- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ನಾಟಕ ದೃಶ್ಯ ಕಾವ್ಯದ ಒಂದು ಭಾಗ ಎಂಬುದನ್ನು ಸುರಭಾರತಿಯ ಹಿಂದಿನ ಭಾಗದಲ್ಲಿ ತಿಳಿದು ಕೊಂಡಿದ್ದೇವೆ.
ಸಂಸ್ಕೃತ ಸಾಹಿತ್ಯದಲ್ಲಿ ನಾಟಕಕ್ಕೆ ಶ್ರೇಷ್ಠವಾದ ಸ್ಥಾನ ಇದೆ. ಸಾಹಿತ್ಯ ಸೋಪಾನದಲ್ಲಿ ಇದು ಎಲ್ಲಕ್ಕಿಂತ ಮೇಲಿನ ಮೆಟ್ಟಿಲು ಎಂದೇ ಭಾವಿಸುತ್ತಾರೆ. ಯಾಕೆ ಅಂದರೆ ನಾಟಕದಲ್ಲಿ ಅನೇಕ ಲಲಿತ ಕಲೆಗಳು ಸಮಂಜಸವಾಗಿ ಬೆರೆತು ಅಪೂರ್ವ ರಮಣೀಯತೆಯನ್ನು ತರುತ್ತವೆ. ಸಾಹಿತ್ಯದ ಗೊಂಚಲಿನಲ್ಲಿ ಕೊನೆಗೆ ಅರಳಿದ ದೊಡ್ಡ ಕುಸುಮವೇ ನಾಟಕ.
ದೃಶ್ಯ ಎಂದರೆ ನೋಡುವಂತಹದು…ಆದ್ದರಿಂದ ಇವಕ್ಕೆ ರೂಪಕ..(.ರೂಪ ಉಳ್ಳದ್ದು ) ಎಂದರು. ಸಂಗೀತ , ಸಾಹಿತ್ಯ ಅಭಿನಯಗಳೊಂದಿಗೆ ಕೆಲವು ಸಾರಿ ,ಕುಣಿತವೂ ಸೇರಿರಬಹುದು. ನಾಟಕವನ್ನು ಪ್ರದರ್ಶಿಸಲು
ಚಿತ್ರ, ಶಿಲ್ಪಮುಂತಾದ ಇತರ ಕುಶಲ ಕಲೆಗಳ ಸಹಾಯವೂ ಬೇಕು.ಹಿನ್ನೆಲೆಯಲ್ಲಿ ಆ ದೃಶ್ಯದ ಪರಿಸರ ಕಾಣಬೇಕು.
ಭರತನ ನಾಟ್ಯ ಶಾಸ್ತ್ರವೇ ಈ ಕುರಿತು ಲಭ್ಯವಾದ ಲಕ್ಷಣ ಗ್ರಂಥಗಳಲ್ಲಿ ಅತಿ ಪ್ರಾಚೀನವಾದದ್ದು. ಇದು ಕ್ರಿ.ಶ.ಒಂದು ಅಥವಾ ಎರಡನೇ ಶತಮಾನದ್ದು ಎಂದು ಹೇಳುವರು.
ಈಗ ನಾಟ್ಯದ ಸ್ವರೂಪ ತಿಳಿದರೆ ಒಳಿತಲ್ಲವೇ. ನಾಟ್ಯ ಎಂಬ ಪದವು ನೃತ್ ಎಂಬ ಧಾತುವಿನ ಪ್ರಾಕೃತರೂಪ. ಕುಣಿ ಎಂಬುದು ಅದರ ಅರ್ಥ. ಭಾವಗಳ ಅಭಿನಯ ಪೂರ್ವಕ ಪ್ರದರ್ಶನ ಇದರಲ್ಲಿ ಪ್ರಧಾನವಾದದ್ದು .
ನಾಟಕದಲ್ಲಿ ಮುಖ್ಯವಾಗಿ ಎರಡು ಅಂಗಗಳು – ‘ಅನುಕರಣ’ ಮತ್ತು ‘ಅವಸ್ಥೆ’.
ನಾಟಕದಲ್ಲಿ ಅಭಿನಯಿಸುವ ನಟನು ತಾನು ಅನುಕರಣ ಮಾಡುವ ವ್ಯಕ್ತಿಯ ವೇಷಭೂಷಣಗಳನ್ನು ಅನುಕರಣ ಮಾಡುತ್ತಾನೆ ತಾನೇ. ಅದು ಅನುಕರಣ.
ಅವಸ್ಥೆ ಅಂದರೆ ಯಾವದಾದರೂ ವ್ಯಕ್ತಿಯ ಸ್ಥಿತಿ ಗತಿಗಳು.
ಹೈದರಾಬಾದ್ ನಲ್ಲಿ ನಡೆದ ನಾಡಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಿಳಾ ಮಂಡಳಿಯ ಸದಸ್ಯೆಯರು ಅಷ್ಟಲಕ್ಷ್ಮಿಯ ರೂಪಕ ಮಾಡಿದ್ದರು.ಕೊನೆಗೆ ಪ್ರೇಕ್ಷಕರನ್ನು ಆಶ್ಚರ್ಯಗೊಳಿಸಿದ್ದು ಶ್ರೀ ಶ್ರೀನಿವಾಸನ ವೇಷ
ಭೂಷಣದಲ್ಲಿ ಪ್ರತ್ಯಕ್ಷವಾದ ನಟಿ. ಅವಳು ಯಾರು ಎಂದು ಗುರುತಿಸಲು ಸಾಧ್ಯವಿರಲಿಲ್ಲ . ಅಷ್ಟು ಚಂದದ ಶ್ರೀನಿವಾಸ ಎದುರು ನಿಂತಾಗ ಎಲ್ಲರೂ ಎದ್ದು ನಿಂತು
ಕೈಮುಗಿದರು …ಇವರು ಹೈದರಾಬಾದ್ ನ ಪ್ರಸಿದ್ಧ, ಸಂಗೀತ ,ಅಭಿನಯ ಕಲಾವಿದೆ ಶ್ರೀಮತಿ ರಾಜಶ್ರೀ ದತ್ತಾ.
ಹೀಗೆ ತಾನು ಅನುಕರಿಸುವ ವ್ಯಕ್ತಿಯ ಭಾವವನ್ನು ಅನುಕರಿಸುವದಲ್ಲದೇ ಪ್ರೇಕ್ಷಕರ ಮನಸ್ಸಿನಲ್ಲಿ ವಿವಿಧ ರಸಗಳನ್ನು ಉಂಟು ಮಾಡಿ ಕೊಡುತ್ತಾನೆ ನಟ.
ರೂಪಕದಲ್ಲಿ ಹಲವು ವಿಧಗಳು . ಅವುಗಳಲ್ಲಿ ನಾಟಕ ಎಂಬುದು ಪ್ರಧಾನವಾದ ಒಂದು ಜಾತಿ .
ನಾಟ್ಯದಲ್ಲಿ ಗದ್ಯವು ಪ್ರವೇಶಿಸಿ ಸಂಭಾಷಣೆಯೂ ,ಕಥೆಯೂ ಬೆಳೆಯುವುದಕ್ಕೆ ಅವಕಾಶ ಆಯಿತು ಮತ್ತು ನಾಟಕದ ರೂಪ ಪಡೆಯಿತು.
ಸಂಸ್ಕೃತ ಭಾಷೆಯಲ್ಲಿ ಇರುವ ನಾಟಕಗಳೆಲ್ಲವೂ ಗದ್ಯ ,ಪದ್ಯ ಮಯ ಆಗಿವೆ. ಇವು ಮಹಾಕಾವ್ಯದ ಹಾಗೆ ಓದಲೂ ಅರ್ಹವಾದ ಕೃತಿಗಳು.
ಪ್ರದರ್ಶನಕ್ಕೆ ಅಳವಡಿಸಿ ಕೊಂಡರು. ರಸೋತ್ಪತ್ತಿಗೆ ನೃತ್ಯ ,ಗೀತಗಳು ಪರಿಪೋಷಕ ಆದವು.
ಪಾತ್ರಗಳ ನಡೆ ,ನುಡಿ ,.ಅಭಿನಯ ನೈಪುಣ್ಯ ಕವಿಯ ಕೃತಿ ಯನ್ನು ಹೆಚ್ಚು ರಸವತ್ತಾಗಿ ಮಾಡಿದವು .
ರಸ ಮತ್ತು ಭಾವ
೧ . ರಸ:
ನಾಟಕದಲ್ಲಿ ‘ ರಸ ‘ ಪ್ರಧಾನ ವಾದ ಅಂಶ.
ಅದು ನಾಟ್ಯದ ಜೀವ. ನಾಟಕದ ಸೊಗಸನ್ನು ಅನುಭವಿಸಿದಾಗ ನಮ್ಮ ಹೃದಯದಲ್ಲಿ ಉಂಟಾಗತಕ್ಕ ಆನಂದಕ್ಕೆ ಕಾರಣ. ಶಾಕುಂತಲ ನಾಟಕದಲ್ಲಿ ಶಕುಂತಲೆ
‘ವಿಭಾವ ‘, ಅವಳನ್ನು ಕಂಡು ದುಷ್ಯಂತ ತೋರಿಸುವ ನಡೆನುಡಿಗಳು ‘ಅನುಭಾವ’.
ಸಂತೋಷ, ಸಂದೇಹ ಮುಂತಾದ ಚಿತ್ತ ವೃತ್ತಿಗಳನ್ನು ‘ಸಂಚಾರಿಭಾವ’ ಎಂದು ಗುರುತಿಸುವರು.
ಅಭಿನಯ ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ ‘ರತಿ ‘ ಎಂಬ ಸ್ಥಾಯೀ ಭಾವ ಉತ್ಪನ್ನ ವಾಗಿ ಸ್ವಾರೂಪವನ್ನು ತಾಳಿ ಶೃಂಗಾರ ರಸ ಆಗುತ್ತದೆ. ಇದೇ ರೀತಿಯಲ್ಲಿ ಶೃಂಗಾರ ,ಹಾಸ್ಯ ,ಕರುಣ ,ರೌದ್ರ ,ವೀರ ,ಭಯಾನಕ ,ಭೀಭತ್ಸ , ಅದ್ಭುತ ,ಶಾಂತ ಎಂಬ ಒಂಬತ್ತು ರಸಗಳು ಹುಟ್ಟುತ್ತವೆ.
೨. ಅಭಿನಯ.
ಇದು ನಾಟಕದಲ್ಲಿ ಅತಿ ಮುಖ್ಯವಾದದ್ದು . ಇದರಲ್ಲಿ ಆಂಗಿಕ ,ವಾಚಿಕ , ಆಹಾರ್ಯಕ , ಸಾತ್ವಿಕ ಎಂದು ನಾಲ್ಕು ವಿಧ.
ಆಂಗಿಕ
ಕೈ ,ಕಣ್ಣು, ಮುಂತಾದ ಅಂಗೋಪಾಂಗಗಳ ಚಲನೆ ,
ಶಾರೀರ ಹಾಗೂ ಮುಖದ ಚಲನೆಗಳು ‘ಆಂಗಿಕ’ ಎನಿಸುತ್ತವೆ.
ವಾಚಿಕ
ನಾಟಕದಲ್ಲಿ ಉಪಯೋಗಿಸಿದ ಸಂಸ್ಕೃತ ,ಪ್ರಾಕೃತ ಭಾಷೆಗಳು , ಅವುಗಳನ್ನು ಆಡುವ ವಿಧಾನ ,ವಸ್ತು , ಛಂದಸ್ಸು ,ಗುಣ, ದೋಷ ,ಅಲಂಕಾರ ಇವೆಲ್ಲ ‘ವಾಚಿಕ’ ಅಭಿನಯಗಳು.
ಆಹಾರ್ಯಕ
ಪ್ರದರ್ಶನಕ್ಕೆ ಬೇಕಾದ ವೇಷಭೂಷಣ , ನೇಪಥ್ಯ ರಚನೆ ಅಂದರೆ Scenario ಇವೆಲ್ಲ ‘ಆಹಾರ್ಯಕ’ ಎನಿಸುತ್ತವೆ.
ಸಾತ್ವಿಕ
ಭಾವಗಳ ಪ್ರದರ್ಶನ :
ಸ್ತಬ್ಧತೆ, ಮೂರ್ಛೆ, ರೋಮಾಂಚನ, ಬೆವರುವಿಕೆ, ಅಶ್ರು ಮತ್ತು ಧ್ವನಿ ಬದಲಾಗುವದು ಇವು ‘ಸಾತ್ವಿಕ’ ಅಭಿನಯಗಳು.
ರಂಗದಲ್ಲಿ ಪ್ರತ್ಯಕ್ಷ ಅಭಿನಯಿಸಲು ಬಾರದ ಸಂಗತಿಗಳನ್ನು ‘ಚಿತ್ರಾಭಿನಯ ‘ ದಿಂದ ನಿರೂಪಿಸುವರು . ನೇಪಥ್ಯದಲ್ಲಿ ಹೇಳುವರು ಇಲ್ಲವೆ ಆಕಾಶವಾಣಿಯಿಂದ ಸೂಚಿಸುವರು.
ಗಲಭೆ ,ಗದ್ದಲಗಳು ಆಗದೇ ಪ್ರೇಕ್ಷಕರು ಉತ್ಸಾಹದಿಂದ ನಾಟಕ ನೋಡಿ ಸಂತೋಷಪಡುವದೇ “ಸಿದ್ಧಿ”
ಇನ್ನು ನಾಟಕದ “ವಸ್ತು ” ಎಂದರೆ ನಾಟಕದ ಕಥಾಭಾಗ .ಇದನ್ನು “ಇತಿವೃತ್ತ ” ಎಂದೂ ಹೇಳುವರು. ಉದಾಹರಣೆಗೆ
ಶಾಕುಂತಲ ನಾಟಕದಲ್ಲಿ ಶಕುಂತಲಾ, ದುಷ್ಯಂತರ ವೃತ್ತಾಂತ ನಾಟಕದ ವಸ್ತು.
ವಸ್ತು ವನ್ನು ರಾಮಾಯಣ ಮಹಾಭಾರತ ,ಕಥಾಸರಿತ್ಸಾಗರ ಮುಂತಾದ ಪ್ರಸಿದ್ಧ , “ಪ್ರಖ್ಯಾತ ” ಗ್ರಂಥಗಳಿಂದ ಆರಿಸುವರು. ಅಥವಾ ಅತ್ಯಂತ ಸೃಜನಶೀಲ ನಾಟಕಕಾರರ ‘ವಸ್ತು’ ಕವಿ ಕಲ್ಪಿತವೂ ಆಗಿರಬಹುದು.
‘ಪ್ರಾಸಂಗಿಕ’ ಎಂದರೆ ಮುಖ್ಯ ಕಥೆಗೆ ಅಂಗವಾಗಿ ಮಧ್ಯೆ ಬರತಕ್ಕ ಉಪಕಥೆ . ಉದಾಹರಣೆಗೆ, ಮೇನಕೆ ಶಕುಂತಲೆಯನ್ನು ಎತ್ತಿಕೊಂಡು ಹೋಗಿ,ಮಾರೀಚರ ಆಶ್ರಮದಲ್ಲಿ ಬಿಡಲು ಅಲ್ಲಿ ಸರ್ವದಮನ ಹುಟ್ಟಿದ್ದು ,ಬೆಳೆದದ್ದು ಇದೆಲ್ಲ ಪ್ರಾಸಂಗಿಕ ಎನಬಹುದು.
ಈ ಪ್ರಾಸಂಗಿಕ, ದೀರ್ಘವಾಗಿದ್ದರೆ ಅದಕ್ಕೆ “ಪತಾಕಾ ” ಎಂದೂ ಸಣ್ಣದು ಆಗಿದ್ದರೆ “ಪ್ರಕರೀ” ಎಂದೂ ಹೇಳುವರು.
ಇನ್ನೂ ಒಂದು ಮಹತ್ವದ ಮಾಹಿತಿ. ಅರ್ಥೋಪಕ್ಷೇಪಕಗಳು:
ನೀರಸವಾದ , ಅನುಚಿತವಾದ ವಸ್ತುಗಳನ್ನು ಈ ವರ್ಗಕ್ಕೆ ಸೇರಿಸುತ್ತಾರೆ. ದೂರದ ಪ್ರಯಾಣ ,ಯುಧ್ಧ, ಕೊಲೆ ,ಮುತ್ತಿಗೆ,
ಊಟ ,ಸ್ನಾನ ,ಲೇಪನ ಮುಂತಾದ ಅನುಚಿತ ಪ್ರಸಂಗಗಳನ್ನು ರಂಗದ ಮೇಲೆ ಅಭಿನಯಿಸಲಾಗದು .
ನಾಯಕನ ವಧೆಯನ್ನು ಎಲ್ಲಿಯೂ ತೋರಿಸುವುದಿಲ್ಲ .
ಮಧುರವಾದ , ಉದಾತ್ತ ವಾದ ,ರಸಭಾವ ಪರಿಪೂರ್ಣವಾದ ಇರುವ ಭಾಗಗಳನ್ನು ಮಾತ್ರ ಪ್ರದರ್ಶಿಸುವರು. ಅರ್ಥೋಪಕ್ಷೇಪಗಳು ಯಾವುವು ಎಂದು ತಿಳಿಯುವುದು ಅವಶ್ಯಕ. ಕಾರಣ ಈ ಶಬ್ದಗಳು ನಾಟಕದಲ್ಲಿ ಆಗಾಗ ಉಪಯೋಗಿಸಲಾಗುತ್ತದೆ.
೧. ವಿಷ್ಕಂಭಕ.
ನಡೆದು ಹೋದ ಕಥಾಂಶವನ್ನು ಸಂಕ್ಷೇಪವಾಗಿ ಸೂಚಿಸುವದು. ನಾಟಕದ ಆರಂಭದಲ್ಲಿ ಬರುವದು.
೨. ಪ್ರವೇಶಕ.
ನಡೆದು ಹೋದ ಕಥಾಂಶವನ್ನು ಪೂರಕ ಅಂದರೆ ಪ್ರಮುಖ ಅಲ್ಲದ ಪಾತ್ರಗಳಿಂದ ಎರಡು ಅಂಕಗಳ ಮಧ್ಯದಲ್ಲಿ ಬರುವದು.
೩. ಚೂಲಿಕಾ.
ಅಂದರೆ ಪಾತ್ರಗಳು ರಂಗಕ್ಕೆ ಬರದೇ ತೆರೆಯ ಹಿಂದೆಯೇ ಮಾತನಾಡಿ ಯಾವದೋ ವಿಷಯವನ್ನು ಸೂಚಿಸುವದು.
೪. ಅಂಕಾಸ್ಯ.
ಒಂದು ಅಂಕದ ಕೊನೆಯಲ್ಲಿ ಪಾತ್ರಗಳು ನಿರ್ಗಮಿಸುವಾಗ ,ಮುಂದಿನ ಅಂಕದ ಆರಂಭದಲ್ಲಿ ಬರುವ ಬೇರೊಂದು ವಿಷಯವನ್ನು ಸೂಚಿಸುವದು.
೫. ಅಂಕಾವತಾರ
ಒಂದು ಅಂಕದ ಕೊನೆಯಲ್ಲಿ ಪಾತ್ರಗಳು ಹೋಗುವಾಗ ಸೂಚಿಸುವ ವಿಷಯದಿಂದಲೇ ಮತ್ತು ಅದೇ ಪಾತ್ರಗಳಿಂದಲೇ ಮುಂದಿನ ಅಂಕವು ಆರಂಭ ಆಗುತ್ತದೆ.
ನಾಟಕ ಓದುವ ಮೊದಲು ಇಷ್ಟು ಅಂಶಗಳ ಪರಿಚಯ ಇರುವದು ಅಗತ್ಯ ಎನಿಸಿತು. ಮನೆಗೆ ಬಂದ ಅತಿಥಿಗಳಿಗೆ
ಚಕ್ಕುಲಿ, ಲಡ್ಡು ಇತ್ಯಾದಿ ಉಪಹಾರಗಳನ್ನು ಕೊಟ್ಟಾಗ “ರುಚಿ
ಆಗಿವೆ ,ಹ್ಯಾಂಗ ಮಾಡಿದ್ರೀ” ಅಂತ ಕೇಳಿದರೆ, ಅದಕ್ಕೆ ಸಾಮಗ್ರಿಗಳು, ಪ್ರಮಾಣ, ಮಾಡುವ ರೀತಿ ಎಲ್ಲಾ ಸವಿಸ್ತಾರವಾಗಿ ಹೇಳಬೇಕಲ್ರೀ ಮತ್ತ!!
ಅವರು ಸರಿಯಾಗಿ ಕೇಳದೇ ಮಾಡಿದರ ,ಚಕ್ಲೀ ಕೆಟ್ಟು ಬಿಡ್ತು ಅಂದ್ರ, ನನಗೇ ಕೆಟ್ಟ ಹೆಸರು ಅಲ್ವ!
ಪಾಕಶಾಸ್ತ್ರವೇ ಇರಲೀ ,ಸಂಗೀತ , ಸಾಹಿತ್ಯ ,ನಾಟ್ಯವೇ ಇರಲೀ ಎಲ್ಲವನ್ನೂ ಶಾಸ್ತ್ರೀಯವಾಗಿ ಕಲಿಯ ಬೇಕು
ಅಲ್ಲವೇ?.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