ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸಾವರ್ಕರ್ ಮತ್ತು ಸ್ವಾತಂತ್ರ್ಯ ಸಂಗ್ರಾಮ…

"ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದ ಕಾಲ ಅದು. ಎಲ್ಲರಿಗೂ ಗೊತ್ತಿದ್ದ ಹಾಗೆ ಅಂಡಮಾನ್ ಜೈಲಿನಲ್ಲಿ ಕೈದಿಗಳ ಪರಿಸ್ಥಿತಿ ತುಂಬಾನೇ ಚಿಂತಾಜನಕವಾಗಿತ್ತು. ಜೊತೆಗೆ ಬ್ರಿಟೀಷರ ಚಿತ್ರಹಿಂಸೆ ಬೇರೆ...". ವಿ.ಎಲ್.ಬಾಲು ಅವರು ಬರೆದದ್ದು ಸಾವರ್ಕರ್ ಬಗ್ಗೆ..

ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದ ಕಾಲ ಅದು. ಎಲ್ಲರಿಗೂ ಗೊತ್ತಿದ್ದ ಹಾಗೆ ಅಂಡಮಾನ್ ಜೈಲಿನಲ್ಲಿ ಕೈದಿಗಳ ಪರಿಸ್ಥಿತಿ ತುಂಬಾನೇ ಚಿಂತಾಜನಕವಾಗಿತ್ತು. ಜೊತೆಗೆ ಬ್ರಿಟೀಷರ ಚಿತ್ರಹಿಂಸೆ ಬೇರೆ. ಸಾವರ್ಕರ್ ಜೊತೆಯಲ್ಲೇ ಬಂಗಾಳದ ಖ್ಯಾತ ಕ್ರಾಂತಿಕಾರಿ ತ್ರಿಲೋಕ್ಯನಾಥ್ ಚಕ್ರವರ್ತಿ ಕೂಡಾ ಜೈಲಲ್ಲಿದ್ದರು. ಬ್ರಿಟೀಷರ ಚಿತ್ರಹಿಂಸೆಯ ವಿರುದ್ದ ಎಲ್ಲ ಕೈದಿಗಳು ಉಪವಾಸ ಕೈಗೊಳ್ಳುವ ಎಂದು ಸಾವರ್ಕರ್ ಎಲ್ಲಾ ಕೈದಿಗಳನ್ನು ಪ್ರಚೋದಿಸಿದರು. ಅವರ ಮಾತಿನಂತೆಯೇ ಎಲ್ಲರೂ ಬ್ರಿಟೀಷರ ದಬ್ಬಾಳಿಕೆ ವಿರುದ್ದ ಉಪವಾಸ ಆರಂಭಿಸಿದರು. ಅದರೆ ಸಾವರ್ಕರ್ ಮಾತ್ರ ಉಪವಾಸ ಮಾಡಲೇ ಇಲ್ಲ. ಇದರಿಂದ ಕೆರಳಿದ ತ್ರಿಲೋಕನಾಥ್ ಚಕ್ರವರ್ತಿ, ‘ನಮ್ಮನ್ನು ಉಪವಾಸ ಮಾಡುವಂತೆ ಪ್ರಚೋದಿಸಿ, ನೀನು ಮಾತ್ರ ಹೊಟ್ಟೆತುಂಬಾ ಊಟ ಮಾಡಿಕೊಂಡಿರಲು ಹೇಗೆ ಧೈರ್ಯ ಬಂತು ನಿನಗೆ’ ಎಂದು ಪ್ರಶ್ನಿಸಿದ್ದರಂತೆ. ಈ ವಿಷಯವನ್ನು ಸಾವರ್ಕರ್ ತನ್ನ ಜೀವನಗಥೆ ‘My Years In Andamans’ನಲ್ಲಿ ಬರೆದುಕೊಂಡು, ತ್ರಿಲೋಕ್ಯನಾಥ್ ಚಕ್ರವರ್ತಿ ತನ್ನನ್ನು ಈ ವಿಷಯದಲ್ಲಿ ತರಾಟೆಗೆ ತೆಗೆದುಕೊಂಡದ್ದರ ಬಗ್ಗೆ ಹೇಳಿಕೊಂಡಿದ್ದಾರೆ.

