- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಹೆಸರಿನಲ್ಲೇನಿದೆ ? ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಅದು ಗುಲಾಬಿಯಾಗಿಯೇ ಉಳಿಯುತ್ತದೆ ಮತ್ತು ಅದರ ಚಂದ ಅದಕ್ಕೆ ಇರುತ್ತದೆ ಎನ್ನುವ ಕವಿಯ ಮಾತು ನಿಜವಾದರೂ ಮನುಷ್ಯರಿಗೆ ಹೆಸರು ಬೇಕೇ ಬೇಕೆನ್ನುವ ಸತ್ಯ ನಮ್ಮೆಲ್ಲರಿಗೆ ತಿಳಿದಿದೆ. ಅವರವರ ಹೆಸರು ಅವರಿಗೆ ಸ್ವಂತ. ಆ ಹೆಸರು ಹಿಡಿದು ಕೂಗಿದರೆ ಅವರು ನಮಗೆ ಸನಿಹವಾಗುತ್ತಾರೆ. ರಂಗಣ್ಣೋರೇ ! ಇಲ್ಲಿ ಬನ್ನಿ ಎಂದು ಕರೆದಾಗ ಆ ವ್ಯಕ್ತಿಗೊಂದು ಪ್ರಾಧಾನ್ಯತೆ ಕೊಟ್ಟಹಾಗೆ. ಅಷ್ಟೇಕೆ ! ದೇವರ ಅರ್ಚನೆ ಮತ್ತು ಅಭಿಷೇಕ ಮಾಡಿಸುವಾಗ ಅಥವಾ ನಾವು ಮನೆಯಲ್ಲಿ ಪೂಜೆ ಮಾಡುವಾಗ ನಮ್ಮ ಹೆಸರು ಕಡ್ಡಾಯವಾಗಿ ಹೇಳಲೇಬೇಕಾಗುತ್ತದೆ. ಅದು ಹೆಸರಿನ ಹಿರಿಮೆ. ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಈ ಹೆಸರು ಹಿಡಿದು ಕರೆಯುವುದರ ಪ್ರಾಧಾನ್ಯತೆಯ ಮೇಲೆ ಒಂದು ಪಾಠವೇ ಇದೆ.
ಹೆಸರಿನದೇ ಒಂದು ಪ್ರತ್ಯೇಕತೆ. ಅದು ನಮ್ಮ ಸ್ವಂತದ್ದೇ ಆದರೂ ನಾವು ಅದನ್ನು ಬಳಸುವುದು ಕಮ್ಮಿ, ಎಲ್ಲೋ ನಮ್ಮ ಪರಿಚಯ ಹೇಳುವಾಗ ಬಿಟ್ಟರೆ. ಮತ್ತೆ ಅದು ನಮಗೆ ಬರುವುದರಲ್ಲಿ ನಮ್ಮ ಪಾತ್ರವೇ ಇರುವುದಿಲ್ಲ. ಆದರೆ ಜೀವಮಾನ ಇಡೀ ಅದು ನಮಗಿಷ್ಟವಾದರೂ ಅಥವಾ ಇಲ್ಲವಾದರು ಹೊತ್ತು ತಿರುಗಲೇಬೇಕು. ಈಗೀಗ ದಿನ ಪತ್ರಿಕೆಗಳಲ್ಲಿ ಒಂದು ಪ್ರಕಟನೆ ಕೊಟ್ಟು ಹೆಸರು ಬದಲಾಯಿಸ ಬಹುದಾದರೂ ಅಂಥವರು ವಿರಳ. ಯಾವುದೋ ಸಮಾರಂಭದಲ್ಲಿ ವೇದಿಕೆಗೆ ನಮ್ಮ ಹೆಸರು ಹಿಡಿದು ಕರೆಯುವಾಗ ಎಲ್ಲಿಲ್ಲದ ಆನಂದವಾಗುತ್ತದೆ. ಕೋರ್ಟಿನಲ್ಲಿ ಕಕ್ಷಿದಾರನಾಗಿ ಕೂತಾಗ ಪೇದೆಯ ಪಕ್ಕದಲ್ಲೇ ಇದ್ದರೂ ಅವನು ಮೂರು ಬಾರಿ ಹೆಸರು ಕೂಗುವವರೆಗೂ ಕೂತಿರುವುದೇ. ಬೇರೆಯವರ ಬಾಯಿಂದ ನಮ್ಮ ಹೆಸರು ಕೇಳುವುದರಷ್ಟು ಆನಂದ ಬೇರೊಂದಿಲ್ಲ. ಮತ್ತೊಂದಿದೆ. ಹೆಸರನ್ನು ಹಿಡಿದು ಗುಣಗಳನ್ನು ಎಣಿಸಲು ಬರುವುದಿಲ್ಲ. ಸುಂದರಿ ಎಂಬ ಹೆಸರಿನವಳು ಕುರೂಪಳಿರಬಹುದು, ಕುಬೇರನ ಹೆಸರು ಹೊತ್ತವನು ದರಿದ್ರ ನಾರಾಯಾಣನಿರಬಹುದು ಮತ್ತು ಸುದಾಮನು ಕೋಟೀಶ್ವರನಿರಬಹುದು.
