- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಕಣ್ವರ ಶಿಷ್ಯನೊಬ್ಬ ಕೈಯಲ್ಲಿ , ಯಜ್ಞಕ್ಕೆ ಬೇಕಾದ ಕುಶವನ್ನು ಸಂಗ್ರಹಿಸಿ, ಕೈಯಲ್ಲಿ ಹಿಡಿದುಕೊಂಡು ರಂಗ ಪ್ರವೇಶ ಮಾಡುತ್ತಾನೆ ಮೂರನೇಯ ಅಂಕದಲ್ಲಿ. ದುಷ್ಯಂತನ ಗುಣಗಾನ ಮಾಡುತ್ತಾ ಇದ್ದಾನೆ.ದುಷ್ಯಂತ ಮಹಾರಾಜನ ಪ್ರವೇಶ ಆಶ್ರಮದಲ್ಲಿ ಆಗುತ್ತಲೇ, ಯಜ್ಞಕಾರ್ಯಕ್ಕೆ ಅಡ್ಡ ಬರುತ್ತಿದ್ದ ಆತಂಕಗಳೆಲ್ಲ ದೂರಾದವು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾನೆ.
“ಧನುಷ: ಹೂಂಕಾರೇಣ ಏವ ಸ: ಹಿ
ವಿಘ್ನಾನ್ ಅಪೋಹತಿ”
ಅವನ ಧನುಷ್ಯದ ಹೂಂಕಾರ ಮಾತ್ರದಿಂದನೇ ವಿಘ್ನಗಳು ದೂರಾದವು.
ರುದ್ರದೇವರು ವೈರಿಗಳನ್ನು,ತಮ್ಮ ಹೂಂಕಾರ ಮಾತ್ರದಿಂದನೇ ಸಂಹಾರ ಮಾಡುವಂತಿದೆ. ರಾಜ ಶಿವನ ಸ್ವರೂಪವೇ!
ಶಿಷ್ಯ ಆಕಾಶದತ್ತ ನೋಡುತ್ತಾ ಏನೋ ನೋಡಿದವನಂತೆ ಬಡಬಡಿಸುವನು.
“ಹೇ ಪ್ರಿಯಂವದೇ, ಯಾರಿಗಾಗಿ ಕಮಲಪತ್ರವನ್ನು, ತಂಪನ್ನುಂಟು ಮಾಡುವ ವಾಳದ ಬೇರನ್ನು ತೆಗೆದುಕೊಂಡು ಹೋಗುತ್ತಿರುವಿ? ಸಖಿ ಶಕುಂತಲೆ ಗ್ರೀಷ್ಮದ ಬೇಗೆಯಿಂದ ಬಳಲುತ್ತಿರುವಳೇ? ಓಹೋ ,ಅವಳ
ಕಾಳಜಿ ಮಾಡಲೇಬೇಕು.ಕಾರಣ ಅವಳು ಕಣ್ವ ಋಷಿಗಳ ಉಸಿರೇ ಆಗಿದ್ದಾಳೆ.”
(ಸಾ ಕುಲಪತೆ: ಉಚ್ಛ್ವಸಿತಮ್ )
“ನಾನು ಸಹ ಯಜ್ಞದ ಉದಕವನ್ನು ಗೌತಮಿಯ ಜೊತೆಗೆ ಕಳಿಸುವೆ ಅವಳ ಪ್ರಶಮನಕ್ಕಾಗಿ” ಎನ್ನುವನು ಶಿಷ್ಯ.
ಇದರಿಂದ, ಕಣ್ವರು ಅನಾಥ ಶಿಶುವನ್ನು ತಂದು ಎಷ್ಟು ಪ್ರೀತಿಯಿಂದ ಸಲಹಿದರು ಎಂಬುದರ ಅರಿವಾಗುತ್ತದೆ ಅಲ್ಲದೇ ಶಕುಂತಲೆಯಯೊಂದಿಗೆ ಆಶ್ರಮದೊಳಗಿನ ಇತರರೂ
ಆತ್ಮೀಯತೆಯಿಂದ ಇರುವರು.
ಈಗ ಬರುವದು “ವಿಷ್ಕಂಭಕ.”
ಅಂದರೆ ಇಲ್ಲಿ ನಾಟಕವನ್ನು ಹಿಂದಿನ ಅಥವಾ ಮುಂದಿನ ಪ್ರಸಂಗವನ್ನು ಸಂಭಾಷಣೆಯ ಮೂಲಕ ಜೋಡಿಸುವ ಒಂದು ಪ್ರಕ್ರಿಯೆ. ಈ ಪ್ರಸಂಗಗಳನ್ನು ರಂಗದ ಮೇಲೆ ತೋರುವುದಿಲ್ಲ. ಸಂಕೀರ್ಣವಾಗಿ ಹೇಳಲಾಗುವದು.
