- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
.
” ಶುಶ್ರೂಷಸ್ವ ಗುರೂನ್ ಕುರು ಪ್ರಿಯಸಖೀ ವೃತ್ತಿಂ ಸಪತ್ನಿಜನೇ
ಭರ್ತೃ: ವಿಪ್ರ ಕೃತಾ ಅಪಿ ರೋಷಣತಯಾ ಮಾ ಸ್ಮ ಪ್ರತೀಪಂ ಗಮ: .
ಭೂಯಿಷ್ಠಂ ಭವ ದಕ್ಷಿಣಾ ಪರಿಜನೆ
ಭಾಗ್ಯ್ವಷ್ವನುತ್ಸೇಕಿನೀ
ಯಾಂತ್ಯೇವ ಗೃಹಿಣೀ ಪದಂ ಯುವತಯೊ: ವಾಮಾ: ಕುಲಸ್ಯಾಧಯ: “
ಇಕಾ , ಇಲ್ಲಿದೆ ನೋಡೀ , ಶಾಕುಂತಲದ ೪ನೆಯ ಅಂಕದಲ್ಲಿ ಎರಡನೆಯ , ಸುಪ್ರಸಿದ್ದ ಶ್ಲೋಕ .
ಶಕುಂತಲೆ ಪತಿಗೃಹಕ್ಕೆ ಹೊರಟಾಗ ಕಣ್ವರು ಮಾಡಿದ ಉಪದೇಶ ಇಂದಿಗೂ ವಧುವಿಗೆ ಕೊಡತಕ್ಕ ಅಮೂಲ್ಯ ಉಪದೇಶ ಎನಿಸುತ್ತದೆ.
ನನ್ನ ಅಜ್ಜ ,ನಾನು ಮದುವೆ ಆಗಿ ಅತ್ತೆ ಮನೆಗೆ ಹೋದ ಹೊಸದರಲ್ಲಿ ಬರೆದ ಮೊದಲ ಪತ್ರದಲ್ಲಿ ,ಈ ಶ್ಲೋಕ ಬರೆದು ಆಶೀರರ್ವದಿಸಿದ್ದರು. ೬೦ ವರುಷಗಳ ಹಿಂದೆ ಬರೆದ ಕಾಗದ, ಜೀರ್ಣ ಆಗಿದ್ದರೂ ಅದನ್ನು ಕಾಪಾಡಿದ್ದೇನೆ.
ಅವರ ಆಶೀರ್ವಾದವೇ ನನ್ನನ್ನು ಇಂದು ,ಬರೆಯಲು ಪ್ರೇರೇಪಿಸಿತು.
ಇರಲಿ, ಮೇಲೆ ಹೇಳಿದ ಶ್ಲೋಕದ ಅರ್ಥ ನೋಡೋಣ.
ನಿನ್ನ ಗುರುಹಿರಿಯರ ಸೇವೆ ಮಾಡು.
ಅರಸನ ಸಪತ್ನಿಯರ ಜೊತೆಗೆ ಸ್ನೇಹದಿಂದ ಇರು.
ಪತಿ ಒಂದುವೇಳೆ ಕೋಪ ಮಾಡಿದರೂ ,ನೀನೂ ಸಿಟ್ಟಿನ ಭರದಲ್ಲಿ ಪ್ರತಿವಾದಿಸ ಬೇಡ.
ಅರಸೊತ್ತಿಗೆಯ ಮದದಿಂದ ಬೀಗಬೇಡ.
ನಿಮ್ಮ ಮೇಲೆ ಅವಲಂಬಿಸಿರುವ ಜನರನ್ನು ಕಡೆಗಣಿಸಬೇಡ.
ಈ ಪಂಚಶೀಲಗಳನ್ನು ಅನುಸರಿಸುವದು ಎಲ್ಲ ವಧುಜನರ ಕರ್ತವ್ಯ.
ಇದಕ್ಕೆ ವಿರುದ್ಧವಾಗಿ ( ವಾಮಾ: )
ನಡೆದವರು ಕುಲಕ್ಕೆ ಅಪಕೀರ್ತಿಯನು ತರುವರು.
