ಹಿತವನ್ನು ಒಳಗೊಂಡಿರುವುದು ಸಾಹಿತ್ಯ ಎಂಬ ಮಾತೂ ಇದೆ ಅಂದರೆ “ಸಾಹಿತ್ಯ ಸಮಾಜದ ಕನ್ನಡಿ” ಎನ್ನುವುದನ್ನು ಒಪ್ಪಲೇಬೇಕು. ಇದನ್ನೇ Poetry is social product ಎಂದು ಉಲ್ಲೇಖಿಸಿರುವುದು. ಈ ಎಲ್ಲಾ ಮಾತುಗಳು ಸಮಾಜವನ್ನು ಅಭಿವ್ಯಕ್ತಗೊಳಿಸಲು ಸಾಹಿತ್ಯ ಸರಿಯಾದ ಮಾರ್ಗ ಎಂಬುದನ್ನು ಸಾಬೀತು ಮಾಡುತ್ತವೆ.
ಜಗತ್ತಿನ ಯಾವ ಮೂಲೆಗೆ ಹೋದರೂ ಸಾಮಾಜಿಕ ಮೌಲ್ಯಗಳು ಒಂದೇ ಎಂಬುದನ್ನು ನಾವಿಲ್ಲಿ ಗಮನಿಸಬಹುದು. ನಿಯಮಗಳು ಇರುವುದೇ ಕೆಲವೊಮ್ಮೆ ಉಲ್ಲಂಘನೆಗಾಗಿ ಎಂಬ ಮಾತಿನಂತೆ ಕೆಲವೊಮ್ಮೆ ತಿಳಿದು ಕೆಲವೊಮ್ಮೆ ತಿಳಿಯದೆ ಆಗುವ ಪ್ರಮಾದಗಳು ಹೇಗೆ ಮೌಲ್ಯಗಳ ಜಿಜ್ಞಾಸೆಯಾಗಿಕಾಡುತ್ತವೆ ಎಂಬುದನ್ನು ಅನುಸಂಧಾನಿಸುವ ಕಿರುಪ್ರಯತ್ನಇಲ್ಲಿದೆ. ತಂದೆಯೇ ಮಗಳನ್ನು ಮದುವೆ ಆಗಿದ್ದಿರಬಹುದು, ಇಲ್ಲವೆ ಮಗನೇ ತಂದೆಯನ್ನು ಕೊಂದು ತಾಯಿಯನ್ನೇ ಮದುವೆಯಾದ ಎಂಬ ಅಪಸವ್ಯಗಳನ್ನು ಕಾಣಬಹುದು ಇಂಥವುಗಳನ್ನು ಖ್ಯಾತ ಮನೋವಿಜ್ಙಾನಿ ಸಿಗ್ಮಂಡ್ ಫ್ರಾಯ್ಡ್ ಈಡಿಪಸ್ ಕಾಂಪ್ಲೆಕ್ಸ್ ಎಂದು ಕರೆದಿದ್ದಾರೆ. ಹಾಗಿದ್ದರೆ ಈಡಿಪಸ್ನನ್ನು ಕುರಿತ ಪರಿಚಯ ಅಗತ್ಯ ಅಲ್ವೇ?