ಹೆಸರುಗಳು ಬರೀ ವ್ಯಕ್ತಿಯ ಸೂಚಿ ಮಾತ್ರವಲ್ಲದೆ ಒಮ್ಮೊಮ್ಮೆ ಅವರುಗಳ ಜಾತಿ, ಧರ್ಮ, ಪಂಥದ ಸೂಚಿಗಳಾಗಿ ಸಹ ಇರುತ್ತವೆ. ಆ ಹೆಸರು ಕೇಳಿದ ತಕ್ಷಣವೇ ಅವರ ಬಗ್ಗೆ ಕೆಲ ಇತರ ಮಾಹಿತಿ ನಿಮಗೆ ದೊರೆಯುತ್ತದೆ. ನಾರಾಯಣ, ಷೇಕ್ ಮಸ್ತಾನ್, ಜೇಮ್ಸ್, ಗುರ್ವಿಂದರ್ ಸಿಂಗ್ ಹೀಗೆ. ಮತ್ತೆ ಹೆಸರಿನ ಜೊತೆಗೆ ಹರಿದು ಬರುವ ಮನೆತನದ ಹೆಸರು, ಊರ ಹೆಸರು, ವೃತ್ತಿ ಹೆಸರು ಇಂಥವು ಇನ್ನೂ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ. ಕೆಲವರಿಗೆ ಬರೀ ಅವರ ತಂದೆಯ ಹೆಸರು ಮಾತ್ರ ಜೊತೆಗೆ ಇರುತ್ತದೆ, ಪುಡಿ ಇನಿಷಿಯಲ್ ಆಗಿ ಅಡಗಿ ಅಥವಾ ಬಾಲವಾಗಿ ಹಿಂದೆ. ನಮ್ಮ ಹಿಂದಿನ ರಾಷ್ಟ್ರಪತಿಯಾದ ರಾಮಸ್ವಾಮಿ ವೆಂಕಟರಾಮನ್ ಅವರ ಹೆಸರಲ್ಲಿ ರಾಮಸ್ವಾಮಿ ಅವರ ತಂದೆಯ ಹೆಸರು. ಇತ್ತೀಚೆಗೆ ಮಿನುಗುತ್ತಿರುವ ಚಿತ್ರ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರಲ್ಲಿ ಕೊನೆಯಲ್ಲಿರುವ ಮಂದಣ್ಣ ಅವರ ತಂದೆಯ ಹೆಸರು. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಸರು ಮತ್ತು ಅಡ್ಡ ಹೆಸರುಗಳ ನಡುವೆ ತಂದೆ ಹೆಸರು ಬರುತ್ತದೆ. ಉದಾ : ಸಚಿನ್ ರಮೇಶ್ ತೆಂಡುಲ್ಕರ್.
