- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
“ಸುರಭಾರತಿ ” ಐದನೆಯ ಅಂಕಣ
ತಮ್ಮನ್ನು ಸ್ವಾಗತಿಸುತ್ತಿದೆ.
ಹಿಂದಿನ ಅಂಕಣದಲ್ಲಿ ನಾಟಕದ ವಸ್ತು ,ರಸ ಭಾವ ಮುಂತಾದವನ್ನು ಕುರಿತು ತಿಳಿದುಕೊಂಡೆವು. ಈಗ ನಾಟ್ಯದ ಉತ್ಪತ್ತಿ ಬಗೆಗೆ ಒಂದೆರಡು ಮಾತು.
ಹಿಂದೆ ತ್ರೇತಾ ಯುಗದಲ್ಲಿ ಲೋಕವು ಕಾಮಕ್ರೋಧಾದಿಗಳಿಗೆ ಸಿಲುಕಿದಾಗ, ಮಹೇಂದ್ರ ಮುಂತಾದ ದೇವತೆಗಳು ಬ್ರಹ್ಮನ ಹತ್ತಿರ ಹೋಗಿ ದೃಶ್ಯವೂ , ಶ್ರವ್ಯವೂ ಆದ ಮತ್ತು ಎಲ್ಲರೂ ಭಾಗವಹಿಸಬಹುದಾದ ಒಂದು ಕ್ರೀಡೆಯನ್ನು ದಯಪಾಲಿಸಬೇಕು ಎಂದು ಬೇಡಿಕೊಂಡರು. ಹಾಗೇ ಆಗಲೀ ಎಂದು ಹೇಳಿ ಋಗ್ವೇದದಿಂದ ಸಾಹಿತ್ಯ ಭಾಗವನ್ನೂ ಯಜುರ್ವೇದದಿಂದ ಅಭಿನಯವನ್ನೂ , ಸಾಮವೇದದಿಂದ ಗಾನವನ್ನೂ, ಅಥರ್ವಣವೇದದಿಂದ ರಸಗಳನ್ನೂ ತೆಗೆದುಕೊಂಡು ಸೇರಿಸಿ ” ನಾಟ್ಯ ” ಎಂಬ ಐದನೆಯ ವೇದವನ್ನು, ಬ್ರಹ್ಮನ ಆದೇಶದಂತೆ ಭರತಮುನಿ ಸೃಷ್ಟಿಸಿದನು.
ದೇವತೆಗಳು ದೈತ್ಯರನ್ನು ಸೋಲಿಸಿದ್ದೇ ಆ ನಾಟ್ಯದ ವಸ್ತು ಆಗಿತ್ತು . ನಾಟ್ಯ ಅಂದರೆ ಲೋಕದಲ್ಲಿ ಕಂಡುಬರುವ ಭಾವನೆಗಳ ಅನುಕೀರ್ತನೆ. ಕೆಲವೆಡೆ
ಧರ್ಮ, ಕೆಲವೆಡೆ ಕ್ರೀಡೆ, ಮತ್ತೆ ಹಾಸ್ಯ ,ಕಾಮ, ಯುಧ್ಧ, ವಧೆ ಹೀಗೆಲ್ಲಾ ಬರಬಹುದು. “ಹರಿವಂಶ” ಈ ಕಾಲದಲ್ಲಿ ನಟರು ರಾಮಾಯಣ ಕಥೆಯನ್ನು ನಾಟಕ ಮಾಡಿಕೊಂಡಿದ್ದಂತೆ ತಿಳಿಯುತ್ತದೆ.
ಪಾಣಿನಿ ಹಾಗೂ ಪತಂಜಲಿ ಕಾಲದಲ್ಲಿ ನಾಟಕ ಪ್ರದರ್ಶನ ಆದ ಬಗೆಗೆ ಆಧಾರಗಳಿವೆ. ಮೂಕಾಭಿನಯದಿಂದ ತೋರಿಸಿದರೋ, ಮಾತು ಆಡುತ್ತಿದ್ದರೋ ಗೊತ್ತಾಗುವುದಿಲ್ಲ.
ಮುಂದೆ ” ಬೊಂಬೆಯಾಟ ” ದಿಂದ
ನಾಟಕ ಹುಟ್ಟಿತು ಎಂದು ಹೇಳುವರು . ಇದಕ್ಕೆ ದೊಡ್ಡ ಆಧಾರ ” ಸೂತ್ರಧಾರ ” ದಾರ ಹಿಡಿದವನು.
ಸೂತ್ರ ಹಿಡಿದು ಬೊಂಬೆ ಕುಣಿಸುವವನು.
ಹಿಂದೆ ಭರತ ಖಂಡದೊಡನೆ ಸಂಬಂಧ ಇದ್ದವರೆಂದರೆ ಗ್ರೀಕರು. ಗ್ರೀಕ್ ನಾಟಕದ ಪ್ರಭಾವ ನಮ್ಮ ದೇಶದ ನಾಟಕಗಳ ಮೇಲೆ ಆಗಿರಬೇಕು ಎಂಬ ಅಭಿಪ್ರಾಯವಿದೆ. ಇದಕ್ಕೆ ಕೆಲವು ಆಧಾರಗಳಿವೆ.
ಸಂಸ್ಕೃತ ನಾಟಕದಲ್ಲಿ ಉಪಯೋಗಿಸುವ ತೆರೆಗೆ ಯವನಿಕಾ (ಜವನಿಕಾ) ಎಂದು ಹೆಸರು. ‘ಯವನಿಕ’ ಇದು ಯವನ ದೇಶಕ್ಕೆ ಸಂಬಂಧ ಪಟ್ಟ ವಸ್ತು, ವ್ಯಕ್ತಿ ಗಳನ್ನು ನಿರ್ದೇಶಿಸುತ್ತದೆ. ಕ್ರಿ.ಪೂರ್ವ ನಾಲ್ಕನೇ ಶತಮಾನದಲ್ಲಿ ಭಾರತಕ್ಕೆ ಭೇಟಿ ಕೊಟ್ವವರು ಯವನರು ಅಂದರೆ ಗ್ರೀಕರೇ ಇರಬಹುದು.
ಈ ವಿಷಯ ಕುರಿತು ಹೆಚ್ಚಿನ ಚರ್ಚೆ ಇಲ್ಲಿ ಬೇಕಿಲ್ಲ ಎನಿಸುವುದು.
ನಾಟಕದ ವಸ್ತುವನ್ನು ಕವಿ, ಇತಿಹಾಸದಿಂದ ಆರಿಸಿರಬಹುದು. ವಸ್ತುವಿನಲ್ಲಿ ಕೆಲವು ಭಾಗ ಕವಿಯ
ಕಲ್ಪನೆಯೂ ಇರಬಹುದು. ‘ಇತಿ ಹಸ’ ಎಂದರೆ ಹೀಗೆ ಇತ್ತು ಎಂಬ ಅರ್ಥ. ಇತಿಹಾಸದೊಂದಿಗೆ ಕವಿಯ ಕಲ್ಪನೆ ಮಿಶ್ರಿತವಾಗಿ ನಾಟಕ ಅಥವಾ ಪ್ರಕರಣದ ಉತ್ಪತ್ತಿ ಆಗಬಹುದು.
ಮುಖ, ಪ್ರತಿಮುಖ, ಗರ್ಭ, ಅವಮರ್ಶ, ನಿರ್ವಹಣ (ಉಪಸಂಹಾರ ) ಹೀಗೆ ಐದು ಹಂತಗಳು ‘ನಾಟಕ’ ದಲ್ಲಿ ಕಾಣಬಹುದು. ನಾಟಕದಲ್ಲಿ ಪ್ರಖ್ಯಾತ ವಸ್ತು, ಐದರಿಂದ ಹತ್ತು ಅಂಕಗಳು, ಧಿರೋದಾತ್ತ ನಾಯಕ, ರಾಜರ್ಷಿ ಮತ್ತೆ ನಾಲ್ಕು ಮುಖ್ಯ ವ್ಯಕ್ತಿ ಗಳು ಇದ್ದು ಶೃಂಗಾರ ಅಥವಾ ವೀರ ರಸ ಪ್ರಧಾನವಾಗಿದ್ದು ಉಳಿದ ರಸಗಳು ಅದಕ್ಕೆ ಅಂಗವಾಗಿ ಇರುತ್ತವೆ. ಕೊನೆಯಲ್ಲಿ ಅದ್ಭುತ ರಸ ಪ್ರದರ್ಶನ. ನಾಯಕ, ಅವನ ಪತ್ನಿ ,ಮಂತ್ರಿ ಮುಂತಾದವರ ರಸವತ್ತಾದ ಪ್ರತ್ಯಕ್ಷ ಚರಿತ್ರೆ ಇರುತ್ತದೆ. ಗದ್ಯ ಪದ್ಯ ಮಿಶ್ರಿತ ಸಂಭಾಷಣೆ .
‘ಪ್ರಕರಣ’ ಎಂದರೆ ಇಲ್ಲಿ ವಸ್ತು ಲೌಕಿಕ ಮತ್ತು ಕವಿ ಕಲ್ಪಿತ. ಶೃಂಗಾರ ಪ್ರಧಾನ ರಸ. ನಾಯಕ ಬ್ರಾಹ್ಮಣ, ಮಂತ್ರಿ ಅಥವಾ ವರ್ತಕ. ಧೀರಪ್ರಶಾಂತ ನಾಯಕ ಧರ್ಮ ಕಾಮಾರ್ಥಪರನು.
ಶಾಕುಂತಲ , ಮುದ್ರಾ ರಾಕ್ಷಸ ‘ನಾಟಕ’ದ ಉದಾಹರಣೆಗಳು.
ಮೃಚ್ಛಕಟಿಕ, ಮಾಲತೀ ಮಾಧವ ಕೃತಿಗಳು ‘ಪ್ರಕರಣ’ ದ ಉದಾಹರಣೆಗಳು.
‘ಭಾಣ’ ಎಂಬುದು ಒಂದೇ ಅಂಕದ
ಧೂರ್ತನ ಚರಿತ್ರೆ ಆಗುತ್ತದೆ .
‘ಪ್ರಹಸನ’ ದಲ್ಲಿ ವಸ್ತು ಕಲ್ಪಿತವಾಗಿರುವದು. ಹಾಸ್ಯಪ್ರಧಾನ ರಸ. ಇನ್ನೂ ಅನೇಕ ಪ್ರಕಾರದ ರೂಪಕಗಳುಂಟು. ಮುಖ್ಯವಾದವು
ಗಳನ್ನು ಇಲ್ಲಿ ನೋಡಿದೆವು .
ಇತ್ತೀಚೆಗೆ ಎರಡು ಕಂತುಗಳಲ್ಲಿ ಬಂದ, ಪ್ರೇಕ್ಷಕರು ಕೂತೂಹಲದಿಂದ ಕಾಯ್ದ ,” ಬಾಹುಬಲಿ ” ಯ ನಾಯಕ ಧೀರೋದಾತ್ತ ನಾಯಕ ಎನಬಹುದು. ಶೋಭೆ, ವಿಲಾಸ,ಮಾಧುರ್ಯ, ಗಾಂಭೀರ್ಯ, ಧೈರ್ಯ, ತೇಜಸ್ಸು, ಔದಾರ್ಯ, ಲಾಲಿತ್ಯ ಇವು ಧೀರೋದಾತ್ತ ನಾಯಕನ ಅಷ್ಟಗುಣಗಳು.
ನಾಯಿಕೆ ನಾಟಕದ ಪ್ರಧಾನ ಸ್ತ್ರೀ ಪಾತ್ರ . ಇವರಲ್ಲಿ “ಸ್ವೀಯೆ” ಅಂದರೆ ತನ್ನವಳು, ” ಅನ್ಯೆ ” ಅಂದರೆ ಇತರಳು, ” ಸಾಧಾರಣೆ” ಅಂದರೆ ವೇಶ್ಯೆ ಎಂದು ಮೂರು ವಿಧ.
ನಾಯಕನ ಎಲ್ಲ ಗುಣಗಳೂ ನಾಯಕಿಯಲ್ಲಿ ಇರುತ್ತವೆ.ಅವಳು ಧರ್ಮಪತ್ನಿಯೇ ಇರಬಹುದು ಸೀತೆಯಂತೆ. ಅಥವಾ ಪರಕೀಯಳೂ ಇರಬಹುದು. ‘ಮೃಚ್ಛಕಟಿಕ’ದ ವಸಂತಸೇನೆಯಂತೆ. ನಾಯಕಿಯ ಪ್ರೇಮ ರಸೋತ್ಪತ್ತಿಗೆ ಸಹಾಯಕ. ನಾಯಕಿಗೆ ಸಖಿಯರು ಇದ್ದು ಮುಖ್ಯ ಕಥೆಗೆ ಪೋಷಕರಲ್ಲದೆಯೂ ಇರಬಹುದು.
ನಾಯಕನ ಸಹಾಯಕರು ವಿಟ, ಚೇಟ, ವಿದೂಷಕ ,ಮಂತ್ರಿ ,ಷಂಡ, ಕಿರಾತ, ಋತ್ವಿಕರು , ಋಷಿ ಗಳು, ಸ್ನೇಹಿತ, ಸಾಮಂತ,ಸೈನಿಕ ಇತ್ಯಾದಿ ಇತರ ಪಾತ್ರಗಳು ನಾಟಕದಲ್ಲಿ ಸಿಗುತ್ತವೆ.
ಸುಖದುಃಖಗಳನ್ನು ಹೃದಯಂಗಮವಾಗಿ ತೋರಿಸುವುದು ನಟನೆ. ವಿಭಾವ , ಅನುಭಾವ , ಸಾತ್ವಿಕ ಭಾವ, ವ್ಯಭಿಚಾರಿ ಭಾವ. ಇವೆಲ್ಲ ವ್ಯಕ್ತ ಆಗುವದು ನಟನೆಯಲ್ಲಿ, ಕಣ್ಣು,ಮುಖ, ಶಬ್ದಗಳ ದ್ವಾರಾ.
ರತಿ ,ಹಾಸ,ಶೋಕ ,ಕ್ರೋಧ , ಉತ್ಸಾಹ ,ಭಯ,ಜುಗುಪ್ಸೆ, ವಿಸ್ಮಯಗಳನ್ನು ಸ್ಥಾಯೀಭಾವ ಅವಲಂಬಿಸಿದೆ. ಇವೇ ಎಂಟು ರಸಗಳು , ಒಂಬತ್ತನೆಯದು ಶಾಂತರಸ. ನಾಟಕ ಒಂದು ಅಥವಾ ಹೆಚ್ಚು ರಸಗಳನ್ನು ಹೊಂದಿರಬಹುದು.
ಶೃಂಗಾರದಲ್ಲಿ ಎರಡು ಪ್ರಕಾರಗಳು.
೧. ‘ವಿಪ್ರಲಂಬ’ ಇದು ವಿರಹದಲ್ಲಿ ಅಡಗಿದ ಪ್ರೇಮ. ಈ ವಿರಹ ಮದುವೆಯ ಮೊದಲಿನ ಪ್ರಸಂಗವೂ ಇರಬಹುದು ನಂತರದ್ದೂ ಇರಬಹುದು..ಇದು ವಿಪ್ರಯೋಗ ಎನಿಸುವದು.
೨. ಶೃಂಗಾರದಲ್ಲಿ ಎರಡನೇಯದು ಸಂಭೋಗ…Love in Union.
ಪ್ರಸ್ತಾವನೆಯೊಂದಿಗೆ ನಾಟಕ ಪ್ರಾರಂಭ ಆಗುವದು.
” ನಾಂದೀ ” ನಾಟಕದ ತಿರುಳನ್ನು ಸೂಚಿಸುವದು ಸೂತ್ರಧಾರನ ಕೆಲಸ.ಆಮೇಲೆ ಇವನ ನಿರ್ಗಮನ ಆಗಿ ಸ್ಥಾಪಕ ಬರುವನು. ಕವಿಯ ವರ್ಣನೆ, ನಾಟಕದ ವಿಷಯವನ್ನು ಬೀಜರೂಪದಲ್ಲಿ ಪ್ರಸ್ತಾಪಿಸುವನು.
ಪಾತ್ರಗಳ ಪರಿಚಯ ಮಾಡುವನು.
ನಾಟಕ ಅನೇಕ ಅಂಕಗಳಲ್ಲಿ ಕಾಣಿಸಿಕೊಳ್ಳುತ್ತದೆ. ಬೇಸರ ಬರದಂತೆ ಸಣ್ಣ ಸಣ್ಣ ಭಾಗಗಳು ಆದರೆ ರಸಭರಿತ. ಪ್ರವಾಸ, ಹತ್ಯೆ, ಯುಧ್ಧ ಇವನ್ನು ರಂಗಮಂಚದ ಮೇಲೆ ತೋರಿಸದೇ ಪರದೆಯ ಹಿಂದೆ ಘೋಷಿಸಲಾಗುವದು. ನಾಯಕನ ಸಾವನ್ನು ವೇದಿಕೆಯ ಮೇಲೆ ತೋರಿಸುವುದಿಲ್ಲ.
ನಾಟಕದ ಪ್ರಾರಂಭ ಪ್ರಾರ್ಥನಾ ಶ್ಲೋಕದಿಂದ , ಕೊನೆಗೆ ಪ್ರಾರ್ಥನೆಯೊಂದಿಗೆ ಮುಕ್ತಾಯ.
ಇವಿಷ್ಟು ಸಂಸ್ಕೃತ ನಾಟಕದ ರೂಪ ರೇಷೆಗಳು. ಈ ಸ್ಥೂಲ ಪರಿಚಯ ಅವಶ್ಯಕ ನಮ್ಮ ಮುಂದಿನ ನಾಟಕದ ನಿರೂಪಣೆಗೆ.
ಈಗ ಯಾವದೇ ಊರಿಗೆ ಹೋಗುವಾಗ ,ಅಥವಾ ಊರಲ್ಲಿಯೇ ಅಪರಿಚಿತ ಸ್ಥಳಕ್ಕೆ ಹೋಗುವಾಗ GPS ಸಹಾಯ ಪಡೆಯುತ್ತೇವೆ ಅಲ್ಲವೇ!
ಅದರಂತೆ ಒಂದು ನಾಟಕ ಓದುವಾಗ ,ನೋಡುವಾಗ ಅದರ ಪರಿಚಯ ಇರುವದು ಒಳಿತಲ್ಲವೇ ?
ಅದಲ್ಲದೇ ನಾಟಕದ ಪಾತ್ರ ಅಭಿನಯಿಸಲು ಅದಕ್ಕೆ ತಕ್ಕಂತೆ ಅರ್ಹ ನಟರು ಇರುವಂತೆ ಪ್ರೇಕ್ಷಕರಲ್ಲೂ ಕೆಲವು ಅರ್ಹತೆಗಳು ಇರಬೇಕಂತೆ !
ಪ್ರೇಕ್ಷಕರು ಊಹಾಪೋಹ ವಿಶಾರದರಾಗಿದ್ದು ,ಒಂದೇ ಮನಸ್ಸಿನಿಂದಲೂ ,ಅನುರಾಗದಿಂದಲೂ ಆಟವನ್ನು ನೋಡಬೇಕು.
ಯಾವ ಯಾವ ಭಾವವನ್ನು ಪ್ರದರ್ಶಿಸಿದರೆ ಆಯಾ ಭಾವವನ್ನು ಹೊಕ್ಕುಅನುಭವಿಸುವವರಾಗಬೇಕು. ಇದನ್ನೇ ನಾಟ್ಯಶಾಸ್ತ್ರ ಅಧ್ಯಾಯ ೨೭ ರಲ್ಲಿ ಹೇಳಲಾಗಿದೆ. ಆ ಶ್ಲೋಕ ಹೀಗಿದೆ –
“ಏವಂ ಭಾವಾನುಕರಣೇ
ಯ: ಯಸ್ಮಿನ್ ಪ್ರವಿಶೇತ್ ನರ:
ಸ ತತ್ರ ಪ್ರೇಕ್ಷಕ: ಜ್ಞೇಯ: ಗುಣೈ:
ಏತೈ: ಅಲಂಕೃತ: “
ಇವತ್ತು ಕೇವಲ ಐದು ಮಿನಿಟಿನ ಚಿತ್ರ ಒಂದನ್ನು ನೋಡಿದೆ. ಅದಕ್ಕೆ Oscar Award ಸಿಕ್ಕಿದ್ದು ಆಶ್ಚರ್ಯ ಎನಿಸಲಿಲ್ಲ.
ಒಂದು ಪುಟ್ಟ ಸಂಸಾರ. ಗಂಡ-ಹೆಂಡತಿ ಇಬ್ಬರೂ ದುಡಿಯುವವರು. ಕುರುಡು ಹೆಣ್ಣು ಮಗುವಿಗೆ ಜನ್ಮ ಇತ್ತು ತಾಯಿ ಸತ್ತು ಹೋಗುವಳು. ತಂದೆ ಮಗಳನ್ನು ಬಹಳ ಪ್ರೀತಿಯಿಂದ ಸಾಕುವನು.
ಮುಂದೆ ಅವಳಿಗೆ ಮದುವೆ ಸಂಬಂಧ, ಕುರುಡಿ ಎಂಬ ಕಾರಣದಿಂದ ಕೂಡಿಬರದೇ ಅಪಮಾನಿತಳಾದಾಗ ಅವಳ ದು:ಖ ನೋಡಲಾರದೇ, ತಂದೆ ನೇತ್ರ ಚಿಕಿತ್ಸೆಯ ವ್ಯವಸ್ಥೆ ಮಾಡುವನು. ನೇತ್ರದಾನ ಪಡೆದು ಚಿಕಿತ್ಸೆ ಆಗಿ ಮಗಳು ದೃಷ್ಟಿಯನ್ನು ಪಡೆದ ಸಂಭ್ರಮದಲ್ಲಿ ತಂದೆಯನ್ನ ಕಾಣಲು ಹಾತೊರೆದಾಗ ನೇತ್ರದಾನ ಮಾಡಿದ ಪುಣ್ಯಾತ್ಮ ತನ್ನ ತಂದೆಯೇ ಎಂದು ಅವಳಿಗೆ ಗೊತ್ತಾಗುವದು. ಈ ಚಿತ್ರದಲ್ಲಿ ಯಾರೂ ಮಾತಾಡಿಲ್ಲ. ತಂದೆಯನ್ನು ಅಪ್ಪಿಕೊಂಡು ಅವಳು ಅಳುತ್ತಿರುವಾಗ, ಪ್ರೇಕ್ಷಕರಲ್ಲಿ ಕಣ್ಣು ಒರೆಸಿಕೊಳ್ಳದೇ ಇದ್ದವರು ಯಾರೂ ಇರಲಿಲ್ಲ.
ಐದನೇ ಅಂಕಣ ಇಲ್ಲಿಗೆ ಮುಗಿಸೋಣವೇ !
ಶುಭವಾಗಲಿ…
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