ಇತ್ತೀಚಿನ ಬರಹಗಳು: ಸುಮತಿ ನಿರಂಜನ (ಎಲ್ಲವನ್ನು ಓದಿ)
- ಸಂಕ್ರಾಂತಿ - ಜನವರಿ 13, 2025
ಅಚ್ಚು ಸಕ್ಕರೆ ಹಬ್ಬ
ಕಚ್ಚಿ ಕಬ್ಬಿನ ಸಿಹಿ
ಇಳಿದು ನಾಲಿಗೆಗೆ
ಒಳಿತು ಮಾತು ಎಳ್ಳು
ಬೆಲ್ಲ ನಗೆ ಮನೆಮನೆಗೆ
ಬೀರುವ ಮೊಗ್ಗು ಮಲ್ಲಿಗೆ
ಕುಚ್ಚು ಜಡೆ ಗಚ್ಚು ಜರಿ
ಲಂಗಗಳ ಕನ್ನೆಯರ ಹಬ್ಬ
ರಂಗೋಲೆ ಹೊಂಬಾಳೆ
ಹಳದಿ ಕುಂಕುಮ ಹಬ್ಬ
ಹೊಸ ದಿಕ್ಕು ಹೊಸ ಹಾದಿ
ಹೆದ್ದಾರಿ ನೇಸರಗೆ
ಶುಭಯಾತ್ರೆ ಕೋರುವ
ಮೈ ಚಳಿಯ ಕೊಡವಿ
ಮನದ ಮಬ್ಬನು ಹರಿಸಿ
ಹೊಸ ಮನೋರಥಕೆ
ಹೊಂಬಿಸಿಲ ಆರತಿಯ
ನೆತ್ತಲು ಹುಟ್ಟಿದ ಹಬ್ಬ
ಹೊಸ ದವಸ ಹೊಸ ಧಾನ್ಯ
ಹರುಷ ಹೂರಣದ ಹಬ್ಬ
ಬಣ್ಣ ಬಣ್ಣದ ಗಾಳಿಪಟ
ಹಾರುತ್ತ ಏರುತ್ತ ಇರವನ್ನೆ
ಮರೆತು ಮೆರೆವ ಹಬ್ಬ
ನೆಲದ ಅಂಟನು ಕಳಚಿ
ಹೊಂಗನಸ ನೇಯುವ
ಮೇಲಿಂದ ಭುವಿ ಹೇಗೆ
ಕಾಣುವುದೋ ನೋಡಿ
ಹೊಸ ಅಯನ ಆಯಾಮ
ಆಯಣವ ಬಿಳಿ ಮುಗಿಲ
ಹಾಳೆಯಲಿ ಬರೆವ ಹಬ್ಬ
ಸೂತ್ರ ಹಿಡಿದವನಾರೋ
ಕಾಣನಾದರು ಬಿಡನು ಕೈ
ಯೆಂದು ನಂಬಿ ನಡೆವ ಹಬ್ಬ…
ಸಂಕ್ರಮಣ ಹಬ್ಬದ ಎಲ್ಲ ಕೋನಗಳನ್ನೂ ಸ್ಪೃಶಿಸಿ ಸಾಗುವ ಪದಸಾಂದ್ರತೆಯುಳ್ಳ ಕವನ.
ಧನ್ಯವಾದಗಳು ಸರ್
Very nice 👌 Excellent madam
Thank you Ashrita
ಧನ್ಯವಾದಗಳು ಸರ್
ತುಂಬ ಸುಂದರವಾಗಿದೆ. ಬಿಳಿ ಮುಗಿಲ ಹಾಳೆಯಲಿ ಬರೆದಂತಿದೆ. ಸೂತ್ರಧಾರನ ಅನುಗ್ರಹವಿರಲಿ. ಶುಭಾಶಯಗಳು.
ಎ ಎಸ್ ಎನ್ ಹೆಬ್ಬಾರ್ ಕುಂದಾಪುರ
ನಿಮ್ಮ ಮೆಚ್ಚುಗೆಗೆ ಅನಂತ ಧನ್ಯವಾದಗಳು
ಸುಮತಿ ನಿರಂಜನ್ ಅವರು ಶಿಕ್ಷಕಿ, ನಟಿ, ಸಂಪಾದಕಿ ಎಂದೆಲ್ಲಾ ಪರಿಚಯಿಸಿದ್ದು ಕವಿ ಎಂತಲೂ ಅಗತ್ಯವಾಗಿ ಬರೆಯ ಬಹುದಾಗಿದೆ. ಸುಧೀರ್ಘ ಕಾಲದಿಂದ ಇವರ ನವನವೀನ ಕವಿತೆಗಳನ್ನು ಆಸ್ವಾದಿಸಿದವರಲ್ಲಿ ನಾನೂ ಒಬ್ಬ.
