- ವಿನಾಯಕರ ಪ್ರತಿಜ್ಞೆ ಎಂಬ ಕವಿತೆ - ಆಗಸ್ಟ್ 9, 2021
- ಒಲವಿಲ್ಲದ ಪೂಜೆ - ಮೇ 14, 2021
- ಪರಿವಾರ ಪ್ರಿಯನಲ್ವೆ ಇಕ್ಷ್ವಾಕು ಸಂಜಾತ? - ಏಪ್ರಿಲ್ 20, 2021
ಕೊರೊನಾದ ಸಂಕಷ್ಟಮಯ ಕಾಲದಲ್ಲಿ ಕೈಯಲ್ಲಿದ್ದ ಉದ್ಯೋಗಗಳನ್ನು ಕಳೆದುಕೊಂಡ ಅದೆಷ್ಟೋ ಜನ ಈ ತಲೆಬರಹವನ್ನು ಓದಿ ಯಾವುದೋ ವಾಂಟೆಂಡ್ ಬಗ್ಗೆ ಬರೆದಿದ್ದೇನೆ ಎಂದು ಆಸೆಗಣ್ಣಿಂದ ಓದುತ್ತಿದ್ದೀರೋ ಏನೊ. ಕ್ಷಮಿಸಿ ಇದು ನೌಕರಿ ಬಗ್ಗೆ ಜಾಹಿರಾತು ಅಲ್ಲ. ಹತ್ತರಿಂದ ಐದರವರೆಗೆ ಪಾಠ ಮಾಡುವ ಶಿಕ್ಷಕರ ಬಗ್ಗೆ ನಾನು ಹೇಳಲು ಹೊರಟಿಲ್ಲ. ಕನ್ನಡ ಜನಮಾನಸಕ್ಕೆ ಅರಿವಿನ ದೀಪ ಹಚ್ಚಿದವರಲ್ಲಿ ಅಗ್ರಗಣ್ಯನಾದ ಪುಲಿಗೆರೆ ಸೋಮನಾಥ ತನ್ನ ಸರ್ವಜ್ಞ ಆಗುವುದು ಹೇಗೆ ಎಂದು ಹೇಳುತ್ತಾನೆ.
ಕೆಲವಂ ಬಲ್ಲವರಿಂದ ಕಲ್ತು
ಕೆಲವಂ ಶಾಸ್ತ್ರಗಳಮ ಕೇಳುತಂ
ಕೆಲವಂ ಮಾಳ್ಪವರಿಂದ ಕಂಡು
ಕೆಲವಂ ಸುಜ್ಞಾನದಿಂ ನೋಡುತಂ
ಕೆಲವಂ ಸಜ್ಜನ ಸಂಘದಿಂದಲರಿಯಲ್
ಸರ್ವಜ್ಞನಪ್ಪಂ ನರಂ ಪಲವುಂ ಪಳ್ಳ ಸಮುದ್ರವೈ..
ಜೀವನದಲ್ಲಿ ಜ್ಞಾನದ ಶರಧಿ ತುಂಬಬೇಕಾದರೆ ಅರಿವಿನ ನೀರ ಹರಿವು ಹಲವಾರು ವಿಧದಲ್ಲಿ ಹರಿದು ಬರಬೇಕು. ಕೆಲವನ್ನು ನೋಡಿ ತಿಳಿದರೆ ಕೆಲವನ್ನು ಮಾಡಿ ಕಲಿಯಬೇಕು. ಕೆಲವನ್ನು ಸಜ್ಜನರ ಸಹವಾಸ ತಿಳಿಸಿ ಕೊಡುತ್ತದೆ. ಕೆಲವನ್ನು ಬಲ್ಲವರಿಂದ ಕಲಿಯಬೇಕು. ಈ ಬಲ್ಲವರ ಕುರಿತಾಗಿಯೇ ನಾನೀಗ ಹೇಳಹೊರಟಿದ್ದೇನೆ.
