ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ನನ್ನ ಮಕ್ಕಳನ್ನು ವಾಪಸ್ ಕೊಡಿ ಪ್ಲೀಸ್..

ಒಂದು ಜ್ವಲಂತ ಘಟನೆಯ ಬಗ್ಗೆ....!
ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಎಲ್ಲ ನೊರ್ಡಿಕ್ ದೇಶಗಳಂತೆಯೆ ಸ್ವೀಡನ್ ಕೂಡ ಮಾನವ ವಿಕಾಸ ಸೂಚ್ಯಂಕ (Human Development Index) ನಲ್ಲಿ ಮಂಚೂಣಿಯಲ್ಲಿರುವ ರಾಷ್ಟ್ರ. ಇಲ್ಲಿ ಎಲ್ಲವೂ ಕ್ರಮಬದ್ಧ. ಉದಾಹರಣೆಗೆ, ಕುರ್ಚಿಗೆ ಚಕ್ರ ಕಟ್ಟಿ ಹೊರಟರೆ, ಪಾದಚಾರಿಗಳಿಗೆ ಇರುವ ನಯಾಸ ರಸ್ತೆ ಸಹ ತಗ್ಗಿ, ಬಗ್ಗಿ ಸುಲಲಿತವಾಗಿ ನಿಮ್ಮನ್ನು ಎಲ್ಲಿಯೂ ಇಳಿಸದೇ, ಸೀದಾ ಮನೆಯ ಬೆಡ್ ರೂಮ್ ಒಳಕ್ಕೆ ಸರಾಗವಾಗಿ ಕೊಂಡೊಯ್ಯುವಷ್ಟು ಪಕ್ವವಾದ ವ್ಯವಸ್ಥೆ.. ಜನ ಕೂಡ ಇತರ ಯುರೋಪಿಯನ್ನರಿಗಿಂತ ಮೃದು ಭಾಷಿಗಳು..

ಆದರೆ,ಮಕ್ಕಳ ಹಕ್ಕು ಅನ್ನುವ ವಿಷಯಕ್ಕೆ ಬಂದರೆ ಮಾತ್ರ ಕಷ್ಟ..

ಅಪ್ಪಿ ತಪ್ಪಿಯೂ ನಿಮ್ಮ ಮಗು ಶಾಲೆಯಲ್ಲಿ ‘ಅಪ್ಪ ಅಮ್ಮ ತನ್ನನ್ನು ಗದರಿಸುತ್ತಾರೆ, ಹೊಡೆಯುತ್ತಾರೆ’ ಅಂತ ಅಂದ್ರೆ ಸಾಕು, ಅವತ್ತಿಂದ ನೀವು ಅಲ್ಲಿನ ಮಂಡಳದ ಸರಕಾರೀ ಸಂಸ್ಥೆಯ ಹದ್ದಿನ ಕಣ್ಣಿಗೆ ಗುರಿಯಾಗುತ್ತೀರಿ.. ಇಲ್ಲಿ, ಮಕ್ಕಳನ್ನು ಹೊಡೆಯುವದು ಹಾಗೂ ಜೋರಾಗಿ ಬೈದು ಹಿಂಸಿಸುವುದು ಅಪರಾಧ ಹಾಗೂ ಗಂಭೀರದ ವಿಷಯ.. ಇದನ್ನು ಪ್ರಸ್ತಾಪಿಸಿದ್ದಕ್ಕೆ ಕಾರಣವಿದೆ.. ಈ ಬರಹ ಬರೆಯುವ ಹೊತ್ತಿಗೆ, ಒಬ್ಬ ಭಾರತೀಯ ಕುಟುಂಬದ ಇಬ್ಬರು ಮಕ್ಕಳನ್ನು ಸ್ವೀಡನ್ ನ ಮಾಲ್ಮೊ ಎಂಬಲ್ಲಿ, ಸ್ಥಳೀಯ ಆಡಳಿತ ತಮ್ಮ ವಶಕ್ಕೆ ತೆಗೆದುಕೊಂಡಿದೆ.. ಮಕ್ಕಳ ಬಗ್ಗೆ ಅವರು ತೋರುವ ಕಾಳಜಿ, ಸುರಕ್ಷೆಗೆ ಎರಡು ಮಾತಿಲ್ಲ ಅನ್ನುವದು ಬೇರೆ ವಿಷಯ.. ಹುಟ್ಟಿಸಿದ ಅಪ್ಪ,ಅಮ್ಮನೇ ಆದರೇನು.. ಬೆಳೆಯುವ ಮಗುವಿಗೆ ಅದರದೇ ಆದ ವೈಯಕ್ತಿಕ, ಸ್ವತಂತ್ರತೆ ಇದೆ..ಅವರ ಮುಗ್ಧತೆಯನ್ನು ದುರುಪಯೋಗಿಸಲಾಗದು ಎನ್ನುವುದು ಅವರ ನಿಲುಮೆ..