ಮನೆಯಲ್ಲಿ ಗುರು ಹಿರಿಯರಿಗೆ ಆದರ ಹಾಗೂ ಗೌರವ ತೋರಿಸಿ ಅವರ ಸೇವೆ ಮಾಡುವದು ವಧುವಿನ ಆದ್ಯ ಕರ್ತವ್ಯವಾಗಿದೆ.
ಈ ಯುಗದಲ್ಲಿ ಈ ಮಾತು ಅರ್ಥ ಕಳೆದುಕೊಳ್ಳುತ್ತಿದೆ. ಉಚ್ಚಶಿಕ್ಷಣ ಹೊಂದಿ, ಕೈತುಂಬಾ ಸಂಪಾದಿಸುತ್ತಾ
ಇರುವಾಗ ಇಂಥ ಸೇವೆಗೆ ಕಾಲವೆಲ್ಲಿ!
ಆಗ ರಾಜನಿಗೆ ಅನೇಕ ಪತ್ನಿಯರು.
ಅವರ ಜೊತೆಗೆ ಸಖಿಯಂತೆ ಇರು..
ಈಗ ಈ ಪರಿಸ್ಥಿತಿ ಇಲ್ಲ ಆದರೂ ಮನೆಯಲ್ಲಿ ಇರುವ ಇತರ ಓರಿಗೆಯ
ಸಹೋದರಿಯರ ಜೊತೆಗೆ ಸ್ನೇಹದಿಂದ ಇರುವದು ಮಹತ್ವದ ಅಂಶ.
ಪತ್ನಿ ಪತಿಯನ್ನು ಅನುಸರಿಸಬೇಕು.
ಪತಿ ಈ ಶಬ್ದ “ನ್” ಮತ್ತು “ಈ” ಇವುಗಳನ್ನು ಕೂಡಿಕೊಂಡು “ಪತ್ನೀ”
ಎಂದಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕಾದ ಅಂಶ.
ಯಜ್ಞ ಮುಂತಾದ ಶುಭ ಕರ್ಮಗಳಲ್ಲಿ ಪತಿ, ಪತ್ನೀ ಕೂಡಿ ಮಾಡುವದು ಇದರ ಸಂಕೇತ.
ಅದರ ಫಲದಲ್ಲಿ ಅವಳಿಗೆ ಭಾಗ ಉಂಟು. ಧಾರ್ಮಿಕ ಕಾರ್ಯಗಳು ಸಪತ್ನೀ ಆಗಿಯೇ ಜರುಗುತ್ತವೆ.
ಆದ್ದರಿಂದ ಮೇಲಿನ ಶ್ಲೋಕದಲ್ಲಿ “ಸಪತ್ನೀ” ಎಂದರೆ ಸವತಿ ಎಂದೇ ಅರ್ಥ ಮಾಡಬೇಕಿಲ್ಲ ಅಲ್ಲವೇ!!
ಈ ಉಪದೇಶವನ್ನು ಆಚರಿಸಿದರೆ
ಸಂಸಾರ ಸುಖಮಯ.
ಇದಕ್ಕೆ ಪ್ರತೀಪಂ ಅಂದರೆ ವಿರುದ್ಧವಾಗಿ ನಡೆದಾಗ ನದಿಯ ಪ್ರವಾಹದ ವಿರುದ್ಧ ದಿಶೆಯಲ್ಲಿ ಈಜಿದಂತಾಗುವದು.
ಈ ಪರಿಸರದಲ್ಲಿ ಎತ್ತು ಎರೆಗೆಳೆದರೆ ಕೋಣ ಕೆರೆಗೆ ಎಳೆದಂತೆ ಆಗುವದು . ಅದಕ್ಕೇ ಕವಿ ಎಚ್ಚರ ಕೊಟ್ಟಿರುವನು.
