ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಹಕ್ಕಿ ಹೋದದ್ದು ಎಲ್ಲಿಗೆ

ಮಾರ್ಪಟ್ಟ ಕಾಲದ ಬಗ್ಗೆ ಮಾವಿನ ಮರ, ಹಕ್ಕಿ ಹಾಗೂ ನೆನಪುಗಳ ರೂಪಕದ ಜತೆಗೆ ಮನ ಮುಟ್ಟುವ ಕವಿತೆ ಹೆಣೆಯುತ್ತಾರೆ ಲೇಖಕಿ ಅಂಕೊಲೆಯ ರೇಣುಕಾ ರಮಾನಂದ್..
ರೇಣುಕಾ ರಮಾನಂದ​
ಇತ್ತೀಚಿನ ಬರಹಗಳು: ರೇಣುಕಾ ರಮಾನಂದ​ (ಎಲ್ಲವನ್ನು ಓದಿ)

ಮೊದಲ ಗಾಳಿಮಳೆಗೆ ಬೆದರಿ
ಮುದುರಿ ಕುಳಿತರೆ ಒಂದೇ ಧ್ಯಾನ
ಬಯಲ ಅಂಚಿಗಿದ್ದ ವಾರಸುದಾರರಿಲ್ಲದ
ಮಾವಿನ ಮರ
ಅದರ ಖಂಡವಿದೆ ಕೋ ಮಾಂಸವಿದೆ ಕೋ
ಅಮೃತ ಸದೃಶ ಗೋಟು ಹಣ್ಣುಗಳು
ಪ್ಲಸ್ ಆಮ್ ಐ ರೈಟ್ ..? ಆಟದಲ್ಲಿ ತೂರುವ
ಡಾಂಬರು ರೋಡಿಗೆ ತಿಕ್ಕಿ ನಾವೇ ನಯಾ ಮಾಡಿದ
ಅದರದ್ದೇ ಆಯ್ದ ಪಸಂದು ಚಪ್ಪಟೆ ಗೊರಟೆಗಳು

ಎಷ್ಟುದುರಿದವೋ..ಯಾರು ಯಾರೆಲ್ಲ ಹೆಕ್ಕಿ
ಲಂಗ ತುಂಬಿ ಒಯ್ದರೋ
ನನಗೆ ಒಂದೆರಡಾದರೂ ಸಿಕ್ಕೀತಾ
ಎಂದು ಮಳೆ ನಿಂತ ಮೇಲೆ ಹೋದರೆ
ಅಣಕಿಸುವ ಗೆಳತಿಯರ ತಲೆಗೆ ಪಟ್ಟನೆ
ಹೊಡೆವಂತೆ ಸಣ್ಣಗೆ ಮತ್ತೊಂದು ಗಾಳಿ ಬೀಸಿ
ನಾಲ್ಕಾರು ಹಣ್ಣುಗಳು ಸುತ್ತ ಮುತ್ತ
ಯಾರನ್ನೂ ಅಳಲು ಬಿಡುತ್ತಿರಲಿಲ್ಲ
ಯಾರದ್ದೂ ಅಲ್ಲದ ಈ ಮಾವಿನ ಮರ

ಇದಾಗಿ ಇಪ್ಪತ್ತು ವರ್ಷ
ಮೊನ್ನೆ ಆ ಕಡೆ ಹೋದವಳಿಗೆ
ಮರವಿದ್ದ ಜಾಗದಲ್ಲಿ ಉರಿಬಿಸಿಲು
ಛಿನ್ನ ಪ್ರಾಂಗಣ,ಸಿಮೆಂಟು ಪಾಗಾರ
ಬಿಸಿಯುಕ್ಕುವ ತಾರಸಿ ಮನೆ
ಮರವೆಲ್ಲಿ ಕೇಳಿದರೆ ಯಾವ ಮರ
ಯಾರು ನೀವು
ಅಂದರು ಹೊಸಬರು
ಇನ್ನಷ್ಟು ನಿಲ್ಲಹೋದರೆ ವಿಚಿತ್ರವೆಂಬಂತೆ
ನೋಡತೊಡಗಿದರು

