- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಒಬ್ಬ ಮಂತ್ರಿಯ ಹೆಂಡತಿಯ ವಜ್ರದ ಹಾರ ಕಳುವಾಯಿತು. ಪೋಲೀಸ ಕಮೀಷನರ್ ಗೆ ದೂರು ಹೋಯಿತು.ತನಿಖೆ ಪ್ರಾರಂಭ ಆಗಿ ನಾಲ್ಕೂ ದಿಕ್ಕುಗಳಲ್ಲಿ ಪೊಲೀಸರು ಹೋದರು. ಒಂದೆರಡು ದಿನದಲ್ಲಿ ಮಂತ್ರಿಗಳಿಂದ ಕಮೀಶನರಿಗೆ ಫೋನು ಬಂತು.
” ಹಾರ ಸಿಕ್ಕಿತು. ಮನೆಯ ಬಾತ್ ರೂಮಿನಲ್ಲಿ ಇತ್ತು.”
ಸಾಹೇಬರು ಪೋಲಿಸರಿಗೆ ಇನ್ವೆಸ್ಟಿಗೇಷನ್ ನಿಲ್ಲಿಸಲು ಆಜ್ಞಾಪಿಸಿದಾಗ ಪೋಲೀಸರಿಂದ ಮಾಹಿತಿ ದೊರಕುತ್ತದೆ.
“ಈಗಾಗಲೇ ನಾವು ನಾಲ್ಕು ಕಳ್ಳರನ್ನು ಹಿಡಿದಿದ್ದೇವೆ, ಸರ್.
ಅವರು ಕಳ್ಳತನ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾರೆ.”
😆😆😆😆😆😆
ಕಾಳಿದಾಸನ ಕಾಲದಲ್ಲೂ ಇಂಥ ಕಾನೂನು ವ್ಯವಸ್ಥೆ ಇತ್ತು ಎಂಬುದನ್ನು ಕಾಣುತ್ತೇವೆ. ಶಾಕುಂತಲದ ಆರನೆಯ ಅಂಕ ಇಂತಹಾ ಒಂದು ದೃಶ್ಯದಿಂದ ಪ್ರಾರಂಭ ಆಗುವುದು.
ಪ್ರಯಾಣ ಕಾಲದಲ್ಲಿ ಶಕುಂತಲೆಯ ಬೆರಳಿನಿಂದ ಉಂಗುರ ಶಚಿತೀರ್ಥದಲ್ಲಿ ಜಾರಿ ಬಿದ್ದು ಮೀನಿನ ಹೊಟ್ಟೆ ಸೇರುತ್ತದೆ. ಉಂಗುರ ಜಾರಿ ಬೀಳದೆ ಇರಲು ಹೇಗೆ ಸಾಧ್ಯ ಹೇಳೀ ?? ದುಷ್ಯಂತನನೋ ಬಾಹುಬಲೀ. ಶಕುಂತಲೆಯ ಸುಕೋಮಲ ಬೆರಳಿಗೆ ಅವನ ಉಂಗುರ ಹೇಗೆ ಫಿಟ್ ಆದೀತು! ಹೀಗಾಗಿ ಅದು ಜಾರಿ ಹೋದದ್ದು ಅಸಂಭವ ಏನಲ್ಲ.
ಉಂಗುರ ನುಂಗಿದ ಮೀನು ಬಲೆಯಲ್ಲಿ ಬಿದ್ದು ಮೀನುಗಾರನ ಕೈ ಸೇರಿತು. ಮೀನಿನ ಹೊಟ್ಟೆಯಿಂದ ದೊರಕಿದ ಉಂಗುರವನ್ನು ಅವನು ಮಾರಲು ಹೋದಾಗ ಪೋಲೀಸರಿಬ್ಬರು ಅವನನ್ನು ಕಳ್ಳತನದ ಆರೋಪ ಹೊರಿಸಿ ಬಂಧಿಸುವರು.
