ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಪತಿ ಭಂಗಿ ಅವರ ಹೊಸ ಕಥಾ ಸಂಕಲನ 'ಕೆಂಪರೋಡ್ ' ಬಗ್ಗೆ.
ವಿಜಯ್ ದಾರಿಹೋಕ
ಇತ್ತೀಚಿನ ಬರಹಗಳು: ವಿಜಯ್ ದಾರಿಹೋಕ (ಎಲ್ಲವನ್ನು ಓದಿ)

ಜೀವ, ಭಾವದ ಎಲ್ಲಾ ಧಾತುಗಳನ್ನು ಬಡಿದೆಚ್ಚರಿಸುವ ಮೊನಚು ಬಿಸಿಲು, ಆದರೆ ಕತ್ತಲಾಗುತ್ತಿದ್ದಂತೆ ರಮಿಸುವ ತಂಗಾಳಿ, ಕಪ್ಪು ಹೊಲಗಳ ವೈಶಾಲ್ಯತೆ, ಹುಣಸೆ ಮರಗಳ ಪಕ್ವತೆ,ಜೊತೆಗೆ ಅಲ್ಲಲ್ಲಿ ಕಾಣುವ ತುಂಟ ಕುರುಚಲು ಗಿಡ ಗಂಟಿಗಳು, ಕತೆ ಹೇಳುವ ಕಲ್ಲು ಬಂಡೆಗಳೂ, ಖಡಕ್ ರೊಟ್ಟಿಯ ಗಟ್ಟಿತನ, ಬನಶಂಕರಿಯ ಮೊಸರಿನ ಮೃದುತ್ವವೂ ಜೊತೆಗೆ ಸ್ಪಷ್ಟವಾಗಿ,ಹರಿತವಾಗಿ ಬಾಳುವ ವ್ಯಕ್ತಿಗಳೂ, ವಿಚಾರಗಳೂ ಇಲ್ಲಿನ ಮಣ್ಣಿನ ವಿಶೇಷ . ಹೌದು ನಾನು ಹೇಳಿದ್ದು ಬಾಗಲಕೋಟೆ ಎಂಬ ವಿಶಿಷ್ಟ ನೆಲದ ಬಗ್ಗೆ. ಇಂತಹ, ನಾನು ಬಲ್ಲ, ಮೆಚ್ಚಿದ ,ಪ್ರಖರ ಬಾಗಲಕೋಟೆಯಿಂದ ಒಂದು ಸಂಭ್ರಮದ ಸುದ್ದಿ ಸಿಕ್ಕಿದೆ. ನಾನು ತುಂಬಾ ಗೌರವಿಸುವ ಕಥೆಗಾರ ಲೇಖಕ ತಿರುಪತಿ ಭಂಗಿ ಅವರ ಕೆಂಪ ರೋಡ್ ಎಂಬ ಹೊಚ್ಚಹೊಸ ಕಥಾ ಸಂಕಲನ ಇದೀಗ ಬಿಡುಗಡೆಯಾದದ್ದು.
ನಾನು ಓದಿದ ತಿರುಪತಿ ಅವರ ಮೊದಲ ಕತೆ ದಿಕ್ಕೇಡಿ.
“……ಭರಮ್ಯಾ ಆ ರಾತ್ರಿ ಎಂದೂ ಮುಗಿಲು ನೋಡಿಯೇ ಇಲ್ಲ, ಅನ್ನುವ ರೀತಿಯಲ್ಲಿ ನೋಡುತ್ತಲಿದ್ದ. ಮುಗಿಲ ತುಂಬ ಚುಕ್ಕಿಗಳು ಕಿಕ್ಕಿರಿದು ಪಳಗುಟ್ಟುತ್ತಿದ್ದವು. ಇವೆಲ್ಲ ಸತ್ತವರ ಕಣ್ಣುಗಳು..! ಇದರಲ್ಲಿ ನಮ್ಮವ್ವನ ಕಣ್ಣುಗಳಾವು? ನಮ್ಮ ಅಪ್ಪನ ಕಣ್ಣುಗಳಾವು? …..”
ಭರಮ್ಯಾ ಎಂಬ ಪಾತ್ರ, ಅದಕ್ಕೆ ತಕ್ಕಂತೆ ಗ್ರಾಮ್ಯತೆಯ ಸೊಗಸು, ಕಲಾತ್ಮಕ ನಿರೂಪಣಾ ಶೈಲಿಯ ಜತೆಗೆ ಎಲ್ಲಿಯೂ ಹಿಡಿತ ತಪ್ಪದೆ, ಭೇಷ್ ಅನ್ನುವಂತೆ ಬರೆದಿದ್ದರು ತಿರುಪತಿಯವರು. ಒಂದೇ ಉಸಿರಿಗೆ ಓದಿದ್ದ ನನಗೆ ಅಂದಿನಿಂದ ತಿರುಪತಿ ಅವರ ಬಗ್ಗೆ ಅಭಿಮಾನ, ಕೂತೂಹಲ,ಭರವಸೆಗಳು ಮೂಡಿದ್ದವು.
