- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ಈ ವಾರಾಂತ್ಯ ಮಾಲ್ಮೋ ನಗರ ಅಷ್ಟು ಸುಲಭವಾಗಿ ನಿದ್ರಿಸುವಂತೆ ಇಲ್ಲ. ಕಾರಣ ಶುಕ್ರವಾರ ರಾತ್ರಿ ನಡೆದ ಗಲಭೆ. ಸುಮಾರು ಮೂನ್ನೂರರಷ್ಟು ಜನ ರಸ್ತೆಗೆ ನುಗ್ಗಿ ಸಿಕ್ಕ ಸಿಕ್ಕ ಡಸ್ಟ್ ಬಿನ್,ಕಾರು, ಟೈರ್ ಸುಟ್ಟು ಬಿರುಸು ಪಟಾಕಿಗಳನ್ನು, ಕಲ್ಲುಗಳನ್ನು ಎಸೆದು ಪೊಲೀಸರ ಮೇಲೆ ಹಲ್ಲೆ ಮಾಡಿ ಧೊಂಬಿ ಎಬ್ಬಿಸಿದ್ದು. ಇವೆಲ್ಲ ನಡೆದದ್ದು ಶುಕ್ರವಾರ ಸಂಜೆ ಸುಮಾರು ೭ ಗಂಟೆಯಿಂದ ಬೆಳಿಗ್ಗೆ ನಾಲ್ಕು ಗಂಟೆಗಳವರೆಗೆ. ಇವಕ್ಕೆಲ್ಲ ಕಾರಣ ಏನು ಎಂಬುದನ್ನು ಹೇಳುವುದಕ್ಕಿಂತ ಮುಂಚೆ ನಾನು ಮಾಲ್ಮೊ ಎಂಬ ನಗರದ ಬಗ್ಗೆ ಸ್ವಲ್ಪ ವಿವರ ನೀಡಬಯಸುತ್ತೇನೆ.
ಸ್ಟಾಕ್ಹೋಮ ನಿಂದ ಸುಮಾರು ೬೦೦ ಕಿಲೋಮೀಟರ್ ದೂರದಲ್ಲಿರುವ ಮಾಲ್ಮೊ , ಸ್ವೀಡನ್ ನ ದಕ್ಷಿಣ ತುದಿಯ ಸಾಗರ ತೀರದ ಪ್ರಮುಖ ನಗರ. ಸುಮಾರು ಮೂರೂವರೆ ಲಕ್ಷದಷ್ಟು ಜನಸಂಖ್ಯೆ ಇರುವ ಈ ನಗರಕ್ಕೆ ಕೇವಲ ೪೦ ಕಿಲೋಮೀಟರ್ ಗಳ ಅಂತರದಲ್ಲಿ ಡೆನ್ಮಾರ್ಕ್ ನ ರಾಜಧಾನಿ ಕೋಪನ್ ಹೇಗನ್ ಇದೆ. ಮಾಲ್ಮೋ ದಿಂದ ಕೋಪನ್ ಹೇಗನ್ ಹೋಗಲು ಜಗದ್ವಿಖ್ಯಾತ ಓರ್ ಸೌಂಡ (Öresund) ಎಂಬ ರಸ್ತೆ-ಹಳಿಗಳ ಅದ್ಬುತ ಸೇತುವೆ ಇದೆ.