ಮೀನುಗಾರ ತಾನು ನಿರಪರಾಧಿ, ಈ ಉಂಗುರ ನನಗೆ ಮೀನದ ಹೊಟ್ಟೆಯಲ್ಲಿ ಸಿಕ್ಕಿತು ಎಂದು ಸತ್ಯ ಪ್ರತಿಪಾದನೆ ಮಾಡಲು ಶತ ಪ್ರಯತ್ನ ಮಾಡುವನು.
“ನೀನು ಕಳ್ಳತನ ಮಾಡದಿದ್ದಲ್ಲಿ ಅರಸನೇನು ನೀನು ಯೋಗ್ಯ ಬ್ರಾಹ್ಮಣ ಎಂದು ಸನ್ಮಾನಮಾಡಿ ಈ ರಾಜಮುದ್ರೆಯ ಉಂಗುರವನ್ನು ಬಹುಮತಿಯಾಗಿ ಕೊಟ್ಟನೇ” ಎಂದು ಹಾಸ್ಯ ಮಾಡುವರು.
” ಅಲ್ಲಾ ಸ್ವಾಮಿ, ನಾನು ಈ ಶಕ್ರಾವತಾರದಲ್ಲಿ ವಾಸಿಸುವ ಸಾಧಾರಣ ಮೀನುಗಾರ ” ಎಂದು ಪರಿಚಯ ಕೊಡುವನು.
“ಏ ಮಗನೇ, ನಾವೇನು ನಿನ್ನ ಜಾತಿಯನ್ನು ಕೇಳಿದ್ದೇವೆಯಾ?” ಎಂದು ದಬಾಯಿಸುವರು.
ಪೋಲಿಸರ ಮೇಲಾಧಿಕಾರಿ ದುಷ್ಯಂತನ ಭಾವಮೈದುನ ಆಗಿರುವನು, ಇವನನ್ನು ಶ್ಯಾಲ: ಎಂದು ಕರೆಯುವರು. ಈಗಲೂ ಹೆಂಡತಿಯ ತಮ್ಮನನ್ನು ಸಾಲಾ ಎಂದೇ ಕರೆಯುತ್ತಾರೆ ಅಲ್ಲವೇ !
ತಾನು ಕುಟುಂಬ ನಿರ್ವಹಣೆಗಾಗಿ ಮೀನುಗಾರಿಕೆ ಮಾಡುವವನು, ಎಂದು ಮೀನುಗಾರ ಹೇಳಿದಾಗ
” ಓಹೋ ಅತಿ ವಿಶುದ್ಧವಾದ ಉದ್ಯೋಗ ನಿನ್ನದು”
ಎಂದು ಶ್ಯಾಲ ಅಪಹಾಸ್ಯ ಮಾಡುತ್ತಾನೆ.
“ಸಹಜಂ ಕಿಲ ಯತ್ ವಿನಿಂದಿತಂ
ನ ಖಲು ತತ್ ಕರ್ಮ ವಿವರ್ಜನೀಯಮ್ .
ಪಶುಮಾರಣ ಕರ್ಮದಾರುಣ: ಅನುಕಂಪಾಮೃದು: ಏವ ಶ್ರೋತ್ರಿಯ: “
“ಓಹೋ, ನಿನ್ನ ವಂಶಪಾರಂಪರ್ಯ ಆಗೀ ಬಂದ ಉದ್ಯೋಗ ಅಲ್ಲವೇ ಇದು! ಅದನ್ನು ಬಿಡಬಾರದು. ಯಾರ ನಿಂದೆಗೂ ಕಿವಿಗೊಡಬಾರದಪ್ಪಾ! ವೇದ ಪಾರಂಗತರಾದ ಬ್ರಾಹ್ಮಣ ಯಜ್ಞಕ್ಕಾಗಿ ಪಶುವಿನ ಬಲಿ ಏರಿಸಿದರೂ ಅವನನ್ನು ಕರುಣೆಯ ಸಾಕಾರ ಮೂರ್ತಿ ಎಂದೇ ಎನ್ನುವರು ಅಲ್ಲವೇ!! “
ಎಂದು ಒಬ್ಬ ಪೇದೆ ಮೀನುಗಾರರನ್ನು ಸಂಶಯದ ದೃಷ್ಟಿಯಿಂದ ಉದ್ಗರಿಸುವನು.