ನಮ್ಮ ಅಜ್ಜಿ ತುಂಬಾ ರುಚಿಯಾಗಿ ಸಾರು ಮಾಡುತ್ತಿದ್ದಳು. ಯಾರಾದರೂ “ವೇಣತ್ತೆ ನಿನ್ನ ಕೈ ಸಾರು ನೆನಪಾದರೆ ಬಾಯಲ್ಲಿ ನೀರು ಬರುತ್ತೆ” ಅಂದೊಡನೆ ಖುಷಿಯಾಗಿ ಒಂದು ಬಟ್ಟಲು ಸಾರು ಕೊಡುತ್ತಿದ್ದಳು. ಆದರೆ ಅದಕ್ಕೂ ಮೊದಲು ಅಡಿಗೆ ಮನೆಗೆ ಕರೆದು ಒಗ್ಗರಣೆ ಹಾಕುವುದರಿಂದ ಹಿಡಿದು ಕುದಿಸುವ ತನಕ ಯಾವ ಹಂತದಲ್ಲಿ ಏನು ಮಾಡಬೇಕು ಅಂತ ಹೇಳುತ್ತಿದ್ದಳು. ಮಕ್ಕಳಾದ ನಮಗೆಲ್ಲ ಒಂಥರ ನಾಚಿಕೆಯ ಜೊತೆಗೆ ಸ್ವಲ್ಪ ಸಿಟ್ಟೂ ಬರುತ್ತಿತ್ತು. ಅಲ್ಲಾ ಅವರು ಇಷ್ಟಪಟ್ಟರೆ ಒಂದು ಪಾತ್ರೆ ಸಾರು ಕೊಟ್ಟು ಕಳಿಸಬೇಕು ತಾನೆ? ಹೀಗೆ ಅವರ ಕೈಲೇ ಸೌಟು ಹಿಡಿಸಿ ಗಂಟೆಗಟ್ಟಲೆ ಸರ್ಕಸ್ ಮಾಡಿಸುತ್ತಾಳಲ್ಲಪ್ಪಾ ಅವರೇನು ನನಗೆ ಕಲಿಸು ಅಂದರಾ? ಇಲ್ಲ. ಅಜ್ಜಿಯೇ ಗಂಟು ಬಿದ್ದು ಅವರಿಗೆ ಕೊರೆಯುತ್ತಿದ್ದಾಳೆ. ಅಂತ ಬೈದುಕೊಳ್ಳುತ್ತಿದ್ದೆವು. ಆದರೆ ಈಗ ಅನ್ನಿಸುತ್ತದೆ ಅಜ್ಜಿಯ ತಿಥಿಗೆ ಅವಳದೇ ಘಮದೊಂದಿಗೆ, ಹದದೊಂದಿಗೆ ಸಾರು ತಯಾರಾಗುತ್ತಿದೆ. ಅಷ್ಟೇ ಅಲ್ಲ ಅವಳ ಪರಿಚಯದ ಕುಟುಂಬಗಳಲ್ಲಿ ಅವಳದ್ದೇ ಹದದ ಉಪ್ಪಿನಕಾಯಿ, ತೊಕ್ಕು, ಮಸಾಲೆ ಪುಡಿಗಳು ತಯಾರಾಗುತ್ತಿವೆ. ಅವಳ ನಂತರದ ಮೂರು ತಲೆಮಾರಿನವರು ವೇಣಕ್ಕನ ಹದ ಅಂದರೆ ಹದವಪ ಅನ್ನುತ್ತಾ ತಮ್ಮ ಮನೆಯ ಸಂತರ್ಪಣೆಯ ಪಂಕ್ತಿಗಳಲ್ಲಿ ನೂರಾರು ಜನ ಸೊರ್ ಸೊರ್ ಎಂದು ಸಾರು ಸುರಿಯುವಂತೆ ಮಾಡುತ್ತಾರೆ.
