ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

ಭಾರತೀಯ ಸೇನಾಪಡೆಯ ಸೈನಿಕನೊಬ್ಬ, ತನ್ನ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಲು ಹಳ್ಳಿಗೆ ಧಾವಿಸಿದ್ದಾನೆ. ಅಂತಿಮ ಕರ್ಮ ಮಾಡುತ್ತಿದ್ದಾಗ ಕಾರ್ಗಿಲ್ ಗಡಿರಕ್ಷಣೆಗಾಗಿ ಸೈನಿಕನಿಗೆ ತುರ್ತಾಗಿ ಕೆಲಸಕ್ಕೆ ಹಾಜರಾಗಲು ಕರೆ ಬಂದು, ಕರ್ತವ್ಯದ ಕರೆಗೆ ಓಗೊಟ್ಟು ಹೊರಟು ಬಿಡುವನು. ಆಪತ್ಕಾಲದಲ್ಲಿ ಕರ್ತವ್ಯ ಮುಖ್ಯ ಅಲ್ಲವೇ.

ದುಷ್ಯಂತ ತಾನು ಪಶ್ಚಾತ್ತಾಪದಿಂದ ದು:ಖದಲ್ಲಿ ಮುಳುಗಿದ್ದರೂ ಇಂದ್ರನ ಕರೆಗೆ ಓಗೊಟ್ಟು ಅಲ್ಲಿನ ತನ್ನ ಕರ್ತವ್ಯವನ್ನು ಪೂರೈಸಿ ಈಗ ಮಾತಲಿಯೊಂದಿಗೆ ತನ್ನ ರಾಜಧಾನಿಗೆ ಮರಳುತ್ತಿದ್ದಾನೆ.

ತಾನುಮಾಡಿದ ಅಲ್ಪ ಕಾರ್ಯಕ್ಕೆ ಇಂದ್ರನಿಂದ ಘನವಾದ ಗೌರವ, ಸನ್ಮಾನ‌ ದೊರಕಿತು ಎಂದು ದುಷ್ಯಂತನ ಅಭಿಪ್ರಾಯ.

ದುಷ್ಯಂತನನ್ನು ಬೀಳ್ಕೊಡುವಾಗ ಇಂದ್ರನು ಅವನ‌ ಕೊರಳಲ್ಲಿ ಜಯಮಾಲೆ ಹಾಕಿ ತನ್ನ ಹತ್ತಿರ‌ ಸಿಂಹಾಸನದ ಮೇಲೆ‌ ಕೂಡಿಸಿಕೊಂಡಿದ್ದನು. ಆ ಹಾರವೂ ಸಾಮಾನ್ಯವಾದುದಲ್ಲ. ಪಾರಿಜಾತ, ಕಲ್ಪವೃಕ್ಷ ಮುಂತಾದ ಸ್ವರ್ಗದ ಐದು ಗಿಡಗಳಲ್ಲಿ ಒಂದಾದ ಮಂದಾರದ ಹೂವಿನ‌ ಹಾರ, ಇಂದ್ರನಿಗೆ ಪ್ರಿಯವಾದ ಹರಿಚಂದನ ಗಿಡದ ಗಂಧದಿಂದ ಲೇಪನಗೊಂಡ ಹಾರ.

“ವಿಲಾಸ ಪ್ರಿಯನಾದ ಇಂದ್ರನಿಗೆ
ಯಾವ ಅಡೆತಡೆ ಬಂದರು ಶೀಘ್ರದಲ್ಲೇ ನಿವಾರಿಸಲ್ಪಡಬೇಕು.

ಈ ಮೊದಲು ವಿಷ್ಣು ನರಸಿಂಹ ಅವತಾರದಲ್ಲಿ ತನ್ನ ನಖಗಳಿಂದ ಹಿರಣ್ಯಕಶಿಪುವನ್ನು ಬಗೆದಂತೆ ಇದು ತಾವು ರಾಕ್ಷಸರ ಸಂಹಾರ‌ಮಾಡಿ ಇಂದ್ರನನ್ನು ಕಾಪಾಡಿದ್ದೀರಿ. ಇದು ಘನಕಾರ್ಯವೇ ಸೈ.”

