- ‘ನಿಧಿ’ ಯೆಂಬಾಕಿನ ಹುಡುಕ್ಯಂಡ್.. - ಮೇ 2, 2020
ಅದೊಂದು ಗಟ್ಟಿ ನಿರ್ಧಾರ ಮಾಡಿದಾವನ ಎದ್ದು ಟಿವಿ ಬಂದ್ ಮಾಡಿ ದಡಬಡಿಸಿ ಹೊರಗಬಿದ್ದ್ಯಾ. ಇದನ್ನೆಲ್ಲಾ ನೋಡತಿದ್ದ ಗ್ವಾಡಿ ಮ್ಯಾಲಿನ ಮಳಿಗೆ ನೇತಾಡುತ್ತಿದ್ದರೊಳಗ ಒಬ್ಬಾಂವ ಕಿಸಕ್ಕನೆ ನಕ್ಕಂಗಾತು. ನಾ ತಿರುಗಿ ನೋಡಿ “ಹನುಮ, ನಿಂದು ಇಷ್ಟು ಇದ್ದದ್ದೇ. ನಗ್ತೀಯಾ ನಗು ” ಅಂತಂದು ಅಂಗಳಾ ದಾಟಿದ್ಯಾ. ಎದುರಿಗೆ ಇದ್ದ ಅಶ್ವತ್ಥಕಟ್ಟಿ ಮ್ಯಾಲ ಮಣ ಮಣ ಅನಕೋಂತ ಕುಂತ ಮೂಕಜ್ಜಿಯ ಕಣ್ಣಿಗೆ ಬೀಳಬಾರದಂತ ವಾರಿಯಾಗಿ ಹೊರಟಿದ್ದವನನ್ನ ಏ ಮಾಣಿ, ಬಾ ಇಲ್ಲಿಅಂತ ಕರದು, ” ನೀನು ನಿಧಿ ಹುಡುಕಿಕೊಂಡು ಹೊರಟಿದ್ದಿ ಅಲ್ಲ. ಆದರೆ ಫಲವಿಲ್ಲ ” ಅಂತ ಅಪಶಕುನ ನುಡೀತು. “ಏ ಹೋಗಜ್ಜಿ ನೀ ಏನರ ಒಂದು ಹೇಳ್ತಿ” ಅಂದ ನನ್ನ ಮಾತಿಗೆ “ಇಲ್ಲಪ್ಪ, ನನಗೆ ಹಾಗೆ ಕಾಣಿಸುತ್ತದೆ” ಅನಬೇಕಾ ? ಅದಕ್ಕs , ಊರಮಂದಿ ನಿನಗ “ಒಂದು ಸುತ್ತು ಕಡಿಮೆ” ಅಂತ ಅಂತಾರ . ನೀ ಬೇಕಾದ್ದು ಅನ್ನು. ನಾ ಹುಡುಕೇ ಹುಡುಕತೀನಿ ಅಂತಂದು ಸೀದಾ ದುರ್ಗದಬೈಲಿಗೆ ಬಂದ್ಯಾ.
ಅಲ್ಲಿ ಒಂದು ಹೂಗುಚ್ಛ, ಒಂದು ಪ್ಲೇಟ್ ಪಾನಿಪುರಿ ಕಟ್ಟಿಸಿಕೊಂಡು ಹೊಂಟಿರಲಾಗಿ, ಕಟ್ಟಿಗೆ ಕುಂತ ಆ ಇಬ್ಬರೊಳಗ ಒಬ್ಬಾಂವ ನನ್ನ ಮ್ಯಾಲ ಹಾಸಿ “ಕೋಡಗನ ಕೋಳಿ ನುಂಗಿತ್ತ.….” ಹಾಡು ಹೇಳಾಕತ್ತಿದ. ನಾನು ಸಿಟ್ಟು ಬಂದು ಈ ಗೋವಿಂದ ಗುರುವಿಗೆ ಏಟೂ ಬುದ್ಧಿ ಇಲ್ಲ. ತಾ ಕೆಡೂದೂ ಅಲ್ಲದ, ಶಂಕರೀ ಚಟ ಹತ್ತಿಸಿ ನಮ್ಮ ಶರೀಫ ಕಾಕಾನ್ನೂ ಹಾಳು ಮಾಡಾಕತ್ತಾನ ಅಂತ ಬೈಕೋಂತ ಮುಂದ ಬಂದ್ಯಾ.
