ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸರ್ವಜ್ಙನ ತ್ರಿಪದಿಗಳಲ್ಲಿ ದೇಸೀ ಆಹಾರ ಪದ್ಧತಿ ಮತ್ತು ಆರೋಗ್ಯ

ಸುಮಾ ವೀಣಾ

ಸರ್ವಜ್ಙನ ತ್ರಿಪದಿಗಳಲ್ಲಿ ದೇಸೀ ಆಹಾರ ಪದ್ಧತಿ ಮತ್ತು ಆರೋಗ್ಯ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ವೈದ್ಯಶಾಸ್ತ್ರ ವಾಗಿರುವ ಆಯುರ್ವೇದದಲ್ಲಿ “ಸುಖ ಸಂಜ್ಞಕ ಆರೋಗ್ಯ” ಎಂಬ ಮಾತು ಉಲ್ಲೇಖವಾಗಿದೆ. ಅಂದರೆ ಈ ವಾಕ್ಯ “ಸುಖ”ಕ್ಕೆ ಇರುವ ಇನ್ನೊಂದು ಹೆಸರೇ ‘ಆರೋಗ್ಯ’ ಎಂದು ಉಲ್ಲೇಖಿಸುತ್ತದೆ. “ಆರೋಗ್ಯವಂತ ಹಾಗು ಆಹಾರವಂತ” ಎಂಬ ಎರಡು ಪದಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಆಹಾರವಿದ್ದರೆ ಆರೋಗ್ಯ ತಾನೆ! ಆರೋಗ್ಯವಂತ ಎಲ್ಲಾ ಕೆಲಸಗಳನ್ನು ಮಾಡಲು ಯೋಗ್ಯನಾಗಿರುತ್ತಾನೆ, ಇಲ್ಲವಾದರೆ ‘ಆರೋಗ್ಯಹೀನ ಪಶು’ ಎಂಬ ಗಾದೆಗೆ ಅನ್ವರ್ಥನಾಗುತ್ತಾನೆ. ಮನುಷ್ಯನ ಬದುಕಿಗೆ ಆಹಾರ ಮುಖ್ಯ ಅಂತಹ ಅನ್ನದ ಮಹತ್ವವನ್ನು ಕುರುತು ಸರ್ವಜ್ಞ ತ್ರಿಪದಿಗಳಲ್ಲಿ ಬಹಳ ಚೆನ್ನಾಗಿ ಉಲ್ಲೇಖ ಮಾಡಿದ್ದಾನೆ. ಜಾನಪದರು “ಆಳು ಇದ್ದರೆ ಅರಸು ಕೂಳು ಇದ್ದರೆ ಬಿರುಸು” ಎಂಬ ಗಾದೆಯನ್ನು ಹೇಳಿದ್ದಾರೆ. ಅಂದರೆ ‘ಕೂಳು’ ಮುಖ್ಯ ಎಂದು ಹಳಗನ್ನಡದಲ್ಲಿ ಕೂಳು ಎಂದರೆ ಬೋನ, ಓಗರ, ಅನ್ನ ಎಂದೇ ತೆಗೆದುಕೊಳ್ಳುವುದು. ಆಧುನಿಕರಲ್ಲಿ ಈ ಪದ ಹೀನಾರ್ಥ ಪಡೆದುಕೊಂಡಿದೆ.

ಅನ್ನದಾನಗಳಿಗಿಂತ ಮುನ್ನದಾನಗಳಿಲ್ಲ .. ಅನ್ನಕ್ಕೆ ಮಿಗಿಲು ಇನ್ನಿಲ್ಲ..ಜಗದೊಳಗೆ ಅನ್ನವೇ ಪ್ರಾಣ ಸರ್ವಜ್ಞ |

ಎಂಬ ತ್ರಿಪದಿಯಲ್ಲಿ ಶ್ರೇಷ್ಠದಾನಗಳಲ್ಲಿ ಅನ್ನದಾನವೇ ಶ್ರೇಷ್ಠ ಎಂದಿದ್ದಾನೆ. ಅನ್ನವೆಂದರೆ ಪ್ರಾಣ, ಬ್ರಹ್ಮ ಎಂದೆಲ್ಲಾ ಹೇಳಿ ಅನ್ನದ ಮಹತ್ವವನ್ನು ಉಲ್ಲೇಖಮಾಡಿದ್ದಾನೆ. ಅನ್ನ ಸಿಗದೆ ಇದ್ದರೆ ದೇಹ ಹೇಗೆಲ್ಲಾ ಸೋಲುತ್ತದೆ ಎಂದು ಹೇಳುವ ಸಂದರ್ಭದಲ್ಲಿ,

ನೇತ್ರಗಳು ಕಾಣಿಸವು, ಶ್ರೋತೃಗಳು ಕೇಳಿಸವು ಮುದ್ದಿನ ಮಾತುಗಳು ಸೊಗಸವು ಬೋನದಾ ಮುದ್ದೆ ತಪ್ಪಿದರೆ ಸರ್ವಜ್ಞ||

ಕಣ್ಣುಗಳು ಇಳಿಯುವುವು ಬಾಣಗಳು ಅಳಿಯವವು.. ಹುಣ್ಣಿಮೆಯ ಹೋದ ಶಶಿಯಂತೆ ಅಶನವನು ಉಣ್ಣದವ ನೋಡಲು ಸರ್ವಜ್ಞ||

ಎಂದು ಹೇಳಿರುವಲ್ಲಿ ಅನ್ನ ದೇಹಕ್ಕೆ ಸಿಗದಿದ್ದರೆ ಶರೀರದಲ್ಲಿ ಕಸುವು ಇರುವುದಿಲ್ಲ ಪಂಚೇಂದ್ರಿಯಗಳಿಂದಲೂ ಅನುಭವ ಪಡೆಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾನೆ. ಯಾವದೇ ಆಹಾರವನ್ನಾಗಲಿ ಚೆನ್ನಾಗಿ ಬೇಯಿಸಿ ತಿನ್ನಬೇಕು ಇಲ್ಲವಾದರೆ ಆರೋಗ್ಯ ಹಾನಿಯಾಗುತ್ತದೆ ಎಂದು ಅಕ್ಕಿಯಿಂ ತೆಂಗು ಜಾನಕಿಯಂ ಲಂಕೆಯ ಮಕ್ಕೆಯಿಂ ಕಣಕಂ ಕೆಡುವಂತೆ ದುರ್ಬುದ್ಧಿ ಹೊಲಕ್ಕೆ ಕೇಡು ಎಂಬ ತ್ರಿಪದಿಯ ಮೂಲಕ ಹೇಳಿದ್ದಾನೆ. ಪ್ರಸ್ತುತ ತ್ರಿಪದಿಯಲ್ಲಿ ಯಾವುದರಿಂದ ಯಾವುದು ಹಾಳಾಗುತ್ತದೆ ಎಂಬುದನ್ನು ಆತನ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅನ್ನವನ್ನು ಶ್ರೇಷ್ಠ ಎಂದ ಮೇಲೆ ಅದನ್ನು ದೇವರೆಂದೇ ಕರೆಯಬೇಕು. ಹಿರಿಯರು ಕೂಡ “ಅನ್ನನ್ ನ ನಿಂದಯಾತ್” ಅಂದರೆ ಅನ್ನವನ್ನು ಹೀಯಾಳಿಸಬಾರದು ಎಂಬ ತಿಳಿವಳಿಕೆಯನ್ನು ನೀಡಿದ್ದಾರೆ.