ಸಾವಿರ ಹಕ್ಕಿಗಳ ತಾಬಾ ಇದ್ದ ಗಿಜಿಗಿಜಿ ಮರ
ನಾಲಿಗೆ ಮೇಲೆಯೇ ಇರುವ ರುಚಿಯಾದ
ಹಣ್ಣಿನ ಮರ
ನನ್ನ ಜೊತೆಗೆ ಹಣ್ಣು ಹೆಕ್ಕಿದವರು
ಹೇಳಹೆಸರಿಲ್ಲದೇ ಕಾಣೆಯಾಗಿ
ತಮ್ಮ ತಮ್ಮ ಚಿಕ್ಕಿ ಹೂವಿನ ಲಂಗವನ್ನು
ನೆನಪಿಗಿಟ್ಟುಕೊಂಡು
ಯಾವುದೋ ಊರಿನ ಯಾರದ್ದೋ ಹೆಂಡಿರಾಗಿ
ಜೋಡಿ ಮೇಲೆ ರೈಲು ಪಾಲಾಗಿ
ಊರಿನ ದಿಕ್ಕಿಗೇ ಬೊಗಸೆಯಷ್ಟಗಲದ
ತುಳಸಿ ಕುಂಡವನ್ನಿಕ್ಕಿ ಎರಡು ಊದಿನಕಡ್ಡಿ
ಸುತ್ತಿಸಿ ದಿನವೂ ಕೈ ಮುಗಿದು
ಮೂವತ್ತು ಸೆಕೆಂಡ್ ನಿಂತರು

ಅಪಾರ್ಟ್‌ಮೆಂಟುಗಳ
ಪುಟ್ಟ ಅಡುಗೆಕೋಣೆಯಲ್ಲಿ
ಸಿಕ್ಕಿಕೊಂಡ ಅವರು ಉಶ್ ಉಶ್ ಅಡುಗೆ ಮಾಡಿ
ಮಕ್ಕಳ ಲಂಚ್‌ಬಾಕ್ಸ ಕಟ್ಟಿ
ಉಳಿದ ಸಮಯದಲ್ಲಿ
ಪುಟ್ಟ ಕಿಟಕಿಯ ಅಂಚಿಗೆ ನಾಲ್ಕಾರು ಅಕ್ಕಿಕಾಳು ಬೀರಿ
ಪೇಸ್‌ಬುಕ್ಕಿಗೆ ಅಪ್‌ಲೋಡು ಮಾಡಲು
ಒಂದು ಹಕ್ಕಿ ಬಂದೀತಾ ಎಂದೂ ಸಹ ಕಾದೇ
ಕಾದರು

ಅವರ ಗಂಡಂದಿರು ಆಫೀಸ್ ಮೀಟಿಂಗಿನ ಮಧ್ಯದಲ್ಲಿ
ಪ್ಲೇಟಿನಲ್ಲಿದ್ದ ಒಂದೇ ರೊಶೋಗುಲ್ಲಾವನ್ನು
ಒಜ್ಜೆ ಚಾಕುವಿನಲ್ಲಿ ಕತ್ತರಿಸಿ
ಪೋರ್ಕಿನಲಿ ಚುಚ್ಚಿ ನಾಕು ಬಾರಿ ತಿಂದರು
ಅವರ ಮಕ್ಕಳೂ ಊಟದ ಬಿಡುವಲ್ಲಿ
ಇಷ್ಟು ಡಾಲರಿಗೆ ಎಷ್ಟು ಯೆನ್ ಹೇಳು ನೋಡುವಾ
ಎಂಬುದೆಲ್ಲ ನಿಸ್ತೇಜು ಮಾತಾಡಿ
ಮನೆಗೆ ಬಂದು ಮುದ್ದೆಯಾಗಿ ಕುಳಿತು
‘ಹಂಗರ್ ಗೇಮ್ಸ್ ‘ ನೋಡಿದರು

ಅಕ್ಕಾ ಕೇಳೇ
‘ಚಿಕ್ಕಿ ಹೂವಿನ ಲಂಗದ ಕಿಶೆಯಲ್ಲಿ ಇಟ್ಟು
ಮರೆತ ಬೆಟ್ಟೆ ನೆಟ್ಟರೆ ಹುಟ್ಟುತ್ತಿತ್ತು
ಹಕ್ಕಿಯೂ ಬರುತ್ತಿತ್ತು ‘
ರಾತ್ರಿ ಸಮಾ ಹನ್ನೆರಡಕ್ಕೆ ಮರದ ಮರ್ಮರ

ಎದ್ದು ಕುಳಿತರೆ
ಅಟ್ಟದ ಮೇಲಿನ ಟ್ರಂಕಿನಲ್ಲಿ ನನ್ನದೂ
ಒಂದು ಚಿಕ್ಕಿ ಹೂವಿನ ಲಂಗ

ಮತ್ತದರ ಕಿಶೆಯಲ್ಲಿ
ಸಾಫು ಮಾಡದೇ ಇಟ್ಟ
ನನ್ನದೂ ಒಂದು
ಚಪ್ಪಟೆ ಗೋಟು ಗೊರಟೆ