ಅಂದ ಹಾಗೆ ಈ ಭಾರತೀಯನ ಎರಡು ಹೆಣ್ಣು ಮಕ್ಕಳನ್ನು ಮನೆಯಿಂದ ಕೊಂಡೊಯ್ದು ೪ ವಾರಗಳಷ್ಟು ಕಾಲ ಇಡಲಾಗುವುದಂತೆ..ಮುಂದೆ ಏನು.. ತನ್ನ ಮಕ್ಕಳನ್ನು ಹೇಗೆ ವಾಪಸ್ ಪಡೆಯಲಿ ಎಂದು ತಂದೆ ಫೇಸ್ ಬುಕ್ ನಲ್ಲಿ ಸಲಹೆ ಕೇಳುತ್ತಿದ್ದಾನೆ..ಭಾರತದಲ್ಲಿ ಮಕ್ಕಳನ್ನು ಹೊಡೆಯುವದು, ಜೋರಾಗಿ ಗದರಿಸುವುದು ಸರ್ವೇ ಸಾಮಾನ್ಯ ವಾದ್ದರಿಂದ, ಕೆಲವು ಭಾರತೀಯರು ಇದ್ದರೂ ಇರಬಹುದೇನೋ ಅಂತ ಕಮೆಂಟು ಹಾಕಿದ್ರೆ ಹಲವರು, ಸಹಾನೂಭೂತಿಯನ್ನೂ ವ್ಯಕ್ತ ಪಡಿಸುತ್ತಿದ್ದಾರೆ..