ನನ್ನ ಅಜ್ಜಿಗೆ ಇನ್ನೊಂದು ಹವ್ಯಾಸವಿತ್ತು. ಅವಳು ತನ್ನ ಅಸ್ತಮಾ ನಿಯಂತ್ರಣಕ್ಕಾಗಿ ಮಲ್ಲಾಡಿಹಳ್ಳಿ ಆಶ್ರಮಕ್ಕೆ ಹೋಗಿ ಪೂಜ್ಯ ಸ್ವಾಮೀಜಿಯವರಿಂದ ಯೋಗಾಸನ, ಪ್ರಾಣಾಯಾಮ ಕಲಿತಿದ್ದಳು. ಅದರಿಂದಾಗಿ ಅವಳ ಅನಾರೋಗ್ಯ ಬಹುಪಾಲು ನಿಯಂತ್ರಣದಲ್ಲಿತ್ತು. ಆ ನಂತರ ಅವಳು ಯಾವ ಊರಿಗೇ ಹೋಗಲಿ ಅಥವಾ ಅವಳ ಮನೆಗೆ ಯಾರೇ ನೆಂಟರು ಬರಲಿ ಪ್ರಾಸಂಗಿಕ ಮಾತುಕತೆಯಲ್ಲಿ ಅವರಿಗೆ ಇರುವ ಯಾವುದೇ ಕಾಯಿಲೆಯ ಪ್ರಸ್ತಾಪ ಬಂದೊಡನೆ ಅಜ್ಜಿ ಥಟ್ಟನೆ ಅವರಿಗೆ ಆ ಕುರಿತು ಮಾಡಬೇಕಾದ ಆಸನದ ಬಗ್ಗೆ ಹಾಗೂ ಪ್ರಾಣಾಯಾಮದ ಯಾವುದೋ ಮುದ್ರೆಯ ಬಗ್ಗೆ ಉಪದೇಶ ಶುರು ಮಾಡುತ್ತಿದ್ದಳು. ಒಳಗೆ ಹೋಗಿ ಜಮಖಾನೆ ತಂದು ಹಾಸಿಕೊಂಡು ತೋರಿಸಿಯೇ ಬಿಡುತ್ತಿದ್ದಳು. ಹೆಂಗಸರು ತನಗೆ ಬೆಳಿಗ್ಗೆ ಎದ್ದೊಡನೆ ಕೆಲಸವಿರುತ್ತದೆ ಮಾಡಲಾಗುವುದಿಲ್ಲ ಅಂತೇನಾದರೂ ಗೊಣಗಲು ಶುರು ಮಾಡಿದರೆ ನೀನು ಮದ್ಯಾಹ್ನ ಮಾಡು, ಸಂಜೆ ಮಾಡು ಅಂತ ಒಂದಿಷ್ಟು ಪರ್ಯಾಯಗಳನ್ನು ಸೂಚಿಸುತ್ತಿದ್ದಳು.
ಒಂದು ಸಲ ಅಜ್ಜಿಯ ಶಿಷ್ಯತ್ವ ಹೀಗೆ ಸಿಕ್ಕ ಮೇಲೆ ಕೇಳುವುದೇ ಬೇಡ. ಅಜ್ಜಿಯ ಫಾಲೊ ಅಪ್ ಕೆಲಸವೂ ಶುರುವಾಗುತ್ತಿತ್ತು. ಆ ಶಿಷ್ಯರ ಮನೆಯಿಂದ ಯಾರೇ ಬರಲಿ ಅಥವಾ ಎಲ್ಲಾದರೂ ಕಾಣಲಿ “ಅವಳ ಆರೋಗ್ಯ ಈಗ ಹೆಂಗಿದೆ? ಯೋಗ ಅಭ್ಯಾಸ ಮಾಡ್ತಾ ಇದಾಳೊ ಇಲ್ಲವೊ?” ಅಂತ ವಿಚಾರಣೆ ಶುರು. ಯಾರೂ ಸಿಗದಿದ್ದರೆ ಅಜ್ಜಿಯೇ ಅವರ ಮನೆ ತನಕ ಹೋಗಿ ಖುದ್ದು ನೋಡಿ ವಿಚಾರಿಸಿಕೊಂಡು ಬಿಡುತ್ತಿದ್ದಳು. ಅಜ್ಜಿಯ ಮೊಮ್ಮಗಳಾದ ನನ್ನ ಧಾರವಾಡದ ಮನೆಗೆ ಬಂದಾಗ ಇಲ್ಲಿಯ ನೆರೆ-ಹೊರೆ ಹೆಂಗಸರಿಗೆ ಯೋಗ ಕಲಿಸಿ ಹೋಗಿದ್ದಾಳೆಂದರೆ ತಿಳಿದುಕೊಳ್ಳಿ ಅವಳೆಂತಹ ಶಿಕ್ಷಕಿ ಇರಬಹುದು ಅಂತ.
