- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಸಂಸ್ಕೃತ ಅಧ್ಯಯನದ ಪ್ರಯೋಜನ ಏನು ?
ನನ್ನ ಮೊಮ್ಮಗ ೧೦ ನೇ ಕ್ಲಾಸಿನ ಫೈನಲ್
ಪರೀಕ್ಷೆಯ ಸಂಸ್ಕೃತ ಪೇಪರಿಗಾಗಿ ಓದುತ್ತಿದ್ದ .
” ಬಾರೋ ,ಏನರ difficulties ಇದ್ದರ ಹೇಳಿ ಕೊಡ್ತೀನೀ ” ಅಂತ ಕರೆದೆ .
“ಬ್ಯಾಡ ಅಜ್ಜಿ , ಎಷ್ಟು ಬಂದಷ್ಟ ಮಾರ್ಕ್ಸ ಸಾಕು. ಸುಮ್ಮನ time waste.” ಅಂದ. ಅಷ್ಟೇ ಅಲ್ಲ,
“ನಿನ್ನ ಕೈಯಾಗ ಸಂಸ್ಕೃತ ಕಲ್ತರ ನಾನು ಅದರಾಗ Ph.D .ಮಾಡಬೇಕಾದೀತು .ನಾನು ಮೆಡಿಸಿನ್ ಗೆ ಯಾವಾಗ ತಯಾರೀ ಮಾಡಲೀ ? “. ಎಂದ.
ಇದು ಸಾಮಾನ್ಯವಾಗಿ ಇಂದಿನ ವಿದ್ಯಾರ್ಥಿಗಳ ಧೋರಣೆ ಅಲ್ವಾ ?
ಮುಂದೆ ಎಂಥ ನೌಕರಿ ಸಿಗಬಲ್ಲದು, ಕಲಿತದ್ದರಿಂದ ದುಡ್ಡು ಗಳಿಸಲು ಸಾಧ್ಯವಾ?, ಇದು ಎಲ್ಲರ ಚಿಂತೆ .
ಸಂಸ್ಕೃತ ಭಾಷೆಯ ಅಧ್ಯಯನದ ಪ್ರಯೋಜನ ಏನು ?
ಕೇವಲ ಲೌಕಿಕ ವ್ಯವಹಾರದಲ್ಲಿಯೇ ಮುಳುಗಿ ಅದರಲ್ಲಿಯೇ ಸುಖ ಅರಸುವವರಿಗೆ ಈ ವಿಷಯ ಬೇಸರ ತರಿಸಬಹುದು. ಆದರೆ ಒಂದಿಲ್ಲೊಂದು ದಿನ ಮನಸು ಆತ್ಮದ ಕಡೆಗೆ ವಾಲುತ್ತದೆ . ಸಂಸ್ಕೃತ ಭಾಷೆ ಆತ್ಮ ಜ್ಯೋತಿಯನು ಬೆಳಗಿಸುವ ಸಾಧನ. ಆಚಾರ ವಿಚಾರಗಳನ್ನು ಪ್ರದಾನ ಮಾಡಿದ್ದಲ್ಲದೇ ಜೀವನದ ಉನ್ನತಿಗೆ ಜ್ಞಾನಾಗ್ನಿ ನೀಡಿ ,ಮೋಹ ಎಂಬ ಅಂಧಕಾರದ ,ಅಜ್ಞಾನದ ನಾಶಕ್ಕೆ ಸಂಸ್ಕೃತ ಮಾಧ್ಯಮ.
ಸಿದ್ದಾರ್ಥ ರಾಜಭೋಗವನ್ನು ತ್ಯಜಿಸಿ ತಪಸ್ಸಿನಿಂದ ಜ್ಞಾನ ಪಡೆದು ‘ಭಗವಾನ್ ಬುಧ್ಧ’ ಎನಿಸಿ ಮಾರ್ಗದರ್ಶಕನಾದ. ಈಗ ಅಡವಿಗೇ ಹೋಗಬೇಕೆಂದೇನಿಲ್ಲ.ಅಪೂರ್ವ ಸಂಸ್ಕೃತ ಗ್ರಂಥಗಳಲ್ಲಿ ವ್ವವಹಾರ ,ವೃತ ,ನೇಮ , ಕರ್ತವ್ಯಗಳ ಸನ್ಮಾರ್ಗಗಳ ದರ್ಶನ ಆಗುತ್ತದೆ . ವಿಶ್ವ ಬಂಧುತ್ವದ ಬೀಜ ಇಲ್ಲಿ ಇದೆ . ವಿವೇಚನಾ ಶಕ್ತಿ ಯ ಮೂಲವೂ ಇಲ್ಲಿ ಇದೆ.
“The discovery of the Sanskrita language led to the foundation of Science of comparative philosophy ,an anquentance with the literature of Vedas resulted in the foundation of science of comparative Mythology.”
ಅಂತ ಸಂಶೋಧಕ, Macdonell ಹೇಳುತ್ತಾರೆ.
ಭಾರತದ ಎಲ್ಲ ಭಾಷೆಗಳಲ್ಲಿಯೂ ೬೦ ರಿಂದ ೭೦ ಪ್ರತಿಶತ ಶಬ್ದಗಳು ಸಂಸ್ಕೃತ ಮೂಲದಿಂದ ಬಂದಿವೆ.
ಅಲ್ಲದೇ ಜರ್ಮನ್, ಫ್ರೆಂಚ್, ಆಂಗ್ಲಭಾಷೆಗಳಿಗೂ ಸಂಸ್ಕೃತವೇ ಮೂಲ. ಮದರ್ ,ಫಾದರ , ಬ್ರದರ್ ಈ ಆಂಗ್ಲ ಶಬ್ದಗಳಲ್ಲಿ ಮಾತೃ ,ಪಿತೃ, ಭ್ರಾತೃ ಈ ಸಂಸ್ಕೃತ ಶಬ್ದಗಳ ಧ್ವನಿಯನ್ನು ಗುರುತಿಸಬಹುದು ಅಲ್ಲವೇ ? ಸ್ಟೇಷನ್ ಎಂಬ ಶಬ್ದ ಸ್ಥಾ(ನಿಲ್ಲು) ಎಂಬ ಧಾತುವಿನಿಂದ ಬಂದಿದೆ ಎಂದರೆ ನಂಬುವಿರಾ ?
ಇಂತಹ ಬಹುಮೂಲ್ಯದ ನಿಧಿ ನಮ್ಮದು . ಇನ್ನು ಮುಂದೆ ನೀವು ಜರ್ಮನಿಗೆ ಹೋಗಬೇಕಾದರೆ, ಜರ್ಮನ್ ಕಲಿಯ ಬೇಕಿಲ್ಲ, ಸಂಸ್ಕೃತ ಕಲಿತರೆ ಸಾಕು, ಅನ್ನುವಷ್ಟು ಪ್ರಾಮುಖ್ಯತೆಯನ್ನು ಜರ್ಮನ್ನರು ಸಂಸ್ಕೃತ ಭಾಷೆಗೆ ಕೊಡುತ್ತಾರೆ.
ಸಂಸ್ಕೃತದಲ್ಲಿ ನಮ್ಮ ಸಂಸ್ಕೃತಿ ಅಡಗಿದೆ . ವಾಷಿಂಗ್ಟನ್ ನ White House ನಲ್ಲಿ ವೇದ ಮಂತ್ರಗಳು ಹೇಳಲ್ಪಡುತ್ತಿವೆ.ಅನೇಕ ಪಾಶ್ಚಾತ್ಯದೇಶದ ಶಾಲೆಗಳಲ್ಲಿ ಸಂಸ್ಕೃತ ಕಲಿಸಲಾಗುತ್ತದೆ .ಇದು ಕಠಿಣ ಭಾಷೆ ,dead language ಎಂದೆಲ್ಲ ಅಭಿಪ್ರಾಯ. ಪರಕೀಯರ ಭಾಷೆ ಅದ್ಹೇಗೆ ಸರಳವಾಯಿತು !
ಪರಧರ್ಮ: ಭಯಾವಹ: ( ತನ್ನದಲ್ಲದ ಧರ್ಮ ಭಯಹುಟ್ಟಿಸುವಂಥದ್ದು) ಎಂಬುದು ಕೇಳಿಸುವುದಿಲ್ಲ. ಇದು ವಿಪರ್ಯಾಸ.