ಲಾಯಿಸ್ ಗ್ರೀಕ್ ನಗರದ ಥೀಬ್ಸ್ನ ರಾಜ . ತನಗೆ ಹುಟ್ಟಿದ ಮಗು ಸ್ವತಃ ತಂದೆಯನ್ನು ಕೊಂದು ತಾಯಿಯನ್ನೆ ಮದುವೆಯಾಗುತ್ತಾನೆ ಎಂಬ ಭವಿಷ್ಯ ವಾಣಿಯನ್ನು ಕೇಳಿದ ಬಳಿಕ ಹುಟ್ಟಿದ ಮಗುವಿನ ಕಾಲಿಗೆ ರಂಧ್ರ ಕೊರೆದು ಮಗುವನ್ನು ಪಕ್ಕದ ರಾಜ್ಯದಲ್ಲಿ ಬಿಟ್ಟುಬರುತ್ತಾನೆ. ಕಾಲಿಗೆ ರಂದ್ರ ಮಾಡಿದ ಕಾರಣದಿಂದ ಮಗುವಿ ಕಾಲು ಊದಿಕೊಂಡಿರುತ್ತದೆ. ಹಾಗಾಗಿ ಅದಕ್ಕೆ ‘ಈಡಿಪಸ್’ ಎಂಬ ಹೆಸರು ಬರುತ್ತದೆ. ಆತ ಬೆಳೆಯುತ್ತಾ ಬೆಳೆಯುತ್ತಾ ಇದು ನನ್ನ ಸ್ಥಳವಲ್ಲ ಎಂದು ತಿಳಿಯುತ್ತಲೆ ಅಲೆದಾಡುತ್ತಾ ತನ್ನದೇ ಊರು ಥೀಬ್ಸ್ ನಗರಕ್ಕೆ ಬರುತ್ತಾನೆ. ಅಲ್ಲಿ ಲಾಯಿಸ್ ರಥದಲ್ಲಿ ಬರುತ್ತಿರುತ್ತಾನೆ ಅಕಸ್ಮಾತ್ತಾಗಿ ರಥದ ಚಕ್ರ ಈಡಿಪಸ್ನ ಮೇಲೆ ಹರಿಯುತ್ತದೆ. ಸಹಿಸದ ಆತ ತಂದೆಯನ್ನು ಕೊಲ್ಲುತ್ತಾನೆ. ನಂತರ ರಾಜ್ಯದಲ್ಲಿ ಅರಾಜಕತೆ ಉಂಟಾಗುತ್ತದೆ, ಆ ಸಂದರ್ಭದಲ್ಲಿ ಸ್ಪಿಂಕ್ಸ್ ದೇವತೆಯ ಪ್ರಶ್ನೆಗಳಿಗೆ ಯಾರು ಉತ್ತರವನ್ನು ಕೊಡುತ್ತಾರೊ ಅವರು ರಾಣಿಯನ್ನು ಮದುವೆಯಾಗಬಹುದು ಎಂದಾಗುತ್ತದೆ. ಅದರಂತೆ ಸ್ಪಿಂಕ್ಸ್ ನ ಪ್ರಶ್ನೆಗಳಿಗೆ ಈಡಿಪಸ್ ಉತ್ತರ ಕೊಟ್ಟು ರಾಣಿಯನ್ನು ಮದುವೆಯಾಗುತ್ತಾನೆ ಆದರೆ ಆಕೆ ತಾಯಿಯೆಂದು ತಿಳಿದಿರುವುದಿಲ್ಲ . ಬಹಳ ವರ್ಷಗಳ ನಂತರ ಆ ಊರಿಗೆ ಪ್ಲೇಗ್ ಕಾಯಿಲೆ ಬಂದಾಗ ಅಲ್ಲಿದ್ದವರೆಲ್ಲಾ ಈ ಊರಿನ ರಾಜನನ್ನು ಯಾರು ಕೊಂದರೂ ಅವರನ್ನು ಹುಡುಕಿ ಎಂದಾಗ ರಾಜ ಈಡಿಪಸ್ ಹುಡುಕಿಸುತ್ತಾನೆ ಅಲ್ಲಿನ ಸೈನಿಕರು ಕಲೆ ಹಾಕಿದ ಸಾಕ್ಷಿಗಳೆಲ್ಲವೂ ತನ್ನನ್ನೇ ಬೆರಳು ಮಾಡುತ್ತಿವೆ ಎಂದಾಗ ಆತ ಮನೆ ಬಿಟ್ಟು ಹೋಗುತ್ತಾನೆ ಇನ್ನು ಕೆಲವು ಕಡೆ ವಿಷಯ ಗೊತ್ತಾದ ರಾಣಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಾಳೆ ರಾಜ ಸೂಜಿಯಿಂದ ತನ್ನ ಕಣ್ಣನ್ನು ಕಿತ್ತುಕೊಳ್ಳುತ್ತಾನೆ. ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ದುರಂತ ಅಂತ್ಯ ಕಾಣುತ್ತಾನೆ ಈಡಿಪಸ್.