ಎಳ್ಳು ಬೆಲ್ಲ ಬೀರಿದಷ್ಟೇ ಸವಿಯಾಗಿದೆ ಈ ಕವನ.
ನಿಮ್ಮ ಅಭಿಪ್ರಾಯ ಓದಿ ಇನ್ನಷ್ಟು ಬರೆಯಬೇಕೆನಿಸುತ್ತಿದೆ. ತುಂಬಾ ಆಭಾರಿ
ಸುಮತಿ ನಿರಂಜನ್ ಅವರು ಶಿಕ್ಷಕಿ ನಿರೂಪಕಿ, ನಟಿ, ಸಂಪಾದಕಿ ಎಂದೆಲ್ಲಾ ಪರಿಚಯಿಸಿದಂತೆ ಕವಿ ಎಂದು ಧಾರಾಳವಾಗಿ ಬರೆಯ ಬಹುದು. ಸುಧೀರ್ಘ ಕಾಲದಿಂದ ಅವರು ಬರೆಯುತ್ತಿರುವ ಕವನಗಳನ್ನು ಆಸ್ವಾದಿಸಿದವರಲ್ಲಿ ನಾನೂ ಒಬ್ಬ.
ಮಕರ ಸಂಕ್ರಮಣದ ಹಾರ್ದಿಕ ಶುಭಾಶಯಗಳು !
ಮಕರ ಸಂಕ್ರಾಂತಿ ಹಬ್ಬದ ಸುಸಂದರ್ಭದಲ್ಲಿ, ಹೇಳಿ ಮಾಡಿಸಿದ ಕವಿತೆ. ತುಂಬ ಅದ್ಭುತವಾಗಿದೆ! 😊👌
ಧನ್ಯವಾದಗಳು ಪ್ರದ್ಯುಮ್ನ. ಈ ಪೀಳಿಗೆಯವರು ಕವಿತೆ ಓದಿ ಹೀಗೆ ಸ್ಪಂದಿಸುವುದು ಬಹಳ ಆಶಾದಾಯಕ.
ಹೊಸ ಮನೋರಥಕೆ ಹೊಂಬಿಸಿಲ ಆರತಿಯನೆತ್ತಲು ಹುಟ್ಡಿದ ಹಬ್ಬ; ಮನದ ಮಬ್ಬನು ಹರಿಸುವ ಮೈಚಳಿಯ ಬಿಡಿಸುವ ಹಬ್ಬ.- ಸೊಗಸಾಗಿದೆ.ಸಂಕ್ರಾಂತಿಯನ್ನು ಮೂರ್ತೀಕರಿಸಿದ,ಸೂರ್ಯಪಥವನ್ನು ನೆನಪಿಸಿದ ಕವಿತೆ .ಅಭಿನಂದನೆ
ಮಹಾಬಲೇಶ್ವರ ರಾವ್,ಉಡುಪಿ
ನಿಮ್ಮಂತಹ ವಿದ್ವಾಂಸರಿಂದ ಒಳ್ಳೆಯ ಮಾತು ಕೇಳುವುದು ನನ್ನ ಭಾಗ್ಯ. ವಂದನೆಗಳು
ಕವನ, ಹಬ್ಬದ ಸಡಗರವನ್ನು ಪದಗಳಲ್ಲಿ ಹಿಡಿದು ಕಣ್ಮುಂದೆ ತಂದು ನಿಲ್ಲಿಸಿ, ಓದುಗರು ಅನುಭವಿಸುವಂತಿದೆ. ಸೂತ್ರ ಹಿಡಿದವನಾರೋ ಕಾಣನಾದರು ಬಿಡನು ಕೈ
ಯೆಂದು ನಂಬಿ ನಡೆವ ಹಬ್ಬ… ಎಂಬ ಮುಕ್ತಾಯದಲ್ಲಿಯೇ ಜೀವನದ ಪ್ರಾರಂಭವೂ ಇದೆ.ತುಂಬಾ ಇಷ್ಟವಾಯಿತು.
ಎಲ್ಲ ಹಬ್ಬಗಳೂ -ಅವನೊಬ್ಬನಿದ್ದಾನೆ – ಕಾಣದಿದ್ದರೂ – ಎನ್ನುವುದನ್ನು ಸಂಭ್ರಮಿಸುವ ದಿನಗಳು – ಕವನದ ಆಶಯವನ್ನು ಒಂದೇ ವಾಕ್ಯದಲ್ಲಿ ಹೇಳಿದಿರಿ.
“..ಮುಕ್ತಾಯದಲ್ಲೇ ಜೀವನದ ಪ್ರಾರಂಭವೂ ಇದೆ” – ಬಹಳ ಸುಂದರ !
ಥ್ಯಾಂಕ್ಯೂ…
Lovely poem, beutiful sentiment.
Thank you….