ಆಗ ಶ್ಯಾಲನು ಉಂಗುರವನ್ನು ತನ್ನ ಮುಖದ ಹತ್ತಿರ ಹಿಡಿದಾಗ ಅದರಿಂದ ಮೀನಿನ ವಾಸನೆ ಮೂಗಿಗೆ ಬಡಿದು ಅವನಿಗೆ ಮೀನುಗಾರ ಹೇಳುವ ಮಾತಿನಲ್ಲಿ ತತ್ಥ್ಯ ಇದೆ ಎನಿಸಿ ಪೂರ್ಣ ವೃತ್ತಾಂತವನ್ನು ಕೇಳುವನು.
” ಮೀನುಗಾರಿಕೆ ನನ್ನ ಸಹಜ ಧರ್ಮ. ಬಲೆಯಲ್ಲಿ ಸಿಲುಕಿದ ಮೀನಿನಲ್ಲಿ ಈ ಉಂಗುರ ಸಿಕ್ಕಿದೆ. ನೀವು ಎಷ್ಟೇ ಹೊಡೀರೀ ,ಬಡೀರೀ ಇದು ಸತ್ಯ”
ಎಂದು ಸ್ವಧರ್ಮೆ ನಿಧನಂ ಶ್ರೇಯ: ಎಂದು ನಂಬಿದವ ಮೀನುಗಾರ.ಅವನನ್ನು ಅರಸ ಹತ್ತಿರ ಕರೆದುಕೊಂಡು ಹೋಗುವದು ಎಂದು ನಿರ್ಧರಿಸಿದರು.
ದುಷ್ಯಂತನಿಗೆ ಉಂಗುರ ತೋರಿಸಲಾಗಿ ಅವನಿಗೆ ಹಳೆಯ ಸಂಗತಿಗಳು ಪ್ರಜ್ಞೆಯೊಳಗೆ ನುಗ್ಗಿ ಬಂದು
ಶಕುಂತಲೆಯ ನೆನಪು ಮರುಕಳಿಸಿತು.
ಇದೇ ಅಭಿಜ್ಞಾನ .
ದುಷ್ಯಂತ ಮೀನುಗಾರನಿಗೆ ಬಂಗಾರದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟು ಕಳಿಸುವನು. ಗಲ್ಲಿಗೆ ಏರಿಸಬೇಕಾದವನಿಗೆ ಆನೆಯ ಅಂಬಾರಿಯ ಮೇಲೆ ಏರಿಸಿದಂತಾಯಿತು. ಧೀವರನ ಕೈಯಲ್ಲಿ ಹಣ ಬಂದ ಕೂಡಲೇ ರಕ್ಷಕ ಭಟರ ನಡವಳಿಕೆ ಬದಲಾಯಿತು. ಹಣದ ಆಶೆ! ಬೆಸ್ತರವನೂ ತನಗೆ ಸಿಕ್ಕ ಸಂಪತ್ತನ್ನು
ಹಂಚುವ ಉದಾರ ಹಾಗೂ ವಿಶಾಲ ಬುದ್ಧಿಯವನು. ಭಟರಿಗೂ ಹಣ ಹಂಚುವನು. ಶತ್ರುಗಳು ಮಿತ್ರರಾದರು!! ಪೋಲೀಸರಿಗೆ ಹೊಟ್ಟೆಕಿಚ್ಚು, ಅವರಿಗೆ ಪಾಲು ಕೊಡದಿದ್ದರೆ ಅವರು ತನ್ನನ್ನು ಹಾಯಾಗಿ ಜೀವಿಸಲು ಬಿಡರು. ಕಿರುಕುಳ ಕೊಟ್ಟು ಹೇಗಾದರೂ ಮಾಡೀ ವಸೂಲ ಮಾಡುವವರೇ ಎಂದು ಬೆಸ್ತನಿಗೆ ಅನಿಸಿರಬಹುದು .