ಎಂದು ಮಾತಲಿ ದುಷ್ಯಂತನ ಕಾರ್ಯವನ್ನು ಪ್ರಶಂಸಿಸುವನು.

ಆಗ ಮಹಾರಾಜನಾಡಿದ ನುಡಿ ಇದು.

“ಸಿದ್ಧ್ಯಂತಿ ಕರ್ಮಸು ಮಹತ್ಸ್ವಪಿ
ಯನ್ನಿಯೋಜ್ಯಾ: .‌
ಸಂಭಾವನಾಗುಣಮ್ ಏವ‌ ಹಿ ತಮ್ ಈಶ್ವರಾಣಾಮ್ .
ಕಿಂ ವಾ ಅಭಿವಷ್ಯತ್ ಅರುಣ: ತಮಸಾಮ್ ವಿಭೇತ್ತಾ
ತಂ ಚೇತ್ ಸಹಸ್ರಕಿರಣ: ಧುರಿ ನಾ ಅಕರಿಷ್ಯತ್ “

“ಮಹಾತ್ಮರಿಂದ ಸೇವಕರಲ್ಲಿ ತೋರಿಸಲ್ಪಟ್ಟ ನಂಬಿಕೆಯೇ ಯಶಸ್ಸಿಗೆ ಕಾರಣ. ಇದರಿಂದ ಸೈನಿಕನ ಆತ್ಮವಿಶ್ವಾಸ ಬೆಳೆದು ಯಶಸ್ಸು ಸಂಪಾದಿಸಲು ಸಾಧ್ಯ ಆಗಬಲ್ಲದು. ಸಹಸ್ರಕಿರಣನಾದ‌ ಸೂರ್ಯನ ಅನುಗ್ರಹ ಇರುವದರಿಂದಲೇ ಅಲ್ಲವೇ, ಅರುಣ ಕತ್ತಲೆಯನ್ನು ಓಡಿಸುವದು! ಸೂರ್ಯ ಅರುಣನನ್ನು ಸಾರಥಿ ಎಂದು ರಥದಲ್ಲಿ ಮುಂದೆ ಕೂಡಿಸಿದನೆಂದೇ ಅಂಧಕಾರ ದೂರಾಯಿತು.”

ಹೀಗೇ ವಿನಮ್ರತೆಯಿಂದ , ದುಷ್ಯಂತ ತನ್ನ‌ ಯಶಸ್ಸಿನ ಹಿರಿಮೆಯನ್ನು ‌ಇಂದ್ರನಿಗೇ‌ ಅರ್ಪಿಸುವನು.
ಇದು ಅವನ ಹಿರಿಮೆ ಅಲ್ಲವೇ !!

ಸ್ವರ್ಗ ಸೌಂದರ್ಯವನ್ನು ವರ್ಣಿಸುತ್ತಾ ಮಾತಲಿ ಹೇಳುತ್ತಾನೆ,

” ಗಿಡ,ಮರ ,ಗಾಳಿ ಎಲ್ಲ ನಿನ್ನ ಯಶಸ್ಸಿನ ಗಾಥೆಯನ್ನು ಹಾಡುತ್ತಿವೆ “

“ತ್ರಿಸ್ರೋತಸಂ ವಹತಿ ಯೊ ಗಗನ ಪ್ರತಿಷ್ಠಾಮ್ .
ಜ್ಯೋತೀಂಷಿ ವರ್ತಯತಿ ಚ ಪ್ರವಿಭಕ್ತ ರಶ್ಮಿ:
ತಸ್ಯ ದ್ವಿತೀಯ ಹರಿವಿಕ್ರಮನಿಸ್ತಮಸ್ಕಮ್
ವಾಯೊ: ಇಮಮ್ ಪರಿವಹಸ್ಯ ವದಂತಿ ಮಾರ್ಗಮ್ “

“ಮೂರು ಶಾಖೆಗಳಾಗಿ ದೇವಗಂಗೆ, ಮಂದಾಕಿನಿ ಹರಿಯುತ್ತಾ ಇರುವಳು. ಹಾಲಿನಷ್ಟು ಬೆಳ್ಳಗೆ ಗಂಗೆ. ಇನ್ನೊಬ್ಬಳು ಭಾಗೀರಥಿ ಯಾದರೆಮೂರನೇಯವಳು ಭೋಗವತೀ ಪಾತಾಳ ಲೋಕದಲ್ಲಿ ಪ್ರವಹಿಸುತ್ತಾಳೆ. ವಾಮನಾವತಾರದಲ್ಲಿ ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿ ದಾನ ಪಡೆದು ಒಂದು ಹೆಜ್ಜೆಯಿಂದ ಭೂಮಿಯನ್ನು ಆವರಿಸಿದರೆ ಎರಡನೇ ಹೆಜ್ಜೆಯಿಂದ ಸ್ವರ್ಗ ಲೋಕವನ್ನು ಆವರಿಸಿದನು. ಆದ್ದರಿಂದ ಈ ಮಾರ್ಗ‌ ಬಹಳ ಪವಿತ್ರವಾದದ್ದು.”

ಸ್ವರ್ಗದ ಮಹಾತ್ಮ್ಯವನ್ನು ವರ್ಣಿಸುತ್ತಾ ಸಾಗಿದ್ದಾನೆ ದೇವೇಂದ್ರ ಸಾರಥಿ, ಮಾತಲಿ.

ಆಗ ದುಷ್ಯಂತನಾಡಿದ ಮಾತು ಕೇಳಿ.

“ಮಾತಲೇ, ಅತ: ಖಲು ಸಬಾಹ್ಯಂತ:ಕರಣೊ ಮಮ ಅಂರಾತ್ಮಾ ಪ್ರಸೀದತಿ.”

“ನನ್ನ ಅಂಗಾಂಗಳು ಅಲ್ಲದೇ ನನ್ನ ಅಂತರಾತ್ಮವೂ ಸಹಿತ ಅತ್ಯಂತ ಮುದಗೊಂಡಿವೆ.”

ಹೊರಗೆ ಚಾಚಲ್ಪಟ್ಟ ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು ೧೦.
ಬುದ್ಧಿ, ಮನಸು, ಅಹಂಕಾರ ,ಚಿತ್ತ ಇವು ಒಳಗಿನ ಇಂದ್ರಿಯಗಳು.

ಸ್ವರ್ಗದ ದಾರಿಯಲಿ ಸಾಗಿದ ದುಷ್ಯಂತನಿಗೆ ಅವರ್ಣನೀಯ ‌ಆನಂದ, ಪ್ರಸನ್ನತೆಯನ್ನ ಅನುಭವಿಸುತ್ತಿರುವನು. ಮೋಡದಲ್ಲಿ ಹಾರುತ್ತಿರುವ ರಥದ ಚಕ್ರಗಳು‌ ನೀರ ಹನಿಗಳಿಂದ ಹಸಿಯಾಗಿವೆ.
ಮಳೆಗಾಗಿ ಎದುರು ನೋಡುತ್ತಿದ್ದ ಚಾತಕ ಪಕ್ಷಿಗಳು ಮಳೆಯ ಹನಿ ಕುಡಿದು ಗರ್ಭಧರಿಸಲು ಮೇಲೆ ಹಾರಿ, ರಥದ ಚಕ್ರದಲ್ಲಿ ನುಸುಳಲು ಪ್ರಯತ್ನಿಸುತ್ತಿವೆ.

ಕವಿಕಲ್ಪನೆ ಸುಂದರ‌ !
“ವಾರಿಗರ್ಭ ಉದರಾಣಾಂ….” ಯಾರ ಹೊಟ್ಟೆಯಲ್ಲಿ ನೀರು ಇರುವದೋ..
ಅಂದರೆ ಮೋಡಗಳು.
ಮೋಡಗಳ ತಾಕಲಾಟದಿಂದ ಉಂಟಾದ ಮಿಂಚಿನ ಬೆಳಕಿನಲಿ ಕುದುರೆಗಳೂ ವೇಗವಾಗಿ ಓಡುತ್ತಿವೆ. ರಥ ಇಳಿದಂತೆ ಮನುಷ್ಯ ಲೋಕದ ಸುಂದರ ದೃಶ್ಯಗಳು ಕಾಣಸಿಗುತ್ತವೆ.