ಕನ್ನಡದ ಮೊದಲ ಗದ್ಯ ಕೃತಿ ‘ವಡ್ಡಾರಾಧನೆ’ಯನ್ನು ತೆಗೆದುಕೊಂಡರೆ ಇಂಥ ಉದಾಹರಣೆ ಸಿಗುತ್ತದೆ. ಕಾರ್ತಿಕ ಋಷಿಯ ಕಥೆ ವಡ್ಡಾರಾಧನೆಯಲ್ಲಿ ಬರುವ ವಿಶಿಷ್ಟ ಕಥಾವಸ್ತುವನ್ನು ಉಳ್ಳದ್ದು. ಸಿಗ್ಮಂಢ್ ಫ್ರಾಯ್ಡ್ ಹೇಳಿದ ‘ಈಡಿಪಸ್ ಕಾಂಪ್ಲೆಕ್ಸ್ ಗಳನ್ನು ನೆನಪಿಸುತ್ತದೆ.
ರಾಜರು ಕೆಲವೊಮ್ಮೆ ಅಧಿಕಾರದ ಧರ್ಪದಿಂದ ಅಧರ್ಮವನ್ನು ಆಚರಣೆ ಮಾಡುತ್ತಾರೆ. ರಾಜಾಧಿಕಾರವನ್ನು ತಮಗೆ ಹೇಗೆ ಬೇಕೋ ಹಾಗೆ ಬಳಕೆ ಮಾಡಿಕೊಳ್ಳುತ್ತಾರೆ. ರಾಜ್ಯದ ಹಿರಿಯರು ಹೇಳಿದರೂ, ಎಚ್ಚರಿಸಿದರೂ ಏನು ಅನ್ನಿಸಲ್ಲ. ನಾಗಚಂದ್ರ ಕೃತಿಯ ರಾಮಚಂದ್ರಚರಿತಪುರಾಣದ ಹದಿನಾಲ್ಕನೆಯ ಆಶ್ವಾಸದ ಪದ್ಯವೊಂದು ಉಲ್ಲೇಖಾರ್ಹ.
ಜಸದಳಿವಂ ಪರಾಭವದ ಪತ್ತುಗೆಯಂ ದೊರೆವೆತ್ತ ತಮ್ಮ ಮಾ
ನಸಿಕೆಯ ಕೇಡುನ್ನತಿಯ ಬನ್ನಮನನ್ಯಭವಾನುಬದ್ಧಮ
ಪ್ಪ ಸುಗತಿಯಂ ಸುಹೃಜ್ಜನದ ಬೇವಸಮಂ ಜನತಾಪವಾದಮಂ
ಬೆಸನಿಗಳಾರುಮತ್ತಲಳಿವರ್ ವಿಷಯಾವಸಮತ್ತಚೇತಸರ್
ಕೀರ್ತಿನಾಶವನ್ನೂ, ಸೋಲಿನ ಸಂಪರ್ಕವನ್ನು , ಶ್ರೇಷ್ಟವಾದ ತಮ್ಮ ಮನುಷ್ಯತ್ವದ ನಾಶವನ್ನು , ಉನ್ನತಿಯ ಭಂಗವನ್ನು ಮುಂದಿನ ಜನ್ಮಕ್ಕೆ , ಸದ್ಗತಿಗೆ ಬದ್ಧವಾದ ನಡೆಯನ್ನು , ಸಹೃದಯಿ ಜನರ ಚಿಂತೆ, ವ್ಯಾಕುಲತೆಯನ್ನು ಜನತೆಯಿಂದ ಬರುವ ಅಪವಾದವನ್ನು, ಇಂದ್ರಿಯ ಮೋಹವೆಂಬ ಮದ್ಯದಿಂದ ಮತ್ತರಾಗಿರುವ ಮಸ್ಸಿನವರು ಹೇಗೆ ಅರಿಯಲು ಸಾಧ್ಯ? ಎಂಬುದನ್ನು ಮಾರ್ಮಿಕವಾಗಿ ಕವಿ ಹೇಳಿದ್ದಾನೆ.