ಡೆನ್ಮಾರ್ಕ್ ಜರ್ಮನಿ ಸೇರಿದಂತೆ ಇತರ ಯುರೋಪಿಯನ್ ದೇಶಗಳಿಂದ ಸ್ವೀಡನ್ನಿಗೆ ಬರಲು ಮಾಲ್ಮೋ ಹೆಚ್ಚು ಕಮ್ಮಿ ಪ್ರವೇಶದ್ವಾರ ಇದ್ದಂತೆ. ಹೀಗಾಗಿ ಇಲ್ಲಿನ ಅರ್ಧದಷ್ಟು ಜನರು ಬೇರೆ ಬೇರೆ ದೇಶಗಳಿಂದ ಬಂದವರು. ಇರಾಕ್ ಸಿರಿಯಾ ಮುಂತಾದ ಮಧ್ಯಪ್ರಾಚ್ಯ ದೇಶಗಳಿಂದ ನಿರಾಶ್ರಿತರಾಗಿ ಬಂದು ನೆಲೆಸಿದವರೂ, ದಕ್ಷಿಣ ಅಮೇರಿಕ ಹಾಗೂ ಇತರ ಯುರೋಪಿಯನ್ ದೇಶಗಳಿಂದ ವಲಸೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ನೂರೈವತ್ತಕ್ಕೂ ಹೆಚ್ಚಿನ ವಿದೇಶಗಳ ಮೂಲದವರು ಇಲ್ಲಿ ಜನಾಂಗೀಯ,ರಾಷ್ಟ್ರೀಯತೆ ಗಳ ವೈವಿಧ್ಯತೆ, ವೈಪರೀತ್ಯಗಳ ಮಧ್ಯೆ ವಾಸಿಸುತ್ತಿರುವುದು ಗಮನಾರ್ಹ.
ನೈಟ್ ಕ್ಲಬಗಳಲ್ಲಿ,ಡ್ರಗ್ಸ್ ವ್ಯವಹಾರಗಳ ಮಧ್ಯೆ ಶೂಟ್ ಔಟ್ ಗಳೂ ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇಲ್ಲೊಂದು ರೋಸೆನ್ ಗೊರ್ಡ್ Rosengård (ರೋಸ್ ಗಾರ್ಡನ್) ಎನ್ನುವ ೨೪೦೦೦ ಜನಸಂಖ್ಯೆಯ,೧೮೦ ಕ್ಕೂ ಹೆಚ್ಚಿನ ರಾಷ್ಟ್ರೀಯರು ವಾಸಿಸುವ ಒಂದು ಪ್ರದೇಶವಿದ್ದು ಘರ್ಷಣೆಗಳು ಹೆಚ್ಚು ಸಾಮಾನ್ಯ. ಒಟ್ಟಾರೆ ಮಾಲ್ಮೋದಲ್ಲಿ ಆಗಾಗ ಕಾನೂನು ಸುವ್ಯವಸ್ಥೆಯನ್ನು ಹರಡುವಂತಹ ಘಟನೆಗಳು ನಡೆಯುತ್ತವೆಯಾದರೂ ಹಿಂದೆ ದೊಡ್ಡ ಗಲಭೆ ಅಂತ ನಡೆದಿದ್ದು ೨೦೦೮ ರಲ್ಲಿ.
ಇಷ್ಟಾದರೂ ಮಾಲ್ಮೋ ದಲ್ಲಿ ವಾಸಿಸುವ ಅರ್ಧದಷ್ಟು ಜನರು ೩೦ ವಯಸ್ಸಿಗಿಂತ ಕಮ್ಮಿಯವರು ಹಾಗಾಗಿ ಇದು ಯುವ ನಗರ..,ನೈಟ್ ಲೈಫ್,ಕ್ಲಬ್ಬು, ಬ್ಯುಸಿನೆಸ್ ಗಳು, ತಾಂತ್ರಿಕ ಕಂಪನಿಗಳು ಹೆಚ್ಚಿದ್ದು,ಗಡಿ ವ್ಯವಹಾರ ಇತ್ಯಾದಿಗಳಿಂದ ಆರ್ಥಿಕವಾಗಿಯೂ ಅಭಿವೃದ್ಧಿಯಾಗಿರುವ ಸ್ವೀಡನ್ನಿನ ಮೂರನೇ ಅತಿ ದೊಡ್ಡ ನಗರವಾಗಿ ಅಂತರಾಷ್ಟ್ರೀಯ ವೈವಿಧ್ಯತೆಗಳಿಂದ ಕಲೆ, ಆಹಾರ ಇತ್ಯಾದಿಗಳು ಹೇರಳವಾಗಿ, ಸಿಗುವುದರಿಂದ ಅನೇಕರಿಗೆ ನೆಚ್ಚಿನದು ಹೌದು.