ಕುಶಹಿಡಿದ ಶಿಷ್ಯ ರಂಗದ ಮೇಲಿಂದ ಸರಿದಾಗ , ರಾಜಾ ದುಷ್ಯಂತನು ಶ್ರಮದಿಂದ ನಿಟ್ಟುಸಿರು ಬಿಡುತ್ತಾ ರಂಗ ಪ್ರವೇಶಿಸುವನು.
ಈ ತಾಪಸ ಕನ್ಯೆ ಋಷಿಗಳ ಸ್ವತ್ತು ಎಂದು ತಿಳಿದಿದ್ದರೂ ಸಹ ತನ್ನ ಹೃದಯವನ್ನು ಅವಳಿಂದ ದೂರ ಮಾಡಲು ಆಗುತ್ತಿಲ್ಲವಲ್ಲ ಎಂದು ಚಿಂತಿಸುತ್ತಾ ಇರುವನು.
ಇಲ್ಲಿ ದುಷ್ಯಂತ ಹೇಳುವ ಒಂದು ಶ್ಲೋಕ ಅವನ ಮನಸ್ಸಿನ ಅವಸ್ಥೆಯನ್ನು ವಿಷದಪಡಿಸುವದು.
ತವ ಕುಸುಮ ಶರತ್ವಂ ಶೀತ ರಶ್ಮಿತ್ವಂ
ಇಂದೊ: ದ್ವಯಮಿದಮ್ ಅಯಥಾರ್ಥ ದೃಶ್ಯತೆ ಮದ್ವಿಧೇಷು.
ವಿಸೃಜತಿ ಹಿಮಗರಭೈ: ಅಗ್ನಿಂ ಇಂದು: ಮಯೂಖೈ:
ತ್ವಮಪಿ ಕುಸುಮ ಬಾಣಾನ್ ವಜ್ರಸಾರೀ ಕರೋಷಿ.
ಕಾಮನ ಐದು ಪುಷ್ಪಬಾಣಗಳು ನಿಜವಲ್ಲ,ಚಂದಿರನ ಅಮೃತ ಕಿರಣಗಳೂ ಶೀತಲತ್ವವನ್ನು ಪ್ರಸಾದಿಸುತ್ತಿಲ್ಲ ನನಗೆ.ಬದಲಾಗಿ ಚಂದ್ರನ ಕಿರಣಗಳು ಬೆಂಕಿಯನ್ನು ಸುರಿಸುವಂತಿದೆ ನನ್ನ ಅವಸ್ಥೆ. ಮದನನ ಕುಸುಮಶರಗಳು ಮೃದುತ್ವವನ್ನು ಕಳೆದುಕೊಂಡು ವಜ್ರದಂತೆ ಕಠಿಣವಾಗಿ ನನ್ನನ್ನು ಬಾಧಿಸುತ್ತಿವೆ.
ಇದು ದುಷ್ಯಂತನ ಉದ್ಗಾರ!
ವ್ಯತಿರೇಕ ಅಲಂಕಾರದ ಈ ಪದ್ಯ ನಾಯಕ ಮನದ ಸ್ಥಿತಿಯನ್ನು ವಿಶದಪಡಿಸಿದರೂ, ಅವನು ಪ್ರೇಮಪಾಶದಲ್ಲಿ ಸಿಕ್ಕಿರುವ ಅಥವಾ ಪ್ರೀತಿಯಿಂದ ಕುರುಡನಾಗಿದ್ದಾನೆ ಎಂದು ಹೇಳುವುದಿಲ್ಲ.
ಸೀತೆಯ ವಿರಹದಲ್ಲಿ ಕೂಡ ಚಂದ್ರನಲ್ಲಿ ಸೂರ್ಯನನ್ನು ಅನುಭವಿಸುತ್ತಾ ಇದ್ದ ಹೇಳಿಕೆ ಬರುತ್ತದೆ. ದುಷ್ಯಂತ ಶಕುಂತಲೆಯನ್ನು ಕಾಣುವ ಬಯಕೆಯಿಂದ ಹೆಜ್ಜೆ ಹಾಕುತ್ತಾ ಇದ್ದಾನೆ ಮಾಲಿನೀ ನದೀ ತೀರದ ಕಡೆಗೆ.