ಸರ್ವಜ್ಞನ ವಚನಗಳಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಅರಿಶಿಣ ಮತ್ತು ಬೆಲ್ಲ

ಅಂಕುಡೊಂಕ ‘ಅ’

ಅದರ ತಮ್ಮ ‘ಸ’

ನಾಲ್ಕು ಮೂಲೆ ‘ಬೆ’

ಚಿಕ್ಕದೊಂದು ‘ಮೆ’

ಇದೊಂದು ಅಡುಗೆಗೆ ಸಂಬಂಧಿಸಿದೆ ಒಗಟು. ಒಗ್ಗರಣೆಗೆ ಹಾಕುವ ವಸ್ತುಗಳ ಪಟ್ಟಿ ಇಲ್ಲದೆ. ‘ಅ’ ಎಂದರೆ “ಹರಿಶಿಣಕೊಂಬು”, ನಾಲ್ಕು ಮೂಲೆ ‘ಬೆ’ ಎಂದರೆ “ಬೆಲ್ಲ” ‘ಸ’ ಎಂದರೆ ಸಾಸುವೆ ‘ಮೆ’ ಎಂದರೆ ಮೆಣಸಿಗೆ ಹೇಳುವುದು. ಈ ಸಾಮಗ್ರಿಗಳು ರುಚಿ ಬಣ್ಣ ಆರೋಗ್ಯಕ್ಕೆ ಹಾಗು ಔಷಧಿಗಾಗಿ ಬಳಸುವಂತಹವು. ಇವುಗಳನ್ನು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಅಲ್ಲವರಿಶಿಣವುಂಟು, ಬೆಲ್ಲ ಬಿಳಿನಲೆಯುಂಟು ಒಳ್ಳೆ ಹಲಸುಂಟು . . . . . . ಎಂದು ಉಲ್ಲೇಖ ಮಾಡಿ ಹರಿಶಿಣದ ಮಹತ್ವವನ್ನು ಹೇಳಿದ್ದಾನೆ. ಹರಿಶಿಣವನ್ನು ‘ಹಳದಿಚಿನ್ನ’ ಎನ್ನುವರು. ಸೌಂದರ್ಯ, ಆರೋಗ್ಯ ಅಡುಗೆ ಹಾಗು ಔಷಧಿಗಾಗಿ ಇದನ್ನು ಬಳಸುತ್ತಾರೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಇದು ಕಡಿಮೆ ಮಾಡುತ್ತದೆ. ಕೆಮ್ಮು, ನೆಗಡಿ,ಶೀತಕ್ಕೆ ಇದು ರಾಮಬಾಣವೆಂದೇ ಹೇಳಬಹುದು. ಇದು ಕ್ಯಾನ್ಸರ್ ನಿವಾರಕ ಎಂದೂ ಆಧುನಿಕ ವಿಜ್ಞಾನಿಗಳು ಹೇಳಿದ್ದಾರೆ. ವಧು-ವರರಿಗೆ ಮದುವೆಗೆ ಮೊದಲು ಅರಿಶಿಣ ಶಾಸ್ತ್ರವನ್ನು ಮಾಡಿಸುತ್ತಾರೆ. ಆರೋಗ್ಯದ ದೃಷ್ಠಿಯಿಂದಲೂ, ರೋಗನಿರೋಧಕತ್ವದ ದೃಷ್ಠಿಯಿಂದಲೂ ಇದು ಶಕ್ತಿಯ ಆಗರವಾಗಿದೆಯೆಂದೇ ಹೇಳಬಹುದು. “ಬಲ್ಲವರ ಒಡನಾಟ ಬೆಲ್ಲವನು ಮೆದ್ದಂತೆ” ಇಲ್ಲಿ ಬೆಲ್ಲದ ಮಹತ್ವದ ಬಗ್ಗೆ ಸರ್ವಜ್ಞ ಒತ್ತಿ ಹೆಳುತ್ತಾನೆ. ಬೆಲ್ಲ ಬೆರೆಸಿದ ಹಾಲನ್ನು ಕುಡಿದರೆ ಸ್ಥೂಲಕಾಯ ನಿವಾರಣೆ ಆಗುತ್ತದೆ. ರಕ್ತ ಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡಿ ಮೂಳೆಗಳಿಗೆ ಶಕ್ತಿಯನ್ನು ಕೊಡುತ್ತದೆ. ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿ ಕೀಲು ಹಾಗು ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ.. ಅಂತಹವರು ಬೆಲ್ಲ ಬೆರೆಸಿದ ಹಾಲನ್ನು ಸೇವನೆ ಮಾಡುತ್ತಾರೆ. ಬೆಲ್ಲ ಮತ್ತು ಹರಿಶಿಣದ ಹಾಲು ಪ್ರಾಕೃತಿಕವಾಗಿ ರೋಗ ನಿರೋಧಕ ಶಕ್ತಿಯ ಗುಣಗಳನ್ನು ಹೊಂದಿರುತ್ತದೆ. ಹಾಗಾಗಿ ಇದರಿಂದ ವೈರಸ್ನ ಸೋಂಕು ಕಡಿಮೆಯಾಗುತ್ತದೆ. ಹರಿಶಿಣ ನೈಸರ್ಗಿಕ ಬಣ್ಣ ಆದರೆ ಅಡುಗೆ ಚಂದ ಕಾಣಬೇಕು ಎಂಬ ದೃಷ್ಠಿಯಿಂದ ಮಾರುಕಟ್ಟೆಯಲ್ಲಿ ಸಿಗುವ ನಕಲಿಬಣ್ಣ ಹಾಗು ಸುವಾಸನೆಯುಳ್ಳ ರಾಸಾಯನಿಕಗಳನ್ನು ಬಳಸಿ ನಮ್ಮ ಆರೋಗ್ಯವನ್ನು ನಾವೇ ಹಾಳುಮಾಡಿಕೊಳ್ಳುತ್ತಿದ್ದೇವೆ.

