ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶುಭ ಶೋಭೆಯ ಉಂಗುರ ಕಾಲುಂಗುರ

ಸುಮಾ ವೀಣಾ

ಶುಭ,ಶೋಭೆಯನ್ನು ತರುವ ಸುಮಂಗಲಿಯರು ಧರಿಸುವ ಅವರ ನಾಯಕತ್ವವನ್ನು ಪ್ರಕ್ಷೇಪಿಸುವ ಮಂಗಳಕರ ಆಭರಣವೆಂದರೆ ಕಾಲುಂಗುರ. ಈ ಕಾಲುಂಗುರಗಳು ಸ್ರೀಧರ್ಮ, ಕರ್ತವ್ಯಗಳನ್ನು ನೆನಪಿಸುವುದರ ಜೊತೆಗೆ ವೈಜ್ಞಾನಿಕವಾಗಿಯೂ ಮಹತ್ವ ಪಡೆದುಕೊಂಡಿವೆ. ಸಂಪ್ರದಾಯ, ಆರೋಗ್ಯ,ಅಲಂಕಾರಗಳ ಬೆಸುಗೆ ಎಂದರೆ ಈ ಕಾಲುಂಗುರಗಳೇ. ಭಾರತೀಯ ಸಂಸ್ಕøತಿಯಲ್ಲಿ ಸುಮಂಗಲಿಯರ ಐದು ಮುತ್ತುಗಳಲ್ಲಿ ಬೆಳ್ಳಿ ಕಾಲುಂಗುರವೂ ಒಂದು. “ಸೋಲಾ ಶೃಂಗಾರ” ಎಂದೇ ಕರಯುವ ಹದಿನಾರು ಶೃಂಗಾರಗಳಲ್ಲಿ ಸಿಂಧೂರ ಧಾರಣೆಯು ಮೊದಲನೆಯದ್ದಾದರೆ ಬೆಳ್ಳಿ ಕಾಲುಂಗುರವು ಐದನೆಯದು. ಮಹಿಳೆಯರ ವೈವಾಹಿಕ ಬದುಕಿನಲ್ಲಿ ಮಾಂಗಲ್ಯದಂತೆ, ಕರಿಮಣಿಯಂತೆ ಕಾಲುಂಗುರವೂ ಮಹತ್ವದ್ದೆ. ಕನ್ನಡಲ್ಲಿ ‘ಕಾಲುಂಗುರ, ಹಿಂದಿಯಲ್ಲಿ ‘ಬಿಚಿಯಾ’, ತಮಿಳಿನಲ್ಲಿ ‘ಮಿಂಚಿ’, ಮಲಯಾಳಂನಲ್ಲಿ ‘ಮಿಂಜಿ’, ಮರಾಠಿಯಲ್ಲಿ ‘ಜೂಡವಿ’, ತೆಲುಗಿನಲ್ಲಿ ‘ಮೆಟ್ಟಿಲು’, ಬಂಗಾಲಿಯಲ್ಲಿ ‘ಅಂಗೋಟ್’ ಎಂದು ಕರಿಸಿಕೊಳ್ಳುವ ಕಾಲುಂಗುರವು 5000 ವರ್ಷಗಳ ಇತಿಹಾಸ ಹೊಂದಿದೆ.

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿದಾಗ ಅವಳು ಎಸೆದ ಕಾಲುಂಗುರವೆ (ಇನ್ನಿತರ ಆಭರಣಗಳೂ ಸೇರಿ) ರಾಮನಿಗೆ ದಾರಿ ಪತ್ತೆ ಮಾಡಲು ಸಹಾಯವಾಯಿತು ಎನ್ನುತ್ತಾರೆ.. ಭಾರತದಲ್ಲಿ ಹಿಂದುಗಳಷ್ಟೆ ಅಲ್ಲದೆ ನಮ್ಮ ದೇಶದಲ್ಲಿ ಮುಸಲ್ಮಾನರು , ಕ್ರೈಸ್ತರೂ ಸಹ ಬೆಳ್ಳಿ ಕಾಲುಂಗುರ ಧರಿಸುವುದು ಸಹಜವಾಗಿದೆ. ನಮ್ಮನ್ನು ನೋಡಿ ವಿದೇಶಿಗರು ಫ್ಯಾಷನ್ನೆಂಬಂತೆ ಕಾಲುಂಗುರ ಧರಿಸುತ್ತಿದ್ದಾರೆ.