ಶ್ಯಾಲನೂ ಧೀವರನ ಪ್ರಾಮಾಣಿಕತೆ ಮೆಚ್ಚಿ ಅವನ್ನು ತನ್ನ ಪ್ರೀತಿಯ ಮಿತ್ರ ಎಂದು ಸ್ವೀಕರಿಸಿದನು. ಎಲ್ಲರೂ ಕಲೆತು ಹಬ್ಬ ಆಚರಿಸಲು ಮದಿರೆಯಂಗಡಿ ಸೇರುವರು.
ಈಗಲೂ ಇಂಥ ಘಟನೆಗಳು ನಡೀತಾನೆ ಇವೆ ಅಲ್ಲವೇ!!
ಉಂಗುರ ಕಾಣುತ್ತಲೇ ದುಷ್ಯಂತಗೆ ಫ್ಲ್ಯಾಶ್ ಬ್ಯಾಕ್ (Flash back) ಆಯಿತು. ಸುಲಭಕೋಪಿ ದುರ್ವಾಸರು ಕೊಟ್ಟ ಉಶ್ಶಾಪದ ಪರಿಣಾಮವಾಗಿ ಉಂಗುರದಿಂದ ಅಭಿಜ್ಞಾನ ಆಯಿತು. ದುಷ್ಯಂತನಿಗೆ ಅತೀವ ದುಃಖವಾಯಿತು ಆದರೆ ಪರಿಸ್ಥಿತಿ ಕೈಮೀರಿ ಹೋಗಿದೆ, ನಿಸ್ಸಹಾಯಕನಾಗಿರುವನು. ವಿರಹದಿಂದ ಬಳಲುವ ರಾಜನನ್ನು ಸಾನುಮತಿ ಎಂಬ ಆಪ್ಸರೆ ಹಿಂಬಾಲಿಸುತ್ತಾ ಇರುವಳು. ಇವಳು ಮೇನಕೆಯ ಸ್ನೇಹಿತೆ, ಶಕುಂತಲೆಯ ಹಿತೈಷಿ. ಆಗಾಗ ಭೂಮಿಗೆ ಬಂದು ಶಕುಂತಲೆಯ ಸಮಾಚಾರಗಳನ್ನು ಮೇನಕೆಗೆ ತಲುಪಿಸುವವಳು.
ವಸಂತದ ಆಗಮನ ಆಗಿದೆ. ರಾಜಧಾನಿಯಲ್ಲಿ ಅಥವಾ ಅರಮನೆಯಲ್ಲಿ ಉತ್ಸವದ ಲಕ್ಷಣ ತೋರುತ್ತಿಲ್ಲ. ಇಬ್ಬರು ಚೇಟಿಯರು ಉದ್ಯಾನವನ್ನು ಪ್ರವೇಶಿಸುವರು. ಅವರಿಬ್ಬರ ಸಂಭಾಷಣೆಯನ್ನು ಸಾನುಮತಿ ಮರೆಗೆ ನಿಂತು ಆಲಿಸುವಳು. ಅವರಿಂದ ರಾಜನ ಸಮಾಚಾರ ತಿಳಿಯುವ ಕುತೂಹಲ ಅವಳಿಗೆ.
” ಆಮ್ರದ ಮರ ಹೂ ಬಿಟ್ಟಿದೆ. ಕೆಂಪು ಹಸಿರು ಕೂಡಿದ ಚಿಗುರು ಸುಂದರವಾಗಿದೆ. ವಸಂತದ ಆಗಮನವನ್ನು ಸಾರುತ್ತವೆ.”