ಇನ್ನು ನಿನ್ನೆ ನಡೆದ ಗಲಭೆಯ ವಿಷಯಕ್ಕೆ ಬರೋಣ.
ರಾಸ್ಮುಸ್ ಪಲುದಾನ್ (Rasmus Paludan) ಎನ್ನುವವ ಡೆನ್ಮಾರ್ಕ್ ನ ಉಗ್ರ ಬಲಪಂಥೀಯ ಪಕ್ಷದ ಓರ್ವ ರಾಜಕಾರಣಿ. ಡೆನ್ಮಾರ್ಕ್ ನಲ್ಲಿ ಇಸ್ಲಾಂ ಹಾಗೂ ಪಾಶ್ಚಿಮಾತ್ಯರ ಹೊರತಾದ ವಲಸಿಗರ ವಿರುದ್ಧ ಅನೇಕ ಧರಣಿಗಳನ್ನು ನಡೆಸಿದ್ದಾನೆ. ಧಾರ್ಮಿಕ ಅಸಹಿಷ್ಣುತೆ ಹಾಗೂ ದ್ವೇಷದ ಭಾಷಣಗಳಿಂದಾಗಿ ಹಲವಾರು ಮೊಕದ್ದಮೆಗಳನ್ನು ಎದುರಿಸಿ, ಅನೇಕ ಬಾರಿ ಜೈಲಿಗೂ ಹೋಗಿ ಬಂದವನು. ಈತ, ಶುಕ್ರವಾರ ಸ್ವೀಡನ್ ನ ಮಾಲ್ಮೋ ನಗರಕ್ಕೆ ಬರುವ ಯೋಜನೆಯಿತ್ತು. ಅವನು ಹಾಗೂ ಅವನ ಕಾರ್ಯಕ್ರಮಗಳಿಂದಾಗಿ ಮಾಲ್ಮೋ ದ ಕಾನೂನು ಸುವ್ಯವಸ್ಥೆಗೆ ಮಾರಕವಾಗಬಹುದು ಎಂಬುದನ್ನು ಮನಗಂಡು ಸ್ವೀಡನ್ ಪೊಲೀಸ್ ಹಾಗೂ ಸ್ಥಳೀಯ ನ್ಯಾಯಾಲಯ ಬುಧವಾರವೇ ರಾಸ್ಮುಸ್ ಪಲುದಾನ್ ನ ಯೋಜಿತ ಭೇಟಿಯನ್ನು ನಿರಾಕರಿಸಿದಲ್ಲದೆ ಮುಂದಿನ ಎರಡು ವರ್ಷಗಳ ಕಾಲ ಈತನನ್ನು ಸ್ವೀಡನ್ ಗೆ ಬರದ ಹಾಗೆ ಪ್ರತಿ ಬಂಧ ಹೇರಿತ್ತು.
ಇದಾಗಿದ್ದು ಮೊನ್ನೆ ಬುಧವಾರ.. ಆದರೂ ಶುಕ್ರವಾರ ಬೆಳಿಗ್ಗೆ ಕೋಪನ್ ಹೇಗನ್ ನಿಂದ ಒರ್ ಸುಂಡ್ ಬ್ರಿಡ್ಜ್ನ ಮೇಲೆ ಕಾರಲ್ಲಿ ಬಂದ ರಾಸ್ಮುಸ್ ನನ್ನ ಸ್ವೀಡನ್ ನ ಪೊಲೀಸರು ತಡೆದು ವಾಪಸ್ ಕಳಿಸುತ್ತಾರೆ. ಆದರೆ, ಈ ವಿಷಯ ತಿಳಿದ ರಾಸ್ಮುಸ್ ನ ಮಾಲ್ಮೋ ದ ಅನುಯಾಯಿಗಳು ಸಿಟ್ಟಿಗೆದ್ದು ರೋಸೇನ್ ಗಾರ್ಡ್ ನ ಮಸೀದಿಯ ಮುಂದೆ ಇಸ್ಲಾಮಿನ ಪವಿತ್ರ ಗ್ರಂಥ ಕುರಾನನ್ನು ದಹಿಸಿ ಅದರ ಬಗ್ಗೆ ಸ್ಥಳೀಯ ಇಂಟರ್ನೆಟ್ ಸೈಟ್ ನಲ್ಲಿ ಹಾಕಿಕೊಳ್ಳುತ್ತಾರೆ.