ಹೌದಲ್ಲವೇ ಅಜ್ಜಿ ತನ್ನ ಕೌಶಲ್ಯವನ್ನು, ವಿದ್ಯೆಯನ್ನು ಕಲಿಸುವ ಮೂಲಕ ಅನೇಕ ತಲೆಮಾರುಗಳವರೆಗೂ ಅದು ಮುಂದುವರಿದಕೊಂಡು ಹೋಗುವಂತೆ ಮಾಡಿದ್ದಾಳೆ. ಇದು ನಿಜವಾದ ಶಿಕ್ಷಕನ ಜವಾಬ್ದಾರಿ. ಶಿಕ್ಷಕ ಅಂದಕೂಡಲೇ ಪ್ರಾಥಮಿಕ-ಮಾಧ್ಯಮಿಕ-ಕಾಲೇಜು ಮೇಷ್ಟರುಗಳ ಮುಖ ನೋಡಬೇಡಿ. ನಾನು ಹೇಳುವ ಶಿಕ್ಷಕ ಪ್ರತಿಯೊಬ್ಬರೊಳಗೂ ಇದ್ದಾನೆ. ನಮಗೆ ಗೊತ್ತಿರುವ ಒಂದು ತಿಳಿವಳಿಕೆ, ಜ್ಞಾನ, ಕೌಶಲ್ಯ ಏನೇ ಇರಬಹುದು. ಸಾರು ಮಾಡುವುದರಿಂದ ಹಿಡಿದು, ಟ್ರಕ್ಕು ಚಲಾಯಿಸುವ ತನಕ ಅದು ಏನೂ ಆಗಿರಬಹುದು. ಇನ್ನೊಬ್ಬರಿಗೆ ಅದು ಅಗತ್ಯವೆನಿಸಿದರೆ, ಅಥವಾ ಉಪಯೋಗವಾಗಬಹುದು ಎನಿಸಿದರೆ ಅವರನ್ನು ಕರೆದು ಕಲಿಸುವುದು ನಮ್ಮ ಜವಾಬ್ದಾರಿ. ಅಯ್ಯೋ ಅವರಿಗೇ ಬೇಕಾಗಿಲ್ಲ, ಕಲಿಯೊ ತಾಳ್ಮೆ ಇಲ್ಲ, ನಂಗೆ ಗೌರವ ಕೊಡಲ್ಲ, ನಾ ಯಾಕೆ ಕಲಿಸಲಿ? ಇದು ನಮ್ಮಲ್ಲಿ ಬಹುತೇಕರು ಕೇಳಿಕೊಳ್ಳುವ ಪ್ರಶ್ನೆ. ಅವನಿಗೆ ಎಷ್ಟು ಸೊಕ್ಕು ಗೊತ್ತಾ? ಅಸಡ್ಡೆ ಮಾಡ್ತಾನೆ. ನಂಗೆ ಕೊಡದಿದ್ದರೂ ಆ ವಿದ್ಯೆಗಾದರೂ ಕಿಮ್ಮತ್ತು ಇಲ್ವೇನ್ರಿ? ಇಂಥವರಿಗೆ ನಾವು ಯಾಕೆ ಕಲಿಸಬೇಕು? ಇದು ನಮ್ಮ-ನಿಮ್ಮೆಲ್ಲರ ವಾದ.