ವಡ್ಡಾರಾಧನೆಯಲ್ಲಿ ಬರುವ ಕಾರ್ತಿಕ ಋಷಿಯ ಕಥೆಯನ್ನು ಇಲ್ಲಿ ತೆಗೆದುಕೊಳ್ಳಬಹುದು. ನಂದೀಶ್ವ ರ ಹಬ್ಬದ ದಿನ ಅಗ್ನಿರಾಜ ಮತ್ತು ವೀರಮತಿಯ ಪುತ್ರಿಯರು ಆಚರಿಸುವ ನಂದೀಶ್ವರ ಹಬ್ಬದಿಂದ. ಇಲ್ಲಿ ಬರುವ ಹೆಸರುಗಳು ಸೂಚ್ಯವಾಗಿವೆ. ಅಗ್ನಿರಾಜ ಎಂಬ ಹೆಸರು ರಾಜನ ಬೇಯುತ್ತಿರುವ ಕಾಮದ ಸೂಚಕವಾದರೆ, ವೀರ ಮತಿ ಎಂಬುದು ರಾಣಿಯ ವೀರತ್ವದ ವಿವೇಕದ ಸೂಚಕವಾಗಿದೆ. ವೀರಶ್ರೀ ಇಲ್ಲಿ ಬಂಧುಶ್ರಿಯಾಗುತ್ತಾಳೆ.
ನಾನು ರಾಜ್ಯಭಾರ ಮಾಡತಕ್ಕ ಪ್ರದೇಶಗಳಲ್ಲಿ ಹುಟ್ಟಿಬಂದ ಶ್ರೇಷ್ಠವಾದ ವಸ್ತು ಯಾರಿಗೆ ಸೇರಬೇಕಾದುದು?”ಒಳ್ಳೆಯದಾದ ಆನೆಯೂ ಕುದುರೆಯೂ ಮುತ್ತೂ ಮಾಣಿಕ್ಯವೂ ಸ್ತ್ರೀರತ್ನ ಮುಂತಾದ ಒಳ್ಳೆಯದಾದ ಶ್ರೇಷ್ಟ ವಸ್ತುಗಳೆಲ್ಲವೂ ಭೂಮಿಯನ್ನು ಆಳತಕ್ಕವನಿಗೆ ಸೇರಬೇಕಾದವು” ಎಂದು ಹೇಳಿದಾಗ ರಾಜ್ಯದಲ್ಲಿ ಒಬ್ಬೊಬ್ಬರನ್ನೇ ಕರೆದು ತಾನು ತನ್ನ ರಾಜ್ಯದಲ್ಲಿ ಅತ್ಯುತ್ತಮವಾದುದನ್ನು ಉಪಭೋಗಿಸಬಹುದು ಎಂದು ಅವರಿಂದಲೇ ಹೇಳಿಸುತ್ತಾನೆ. ಅವನ ಮಾತಿಗೆ ವಿರುದ್ಧವಾಗಿದ್ದವರನ್ನು ಸೆರೆಮನೆಗೆ ಕಳುಹಿಸುತ್ತಾನೆ. ಅಗ್ನಿರಾಜ ಸ್ವಂತ ಮಗಳು ಕೃತ್ತಿಕೆಯನ್ನು ಮದುವೆಯಾಗುತ್ತಾನೆ.ರಾಜನ ಧರ್ಮ ವಿರುದ್ಧವಾದ ವರ್ತನೆಗೆ ವೀರಮತಿ ಬ್ರಹ್ಮಚರ್ಯವನ್ನು ಸ್ವೀಕರಿಸುತ್ತಾಳೆ. ಕೃತ್ತಿಕೆಯ ಪ್ರತಿಕ್ರಿಯೆಗಳು ಮಾತಿನಲ್ಲಿ ಬರುವುದೇ ಇಲ್ಲ. ಕಾರ್ತಿಕ ಋಷಿಯ ಕಥೆಯಲ್ಲಿ ಅಗ್ನಿರಾಜ ಸಮಾಜದ ಕಟ್ಟಳೆಗಳನ್ನ ಮುರಿಯಲು ಪ್ರಯತ್ನ ಮಾಡಿದರೆ ಯಥಾ ರಾಜ ತಥಾ ಪ್ರಜಾ ಎಂಬಂತೆ ಕೃತ್ತಿಕಾಪುರ ಭೋಗಂಕಾರೋಹಣ ಅಥವಾ ಭೋಗಪಟ್ಟಣ ಆಗಿಬಿಡುತ್ತದೆ.ಕೃತ್ತಿಕೆಯ ಮನಸ್ಥಿತಿಯ ಕುರಿತು ಇಲ್ಲಿ ಕತೆಗಾರ ಏನೂ ಹೇಳುವುದಿಲ್ಲ . ಆದರೆ ಪುರುಷ ತನ್ನ ಮನೋಕಾಮನೆಗಳಿಗೆ ಹೆಣ್ಣು ಮಕ್ಕಳ ಹಕ್ಕನ್ನು ಅಧಿಕೃತ ಗೊಳಿಸುಕೊಳ್ಳುವ ದಾಷ್ರ್ಯಕ್ಕೆ ಇಳಿಯುವುದರ ವಿರುದ್ಧ, ಹೆಣ್ಣನ್ನು ವಸ್ತುವಾಗಿಸಿಕೊಂಡವರ ವಿರುದ್ದ ಸಾಮಾಜಿಕರ ಧಿಕ್ಕಾರವಿರಬೇಕು. ಕಾರ್ತಿಕ ಮತ್ತು ವೀರಶ್ರೀ ಎಂಬ ಮಕ್ಕಳು ಜನಿಸುತ್ತಾರೆ. ತಾಯಿಯಿಂದ ಕಾರ್ತಿಕನಿಗೆ, ತನ್ನ ತಂದೆಯೇ ಅಜ್ಜನೂ ಹೌದು ಎಂದು ತಿಳಿದಾಗ ತಂದೆಯ ಅವಿವೇಕದ ಅರಿವು ತಿಳಿಯುತ್ತದೆ. ಕಾರ್ತಿಕ ಯತಿಯಾಗಿ ಏಕವಿಹಾರಿಯಾಗಿ ಹೊರಡುತ್ತಾನೆ. ಗಂಡನಾದವನು ಅಳಿಯನಾದರೆ,ತಂದೆಯಾದವನನ್ನು ಗಂಡ ಎಂದು ಭಾವನೆಂದು ಕರೆಯುವ ಪರಿಸ್ಥಿತಿ , ತಂದೆಯೇ ಅಜ್ಜನೆಂದು ತಿಳಿದಾಗ ಆಘಾತ ಜೊತೆಗೆ ಬಂಧುತ್ವದಲ್ಲಿ ಆಗುವ ಅನಿರೀಕ್ಷಿತ ಬದಲಾವಣೆಗಳಿಗೆ ಯಾರುಹೊಣೆ ಎಲ್ಲಿದೆ ಬಂಧುತ್ವದ ಪಾವಿತ್ರ್ಯ ಹೇಗಾಗುತ್ತದೆ ಅನ್ನಿಸುತ್ತದೆ.
