ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾಧಕನಿಗಾಗಿ ಕೊಲಂಬಿಯಾಗೆ ಹೋಗಿ ಹುಡುಕಬೇಡಿ; ಒಮ್ಮೆ ನಿಮ್ಮ ಮನೆಯ ಹಿಂಬದಿಯ ಕೊಳೆಗೇರಿಗೆ ಹೋಗಿ ಬನ್ನಿ!..

ದೀಕ್ಷಿತ್ ನಾಯರ್

ಅನ್ನದ ಅಗುಳು ಅಂಟಿದ್ದ ಆ ಸ್ವೀಟನ್ನು ಪಡೆಯಲು ಹಿಂಜರಿಯುತ್ತಿದ್ದೆ. ಒಮ್ಮೆ ಆತ ನಾಲ್ಕು ದಿನದಿಂದ ಉಪವಾಸದಿಂದ ಇದ್ದಾನೆ ಎಂಬುದನ್ನು ಕೇಳಿ ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾದೆ

ಇದು ಹತ್ತು ವರ್ಷದ ಹಿಂದಿನ ಕಥೆ. ಗುರುಪ್ರಸಾದ್ ಎಂಬ ಹೆಸರಿನ ನನ್ನ ಸ್ನೇಹಿತನಿದ್ದ. ಓದಿನಲ್ಲಿ ಆತ ತೀರಾ ದಡ್ಡ. ಆದರೆ ತರಗತಿಗೆ  ರ‍್ಯಾಂಕ್ ಬರುತ್ತಿದ್ದವರೆಲ್ಲಾ ಅವನ ಹಿಂದೆ ಸುತ್ತುತ್ತಿದ್ದರು. ಅವನ ಬ್ಯಾಗ್ನಲ್ಲಿ ಹೆಚ್ಚೆಂದರೆ ಎರಡು ಪುಸ್ತಕಗಳಿರುತ್ತಿತ್ತು. ಆದರೆ ಬ್ಯಾಗ್ ಮಾತ್ರ ಮಣ ಭಾರವಿರುತ್ತಿತ್ತು. ಹೀಗೆ ಒಮ್ಮೆ “ಗುರು ಪ್ರಸಾದ್ ಏನೋ ಇಟ್ಕೊಂಡಿದ್ದೀಯಾ  ಅಷ್ಟೊಂದು ಬ್ಯಾಗ್ನಲ್ಲಿ” ಅಂತ ಕೇಳಿಯೇ ಬಿಟ್ಟೆ. ಆತ ತುಂಬಾ ಮುಜುಗರದಿಂದಲೇ ಏನೂ ಇಲ್ಲ, ಏನೂ ಇಲ್ಲ ಎಂದು ಬ್ಯಾಗ್ ಸಮೇತ ಆಚೆಗೆ ಓಡಿ ಬಿಟ್ಟ. ನಾನು ಶಿಕ್ಷಕರು ಕೊಟ್ಟಿದ್ದ ಲೆಕ್ಕವನ್ನು ಮಾಡಿ ತರಗತಿಯಲ್ಲಿಯೇ ಊಟ ಮುಗಿಸಿ ಶಾಲೆಯ ಮೈದಾನದತ್ತ ನಡೆದೆ. ಅಲ್ಲಿ ನಡೆಯುತ್ತಿದ್ದ ದೃಶ್ಯವನ್ನು ಕಂಡು ಒಂದು ಕ್ಷಣ ಸ್ತಂಭೀಭೂತನಾಗಿ ಹೋದೆ. ಟೀಚರ್ ನ ಮಗನಾದ ರಾಹುಲ್, ಲಾಯರ್ ಮಗ ಲಕ್ಷ್ಮೀಕಾಂತ ಸೇರಿದಂತೆ ಎಲ್ಲರೂ ಕೊಳಕು ದಿರಿಸು ಧರಿಸುತ್ತಿದ್ದ ಗುರು ಪ್ರಸಾದ್ ನ ಸುತ್ತ ನಿಂತು ಯಾವುದೋ ವಸ್ತುವಿಗಾಗಿ ಕೈ ಚಾಚುತ್ತಿದ್ದರು. ಅವನು ಒಬ್ಬೊಬ್ಬರಿಗೆ ಚಿರೋಟಿ, ಬಾದುಷಾ, ಜಹಂಗೀರ್, ಲಡ್ಡು, ಬಾಳೆಹಣ್ಣು