ವೇದ, ಆಯುರ್ವೇದ ವೈದ್ಯ ಶಾಸ್ತ್ರಗಳ ಪ್ರಕಾರ ಎರಡೂ ಪಾದಗಳಲ್ಲಿ ಕಾಲುಂಗುರ ಧರಿಸುವುದು ಉತ್ತಮವೆಂದೇ ಹೇಳಿದೆ.ಕಾಲುಂಗುರ ಹೆಸರೇ ಹೇಳುವಂತೆ ಗೋಲಾಕಾರದ ಆಭರಣ. ಬ್ರಹ್ಮಾಂಡದಿಂದ ಬರುವ ಇಚ್ಛಾಲಹರಿಗಳನ್ನು ಗ್ರಹಿಸುವ, ಸ್ತ್ರೀಯರ ಪ್ರಾಣಶಕ್ತಿಯನ್ನು ಜಾಗೃತಗೊಳಿಸುವ ಶಕ್ತಿ ಇದಕ್ಕಿದೆ. ಕಾಲುಂಗುರ ಬೆಳ್ಳಿಯಿಂದ ಮಾಡಲ್ಪಟ್ಟಿರುತ್ತವೆ ಮೂಲತಃ ಬೆಳ್ಳಿಗೆ ಉತ್ತಮ ವಾಹಕತ್ವದ ಗುಣವಿರುವುದನ್ನು ಇಲ್ಲಿ ಗಮನಿಸಬೇಕಾಗುತ್ತದೆ. ಬೆರಳಿಗೆ ಧರಿಸಿದ ಕಾಲುಂಗುರ ಭೂಮಿಯ ಧ್ರುವಶಕ್ತಿಯನ್ನು ಹೀರಿಕೊಂಡು ಆ ಧನಾತ್ಮಕ ಶಕ್ತಿ ದೇಹದಲ್ಲೆಲ್ಲಾ ಸಂಚಾರವಾಗುವಂತೆ ಮಾಡುತ್ತದೆ. ಜೊತೆಗೆ ಬೆಳ್ಳಿಗೆ ಚರ್ಮರೋಗವನ್ನು ತಡೆಯುವ ಶಕ್ತಿಯಿದೆ ಎನ್ನುತ್ತಾರೆ. ಇನ್ನೊಂದು ಕತೆಯ ಪ್ರಕಾರ ದಾಕ್ಷಾಯಿಣಿ ತನ್ನ ಪತಿ ಪರಶಿವನನ್ನು ದಕ್ಷ ಪ್ರಾಜಾಪತಿ ಅವಮಾನಿಸಿದಾಗ ತನ್ನ ಕಾಲಿನ ಬೆರಳನ್ನು ಭೂಮಿಯ ಮೇಲೆ ಉಜ್ಜಿದಾಗ ಉದ್ಭವಿಸಿದ ಬೆಂಕಿಯಲ್ಲಿ ತಾನೂ ದಹಿಸಿಕೊಂಡಳು ಎಂದು ದಕ್ಷಬ್ರಹ್ಮನ ಕತೆಯಲ್ಲಿ ಉಲ್ಲೇಖವಾಗಿದೆ.ಹಾಗಾಗಿ ಬೆಳ್ಳಿಯ ಕಾಲುಂಗುರ ಧರಿಸುವ ಪರಿಪಾಟ ಬಂದಿರಬಹುದೆಂದು ಹೇಳಲಾಗುತ್ತದೆ.

ಹಾಗೆ ಧರಿಸಿದ ಬೆಳ್ಳಿ ಕಾಲುಂಗುರವು ಬಿಗಿಯಾದ ಒತ್ತಡವನ್ನು ಮಾಡುವುದರಿಂದ ನರಗಳು ಪ್ರಚೋದನೆಗೊಂಡು ಆಗುವ ಮೆದುಳಿನ ಕೇಂದ್ರದಲ್ಲಿನ ಪ್ರಕ್ರಿಯೆಯಿಂದ ಮಹಿಳೆಯರಲ್ಲಿ ಜವಾಬ್ದಾರಿ ಮತ್ತು ನೆಮ್ಮದಿಯ ಭಾವ ಮೂಡುತ್ತದೆ. ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತವೆ.