ತಿರುಪತಿ ಅವರ ಕಥಾ ಹಂದರ ಒಂದಕ್ಕಿಂತ ಇನ್ನೊಂದು ಭಿನ್ನ.. ಪ್ರತಿಯೊಂದು ಕತೆಯಲ್ಲೂ, ತೀರಾ ಹಿಗ್ಗಿಸದ, ಅತಿಯಾಗಿ ಕುಗ್ಗಿಸದ ಹಿತವಾಗಿ ಪೀಠಿಕೆ ಹಾಕುವ ಕೌಶಲ್ಯ ಇವರಿಗಿದೆ. ಕಥೆಯ ಓತಪ್ರೋತಗಳಿಗೆ ಬ್ರೇಕ್ ಹಾಕದ ಹಾಗೆ ಅಲ್ಲಲ್ಲಿ ರೂಪಕ ಬಳಸುವ ಕಲೆ ಇವರಿಗೆ ಗೊತ್ತು.. ಕತೆಯಲ್ಲಿ ಏನನ್ನು ಬಿಂಬಿಸಬೇಕಿದೆ ಅನ್ನುವದನ್ನು ಸ್ಪಷ್ಟವಾಗಿಟ್ಟು,ಹದವಾಗಿ ಕೊನೆಯವರೆಗೂ ಹತೋಟಿಯಲ್ಲಿಟ್ಟೇ ಬರೆಯುವದು ಇವರಿಗೆ ಒಲಿದ ಕಲೆ.
ಆಕಾಶದ ಚುಕ್ಕಿಗಳಲ್ಲಿ ತನ್ನವರ ಕಣ್ಣು ಹುಡುಕುವ ಭರಮ್ಯಾ ಪಾತ್ರ ನನ್ನ ಫ಼ೇವರಿಟ್ ಪಾತ್ರಗಳಲ್ಲಿ ಒಂದು..
ಹಾಗೆಯೇ, ಕೆಂಪ ರೋಡ್ ಅನ್ನುವ ಊರಿನ ಒಂದು ಕಚ್ಚಾ ರಸ್ತೆಯ ಸುತ್ತ ಕಟ್ಟಿದ ಕಥೆ ಹಲವು ಆಯಾಮಗಳಲ್ಲಿ ವ್ಯಾಪಿಸುವ, ವಾಸ್ತವಿಕ ವಿಚಾರಗಳನ್ನು ಕೆದಕುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತದೆ.
ಅಂದ ಹಾಗೆ,ಇವರು Stereotype ಆಗದಂತ ಕಥೆಯನ್ನು ಹೆಣೆಯುತ್ತಾರೆ ಅಂಬುದಕ್ಕೆ ‘ಇಜ್ಜೋಡು ‘ ಅನ್ನುವ ಕತೆಯ ವಸ್ತುವನ್ನು ನೀವು ಗಮನಿಸಬೇಕಾಗುತ್ತೆ. ಪ್ರತಿ ಕಥಾವಸ್ತುಗಳ ವಿಭಿನ್ನತೆ, ಪಾತ್ರಗಳ ಆಯ್ಕೆ ಇವರ ಸಾಮರ್ಥ್ಯ ಕೂಡ..
ತಿರುಪತಿ ಅವರ ಕಥೆಗಳ ಇನ್ನೊಂದು ವೈಶಿಷ್ಟ್ಯ ಪಾತ್ರಗಳ ಸಂಭಾಷಣೆ.. ಬಾಗಲಕೋಟೆಯ ಬಿಗುಮಾನವಿಲ್ಲದ ಭಾಷೆ, ಕಥೆಯ ಪಾತ್ರಗಳನ್ನು ಗಟ್ಟಿಗೊಳಿಸುತ್ತಾ ಹೋಗುತ್ತದೆ…
ತಿರುಪತಿ ಅವರ ಕಥೆಗಾಗಿ ಬಕಪಕ್ಷಿಯಂತೆ ಕಾಯುವ ಅನೇಕ ಓದುಗರಲ್ಲಿ ನಾನು ಒಬ್ಬ. ಪುಸ್ತಕ ಹೊರತಂದ
ಅನ್ಶುಕ್ ಪ್ರಕಾಶನ ಅವರಿಗೆ ಧನ್ಯವಾದಗಳು.
ಈ ವಾಟ್ಸಾಪ್ ನಂಬರ್ (+91-6363115463) ಗೆ ಮೆಸ್ಸೇಜ್ ಮಾಡಿ “ಕೆಂಪ ರೋಡ್” ಎಂಬ ಕನ್ನಡದ ಹೊಚ್ಚ ಹೊಸ ಕಥಾ ಪುಸ್ತಕವನ್ನು ಪಡೆದು, ಓದಿ ಆನಂದಿಸಿ.
ತಿರುಪತಿ ಭಂಗಿಯವರ ಒಳಗಿನ ಕತೆಗಾರ ಹೀಗೆಯೇ ಪ್ರಯೋಗಾತ್ಮಕ, ವಿಶಿಷ್ಟ ಕತೆಗಳನ್ನು ಕನ್ನಡ ಓದುಗರಿಗೆ ಅನವರತ ನೀಡುತ್ತಿರಲಿ ಎಂಬ ಹಾರೈಕೆಗಳೊಂದಿಗೆ ಪುಸ್ತಕ ಬರೆದವರಿಗೂ, ಓದುವವರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹ್ಯಾಪಿ ಕೆಂಪ ರೋಡ್ ಜರ್ನಿ…!

ಮಹಾಮಹಿಮ ಲಡ್ಡು ಮುತ್ಯಾ ಆಶೀರ್ವಾದ ಎಲ್ಲರ ಮೇಲಿರಲಿ…?