ಸಕ್ಕರೆಯ ಉಪಯೋಗ ನಿಷಿದ್ಧ

ಜಾರತ್ವವೆಂಬುದು ಕ್ಷೀರಸಕ್ಕರೆಯಂತೆ ಊರಲ್ಲಿ ಒಬ್ಬರಿರುತಿಹರೆ ಬೇವಿನಾ ಸ್ವಾದಂತಿಹುದು ಸರ್ವಜ್ಞ||

ಊರಿನಲ್ಲಿ ಯಾರದರೂ ಒಬ್ಬರಾದರೂ ಬೇವಿನ ಮಹತ್ವ ತಿಳಿದಿದ್ದರೆ ಅದು ಇಡೀ ಊರಿಗೇ ಉಪಯೋಗಕಾರಿ ಎನ್ನುತ್ತಾರೆ. ಬೇವಿನ ಎಲೆಯ ಪುಡಿಯನ್ನು ಚರ್ಮಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡುವುದರಿಂದ ಚರ್ಮದ ಹೊಳಪು ಹೆಚ್ಚುತ್ತದೆ, ಮೃದುವಾಗುತ್ತದೆ. ಹಾಗು ಯಾವುದೇ ಚರ್ಮದ ವ್ಯಾಧಿಗಳು ಬರುವುದಿಲ್ಲ ಹಾಗೆ ದೇಹಕ್ಕೆ ಸೇವಿಸಿದರೆ ಕ್ರಿಮಿಕೀಟಗಳು ಸಾಯುತ್ತವೆ ಎನ್ನುತ್ತಾರೆ. ಎಣ್ಣೆ ಎಂದಾಗ ಸಾಸಿವೆ ಎಣ್ಣೆ ನೆನಪಾಗುತ್ತದೆ. ಚರ್ಮದ ಸಮಸ್ಯೆಗಳಿಗೆ ಇದು ರಾಮಬಾಣ ಎನ್ನುತ್ತಾರೆ. ಉಪ್ಪಿನಕಾಯಿ ಕೆಡದಂತೆ ನಮ್ಮವರು ಸಾಸಿವೆ ಎಣ್ಣೆ ಬಳಸುತ್ತಿದ್ದರು. ಅದನ್ನು ಬಿಟ್ಟ ನಾವು ಪ್ರಾಣಿಜನ್ಯ ಕೊಬ್ಬು ಹಾಗು ರಾಸಾಯನಿಕಗಳನ್ನು ಹಾಕಿಕೊಂಡು ನಮ್ಮ ಆರೋಗ್ಯಕ್ಕೆ ನಾವೇ ವಿಪತ್ತು ತಂದುಕೊಳ್ಳುತ್ತಿದ್ದೇವೆ. ಹಾನಿಕಾರಕ ರಾಸಾಯನಿಕಗಳನ್ನು ಬಳಸಿ ಶುದ್ಧಿಕರಿಸಿದ ಎಣ್ಣೆಯೇ ಅತ್ಯಂತ ಆರೋಗ್ಯ ಎಂದು ಬಳಸಿ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ.

ಹಾಲು ಹೈನು
ಸರ್ವಜ್ಞ ತನ್ನ ತ್ರಿಪದಿಗಳಲ್ಲಿ ಹಾಲು ಹಾಗು ಹಾಲಿನ ಉತ್ಪನ್ನಗಳಿಂದ ಆಗುವ ಪ್ರಯೋಜಗಳನ್ನು ತನ್ನ ತ್ರಿಪದಿಗಳಲ್ಲಿ ಉಲ್ಲೇಖ ಮಾಡಿದ್ದಾನೆ. ಹಾಲಿನ ಬಳಕೆಯಿಂದ ಮೂಳೆಗಟ್ಟಿಯಾಗುತ್ತದೆ. ರೋಗಿಗಳು ಕಳೆದುಕೊಂಡ ಚೈತನ್ಯವನ್ನು ಮರಳಿ ಪಡೆಯಲು ಇದು ಸಹಕಾರಿ ಎನ್ನುತ್ತಾರೆ. ಅದಕ್ಕೆ “ರೋಗಿ ಬಯಸಿದ್ದೂ ಹಾಲುಅನ್ನ ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬಂತೆ ಹಾಲು ಆರೋಗ್ಯಕ್ಕೆ ಒಳ್ಳೆಯದು.
ಹಾಲು ಇಲ್ಲದ ಊಟ ಬಾಲೆಯರ ನೋಟ” ಎಂದು ಹಾಲು ಬೇಕೆ ಬೇಕು ಎನ್ನುತ್ತಾರೆ.
ಎಮ್ಮೆ ಹಯನವು ಲೇಸು
ಹಾಲಿನ ಹಸುವು ಲೇಸು
ಎಂದು ಬೆಣ್ಣೆತುಪ್ಪಗಳ ಮಹತ್ವವನ್ನು ಹೇಳುತ್ತಾರೆ.
ಅದರಲ್ಲಿಯೂ ನೇರವಾಗಿ ಹಾಲನ್ನು ಸೇವಿಸಲು ಹಸುವಿನ ಹಾಲು ಉತ್ತಮ ಹಯನಿಗೆ ಎಮ್ಮೆ ಹಾಲೂ ಆಗಬಹುದು ಎಂದಿದ್ದಾನೆ.
“ಕೆಟ್ಟ ಹಾಲಿಂದ ಹುಳಿಯಿಟ್ಟಿದೇ” ಎಂದು ಹಾಲು ಕೆಟ್ಟು ಹೋದರೆ ಹುಳಿಯಾಗಿರುತ್ತದೆ ಎಂದು ಜೀವನ ಅನುಭವ ಹೇಳಿದ್ದಾನೆ. ಅಧುನಿಕ ದಿನಗಳಲ್ಲಿ ಬೆಳ್ಳಗಿರೋದಲ್ಲಾ ಹಾಲಲ್ಲ ಎಂದು ತಿಳಿದಿದ್ದರೂ ಹಾಲನ್ನು ಬಿಟ್ಟು ಹಾಲಿನ ರೂಪದ ಹಾಲಾಹಲವನ್ನು ನಾವು ಸೇವಿಸುತ್ತಿದ್ದೇವೆ.
ದೋಸೆ ಹಾಲಿಗೆ ಲೇಸು, ತುಪ್ಪ ಓಗರ ಲೇಸು
ಮಜ್ಜಿಗೆ ಊಟಕೆ ಲೇಸು, ಕಜ್ಜಾಯ ತುಪ್ಪ ಉಣಲೇಸು
ಹೋಳಿಗೆ ತುಪ್ಪಲೇಸು

ಎಂದಿದ್ದಾನೆ. ಇಲ್ಲೆಲ್ಲಾ ಹಾಲು ಯಾವ್ಯಾವ ಅಡುಗೆ ಜೊತೆ ಬೆರೆಯುತ್ತದೆ ಎಂದು ಉದಾಹರಣೆ ನೀಡುತ್ತಾರೆ. ತುಪ್ಪವನ್ನು ಬಿಸಿ ಅನ್ನಕ್ಕೆ ಒಳ್ಲೆಯದು ಎನ್ನುತ್ತಾರೆ. ಹಾಗೆ ರುಚಿಕರವೂ ಹೌದು. ಹೋಳಿಗೆ ಹಾಗು ಕಜ್ಜಾಯದ ಜೊತೆಗೆ ತುಪ್ಪ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಹಾಗೆ ಮಜ್ಜೆಗೆ ಊಟಕ್ಕೆ ಇರಲೇಬೇಕು ಎನ್ನುತ್ತಾನೆ. ನಾವು ತಿಂದಂತಹ ಖಾರವನ್ನು ತೊಳೆಯಲು ಮಜ್ಜಿಗೆಗೆ ಬೇಕೇ ಬೇಕು.