ಸಾಧಾರಣವಾಗಿ ಹೆಬ್ಬೆರಳಿನ ಪಕ್ಕದ ಬೆರಳಿಗೆ ಕಾಲುಂಗುರ ತೊಡುವುದು ವಾಡಿಕೆ. ಕಾಲಿನ ಉದ್ದನೆಯ ಬೆರಳು ಅದೇ ಆಗಿರುತ್ತದೆ ಇದನ್ನು “ಸ್ತ್ರೀ ಜಾಗ್ರತ ಶಕ್ತಿ ತತ್ವಕ್ಕೆ”ಕ್ಕೆ ಹೋಲಿಸುತ್ತಾರೆ ಹಾಗೆ ಆಯುಷ್ಯಕ್ಕೆ ಸಂಬಂಧಿಸಿದ ಬೆರಳು ಎಂದೂ ಹೇಳುತ್ತಾರೆ. ಇದಕ್ಕೂ ಗರ್ಭಾವಸ್ಥೆಯ ಆರೋಗ್ಯಕ್ಕೆ ಸಂಬಂಧಪಟ್ಟಂತೆೆ ಒಂದು ಆಭಿಪ್ರಾಯವಿದೆ. ಆ ಬೆರಳ ಮೇಲೆ ಕಾಲುಂಗುರಗಳ ಒತ್ತಡ ಹಾಗು ಮರ್ದನ ಉಂಟಾದಾಗ ರಕ್ತ ಪರಿಚಲನೆ ಸರಾಗವಾಗಿ ಕಾಲಿನ ಕೆಲವು ನರಗಳು ಉತ್ತೇಜನಗೊಂಡು ಗರ್ಭಕೋಶದ ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಸಹಾಯಕವಾಗುತ್ತದೆ. ಎರಡನೆ ಬೆರಳ ನರ ಗರ್ಭಕೋಶದ ಮೂಲಕ ಹೃದಯಕ್ಕೆ ಜೋಡನೆಯಾಗಿರುತ್ತದೆ. ಋತು ಚಕ್ರದ ಸಮಸ್ಯೆಗಳು, ನಿವಾರಣೆಯಾಗಿ ಸ್ವಾಸ್ಥ್ಯ ಶಿಶು ಜನಿಸಲು ಸಹಾಯಕವಾಗುತ್ತದೆ ಎನ್ನುತ್ತಾರೆ. ಬೆಳ್ಳಿಗೆ ದೇಹದ ಉಷ್ಣತೆಯನ್ನು ತಗ್ಗಿಸಿ ದೇಹವನ್ನು ತಂಪಾಗಿಸುವ ಗುಣವಿದೆ. ಕೋರಿಕೆಗಳು ಮಿತಿ ಮೀರದಂತೆ, ಕೋಪತಾಪಗಳನ್ನು ಹತೋಟಿಯಲ್ಲಿಡಲು, ಕಾಲುಂಗರ ಸಹಕಾರಿ ಎನ್ನಬಹುದು.

ಆಭರಣಗಳೆಂದರೆ ನಮಗೆ ಚಿನ್ನದ, ಬೆಳ್ಳಿಯ ಆಭರಣಗಳು ನೆನಪಿಗೆ ಬರುತ್ತವೆ. ಸೊಂಟದಿಂದ ಕೆಳಗೆ ಚಿನ್ನ ಧರಿಸಬಾರದು ಎಂಬ ಕಾರಣಕ್ಕೆ ಉಡುದಾರ, ಕಾಲುಗೆಜ್ಜೆ, ಕಾಲಂದುಗೆ, ಕಾಲುಂಗುರಗಳು ಬೆಳ್ಳಿಯಿಂದಲೇ ಮಾಡಲ್ಪಟ್ಟಿರುತ್ತವೆ. ಅರಸು ಮನೆತನಗಳವರು ಮಾತ್ರ ಚಿನ್ನದ ಕಾಲುಗೆಜ್ಜೆ, ಕಾಲುಂಗುರ ಧರಿಸಬಹುದೆಂದು ಹೇಳುತ್ತಾರೆ. ಮೈಸೂರಿನ ರಾಣಿ ತ್ರಿಷಿಕಾ ದೇವಿಯೂ ಮದುವೆಯಲ್ಲಿ ಚಿನ್ನ ಹಾಗು ವಜ್ರದ ಹರಳಿನ ಕಾಲುಂಗುರ ಧರಿಸಿದ್ದನ್ನು ಓದಿದ್ದು ನೆನಪಾಗುತ್ತದೆ.

ಕಾಲುಂಗುರವೆಂದರೆ ಗೃಹಸ್ಥಾಶ್ರಮದ ಸಂಕೇತ. ಮದುವೆಯ ಸಂಧರ್ಭದಲ್ಲಿ ಕಾಲುಂಗುರ ತೊಡಿಸುವ ಶಾಸ್ತ್ರವಿದೆ. ಹಿರಿಯ ಸುಮಂಗಲಿಯರು, ಮದುಮಗ, ಸೋದರಮಾವ, ಅತ್ತೆ ಹೀಗೆ ಅವರವರ ಪದ್ದsÀತಿಗೆ ತಕ್ಕಂತೆ ಮದುಮಗಳಿಗೆ ಕಾಲುಂಗುರ ತೊಡಿಸುವುದಿದೆ. ಸಪ್ತಪದಿಯ ಸಮಯದಲ್ಲಿ ಮದುಮಗಳಿಗೆ ಕಾಲುಂಗರ ಹಾಕಿಸಿಯೇ ಸಪ್ತಪದಿ ತುಳಿಸುತ್ತಾರೆ. ಮದುಮಗ ಮದುಮಗಲ ಕಾಲನನ್ನು ಮುಟ್ಟಿ ಕಾಲುಂಗುರ ತೊಡಿಸುವನೆಂದರೆ, ಸಂಗಾತಿಯ ಒಂದು ಸಣ್ಣ ನೋವೂ ಆಗದಹಾಗೆ ನೋಡಿಕೊಳ್ಳುವನೆಂಬ ನಂಬಿಕೆ ಕೆಲವು ಸಂಪ್ರದಾಯಗಳಲ್ಲಿ ಇದೆ. ಇನ್ನೂ ಕೆಲವು ಸಂಪ್ರದಾಯದಲ್ಲಿ ಮದುಮಗ ಕೂಡ ತೋರಬೆರಳಿನಲ್ಲಿ ಒಂದೇ ಸುತ್ತಿನ ಅಂದರೆ ಮಿಂಚು ಎಂಬ ಹೆಸರಿನ ಕಾಲುಂಗುರ ಹಾಕುವುದಿದೆ.
ಕಾಲುಂಗುರದಲ್ಲಿ ಮೂರು,ಐದು,ಒಂಬತ್ತು ಸುತ್ತು ಕಾಲುಂಗುರಗಳಿವೆ. ಹಿರಿಯರು ಒಂದೋದು ಸುತ್ತಿನ ಕಾಲುಂಗುರಕ್ಕೂ ಹಿರಿಯರು ಒಂದೊಂದು ಮಹತ್ವ ಹೇಳಿದ್ದಾರೆ.