ಒಂದೀಟು ಮುಂದ ಬರೂದರಾಗ ಎದುರಿಗೆ ಬೇಂದ್ರೆಯಜ್ಜ ಸಿಗಬೇಕಾ ? ನಮಸ್ಕಾರರೀ ಅಜ್ಜಾರ ಅಂತೇಳಿ ಮುಂದ ಹೊರಟವನ್ನ ತಡದು “ಏ ಅಶಿವ ನೀ ಶಕ್ತಿಯ ಮೋಹದಾಗ ಮಳ್ಳಾಗಿ ಆಕಿನ ಬೆನ್ನು ಹತ್ತೀದಿ. ಆದರ ಆಕಿ ತನ್ನ ಮಾಯಾರೂಪವನ್ನ ಮುಂದ ಮಾಡಿ ತಾ ಮರಿಗೆ ನಿಂತು ನೋಡಾಕತ್ತಾಳ. ಇದು ನಿನಗ ತಿಳೀವಲ್ದು” ಅಂದು ನಕ್ಕರು. ಅದಕ್ಕ ನಾ ” ಏ ಬಿಡ್ರಿ ಅಜ್ಜಾರ. ನೀವು ಆ ಕಾಲದಾವರು . ಈಗಿಂದು ನಿಮಗ ಗೊತ್ತಾಗುದಿಲ್ಲರಿ” ಅಂತ ಮಾರುತ್ತರ ಕೊಟ್ಟು ನನ್ನ ದಾರಿ ಹಿಡದ್ಯಾ. ನಡದ್ಯಾ ನಡದ್ಯಾ. ಹುಡುಕುವ ನನ್ನ ಹಠದಾಗ ದಣಿದು ಈsಟ ಸುಧಾರಿಸಿಕೊಂಡರಾತು ಅಂತ ಒಂದು ಬೋಧಿ ಮರದ ಕೆಳಗ ಬಂದು ಕುಂತ್ಯಾ. ಕುಂತು ಎರಡು ನಿಮಿಷ ಆಗಿತ್ತೋ, ಇಲ್ಲೋ ? “ಆಸೆಯೇ ದುಃಖಕ್ಕೆ ಮೂಲ” ಅನ್ನುವ ಅಶರೀರವಾಣಿ ಕಿವಿಗೆ ಬಿತ್ತು. ಸುತ್ತಲೂ ನೋಡಿದ್ಯಾ, ಏನಿಲ್ಲ ! ಎಲ್ಲಾ ನನ್ನ ಭ್ರಮೆ ಅಂದ್ಕೊಂಡು ಮತ್ತ ನನ್ನ ಹುಡುಕುವ ಹುಕಿಗೆ ಬಿದ್ದು ಹೊರಟೆದ್ದ್ಯಾ.
ಅದು ಅರಣ್ಯ . ಅಲ್ಲಿ ಅಕ್ಕ ಕಾಡಿನ ಗಿಡ-ಮರ, ಜೀವಜಂತುಗಳಾದಿಯಾಗಿ ಎಲ್ಲೆಡೆ ತನ್ನ ಚೆನ್ನಮಲ್ಲಿಕಾರ್ಜುನನ ಅಡ್ರೆಸ್ ಕೇಳಕೋಂತ ಅಡ್ಡಾಡತಿದ್ದಳು. ಆಕೀದ ಆಕಿಗೆ ಹತ್ತಿದ ಹೊತ್ತಿನ್ಯಾಗ ನಂದೇನು ಕೇಳೂದಂತ ಹೋಳಾಗಿ ಮುಂದ ನಡದ್ಯಾ.