ಎಂದು ಒಬ್ಬಳು ಮನದಲ್ಲೇ ಗುಣುಗುಣಿಸುತ್ತಿದ್ದಾಳೆ. ಒಬ್ಬಳ ಹೆಸರು ಪರಭೃತಿಕೆ (ಕೋಗಿಲೆ). ಇನ್ನೊಬ್ಬಳು ಮಧುರಿಕೆ (ಭೃಂಗ). ಇವರ ಹೆಸರುಗಳೂ ವಸಂತದ ಆಗಮನವನ್ನು ಸೂಚಿಸುತ್ತಿವೆ ಅಲ್ಲವೇ! ( ಕಾಳಿದಾಸ, ಈ ಹೆಸರುಗಳನ್ನು, ರಂಗಸಜ್ಜಿಕೆಗೆ ಹೊಂದುವಂತೆಯೇ ಆರಿಸಿದಂತಿದೆ). ಮದನೋತ್ಸವ ಆಚರಿಸಲು, ಕಾಮನ ಅರ್ಚನೆಗೆಂದು ಹೂವು ಕೀಳಲು ಉದ್ಯಾನಕ್ಕೆ ಬಂದಿದ್ದಾರೆ ಸಖಿಯರು. ಮದನನಿಂದ ಮತ್ತರಾಗಿದ್ದಾರೆ.
ಆಗ ಕಂಚುಕಿ ಅವರನ್ನು ತಡೆಯುವನು.
“ಮಹಾರಾಜರು ವಸಂತೋತ್ಸವ ಆಚರಿಸಬಾರದು ಎಂದು ಆಜ್ಞೆ ಹೊರಡಿಸಿದ್ದಾರೆ. ಆದ್ದರಿಂದ ಮಾವಿನ ಚಿಗುರನ್ನು ಹರಿಯುವದು ಅಪರಾಧ.” ಎಂದು ರಾಜಾಜ್ಞೆಯನ್ನು ಘೋಷಿಸಿದನು.
“ಚೂತಾನಾಂ ಚಿರನಿರ್ಗತಾಪಿ ಕಲಿಕಾ ಬಧ್ನಾತಿ ನ ಸ್ವಂ ರಜ: .
ಸನ್ನಧ್ಧಂ ಯದಪಿ ಸ್ಥಿತಂ ಕುರಬಕಂ
ತತ್ಕೋರಕ ಅವಸ್ಥಯಾ
ಕಂಠೇಷು ಸ್ಖಲಿತಂ ಗತೆ ಅಪಿ ಶಿಶಿರೆ
ಪುಂಸ್ಕೋಕಿಲಾನಾಂ ರೃತಂ .
ಶಂಕೆ ಸಂಹರತಿ ಸ್ಮರ: ಅಪಿ ಚಕಿತ: ತೂಣಾರ್ಧಕೃಷ್ಟಂ ಶರಮ್ “
“ಮಾವಿನ ಗಿಡದಲ್ಲಿ ವಸಂತಾಗಮನದಲ್ಲಿ ಅರಳಬೇಕಾದ ಮೊಗ್ಗುಗಳೂ ಸಹ ಪೂರ್ತಿಯಾಗಿ ಅರಳಿಲ್ಲ. ಪರಾಗ ಸನ್ನದ್ಧವಾಗಿಲ್ಲ. ಈ ಸಮಯದಲ್ಲಿ ಕೇಳಿಬರುವ ಗಂಡು ಕೋಗಿಲೆಯ ಗಾನವೂ ಕೇಳುತ್ತಿಲ್ಲ. ಅವುಗಳ ಸ್ವರ ಕಂಠದಲ್ಲಿ ಸ್ಥಗಿತಗೊಂಡಿದೆ. ಹೇಮಂತ ಕಳೆದರೂ ಮನ್ಮಥನೂ ತನ್ನ ಮದನ ಬಾಣಗಳನ್ನು ಹೂಡಲು ಹಿಂಜರಿಯುತ್ತ ಇದ್ದಂತಿದೆ.”