ಹೀಗೆ ಒಂದೊಂದಾಗಿ ಕೊಡುತ್ತಿದ್ದ. ಪ್ರತೀ ಸ್ವೀಟಿನಲ್ಲೂ  ಅನ್ನದ ಅಗುಳುಗಳು, ಸಾಂಬಾರಿನ ಕಲೆ ಕಾಣುತ್ತಿತ್ತು ಆದರೆ ಅದ್ಯಾವುದನ್ನೂ ಲೆಕ್ಕಿಸದೆ ಚಪ್ಪರಿಸಿ ತಿನ್ನುತ್ತಿದ್ದ ಸ್ನೇಹಿತರನ್ನು ಕಂಡು ನನಗೆ ಹೇವರಿಕೆ ಉಂಟಾಯಿತು. ಸುಮ್ಮನೆ ಮೌನವಾಗಿ ಅಲ್ಲಿ ನಡೆಯುತ್ತಿದ್ದನ್ನು ನೋಡುತ್ತಾ ನಿಂತೆ. ನನ್ನ ಹಿಂಬದಿ ಬೆಂಚಿನಲ್ಲಿ ಕೂರುವ ರಾಜಶೇಖರ್ “ದೀಕ್ಷಿತ್ ತಕೊಳೋ ತುಂಬಾ ಚೆನ್ನಾಗಿದೆ ತಿನ್ನು” ಎಂದು ನನ್ನ ಕೈಗೆ ಒಂದು ಸ್ವೀಟನ್ನು ನೀಡಿದ ನಾನು ಬೇಡ ಎನ್ನದೆ ಅನ್ನದ ಅಗುಳುಗಳಂಟಿದ್ದ  ಆ ಸ್ವೀಟನ್ನು ಮುಖ ಸಿಂಡರಿಸುತ್ತಾ ಇಸಿದುಕೊಂಡೆ. ಅವರಿಗೆ ಕಾಣದಂತೆ ಕಾಂಪೋಡಿನ ಆಚೆಗೂ ಎಸೆದು ಬಿಟ್ಟೆ. ಈ ಪ್ರಕ್ರಿಯೆ ಮೇ ಮತ್ತು ಜೂನ್ ತಿಂಗಳ ಪೂರ್ತಿ ನಡೆಯಿತು ಗುರು ಪ್ರಸಾದ್ ಕೈಗೆ ಸಿಕ್ಕಿದ ಪ್ಲಾಸ್ಟಿಕ್ ಕವರುಗಳಲ್ಲಿ ಹಣ್ಣು ಮತ್ತು ಸ್ವೀಟ್ ತರುತ್ತಿದ್ದ. ಸ್ನೇಹಿತರು ಎಂದಿನಂತೆ ಅವನಿಂದ ಪಡೆದು ತಿನ್ನುತ್ತಿದ್ದರು. ಆದರೆ ಜುಲೈ ಬರುತ್ತಿದ್ದಂತೆಯೇ ಗುರು ಪ್ರಸಾದ್ ಶಾಲೆಗೆ ಚಕ್ಕರ್ ಹೊಡೆಯಲು ಶುರು ಮಾಡಿದ. ಸ್ನೇಹಿತನ ಗೈರು ಹಾಜರಿಗಿಂತ ಆತ ಕೊಡುತ್ತಿದ್ದ ಸ್ವೀಟುಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ನಮ್ಮ ತರಗತಿಯ ಸಾಕಷ್ಟು ಜನ ಪೆಚ್ಚು ಮೋರೆ ಹಾಕಿಕೊಂಡು ಕಿಟಕಿ ಮತ್ತು ಬಾಗಿಲುಗಳನ್ನೇ ನೋಡುತ್ತಾ ಕುಳಿತುಕೊಳ್ಳುತ್ತಿದ್ದರು. ಶಿಕ್ಷಕರ ಪಾಠದ ಕಡೆಗೂ ಅವರಿಗೆ ಲಕ್ಷ್ಯವಿರುತ್ತಿರಲಿಲ್ಲ. ಹೀಗೆ ದಿನಗಳು ಕಳೆಯುತ್ತಾ ಹೋಯಿತು. ಹದಿನೈದು ದಿನವಾದರೂ ಗುರು ಪ್ರಸಾದ್ ತರಗತಿಯಲ್ಲಿ ಕಾಣಿಸಿಕೊಳ್ಳಲಿಲ್ಲ ನಮ್ಮ ಸ್ನೇಹಿತರ ಗುಂಪಿನ ಸ್ಥಿತಿ ಚಿಂತಾಜನಕವಾಗಿತ್ತು.