ಪ್ರತಿ ಹೆಸರಿಗೂ ಒಂದು ಅರ್ಥ ಇರುತ್ತದೆ ಎಂದು ನಾನು ನಂಬಿದ್ದೇನೆ. ಸಾಧಾರಣವಾಗಿ ನಮ್ಮಲ್ಲಿ ದೇವರುಗಳ ಹೆಸರುಗಳನ್ನು ಮಕ್ಕಳಿಗೆ ಇಡುವುದು ವಾಡಿಕೆ, ಸ್ತೋತ್ರಗಳಲ್ಲಿ, ಸಹಸ್ರ ನಾಮಗಳಲ್ಲಿ ಬರುವ ಹೆಸರುಗಳು ಲಕ್ಷೋಪಲಕ್ಷಗಳು. ಇವುಗಳಲ್ಲಿ ಆರಿಸಿ ಇಡುವುದು ಅವರವರ ಅಭಿರುಚಿಯ ಮೇಲೆ ಅವಲಂಬಿಸಿರುತ್ತದೆ. ನಮ್ಮ ತಂದೆ ತಾಯಿಯರ ಕಾಲದಲ್ಲಿ ಈ ತರ ಹೆಸರು ಹುಡುಕುವ ಗೋಜಿಗೆ ಹೋಗುತ್ತಿದ್ದದ್ದು ಕಮ್ಮಿ. ಗಂಡು ಹುಟ್ಟಿದರೆ ಅಜ್ಜನ ಹೆಸರು, ಹೆಣ್ಣಾದರೆ ಅಜ್ಜಿಯ ಹೆಸರು ಇಟ್ಟುಬಿಡಬಹುದಿತ್ತು. ಆದರೆ ಆ ಆಲದ ಮರಕ್ಕೆ ಜೋತು ಬೀಳುವುದು ಬೇಡವೆಂದು ನಂತರದ ಪೀಳಿಗೆಯ ಜನಾಂಗ ಅಂದರೆ ಅಜ್ಜ, ಅಜ್ಜಿಯ ಹೆಸರುಗಳನ್ನು ಇಡುವುದು ಕಡ್ಡಾಯವೆಂದು ಹೇಳಿದಾಗ ನಾಮಕರಣದ ಸಮಯದಲ್ಲಿಡುವ ಐದು ಹೆಸರುಗಳಲ್ಲಿ ಒಂದಾಗಿಸಿ, ತಮಗೆ ಬೇಕಾದ ವ್ಯವಹಾರ ನಾಮವನ್ನು ಬಳಸುತ್ತಿದ್ದರು ನಿಮಗೊಂದು ಮಾಹಿತಿ ಸ್ನೇಹಿತರೇ ! ಗೋವಾದಲ್ಲಿಯ ಕ್ರೈಸ್ತ ಸಮುದಾಯದವರು ಸಹ ಹೀಗೆ ಐದು ಹೆಸರುಗಳಿಡುತ್ತಾರೆ. ಅವರ ಪೂರ್ತಿ ಹೆಸರ ದಾಖಲೆಗಳಲ್ಲಿ ನೋಡುವಾಗ ಈ ಐದೂ ಹೆಸರುಗಳು ಕಾಣಸಿಗುತ್ತವೆ.
ಆದರೂ ನಾವೆಲ್ಲ ಒಂದು ಚೌಕಟ್ಟಿನಲ್ಲೇ ಹೆಸರುಗಳನ್ನು ಇಡುತ್ತಿದ್ದೆವು. ವಿಪರೀತ ಹೆಸರುಗಳಿಗೆ ಮನೆಯಲ್ಲಿ ಆಕ್ಷೇಪವಿದ್ದಿತು. ನಮ್ಮ ಮುಂದಿನ ಪೀಳಿಗೆ ತಂದೆ ತಾಯಿಗಳಾಗುವಾಗ ಅವರಿಗೆ ಅಂತರ್ಜಾಲವೇ ಮಾಹಿತಿಯ ಮೂಲವಾಯಿತು. ಅದರ ಜೊತೆಗೆ ಅಂತರ್ಜಾಲದಲ್ಲಿ ಹೆಸರುಗಳ ಜೊತೆಗೆ ಅವುಗಳ ಅರ್ಥ ಸಹ ಸಿಗುವಂತಾಯಿತು. ಮತ್ತೆ ಈಗೀಗ ವಿಲಕ್ಷಣ ಹೆಸರುಗಳು ಇಟ್ಟಲ್ಲಿ ಮನೆಯ ಹಿರಿಯರ ಆಕ್ಷೇಪಣೆ ನಡೆಯುವುದಿಲ್ಲ. ಹಾಗಾಗಿ ಕೆಲ ವಿಪರೀತ ಹಾಗೂ ವಿಲಕ್ಷಣ ಹೆಸರುಗಳು ಕಾಣುವುದು ವಿರಳವಾಯಿತು.