ವಸಂತ ಉತ್ಸವ ಆಚರಿಸ ಬಾರದು ಎಂದು ಆದ ರಾಜಾಜ್ಞೆ ಪ್ರಕೃತಿಯಲ್ಲಿ ಕೂಡ ವ್ಯತ್ಯಾಸ ಮಾಡಿದಂತಿದೆ. ಎಲ್ಲೆಡೆ ನಿರುತ್ಸಾಹ ಆವರಿಸಿದೆ. ದುಷ್ಯಂತನ ವಿರಹ ವ್ಯಥೆಯನ್ನು ಸಾರುವಂತಿದೆ.
ಇದನ್ನೆಲ್ಲ ಆಲಿಸುತ್ತಾ ಇದ್ದ ಸಾನುಮತಿಗೆ ದುಷ್ಯಂತನ ದು:ಖದ ಅರಿವು ಆಗಿದೆ.ಈ ರಾಜರ್ಷಿಯು ದು:ಖದಿಂದ ಉತ್ಸವ ನಿಷೇಧಿಸಿದ್ದಾನೆ. ಉತ್ಸವ ಪ್ರಿಯನಾದ ರಾಜನು ಹೀಗೆ ನಿಷೇಧ ತರಲು ಗುರುತರ ಕಾರಣವೇ ಅವನನ್ನು ಬಾಧಿಸುತ್ತಿದೆ ಎಂದು ಊಹಿಸಿದಳು ಸಾನುಮತಿ. ದುಷ್ಯಂತನಿಗೆ ಶಕುಂತಲೆಯಲ್ಲಿ ಇದ್ದ ಪ್ರೇಮ ಅಷ್ಟು ಗಾಢವಾದುದು ಎಂದುಕೊಳ್ಳುವಳು.
ಈ ಕೆಳಗಿನ ಮಾತನ್ನು ಕಂಚುಕೀ ಹೇಳುವನು…
“ರಮ್ಯಂ ದ್ವೇಷ್ಟಿ ಯಥಾ ಪುರಾ
ಪ್ರಕೃತಿಭಿ: ನಪ್ರತ್ಯಹಂ ಸೇವ್ಯತೆ.
ಶಯ್ಯಾಪ್ರಾಂತ ವಿವರ್ತನೈ: ವಿಗಮಯತಿ ಉನ್ನಿದ್ರ ಏವ ಕ್ಷಪಾ :
ದಾಕ್ಷಿಣ್ಯೇನ ದದಾತಿ ವಾಚಮ್ ಉಚಿತಮ್ ಅಂತ:ಪುರೇಭ್ಯೊ ಯದಾ .ಗೋತ್ರೇಷು ಸ್ಖಲಿತ: ತದಾ ಭವತಿ ಚ ವ್ರೀಡಾವಿಲಕ್ಷ : ಚಿರಮ್.”
ಆಕರ್ಷಣೆಯ ಪ್ರತಿಯೊಂದು ವಸ್ತುವನ್ನೂ ರಾಜ ದ್ವೇಷಿಸುತ್ತಾ ಇರುವನು. ಮಂತ್ರಿಗಳೊಂದಿಗೆ ಮುಂಚಿನಂತೆ ಸಮಾಲೋಚನೆ ಮಾಡುತ್ತಿಲ್ಲ. ರಾತ್ರಿ ನಿದ್ರೆ ಇಲ್ಲದೆ, ಹಾಸಿಗೆಯಲ್ಲಿ ಹೊರಳಾಡಿ ಕಳೆಯುವನು. ಅಂತ:ಪುರದ ಸ್ತ್ರೀಯರೊಂದಿಗೆ ಸರಿಯಾಗಿ ಮಾತನಾಡುತ್ತಾ ಇಲ್ಲ. ಅವರನ್ನು ಕರೆಯುವಾಗ ತಪ್ಪು ಹೆಸರಿನಿಂದ ಕೂಗುವನು. ಶಕುಂತಲೆ,ಕಣ್ವಸುತೆ ಎಂದು ಬಡಬಡಿಸುತ್ತಾ ಇರುವನು.”