ಕ್ಷಮಿಸಿ ಸ್ನೇಹಿತರೆ, ನಾವು-ನೀವೆಲ್ಲರೂ ಅನುಭವಿಸುತ್ತಿರುವ ಈ ಸಮಾಜ, ನಾಗರಿಕತೆ, ಸ್ವಾತಂತ್ರ್ಯ ಇವೆಲ್ಲವೂ ನಮ್ಮ ಪೂರ್ವಿಕರ ಅಪಾರ ಶ್ರಮ, ತ್ಯಾಗ, ಬಲಿದಾನಗಳ ಫಲವಾಗಿದೆ. ಇವು ಯಾವುದೂ ನಮ್ಮ ಯೋಗ್ಯತೆ ನೋಡಿಯಾಗಲೀ ಅಥವಾ ಪಾತ್ರತ್ವವನ್ನು ಗಮನಿಸಿಯಾಗಲೀ ನಾವು ಪಡೆದುಕೊಂಡಿದ್ದಲ್ಲ. ಮನುಕುಲದ ಒಳಿತನ್ನು ಹಾರೈಸುವ ಉದಾತ್ತ ಮನಸ್ಸುಗಳು ನಿರ್ಮಿಸಿದ ಈ ಸಮಾಜದಲ್ಲಿ ಬದುಕುವ ನಾವು ಪ್ರತಿಫಲವಾಗಿ ಬಾಡಿಗೆ ಕೊಡಬೇಕಾಗಿದೆ. ನಮ್ಮ ಸುತ್ತಲಿನವರಿಗೆ ಅಥವಾ ಮುಂದಿನ ತಲೆಮಾರಿಗೆ ಅವರ ಅನಾಸಕ್ತಿ-ಬೇಜವಾಬ್ದಾರಿಗಳ ನಡುವೆಯೂ ತಾಳ್ಮೆವಹಿಸಿ ಅವರ ಒಳಿತು ಎಲ್ಲಿದೆ ಎಂಬ ಅಂಶವನ್ನು ತೋರಿಸುವ ಶಿಕ್ಷಣವನ್ನು ನೀಡಲೇ ಬೇಕಾಗಿದೆ. ಹೀಗಾಗಿ ಶಿಕ್ಷಕ ಎನ್ನುವುದು ಒಂದು ನೌಕರಿ ಅಲ್ಲ ಅದೊಂದು ಮನೋಭಾವ.
ಬಹುಶ; ಈ ಗಾದೆಯನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಒಬ್ಬ ಹಸಿದವನಿಗೆ ಮೀನು ಕೊಟ್ಟರೆ ಒಂದು ಹೊತ್ತಿನ ಊಟ ಮಾತ್ರ ಸಿಗುತ್ತದೆ. ಒಂದು ಗಾಳ ಕೊಟ್ಟರೆ ಉಪಜೀವನಕ್ಕೊಂದು ಸಲಕರಣೆ ನೀಡಿ ಸಹಾಯ ಮಾಡಿದಂತಾಗುತ್ತದೆ. ಆದರೆ ಇದೆರಡರ ಬದಲಿಗೆ ಆ ವ್ಯಕ್ತಿಗೆ ಮೀನು ಹಿಡಿಯುವುದು ಹೇಗೆ ಎಂದು ಕಲಿಸಿಕೊಟ್ಟರೆ ಇಡೀ ಜೀವನಕ್ಕೇ ಒಂದು ಮಾರ್ಗ ಕಲ್ಪಿಸಿದಂತೆ ಆಗುತ್ತದೆ. ಹಾಗಾದರೆ ಯಾವುದು ಒಳ್ಳೆಯದು ಎಂದು ಕೇಳಿದಾಗ ಏನೆನ್ನುತ್ತೀರಿ?
ಪ್ರಸ್ತುತ ಸಮಾಜದ ಧೋರಣೆ ಗಮನಿಸಿದಾಗ ಬಹುತೇಕರಿಗೆ ಮೀನು ಕೊಡುವುದೇ ಸುಲಭದ ಕೆಲಸವಾಗಿ ಕಾಣುತ್ತಿದೆ. ತಮ್ಮ ಆದಾಯದಲ್ಲಿ ಕೊಂಚ ಪಾಲನ್ನು ಬಡವರಿಗೆ, ನೊಂದವರಿಗೆ ದಾನ ಮಾಡಿದೆವು, ದೇಣಿಗೆ ನೀಡಿದೆವು ತನ್ಮೂಲಕ ತಾವು ಸಮಾಜಮುಖಿಯಾದೆವು ಎಂದು ಬೀಗುತ್ತಾರೆ. ಅದು ಒಂದು ದೃಷ್ಟಿಯಿಂದ ನೋಡಿದಾಗ ಹೌದು ಎಂದೆನ್ನಿಸುವ ಸಂಗತಿಯೇ ಇರಬಹುದು. ಆದರೆ ನೀವು ಮಾಡಿದ ಸಹಾಯವನ್ನು ಆ ವ್ಯಕ್ತಿ ಎಷ್ಟು ದಿನ ಬಳಕೆ ಮಾಡಿಕೊಂಡ? ನಿಮ್ಮ ನೆರವು ಆತನ ನೋವಿನ ಎಷ್ಟು ಪ್ರಮಾಣವನ್ನು ತಗ್ಗಿಸಿತು? ಎಂಬ ಪ್ರಶ್ನೆಯನ್ನು ಕೇಳಿಕೊಂಡಾಗ ಬಹಳಷ್ಟು ನಿರಾಶೆಯ ಭಾವನೆ ಮೂಡುತ್ತದೆ.