ನನ್ನ ಗಮನ ಇವುಗಳತ್ತ ಹರಿದಿದ್ದು ಒಂದು ಇಪ್ಪತ್ತೈದು ವರ್ಷಗಳ ಹಿಂದೆ. ಆಗ ನಾನು ನನ್ನ ಬ್ಯಾಂಕ್ ಕೆಲಸದ ಮೇಲೆ ಆಂಧ್ರದ ನೆಲ್ಲೂರಿನಲ್ಲಿದ್ದೆ. ನಮ್ಮ ಮನೆಯ ಸುತ್ತಲೂ ಡಾಕ್ಟರುಗಳ ಕ್ಲಿನಿಕ್ ಗಳು ಮತ್ತು ಆಸ್ಪತ್ರಿಗಳು. ಅವರುಗಳಲ್ಲಿ ಒಂದು ವಿಲಕ್ಷಣ ಹೆಸರು ನನಗೆ ಕಂಡಿದ್ದು, ಅಠೇಲ್ ಅಂತ. ಅಲ್ಲಿಯವರೆಗು ವಿಠಲ ಹೆಸರು ಮಾತ್ರ ಕೇಳಿದ ನನಗೆ ಈ ಹೆಸರು ವಿಚಿತ್ರವೆನಿಸಿತು.ಆಲ್ಲಿಂದ ನಾನು ಈ ತರದ ಜರಾ ಹಟ್ಕೆ ಹೆಸರುಗಳ ಬಗ್ಗೆ ನನ್ನ ಗಮನ ಹರಿಸುತ್ತ ಹೋದೆ. ಎಲ್ಲಯಾದರೂ ಸಲಿಗೆ ಇದ್ದಲ್ಲಿ, ಆ ಹೆಸರುಗಳ ಅರ್ಥ ತಿಳಿದುಕೊಳ್ಳಲು ನೋಡುತ್ತಿದ್ದೆ. ಜಾಸ್ತಿ ಅಂಶ ಸಿಗುತ್ತಿರಲಿಲ್ಲ. ನಿಕಿತ ಎನ್ನುವ ನನ್ನ ಮಗಳ ಸ್ನೇಹಿತೆ ಇದ್ದಳು. ಯಾವುದೋ ಸಂದರ್ಭದಲ್ಲಿ ಅವರ ಮನೆಗೆ ಹೋದಾಗ ಅವರ ತಾಯಿಯನ್ನು ಅದರ ಅರ್ಥ ಕೇಳಿದೆ. ಅವರು ತೇಲುಗಣ್ಣು. ಮಗುವಿನ ಅಪ್ಪ ಕಮ್ಮ್ಯೂನಿಸ್ಟ್ ಅಂತೆ. ಅದಕ್ಕೆ ಸೋವಿಯತ್ ಒಕ್ಕೂಟದ ಹಿಂದಿನ ಅಧ್ಯಕ್ಷರು ನಿಕಿಟಾ ಕೃಶ್ಚೇವ್ ಅವರ ಹೆಸರನ್ನು ಮಗಳಿಗೆ ಇಟ್ಟಿದ್ದರು. ಗಂಡು ಹೆಸರು ಹೆಣ್ಣು ಹುಡುಗಿಗೆ ಯಾಕೆ ಇಟ್ಟದ್ದೋ ಗೊತ್ತಾಗಲಿಲ್ಲ. ಹಾಗೆ ದೇಶ ಭಕ್ತಿ ಉಕ್ಕಿ ಹರಿದು ಮಕ್ಕಳಿಗೆ ಬಾಲ ಗಂಗಾಧರ ತಿಲಕ್, ಸುಭಾಶ್ ಚಂದ್ರ ಬೋಸ್, ಗಾಂಧಿ, ನೆಹ್ರೂ ಅಂತ ಹೆಸರುಗಳು ಇಟ್ಟಿರುವವರು ನಮ್ಮ ಹಿಂದಿನ ಪೀಳಿಗೆಯಲ್ಲಿ ಸಿಕ್ಕುತ್ತಾರೆ. ತಿಲಕ್, ಬೋಸ್, ಗಾಂಧಿ ಇವುಗಳು ಅವರ ಮನೆತನದ ಹೆಸರು ಅಂತ ಇವರಿಗೆ ಅರ್ಥವಾಗುವುದಿಲ್ಲ. ಇಂಥದೇ ಮತ್ತೊಂದು ಹೆಸರು ಗವಾಸ್ಕರ್ ರೆಡ್ಡಿ. ಹುಡುಗನ ಅಪ್ಪ ಗವಾಸ್ಕರ್ ರ ಅಭಿಮಾನಿಯಂತೆ. ಅದೇ ಅವರ ಹೆಸರು ಅಂತ ತಿಳಿದು ಮಗನಿಗೆ ಇಟ್ಟಿದ್ದಾರೆ.