ಇದು ವಿರಹ ವೇದನೆಯನ್ನು ಅನುಭವಿಸುತ್ತಾ ಇರುವ ದುಷ್ಯಂತನ
ಚಿತ್ರಣ. ಸಾನುಮತಿಗೆ ಸಂತೋಷ. ಮೇನಕೆಗೆ ಶುಭ ಸಮಾಚಾರ ತಿಳಿಸುವ ಕಾತರತೆ ಅವಳಿಗೆ!
ವಸಂತನ ಆಗಮನಕ್ಕೆ ರಾಜರು ಆಚರಿಸುವ ವಸಂತೋತ್ಸವ ಬಹಳ ವಿಜೃಂಭಣೆಯಿಂದ ಜರುಗುತ್ತಾ ಇತ್ತು. ಕಾಮದೇವನಿಗೆ ಮುಖ್ಯವಾಗಿ ಪೂಜೆ ಸಲ್ಲಿಸುವದು ವಾಡಿಕೆ. ಚೈತ್ರದ ಈ ಹಬ್ಬವನ್ನು ನೃತ್ಯ , ಸಂಗೀತಗಳೊಂದಿಗೆ ಎಲ್ಲವರ್ಗದವರೂ ಕಲೆತು ಆಚರಿಸುವ ಮಹತ್ವ ಕಾರ್ಯಕ್ರಮ. ಹೊಸ ಉಡುಪು ಧರಿಸಿ, ಅದರ ಮೇಲೆ ಕೆಂಪು ಬಣ್ಣದ ಪುಡಿ ಇಲ್ಲವೇ ಕೆಂಪು ನೀರು ಸಿಂಪಡಿಸುವರು. ಎಲ್ಲ ಕಡೆಗೆ ಹೂವುಗಳ ,ಮಾವಿನ ಚಿಗುರು ಗಳ ಶೃಂಗಾರ. ಅಶೋಕ ವೃಕ್ಷದ ಅಡಿಯಲ್ಲಿ ಮನ್ಮಥನ ಪೂಜೆ ಜರುಗುವದು. ಹೋಳಿ ಹುಣ್ಣಿಮೆಯಂದು ಜರುಗುವ ಹಬ್ಬ ಎಲ್ಲರಿಗೂ ಸಂತೋಷದಾಯಕವಾಗಿತ್ತು(ಆಗ ವಸಂತೋತ್ಸವ ಈಗಿನ ಹೋಳೀ ಹಬ್ಬ). ಆದರೆ ಈ ವರುಷ ಶಕುಂತಲೆಯ ವಿರಹ ತಾಪ ಅನುಭವಿಸುತ್ತಾ, ಯಾವ ಉತ್ಸವ, ಸಮಾರಂಭಗಳನ್ನು ಆಚರಿಸಲು ಉತ್ಸಾಹ ಇಲ್ಲದಾಗಿದೆ.
ದುಷ್ಯಂತ ಡಿಪ್ರೆಷನ್ (depression) ಲ್ಲಿ ಇರುವನು!!😔😔😔😔😔
ಹೂವು ಕೀಳಲು ಬಂದ ಚೇಟಿಯರು ಕಂಚುಕಿಯ ಮಾತನ್ನು ಕೇಳಿದಾಗ ಅವರಿಗೂ ರಾಜನಲ್ಲಿ ಅನುಕಂಪ ಮೂಡಿತು. ಅಷ್ಟರಲ್ಲಿ ರಾಜನೇ ಉದ್ಯಾನವನ್ನು ಪ್ರವೇಶಿಸುತ್ತಿರುವ ಘೋಷಣೆ ಕೇಳಿಬರುವದು. ಅವನ ಮನದ ಸ್ಥಿತಿಯನ್ನು ಅವನಿಂದಲೇ ಕೇಳೋಣ!!
ಮುಂದಿನ ವಾರ!!
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..