ಸಂಸ್ಕೃತ ಭಾಷೆಯ ವ್ಯಾಕರಣವನ್ನು ಸ್ವಲ್ಪ ಸರಳೀಕರಿಸಿ, ವ್ಯವಹಾರಕ್ಕಾಗಿ ಕಲವು ಹೊಸ ಶಬ್ದಗಳನ್ನು ಅಳವಡಿಸಿಕೊಂಡಾಗ ಭಾಷೆ ಕಲಿಯಲು ಅನುಕೂಲ ಆಗಬಹುದು. ಹೊಸ ವಿಷಯಗಳ ಬಗೆಗಿನ ಗ್ರಂಥರಚನೆ ಆಗಬೇಕಿದೆ. ಸಂಸ್ಕೃತ ಗ್ರಂಥಗಳ ಅನುವಾದ ಆಗಬೇಕು.ಪಠನ,ಪಾಠಗಳ ಪದ್ಧತಿ ಗಳಲ್ಲಿ ಪರಿಷ್ಕರಣೆ ಆದಾಗ ಸಂಸ್ಕೃತ ಮತ್ತೆ ವಿಕಸಿತವಾಗಿ ‘ಜಯತು ಸಂಸ್ಕೃತಮ್’ ಎಂಬ ಆಶೆ ಈಡೇರಬಹುದು.
ಆದಿಕವಿ ವಿರಚಿತ ರಾಮಾಯಣ , ವಿಷ್ಣು ರೂಪರೆನಿಸಿದ ವೇದವ್ಯಾಸ ವಿರಚಿತ ಮಹಾಭಾರತ ,ವೇದಗಳು , ಪುರಾಣಗಳು ,ಭಾಗವತ ಇವೆಲ್ಲವೂ ,ಇಂದಿಗೂ ಅನುಸರಿಸಬೇಕಾದ ಮೌಲ್ಯಗಳನ್ನು, ರಾಜನೀತಿಯನ್ನು , ಮಾನವೀಯಸಂಬಂಧಗಳನ್ನು ಸಾರುತ್ತವೆ ಅಲ್ಲವೇ !
ಸಂಸ್ಕೃತ ಕೇವಲ ವಿದುಷರಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೆ, ಶ್ರೀಮಂತರು ,ಬಡವರು, ಸ್ತ್ರೀಯರು, ಪುರುಷರು ,ಆಬಾಲವೃಧ್ಧರಿಗೂ ಮಾರ್ಗದರ್ಶನ ಮಾಡುತ್ತದೆ, ಪ್ರಿಯವಾಕ್ಯ ಪ್ರದಾನ ಮಾಡುತ್ತವೆ .
ಹಾಸ್ಯ , ಶೃಂಗಾರ , ಕಾರುಣ್ಯ ,ಮುಂತಾಗಿ ಆವಿಷ್ಕಾರಗಳು, ರಸವಿಂಗಡನೆಗಳು ಸಂಸ್ಕೃತದ ಕೊಡುಗೆ . ಇವೆಲ್ಲವೂ ಪುರಾ ಅಪಿ ಹಳೆಯವಾದರೂ ನವೀನ ಎನಿಸುತ್ತವೆ . ನೃತ್ಯ ನಾಟಕಗಳಿಗೆ ವಸ್ತು ಪೂರೈಸುತ್ತವೆ.
ತಾಪತ್ರಯಗಳ ನಿವೃತ್ತಿಗಾಗಿ ದರ್ಶನ ಶಾಸ್ತ್ರಗಳು ಮಾರ್ಗದರ್ಶಕವಾಗಿವೆ.
ಹೈಸ್ಕೂಲು ವಿದ್ಯಾರ್ಥಿಯೊಬ್ಬ ಶಾಲೆಯಿಂದ ಬಂದಮೇಲೆ ಗಣಿತದ ಪಾಠ ಮುಗಿಸಿ ನನ್ನ ಹತ್ತಿರ ಬರ್ತಾ ಇದ್ದ.