ವಿಲಕ್ಷಣ ಹೆಸರುಗಳು ಕಾಣಸಿಗುತ್ತಿರುವುದು ಈಗೀಗ ಮಾತ್ರ. ಬ್ಯಾಂಕಿನಲ್ಲಿದ್ದಾಗ ಒಬ್ಬರು ಬಂದು ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರುಗಳಲ್ಲಿ ಖಾತೆ ತೆಗೆಯಬೇಕೆಂದು ಫಾರಂ ತೊಗೊಂಡು ಹೋಗಿದ್ದರು. ತುಂಬಿ ತಂದು ಕೊಡುವಾಗ ಎರಡೂ ತುಂಬಾ ಅಪರಿಚಿತ ಹೆಸರುಗಳೇ. ನಿರ್ಲೇಪ ಮತ್ತು ನಿಷ್ಖಲಾ. ಹೀಗೇ ಆಸಕ್ತಿಯಿಂದ ಕೇಳಿದಾಗ ಅವರು ಅವೆರಡು ಹೆಸರುಗಳು ಲಲಿತಾ ಸಹಸ್ರ ನಾಮದಲ್ಲಿರುವ ಅಮ್ಮನವರ ಹೆಸರುಗಳು ಎಂದು ಹೇಳುವಾಗ ನನಗೆ ನಾಚಿಕೆ ಯಾಗಿತ್ತು. ಆದರೇ ನಮಗಿರುವ ಮೂವತ್ತು ಮೂರು ಕೋಟಿ ದೇವರ ಹೆಸರುಗಳು ಅದರಲ್ಲಿ ಕೆಲವರಿಗಿರುವ ಸಹಸ್ರ ನಾಮಗಳ ಗುಂಪಿನಲ್ಲಿ ನಮಗೆ ಪ್ರಚಲಿತವಿರುವ ಹೆಸರುಗಳು ಗೊತ್ತಿರಬಹುದೇ ವಿನಃ ಇಂಥ ವಿಲಕ್ಷಣ ಹೆಸರುಗಳ ಪರಿಚಯವಿರುವುದಿಲ್ಲ. ಆದರೇ ಇತ್ತೀಚೆಗೆ ಯಾವುದಾದರೂ ಹೊಸ ಹೆಸರೆನಿಸಿ ನೀವು ಅಂತರ್ಜಾಲಕ್ಕೆ ಕೈ ಹಾಕಿದರೆ, ಆ ಹೆಸರ ಎದುರುಗಡೆ ಅಮ್ಮನವರ ಹೆಸರು ಎಂದಿರುತ್ತದೆ. ಮತ್ತೆ ಮಾತಾಡುವ ಹಾಗಿಲ್ಲ. ಹೀಗೆ ಈಗೀಗ ತುಂಬಾ ಕೇಳಿ ಬರುವ ಹೆಸರು ಅನಿಕಾ.
ಆಂಧ್ರದ ಕರಾವಳಿ ನಾಡಿನಲ್ಲಿ ಉದ್ದುದ್ದ ಹೆಸರುಗಳಿಡುವ ಪದ್ಧತಿ ಇದೆ. ಅವರಿಗೆ ತಿರುಪತಿಯ ತಿಮ್ಮಪ್ಪನ ಹೆಸರು ಮತ್ತು ಅನ್ನವರಂನ ಸತ್ಯನಾರಾಯಣನ ಹೆಸರು ಬರಲೇ ಬೇಕು. ಹಾಗಾಗಿ ಇವೆರಡೂ ಸೇರಿಸುವುದರ ಜೊತೆಗೆ ಅಜ್ಜನದೋ ಅಜ್ಜಿಯದೋ ಹೆಸರೂ ಸೇರಿಸಿ ಮತ್ತ್ಯಾವ ಮನೆ ದೇವರ ಹೆಸರನ್ನೂ ಜೋಡಿಸಿ ವ್ಯವಹಾರ ನಾಮಕ್ಕೆ ಬರುವಾಗ ಉದ್ದದ ಹೆಸರಾಗಿರುತ್ತದೆ. ಸ್ಯಾಂಪಲ್ ಗೆ ಒಂದು ಹೆಸರು, ಮೋಹನ ವೆಂಕಟ ರಾಮಲಿಂಗ ಅನಂತ ವರಪ್ರಸಾದ ಶಿವಶಂಕರ ಮಲ್ಲಿಕಾರ್ಜುನ ಶರ್ಮ. ನೀರು ಕುಡಿಯಬೇಕಾಯಿತಲ್ಲವೇ ? ಮತ್ತೊಂದು ವಿಲಕ್ಷಣ ಹೆಸರು ಲಕ್ಷ್ಮಿಗೌರಿ ರಾಧ. ಇದು ಒಬ್ಬರದೇ ಹೆಸರು ಸ್ನೇಹಿತರೇ !