” ವಾಮಾ: ಕುಲಸ್ಯ ಆಧಯ: “
ಎಂದರೆ ಒಬ್ಬರಿಗೊಬ್ಬರು ವಿರುದ್ಧ ದಿಶೆಯಲ್ಲಿ ನಡೆದಾಗ ಎರಡೂ ಕುಲಕ್ಕೆ ಅಪಕೀರ್ತಿಯನು ತರುವರು.
ಗರತಿಯರಿಗೆ ಬಹಳ ಮಹತ್ವದ ಉಪದೇಶ ಇಲ್ಲಿ ಇದೆ.
ಕೋಪ ಬೇಡ ,ವಿರೋಧ ಬೇಡ. ಹಿರಿಯರಿಗೆ ಗೌರವ. ರಾಣಿ ಆದನೆಂಬ ಗರ್ವ ಬೇಡ.ಸೇವಕರನ್ನು
ಪ್ರೀತಿ ಯಿಂದ ಚೆನ್ನಾಗಿ ನೋಡಿಕೊಳ್ಳಬೇಕು.ಅರಮನೆಯ ಸೌಕರ್ಯಗಳಲ್ಲಿ ಹಳೆಯದನ್ನು ಮರೆಯ ಬೇಡ,ಅಲ್ಲಗಳೆಯಲು ಬೇಡ. ಇದಕ್ಕೆ ವ್ಯತಿರಿಕ್ತವಾಗಿ ನಡೆಯುವವರು ತವರುಮನೆಗೆ ತಲೆ ನೋವು ತರುವರು.
ಹೇಗಿದೆ ಕಣ್ವರ ಉಪದೇಶ !
ಈ ಪ್ರಶ್ನೆಯನ್ನು ನಾನು ನಿಮಗೆ ಕೇಳಿದಂತೆ ,ಕಣ್ವರು ,ಗೌತಮಿಯನ್ನು ಕೇಳುತ್ತಾರೆ.
” ಕಥಂ ವಾ ಗೌತಮೀ ಮನ್ಯತೆ ? “
ಗೌತಮಿ ಹಿರಿಯಳು, ಶಕುಂತಲೆಯ ಜೊತೆಗೆ ಹೊರಟವಳು.
ಇದಕ್ಕಿಂತ ಹೆಚ್ಚಾಗಿ ಇನ್ನೇನು ಸಾಧ್ಯ ಎನ್ನುತ್ತ, ಅವಳು ಶಕುಂತಲೆಗೆ ಈ ಉಪದೇಶವನ್ನು ಪಾಲಿಸು ಎಂದು ತಿಳಿಸುವಳು.
ಕಣ್ವರನ್ನು, ಪ್ರಿಯ ಸಖಿಯರನ್ನು ಆಲಂಗಿಸಲು ಶಕುಂತಲೆ ಮುಂದಾದಳು. ತಂದೆಯಲ್ಲಿ ದೀನವಾಗೀ ಬೇಡಿ ಕೊಳ್ಳುತ್ತಾಳೆ.
ಅನಸೂಯಾ,ಪ್ರಯಂವದೆಯರೂ ಸಹ ತನ್ನ ಜೊತೆಗೆ ಬರಲಿ ಎಂದು.
ಕಣ್ವರು ಹೆಳಿದರು..
” ಅವರಿಗೂ ಒಳ್ಳೆಯ ವರ ಹುಡುಕಿ ಮದುವೆ ಆಗಬೇಕು. ಅವರು ಬರಲಾರರು.
ಹಿರಿಯಳೂ ,ಅನುಭವಿಯೂ ಆದ ಗೌತಮೀ ನಿನ್ನ ಜೊತೆಗೆ ಬರುವಳು.”
ಕಾಶ್ಯಪರು ಸಂನ್ಯಾಸಿಗಳಾದರೂ ಎಲ್ಲ ವ್ಯವಹಾರ ಅರಿತವರು.
ಯುವತಿಯರನ್ನು ಅವಳ ಜೊತೆ ಕಳಿಸಬಾರದು. ಅರಸನ ಚಂಚಲ ಮನಸು ಇವರಿಂದ ಆಕರ್ಷಿತ ಆದರೆ ಎಡವಟ್ಟು ಆದೀತು.