ನಾನು ಆತನಿಗೆ ಸಂಸ್ಕೃತ ಪಾಠ ಮಾಡುವಾಗ ಪಾಪ ,ಅವನಿಗೆ ನಿದ್ರೆ. ಒಮ್ಮೆಯೂ home work ಮಾಡಿದ್ದಿಲ್ಲ ಆತ. ಆಗ ನನಗೆ ನನ್ನ ಸ್ಕೂಲ್ ದಿನ ನೆನಪಾದವು…ಟಿಳಕ ವಿದ್ಯಾಪೀಠ ,ಪುಣೆ .. ಸಂಸ್ಕೃತ ಪರೀಕ್ಷೆ ನಡೆಸಲಿದೆ ಅಂತ ತಿಳಿದಾಗ, ಮನೆಯಲ್ಲಿ ಯಾರನ್ನು ಕೇಳದೇ ಪರೀಕ್ಷೆಗೆ ಕಟ್ಟಿ
ಪೀಠಕ್ಕೆ ಎರಡನೆಯ ಸ್ಥಾನ ಬಂದದ್ದನ್ನೂ ಮನೆಯಲ್ಲಿ ಹೇಳಲಿಲ್ಲ. ಆವಾಗ ಸಂಸ್ಕೃತ ಕಲಿಯುವುದು ಅಷ್ಟು ಸಹಜವಾಗಿತ್ತು . ಇರಲಿ.
ಅಶ್ವತ್ಥ ವೃಕ್ಷ ವಿಶಾಲ. ಅನೇಕ ಟೊಂಗೆಗಳು ,ಎಲೆಗಳು ಅನೇಕ ಬೀಳಲುಗಳು .ಈ ಮಹಾವೃಕ್ಷದಲ್ಲಿ ಅನೇಕ ಪಕ್ಷಿಗಳ ವಾಸ. ದಟ್ಟವಾದ ನೆಳಲು ,ಹಗಲೂ ರಾತ್ರಿ ಪ್ರಾಣವಾಯು ಪೂರೈಸುವ ಮಹಾವೃಕ್ಷವದು . ಸಂಸ್ಕೃತ ಸಾಹಿತ್ಯಲೋಕ ಇಂಥದೊಂದು ಮರ .
ಹಾಗಾದರೆ ಈ ಮರದ ಭಾಗಗಳು ಯಾವವು ಸ್ವಲ್ಪ ಹಣಿಕಿ ಹಾಕೋಣವೇ ..?
ವಿಶ್ವನಾಥ್ ಅವರ ಸಾಹಿತ್ಯ ದರ್ಪಣದ ಮೇರೆಗೆ ಕಾವ್ಯವನ್ನು ಎರಡು ಭಾಗದಲ್ಲಿ ವಿಂಗಡಿಸಲಾಗಿದೆ…. ದೃಶ್ಯ ಕಾವ್ಯ ಮತ್ತು ಶ್ರವ್ಯ ಕಾವ್ಯ. ನಾಟಕ , ನೃತ್ಯ ಇತ್ಯಾದಿಗಳು ದೃಶ್ಯ ಕಾವ್ಯ ಎನಿಸಿದರೆ ಕವನಗಳೆಲ್ಲ ಶ್ರವ್ಯ ಆದವು . ಅದರಲ್ಲೂ ಪದ್ಯಕಾವ್ಯ ,ಗದ್ಯಕಾವ್ಯ ಎಂದು ಎರಡು ಭಾಗಗಳು.ಗದ್ಯದ ಲಕ್ಷಣ ಎಂದರೆ ಇಲ್ಲಿ ವೃತ್ತ ಬಂಧನೆ ಇಲ್ಲ.