ಉತ್ತರಾದಿಯವರ ಹೆಸರುಗಳಿಗೂ ನಮಗೂ ವ್ಯತ್ಯಾಸ ಕಾಣುತ್ತದೆ. ಪಾಯಲ್, ನೂಪುರ್, ಮುಸ್ಕಾನ್, ಸಿಮ್ರನ್,ನಮನ್ ಎಂಬ ಹೆಸರುಗಳು ನಮ್ಮ ಕಡೆ ಹೊಂದುವುದಿಲ್ಲ. ನಮ್ಮ ಹುಡುಗರು ಸಹ ಅವರ ಸ್ನೇಹದ ಪ್ರಭಾವದಿಂದ ಮಕ್ಕಳಿಗೆ ಅವೇ ಹೆಸರುಗಳು ಇಡಬಹುದೇ ವಿನಾ ಅವುಗಳ ಸಮಾಂತರ ಕನ್ನಡ ಹೆಸರು ಇಡಲು ಆಗುವುದಿಲ್ಲ. ಮಗಳಿಗೆ ಮಂದಹಾಸ, ಗೆಜ್ಜೆ ಎಂಬ ಹೆಸರುಗಳು ಹೊಂದುತ್ತವಾ ಹೇಳಿ ?
ಕೆಲ ತಂದೆ ತಾಯಿಗಳಿಗೆ ತಮ್ಮ ಹೆಸರುಗಳಲ್ಲಿಯ ಕೆಲ ಅಕ್ಷರಗಳನ್ನು ಜೋಡಿಸಿ ತಮ್ಮ ಮಕ್ಕಳಿಗೆ ಇಡುವ ಹುರುಪು ಕಾಣುತ್ತದೆ. ಸುಕೇಶ ಅಂತ ಒಂದು ಹೆಸರು. ತಾಯಿ ಸುನಯನ ತಂದೆ ಕೇಶವ. ಎರಡೂ ಸೇರಿಸಿ ಮಗನಿಗೆ ಹೆಸರು. ಹೇಗಿದೆ ? ಅಥವಾ ಇಬ್ಬರು ದೇವರುಗಳ ಹೆಸರುಗಳಿಂದ ಅರ್ಧವನ್ನು ಜೋಡಿಸಿ ಇಡುವುದು ಸಹ. ಕ್ರಿಶಿವ್ ಇಂಥದ್ದೊಂದು ಹೆಸರು. ಕೃಷ್ಣ ಮತ್ತು ಶಿವ ಇದರಲ್ಲಿ ಅಡಗಿವೆ.