ಬೆಳ್ಳಗಿನ ಉಸುಕಿನಲ್ಲಿ ಆಗಲೇ ನಡೆದು ಹೋದ ಹೆಜ್ಜೆಯ ಗುರುತುಗಳನ್ನು ಕಾಣುವನು. ಇಲ್ಲಿ ಕಾಳಿದಾಸ ಎಷ್ಟು ಸೂಕ್ಷ್ಮವಾದ ವಿಷಯವನ್ನೂ ಬಣ್ಣಿಸಿದ್ದಾನೆ ಗಮನಿಸಿರಿ…
ಜಘನ ಗೌರವಾತ್ ಪಶ್ಚಾತ್, ಪುರಸ್ತಾತ್ ಅಭ್ಯುನ್ನತಾ .
ಅಂದರೆ ಹೆಜ್ಜೆಯ ಗುರುತುಗಳು ಮುಂಭಾಗದಲ್ಲಿ ಎತ್ತರವಾಗಿದ್ದು ಹಿಂಭಾಗದಲ್ಲಿ ತಳಕ್ಕೆ ಹೋಗಿವೆ. ಕಾರಣ ಅವಳ ನಿತಂಬದ ಭಾರದಿಂದ ಹಿಮ್ಮಡಿಗಳ ಕೆಳಗಿನ ಉಸುಕು ಜಾಸ್ತಿ ಕೆಳಕ್ಕೆ ಹೋಗಿದೆ!!
ಭಾರವಾದ , ಸ್ವಲ್ಪ ವಿಶಾಲವೇ ಆದ ನಿತಂಬಗಳು ಹೆಣ್ಣಿನ ಸೌಂದರ್ಯದ ಸಂಕೇತ. ಕವಿಯ ಈ ಕಲ್ಪನೆ ಆಗಾಧ ಅಲ್ಲವೇ!
ಈಗ ನೋಡೀ ಲತಾಮಂಟಪದ ದೃಶ್ಯ. ನಾವೆಲ್ಲ ನಿರೀಕ್ಷಿಸುತ್ತಾ ಇರುವ ಶಕುಂತಲೆಯ ದರ್ಶನ.. ರವಿವರ್ಮನ ಶಕುಂತಲೆಯ ಚಿತ್ರ ಕಣ್ಣಮುಂದೆ ಬಂದಿತೇ?
ಮಗ್ಗಲಾಗಿ ಮಲಗಿದ ಶಕುಂತಲೆ, ಕಾಲು ಹಾಗೂ ತಲೆಯ ಬಳಿ ಕಮಲದೆಲೆಯಿಂದ ಗಾಳಿ ಹಾಕುತ್ತಿರುವ ಪ್ರಿಯಂವದೆ, ಅನಸೂಯಾ ಸಖಿಯರು. ಈ ದೃಶ್ಯವನ್ನು ಕಂಡು ದುಷ್ಯಂತ ಸಹರ್ಷದಿಂದ ಉದ್ಗಾರ ತೆಗೆದನು..
” ಅಯೇ ಲಬ್ಧಂ ನೇತ್ರ ನಿರ್ವಾಣಮ್ “
ತನ್ನ ಹೃದಯದರಸಿಯನು ಕಂಡು ನನ್ನ ಕಣ್ಣುಗಳು ಸಾರ್ಥಕತೆಯನ್ನು ಪಡೆದವು. ನಿರ್ವಾಣ ಎಂದರೆ ಆನಂದದ ಅತಿರೇಕದ ಸ್ಥಿತಿ…Complete Bliss. ಅಧ್ಯಾತ್ಮದಲ್ಲಿ, ಸಾಧಕ ತನ್ನ ಸಾಧನೆಯಿಂದ ಆತ್ಮಸಾಕ್ಷಾತ್ಕಾರ ಹೊಂದಿದಾಗ, ಭಗವಂತನನ್ನು ಕಂಡಾಗ ಅವನೊಡನೆ ಒಂದಾದ ಭಾವವನ್ನು ಅನುಭವಿಸುವಾಗ ಆಗುವ ಉನ್ನತವಾದ ಆನಂದಕ್ಕೆ” ನಿರ್ವಾಣ ” ಎಂದು ಹೇಳುವರು.
ಈ ಒಂದೇ ವಾಕ್ಯದಲ್ಲಿ ಕವಿ, ಶಕುಂತಲೆಯ ದರ್ಶನದ ಪ್ರಭಾವ ದುಷ್ಯಂತನ ಮೇಲೆ ಎಷ್ಟು ಅಗಾಧವಾಗಿ ಆಯಿತು ಎಂಬುದನ್ನು ಸುಂದರವಾಗಿ ಹೇಳಿದ್ದಾನೆ ಅಲ್ಲವೇ!
“ಏಷಾ ಮೇ ಮನೋರಥ ಪ್ರಿಯತಮಾ”
ಮನೋರಥಾನಾಂ ಪ್ರಿಯತಮಾ ..
The best beloved of my desires, beloved of heart’s yearning and not by actual possession.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