ರಾಜಪ್ರಭುತ್ವದಲ್ಲಿ ಇರುವ ಇನ್ನೊಂದು ಅವಿವೇಕವನ್ನು ಈ ಕಥೆಯಲ್ಲಿಯೇ ಕಾಣಬಹುದು.. ವೀರಶ್ರೀ ತನ್ನ ಪತಿಯೊಂದಿಗೆ ಉಪ್ಪರಿಗೆಯಲ್ಲಿ ರಾಜನ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡು ಉಗುರಿನಿಂದ ಕೆರೆಯುತ್ತಿದ್ದಳು. ಕಾರ್ತಿಕ ಋಷಿ ಬರುವುದು ಗೊತ್ತಾಗಿ ರಾಜನ ತಲೆಯ ಕೆಳಗೆ ಒಂದು ಆಧಾರವನ್ನಿಟ್ಟು ಉಪ್ಪರಿಗೆಯಿಂದ ಇಳಿದು ಹೋಗುತ್ತಾಳೆ. ಅಷ್ಟರಲ್ಲಿ ಕಾರ್ತಿಕ ಋಷಿ ಅರಮನೆಯನ್ನು ಹೊಕ್ಕು ಆಚೆ ಹೋದ ಕಾರಣದಿಂದ ಭಿಕ್ಷೆಯನ್ನು ಸ್ವೀಕಾರ ಮಾಡುವುದಿಲ್ಲ. ಪೂರ್ವಾಶ್ರಮದ ತಂಗಿ ಕಾಲಿಗೆ ಬಿದ್ದರೂ ಏನೂ ಪ್ರಯೋಜನವಾಗುವುದಿಲ್ಲ. ಯತಿಯ ಕಾಲಿಗೆ ಬೀಳುವ ಪತ್ನಿಯನ್ನು ಕಂಡ ಕ್ರೌಂಚ ಹೆಂಡತಿ ವಿರಶ್ರೀಯ ನಡತೆಯ ಬಗ್ಗೆ ಸಂಶಯಪಡುತ್ತಾನೆ. ಅವಿವೇಕದಿಂದ ತನ್ನ ಶಕ್ತ್ಯಾಯುಧದಿಂದ ಕಾರ್ತಿಕ ಋಷಿಯ ಎದೆ ಸೀಳಿ ಬಿಡುತ್ತಾನೆ. ಇಷ್ಟಾದರೂ ಕಾರ್ತಿಕ ಋಷಿ ಸಿಟ್ಟಿಗೇಳುವುದಾಗಲಿ ನೋವಿನಿಂದ ಚಡಪಡಿಸುವುದಾಗಲಿ ಮಾಡದೆ ನಿರ್ಲಿಪ್ತನಾಗುತ್ತಾನೆ. ಅಜ್ಜಿ ವೀರಮತಿ ವ್ಯಂತರ ದೇವತೆಯಾಗಿ ಬಂದು ರಾಜನನ್ನು ಕೊಲ್ಲುವುದಾಗಿ ಹೇಳಿದರೂ ಆತ ನಿರಾಕರಿಸಿ ತಂಪಾದ ಸ್ಥಳಕ್ಕೆ ತನ್ನನ್ನು ಒಯ್ಯಬೇಕೆಂದು ಹೇಳುತ್ತಾನೆ. ಅಣ್ಣನ ಸಾವಿನಿಂದ ತೀವ್ರ ಆಘಾತಗೊಂಡ ವೀರಶ್ರೀಯನ್ನು ಸಹಜ ಸ್ಥಿತಿಗೆ ತರಲು ಬಹಳ ಸಮಯಬೇಕಾಗುತ್ತದೆ. ಅವಳ ದುಃಖವನ್ನು ಹೋಗಲಾಡಿಸಲು ನಗಿಸಲು ಪಗರಣಿಗ ಯತಿಯ ವೇಷಧಾರಿಯಾಗಿ ಬರಬೇಕಾಗುತ್ತದೆ. ಇದುವೆ ಬಾದುಬ್ಬೆಯ ಹಬ್ಬ. ಕಾರ್ತಿಕ ಋಷಿಯ ಕಥೆಯಲ್ಲಿ ಬರುವ ರಾಜರೀರ್ವರೂ ದರ್ಪವೀರರು, ಅಧರ್ಮಿಗಳು. ಒಬ್ಬ ಕುರುಡು ಕಾಮಿ ಇನ್ನೊಬ್ಬ ಕಿವುಡ ಕೋಪಿಷ್ಟ.ಅಗ್ನಿರಾಜ ಮತ್ತು ಕೃತ್ತಿಕೆಯರದ್ದು ಅಪವಿತ್ರ ಸಂಬಂಧವಾದರೆ ವೀರಶ್ರೀ ಮತ್ತು ಕಾರ್ತಿಕೇಯರು ಪವಿತ್ರ ಭಾಂಧವ್ಯನ್ನು ಮತ್ತೆ ಬೆಳಗುತ್ತಾರೆ ನಂದೀಶ್ವರ ಹಬ್ಬದ ದಿನದಂದು ಆದ ತಪ್ಪಿನ ಅಂಕುರ ಬಾದುಬ್ಬೆಯ ಹಬ್ಬದ ದಿನದಂದು ಪರಿಹಾರವನ್ನು ಕಂಡುಕೊಳ್ಳುತ್ತದೆ.