ಮತ್ತೆ ಕೆಲವರದು ಪ್ರಾಸಬದ್ಧವಾದ ಹೆಸರಿಡುವುದು ಮಕ್ಕಳಿಗೆ. ತುಂಬಾ ಹಳೆಯ ಇಂಥ ಹೆಸರುಗಳು ನಿಮಗೆ ಗೊತ್ತೇ ಇರುತ್ತವೆ. ಅನಿಲ್, ಸುನಿಲ್. ಅನಿತ, ಸುನಿತ, ಕವಿತ, ಸವಿತ, ಷಾಹೀನ್ ಪರ್ವೀನ್ ಮುಂತಾದವು. ಮೊದಲಿನ ಅಕ್ಷರಕ್ಕೋ ಕೊನೆಯ ಅಕ್ಷರಕ್ಕೋ ಹೊಂದಿಸಿ ಹೆಸರುಗಳನ್ನು ಇಡುವುದು. ಕೇಳಲಿಕ್ಕೆ ಕಿವಿಗೆ ಇಂಪು. ಆದರೆ ಇದರಲ್ಲಿ ಬಲಿಯಾಗುವುದು ಎರಡನೆಯವರಾಗಿ ಹುಟ್ಟಿದವರು. ಅವರ ಹೆಸರುಗಳನ್ನು ಒಮ್ಮೊಮ್ಮೆ ಪ್ರಾಸಕ್ಕೆಂದೇ ಬಲಿ ಮಾಡುತ್ತಾರೆ. ಕೃಷ್ಣ ಅಂತ ಮೊದಲಿನವನಿಗೆ ಇಟ್ಟು, ಎರಡನೆಯವನಿಗೆ ಅದಕ್ಕೆ ಪ್ರಾಸ ಹೊಂದುವ ಹೆಸರು ಇಷ್ಣ ಅಂತೆ. ಪುಣ್ಯ ಉಷ್ಣ ಅಂತ ಇಡಲಿಲ್ಲವಲ್ಲ ಅಂತ ಸಮಾಧಾನ. ಹೀಗೇ ಸುಧೀರನ ತಮ್ಮ ವಿಧೀರ್. ನನ್ನ ಸ್ನೇಹಿತನೊಬ್ಬ ತಮಾಷೆ ಮಾಡುತ್ತಿದ್ದ. ’ ಅವರ ಮನೆಯಲ್ಲಿ ಮಕ್ಕಳ ಹೆಸರು ಸರಿತಾ, ಹರಿತಾ ಅಂತ ಕಣಮ್ಮಾ ! ಸರಿತಾ ಸರಿತಾ ಇರ್ತಾಳೆ, ಹರಿತಾ ಹರಿತಾ ಇರುತ್ತಾಳೆ ’ ಅಂತ.
ಹೀಗೆ ತಮ್ಮ ಅವಳಿ ಮಕ್ಕಳಿಗೆ ಜೋಡಿ ಹೆಸರುಗಳನ್ನು ಇಟ್ಟ ಪಶ್ಚಿಮ ದೇಶದ ದಂಪತಿಗಳ ಜೋಕ್ ನೆನಪಾಗುತ್ತದೆ. ಅವರಿಗೆ ಮೊದಲನೆಯ ಸಲ ಅವಳಿ ಮಕ್ಕಳು ಹುಟ್ಟಿದರು. ಪೀಟರ್, ರಿಪೀಟರ್ ಅಂತ ಹೆಸರಿಟ್ಟರು. ಮತ್ತೆ ಅವಳಿಗಳಾದವು. ಕೇಟ್ ಡೂಪ್ಲಿಕೇಟ್ ಅಂತ ಹೆಸರಿಟ್ಟರು. ಮತ್ತೆ ಅವಳಿ ಹುಟ್ಟುವಾಗ ಸುಸ್ತಾಗಿ ಮೋರ್, ನೋಮೋರ್ ಅಂತ ಹೆಸರಿಟ್ಟರಂತೆ. ಹೀಗೆ ನನಗೆ ವಿಚಿತ್ರವಾಗಿ ಕಂಡ ಹೆಸರುಗಳು ಹೇಳುತ್ತೇನೆ. ಮುಂಚಿತವಾಗಿ ಅವಳಿಗಳ ಹೆಸರುಗಳು ನೋಡೋಣ. ದೇವಾಂಶ್, ದೀಪ್ತಾಂಶ್, ನಕ್ಷ್, ಸುತಿಕ್ಷ್, ಆದ್ವಿಕ್, ಆಶ್ವಿಕ್, ಹಿನಿಶ್ಕ, ನವಿಷ್ಕ. ಇನ್ನು ಒಂಟಿ ಹೆಸರುಗಳು, ಇಷ್ಟಿತ, ಇಷ್ಟಾಂತ್, ಅದ್ವಿಕ, ವಿಶ್ವನಿ, ಶಾನ್ವಿಕ, ಕಿಂಚಿತ್, ಪ್ರೇಕ್ಷ, ರೇಯಾಂಶ್, ಗಿತೀಶ್, ಅರ್ವಿನ್, ಪುಬಲಿ, ಶ್ವೇಕ್ಷ, ವಿಮೃದ್ಧ್, ಧಿತ್ಯ, ಕೃತ್ವಿಕ್, ಪ್ರಣವ್ಯ, ಅದಿತ್ರಿ, ಅಂಕಿನೀಶ್, ಯುಗ್, ಯುಗಾಂತ್, ಮವ್ಯಶ್ರೀ. ಈ ಪಟ್ಟಿ ಬೆಳೆಯುತ್ತಲೇ ಇದೆ ಅಂದರೆ ಸೋಜಿಗವಲ್ಲ.