ಅಥವಾ ನಗರದ ಥಳಕು ಬೆಳಕಿಗೆ ಇವರೇ ಮೋಹ ಹೋಗೀ , ಅಲ್ಲಿಯೇ ಉಳಿದರೆ ಇಲ್ಲಿ ಆಶ್ರಮವಾಸೀ ಯುವಕರ ಕೈ ಯಾರು ಹಿಡಿಯಬೇಕು ಎಂಬ ಚಿಂತೆಯೂ ಇರಬಹುದು.
ಆದ್ದರಿಂದ ಋಷಿಕುಮಾರರು ಇಬ್ಬರಿಗೂ ಹಿರಿಯಳಾದ ಗೌತಮಿ ಹೋಗುವದೇ ಕ್ಷೇಮಕರ ಎಂದು ನಿರ್ಧರಿಸಿದರು.
” ಭಯ ಬೇಡ, ಮಗಳೇ. ನೀನು ಶೀಘ್ರದಲ್ಲೇ ವಂಶೋದ್ಧಾರಕ ಪುತ್ರಗೆ ಜನ್ಮ ಕೊಡಲಿರುವಿ. ನಿನಗೆ ರಾಣಿಯ ಪಟ್ಟವೂ ಬರುವದು. ಈ ಎಲ್ಲ ಜವಾಬ್ದಾರಿಯಲ್ಲಿ ನೀನು ನಿರತಳಾಗಿ ಬಿಡುವೀ. ಆಗ ನಿನಗೆ ಸಖಿಯರಿಂದ ಆದ ವಿರಹದ ವ್ಯಥೆ ಅಷ್ಟೊಂದು ಕಾಡಲಾರದು.”
ಹೀಗೆ ಕಣ್ವರು ಮಗಳನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರು.
ಸಖಿಯರ ಹತ್ತಿರ , ದುಷ್ಯಂತ ಶಕುಂತಲೆಯರ ಮೊದಲ ಭೇಟಿಯಲ್ಲಿ ,ತಾನು ರಾಜ ಪುರುಷ ಎಂದು ಗೊತ್ತುಮಾಡಿ ಕೊಡಲು ಕೊಟ್ಟ, ರಾಜಮುದ್ರಿಕೆಯ ಉಂಗುರ ಇರುತ್ತದೆ. ಅದನ್ನು ಅವರು ಶಕುಂತಲೆಗೆ ಕೊಡುತ್ತಾ ಹೇಳಲು ಮರೆಯುವುದಿಲ್ಲ.
“ಅಕಸ್ಮಾತ್ತಾಗಿ ರಾಜಾ ನಿನ್ನ ಗುರುತು ಹಿಡಿಯಲು ಹಿಂಜರಿದರೆ ಈ ಉಂಗುರ ತೋರಿಸಿದರೆ ಆತನಿಗೆ ಅಭಿಜ್ಞಾನ ಆಗುತ್ತದೆ.”
ದೂರ್ವಾಸರು ಕೊಟ್ಟ ಶಾಪ ಅವರಿಗೆ
ಮಾತ್ರ ಗೊತ್ತಿತ್ತು. ಈ ರಹಸ್ಯವನ್ನು ಬಿಟ್ಟು ಕೊಡದೇ, ಗೆಳತಿಯನ್ನು ಎಚ್ಚರಿಸಿ ಉಂಗುರ ಕೊಡುವರು.
ಅವರ ಈ ಸಂದೇಹ ಕೇಳಿ ಶಕುಂತಲೆ ನಡುಗಿದಳು.ಆಗ ಸಖಿಯರು ಅವಳಿಗೆ ಸಮಾಧಾನ ಹೇಳುವರು.
(ನಿನ್ನ ಮೇಲಿನ ನಮ್ಮ ಅತಿ ಪ್ರೀತಿ ಹೀಗೆ ನುಡಿಸಿರಬೇಕು.)
“ಅತಿಸ್ನೇಹ: ಪಾಪಶಂಕೀ.”
ಶಾರಂಗರವ ಬೇಗ ಹೊರಡಲು ಹೇಳುವನು, ಕಾರಣ ಸೂರ್ಯ ಮೇಲೇರುತ್ತಾ ಇದ್ದಾನೆ. ಎಲ್ಲರೂ ತಮ್ಮ ತಮ್ಮ ಕಾರ್ಯಗಳಲ್ಲಿ ತೊಡಗುವ ಸಮಯವಾಯಿತು.
ಬೀಳ್ಕೊಡುವ ಮೊದಲು ಶಕುಂತಲೆ ತಂದೆಯನ್ನು ಆಶೆಯಿಂದ ಕೇಳುವಳು.
” ತಾತ ,ಕದಾ ನು ಭೂಯ: ತಪೋವನಮ್”
“ನಾನು ಮತ್ತೆ ಈ ತಪೋವನಕ್ಕೆ ಯಾವತ್ತು ಬರುವೆನೋ ಏನೋ! “
ಬಾಣಂತಿತನಕ್ಕೆ ತಂದೆ ತನ್ನನ್ನು ಬೇಗ ಕರೆಸುವರೇ ಎಂಬಾಶೆ ಅವಳಿಗೆ.!
ನಾ ಹ್ಯಾಂಗ ಮರೆಯಲೀ ತವರೂರ ಎಂದು ಅವಳ ದು:ಖ.
ಆಗ ಕಣ್ವರು ಹೇಳಿದ ಮಾತು ಬಹಳ ವಿಚಾರಶೀಲ. ಇದು ಮೂರನೆಯ ಮಹತ್ವದ ಶ್ಲೋಕ ಎನ್ನಬಹುದು.
” ಭೂತ್ವಾ ಚಿರಾಯ ಚತುರಂತಮಹೀಸಪತ್ನೀ
ದೌಷ್ಯಂತಿಮ್ ಅಪ್ರತಿರಥಮ್ ತನಯಂ ನಿವೇಷ್ಯ
ಭರ್ತ್ರಾ ತದರ್ಪಿತ ಕುಟುಂಬಭರೇಣ ಸಾರ್ಧಂ ,ಶಾಕತೇ ಕರಿಷ್ಯಸಿ ಪದಂ
ಪುನ: ಆಶ್ರಮೇ ಅಸ್ಮಿನ್.”
” ಮಹಾರಾಣಿ ಆಗೀ ನೀನು ಜನ್ಮ ಕೊಡಲಿರುವ ಪುತ್ರ ಚಕ್ರವರ್ತಿ ಆಗಲೀ. ಆಗ ಮಗನಿಗೆ ರಾಜ್ಯ ಭಾರ ಒಪ್ಪಿಸಿ ,ನೀನು ಪತಿ ದುಷ್ಯಂತ ಸಹಿತವಾಗೀ ವಾನಪ್ರಸ್ಥದ ವೇಳೆಗೆ
ಮತ್ತೆ ಆಶ್ರಮದೊಳಗೆ ಬರುವಿಯಂತೆ.”
ರಘುವಂಶದ ರಾಜರೆಲ್ಲ ಅನುಕರಿಸಿದ ಮಾರ್ಗದಲ್ಲಿ ನಡೆಯುವುದು ನಿಮ್ಮ ಬಾಧ್ಯತೆ ಎಂದು ತಿಳಿಸದಂತಾಯಿತು.
ಇದು ಮನು ಹಾಕಿದ ಕಾಯದೆ.
ಎಲ್ಲ ಬಾಧ್ಯತೆಗಳು ಪೂರೈಸಿದ ಬಳಿಕ
ತಪೋವನದ ಪ್ರಶಾಂತ ವಾತಾವರಣದಲ್ಲಿ ವಿಶ್ರಾಂತಿ.
ತವರಿನ ಆಕರ್ಷಣೆ ಬಹಳ ಇರಬಾರದು ಎಂಬ ಸೂಚನೆಯನ್ನು ಇಲ್ಲಿ ನಾವು ಮನಗಾಣಬೇಕು.
ಕಣ್ವರ ದು:ಖ ಅರಿತವಳು ಶಕುಂತಲೆ.
ತಪಶ್ಚರ್ಯದಿಂದ ಈಗಾಗಲೇ ತಮ್ಮ ಶರೀರ ಈಗಾಗಲೇ ಹಣ್ಣಾಗಿದೆ.
ನನಗೋಸ್ಕರ ಹೀಗೆ ಬಹಳ ದು:ಖಿಸಬಾರದು.
ನಿಟ್ಟುಸಿರು ಬಿಡುತ್ತ ಕಣ್ವರು, ಅಲ್ಲಿ ಬೆಳೆದ ಸಸಿಗಳ ಹಿಂದೆ ಶಕುಂತಲೆಯ ಕೈವಾಡವನ್ನು ನೆನೆಯುತ್ತಾ, ಗದ್ಗದಿತರಾದರು.
” ಶಿವಾಸ್ತೇ ಪಂಥಾನ: ಸಂತು “
ಎಂದು ಹಾರೈಸುವರು.
ಆಗ ಶಕುಂತಲೆ ,ಗೌತಮಿ ಮತ್ತು ಋಷಿಕುಮಾರರನ್ನು ಹಿಂಬಾಲಿಸುವಳು.
ಅವಳು ಅತ್ತ ಕಣ್ಮರೆ ಆಗುತ್ತಲೇ , ಶಕುಂತಲೆ ಇಲ್ಲದೆ ಶೂನ್ಯವಾದ ಈ ತಪೋವನವನ್ನು ಹೇಗೆ ತಾನೆ ಪ್ರವೇಶಿಸುವದು ಎಂದು ಪ್ರಲಾಪಿಸುವಾಗ ಓದುಗರ ಕಣ್ಣುಗಳೂ ತುಂಬಿ ಬರುತ್ತವೆ !!😭😭😭😭
ತಾನು ಸಾಕಿದ್ದ ಗರ್ಭಿಣಿ ಹರಿಣಿಯ ಪ್ರಸವ ಆದ ಕೂಡಲೇ ತಿಳಿಸಬೇಕು , ಅವಳನ್ನು ನಿಮಗೆ ಒಪ್ಪಿಸಿರುವೆ.
ತಂದೆ ಕಣ್ವರ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ,ಎಂದು ಸಖಿಯರಿಗೆ
ಹೇಳುತ್ತ ,ಪ್ರಲಾಪಿಸುತ್ತ ಶಕುಂತಲೆ ಭಾರವಾದ ಹೆಜ್ಜೆ ಹಾಕುತ್ತಾ ಮರೆಯಾದಳು.
ಸಖಿಯರು,ಮತ್ತು ಕಣ್ವರು ಆಶ್ರಮದೊಳಗೆ ಹೊರಡುವರು.
ಅವರ ದು:ಖದಲ್ಲಿ ಭಾಗಿ ಆಗುತ್ತ
ನಮಗೆ ನಮ್ಮ ಹೆಣ್ಣು ಮಕ್ಕಳನ್ನು ಅತ್ತೆಮನೆಗೆ ಕಳಿಸಿದ,ಇಲ್ಲವೇ ನಾವು ತವರು ಬಿಟ್ಟು ಹೊರಟಾಗಿನ ದೃಶ್ಯ ಕಣ್ಣಮುಂದೆ ಬಂದು ಕಣ್ಣು ತುಂಬಿ
ಬರುತ್ತವೆ ಅಲ್ಲವೇ.
ಕವಿ ಕಾಲಿದಾಸನಿಂದ ಕರುಣಾರಸ
ಉಕ್ಕಿ ಹರಿದಿದೆ ಈ ೪ ನೇ ಅಂಕದಲ್ಲಿ !