ಅದೊಂದು ದಿನ ನಾಲ್ಕು ಗಂಟೆಗೆ ಶಾಲೆಯ ಗಂಟೆ ಬಾರಿಸಿತು. ಸ್ನೇಹಿತ ಮನೋಜ್ “ಲೋ ದೀಕ್ಷಿ ಬಾರೋ ಗುರು ಪ್ರಸಾದ್ ಮನೆಗೆ ಹೋಗಿ ಅವನು ಯಾಕೆ ಶಾಲೆಗೆ ಬರುತ್ತಿಲ್ಲ ಅಂತ ಕೇಳ್ಕೊಂಡ್ ಬರೋಣ” ಎಂದು ಕರೆದ. ನಾನು ಒಲ್ಲದ ಮನಸ್ಸಿನಿಂದಲೇ ಸ್ನೇಹಿತನ ಕರೆಗೆ ಓಗೊಟ್ಟು ಅವನ ಜೊತೆ ಹೋದೆ. ಗುರು ಪ್ರಸಾದ್ ನ ಮನೆ ಅದ್ಯಾವುದೋ ಅಂಬೇಡ್ಕರ್ ಬಡಾವಣೆ ಎಂಬ ಕೊಳೆಗೇರಿಯಲ್ಲಿತ್ತು.ಅಲ್ಲಿನ ಮಕ್ಕಳೋ ರಸ್ತೆಯ ಧೂಳನ್ನು ಮುಖಕಟ್ಟಿಸಿಕೊಂಡು ವಿಚಿತ್ರವಾಗಿ ಕಾಣುತ್ತಿದ್ದರು. ಅಲ್ಲಿಯ ಚರಂಡಿಯ ವಾಸನೆಗೆ ನನಗೆ ಕಾರಿಕೊಳ್ಳುವಂತಾಯ್ತು. ಮೂಗನ್ನು ಅದುಮಿಕೊಂಡು ಗುರುಪ್ರಸಾದ್ ಮನೆಯತ್ತ ನಡೆದೆವು. ಅವನ ಮನೆಯು ಜೋರಾಗಿ ಗಾಳಿ ಬೀಸಿದರೆ ತೂರಿ ಹೋಗುವಂತಿತ್ತು. ಮನೆಯ ಮುಂಭಾಗದಲ್ಲಿ ವಾರಗಳಾದರೂ ತೊಳೆಯದೆ ಒಣಗಿ ಹೋದ ಸ್ಟೀಲ್ ಲೋಟ ಮತ್ತು ತಟ್ಟೆಗಳಿತ್ತು. ಗುಡಿಸಲಿನ ಪಕ್ಕದಲ್ಲಿ ಈತನ ಮುರುಕಲು ಸೈಕಲ್ ಮತ್ತು ಹಳೆಯ ಡಬ್ಬಗಳಿದ್ದವು. ಒಟ್ಟಾರೆ ಮಾನವನ ಆವಾಸಕ್ಕೆ ಯೋಗ್ಯವಲ್ಲದ ಮನೆಯಲ್ಲಿ ವಾಸವಿತ್ತು ಗುರು ಪ್ರಸಾದ್ ಮತ್ತು ಆತನ ಕುಟುಂಬ. ನಮ್ಮನ್ನು ನೋಡಿದ ತಕ್ಷಣ ಗುರು ಪ್ರಸಾದ್ ಒಮ್ಮೆ ಅಸಮಾಧಾನದಿಂದ “ಏಕೆ ಬಂದ್ರಿ” ಎಂದು ಪ್ರಶ್ನೆ ಮಾಡುತ್ತಲೇ ನೋಡುತ್ತಿದ್ದ. ಆ ಮಾರಾಯ ಎದ್ದು ಆಚೆಗೂ ಬರಲಿಲ್ಲ ಆದರೆ ಅವನ ದೇಹ ಬವಳಿ ಬಿದ್ದಂತಾಗಿತ್ತು. ಕೃಶನಾಗಿ ಹೋಗಿದ್ದ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಿತ್ತು. ಆಗಷ್ಟೇ ಪೊಗದಸ್ತಾದ ನಿದ್ರೆ ಮಾಡಿ ಎದ್ದಿದ್ದ ಎಂದು ಕಾಣುತ್ತದೆ. ಅವನ ತಾಯಿ ಒಲೆ ಉರುಬುತ್ತಾ ಗಂಜಿಯನ್ನು ಕಾಯಿಸುತ್ತಿದ್ದರು. ನನ್ನ ಸ್ನೇಹಿತ ಮನೋಜ್ ಗುರುಪ್ರಸಾದ್ ನ ಮಾತನಾಡಿಸದೆ ನೇರವಾಗಿ ಆಕೆಯ ತಾಯಿಯನ್ನು “ಆಂಟಿ ಗುರು ಪ್ರಸಾದ್ ಶಾಲೆಗೆ ಯಾಕೆ ಬರುತ್ತಿಲ್ಲ” ಎಂದು ಕೇಳಿದನು. “ಅಯ್ಯೋ ಮಗ ಚೌಟರಿ ವೇಲೆ ನಿಂತು  ಹೋಗಿ ಒಂದು ವಾರ ಆಯಿತು. ಈಗ ಆಸಾಢ ಮಾಸ ನೋಡು ಎಲ್ಲೂ ಕೆಲಸ ಇಲ್ಲ ಡುಡ್ಡು ಇಲ್ಲ. ಇನ್ನು ಇವನಿಗೆ ತಿಂಕಳಿಗೆ ಮುನ್ನೂರು ಪೀಸು ಕೊಡ್ಲೀಕು ಆಗೋದಿಲ್ಲ. ಅವನು ಊಟ ಮಾಡಿ ನಾಲು ದೀಸ ಆಯ್ತು ನೋಡು. ಮುಂದಿನ ತಿಂಗಳಿಂದ ಬರ್ತಾನಂತ ಹೆಡ್ಮಾಸ್ಟರ್ಗೆ ಹೇಳು” ಎಂದರು. ನನಗೆ ಗಂಟಲುಬ್ಬಿ ಬಂದಂತಾಗಿ ಕಣ್ಣೀರು ಕೆನ್ನೆಗಿಳಿದ ಮೋದಕ್ಕೆ ಬೆರಗಾಗಿ ಹೋದೆ. ಅವನು ತರುತ್ತಿದ್ದ ಸ್ವೀಟುಗಳಲ್ಲಿ ಅನ್ನದ ಅಗುಳುಗಳು ಅಂಟಿಕೊಳ್ಳಲು ಕಾರಣವೇನೆಂಬುದನ್ನು ತಿಳಿದುಕೊಂಡೆ. ಮದುವೆ ಛತ್ರದಲ್ಲಿ ಕೆಲಸ ಮಾಡುವ ಈತನ ತಾಯಿ ಅಲ್ಲಿನ ಎಂಜಲು ಎಲೆ ಎತ್ತಿ  ಊಟ ಮಾಡಿದವರು ಬಿಡುತ್ತಿದ್ದ ಸ್ವೀಟ್ ಮತ್ತು ಬಾಳೆಹಣ್ಣುಗಳನ್ನು ಕವರಿಗೆ ಹಾಕಿಕೊಳ್ಳುತ್ತಿದ್ದರು. ಅದನ್ನು ಶಾಲೆಗೆ ತಂದು ದಾನಶೂರನಂತೆ ಹಂಚುತ್ತಿದ್ದ ಗುರು ಪ್ರಸಾದ್. ಒಮ್ಮೆಲೇ ಅವನ ಮೇಲಿದ್ದ ಹೇವರಿಕೆ ಎಲ್ಲವೂ ಮಣ್ಣು ಸೇರಿತು. ಅವನನ್ನು ತಬ್ಬಿ ಅಳಬೇಕೆಂದುಕೊಂಡರೂ ಸುಮ್ಮನಾದೆ. ಈ ಎಲ್ಲಾ ವಿಷಯವನ್ನು ನಾಳೆ ಸ್ನೇಹಿತರಿಗೆ ಹೇಳಬೇಕೆಂಬ ಉಮ್ಮೇದಿಯೂ ನನ್ನ ಮನೋಜ್ ನಲ್ಲಿ ಇರಲಿಲ್ಲ.  ಸುಮ್ಮನೆ ಬಿಮ್ಮೆಂಬ ಮೌನದೊಂದಿಗೆ ಮನೆಯತ್ತಾ ಹೆಜ್ಜೆ ಹಾಕಿದೆವು. ಆದರೆ ಹಿಂತಿರುಗಿ ಹೋಗುವಾಗ ಚರಂಡಿ ವಾಸನೆಗೆ ಮೂಗು ಮುಚ್ಚಿಕೊಳ್ಳಲಿಲ್ಲ. ಆ ಕೊಳೆಗೇರಿಯ ಮಕ್ಕಳ ಕೆನ್ನೆ ಸವರುತ್ತಾ ಜೇಬಿನಲ್ಲಿರಿಸಿದ್ದ ಚಾಕೋಲೇಟ್ ನೀಡಿ ಹೊರಟೆವು.