ದೇಸಿ ತುಪ್ಪದಿಂದ ಆಹಾರದ ರುಚಿ ಹೆಚ್ಚಾಗುತ್ತದೆ. ಈ ತುಪ್ಪದಿಂದ ಒಣ ಚರ್ಮವನ್ನು ರಕ್ಷಿಸಿಕೊಳ್ಳಬಹುದು. ತುಪ್ಪ ಸೇವನೆಯಿಂದ ಕೂದಲಿನ ಹೊಳಪು ಹೆಚ್ಚುತ್ತದೆ. ಇದು ದೇಹಕ್ಕೆ ಬೇಕಾಗಿರುವ ಒಳ್ಳೆಯ ಕೊಬ್ಬು ಎನ್ನುತ್ತಾರೆ. ಕೊಲೆಸ್ಟ್ರಾಲ್ ಅಂದರೆ ಫ್ಯಾಟ್ ಇದು ದೇಹದ ಮೂಲಭೂತ ಅಗತ್ಯ ನಾವು ತಿನ್ನುವ ಆಹಾರದಲ್ಲಿ ಶೇ೧೦%ರಷ್ಟು ಆಹಾರ ಕೊಲೆಸ್ಟ್ರಾಲ್ ಆಗುತದೆ.ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ನೀರಿಗಿಂತ ಹೆಚ್ಚು ಅಗತ್ಯ. ಒತ್ತಡ ನಿವಾರಣೆಗೆ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡಲು ಕೊಲೆಸ್ಟ್ರಾಲ್ ದೇಹಕ್ಕೆ ಅವಶ್ಯಕ. ಕೊಬ್ಬು ಕಡಿಮೆ ಮಾಡಿಕೊಳ್ಳಲು ಯಾವುದೆ ಔಷಧಿ ತೆಗೆದುಕೊಳ್ಳುತ್ತೇವೆ. ಕೊಲೆಸ್ಟ್ರಾಲ್ ಕಡಿಮೆಯಿದ್ದರೆ ಕ್ಯಾನ್ಸರ್, ಮಾನಸಿಕ ರೋಗ, ಆತ್ಮಹತ್ಯೆಗಳ ಸಾಧ್ಯತೆ ಹೆಚ್ಚು ಎಂದು ಅಧ್ಯಯನಕಾರರು ಹೇಳಿದ್ದಾರೆ. ಕೆಲಸ ಮಾಡಲು ಲವಲವಿಕೆ ಇದ್ದರೆ ಅದುವೇ ಆರೋಗ್ಯ ಲವಲವಿಕೆ ಇಲ್ಲದಿದ್ದರೆ ಅನಾರೋಗ ಗ್ಯಾರಂಟಿ ಆರೋಗ್ಯಕ್ಕೆ ದೇಸಿ ಹಾಲು ಶ್ರೇಷ್ಠ ಹಾಲಿಗಿಂತಲೂ ತುಪ್ಪ ಶ್ರೇಷ್ಠ ಎಂಬುದು ಹಿರಿಯರ ಅಂಬೋಣ.

ಪರಿಮಳ

ಅಡುಗೆಗೆ ಬಳಸುವ ಪರಿಮಳದ ಬಗ್ಗೆ ಸರ್ವಜ್ಙ ಹೇಳಿರುವುದು ಆತನ ತಿಳಿವಳಿಕೆಗೆ ಸಾಕ್ಷಿಯಾಗಿದೆ. ಇಂಗಿನೊಳು ನಾತವನು ತೆಂಗಿನೊಳು ನೀರು ಎಂದಿದ್ದಾನೆ. ಇಂಗು ಪರಿಮಳವನ್ನು ಕೊಡುವುದರ ಜೊತೆಗೆ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಸ್ತಮಾ, ಕೆಮ್ಮು ರೋಗವೂ ಇದರಿಂದ ನಿವಾರಣೆಯಾಗುತ್ತದೆ. ಊಟದಲ್ಲಿ ಇಂಗಿನ ಸೇವನೆ ಬೇಕು. ಇದರ ಒಗರು ಹಾಗೂ ವಾಸನೆಗೆ ಬ್ಯಾಕ್ಟಿರಿಯಾಗಳು ಸಾಯುತ್ತದೆ. ದೇಹದ ತೂಕ ಇಳಿಸಿಕೊಳ್ಳಲು ರೋಗ ನಿರೋಧಕಶಕ್ತಿಹೆಚ್ಚಿಸಿಕೊಳ್ಳಲು, ನಿರ್ಜಲೀಕರಣ ತಡೆಯುವುದರ ಜೊತೆಗೆ ಇದರಲ್ಲಿ ವಿಟಮಿನ್ ಸಹ ಹೇರಳವಾಗಿರುತ್ತದೆ.

ವೀಳ್ಯದೆಲೆ

ಅಡಿಕೆ ಇಲ್ಲದ ವೀಳ್ಯ ಕಿಟಕಿ ಇಲ್ಲದ ಮನೆ ಹೋಳಿಗೆ ತುಪ್ಪಲೇಸು, ಬಾಯಿಗೂ ವೀಳ್ಯವೇ ಲೇಸು ವೀಳ್ಯವಿಲ್ಲದ ಬಾಯಿ ಕೂಳು ಇಲ್ಲದ ನಾಯಿ ಎಂದು ಹೇಳಿದ್ದಾನೆ.

ಇಲ್ಲಿ ತಾಂಬೂಲದಿಂದ ಆಗುವ ಲಾಭವನ್ನು ಇಲ್ಲಿ ಹೇಳಬಹುದು. ಊಟ ತಿಂಡಿ ಸೇವಿಸಿದ ಬಳಿಕ ದಿನಕ್ಕೆ ಒಂದರಿಂದ ಮೂರು ಬಾರಿಯವರೆಗೆ ವೀಳ್ಯದೆಲೆ ಅಡಿಕೆ, ಏಲಕ್ಕಿ , ಲವಂಗ ಇತ್ಯಾದಿ ಸೇವಿಸಿದರೆ ಕಫ ಆಗುವುದಿಲ್ಲ. ಜೀರ್ಣಕ್ರೀಯೆ ಸರಾಗವಾಗಿ ಆಗುತ್ತದೆ. ಇದರ ಉಪಯೋಗ ಗಮನಿಸಿ ಇದನ್ನುಹಸಿರು ಬಂಗಾರ ಎನ್ನುತ್ತಾರೆ. ಸೋಂಕನ್ನು ತಡೆಗಟ್ಟುವ ಶಕ್ತಿ ಆಸ್ಟೆçಯೋ ಫೋರೋಸಿಸ್ ಎಂಬ ಮೂಳೆ ಸಂಬಂಧಿ ರೋಗ ಇದರಿಂದ ಕಡಿಮೆಯಾಗುತ್ತದೆ.