ಅಂದು ಕೃತ್ತಿಕೆಯ ಜಲಪ್ರಸವ , ಇಂದುವಾಟರ್ ಬರ್ತ್
ಈಡಿಪಸ್ ಕಾಂಪ್ಲೆಕ್ಸನ್ನು ಕಾರ್ತಿಕ ಋಷಿಯ ಕಥೆಗೆ ಅನ್ವಯಿಸಿ ಹೇಳಿದ್ದಾಯಿತು. ಅಂತೆಯೇ ಅಂದಿನ ಜಲಪ್ರಸವ ಆಧುನಿಕ ದಿನಮಾನಗಳಲ್ಲಿ ವಾಟರ್ ಬರ್ತ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿರುವ ಶಬ್ದ. “ವಾಟರ್ ಬರ್ತ್” ಕಲ್ಪನೆ ವಡ್ಡಾರಾಧನೆಯ ಕಾಲದಲ್ಲಿಯೇ ಇತ್ತು ಎಂಬುದಕ್ಕೆ ಕಾರ್ತಿಕ ಋಷಿಯ ಕತೆಯಲ್ಲಿಯೇ ಮಾಹಿತಿ ಲಭ್ಯವಾಗುತ್ತದೆ.
ಕೃತ್ತಿಕೆ ತುಂಬು ಗರ್ಭಿಣಿಯಾಗಿದ್ದಾಗ “ಸರವಣ ಎಂಬ ಹೂದೋಟದೊಳಗಿರುವ ಸರವಣವೆಂಬ ಬಾವಿಯಲ್ಲಿ ತನಗೆ ಜಲಕೇಳಿಯಾಡಲು ಬಯಕೆಯಾಗಿದೆ “ ಎಂದು ಅಗ್ನಿರಾಜನಿಗೆ ತಿಳಿಸಿ ಅವನ ಒಪ್ಪಿಗೆಯಂತೆ ನೀರಲ್ಲಾಡಿ ಮಗನನ್ನು ಪಡೆದಳು ಎಂಬ ಮಾತುಗಳು ಬರುತ್ತವೆ.. ಇದೆ ವಾಟರ್ ಬರ್ತ್ ಅಂದರೆ ನೀರಿನಲ್ಲಿ ಹೆರಿಗೆಯಾಗುವುದು. ಈ ವಿಧಾನದಲ್ಲಿ ಹೆಚ್ಚಿನ ವೈದ್ಯ ಪ್ರಕ್ರಿಯೆಗೆ ಒಳಗಾಗಬೇಕಿಲ್ಲ ನೋವು ಕಡಿಮೆಯಾಗಲೆಂದು ಇಂಜಕ್ಷನ್ ತೆಗೆದುಕೊಳ್ಳಬೇಕಾಗಿಲ್ಲ. ಅಕ್ಷರಶಃ ಇದೊಂದು ನೈಸರ್ಗಿಕ ಹೆರಿಗೆ ವಿಧಾನ. ಟಬ್ಬನಲ್ಲಿ ನೀರನ್ನು ಎದೆಮಟ್ಟಕ್ಕೆ ತುಂಬಿಸಲಾಗಿರುತ್ತದೆ. ಹೊಸ ನೀರು ಬರಲು, ಹಳೆಯ ನೀರು ಹೋಗಲು ವ್ಯವಸ್ಥೆಯೂ ಇರುತ್ತದೆ. ಹೆರಿಗೆಯಾದ ಕೆಲವು ನಿಮಿಷಗಳವರೆಗೆ ಮಗು ಗರ್ಭ ಚೀಲದಲ್ಲಿಯೇ ಉಸಿರಾಡುತ್ತದೆ. ಅದಕ್ಕೂ ಮೊದಲು ನೀರಲ್ಲಿಯೇ ಇರುತ್ತದೆ ಅಲ್ವೆ!