ತಪಸ್ವಿಗೇ ಇಷ್ಟು ದು:ಖ ಆಗಬೇಕಾದರೆ ಇನ್ನು ಸಾಮಾನ್ಯ ಗ್ರಹಸ್ಥರ ಪೀಡೆ ಎಂಥದು ಇರಬೇಡ!
ಹೆಣ್ಣು ಹಡಿಯಲು ಬ್ಯಾಡ
ಹೆರವರಿಗೆ ಕೊಡಬ್ಯಾಡ .
ಹೆಣ್ಣು ಹೋಗಾಗ ಅಳಬ್ಯಾಡ ಹಡದವ್ವ ,
ಸಿಟ್ಟಾಗಿ ಶಿವಗ ಬೈ ಬ್ಯಾಡಾ!!
ಜಾನಪದ ಕೂಡಾ ಕಾಲಿದಾಸನ ಎಲ್ಲ ಕರುಣಾರಸವನ್ನು ತುಂಬಿಕೊಂಡಿದೆಯಲ್ಲವೇ !!!
ಅನಿರ್ವಚನೀಯ ಭಾವಗಳು !
ಪ್ರಕೃತಿಯ ಉಡಿಯಲ್ಲಿ , ಆಶ್ರಮದಲ್ಲಿ ಮಹರ್ಷಿಗಳೊಂದಿಗೆ ಬೆಳೆದ ಬಾಲೆ, ಪಿತಾ ಪುತ್ರಿಯರ ವಿರಹ ವೇದನೆ, ಪತಿವಿರಹದ ವೇದನೆ, ಗೃಹಿಣಿ ಆಗುವವಳಿಗೆ ಉಪದೇಶ ವಾಕ್ಯ, ಗಿಡಮರ ಪಶು ಪ್ರಾಣಿಗಳೊಂದಿಗೆ ಸ್ನೇಹ, ಪುತ್ರಿ ಸ್ವಜನರನು ಅಗಲಿ, ಅಪರಿಚಿತ ಜನರಲ್ಲಿ ಹೊಂದಿಕೊಂಡು ಹೋಗುವ ಸದ್ಗೃಹಿಣಿಯ ಭೂಮಿಕೆ, ಹೀಗೇ ಅನೇಕ ಜಾಗತಿಕ ಸತ್ಯಗಳೊಂದಿಗೆ ಪರಿಪೂರ್ಣವಾಗಿದೆ
ಚತುರ್ಥ ಅಂಕವು.
ಮಹರ್ಷಿಗಳು ಶಕುಂತಲೆಗೆ ಹೇಳಿದ ಪಂಚಶೀಲ ಉಪದೇಶವನ್ನು ರಾಷ್ಟ್ರ ,ಹಾಗೂ ಜಾಗತಿಕ ಮಟ್ಟದಲ್ಲಿ ಅನುಸರಿಸಿದರೆ ವಿಶ್ವಬಂಧುತ್ವ
ಸಾಧಿಸಲು ಕೂಡಾ ಸಹಕಾರಿ ಆದೀತು !!
ಕಾಲಿದಾಸ ಇದರ ಪ್ರವಕ್ತ.
ಆದರ್ಶ,ಸ್ವಸ್ಥ, ಆನಂದ ಶಾಂತಿಯುತವಾದ ಕುಟುಂಬ, ಸಮಾಜ ಕಟ್ಟಲು ಸಾಧ್ಯ !!
ಈ ಅಂಕದ ಕೊನೆಯಲ್ಲಿ ಇನ್ನುಳಿದ ಮಹತ್ವದ ಶ್ಲೋಕ ಒಂದನ್ನು ಹೇಳಲಿಕ್ಕೆ ಉಂಟು.
ಕಾಶ್ಯಪರು ದುಹಿತೃವನ್ನು ಕಳಿಸಿ,
” ಶಕುಂತಲಾ ಪತಿಗೃಹಂ ವಿಸೃಜ್ಯ ಲಭ್ಧಂ ಇದಾನೀಮ್ ಸ್ವಾಸ್ಥ್ಯಮ್.