ತಿರುಗಿದ್ಯಾ, ತಿರುಗಿದ್ಯಾ. ತಿರುತಿರುಗಿ ಒಂದು ಬಟಾಬಯಲಿಗೆ ಬಂದ್ಯಾ. ಅದು ಬಯಲಂದ್ರ ಬಯಲ. ಏನಂದ್ರ ಏನೂ ಇಲ್ಲ. ! ಅಂಥಲ್ಲಿ ಈಗ ತಾನೇ ಹದಿನಾಲ್ಕು ಭುವನಂಗಳನು ಹೊಕ್ಕು ಜಾಲಾಡಿ ಬಂದ ಮಹಾಪುರುಷನೊಬ್ಬ ಕುಳಿತದ್ದು ಕಂಡು ನನ್ನ ಸಮಸ್ಯೆಗೆ ಪರಿಹಾರ ಕಂಡಂಗಾಗಿ,” ಶರಣು ಪ್ರಭುವೇ” ಅಂತ ಅಡ್ಡ ಬಿದ್ದು ಮ್ಯಾಲೆದ್ದೆ. ನನ್ನನ್ನೂ ನನ್ನ ಕೈಯೊಳಗಿನ ಹೂಗುಚ್ಛ, ಪ್ರಸಾದಂಗಳನ್ನು ನೋಡಿದವನೇ , ಮಾಯಾವಿಲಾಸದ ಮೂರ್ತ ರೂಪವೇ ಕಂಡಂತಾಗಿ, ಕೆಕ್ಕರಿಸಿ ” ಮರುಳಿನ ಕೂಟ, ವಿಪರೀತ ಚರಿತ್ರ!” ಅಂತ ಮಕಕ್ಕುಗಿದ ಅಲ್ಲಮ, ತಾನೂ ಮುಖ ತಿರುಗಿಸಿ, ದಿಕ್ಕು ಬದಲಾಯಿಸಿ ಧ್ಯಾನಸ್ಥನಾದ.
ನನಗ ಇನ್ನ ದಿಕ್ಕ ತಿಳಿಲಾರದಂಗ ಆಗಿ , ನಿಧಿಯನ್ನಾಕಿ ಕನಸss ಆದಳು ಅನಕೋಂತ ಮಕ ಇಳಿಬಿಟ್ಟು ಹೊಂಟಿದ್ಯಾ. ಯಾರೋ ಹೆಗಲ ಮ್ಯಾಲ ಕೈ ಇಟ್ಟಂಗಾತು ! ತಲಿ ಎತ್ತಿ ನೋಡಿದರ ನಮ್ಮ ಭೈರಪ್ಪನವರು !!
ನನ್ನ ಗೋಳು ಕೇಳಿದಾವರ ಅದಕ್ಕೊಂದು ಪರಿಹಾರವಾಗಿ, ಹೀಂssಗ ಉದೋಕ ಕೈ ಚಾಚಿ ಆ ಪರಿಹಾರ ಮಾರ್ಗದ ನಕಾಶಿ ತೋರಿಸಿದರು. ಇದೊಂದು ಆಗೇ ಬಿಡ್ಲಿ ಅಂತ ನಾನು ಅವರ ನಕಾಶಿ ತಲಿಯಾಗ ಇಟಗೊಂಡು ಹರಿದ್ವಾರ, ಹೃಷಿಕೇಶ ಮಾರ್ಗವಾಗಿ ಸತ್ತಕೋಂತ, ಬಿದ್ದಕೋಂತ ಏರಿ , ಇಳದು, ಏರಿ ಅಂತೂ ಕೇದಾರಕ್ಕ ಬಂದ್ಯಾ. ಬಂದ ನೋಡತೀನಿ. ಚಟ್ಟಾ ಚಳಿ. ಧೋ ಅಂತ ಮಂಜು ಸುರೀಲಾಕತ್ತದ. ಒಂದsಒಂದು ನರಪಿಳ್ಳೆ ನೋಡಾಕ ಸಿಗವಲ್ಲತು. ಹಾಂsಗ ಚೂರು ಮ್ಯಾಲ ಇಣುಕಲಾಗಿ ಅಲ್ಲೊಬ್ಬ ಕೌಪೀನಧಾರಿ ಸಾಧುಗಳು , ಸುಮೇರು ಪರ್ವತದಿಂದ ಇಳಿದು ಈ ಕಡೇನ ಬರಾಕತ್ತದ್ದು ಕಾಣ್ಸಿ ಜೀವಬಂದಂಗಾತು.
ಹತ್ತಿರ ಬಂದ ಮ್ಯಾಲ ಗೊತ್ತಾತು. ನಮ್ಮ ಭೈರಪ್ಪನವರು ಹೇಳಿದ ಬಾರಾಮಾಸಿ ಮಹಾರಾಜರು ಇವರೇ ಅಂತ.
ಅಡ್ಡಬಿದ್ಯಾ.
ನನ್ನ ನೋಡಿದವರ ” ಏನು ಮಗು, ಜನಸಾಮಾನ್ಯರು ಬಾರದ ಈ ಚಳಿಗಾಲದಲ್ಲಿ ಇಲ್ಲಿವರೆಗೂ ಬಂದ ