ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀ ಗುರುಭ್ಯೋ ನಮಃ

ಸುಮಾ ವೀಣಾ

ಗುರು ಪೂರ್ಣಿಮಾದ ಸಂದರ್ಭಕ್ಕೆ ಭಾರತೀಯ ಪರಂಪರೆಯಲ್ಲಿ ಬರುವ ಗುರುಗಳ ಸ್ಮರಣೆಯಲ್ಲಿ ಈ ಬರೆಹ

ಚಿತ್ರ ಕೃಪೆ : https://www.vedicupasanapeeth.org/importance-of-the-guru/

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈಶ್ರೀ  ಗುರವೇ ನಮಃ” [ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ  ಇಡೀ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ  ಗುರುವೆಂಬ  ಮಹಾನ್ ಶಕ್ತಿಗೆ ನಮಸ್ಕಾರ] ಎಂದು “ಗುರು” ಎಂಬ ಮಹಾನ್ ಚೇತನವನ್ನು ನಾವು ನಿತ್ಯ ಸ್ಮರಣೆ ಮಾಡಲೇಬೇಕು. “ಪ್ರಜ್ವಾಲಿತೋ ಜ್ಞಾನಮಯ ಪ್ರದೀಪಃ”  ಎಂಬ ಈ ಪದಪುಂಜದನ್ವಯ ‘ಗುರು’ ಎಂದರೆ ಸ್ವಯಂಶಕ್ತಿಯಿಂದ ತಾನೂ ಬೆಳಗುವುದರೊಂದಿಗೆ ಇತರ ಹಣತೆಗಳಿಗೂ ಜ್ಞಾನ ಎಂಬ ಕಿರಣವನ್ನು ವರ್ಗಾಯಿಸುವವನು ಎಂದರ್ಥ. ಕಾಲ ಸರಿದಂತೆ ಗುರು-ಶಿಷ್ಯ ಪರಂಪರೆಯ ಓಘವೂ ಸಡಿಲವಾಗಿದೆ. ನಮ್ಮ ಹಿರಿಯರು ಶಿಕ್ಷಕರನ್ನು “ಗುರುವರ್ಯ’, ‘ಆಚಾರ್ಯ’, ‘ಪೂಜ್ಯರೇ’, ‘ಗುರುಗಳೇ’ ಎಂದು ಕರೆಯುತ್ತಿದ್ದರು. ನಾವು ‘ಸರ್’, ‘ಮೇಡಂ’, ‘ಮಿಸ್’, ಎಂದು ಕರೆದು  ಆ ಸ್ಥಾನದ ಘನತೆಯನ್ನು ಹಾಳುಮಾಡುತ್ತಿದ್ದೇವೆ ಎಂದೆನಿಸುತ್ತದೆ. ‘ಮೇಷ್ಟ್ರೇ’, ‘ಟೀಚರ್’ ಎಂದು ಅವರನ್ನು ಸಂಬೋಧಿಸಿದರೆ ಸರಿ ಇರುತ್ತಿತ್ತೇನೋ? ‘ಸರ್’, ‘ಮೇಡಂ’ ಎಂಬ ಸಂಬೋಧನೆಗಳು ಇಂದಿಗೆ ತನ್ನ ಮೂಲವನ್ನು ಕಳೆದುಕೊಂಡು ಅರ್ಥವಿಲ್ಲದೆ ಸಾರ್ವತ್ರಿಕವಾಗಿ ಬಳಕೆಯಾಗುತ್ತಿದೆ ಎನ್ನಿಸುತ್ತದೆ.

ರಾಮಾಯಣದಲ್ಲಿ ವಿಶ್ವಾಮಿತ್ರರು ಕೇವಲ ಸಂಜ್ಞೆಗಳ ಮೂಲಕ ರಾಮನಿಗೆ ನಿರ್ದೇಶನ ಕೊಡುತ್ತಿದ್ದರು ಆತ ಪಾಲಿಸುತ್ತಿದ್ದ. ಮಹಾಭಾರತದ ಕಾಲಕ್ಕೆ ಸಂಜ್ಞಾಸೂಚನೆ ಹೊರಟುಹೋಗಿ ಕೃಷ್ಣ ಅರ್ಜುನನಿಗೆ ಯುದ್ಧಭೂಮಿಯಲ್ಲಿ ಉಪದೇಶ ನೀಡಬೇಕಾಯಿತು. ಅದನ್ನೇ ನಾವು ‘ಗೀತೋಪದೇಶ’ ಎಂದು ಇಂದಿಗೂ ಅನುಸಂಧಾನ ಮಾಡುತ್ತಿರುವುದು. ಕಾಲಸರಿದಂತೆ ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಾಚಾರ್ಯ ತಮ್ಮ ಜೊತೆಜೊತೆಯಲ್ಲಿಯೇ ಶಿಷ್ಯವೃಂದವನ್ನು ಮುನ್ನಡೆಸಿದರು. ಬುದ್ಧ ಅಂಥ ಅಂಗುಲಿಮಾಲನನ್ನೇ ಸಾಧುವಾಗಿ ಬದಲಾಯಿಸಿದ. ಆದರೆ ಪ್ರಸ್ತುತ ದಿನಮಾನಗಳ ಬಗ್ಗೆ, ಇಂದಿನ ಗುರುಗಳ ಬಗ್ಗೆ  ಶಿಷ್ಯರ ಕುರಿತು ಏನು ಹೇಳುವುದು? . ಹಿಂದೆ ಕವಿಗಳಿಗೆ ರಾಜಾಶ್ರಯ ಕೊಡುವ  ಸಂದರ್ಭದಲ್ಲಿ, ರಾಜರಿಗೆ ಬಿರುದಾವಳಿಗಳನ್ನು ನೀಡುವ ಸಂದರ್ಭದಲ್ಲಿ ‘ರಾಜಗುರು’, ‘ಕುಲಗುರು’, ‘ನಾಟ್ಯಗುರು’, ‘ವಿದ್ಯಾಗುರು’ ಎಂಬ ಪದಗಳನ್ನು ಬಳಸುತ್ತಿದ್ದರು. ಆದರೆ ಇಂದು ‘ಕೋಚ್ಗಳು’, ‘ಅಡ್ವೈಸರ್ಗಳು’, ‘ಮೆಂಟರ್ಸ್’ ಎಂಬ ಪದಗಳು ಹೆಚ್ಚು ಪ್ರಾಚುರ್ಯ ಪಡೆದಿವೆ. ಹಾಗೆ  ಹಿಂದೆ  ವಿದ್ವಾಂಸರ ಗುರು ಪರಂಪರೆಯನ್ನು ಕೇಳುವ ಹೇಳುವ ಸಂಪ್ರದಾಯವಿತ್ತು. ಇಂದಿಗೆ ನಾವು ಕಲಿತ ವಿದ್ಯಾ ಸಂಸ್ಥೆ, ವಿಶ್ವವಿದ್ಯಾಲಯಗಳ ಹೆಸರನ್ನು ಉಲ್ಲೇಖ ಮಾಡುತ್ತಿದ್ದೇವೆ.

ಇಂದಿಗೆ ನಮ್ಮಲ್ಲಿ ‘ಆಚಾರ್ಯಮುಖೇನ’, ‘ಗುರುಮುಖೇನ’ ಎಂಬ ಮಾತುಗಳು ಜನಜನಿತ ಯಾವುದೇ ಪೂಜೆ ಹೋಮ ಹವನಗಳಲ್ಲಿ ಇಂಥದ್ದೊಂದು ಮಾತನ್ನು ಮಂತ್ರದ ಒಂದೊಂದು ಭಾಗವಾಗಿ ಕೇಳುತ್ತೇವೆ. ಅಂದರೆ ದೇವರನ್ನೇ ಭೇಟಿ ಮಾಡಿಸುವ ಮಧ್ಯವರ್ತಿ ಎಂದರೆ ಸಾಕ್ಷಾತ್ ಗುರುಗಳು ಮಾತ್ರ ಎಂದು. ಇಲ್ಲಿ ಜ್ಞಾನ ಎಂಬ ಶಿಖರವನ್ನು ಆ ಭಗವಂತನಿಗೆ ಹೋಲಿಸಿದರೆ ಆ ಜ್ಞಾನವೆಂಬ ಶಿಖರದ ಬಳಿ ನಮಗೆ ಹೋಗಲು ದಿಗ್ದರ್ಶನ ಮಾಡುವುದು ಗುರುವೇ ಹೌದಲ್ವ! ಹಾಗಾಗಿ ನಮ್ಮ ಹಿರಿಯರು ಗುರುವನ್ನು ‘ಆಚಾರ್ಯದೇವೋಭವ’ ಎಂದು ಉಲ್ಲೇಖಿಸಿರುವುದು. “ಹರ ಮುನಿದರೂ ಗುರು ಕಾಯ್ವನ್” ಎಂಬ ಉಕ್ತಿಯೂ ಗುರುವಿನಲ್ಲಿಯೇ ಭಗವಂತ ವಾಸವಾಗಿರುತ್ತಾನೆ ಎಂಬ ಮಾತನ್ನು ಸಾಕ್ಷೀಕರಿಸುತ್ತದೆ.

‘ಗುರು’ ಎಂದರೆ ಕೇವಲ ಅಕ್ಷರಾಭ್ಯಾಸ ಮಾಡಿಸಿದವರು ಎಂಬ ಸೀಮಿತವ್ಯಾಪ್ತಿಯಲ್ಲಿ ಅರ್ಥೈಸಬೇಕಿಲ್ಲ, ವಿಶಾಲಾರ್ಥದಲ್ಲಿಯೂ ಗುರುವನ್ನು ಅರ್ಥೈಸಿಕೊಳ್ಳಬೇಕು. ಇದಕ್ಕೆ ಪೂರಕವೆಂಬಂತೆ “ಪರಿಪಕ್ವವಾದ ಸಂಸ್ಕಾರವುಳ್ಳ ನರನಿಗೆ ಗುರು ಯಾವ  ರೂಪದಿಂದಾದರೂ ಬರಬಹುದು” ಎಂದ ಕುವೆಂಪುರವರ ಮಾತನ್ನು ನೆನಪಿಸಿಕೊಳ್ಳಬಹುದು. ಇದಕ್ಕೆ ಪುಷ್ಠಿ ಎಂಬಂತೆ “ಗುರುವಿನೊಡನೆ ದೇವರೆಡೆಗೆ” ಎಂಬ ಕುವೆಂಪು ಅವರ ಕೃತಿಯೇ ಇದೆ.

ಗುರುಶಿಷ್ಯ’ ಪರಂಪರೆ ಎಂಬ ಪರಿಭಾಷೆಗೆ ನಮ್ಮಲ್ಲಿ ವಿಶೇಷವಾದ ಘನತೆಯಿದೆ. ‘ಜಗತ್ತನ್ನೇ ಗೆದ್ದ ವೀರ” ಎಂಬ  ಪ್ರಾಪಂಚಿಕ ಇತಿಹಾಸಕಾರರು ಉಲ್ಲೇಖ ಮಾಡುವ  ಅಲೆಗ್ಸಾಂಡರ್, ಈತನ ಗುರು  ಅರಿಸ್ಟಾಟಲ್. ಭಾರತೀಯ ಪರಂಪರೆ ಭಾರತದ ರಾಜಕೀಯ ಇತಿಹಾಸ ಓದಿದವರಿಗೆ ಚಾಣಾಕ್ಯನಂಥ ಚಾಣಾಕ್ಷಗುರು ಚಂದ್ರಗುಪ್ತ ಮೌರ್ಯನಂಥ ಶಿಷ್ಯನ ಬಗ್ಗೆ ಎಲ್ಲರಿಗೂ  ತಿಳಿದಿರುವಂಥದ್ದೆ. ಕರ್ನಾಟಕ ಇತಿಹಾಸ ಅಧ್ಯಯನ ಮಾಡಿದವರಿಗೆ ಹೊಯ್ಸಳ ವಂಶದ ಮೂಲ ಪುರುಷನ ಪರಿಚಯವಿದ್ದೇ ಇರುತ್ತದೆ. ಶಿಷ್ಯನಿಗೆ ಹುಲಿಯೊಂದರ ವಿರುದ್ದ ಹೋರಾಟ ಮಾಡು [ಪೊಯ್+ಸಳ> ಹೊಯ್+ಸಳ= ಹೊಯ್ಸಳ]  ಎಂದು  ಆದೇಶ ಮಾಡಿದ ಜೈನಯತಿ ಸುದತ್ತಾಚಾರ್ಯರಿಗೆ ಕನ್ನಡಿಗರು ಎಂದೆಂದಿಗೂ ಋಣಿಗಳೇ. ವಿಶ್ವಪರಂಪರೆಯ ಪಟ್ಟಿಯಲ್ಲಿ ಹೊಯ್ಸಳ ವಂಶಸ್ಥರಿಂದ ನಿರ್ಮಾಣವಾದ ದೇವಾಲಯಗಳು ಸೇರಿವೆ ಎಂದಾದರೆ ಹೊಯ್ಸಳ ದೊರೆ ವಿಷ್ಣುವರ್ಧನನ  ಧರ್ಮಸಮಯನ್ವಯತೆ ಸ್ಥಾಪಿಸಿದ  ಎಂದಾದರೆ, ಅಲ್ಲಿ ಸುದತ್ತಾಚಾರ್ಯರ, ರಾಮಾನುಜಾಚಾರ್ಯರ ಕೃಪೆ ಇದೆ  ಎಂದೇ ತಿಳಿಯಬೇಕು.

ಚಿತ್ರ ಕೃಪೆ : https://hinduismwayoflife.com/2018/03/23/what-is-the-difference-between-a-guru-satguru-and-acharya/

 “ಎಂದೂ ಮರೆಯಲಾಗದ ಸಾಮ್ರಾಜ್ಯ” ಎಂದು ನಾಮಾಂಕಿತವಾಗಿರುವ ವಿಜಯನಗರ ಸಾಮ್ರಾಜ್ಯಕ್ಕೆ ಗುರು ವಿದ್ಯಾರಣ್ಯರ ಪ್ರೇರಣೆ ಇದ್ದೇ ಇತ್ತು. ಇಂದಿಗೆ ವೈಭವವನ್ನು ಕಳೆದುಕೊಂಡು “ಹಂಪೆ ಹಾಳು ಕೊಂಪೆ” ಎಂದು ಕರೆಸಿಕೊಂಡರೂ ಇತಿಹಾಸದ  ಪುಟದಲ್ಲಿ ಶ್ರೇಷ್ಠವೆಂದು ವರ್ಣಿಸಿರುವ ವಿಜಯನಗರ ಸಾಮ್ರಾಜ್ಯಕ್ಕೆ ಅಡಿಗಲ್ಲು ಗುರು ವಿದ್ಯಾರಣ್ಯರ ಆಶೀರ್ವಾದವೇ.