ಸಾವರ್ಕರ್ ಅಂಡಮಾನಿನಲ್ಲಿದಷ್ಟೂ ಕಾಲ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಕಳುಹಿಸುವುದರಲ್ಲೇ ಬಿಜಿಯಾಗಿದ್ದರು. ಬ್ರಿಟೀಷರು ಅಂಡಮಾನ್ ಜೈಲಿಗೆ ಹಾಕಿದ ಕೈದಿಗಳಲ್ಲಿ ತಪ್ಪೊಪ್ಪಿಗೆ ಪತ್ರ ಬರೆದು, ಒಮ್ಮೆ ತನ್ನನ್ನು ಕ್ಷಮಿಸಿ ಹೊರಗೆ ಹೋಗಲು ಬಿಟ್ಟರೆ, ಇನ್ನೆಂದೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವುದಿಲ್ಲ, ಬ್ರಿಟೀಷ್ ರಾಣಿ ಹಾಗೂ ಬ್ರಿಟೀಷರ ಸಾರ್ವಭೌಮತ್ವಕ್ಕೆ ತಲೆಬಾಗಿಯೇ ಜೀವಿಸುತ್ತೇನೆಂದು ಬರೆದುಕೊಟ್ಟಿದ್ದು ಸಾವರ್ಕರ್ ಒಬ್ಬರೇ. ಹೊರಬಂದ ನಂತರನೂ ರತ್ನಗಿರಿಯಲ್ಲಿದ್ದಾಗ ಅವರ ವಾಸ್ತವ್ಯಕ್ಕೆ ಬ್ರಿಟೀಷರೇ ಬಂಗಲೆ ಕೊಟ್ಟಿದ್ದರು. ವಾಜಪೇಯಿಯವರ ಸರಕಾರವಿದ್ದಾಗ ಅಂದಿನ ಉಪಪ್ರಧಾನಿ ಅಂಡಮಾನಿನ ಜೈಲಿನ ಹೊರಗಿದ್ದ ‘ಹುತ್ತಾತ್ಮ ಪಾರ್ಕನ್ನು’ ಸಾವರ್ಕರ್ ಪಾರ್ಕ್ ಎಂದು ಮರುನಾಮಕರಣ ಮಾಡಿದಾಗ, ಸಾವರ್ಕರ್ ಜೊತೆಯಲ್ಲಿಯೇ ಅಂದು ಕಾಲಾಪಾನಿ ಜೈಲಿನಲ್ಲಿದ್ದ ಇನ್ನೊಬ್ಬ ಸ್ವಾತಂತ್ರ್ಯ ಸೇನಾನಿ ವಿಶ್ವನಾಥ್ ಮಾಥೂರ್ ಅದನ್ನು ವಿರೋಧಿಸಿದ್ದರು. ಬ್ರಿಟೀಷರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟವರು ಸ್ವಾತಂತ್ರ್ಯ ಸೇನಾನಿ ಆಗಲು ಸಾಧ್ಯವಿಲ್ಲವೆಂದು ಮಾಥೂರ್ ಅಭಿಪ್ರಾಯವಾಗಿತ್ತು. ಅದರ ಮೊದಲು ಮಾಥೂರ್ ಪುತ್ರ ಪ್ರಕಾಶ್ ಮಾಥೂರ್ ಕಾಲಾಪಾನಿ ವೀರರ ನೆಟ್‍ವರ್ಕ್ ಎಂದು ಸೆಲ್ಯುಲರ್ ಜೈಲ್ ಬಗ್ಗೆ, ಅಲ್ಲಿದ್ದ ಕೈದಿಗಳ ಬಗ್ಗೆ ಒಂದು ವೆಬ್‍ಸೈಟ್ ಅನಾವರಣಗೊಳಿಸಿದಾಗ, ವಿಶ್ವನಾಥ್ ಮಾಥೂರ್ ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದರೂ, ಅವರು ಬ್ರಿಟೀಷರ ಪ್ರಕಾರ ‘ರಾಜಕೀಯ ಕೈದಿ’ ಆಗಿರಲಿಲ್ಲವೆಂದು ಉಲ್ಲೇಖಿಸಿಬೇಕೆಂದು ಹಠಹಿಡಿದಿದ್ದಾರಂತೆ.