ಹಾಗಾಗಿ ಮಗುವಿಗೆ ಅಪಾಯವಿಲ್ಲ ಹೊಕ್ಕಳ ಬಳ್ಳಿ ಕತ್ತರಿಸಿದ ನಂತರ ಸ್ವತಂತ್ರವಾಗಿ ಉಸಿರಾಡುತ್ತದೆ. ಇಲ್ಲಿ ಬಳಸುವ ಬೆಚ್ಚಗಿನ ನೀರು ಮಾಂಸಖಂಡಗಳನ್ನು ಸಡಿಲಗೊಳಿಸಿ ದೇಹವನ್ನು ರಿಲ್ಯಾಲಕ್ಸ್ ಮಾಡುತ್ತದೆ., ಇದೇ ಬೆಚ್ಚನೆ ನೀರು ಹೆರಿಗೆ ನೋವನ್ನೂ ಕೂಡ ಕಡಿಮೆ ಮಾಡುತ್ತದೆ. ಒತ್ತಡದ (stress harmone)ಹಾರ್ಮೋನ್ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಯಾವುದೇ ಅಡ್ಡ ಪರಿಣಾಮವಿಲ್ಲದ ಕಡಿಮೆ ಪ್ರಮಾಣದ ನೋವು ನೀಡುವ ಸಹಜ ಪ್ರಸವದ ಬಗೆ ಇದು. ನೋವಿನ ಹೆರಿಗೆಯನ್ನು ಕೂಡ ಎಂಜಾಯ್ ಮಾಡಬಹುದು. ಕುಟುಂಬದ ಸದಸ್ಯರೂ ಇಲ್ಲಿ ಇರಬಹುದು. ಮನೆಯಲ್ಲಿಯೇ ಹೆರಿಗೆ ಬಯಸುವವರಿಗೆ ಈ ವಿಧಾನ ಸಹಾಯಕಾರಿ ಆದರೆ ತಜ್ಞ ವೈದ್ಯರು ಮಾರ್ಗದರ್ಶನ ಆತ್ಯಗತ್ಯ. ವೈದ್ಯರೂ ಈ ಕುರಿತು ಖಡಕ್ ಎಚ್ಚರಿಕೆಯನ್ನು ಕೊಡುತ್ತಾರೆ. ಸಂಶೋಧನಾಸಕ್ತಿ , ,ಆಧುನಿಕ ದೃಷ್ಟಿ ಇರಿಸಿಕೊಂಡು ನೋಡಿದರೆ ಕುತೂಹಲಕಾರಿ ವಿಷಯಗಳು ಗ್ರಾಹ್ಯವಾಗುತ್ತವೆ.
ನಾಗರಿಕತೆ ಮತ್ತು ನಗರೀಕರಣ ,ಜಾಗತಿಕರಣ ,ಡಿಜಿಟಲಿಕರಣ ಈ ಮೊದಲಾದ ಯಾವುದೇ ಪರಿಭಾಷೆಗಳು ಬರಲಿ ಅವುಗಳ ಹಿಂದೆ ಸರಿಸುಮಾರು ಅದಕ್ಕೆ ಹೊಂದುವ ಪರಿಪ್ರೇಕ್ಷಗಳನ್ನು ನೋಡಬಹುದು.
ಆಧಾರ ಗ್ರಂಥಗಳು:
ವಡ್ಡಾರಾಧನೆ- ಡಿ.ಎಲ್. ನರಸಿಂಹಾಚಾರ್ಯ
ಸಮಾಜಶಾಸ್ತ್ರ: ಎಂ. ನಾರಾಯಣ
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