“ಶೈಲಾನಾಮ್ ಅವರೋಹತೀವ
ಶಿಖರಾತ್ ಉನ್ಮಜ್ಜತಾಂ ಮೇದಿನೀ.
ಪರ್ಣಾಭ್ಯಂತರಲೀನತಾಂ ವಿಜಹತಿ
ಸ್ಕಂಧೋದಯಾತ್ ಪಾದಪಾ: .
ಸಂತಾನೈ: ತನುಭಾವನಷ್ಟ ಸಲಿಲಾ
ವ್ಯಕ್ತಿಂ ಭಜಂತಿ ಆಪಗಾ:
ಕೇನಾಪಿ ಉತ್ಕ್ಷಿಪತೇವ ಪಶ್ಯ
ಭುವನಂ ಮತ್ ಪಾರ್ಶ್ವಂ ಆನೀಯತೆ..”

“ಎತ್ತರದ ಪರ್ವತ ಶ್ರೇಣಿಗಳು ಕಾಣುತ್ತಿವೆ. ಅವುಗಳ ಮಧ್ಯೆ ಪೃಥ್ವಿ
ಕುಸಿಯುತ್ತಿರುವಂತಿದೆ. ಈಗ ವಿಮಾನ ಯಾತ್ರಿಕರು ಇಂಥದೇ ಅನುಭವ ಪಡೆಯುವರಲ್ಲವೇ!

( ಮಧು ಕೈಟಭ ರಾಕ್ಷಸರು ಕಬಳಿಸಿದ ಭೂಮಿ, ವಿಷ್ಣುವಿನಿಂದ ರಕ್ಷಿಸಲ್ಪಟ್ಟಿತು.ಅವರ ಮೇಧಸ್ ದಿಂದ ಹೊರಗೆ ತೆಗೆದವಳಾದ್ದರಿಂದ ಪೃಥ್ವಿಗೆ ಮೇದಿನೀ ಎಂದು ಹೆಸರು ಬಂದಿತು.)

ಎಲೆಗಳ ಶಾಖೆಗಳಲ್ಲಿ ಮುಚ್ಚಿ ಹೋದ ಗಿಡದ ಬಡ್ಡೆಗಳು ಕಾಣುತ್ತಿವೆ. ಮೊದಲು ಕಾಣುತ್ತಿದ್ದ ನೀರಿನ ಝರಿ ಗಳೀಗ ಬೃಹದಾಕಾರದ ನದಿಗಳಾಗಿ ತೋರುತ್ತಿವೆ. ರಥದ ವೇಗದಲ್ಲಿ ಪೃಥ್ವಿ ಯನ್ನು ಯಾರೋ ಎತ್ತಿ ನಮ್ಮ ಹತ್ತಿರ ತರುವಂತಿದೆ” ( ವ್ಯಕ್ತಿಯ ನೋಟದ ಅನುಭವ, ಚಲಿಸುವ ಕಣ್ಣಿಗೆ ಸಾಪೇಕ್ಷ. ಇದು ಆಧುನಿಕ ವಿಜ್ಞಾನದ ಥಿಯರಿ ಆಫ್ ರಿಲೇಟಿವಿಟಿ.)

ಭೂಮಿಯ ರಮಣೀಯತೆಯನ್ನು ಅನುಭವಿಸುತ್ತಾ ಇರುವನು ದುಷ್ಯಂತ. ಸಂತೋಷ ,ಆನಂದದ ಸಾಕ್ಷಾತ್ಕಾರದ ಅವನ ಅನುಭಾವದಲ್ಲಿ,
“ಜನನೀ ಜನ್ಮಭೂಮಿ: ಚ ಸ್ವರ್ಗಾತ್ ಅಪಿ ಗರೀಯಸೀ, “
ಎಂಬ ಉಕ್ತಿ ಎದ್ಧು ಕಾಣುವದು.

ಇಂದ್ರನ ಆತಿಥ್ಯ ಸ್ವೀಕರಿಸಿ , ಇನ್ನೂ ಕೆಲವು ದಿನ ಸ್ವರ್ಗದ ಭೋಗ ಆನಂದಿಸ‌‌ಬಹುದಿತ್ತು. ಎಲ್ಲವನ್ನೂ ನಿರಾಕರಿಸಿ ರಾಜ್ಯ ಪರಿಪಾಲನಾ ಕರ್ತವ್ಯಕ್ಕಾಗಿ ಮರಳಿದ್ದಾನೆ.