ಕನ್ನಡದ ‘ಆದಿಕವಿ’ ಎಂದು ಕರೆಸಿಕೊಂಡಿರುವ ಪಂಪನ ಹಿಂದೆ ಅವನ ಗುರು ದೇವೇಂದ್ರ ಮುನಿಗಳ ಮಾರ್ಗದರ್ಶನ ಇದ್ದೇ ಇತ್ತು. ಈತ ವ್ಯಾಸನನ್ನು ಅನುಕರಿಸಿ “ಪಂಪಭಾರತ”ವನ್ನು ಬರೆದನು, ಗದುಗಿನ ನಾರಣಪ್ಪರಾಗಿದ್ದ ವ್ಯಕ್ತಿ ಗುರು ವ್ಯಾಸರಾಯರ ಪ್ರಭಾವಕ್ಕೆ ಒಳಗಾಗಿ ಅವರ ಮಾನಸಿಕಪುತ್ರ ನಾನು ಹಾಗಾಗಿ ನಾನು ‘ಕುಮಾರವ್ಯಾಸ’ ಎಂದು ಅವನೇ ಕರೆದುಕೊಂಡಿದ್ದಾನೆ. ಗುರುವಿನ ಕಾರುಣ್ಯಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲ. ಕಲಿಕಾ ವಯಸ್ಸು ಮೀರಿದ್ದರೂ ವಿದ್ಯಾವಾಂಛೆಯಿಂದ ಕವಿ ರನ್ನ ಅಜಿತಸೇನಾಚಾರ್ಯರನ್ನು ಭೇಟಿ ಮಾಡಿದಾಗ ಅವನಿಗೆ ಅವರ ಶಿಷ್ಯವೃತ್ತಿ ದೊರೆತು ಅವರ ಒಲುಮೆಯಿಂದ ಸಾರಸ್ವತ ಭಂಡಾರದ ಮುದ್ರೆಯೊಡೆದಂಥ ಕೃತಿಗಳನ್ನು ರಚಿಸಿದ. ದಾಸ ಸಾಹಿತ್ಯದ ಅಶ್ವಿನಿದೇವತೆಗಳು ಎಂದು ಕರೆಸಿಕೊಂಡಿರುವ ಪುರಂದರ  ಹಾಗು ಕನಕದಾಸ ಇಬ್ಬರೂ ಗುರು ವ್ಯಾಸರಲ್ಲಿಯೇ ಶಿಷ್ಯವೃತ್ತಿ ಮಾಡಿದವರು. ಗುರುಗೋವಿಂದಭಟ್ಟ ಹಾಗು ಸಂತ ಶಿಶುನಾಳಶರೀಫರ ಅವಿನಾಭಾವ ಸಂಬಂಧಕ್ಕೆ ಶರೀಫರ ಕೀರ್ತನೆಗಳೇ ಸಾಕ್ಷಿಯಾಗಿವೆ. ಪಂಪನನ್ನು ‘ನಾಡೋಜ’ ಎಂಬ ಹೆಸರಿನಿಂದ ಕರೆಯುತ್ತೇವೆ. ‘ಓಜ’  ಎಂದರೆ ಗುರು ಓಜ>ಓವಜ>ಉವಜ್ಜಾಯ>ಉಪಾಧ್ಯಾಯ ಆಗಿದೆ. ಹಂಪೆ ಕನ್ನಡ ವಿಶ್ವವಿದ್ಯಾನಿಲಯ ಕೊಡಮಾಡುತ್ತಿರುವ  ಪ್ರಶಸ್ತಿ ‘ನಾಡೋಜ’ ಪಂಪನ ಗುರು ಪರಂಪರೆಯ  ದ್ಯೋತಕ  ಎಂಬುದನ್ನು ನಾವು ತಿಳಿಯಬೇಕು.

ತಂದೆಗೂ ಗುರುವಿಗೂ ಅಂತರವುಂಟು ತಂದೆ ತೋರುವನು ಶ್ರೀಗುರುವ ಶ್ರೀಗುರು ಬಂಧನವ ಕಳೆವ ಸರ್ವಜ್ಞ” ಎಂದು ಗುರುವಿನ ಮಹತ್ವವನ್ನು ತನ್ನ ತ್ರಿಪದಿಯಲ್ಲಿ ಉಲ್ಲೇಖ ಮಾಡಿದ್ದಾನೆ. ಶ್ರೇಷ್ಠ ಗುರುವಿಗೆ ಅಂತಹ ಸ್ವಯಂ ಪ್ರಕಾಶತ್ವದ ಗುಣವಿದ್ದೇ ಇರುತ್ತದೆ. ರಾಮಕೃಷ್ಣಪರಮಹಂಸ, ಸ್ವಾಮಿ ವಿವೇಕಾನಂದರನ್ನು ಇಲ್ಲಿ ಸ್ಮರಿಸಲೇಬೇಕು. ಭಾರತಮಾತೆಯ ಶ್ರೇಷ್ಠತೆಯನ್ನು ಜಗತ್ತಿನಾದ್ಯಂತ ಪಸರಿಸಿದ ಸಂತ. ಇವರ ಶಿಷ್ಯೆ ಸಹೋದರಿ ನಿವೇದಿತಾ. ಐರ್ಲೆಂಡಿನ  ಪುಷ್ಪವಾಗಿ ಭಾರತಮಾತೆಗೆ ಸಮರ್ಪಿತವಾದವಳು. ಶ್ರೀ ರಾಮಕೃಷ್ಣರ ನೇರ ಶಿಷ್ಯ ಸ್ವಾಮಿ ಶಿವಾನಂದ, ಇವರಿಂದ ಧೀಕ್ಷೆ ಪಡೆದವರು ಕುವೆಂಪು ಇವರ ಶಿಷ್ಯ ದೇ.ಜ.ಗೌ ಎಂಥ ಗುರು ಪರಂಪರೆ ಅಲ್ಲವೇ?  ಕುವೆಂಪು ತಮ್ಮ ಅಧ್ಯಾತ್ಮಗುರುವಿನ ಫೋಟೊವನ್ನು ಕಡೆಯವರೆಗೂ ಪೂಜಿಸುತ್ತಿದ್ದರು ಎಂಬ ಮಾಹಿತಿ ತೇಜಸ್ವಿಯವರ ‘ಅಣ್ಣನ ನೆನಪು’ ಕೃತಿಯಿಂದ ತಿಳಿದುಬರುತ್ತದೆ. ಕುವೆಂಪು ಅವರಿಗೆ ಜೇಮ್ಸ್ಕಸಿನ್ಸ್ರಂಥ  ಗುರು ದೊರೆತದ್ದರಿಂದಲೇ ಮೊದಲಿಗೆ  ಆಂಗ್ಲಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದರೂ ನಂತರ ಮಾತೃಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿ ‘ಹೊಸಗನ್ನಡ ಸಾಹಿತ್ಯದ ದಿಗ್ಗಜ’ ಎಂದು ಕರೆಸಿಕೊಂಡಿರುವುದು.