ಅರ್ಥೋ ಹಿ ಕನ್ಯಾ ಪರಕೀಯ ಏವ
ತಾಮ್ ಅದ್ಯ ಸಂಪ್ರೇಷ್ಯ ಪರಿಗ್ರಹೀತು:
ಜತೋ ಮಮಾಯಂ ವಿಶದ: ಪ್ರಕಾಮಮ್.
ಪ್ರತ್ಯರ್ಪಿತನ್ಯಾಸ ಇವಾಂತರಾತ್ಮಾ .”
ಮಗಳನ್ನು ಪತಿಗೆ ಒಪ್ಪಿಸಿ ತಂದೆಯ ಭಾರ ಇಳಿದಿದೆ.
ಹೆಣ್ಣುಮಗಳು ಪರರ ಸ್ವತ್ತು ಇದ್ದಂತೆ.
ಯೋಗ್ಯರಿಗೆ ಸುರಕ್ಷಿತವಾಗಿ ತಲುಪಿಸುವ ಜವಾಬ್ದಾರಿ ತಂದೆ ತಾಯಿಗಳದು. ಈ ಕರ್ತವ್ಯ ನಿಭಾಯಿಸುವದು ಬಲು ಭಾರವಾದ ಕೆಲಸ. ಯೋಗ್ಯ ವರನಿಗೆ ಒಪ್ಪಿಸಿದಾಗ ಮನಸು ಭಾರವಾದರೂ,ಪ್ರಸನ್ನವಾಗಿ ಇರುತ್ತದೆ.
ಇಂಥ ಅಪೂರ್ವ ಅನುಭವವನ್ನು ಕಣ್ವರು ಅತಿ ಸುಂದರ , ಮಾರ್ಮಿಕ ಶಬ್ದಗಳಲ್ಲಿ ವ್ಯಕ್ತ ಪಡಿಸಿದ್ದಾರೆ ಅಲ್ಲವೇ!!!
ಅಗ್ನಿ ಸಾಕ್ಷಿಯಾಗಿ ಪತಿ , ಪತ್ನಿಯರು
ಕೈ ಹಿಡಿದು , ಪ್ರದಕ್ಷಿಣೆ ಹಾಕುವುದಕ್ಕೆ
” ಪರಿಗ್ರಹ ” ಎನ್ನುವರು.
ಈಗಿನ ಕಾಲದಲ್ಲಿ , ಈ ಶ್ಲೋಕ ಹೇಳಿ ಹೆಣ್ಣು ಮಕ್ಕಳು ಭಾರ ಎಂದು ಹೇಳಿದರೆ ಒಂದು ಹರಿತವಾದ ಬಾಣ ನಿಮ್ಮೆಡೆ ಬರುತ್ತದೆ ಜಾಗ್ರತೆ !!!
” ನಾವ್ಯಾಕೆ ಭಾರ. ನಾವೂ ಕೈತುಂಬಾ ಸಂಪಾದಿಸುತ್ತಾ ಇದ್ದೀವಿ.”
ಗುಜರಾತಿ ,ಪಂಜಾಬೀ , ದಕ್ಷಿಣ ಭಾರತ , ಇಂಗ್ಲಂಡ್ , ಅಮೇರಿಕ ಈ ಎಲ್ಲ ಪಧ್ಧತಿಗಳ ಕಲಸು ಮೇಲೋಗರ ಆದ ಇಂದಿನ ವಿವಾಹ ಮಹೋತ್ಸವವನ್ನು ಆಚರಿಸುದು ಮಾತ್ರ ಭಾರವಾಗಿದೆ !!!😀😀
ಇಲ್ಲಿಗೆ ಇಷ್ಟು ದಿನ ಕಾತರದಿಂದ ಕಾಯುತ್ತಾ ಇದ್ದ ಜಗತ್ಪ್ರಸಿದ್ಧ
इति चतुर्थः अंकः ।
इति सर्वे निष्क्रांताः l
🙏🙏🙏🙏🙏🙏
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