” ಅಪಾದ: ಪದ ಸಂತಾನ: ಗದ್ಯಂ ತದಪಿ ಕಥ್ಯತೆ “
( ಪಾದ ಇಲ್ಲದೇ, ಪದ ಜೋಡಣೆಯೇ ಗದ್ಯವು)
ಹೀಗೆ ಅಗ್ನಿ ಪುರಾಣದಲ್ಲಿ ಗದ್ಯದ ಲಕ್ಷಣ ಹೇಳಲಾಗಿದೆ. ಪಾದಗಳು ಇಲ್ಲದ ಪದಗಳ ಗುಂಪು ಗದ್ಯ ಎಂದಾಯಿತು. ದಂಡಿ ಕವಿಯೂ ಇದನ್ನೇ ಸಮರ್ಥಿಸಿದ್ದಾನೆ . ಯಜುರ್ವೇದ , ಅಥರ್ವವೇದಗಳು ಗದ್ಯದಲ್ಲಿ ಇವೆ.ಗದ್ಯಕಾವ್ಯದ ಉಗಮ ಮತ್ತು ವಿಕಾಸದಲ್ಲಿ ವೈದಿಕ ಗದ್ಯವೇ ಸರ್ವ ಪ್ರಥಮವಾದದ್ದು.
ಪುರಾಣಗಳು ಗದ್ಯ ಪದ್ಯ ಮಿಶ್ರಿತ ಆಗಿವೆ .
“ಗದ್ಯಂ ಕವೀನಾಂ ನಿಕಷಾ ವದಂತಿ”
ಕವಿಗಳಿಗೆ ಗದ್ಯ ತೀರ ಹತ್ತಿರವಾದದ್ದು .ನನಗೂ ಅಷ್ಟೇ. ಗದ್ಯಂ ಹೃದ್ಯಂ. ಮನೋರಮೆ-ಮುದ್ದಣರ ಸಂವಾದದಲ್ಲಿ, ಕ್ಲಿಷ್ಟವಾದ ಪದ್ಯಕಾವ್ಯದ ಕುರಿತು ಮನೋರಮೆ ಹೇಳಿದ್ದು “ನೀರಿಳಿಯದ ಗಂಟಲೋಳ್ ಕಡುಬಂ ತುರುಕಿದಂತಾಯ್ತು. ಅಂತ.
ವೈದಿಕ ಸಾಹಿತ್ಯ ಮಂತ್ರ ಹಾಗೂ ಗದ್ಯ ಭಾಗದಲ್ಲಿ ಇತ್ತು . ರಾಮಾಯಣ, ಮಹಾಭಾರತ ಇವೆರಡು ಭಾರತದ ಅತ್ಯಂತ ಪುರಾತನವಾದ ಗ್ರಂಥಗಳು . ಕೊನೆಯವರೆಗೂ ಇರುವಂಥವೂ ಕೂಡ . ಹಿಮಾಲಯದ ಪ್ರಶಾಂತ ವಾತಾವರಣದಲ್ಲಿ ಬರೆಯಲ್ಪಟ್ಟವು . ಪ್ರಸಿದ್ಧವಾದ , ಪವಿತ್ರವಾದ ಗಂಗಾ,ಯಮುನಾ ,ಸಿಂಧೂ ನದಿಗಳ ತೀರದ ನಾಗರಿಕತೆಯನ್ನೂ ಈ ಕಾವ್ಯಗಳು ಸಾರುತ್ತವೆ .
ಇತಿಹಾಸ, ಪುರಾಣಗಳನ್ನು ಒಳಗೊಂಡ ಮಹಾಕಾವ್ಯದ ಲಕ್ಷಣ ಈ ಕೆಳಗಿನಂತೆ ಇದೆ.
“ಸರ್ಗಶ್ಚ ಪ್ರತಿಸರ್ಗಶ್ಚ ವಂಶೋ ಮನ್ವಂತರಾಣಿ ಚ .
ವಂಶಾನುಚರಿತಂಚ ಇತಿ ಪುರಾಣಂ ಪಂಚ ಲಕ್ಷಣಮ್”
ಅಂದರೆ ಅನೇಕ ಸರ್ಗಗಳು , ಅದರಲ್ಲಿ ಆನೇಕ ಕಾಂಡ ಅಥವಾ ಸ್ಕಂದಗಳು, ವಂಶದ ,ಮನ್ವಂತರಗಳ ವಿವರಣೆಗಳು ,ಮತ್ತು ವಂಶಗಳ ಚರಿತ್ರೆ , ಇವು ಮಹಾಕಾವ್ಯದ ಲಕ್ಷಣಗಳು .