ಚಿತ್ರ ಕೃಪೆ : http://freenewwallpapersdownload.blogspot.com/2017/01/ramakrishna-jayanti-images.html

ಹಳಗನ್ನಡಕವಿಗಳು ತಮ್ಮ ಕಾವ್ಯಾರಂಭದಲ್ಲಿ ಗುರುಸ್ತುತಿ ಎಂಬ ಪದ್ಯಗಳನ್ನೇ ಬರೆದು ತಮ್ಮ ಗುರುಗಳನ್ನು ಸ್ಮರಿಸುತ್ತಿದ್ದರು. ಆಧುನಿಕ ಕನ್ನಡದ ಮೇರುಮಹಾಕಾವ್ಯ “ಶ್ರೀರಾಮಾಯಣದರ್ಶನಂ” ನಲ್ಲಿ ಕೂಡ ಕುವೆಂಪುರವರು ಅವರ ವಿದ್ಯಾಗುರು ಶ್ರೀ ವೆಂಕಣಯ್ಯನವರಿಗೆ ಸಮರ್ಪಣೆ ಮಾಡಿದ್ದಾರೆ. ಅಲ್ಲದೆ ಪರಂಪರೆಯ ಕವಿಗಳಿಗೆ ಕುವೆಂಪು  “ಶ್ರೀ ರಾಮಾಯಣದರ್ಶನಂ” ಕಾವ್ಯದಲ್ಲಿ “ಹೋಮರಗೆ, ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ ನಾರಣಪ್ಪನಿಗೆ ಪಂಪನಿಗೆ ಋಷಿವ್ಯಾಸ ಭಾಸಭವಭೂತಿ ಮೇಣ್ ಕಾಳಿದಾಸಾದ್ಯರಿಗೆ ಮುಡಿಬಾಗಿ ಮಣಿದು ಕೈಜೋಡಿಸುವೆನಾಂ” ಎಂದು  ಹಿರಿಯರನ್ನು  ನೆನಪಿಸಿಕೊಂಡು ಗೌರವಸೂಚಿಸಿದ್ದಾರೆ. ಎಂಥ ಕೃತಜ್ಞತಾಭಾವ ಅಲ್ವೇ!

ಯಾವುದೇ ಪ್ರತಿಫಲದ ಅಪೇಕ್ಷೆ ಇಲ್ಲದೆ ಮನುಷ್ಯನನ್ನು  ಪ್ರೀತಿಸುವ ಜೀವಗಳೆರಡು. ಮೊದಲನೆಯದ್ದು ಅಮ್ಮ, ಎರಡನೆಯದ್ದು ಗುರು. ಅಂತ ಗುರು ಎಂದರೆ ಕೇವಲ ಶಿಕ್ಷೆ ನೀಡುವ ಶಿಕ್ಷಕನಲ್ಲ. ಪೋಷಕನಾಗಿ ಹಿತೈಷಿಯಾಗಿ, ಸ್ನೇಹಿತನಾಗಿ ತನ್ನ ವಿದ್ಯಾರ್ಥಿಯ ಏಳಿಗೆಗಾಗಿ ತುಂಬು ಹೃದಯದ ಹಾರೈಕೆಗಳನ್ನು ನೀಡುತ್ತಾನೆ. ಈ ಸಂದರ್ಭದಲ್ಲಿ ಮಗುವನ್ನುಕಳೆದುಕೊಂಡ ದುಃಖವಿದ್ದರೂ ಶಿಷ್ಯವೃಂದದ ಹೊಟ್ಟೆ ತಣಿಸಿದ ಶ್ರೀಗುರು ತ.ಸು.ಶಾಮರಾಯರನ್ನು ನೆನಪುಮಾಡಿಕೊಳ್ಳಲೇಬೇಕು. ಇವರ ಶಿಷ್ಯ ಡಾ. ಜಿ .ಎಸ್.  ಶಿವರುದ್ರಪ್ಪ   ‘ಪ್ರೀತಿಯಕವಿ’, ‘ಸಮನ್ವಯಕವಿ’, ‘ರಾಷ್ಟ್ರಕವಿ’ ಎಂದೇ ನಾಮಾಂಕಿತರು ಎಂಥ ಗುರು ಶಿಷ್ಯಸಂಬಂಧ ವ್ಹಾ!

ಏಕಲವ್ಯ ದ್ರೋಣಾಚಾರ್ಯರಂಥ ಮಾನಸಿಕ ಗುರುವಿಗೆ ಹೆಬ್ಬೆರಳನ್ನು ದ​ಕ್ಷಿಣೆಯಾಗಿ ಕೊಡುವನು.  ಇದು ಸಾರ್ವಕಾಲಿಕ ಗುರು-ಶಿಷ್ಯರ ಸಂಬಂಧದ ಮೌಲ್ಯವನ್ನು ಶೃತಪಡಿಸುತ್ತದೆ. ಗುರು ಬಸವಣ್ಣನವರ ಸಾನ್ನಿಧ್ಯ ತೊರೆದು ಅಕ್ಕಮಹಾದೇವಿ  ಶ್ರೀಶೈಲಕ್ಕೆ ತೆರಳುವಾಗ “ ನಿಮ್ಮ ಮಂಡೆಗೆ ಹೂವ  ತರುವರನಲ್ಲದೆ ಹುಲ್ಲ ತಾರೆನು” ಎಂದು ಹೇಳುತ್ತಾಳೆ. ಈಕೆಯ ಭಕ್ತಿಗೆ ಬೆಲೆಕಟ್ಟಲು ಸಾಧ್ಯವಿದೆಯೇ? ಶ್ರೀ ರಾಮ, ಶ್ರೀಕೃಷ್ಣರು ಸ್ವಯಂ ದೈವಾಂಶಸಂಭೂತರಾಗಿದ್ದವರು ಬೇರೆಯವರಿಂದ ಕಲಿಯುವುದು ಏನೂ ಇರದಿದ್ದರೂ ರಾಮ, ವಿಶ್ವಾಮಿತ್ರರನ್ನು, ಕೃಷ್ಣ ಸಾಂದೀಪನಿ ಮುನಿಗಳನ್ನು ಆಶ್ರಯಿಸುತ್ತಾರೆ. ಇಂದಿಗೂ ದುಷ್ಟ ಪಾತ್ರಗಳಿಗೆ  ಪರ್ಯಾಯವಾಗಿ ನಿಂತಿರುವ ದುರ್ಯೋಧನ ಸತ್ಯಂತಪ ಮುನಿಗಳ ಸಲಹೆ ಪಡೆಯುತ್ತಾನೆ. ಅಷ್ಟೇ ಏಕೆ ದೈತ್ಯರೂ ಕೂಡ ಶುಕ್ರಾಚಾರ್ಯರನ್ನು ತಮ್ಮ ಗುರು ಎಂದು ಸ್ವೀಕಾರ ಮಾಡುತ್ತಾರೆ. ಹರಿಶ್ಚಂದ್ರ “ ಸತ್ಯಹರಿಶ್ಚಂದ್ರ” ಎಂಬ ಅನ್ವರ್ಥನಾಮ ಪಡೆದಿದ್ದು  ತಿಳಿದೇ ಇದೆ ಈತ ವಸಿಷ್ಠರ ಶಿಷ್ಯ.