ಸುಣ್ಣ

ಕ್ಯಾಲ್ಸಿಯಂ ಅಂಶವನ್ನು ಹೊಂದಿದ್ದರೆ ಅಡಿಕೆಯಲ್ಲಿ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಶಕ್ತಿ ಇರುತ್ತದೆ.
ಲವಂಗ
ಬಾಯಿಯ ದುರ್ವಾಸನೆಯನ್ನು ಕಳೆಯುತ್ತದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಹಲ್ಲುನೋವು, ಸಂಧಿವಾತ ಇತ್ಯಾದಿ ಕಡಿಮೆ ಮಾಡಲು ಸಹಾಯಕಾರಿ.
ಏಲಕ್ಕಿ
ಏಲಕ್ಕಿ ಒಂದು ಸಾಂಬರು ಬೆಳೆ, ಇದನ್ನು ಔಷಧೀಯ ಸಸ್ಯವಾಗಿಯೂ ಉಪಯೋಗಿಸುತ್ತಾರೆ. ಇದು ತನ್ನ ಪರಿಮಳದಿಂದಾಗಿ ಪರಿಚಿತವಾಗಿದೆ. ಏಲಕ್ಕಿಯನ್ನು ಹೆಚ್ಚಾಗಿ ಸಿಹಿತಿಂಡಿಗಳ ತಯಾರಿಕೆಯಲ್ಲಿ ಪರಿಮಳಕ್ಕಾಗಿ ಬಳಸುವುದಿದೆ. ಕ್ಯಾನ್ಸರ್ ತಡೆಗಟ್ಟುವಲ್ಲಿ ಫ್ಲೂಜ್ವರಕ್ಕೆ, ಮಕ್ಕಳ ಬಿಕ್ಕಳುವಿಕೆಗೆ, ಅಜೀರ್ಣವಾಕರಿಕೆಗೂ ಕಲ್ಮಶ ನಿವಾರಣೆ ಮಾಡಲು, ಶ್ವಾಸಕೋಶ ಸಂಬAಧಿತ ಸಮಸ್ಯೆಗಳಿಗೆ, ಖಿನ್ನತೆ ನಿವಾರಿಸಲು ರ‍್ಮಕಾಂತಿ, ಹೃದಯದ ಆರೋಗ್ಯ ಅಧಿಕ ರಕ್ತದ ಒತ್ಡವನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.
ಉಪ್ಪು
ಉಪ್ಪಿನ ಬಗ್ಗೆ ಮಾತನಾಡುವ ಸಂದರ್ಭದಲ್ಲಿ “ಉಪ್ಪಿಲ್ಲದುಣಹೊಲ್ಲ” ಎಂದು ಹೇಳಿದ್ದಾನೆ. ಉಪ್ಪಿಲ್ಲದೆ ಯಾವುುದೆ ಊಟ ನಮಗೆ ರುಚಿಸದು ಎಂದರ್ಥ.ಅಂದರೆ ನಾವು ಅಯೋಡಿನ್ ‌ಉಳ್ಳ ಆಹಾರವನ್ನು ಬಳಸಬೇಕು ಅಯೋಡೈಸ್ಡ ಉಪ್ಪನ್ನು ಬಳಸಬೇಕು ಎನ್ನುತ್ತಾರೆ. ಅದು ಇಂದಿನ ದಿನಮಾನಗಳಲ್ಲಿ ಉಪ್ಪಿನ ಮಹತ್ವ ದುರ್ಬಳಕೆಯಾಗಿದೆಯೆಂದೇ ಹೇಳಬಹುದು. ರೆಡಿಮೇಡ್ ಮಸಾಲಗಳು, ಸೋಯಾ ಸಾಸ್‌ಗಳಲ್ಲಿ ಸೋಡಿಯಂ ಕಂಟೆಂಟ್ ಹೆಚ್ಚು ಇರತ್ತೆ, ನಮ್ಮ ಋಷಿ ಮುನಿಗಳು, ಉಪ್ಪಿನ ಮಹತ್ವವನ್ನು ತಿಳಿದಿದ್ದರೂ ಹಾಗಾಗಿಖoಛಿಞ sಚಿಟಣ, ಃಟಚಿಛಿಞ sಚಿಟಣ ಸೈಂಧವ ಲವಣ ಎಂಬ ಮಾತುಗಳು ಬಳಕೆಯಲ್ಲಿವೆ. ಆದರೆ ಉಪ್ಪಿನ ಬಳಕೆಯಲ್ಲಿ ಮಿತಿ ಇರಬೇಕು ಇಲ್ಲವಾದರೆ ಅನರ್ಥವಾಗುತ್ತದೆ. :”ಹಿತ್ತಲಗಿಡ ಮದ್ದಲ್ಲ” ಎಂಬಂತೆ ನಮ್ಮಲ್ಲಿ, ನಮ್ಮ ಮನೆಯಲ್ಲಿಯೇ ಸ್ಥಳಿಯವಾಗಿ ದೊರಕುವ ಪದಾರ್ಥಗಳನ್ನು ಮಾತ್ರೆಗಳ ರೂಪದಲ್ಲಿ ತೆಗೆದುಕೊಳ್ಳುತ್ತಿದ್ದೇವೆ. ಇದ್ದಿಲು ಹಾಕಿ ಹಲ್ಲು ಉಜ್ಜುತ್ತಿದ್ದರು ಆಗ ಆದರ ಒಂದು ಅಂಶವಾದರೂ ನಮ್ಮ ಶರೀರದ ಒಳ ಸೇರಿ ದೇಹ ಶುದ್ಧಿಯಾಗುತ್ತಿತ್ತು. ಆದರೆ ಈಗ ಹೊಟ್ಟೆ ಕೆಟ್ಟರೆ ಹೊಟ್ಟೆ ಉಬ್ಬರ ಹೆಚ್ಚಾದಾಗ ಯುನಿಎನ್‌ಜೈಂ ಎಂಬ ಮಾತ್ರೆಯನ್ನು ತೆಗೆದುಕೊಳ್ಳುವುದಿದೆ. ಹಾಗೆ ಪಪಾಯ ಎಲೆಯ ರಸ ಸೇವಿಸಿದರೆ ಕೆಂಪು ರಕ್ತಕಣಗಳು ಉತ್ಪತ್ತಿ ಹೆಚ್ಚಾಗುತ್ತದೆ ಎನ್ನುತ್ತಾರೆ. ಹಾಗಾಗಿ ಮಾರು ಕಟ್ಟೆಯಲ್ಲಿ ಸಿಗುವ ಮಾತ್ರೆಗಳ ಮೊರೆಹೋಗುವರೂ ಇದ್ದಾರೆ. ಇನ್ನೂ ಕೆಲವರು ಜ್ವರ ಬಂದಾಗ ಮುನ್ನೆಚ್ಚರಿಕೆ ಎಂಬಂತೆ ತಮ್ಮ ಮನೆಗಳಲ್ಲಿ ಇಲ್ಲದಿದರು ಹುಡುಕಿ ತಂದು ರಸ ತೆಗೆದು ಕುಡಿಯವುದಿದೆ.
ಧಾನ್ಯಗಳ ಮಹತ್ವವನ್ನು ಹೇಳಿರುವ ಬಗ್ಗೆ
ನಾಗರಿಕತೆ ಬೆಳೆದಂತೆ ನಮ್ಮ ಆಹಾರಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ನಮ್ಮ ಪೂರ್ವಿಕರು ತಮ್ಮ ಆರೋಗ್ಯಕ್ಕೆ ಕೊಟ್ಟಿದ್ದ ಮಹತ್ವವನ್ನು ನಾವು ಕೊಡುತ್ತಿಲ್ಲ ಯಾವ ಯಾವ ಧಾನ್ಯದಿಂದ ಆಹಾರ ಸೇವಿಸಿದರೆ ಏನು ಉಪಯೋಗ ಎಂದು ಹೇಳುವ ಸಂದರ್ಭದಲ್ಲಿ..
ಅಕ್ಕಿಯನ್ನು ಉಂಬುವನು ಹಕ್ಕಿಯಂತಾಗುವನು
ಸಿಕ್ಕು ರೋಗದಲಿ ರೊಕ್ಕವನು ವೈದ್ಯನಿಗೆ
ಇಕ್ಕುತಲಿರುವ ಸರ್ವಜ್ಞ

ಅಕ್ಕಿಯಿಂದ ತಯಾರಿಸಿದ ಅನ್ನವನ್ನು ಸೇವಿಸಿದರೆ ಹಕ್ಕಿಯಂತೆ ಹಗುರಾಗುವನು ಎಂದರೆ ಅನಾರೋಗ್ಯಕ್ಕೆ ಸಿಲುಕುವನು ಎಂದರ್ಥ.
ಎಂದು ಅಕ್ಕಿಯ ಬಳಕೆಯಿಂದ ಏನೂ ಪ್ರಯೋಜನವಿಲ್ಲ. ಇಂಥವನು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗಿ ವೈದ್ಯರಿಗೆ ಹಣ ಸುರಿಯಬೇಕಾಗುತ್ತದೆ ಎನ್ನುತ್ತಾರೆ.
“ಜೋಳವನು ತಿಂಬುವನು ತೋಳದಂತಾಗುವನು’ ಎಂಬಲ್ಲಿ ಜೋಳ ತಿಂದರೆ ಶಕ್ತಿ ಹೆಚ್ಚು ಎನ್ನುತ್ತಾನೆ.

