- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ದಶಕಗಳ ಹಿಂದೆಯೂ
ನಾನು ಇದೇ ರೀತಿ
ಸಿಂಗರಿಸಿಕೊಳ್ಳುತ್ತಿದ್ದೆ
ತೀಡಿದ ಹುಬ್ಬು
ಕಣ್ಣುಗಳಿಗೆ ಕಡುಗಪ್ಪು ಕಾಡಿಗೆ
ತುಟಿಗಳಿಗೆ ತಿಳಿ ಗುಲಾಬಿಯ ರಂಗು
ನೆರಿಗೆ ಚಿಮ್ಮುವ ಸೀರೆ
ಬಳೆಗಳ ನಿನಾದ
ಬಿಳಿ ಪಾದಕ್ಕೆ ನೀನಿತ್ತ ಬೆಳ್ಳಿ ಕಾಲ್ಗೆಜ್ಜೆ
ಒಪ್ಪಿಕೊಳ್ಳುತ್ತೇನೆ ಗೆಳೆಯಾ
ಈಗ ನಾನು ಮೊದಲಿನಂತಿಲ್ಲ
ಹುಬ್ಬುಗಳು ಚೂರು ಗಂಟಿಕ್ಕಿವೆ
ಕಣ್ಣುಗಳ ಸುತ್ತ ಮೂಡಿರುವ ಸುರುಳಿಯಾಕಾರದ
ಕಪ್ಪು ಆಕೃತಿಗಳನ್ನು ಮರೆಮಾಚಲು
ಕಾಡಿಗೆ ಸೋಲುತ್ತಿದೆ
ತುಟಿಗಳು ರಂಗು ಕಳೆದುಕೊಂಡಿವೆ
ಸೀರೆ ತುಸುವೇ ದಪ್ಪ ಸೊಂಟದಿಂದ
ಇಳಿಜಾರಿನಂತೆ ಕೆಳಗೆ ಬೀಳುತ್ತದೆ
ಕೈಗಳು ಸೊರಗಿವೆ
ಹಿಮ್ಮಡಿ ಒಡೆದಿದೆ
ಒಪ್ಪಿಕೊಳ್ಳುತ್ತೇನೆ ಗೆಳೆಯಾ
ಬದಲಾದದ್ದು ಬರಿಯ ನಾನಲ್ಲ
ನಿನ್ನೆಡೆಗಿನ ನನ್ನ ಪ್ರೀತಿಯೂ
ಇದೀಗ ನಾನು ನಿನ್ನ
ಬಿಸಿಯಪ್ಪುಗೆ ಇಲ್ಲದೆಯೂ
ಕರಗಬಲ್ಲೆ
ನೀನು ಬಳಿಯಿಲ್ಲದಿದ್ದರೂ
ನಿನ್ನಿರುವಿಕೆಯನ್ನು ಅನುಭವಿಸಬಲ್ಲೆ
ನೀನು ಮಾತಾಡುವ ಮೊದಲೇ
ನೀನಾಡುವ ಪದಗಳನ್ನು
ಗ್ರಹಿಸಬಲ್ಲೆ
ನಿನ್ನ ಮೌನದಲ್ಲೂ
ಸಾವಿರ ಅರ್ಥ ಹುಡುಕಬಲ್ಲೆ
ನೀನು ನನ್ನೊಡನೆ
ಹಂಚಿಕೊಳ್ಳದ ನೋವಿಗೂ
ಮಿಡುಕಬಲ್ಲೆ
ನಿನ್ನ ಪ್ರತಿಯೊಂದು ನಗುವಿನ
ಹಿಂದಿನ ಕಾರಣವನ್ನು
ನಾನಷ್ಟೇ ಬಲ್ಲೆ
ಈಗ ಹೇಳು ಗೆಳೆಯಾ
ಇವಿಷ್ಟು ಸಾಲದೇ
ನನ್ನ- ನಿನ್ನ ಸಾಂಗತ್ಯಕ್ಕೆ?
ಬೆಡಗು ಬಿನ್ನಾಣ ಇನ್ನೂ ಬೇಕೆ?
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