  • ಕಾಲುಂಗುರ ಎರಡು ಸುತ್ತಿನದ್ದು ಧರಿಸಿದರೆ “ಹರಿ-ಹರ” ರ ಅನುಗ್ರಹವಾಗುತ್ತದೆ.
  • ಕಾಲುಂಗುರ ಮೂರು ಸುತ್ತಿನದನ್ನು ಧರಿಸಿದರೆ “ತ್ರಿಶಕ್ತಿ” ಹಾಗು ತ್ರಿ ಮೂರ್ತಿಗಳ ಅನುಗ್ರಹವಾಗುತ್ತದೆ.
  • ಕಾಲುಂಗುರ ಐದು ಸುತ್ತಿನದ್ದು ಧರಿಸಿದರೆ “ ಪಂಚಮಮ್ ಕಾರ್ಯ ಸಿದ್ಧಿ” ಅಂದರೆ ಎಲ್ಲಾ ಕಾರ್ಯಗಳು ಜಯವಾಗುತ್ತವೆ.
  • ಕಾಲುಂಗುರ ಏಳು ಸುತ್ತಿನದ್ದು ಧರಿಸಿದರೆ ಸಪ್ತಪದಿಯ ನೆನಪಿನೊಂದಿಗೆ ದಾಂಪತ್ಯ ಜೀವನದಲ್ಲಿ ಸುಖ- ಸಂತಸ,ನೆಮ್ಮದಿ ಉಂಟಾಗುತ್ತದೆ.
  • ಕಾಲುಂಗುರ ಎಂಟು ಸುತ್ತಿನದು ಧರಿಸಿದರೆ “ಅಷ್ಟಲಕ್ಷಮಿ”ಯ ಪರಿಪೂರ್ಣ ಅನುಗ್ರಹವಾಗುತ್ತದೆ.
  • ಕಾಲುಂಗುರ ಒಂಬತ್ತು ಸುತ್ತಿನದ್ದು ಧರಿಸಿದರೆ “ದಾಂಪತ್ಯ” ಜೀವನದಲ್ಲಿ ಆನಂದ ಯಶಸ್ಸು ತುಂಬಿ ಉತ್ತಮ ಸಂತತಿ ಭಾಗ್ಯವುಂಟಾಗುತ್ತದೆ.

#ಕಾಲುಂಗುರ “ ಹತ್ತು ಸುತ್ತಿನದ್ದು” ಧರಿಸಿದರೆ ಶ್ರೀ ಹರಿಯ ದಶಾವತಾರದ ಅನುಗ್ರಹದೊಂದಿಗೆ ಸಂಪತ್ತು ವೃದ್ಧಿಸುತ್ತದೆ ಎಂಬ ನಂಬಿಕೆಯಿದೆ.