ಇತರರನ್ನು ಪ್ರಚೋದಿಸಿ, ತಾನು ಮಾತ್ರ ಸೇಫಾಗಿರುವ ಕಲೆ ಸಾವರ್ಕರ್ ಗೆ ಅವತ್ತೇ ಸಿದ್ಧಿಸಿತ್ತು. ಆತನ ಹಿಂಬಾಲಕರಲ್ಲಿ ಇವತ್ತು ಕಂಡು ಬರುವ ಲಕ್ಷಣ ಇದು. ಸಾವರ್ಕರ್ ಜೈಲಿಗೆ ಹೋಗಿದ್ದು ಮೂರು ಬ್ರಿಟೀಷ ಅಧಿಕಾರಿಗಳ ಕೊಲೆಯಲ್ಲಿ ಆತನ ಪಾತ್ರವಿತ್ತು ಎಂಬ ಕಾರಣಕ್ಕೆ. ಆದರೆ ಬ್ರಿಟೀಷರಿಗೆ ಸಾವರ್ಕರ್ ವಿರುದ್ದ ಸರಿಯಾದ ಸಾಕ್ಷ್ಯಾಧಾರ ಸಿಗದಿದ್ದುದ್ದರಿಂದ ಅವರಿಗೆ ಗಲ್ಲು ಶಿಕ್ಷೆಯಾಗಲಿಲ್ಲ. ಆದರೆ ಸಾವರ್ಕರ್ ಸತ್ತು ಮೂರು ವರುಷದ ನಂತರ ಆತನ ಜೀವನಚರಿತ್ರೆಕಾರ ಧನಂಜಯ ಕೀರ್ ಬ್ರಿಟೀಷ ಅಧಿಕಾರಿಗಳ ಕೊಲೆಯಲ್ಲಿ ಸಾವರ್ಕರ್ ಪಾತ್ರದ ಬಗ್ಗೆ ಇರುವ ಸಾಕ್ಷ್ಯಾಧಾರಗಳನ್ನು ಕೊಟ್ಟಿದ್ದರು. ಇದರ ಬಗ್ಗೆ ಖ್ಯಾತ ಇತಿಹಾಸಕಾರ ಎಜಿ ನೂರಾನಿ ಅವರ ಪುಸ್ತಕ ‘Savarkar and Hindutva: The Godse Connection’ ಹೀಗೆನ್ನುತ್ತಾರೆ “ತನ್ನ ವಿರುದ್ದವಿರುವ ಸಾಕ್ಷ್ಯಾಧಾರಗಳನ್ನು ತಾನು ಸತ್ತ ನಂತರನೇ ಬಹಿರಂಗಗೊಳಿಸಬೇಕೆಂದು ಜೀವನಚರಿತ್ರೆಕಾರನಿಗೆ ಸಾವರ್ಕರ್ರೇ ತಾಕೀತಿತ್ತಿರಬೇಕು. ಇಲ್ಲಾಂದರೆ ಅವರ ಜೀವನಚರಿತ್ರೆ ಮೊದಲ ಬಾರಿ ಪ್ರಕಟವಾದ ನಂತರ, ಎರಡನೇ ಆವೃತ್ತಿ ಬರಲು ಹದಿನಾರು ವರುಷಗಳ ಕಾಲ ಬೇಕಾಗಿದ್ದಿಲ್ಲ’.

ತನ್ನ ಜೊತೆಯಿದ್ದವರನ್ನು ಪ್ರಚೋದಿಸಿ, ತಾನು ತಪ್ಪಿಸಿಕೊಳ್ಳುವುದು ಒಂದು ಭಯಂಕರ ಕಲೆ. ಗಾಂಧೀಜಿಯವರ ಕೊಲೆ ಕೇಸಿನಲ್ಲೂ ಇದನ್ನೇ ಮಾಡಿದ್ದರು ಸಾವರ್ಕರ್. ಸಾವರ್ಕರ್ ನಿಧನವಾಗಿ ಒಂದು ವರುಷದ ನಂತರ ಗಾಂಧೀ ಕೊಲೆ ಸಂಚಿನಲ್ಲಿ ಶಿಕ್ಷೆಗೊಳಗಾಗಿದ್ದ ಗೋಪಾಲ್ ಗೋಡ್ಸೆ, ಮದನ್‍ಲಾಲ್ ಪಹ್ವಾ, ವಿಷ್ಣು ಕರ್ಕರೆ ಜೈಲುಶಿಕ್ಷೆ ಮುಗಿಸಿ ಹೊರಬಂದಾಗ, ಅವರನ್ನು ಸನ್ಮಾನಿಸಲು ಸಭೆ ನಡೆದಿತ್ತು (ಹೌದು ಕೊಲೆಗಾರರನ್ನು ಸನ್ಮಾನಿಸುವ ಕಲೆನೂ ಅವರ ಡಿ‍ಎನ್‍ಎ‍ಯಲ್ಲೇ ಇದೆ). ಈ ಸಭೆಯಲ್ಲಿ ಮಾತಾನಾಡಿದ ಬಾಲಗಂಗಾಧರ ತಿಲಕ್ ಅವರ ಮೊಮ್ಮಗ ಕೇಟ್ಕರ್ ತನಗೆ ಗಾಂಧೀಜಿಯವರ ಕೊಲೆಯಾಗುವ ಮೊದಲೇ ಅವರ ಕೊಲೆ ಸಂಚಿನ ಬಗ್ಗೆ ತಿಳಿದಿತ್ತು ಎಂದು ಹೇಳಿ ಸಾವರ್ಕರ್ ಗಾಂಧೀಜಿಯವರ ಕೊಲೆ ಸಂಚು ಮಾಡಿದ್ದರ ಬಗ್ಗೆ ಸಾರ್ವಜನಿಕವಾಗಿ ಹೇಳಿದ್ದರು. ಇದಾದ ನಂತರ ಕೇಟ್ಕರ್ ಬಂಧನವಾಗಿ, ಗಾಂಧೀ ಕೊಲೆ ಕೇಸಿನ ಹಿಂದಿನ ಸಂಚಿನ ಬಗ್ಗೆ ತನಿಖೆ ಮಾಡಲು ಕಪೂರ್ ಆಯೋಗ ನೇಮಕವಾಗುತ್ತೆ. ಆ ಆಯೋಗದ ವರದಿಯಲ್ಲಿ ಗಾಂಧಿ ಕೊಲೆ ಸಂಚಿನಲ್ಲಿ ಸಾವರ್ಕರ್ ಪಾತ್ರದ ಬಗ್ಗೆ ವಿಸ್ತ್ರತವಾಗಿ ಹೇಳಲಾಗಿದೆ. ಹೀಗೆ ಇತರರನ್ನು ಪ್ರಚೋದಿಸಿ, ತನ್ನನ್ನು ಮಾತ್ರ ಸೇಫಾಗಿಡುತ್ತಿದ್ದವರು ಯಾವುದೇ ಆಂಗಲ್‍ನಲ್ಲಿ ಸ್ವಾತಂತ್ರ್ಯ ಹೋರಾಟಗಾರನಾಗಿರಲು ಸಾಧ್ಯವಿಲ್ಲ. ತಾನು ಜೈಲಿಗೆ ಹೋಗುವ ಮೊದಲು ಸ್ವಾತಂತ್ರ್ಯಕ್ಕಾಗಿ ಮಾಡಿದ ಕೆಲಸಗಳ ಬಗ್ಗೆ ಬ್ರಿಟೀಷರಲ್ಲಿ ಕ್ಷಮೆ ಕೇಳಿದ ನಂತರ ಅದ್ಯಾವ ಸೀಮೆಯ ಸ್ವಾತಂತ್ರ್ಯ ಹೋರಾಟಗಾರರಿವರು?

Gladson Almeida