ಆದಿಕವಿ ವಾಲ್ಮೀಕಿ ಬರೆದ ಶ್ರೀ ಮದ್ರಾಮಾಯಣದ ಪರಿಚಯ ಆಬಾಲವೃಧ್ಧರಿಗೂ ಪರಿಚಿತ . ಹಳ್ಳಿ, ಹಳ್ಳಿ ಹಳ್ಳಿ ಗಳಲ್ಲಿಯೂ ಜನಪ್ರಿಯ. ಚಲ್ಲಾಟದಲ್ಲಿ ತೊಡಗಿದ ಕ್ರೌಂಚ ಪಕ್ಷಿಗಳಲ್ಲಿ ಒಂದು ಬೇಡನಿಂದ ಹತವಾದಾಗ ಈ,ದು:ಖವನ್ನು ಕಂಡು ಕರಗಿದ ವಾಲ್ಮೀಕಿಯ ಕರುಣೆ ಕಾವ್ಯವಾಗಿ ಹರಿಯಿತು.
“ಶೋಕಮ್ ಶ್ಲೋಕಮಾಗತಾ”
(ಶೋಕವೇ ಶ್ಲೋಕವಾಗಿ ಹರಿಯಿತು)
ಕುಟುಂಬದ ಸದಸ್ಯರ ಸಂಬಂಧ ,ಗುರುಹಿರಿಯರಿಗೆ ಗೌರವ ವಚನ ಪಾಲನೆ, ಹೀಗೆ ಅನೇಕ ಆದರ್ಶ ಪಾತ್ರಗಳು ಹಾಗೂ ಬದುಕುವ ಕಲೆ, ಬದುಕಿನ ನೀತಿ-ರೀತಿ ಕಲಿಸುವ ಅನನ್ಯ ಕಥನಗಳಿವು. ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಚರಿತ್ರೆ ತ್ರೇತಾಯುಗದ್ದಾಯಿತು. ದ್ವಾಪರಯುಗದ ಮಹಾಭಾರತದಲ್ಲಿ ಸಮಾಜದ ಅನೇಕ ಮುಖಗಳ ಪರಿಚಯ ಸಿಗುತ್ತೆ. ಭಾರದಿಂದ ಹಾಗೂ ಮಹತ್ವದಿಂದಲೂ ಇದು ಮಹಾ ಎನಿಸಿಕೊಂಡಿದೆ. ಜಗತ್ತಿನ ಅಷ್ಟೂ ಭಾಷೆಗಳಲ್ಲಿಯೂ ಇದೊಂದು ಅದ್ವಿತೀಯ ಗ್ರಂಥ. ಇದು ಕಾವ್ಯವೂ ಹೌದು ,ಇತಿಹಾಸವೂ ಹೌದು. ಮನಸು,ಮನಸುಗಳ ಸಂಘರ್ಷ, ಸಮನ್ವಯ, ಸಂಶಯ, ಸಂಕಲ್ಪ, ಪ್ರಕೃತಿ , ವಿಕೃತಿಗಳ ಚಿತ್ರವಿಚಿತ್ರ ಪ್ರವೃತ್ತಿಯ ಸ್ವಾರಸ್ಯಕರ ಕಥೆ ಹೆಣೆದಿದ್ದಾರೆ ವೇದವ್ಯಾಸರು.
ಇದು ಯಾವ ಕಾಲಕ್ಕೂ ನಿತ್ಯನೂತನ.ಇದು ಮನುಕುಲದ ಕಥೆ. ಓದುತ್ತಾ ಹೋದಂತೆಲ್ಲಾ, ಮನು ಕುಲದವರ ಪ್ರತಿ ತಲೆಮಾರು ತನ್ನನ್ನೇ ಮತ್ತೆ ಮತ್ತೆ ಈ ಪಾತ್ರಗಳೊಳಗೆ ಕಾಣುವಂತಾಗುತ್ತದೆ. ಬರೇ ಸಾಹಿತ್ಯವಲ್ಲದೇ ಪಾರಂಪರಿಕ ಪದ್ಧತಿಗಳ ಗುರುತಾಗಿರುವುದು ಪುರಾಣಗಳ ವೈಶಿಷ್ಟ್ಯ ಅಲ್ಲವೇ .
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