ಅಂದ ಹಾಗೆ,ಈ ತರದ ಮಕ್ಕಳ ಮೇಲಿನ ದೌರ್ಜನ್ಯವನ್ನು ಅಪರಾಧ ಎಂದು ಭಾರತದಲ್ಲಿ ಗಂಭೀರವಾಗಿ ಪರಿಗಣಿಸಿದರೆ, ಗಲ್ಲಿಗೊಂದು ಕೇಸ್ ಗಳು ಸಿಗಬಹುದು.. ನನಗೋ, ಶಾಲೆಗಳಲ್ಲಿ ಅದರಲ್ಲೂ ಸರಕಾರೀ ಶಾಲೆಗಳಲ್ಲಿ ಮುಗ್ಧ ಮಕ್ಕಳ ಮೇಲೆ, ಬಲ ಪ್ರಯೋಗ ಮಾಡುವ ಶಿಕ್ಷಕರ ನೆನಪಾಯ್ತು.. ಆರಿಸಿ,ಆರಿಸಿ ಬೆತ್ತವನ್ನು ತಯಾರಿಸಿ ಇಟ್ಟುಕೊಂಡಿರುತ್ತಿದ್ದರು. ಅಸಹಾಯಕ ಮಕ್ಕಳು ಕೈಯ್ಯೊಡ್ಡಿ ನೋವು ನುಂಗಿ ಅಳುವ ಮುಖಗಳು ಇಂದಿಗೂ ನೆನಪಿವೆ.. ಹಳ್ಳಿಯ ಮಕ್ಕಳಂತೂ ಅರೆಹೊಟ್ಟೆಯಲ್ಲಿ ಬಂದು ಹೊಡೆತ ತಿನ್ನುವುದು ನೆನೆಸಿದ್ರೆ ಈಗಲೂ ಕರುಳು ಚುರ್ರ್ ಅನ್ನುತ್ತದೆ. ಹೊಡೆಸಿಕೊಂಡವರೆಲ್ಲಾ ಜಾಣರಾಗುತ್ತಾರಾ, ಒಳ್ಳೆಯ ಪ್ರಜೆಗಳಾಗುತ್ತಾರಾ, ಆತ್ಮ ವಿಶ್ವಾಸ ಬೆಳೆಸಿಕೊಳ್ಳುತ್ತಾರಾ, ಅಹಿಂಸೆಯ ಪ್ರತಿಪಾದಕರಾಗುತ್ತಾರಾ,ಸೃ ಜನಶೀಲರಾಗುತ್ತಾರಾ ಎಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದು.. ಆದರೆ ಒಂದು ವಿಷಯ ಮಾತ್ರ ಸತ್ಯ, ಮಕ್ಕಳು ಕುಂಬಾರನ ಮಣ್ಣಿನಂತೆ.. ನಾವು ಸೂಚಿಸಿದಂತೆ,ಫರ್ಮಾನು ಹೊರಡಿಸಿದಂತೆ ಅವರು ರೂಪುಗೊಳ್ಳುವರು ಅಂತ ಅಲ್ಲವೇ ಅಲ್ಲ …ಆದರೆ ನಾವು ಇದ್ದ ಹಾಗೆ,ಆಡುವ ಹಾಗೆ, ನುಡಿವ ಹಾಗೆ ಅನುಕ್ರಮಿಸಿ ನೋಡಿ ಕಲಿವವರು, ಬೆಳೆವವರು, ವ್ಯಕ್ತಿತ್ವವನ್ನು ಸುತ್ತಮುತ್ತಲಿನ ಪ್ರಾಕ್ಟಿಕಲ್ ಜಗತ್ತಿಂದಲೇ ರೂಪಿಸಿಕೊಳ್ಳುವರು..ನಾವು ಇತರರನ್ನು ನಡೆಸಿಕೊಂಡದ್ದನ್ನೇ ಗಮನಿಸಿ ಕಲಿವವರು.. ಹೀಗೆ ಹೊಡೆತ ಬಡಿತಗಳಿಲ್ಲದೇ ನಮಗೆ ಬೇಕಾದ ಹಾಗೆ ಖಂಡಿತವಾಗಿ ರೂಪಿಸಬಹುದು..ಒಂದು ಪ್ರಯೋಗ ಮಾಡಿ ನೋಡಿ,ನೀವು ಪ್ರಭುದ್ಧರ ಜತೆಯ ಹಾಗೆ ನಿಮ್ಮ ಮಗುವಿನ ಜತೆಗೂ ವ್ಯವಹರಿಸಿ, ಗೌರವ ಕೊಡಿ.. ಅರ್ಥವಾಗಲಿ ಬಿಡಲಿ ದೊಡ್ಡವರಂತೆಯೆ ಗಂಭೀರವಾಗಿ ಮಾತನಾಡಿ.. ಕೆಲವು ದಿನಗಳಲ್ಲಿ ಅವರಲ್ಲಿ ಕಂಡುಬರುವ ವಿಶ್ವಾಸ,ಪ್ರಭುದ್ದತೆಗಳಿಗೆ ನೀವೇ ಬೆರಗಾಗುವಿರಿ..

ಇದನ್ನು ಬರೆಯುವ ಹೊತ್ತಿಗೆ, ಆ ಭಾರತೀಯನ ಮಕ್ಕಳು ಇನ್ನೂ ವಾಪಸ್ ಆಗಿಲ್ಲ.. ತಂದೆ ಮಾತ್ರ, ತನ್ನ ಮಕ್ಕಳನ್ನು ವಾಪಸ್ ಪಡೆಯುವದು ಹೇಗೆ ಎಂಬ ಬಗ್ಗೆ ಬಲ್ಲವರಲ್ಲಿ ವಿಚಾರಿಸುತ್ತಿದ್ದಾರೆ. ಅವರ ಚಡಪಡಿಕೆ, ಬೇಗೆಗಳು ಮಕ್ಕಳಿದ್ದವರಿಗೆ ಖಂಡಿತ ಅರ್ಥವಾಗುತ್ತೆ… ಆದಷ್ಟು ಬೇಗ, ಆ ಇಬ್ಬರು ಮಕ್ಕಳು ತಮ್ಮ ತಂದೆ ತಾಯಿಗಳ ಜೊತೆ ಕೂಡಲಿ ಎಂದು ಆಶಿಸುತ್ತಾ ಮುಂದೆ ಏನಾಯ್ತು, ಏನ್ ವಿಷ್ಯ ಅನ್ನುವ ಬಗ್ಗೆ ಮಾಹಿತಿ ಅಪಡೇಟ್ ನೀಡುತ್ತೇನೆ… ಎಷ್ಟೇ ಆದರೂ ಮಕ್ಕಳಿಗೆ ತಂದೆ ತಾಯಿಗಳೇ ಮುದ್ದು ಕೂಡ..!