ಹರಿಹರ-ರಾಘವಾಂಕರು ಸೋದರ ಸಂಬಂಧಿಗಳಾದರೂ ಗುರು-ಶಿಷ್ಯರು. ಇವತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ಶಿವಾಜಿ ತನ್ನ ಪಾಲಿನ ಗೈಡ್, ಫಿಲಾಸಫರ್ ಆಗಿದ್ದ ಗುರುವಿನ ಮಾತಿಗೆ ತನ್ನ ಸಾಮ್ರಾಜ್ಯವನ್ನೇ ತ್ಯಜಿಸಲು ಸಿದ್ಧನಿರುತ್ತಾನೆ. ಗುರುವಿನ ಕುರಿತ ಶಿವಾಜಿಯ ಭಕ್ತಿಭಾವ ಸರ್ವಾನುಕರಣೀಯ.

ಗುರುವಿನ ಉಪದೇಶವೆಂದರೆ ಅದು ಅಮೂಲ್ಯವಸ್ತುವಿದ್ದಂತೆ. ಅದು ತಿಳಿವಳಿಕೆ ಜನರ ಒಳ-ಹೊರಗಣ ಕಳೆ-ಕೊಳೆಯನ್ನು ತೆಗೆದು ಜ್ಞಾನ ಎಂಬ ಬೆಳೆ ಮಾತ್ರವೇ ಆವಿರ್ಭವಿಸುವಂತೆ ಮಾಡುತ್ತದೆ. ಅಕ್ಷರಗಳಿಗೆ ಅರ್ಥಬರುವುದು ವಸ್ತುವೊಂದು ಆ ಅಕ್ಷರಗಳಿಗೆ ಅನ್ವಯಿಸಿಕೊಂಡಾಗ ಶೂನ್ಯಕ್ಕೆ ಮೌಲ್ಯ ಒದಗುವುದು ಅಂಕೆಗಳೊಂದಿಗೆ  ಅವು ಅನ್ವಯವಾದಾಗ ರೇಖೆಗಳಿಗೆ ಮಾನ್ಯತೆ ಬರುವುದು ಆ ರೇಖೆಗಳಿಂದ ಸುಂದರ ಆಕೃತಿ ನಿರ್ಮಾಣವಾದ ನಂತರ ಹಾಗೆ ಬಾಳಿಗೆ  ಗೌರವ ಬರುವುದು ಗುರುವಿನ ಮಾರ್ಗದರ್ಶನದಿಂದ. “ಜ್ಞಾನಿ ಸಂಸಾರದೊಳ್ ತಾನಿರಲು ತಿಳಿದಿಹನು, ಭಾನು ಮೋಡದಲಿ ಹೊಳೆವಂಥ ಸದಾ ಮೂಲ ಸ್ಥಾನದೊಳಿಹನು ಸರ್ವಜ್ಞ”.  ಎಂಬ ಮಾತಿನಂತೆ  ಸದಾ  ಪ್ರಕಾಶಿಸುವ ಗುರು ಅವನ ಒಲುಮೆಯಿಂದ ನಮ್ಮ ಬಾಳುವೆಗೆ ಗಮನಾರ್ಹತೆ, ಗಹನತೆ, ಗಾಂಭೀರ್ಯ, ಗೌರವಗಳು ತುಡುಕಿ ಬರುವುವು.  

“ಗುರುವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಂ  ನಿಧಯೇ ಸರ್ವವಿದ್ಯಾನಾಂ” ಎಂಬಂತೆ ಲೋಕಕ್ಕೆ ವಂದ್ಯನಾದ  ಎಲ್ಲಾ ಭವರೋಗಗಳನ್ನು ನೀಗಿಸಿ ವಿದ್ಯೆ ಎಂಬ ಬೆಳಕನ್ನು ಪ್ರಜ್ವಲಿಸುವಂತೆ ಮಾಡುವ ಗುರುವಿಗೆ  ನಾವು ಯಾವಾಗಲೂ ವಂದ್ಯರಾಗಿರಬೇಕು.