“ಬೇಳೆ ಬೆಲ್ಲನುಂಬುವನು ಬಹು ಬಾಳನೆಂದರಿಗು” ಎಂಬಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂಗಳ ಬಳಕೆ ಆಹಾರದಲ್ಲಿ ಇರಬೇಕು ಎನ್ನುತ್ತಾರೆ.

ಸಿರಿ ಧಾನ್ಯದ ಮಹತ್ವ

ನವಣೆಯ ತಿಂಬುವ ಹದವಾಗಿ ಇರುವನು ‘ನವಣೆ’ ತಿನ್ನುವವನಿಗೆ ‘ಬವಣೆ’ ಇರುವುದಿಲ್ಲ. ಸಿರಿಧಾನ್ಯಗಳಾಾದ ನವಣೆ, ಸಜ್ಜೆ, ಊದಲು,ನವಣೆ, ಸಾಮೆ, ಬರಗುಗಳು ಗಾತ್ರದಲ್ಲಿ ಕಿರಿದಾಗಿದ್ದರೂ ಪೋಷಣೆಯ ದೃಷ್ಠಿಯಿಂದ ಮಹತ್ವ ಪೂರ್ಣವಾಗಿದೆ. ಇವುಗಳನ್ನು ಕಿರು ಧಾನ್ಯ, ಸಿರಿ ಧಾನ್ಯ, ತೃಣ ಧಾನ್ಯ ಎಂದೂ ಕರೆಯುವರು. ಪೋಷಕಾಂಶಗಳ ಭಂಡಾರವೇ ಆಗಿರುವ ಆರೋಗ್ಯ ಉತ್ತಮವಾಗಿರುವ ಆಹಾರಧಾನ್ಯಗಳು ನಮ್ಮ ದೈನಂದಿನ ಆಹಾರಶೈಲಿಯಲ್ಲಿ ಬೇಕು ಎಂದಿದ್ದಾರೆ. ರಾಗಿ ಎಂಬುವ ನಿರೋಗಿ ರಾಗಿ ಭೋಗಿಗಳಲ್ಲಿ ಬಡವರಿಂಗಾಗಿ ಬೆಳೆದಿಹುದು ಸರ್ವಜ್ಞ ಎಂದಿದ್ದಾರೆ. ಯಾವ ಯಾವ ಧಾನ್ಯದಿಂದ ಯಾವ ಅಡುಗೆ ಲೇಸು ಎಂಬ ಸಂದರ್ಭದಲ್ಲಿ ಅನ್ನದ ಓಗರ ಲೇಸು ಮೆಕ್ಕೆ ಹಿಂಡಿ ಲೇಸು ಎಂದಿದ್ದಾನೆ.

ಕುರುಕಲು ತಿಂಡಿಯ ಬಗ್ಗೆ ಪ್ರಸ್ತಾಪ
ಈಗಂತೂ ಮಕ್ಕಳಿಗೆ ಹೊಟ್ಟೆ ಭರ್ತಿ ಮಾಡುವುದಕ್ಕಿಂತ ಹೊಟ್ಟೆಭರ್ತಿ ಅದಂತೆ ಅನ್ನಿಸುವ ಕುರುಕಲು ತಿಂಡಿಯ ಮೇಲೇನೆ ವಿಶೇಷ ವ್ಯಾಮೋಹ. ಅದರೆ ಸರ್ವಜ್ಞ ಉದ್ದಿನವಡೆ, ಮುರುಕು (ಚಕ್ಕುಲಿಗೆ ಹೇಳುವಂತಹದು) ಹಪ್ಪಳ ಮುಂತಾದವುಗಳನ್ನು ಮನೆಯಲ್ಲಿಯೇ ತಯಾರು ಮಾಡಿಕೊಳ್ಳುವ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ.
ಕಾಲ ಬದಲಾದಂತೆ ನಮ್ಮ ಜಾನಪದ ತಿಂಡಿಗಳನ್ನು ಬಿಟ್ಟು ವಿಷಕಾರಿ ಕರುಕಲು ತಿಂಡಿಗಳಿಗೆ ನಮ್ಮ ಮಕ್ಕಳನ್ನು ಒಗ್ಗಿಸಿದ್ದೇವೆ. ಕುರ್‌ಕುರೆ, ಲೇಸ್, ಮ್ಯಾಗಿ, ಬಿಂಗೋ ಇವುಗಳದ್ದೇ ಕಾರುಬಾರು ಇದರಲ್ಲಿ ಸೋಡಿಯಂ ಕಂಟೆಂಟ್ ಹೆಚ್ಚಾಗಿರುತ್ತದೆ. ಹಾಗೆ ಕಂಡೆನ್ಸ್ಡ್ ಮಿಲ್ಕ್ ಕೂಡ ಶರೀರವನ್ನು ಹಾಳು ಮಾಡುತ್ತಾದೆ. ಜೊತೆಗೆ ಜೀರ್ಣಾಂಗ ವ್ಯವಸ್ಥೆಯ ಮೇರೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಒಟ್ಟಾರೆ ನಮ್ಮ ನಾಲಗೆಗೆ ರುಚಿಬೇಕು, ನಾವುಗಳು ನಾಲಿಗೆಯ ಚಪಲಕ್ಕೆ ಒಳಗಾಗಿ ಅದರ ಸೆಳೆತಕ್ಕೆ ಸಿಕ್ಕಿದ್ದೇವೆ. ಮೂರಂಗುಲದ ನಾಲಗೆಯ, ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೇವೆ. ನಿಯಮರಹಿತ ಬದುಕನ್ನು ಬದುಕುತ್ತಿದ್ದೇವೆ. ತತ್ಪರಿಣಾಮವಾಗಿ ನಮ್ಮ ಆಹಾರ ಸೇವನೆಯ ಪರಿಕಲ್ಪನೆಯೂ ಬದಲಾಗಿದೆ.
ಲಘು ಆಹಾರದ ಬಗ್ಗೆ
ವಾಗ್ಭಟ ಆಹಾರಸೇವನೆಯನ್ನು ಕುರಿತಂತೆ “ಹಿತಭುಕ್, ಮಿತಭುಕ್, ಋತಭುಕ್’ ಎಂದಿದ್ದಾರೆ” ಅಂದರೆ ಆಹಾರವನ್ನು ಹಿತವಾಗಿ ಮಿತವಾಗಿ ಋತುಗಳಿಗೆ ಅನುಗುಣವಾಗಿ ಆಹಾರ ಸೇವನೆ ಮಾಡಬೇಕು ಎಂದರ್ಥ. ದೇಹದಲ್ಲಿ ನೀರಿನ ಪ್ರಮಾಣ ಕುಗ್ಗದಂತೆ ಜೀರ್ಣಶಕ್ತಿ ವೃದ್ಧಿಯಾಗುವಂತೆ ನೋಡಿಕೊಳ್ಳಬೇಕು. ನಮ್ಮ ಪೂರ್ವಿಕರು ಋತುಮಾನಕ್ಕೆ ತಕ್ಕಂತೆ ಹಬ್ಬಹರಿದಿನಗಳಲ್ಲಿ ಉಪವಾಸ ವ್ರತಗಳನ್ನು ಆಚರಿಸುತ್ತಿದ್ದರು.
ಆರೋಗ್ಯ ಸರಿ ಇಲ್ಲದಿದ್ದ ಸಂದರ್ಭದಲ್ಲಿ ತೆಳು ಆಹಾರ ಮುಖ್ಯ ಎಂಬುದಕ್ಕೆ
ಹಾಲಿನಿ ದಂಬಲಿಯ ತಿಳಿಲೇಸು
ಹಸಿದರಂಬಲಿ ಲೇಸು ಬಿಸಿಲಲಿ ಕೊಡಲೇಸು
ಎಂದು ತೆಳು ಆಹಾರದ ಬಗ್ಗೆ ಉಲ್ಲೇಖ ಮಾಡಿದ್ದಾರೆ.
ಊಟ ಮಾಡುವ ಕುರಿತು
ಹಸಿವಿಲ್ಲದುಣಬೇಡ
ಹಸಿದು ಮತ್ತಿರಬೇಡ
ಬಿಸಿಬೇಡ ತಂಗಳುಣಬೇಡ
ವೈದ್ಯನ ಬೆಸನವೇ ಬೇಡ ಸರ್ವ
ಜ್ಞ