ಇನ್ನೊಂದು ಹೊಸ ಧೋರಣೆ ಕಾಣುತ್ತಿದೆ. ನಾವು ದೇವರಾಗಿಸಿಕೊಂಡ ಸಿನಿಮಾ ಮತ್ತು ಕ್ರಿಕೆಟ್ ನ ಸೆಲೆಬ್ರಿಟಿಗಳು ಗ್ರೀಕ್ ರೋಮನ್ ಅರಬಿಕ್ ಭಾಷೆಗಳ ಹೆಸರುಗಳನ್ನು ಇಟ್ಟದ್ದು ನೋಡಿ ನಮ್ಮ ಯುವ ಜನಾಂಗ ಸಹ ಅನುಕರಿಸುತ್ತ ತಮ್ಮ ಮಕ್ಕಳಿಗೆ ಈ ಹೆಸರುಗಳನ್ನು ಇಡುವುದು ರೂಢಿ ಮಾಡಿಕೊಂಡಿದ್ದಾರೆ. ಉದಾ: ಹ್ರೆಹಾನ್, ಹ್ರಿಡಾನ್, ನೈಸಾ. ಉಚ್ಚಾರಕ್ಕೇ ಕಷ್ಟ ಪಡಬೇಕು ನಾವು.
ಹೀಗೆ ಹೆಸರಾಯಣ ಅಂದರೆ ಹೆಸರುಗಳ ಪುರಾಣ ಹೇಳ್ತಾ ಹೋದರೆ ತುಂಬಾ ಉದ್ದವಾಗುತ್ತದೆ. ಅದಕ್ಕೆ ಕೊನೆಯಲ್ಲಿ ಒಂದು ನಗಹನಿ ಹೇಳಿ ಮುಕ್ತಾಯಗೊಳಿಸುತ್ತೇನೆ. ಒಬ್ಬ ತನ್ನ ಸ್ನೇಹಿತನಿಗೆ ಆಗಷ್ಟೇ ಹುಟ್ಟಿದ ತನ್ನ ಹೆಣ್ಣು ಕೂಸನ್ನು ತೋರಿಸುತ್ತ “ ನಮಗೀಗಲೇ ಮಕ್ಕಳು ಬೇಡವಾಗಿತ್ತು. ಆದರೇ ಆ ದಿನ ಅನಾಹುತವಾಯಿತು. ಇವಳು ಹುಟ್ಟಿದ್ದಾಳೆ. ಇವಳಿಗೊಂದು ಹೆಸರು ಹುಡುಕಬೇಕು “ ಎಂದನಂತೆ. ಸ್ನೇಹಿತ ತಟ್ಟನೆ ಹೇಳಿದ. “ ಅನಿರೀಕ್ಷಿತ ಎಂದು ಇಟ್ಟುಬಿಡಿ. ಸರಿಯಾಗುತ್ತೆ, . ಅನಪೇಕ್ಷಿತ ಸಹ ಆಗಬಹುದು “ ಎಂದನಂತೆ. ಹೇಗಿದೆ ಸ್ನೇಹಿತರೇ ! ಮತ್ತೆ ಭೇಟಿಯಾಗೋಣ. ನಿಮ್ಮ ಗಮನಕ್ಕೆ ಇವುಗಳಂಥ ಹೊಸ ಹೊಸ ಹೆಸರುಗಳು ಬಂದರೆ ನನಗೆ ತಿಳಿಸಿ. ಪಟ್ಟಿ ಮಾಡಿಕೊಂಡು ಮುಂದೆ ಯಾವುದಾದರು ಲೇಖನಕ್ಕೆ ಉಪಯೋಗವಾಗಬಹುದು. ನಮಸ್ಕಾರ.
***
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