ವಿಷಯ ಹಬ್ಬುತ್ತಿದ್ದಂತೆ ಸ್ಥಳೀಯ ಕೆಲ ಇಸ್ಲಾಂ ಧರ್ಮೀಯರು ಮಾಲ್ಮೋ ದ ಪೊಲೀಸ್ ವ್ಯವಸ್ಥೆಯ ಬಗ್ಗೆ ಸಿಟ್ಟಿಗೆದ್ದು ಶುಕ್ರವಾರ ಸಂಜೆ ಗಲಭೆಯನ್ನು ಆರಂಭಿಸಿದ್ದಾರೆ. ತಮ್ಮ ಧರ್ಮ ಗ್ರಂಥವನ್ನು ದಹಿಸಿ ಅವಮಾನಿಸಿದ ಘಟನೆಯನ್ನು ಸ್ಥಳೀಯ ಪೊಲೀಸ್ ವ್ಯವಸ್ಥೆ ಯಾಕೆ ತಡೆಯಲಿಲ್ಲ ಎಂದು ಅಸಮಾಧಾನದಿಂದ ಕಲ್ಲು ತೂರಿ, ಬೆಂಕಿ ಹಚ್ಚಿ
ವೀ ಆರ್ ಗೋಯಿಂಗ್ ಟು ಫಕ್ ದ ಸಿಸ್ಟಮ್.. ಎಂದು ಕೂಗಿ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಗಲಭೆಯನ್ನು ಪೊಲೀಸರು ಹತೋಟಿಗೆ ತಂದಿದ್ದಾರೆ. ಸ್ಥಳೀಯ, ಪ್ರಭಾವಶಾಲಿ ಇಮಾಮ್ ಮುಂದೆ ಬಂದು ಗಲಭೆಕೋರರು ಹಾಗೂ ಪೊಲೀಸ್ ನಡುವೆ ಕೊಂಡಿಯಾಗಿ ಪರಿಸ್ಥಿತಿ ನಿಭಾಯಿಸುವ ಪ್ರಯತ್ನ ಮಾಡಿದ್ದಾರೆ. ಧರ್ಮಕ್ಕೆ ಕೆಟ್ಟ ಹೆಸರು ತರುವಂತಹ ಕೆಲಸ ಮಾಡದಂತೆ ಹಾಗೂ ಗಲಭೆಯನ್ನು ಖಂಡಿಸಿ ಇಮಾಮ್ ಸಮೀರ್ ಮುುರಿಕ್ ಹೇಳಿಕೆ ಕೊಟ್ಟಿದ್ದಾರೆ. ಯಾರೋ ಡ್ಯಾನಿಶ್ ಮಾಡಿದ ತಪ್ಪಿಗೆ ಹೀಗೆ ಹಿಂಸಾತ್ಮಕ ಗಲಭೆ ಮಾಡಿದ್ದು ತಪ್ಪು.. ಕೆಲವು ಸಮಾಜಘಾತುಕರು ತೀವ್ರ ಪ್ರತಿಕ್ರಿಯೆ ನೀಡಿದ್ದು ಸರಿಯಲ್ಲ ಎಂದು ಕೂಡ ಲೆಬನಾನ್ ಮೂಲದ ಮುಸ್ಲಿಂ ಸೇರಿದಂತೆ ಅನೇಕರು ತಮ್ಮ ಆತಂಕ ವ್ಯಕ್ತಪಡಿಸಿದ್ದು ಹೆಚ್ಚಿನ ಸಮಾಜ ಬಾಂಧವರು ಹಿಂಸೆಯನ್ನು ಇಷ್ಟಪಡುವುದಿಲ್ಲ ಹಾಗೂ ಇದು ಕೆಲವೇ ಕೆಲವು ಅರಬ್ಬರ ತೀವ್ರ ಕುಮ್ಮಕ್ಕಿ ನಿಂದಾದ ಪ್ರತಿಕ್ರಿಯೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೆಲವು ಪೊಲೀಸರು ಗಾಯಗೊಂಡಿರುವರಾದರೂ ಈವರೆಗೆ ಯಾವ ಪ್ರಾಣಹಾನಿಯ ಆಗಿರುವ ಸುದ್ದಿ ಬಂದಿಲ್ಲ. ಸದ್ಯಕ್ಕೆ ಗಲಭೆ ನಿಯಂತ್ರಣ ವಾದರೂ ಮತ್ತೆ ಭುಗಿಲೇಳುವ ಸಾಧ್ಯತೆ ಇರುವುದರಿಂದ ಪೊಲೀಸರು ಎಚ್ಚರಿಕೆ ಯಲ್ಲಿದ್ದಾರೆ. 13 ಗಲಭೆಕೋರನ್ನು ಬಂಧಿಸಿದ್ದಾರೆ.