ವೈದ್ಯರ ಪದ್ಧತಿ ಕುರಿತು

ಒಮ್ಮೆಯಂಡುವ ತ್ಯಾಗಿ ‘ನ್ನೊಮ್ಮೆ ಉಂಡವಭೋಗಿ’ ಒಪ್ಪತ್ತು ಉಂಬುವುದು ಕಿಚ್ಚು ತಾ ಕಾಯುವುದು ಬೆಚ್ಚನಾ ಠಾವಿ ನೊಳಲೋಗಿದರೆ ವೈದ್ಯನಾ ಕಿಚ್ಚಿಕ್ಕೆಂದ ಸರ್ವಜ್ಞ |

ಉಂಡು ಕೆಂಡವಕಾಸಿ ಶತಪಥನಡೆದು ಉಂಡೆಡೆದ ಮಗ್ಗುಲಲಿ ಮಲಗೆ ವೈದ್ಯನಾ ಭಂಡಾಟವಿಲ್ಲ ಸರ್ವಜ್ಞ||

ಉಂಡು ನೂರಡಿ ಎಂಬ ||ಕೆಂಡಕ್ಕೆ ಕೈಕಾಸಿ ಒಪ್ಪತ್ತು ಎಂಬುವುದು ಕಿಚ್ಚತಾ ಕಾಯಿಸುವುದು ಬೆಚ್ಚನಾ ಠಾವಿಲೋಗಿದರೆ ವೈದ್ಯನಾ ಕಿಚ್ಚಲಿಕ್ಕಿಂದ ಸರ್ವಜ್ಞ ||

ಈ ವಚನದಲ್ಲಿ ಊಟ ಮಾಡಿದ ಕೂಡಲೆ ಮಲಗುವಂತಿಲ್ಲ ಹಾಗೆ ಮಲಗಿದರೆ ಆಹಾರ ಅಜೀರ್ಣವಾಗದು. ಊಟದ ನಂತರ ೧೫ ನಿಮಿಷಗಳ ನಡಿಗೆ ಮಾಡಿದರೆ ಹೆಚ್ಚಿನ ಕ್ಯಾಲೊರಿ ದೇಹ ಸೇರುವುದಿಲ್ಲ ಎಂದು ಎಚ್ಚರಿಸಿ ಊಟದ ಬಳಿಕ ಎಡದೆ ಕಡೆ ಮಲಗಿಕೊಂಡರೆ ಮೇದೋಜೀರಕ ಗ್ರಂಥಿ ಸರಿಯಾಗಿ ಕೆಲಸ ಮಾಡಲು ಅನುಕೋಲವಾಗುತ್ತದೆ ಎಂಬ ಸಲಹೆ ಹೊಂದಿದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಅನುವಾಗುತ್ತದೆ ಎಂಬ ತಿಳಿವಳಿಕೆ ಹೇಳಿ ಊಟ ಮಾಡುವ ಮೊದಲು ಊಟದ ನಂತರ ಇಂತಷ್ಟು ಸಮಯದ ಮೊದಲ ನಂತರ ಸಮಯದ ಮೊದಲು ನೀರನ್ನು ಕುಡಿಯಬೇಕು. ಊಟವಾದ ಕೂಡಲೆ ಮಲಗುವಂತಿಲ್ಲ. ಗ್ಯಾಸ್ಟಿಕ್ ಸಮಸ್ಯೆ ಇದ್ದರೆ ಇಂಗು, ಜೀರಿಗೆ, ಬೆಳ್ಳುಳಿ ಬಳಸಬೇಕು.