ಇವುಗಳನ್ನು ಹೊರತು ಪಡಿಸಿ ವಂಕಿ ಕಾಲುಂಗುರಗಳು ಜಿóಗ್ ಜಾóಗ್ ಕಾಲುಂಗುರಗಳು , ಗೆಜ್ಜೆ, ಹರಳು, ಮಣಿಗಳಿಂದ ಕಲಾತ್ಮಕವಾಗಿ ಮಾಡಲ್ಪಟ್ಟಿರುವ ಕಾಲುಂಗುರಗಳು ಇರುತ್ತವೆ. ‘ಪಿಲ್ಲಿ’, ‘ಮಿಂಚು’, ‘ಏರಿಗೆ’ ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ಜಾನಪದ ತ್ರಿಪದಿಯಲ್ಲಿಯೂ “ಪಿರಿಯಾಪಟ್ಟಣದೋಳೆ ಪಿಲ್ಲಿ ಕಾಲುಂಗುರದೋಳೆ” ಎಂಬ ಮಾತು ಉಲ್ಲೇಖವಾಗಿದೆ. ಪಿಲ್ಲಿಗಳಲ್ಲೂ ಕಿರುಪಿಲ್ಲಿ, ಗೆಜ್ಜೆಪಿಲ್ಲಿ, ಎಲೆ ಪಿಲ್ಲಿ, ನಿಂಬೆ ಹೂವಿನ ಪಿಲ್ಲಿ ಎಂಬೆಲ್ಲಾ ಪ್ರಕಾರಗಳಿವೆ. ಇದು ದಕ್ಷಿಣದ ಕಾಲುಂಗುರಗಳ ವಿಶೇಷತೆಯಾದರೆ, ಉತ್ತರ ಭಾರತದಲ್ಲಿ ಒಂದು ಕಾಲುಂಗುರ ಅದg ಸರಪಳಿ ಇಡಿ ಕಾಲನ್ನು ಸುತ್ತುವರಿವಂತೆ ಧರಿಸುತ್ತಾರೆ, ಇದು ಮೂರು ಬೆರಳನ್ನು ಸೇರಿಸಿಕೊಂಡು, ಐದು ಬೆರಳುಗಳನ್ನು ಸೇರಿಸಿಕೊಂಡು ಮಾಡಲ್ಪಟ್ಟವಾಗಿರುತ್ತವೆ. ಹೆಬ್ಬೆರಳು ಕಿರುಬೆರಳುಗಳನ್ನು ಬಿಟ್ಟು ಮೂರು ಬೆರಳುಗಳನ್ನು ಸೇರಿಸಿ ಮೂರೂ ಉಂಗುರಗಳು ಒಂದೇ ಆಭರಣದಲ್ಲಿ ಬರುವಂತೆ”ತ್ರೀ ಫಿಂಗರ್ ಟೋರಿಂಗ್” ಕೂಡ ಇರುತ್ತದೆ. ಬುಡಕಟ್ಟು ಜನಾಂಗದಲ್ಲಿ ಹೆಬ್ಬೆರಳುಗಳಿಗೆ ಧರಿಸುವುದಿದೆ. ಮದಯವೆಯಾಗದೇ ಇರುವ ಯುವತಿಯರು ನಾಲ್ಕನೆಯ ಬೆರಳಿಗೆ “ಮಾಸೋಳಿ” ಎಂಬ ಹೆಸರಿನ ಕಾಲುಂಗುರ ಧರಿಸುತ್ತಾರೆ. “ಮಾಸೋಳಿ” ಎಂದರೆ ಮತ್ಸ್ಯಾಕಾರದ ಕಾಲುಂಗುರ . ಕೆಲವರು ತುಂಬಾ ಸಿಂಪಲ್ ಎಂದು ಕೂದಲೆಳೆಯಂತಹ ಕಾಲುಂಗುರ ಧರಿಸಿರುತ್ತಾರೆ ಅವರ ಪಾಲಿಗೆ ಕೇವಲ”ಟೋರಿಂಗ್” ಅಷ್ಟೆ. ಇನ್ನು ಕೆಲವರು ಐದೂ ಬೆರಳಿಗೂ ಧರಿಸುತ್ತಾರೆ ಇವರ ಪಾಲಿಗೆ “ಕಾಲುಂಗರ ಅಲ್ಲ ಕಾಲೇ ಉಂಗುರ”. ಸಾಮಾನ್ಯವಾಗಿ ಎರಡು ಸುತ್ತಿನ ಕಾಲುಂಗುರವೇ ಹೆಚ್ಚು ಅದಕ್ಕಿಂತ ಹೆಚ್ಚು ಅಂದರೆ ಎರಡು ಬೆರಳಿಗೆ ಧರಿಸಿರುವವರನ್ನು ನೋಡಬಹುದು. ಕಾಲುಂಗುರಗಳಲ್ಲಿ ಗೆಜ್ಜೆ ಇದ್ದರೆ ಬಹಳ ಚೆಂದ “ಶ್ರೀ ಲಕ್ಷ್ಮಿಯ ಕಾಲುಂಗುರ ಘಲಕೆನಲು ಲೋಲಾಕ್ಷಿ ಮೆಲ್ಲನೆ ನಡೆತಂದಳು” ಎಂಬ ಕೀರ್ತನೆಯ ಸಾಲಿನಂತೆ ಕಾಲುಂಗುರದಲ್ಲಿ ಗೆಜ್ಜೆಗಳು ಆ ಕಾಲದಲ್ಲಿಯೇ ಇರುತ್ತಿದ್ದ ವೆಂದು ತಿಳಿದು ಬರುತ್ತದೆ.