ಮೂಲತಃ ಸ್ವೀಡನ್ ಲಿಬರಲ್, ಜಾತ್ಯತೀತ, ಮಾನವಾಧಿಕಾರಗಳ ವಿಷಯದಲ್ಲಿ ಮುಂಚೂಣಿಯಲ್ಲಿರುವ ರಾಷ್ಟ್ರವಾದ್ದರಿಂದ, ಇಲ್ಲಿನ ರಾಜಕಾರಣದಲ್ಲಿ ಮತೀಯತೆ ಇನ್ನೂ ಹೊಕ್ಕದೆ ಇರುವುದರಿಂದ, ಹೆಚ್ಚು ಕಮ್ಮಿ ಎಲ್ಲಾ ಸ್ವೀಡಿಶ್ ಪ್ರಜೆಗಳು ಧರ್ಮಗಳಿಂದ ಹೊರತಾಗಿ, ಶಾಂತಿಪ್ರಿಯರಾಗಿಯೂ ಇರುವುದರಿಂದ ಈ ರೀತಿಯ ಗಲಭೆಗಳು ಪೂರ್ತಿ ದೇಶಕ್ಕೆ ಇತರ ಪ್ರದೇಶಗಳಿಗೆ ಹಬ್ಬುವ ಸಾಧ್ಯತೆಗಳು ತುಂಬಾನೇ ಕಮ್ಮಿ.. ಹೀಗಾಗಿ ದೂರದಲ್ಲಿ, ಸ್ವೀಡನ್ನ್ನ ಉತ್ತರಭಾಗದ ಸ್ಟಾಕ್ ಹೋಮ್ ನಲ್ಲಿ ಎರಡು ದಿನಗಳಿಂದ ಮಳೆಯನ್ನು ಆಸ್ವಾದಿಸುತ್ತಿದ್ದವನಿಗೆ, ಸ್ವೀಡನ್ ಗಲಭೆ ಎಂಬುದರ ಬಗ್ಗೆ ಭಾರತೀಯ ಚಾನೆಲ್ಗಳ ವರದಿಗಳ ಹಿನ್ನೆಲೆಯಲ್ಲಿ ಹಿತೈಷಿಗಳ ತುಂಬಾ ಕರೆಗಳು, ಸಂದೇಶಗಳು ಬಂದವು.. ಯಾವುದಕ್ಕೂ ಇರಲಿ ಅಂತ ಈ ಶೀಘ್ರ ವರದಿಯನ್ನು ಮಾಲ್ಮೋ ಗಲಭೆಯ ಬಗ್ಗೆ ನಿಮ್ಮ ಅವಗಾಹನೆ ತರಲು ಬಯಸುತ್ತಿದ್ದೇನೆ.
ಹೆಚ್ಚಿನ ಬರಹಗಳಿಗಾಗಿ
ಹಿಂದಿ ಹೇರಿಕೆ ಸರಿಯೇ?
ಸ್ವೀಡನ್ ಚುನಾವಣಾ ಸಮರ ೨೦೨೨
ಸ್ವಾತಂತ್ರ್ಯದ ಅಮೃತೋತ್ಸವ – ೭೫ ರ ಭಾರತ