ಮೀನು ಹಿಡಿಯುವುದನ್ನು ಕಲಿಸಿದರೆ ಹಸಿದ ವ್ಯಕ್ತಿಯೊಬ್ಬನೇ ಅಲ್ಲ ಅವನ ಇಡೀ ಕುಟುಂಬವೇ ಊಟ ಮಾಡಬಹುದು ಅಂದರೆ ಹಸಿವಿನಿಂದ ಮುಕ್ತಿ ಸಿಗಬಹುದು. ಕಲಿತ ವ್ಯಕ್ತಿ ಆ ವಿದ್ಯೆಯನ್ನು ತನ್ನ ಹೆಂಡತಿಗೋ ಅಥವಾ ಮಗನಿಗೋ ಕಲಿಸಿದರೆ ಅವರ ಸಂಸಾರದ ಅನೇಕ ತಲೆಮಾರುಗಳೂ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಎಲ್ಲರೂ ಈ ಮೂರನೆಯ ಮಾರ್ಗವನ್ನು ಯಾಕೆ ಅನುಸರಿಸುವುದಿಲ್ಲ? ಯಾಕೆಂದರೆ ಹಸಿದವನಿಗೂ ತನ್ನನ್ನು ಕಾಡುತ್ತಿರುವ ಸಮಸ್ಯೆಯ ಅತೀ ಶೀಘ್ರ ಪರಿಹಾರವಾದ ಮೀನನ್ನು ಪಡೆಯುವ ಆಯ್ಕೆಯೇ ಹಿತವಾಗಿ ಕಾಣುತ್ತದೆ. ಕೊಡುವವನಿಗೂ ಕೂಡ ತನ್ನ ಸಮಯ, ತಾಳ್ಮೆ, ಪರಿಶ್ರಮ ಇವುಗಳನ್ನೆಲ್ಲ ವ್ಯಯಿಸಿ ಎದುರಿನವನಿಗೆ ಕಲಿಸುವ ತಲೆನೋವಿಗಿಂತ ತನ್ನ ತಾಟಿನಲ್ಲಿರುವ ಮೀನನ್ನು ಎತ್ತಿ ಪಟಕ್ಕನೆ ಕೊಟ್ಟು ಬಿಡುವ ಆಯ್ಕೆಯೇ ಬಹಳ ಸುಲಭದ ಉಪಾಯವಾಗಿ ಕಾಣುತ್ತದೆ.
ಹೌದು ಸ್ನೇಹಿತರೆ, ಇವತ್ತು ಕಲಿಯುವ ಬಯಕೆ, ತಾಳ್ಮೆ, ಪರಿಶ್ರಮ ಇವೆಲ್ಲ ಒಂದು ವರ್ಗದಿಂದ ಮಾಯವಾಗುತ್ತಿರುವ ಜೊತೆಯಲ್ಲಿಯೇ ಕಲಿಸುವ ಸಂಯಮ, ಶೃದ್ಧೆ, ಕೌಶಲ್ಯಗಳೂ ಒಂದು ಸಮುದಾಯದಿಂದ ಮಾಯವಾಗುತ್ತಿದೆ. ಹಾಗಾಗಿ ಗುರು ಅಥವಾ ಶಿಕ್ಷಕ ಅಂದಕೂಡಲೇ ಶಾಲೆ-ಕಾಲೇಜಿನಲ್ಲಿ ಸಂಬಳ ತೆಗೆದುಕೊಳ್ಳುವ ಸಮುದಾಯವನ್ನೇ ನೋಡುವ ಪರಿಸ್ಥಿತಿ ಬಂದಿದೆ. ಈ ಭೂಮಿಯ ಮೇಲೆ ಇರುವ ನಾವೆಲ್ಲ ಮನುಜರಾಗಲು ಬಂದವರು. ಅಂದರೆ ನಾವು ಮನಷ್ಯರಾಗಿಲ್ಲ. ಆಗುವುದನ್ನು ಕಲಿಯಬೇಕಾಗಿದೆ. ಕೊಂಚ ಕಲಿತವರು ಉಳಿದವರಿಗೆ ಕಲಿಸಬೇಕಾಗಿದೆ. ಕೆಲವು ಸಲ ಎದುರಿಗಿನವ ಕಲಿಯಲು ಉತ್ಸುಕನಿರದಿದ್ದರೂ ನಮ್ಮ ಮಾಸ್ತರಗಿರಿಯಿಂದ ಅವನನ್ನು ಕಲಿಕೆಗೆ ಇಳಿಸಬೇಕಾಗುತ್ತದೆ.
ಪೊಲೆಂಡ್ ಕವಿ ವಿಸ್ವಾವಾ ಶಿಂಬೊರಸ್ಕ್ ಬರೆಯುತ್ತಾನೆ
ಪ್ರತಿಯೊಂದು ಯುದ್ಧ ನಡೆದ ಮೇಲೂ
ಶುದ್ಧೀಕರಿಸಬೇಕು ಯಾರಾದರೂ
ಚೆಲ್ಲಾಪಿಲ್ಲಿಯಾದುದು ತನಗೆ ತಾನೇ
ಓರಣಗೊಳ್ಳುವುದಿಲ್ಲ ಎಷ್ಟೆಂದರೂ
ಇವೆಲ್ಲ ಏನೆಂದು ತಿಳಿದವರು ದಾರಿ ತೋರಿಸಬೇಕು
ಅಷ್ಟಾಗಿ ತಿಳಿಯದವರಿಗೆ
ಇನ್ನೂ ಕಡಿಮೆ ತಿಳಿದವರಿಗೆ.. ಏನೂ ತಿಳಿದಿಲ್ಲ ಎನ್ನವುದಕ್ಕಿಂತಲೂ
ಕಮ್ಮಿ ತಿಳಿದವರಿಗೆ…
ನಮಗಿಂತ ಕಮ್ಮಿ ತಿಳಿದವರಿಗೆ ತಿಳಿಸಬೇಕು ಎನ್ನುವ ಉತ್ಸಾಹ ನಮ್ಮ ಹಿಂದಿನ ತಲೆಮಾರಿನವರಿಗೆ ಬಹಳವಾಗಿಯೇ ಇತ್ತು. ಹಿಂದಿನ ಜನರು ತಮ್ಮ ಸುತ್ತಮುತ್ತಲಿನ ಸಮುದಾಯದ ಕಿರಿಯ ತಲೆಮಾರಿಗೆ ಯಾವತ್ತೂ ಜೀವನದ ಪಾಠವನ್ನು ಕಲಿಸುತ್ತಲೇ ಇರುತ್ತಿದ್ದರು. ಹಳ್ಳಿಯಲ್ಲಂತೂ ಜಾತಿ-ಧರ್ಮ-ಸಾಮಾಜಿಕ ಅಂತಸ್ತುಗಳ ಪರಿವೆಯಿಲ್ಲದೇ ಮಾಮಾ-ಕಾಕಾ-ಮುತ್ಯಾಗಳು, ಮಾಂಶಿ-ಅಮ್ಮ-ಅಕ್ಕ ಇವರು ಪ್ರತಿಯೊಂದನ್ನೂ ಇದು ಹೀಗಲ್ಲ ಹೀಗೆ ಅಂತ ಕಲಿಸುತ್ತಿದ್ದರು. ಕೃಷಿಯ ಕೆಲಸವಿರಲಿ, ಮನೆವಾರ್ತೆಯಿರಲಿ, ಸೈಕಲ್ ಹೊಡೆಯುವುದಿರಲಿ ಗೊತ್ತಿದ್ದವರು ಗೊತ್ತಿಲ್ಲದವರಿಗೆ ಕಲಿಸಬೇಕು. ಇದು ಜಗದ ನಿಯಮ ಹಾಗೂ ಜೀವನದ ನಿಯಮ. ಇದನ್ನು ಅಳವಡಿಸಿದರೆ ಎಲ್ಲರೂ ಒಂದಲ್ಲ ಒಂದು ವಿಷಯದಲ್ಲಿ, ಒಂದಲ್ಲ ಒಂದು ಸಂದರ್ಭದಲ್ಲಿ ಶಿಕ್ಷಕರೇ.
ಆದರೆ ಆಧುನಿಕ ಬದುಕು ನಮ್ಮನ್ನು ಸ್ವ-ಕೇಂದ್ರಿತ ಸ್ವಾರ್ಥಿಯಾಗಿ ಮಾಡುತ್ತಿದೆ. ಅದೇನೇ ಇದ್ದರೂ ಕೋರ್ಸಿಗೆ ಅಡ್ಮಿಶನ್ ತೆಗೆದುಕೊಂಡು ಕಲಿಯಬೇಕು. ಸಂಬಂಧಪಟ್ಟ ಪ್ರೊಫೆಶನಲ್ ಪರಿಣಿತರಿಗೆ ಫೀಸು ಕೊಟ್ಟು ತಿಳಿದುಕೊಳ್ಳಬೇಕು. ಹೀಗೆ ನಾವು ಎಲ್ಲವನ್ನೂ ವ್ಯಾಪಾರೀಕರಣಗೊಳಿಸಿಕೊಂಡಿದ್ದೇವೆ. ಸಹಜ ಬದುಕಿನ ಭಾಗವಾದ ಕೊಡು-ಕೊಳ್ಳು, ಕೌಶಲ್ಯ ವಿನಿಮಯದ ಅದ್ಭುತ ಸಂಸ್ಕøತಿಯೊಂದನ್ನು ವಿನಾಶಕ್ಕೆ ತಳ್ಳುತ್ತಿದ್ದೇವೆ. ಇನ್ನೊಬ್ಬನ ವಿಚಾರದಲ್ಲಿ ಮೂಗು ತೂರಿಸಬಾರದು ಎಂಬ ಹಣೆಪಟ್ಟಿ ತಗುಲಿಸಿಕೊಂಡಿದ್ದೇವೆ.
ಪರಸ್ಪರರನ್ನು ಪ್ರೀತಿ-ವಾತ್ಸಲ್ಯದಿಂದ ತಿದ್ದುವ, ಬುದ್ಧಿ ಹೇಳುವ ಪರಿಪಾಠ ಮಾಯವಾದಂತೆ ಇಡೀ ಸಮಾಜ ಪೈಪೋಟಿ-ದ್ವೇಷ ಇಂತಹ ನಕಾರಾತ್ಮಕ ಭಾವದಿಂದ ತುಂಬಿ ತುಳಕುತ್ತದೆ. ಇವನ್ಯಾರವ ಇವನ್ಯಾರವ ಎಂದು ಕೇಳುತ್ತ ಎಲ್ಲರನ್ನೂ ದೂರ ತಳ್ಳುವ ರಣಾಂಗಣವಾಗಿ ರೂಪುಗೊಳ್ಳುತ್ತದೆ. ಈ ಅಪಾಯವನ್ನು ಗಮನಿಸಿತ್ತ ನಮ್ಮೆಲ್ಲರೊಳಗೂ ಇರುವ ಜನ್ಮಜಾತ ಶಿಕ್ಷರನ್ನು ಕ್ರಿಯಾಶೀಲಗೊಳಿಸೋಣ.
ಹೆಚ್ಚಿನ ಬರಹಗಳಿಗಾಗಿ
ಗಣೇಶನ ಕೈಯಲ್ಲಿಯ ಲಾಡು
ಹರಿಹರಪುರ ಗ್ರಾಮವೂ, ಲೊವೆಂಥಾಲ್ ಎಂಬ ಪಾದ್ರಿಯೂ..
ಬೇಂದ್ರೆ ಸಂಗೀತ: ಒಂದು ವಿಶ್ಲೇಷಣೆ