ಇಷ್ಟುಓದಿದ ನಂತರ “ಬೆಳ್ಳಿ ಕಾಲುಂಗುರ ಶ್ರೀಮತಿಗೆ ಸುಂದರ” ಎಂಬ ಗೀತೆ ಎಲ್ಲರಿಗೂ ನೆನಪಾಗಿಯೇ ತೀರುತ್ತದೆ. ಹೌದು ಕಾಲುತುಂಬ ಮೆಹೆಂದಿ, ಉಗುರುಗಳಿಗೆ ಹಾಕಿದ ಗಾಢ ನೇಲ್ ಪಾಲಿಷ್,ಅದನ್ನೂ ಮೀರಿಸುವಂತಹ ಹೊಸ ಹೊಳೆಯುವ ಬೆಳ್ಳಿ ಕಾಲುಂಗುರ ಪಾದದ ಅಂದವನ್ನು ಇಮ್ಮಡಿಗೊಳಿಸುವುದರೊಂದಿಗೆ ಕನ್ಯತ್ವದಿಂದ ಗೃಹಿಣಿಗೆ ಒಪ್ಪಿಗೆಯ ಪ್ರೀತಿಯ ಬಡ್ತಿ ನೀಡಿದ್ದರ ಸಂಕೇತವೂ ಹೌದು. ಮದುವೆಯಾದ ಮೇಲೆ ಧರಿಸುವ ಬೆಳ್ಳಿ ಕಾಲುಂಗುರಗಳು ಸಾಂಪ್ರದಾಯಿಕ, ಫ್ಯಾóಷನ್ ಮತ್ತು ಅಲಂಕಾರಿಕ ಆಭರಣ. ಒಟ್ಟಾರೆಯಾಗಿ ಮದುವೆಯ ಅಗತ್ಯ ಸಾಮಾಗ್ರಿಗಳಲ್ಲಿ ಕಾಲುಂಗುರವಂತೂ ಅವಿಭಾಜ್ಯ ಅಂಗ.

ಸ್ವಲ್ಪ ತಮಾಷೆ ಅನ್ನಿಸಿದರೂ ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸುವಾಗಲೂ ಕಾಲುಂಗುರ ಹಾಕಸಿದ್ದರು ಎಂಬ ಪತ್ರಿಕೆಯ ಸುದ್ದಿ ಕಾಲುಂಗುರಕ್ಕಿರುವ ಮಹತ್ವವನ್ನು ಹೇಳುವುದು. ಕಾಲಕ್ಕೆ ತಕ್ಕಂತೆ ಹೆಣ್ಣು ಮಕ್ಕಳು ತಮ್ಮ ಫ್ಯಾಷನ್ ಟ್ರೆಂಡ್ ಬದಲಾಯಿಸುತ್ತಿರುತ್ತಾರೆ. ಬೆಳ್ಳಿ ಬಿಟ್ಟು ವೈಟ್ ಮೆಟಲ್ ಇಲ್ಲವೆ ಅನ್ಯ ಲೋಹದಿಂದ ಮಾಡಿದ ಕಾಲುಂಗುರಗಳು ಮಾರುಕಟ್ಟೆಯಲ್ಲಿವೆ ಆದರೆ ಇವುಗಳು ಆರೋಗ್ಯಕ್ಕೆ ಮುಳುವಾಗಬಹುದು. ಮುಖ್ಯವಾಗಿ ಇವುಗಳು ಚರ್ಮದ ಸಮಸ್ಯೆ ತಂದೊಡ್ಡುತ್ತವೆ. ಕೆಲವರಿಗೆ ಅಲರ್ಜಿ ಯಾಗಬಹುದು. ಇಲ್ಲವೇ ಕಾಲು ತುಂಬಾ ಕಾಣಬೇಕೆಂದು ಬಿಗಿಯಾಗಿರುವ ಕಾಲುಂಗುರ ತೊಟ್ಟು ನೋವು ಅನುಭವಿಸಬಹುದು. ಫ್ಯಾಷನ್ ಮೋಹ ಆರೋಗ್ಯ ಕಸಿಯಬಾರದಷ್ಟೆ. ಏನೇ ಆಗಲಿ ಮನಸ್ಸಿಗೆ ಒಪ್ಪುವ ಬೆರಳಿಗೆ ಸರಿ ಹೊಂದುವ ಕಾಲುಂಗುರ ಅತ್ಯಂತ ಸೇಫ್. ಸಾಂಪ್ರದಾಯಿಕ, ಅಲಂಕಾರಿಕ ಆಭರಣವಾಗಿ ಸುಮಂಗಲಿಯರ ಅವಿಭಾಜ್ಯ ಅಂಗ ಈ ಬೆಳ್ಳಿ ಕಾಲುಂಗುರ.