ಎಂಟನೇ ತರಗತಿಯವರೆಗೂ ನಮ್ಮೊಂದಿಗೆ ಓದಿದ ಗುರು ಪ್ರಸಾದ್ ಐದಾರು  ವರ್ಷವಾದರೂ ಕಾಣಿಸಿಕೊಳ್ಳಲಿಲ್ಲ. ಆದರೆ ಹೋದ ವರುಷವಷ್ಟೆ ಮಂಡ್ಯದ ಪಿ.ಇ.ಎಸ್ ಎಂಜಿನಿಯರಿಂಗ್ ಕಾಲೇಜಿನ ರಸ್ತೆಯಲ್ಲಿ ಕಣ್ಣಿಗೆ ಸ್ಪೆಕ್ಸ್ ಮತ್ತು ಕುತ್ತಿಗೆಗೊಂದು ಐ.ಡಿ ಕಾರ್ಡ್ ಹಾಕಿದ್ದ. ಅವನ ಯೂನಿಫಾರ್ಮ್ ನೋಡಿಯೇ ಗುರುತಿಸಿದ್ದೆ ಅವನು ಸಿ.ವಿ.ಲ್ ಎಂಜಿನಿಯರಿಂಗ್ ಓದುತ್ತಿದ್ದ. ಅವನ ದಿರಿಸು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದ ನಾನು ಬಿ.ಎ ಓದುತ್ತಿದ್ದೇನೆ. 

ಮದುವೆ ಛತ್ರದಿಂದ ತರುತ್ತಿದ್ದ ಊಟದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಹುಡುಗ ಇಂದು ಬಹುದೊಡ್ಡ ಎಂಜಿನಿಯರ್ ಆಗಬೇಕೆಂದು ತಹತಹಿಸುತ್ತಿದ್ದಾನೆ. ಶಾಲೆಯಲ್ಲಿ ತೀರಾ ದಡ್ಡನಾಗಿದ್ದ ಗುರು ಪ್ರಸಾದ್ ಇಂದು ಎಂಜಿನಿಯರಿಂಗ್ ಓದುತ್ತಿದ್ದಾನೆಂದರೆ ಅದು ಅವನಿಗೆ ಸುಖಾಸುಮ್ಮನೆ ದಕ್ಕಿಲ್ಲ ಶ್ರದ್ದೆ ಇದೆ. ಹಠ ಮತ್ತು ಛಲವನ್ನು ಹುಟ್ಟುತ್ತಲೇ ಬೆನ್ನಿಗಂಟಿಸಿಕೊಂಡು ಬಂದಿದ್ದಾನೆ. ಸಾಧಕನ ಹುಡುಕಲು ಕೊಲಂಬಿಯಾ ಹೋಗುವ ನಾವು ಇನ್ನಾದರೂ ನಮ್ಮ ಮನೆಯ ಹಿಂಬದಿಯ ಕೊಳೆಗೇರಿಗೆ ಹೋಗೋಣ ಏನಾಂತೀರಾ? ಗುರು ಪ್ರಸಾದ್ ನಮ್ಮ ಕಣ್ಣ ಮುಂದಿರುವ ನಿಜವಾದ ಸಾಧಕನಲ್ಲವೇ? ಅವನಿಗೆ ಶುಭವಾಗಲಿ. ಅವನ ಜೀವನ ನಮಗೆ ಪಾಠವಾಗಲಿ.