ಆಹಾರ ಸಂರಕ್ಷಣೆ, ಆರೋಗ್ಯ ಸಂರಕ್ಷಣೆ ಎಂದೆಲ್ಲಾ ಹೇಳುವ ನಾವುಗಳು ಹಬ್ಬದ ಸಂದರ್ಭದಲ್ಲಿ ಬಂದರೆ ಆರೋಗ್ಯದ ಕಾಳಜಿ ಮರೆಯುತ್ತೇವೆ. ದೀಪಾವಳಿ ಹೊಸವರ್ಷದ ಆಚರಣೆಯ ಸಂದರ್ಭದಲ್ಲಿ ಸಿಗುವುದೆಲ್ಲವೂ ಬಹುಪಾಲು ಕಲಬೆರಕೆ ಆಹಾರಗಳೇ. ದೇಸೀಆಹಾರ ಪದ್ಧತಿ ಮರೆತೆ ಹೋಗುತ್ತದೆ. ಸಮಯಾನುಕೂಲ ಲಾಭ ಎಂದೇ ಯೋಚನೆ ಮಾಡುತ್ತೇವೆ.
ಹೋಟೆಲುಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದೆ. ಹಣ್ಣುಗಳು ಬೇಗನೆ ಹಣ್ಣಾಗಲು ರಸಾಯನಿಕೆಗಳನ್ನು ಬಳಸುವುದು ಇದೆ ಇದರಿಂದ ಶರೀರದ ಮೇಲೆ ಅಡ್ಡಪರಿಣಾಮಗಳಾಗುತ್ತದೆ. ಸರ್ವಜ್ಞನ ಭಾವಚಿತ್ರವನ್ನು ಒಮ್ಮೆ ಗಮನಿಸಿದರೆ ಕರದಿಕಪ್ಪರವುಂಟು(ಮಣ್ಣಿನ ಪಾತ್ರೆ) ಎಂದು ಅವನೇ ಹೇಳಿರುವಂತೆ ನಾವು ಯಾರೂ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ಮಾಡುತ್ತಿಲ್ಲ, ಕುಡಿಯುವ ನೀರನ್ನು ಇಡಲು ಸಂಪೂರ್ಣಪ್ಲಾಸ್ಟಿಕ್ ಬಾಟಲಿಗಳನ್ನೇ ಅವಲಂಭಿಸಿದ್ದೇವೆ. ಮಣ್ಣು ಇಲ್ಲವೆ ,ತಾಮ್ರದ ಪಾತ್ರೆಗಳಲ್ಲಿ ಕುಡಿಯುವ ನೀರನ್ನು ಶೇಖರಿಸಿ ಇಡುವುದು ಉತ್ತಮ.
ಹಿಂದೆ ಊಟಕ್ಕೆ ಹಾಗು ಅಡುಗೆಗಳಲ್ಲಿ ಬಾಳೆ ಎಲೆಗಳನ್ನು, ಹಲಸು, ಅರಿಶಿಣದ ಎಲೆ, ಮುತ್ತುಗದ ಎಲೆ ಇತ್ಯಾದಿಗಳನ್ನು ಬಳಕೆ ಮಾಡುತ್ತಿದ್ದವು. ಈಗ ಅದೆಲ್ಲವನ್ನು ಕಳೆದು ಬಾಳೆ ಎಲೆಯ ಆಕಾರವನ್ನು ಹೋಲುವ ಪೇಪರ್ ಮೇಲೆ ತಿನ್ನುವಂತಾಗಿದೆ. ಒಂದು ಕಾಲದಲ್ಲಿ ಬಾಳೆ ಎಲೆ ಆಹಾರವನ್ನು ಸುತ್ತುವ ಪರಿಕರವಾಗಿತ್ತು. ಆದರೆ ಈಗ ಫುಡ್ ರ್ಯಾಪರ್ಗಳು ಸಿಗುತ್ತದೆ. ಪರ್ಚ್ಮೆಂಟ್ ಪೇಪರ್, ಅಲ್ಯುಮಿನಿಯಂ ಫಾಯಿಲ್ ರೀತಿಯಲ್ಲಿ ಆಹಾರ ಒಣಗಿಸಲು ಅಂಟಿಸಲು ಮತ್ತು ಬಿಸಿಯನ್ನು ಕಾಯ್ದಿಡಲು ಬಳಸುತ್ತಿದ್ದೇವೆ.
ಬಾಳೆ ಎಲೆಯ ಮೇಲೆ ಬಿಸಿ ಊಟ ಬಡಿಸಿದಾಗ ಅದರಲ್ಲಿರುವ ಪೋಷಕಾಂಶಗಳು ನಮ್ಮ ಶರೀರವನ್ನು ಸೇರುತ್ತಿದ್ದವು, ಜೀರ್ಣ ರ್ಕ್ರಿಯೆ ಸುಲಭವಾಗಿ ಆಗುತ್ತಿತ್ತು. ಇದರಿಂದ ಬಿಳಿ ಕೂದಲಿನ ಪ್ರಮಾಣ ಕಡಿಮೆಯಾಗುತ್ತಿತ್ತು. ಬಾಳೆ ಎಲೆಯಲ್ಲಿ ಇರುವ ಎಪಿಗ್ಯಾಲೊಕೋಟ್ಟಟಿನ್ ಪಾಲಿಫೆನೇಲ್‌ಗಳು ಪ್ರಕೃತಿದತ್ತವಾದ ಆಂಟಿ ಆಕ್ಸಿಡೆಂಟ್‌ಗಳು ಇದು ತ್ವಚೆಗೆ ಉತ್ತಮ ಪೋಷಕಾಂಶ ನೀಡುತ್ತಿದ್ದವು. ಇದೆಲ್ಲವನ್ನು ಬಿಟ್ಟು ನಾವು ಆಧುನಿಕತೆಯ ಹೆಸರಿನಲ್ಲಿ ವಿಷ ಆಹಾರವನ್ನೇ ಸೇವನೆ ಮಾಡುತ್ತಿದ್ದೇವೆ.
ಆಧುನಿಕತೆಯಲ್ಲಿ ಔಷಧವೇ ಆಹಾರವಾಗಿದೆ. ಹಳೆಯಕಾಲದಲ್ಲಿ ಆಹಾರವೇ ಔಷಧ ಇಡೀ ತಟ್ಟೆಯ ತುಂಬೆಲ್ಲ ಔಷಧೀಯ ಗುಣವುಳ್ಳವುಗಳನ್ನೇ ಬಳಸುತ್ತಿದ್ದೆವು. ಸೌದೆ ಒಲೆಯ ಅಡುಗೆ ಹೋಗಿ ಕುಕ್ಕರ್ ಅಡುಗೆ ನಮ್ಮ ಉಸಿರನ್ನು ತೆಗೆಯುತ್ತದೆ. ಒರಳು ಕಲ್ಲು ಮಿಕ್ಸಿಯಾಗಿದೆ, ಒನಕೆ ಗ್ರೈಂಡರ್ ಆಗಿದೆ. ರೊಟ್ಟಿತಟ್ಟಲು ಮಿಷನ್ ಬಂದಿವೆ. ನಾಗರಿಕರು ಎಂದು ಅತಿಯಾಗಿ ನಾಗರಿಕತೆಯನ್ನು ಬೆನ್ನುಹತ್ತಿ ಅನರಾರೋಗ್ಯದ ಶಿಶುಗಳು ನಾವಾಗಿದ್ದೇವೆ. ೧೫-೧೬ನೇ ಶತಮಾನದ ಸರ್ವಜ್ಞ ತ್ರಿಪದಿಗಳಲ್ಲಿ ದೇಸೀ ಆಹಾರಕ್ರಮದ ಬಗ್ಗೆ ಬಹಳ ಚೆನ್ನಾಗಿ ಉಲ್ಲೇಖ ಮಾಡುವುದರ ಜೊತೆಗೆ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲೇ ಇದೆ ಎಂದು ಹೇಳಿದ್ದಾನೆ. ದೇಸೀ ಆಹಾರಕ್ರಮ ಕುರಿತಾದ ಅವನ ತಿಳಿವಳಿಕೆ ಹಾಗು ಸಲಹೆಗಳು ಇಂದಿಗೂ ಅನ್ವಯಿಸುತ್ತವೆ. ಹಿಂದಿನವರು ಅರೋಗ್ಯದಿಂದ ಇದ್ದದ್ದು “ಒಲೆ ಊಟ ಹಾಗು ಎಲೆ ಊಟ” ಎಂಬ ತತ್ವದಿಂದಲೇ ಎನ್ನಬಹುದು.
ಸಂಸ್ಕರಿತ, ರಾಸಯನಯುಕ್ತ, ಕೇವಲ ಬಾಯಿಗೆ ನೀಡುವ ಆಹಾರವನ್ನು ಸೇವಿಸುವ ಬದಲು ಶುದ್ಧ ಹೊಸದಾಗಿ ತಯಾರಿಸಿದ ದೇಸೀ ಆಹರಾ ಸೇವಿಸುವುದು ಒಳತು. ಇದರಿಂದ ಆರೋಗ್ಯಯುಕ್ತರಾಗಿ ರೋಗಮುಕ್ತರಾಗಬಹುದು.
ಆಧಾರ ಕೃತಿ:
ಸರ್ವಜ್ಞನ ವಚನಗಳು: ಡಾ. ಎಲ್ ಬಸವರಾಜು , ಗೀತಾ ಬುಕ್ ಹೌಸ್ ಮೈಸೂರು

ಅಂಕಣಕಾರರು ಹಾಗೂ ಕನ್ನಡ ಪ್ರಬಂಧಕಾರರೂ ಆಗಿರುವ ಲೇಖಕಿ ಶ್ರೀಮತಿ ಸುಮಾ ವೀಣಾ.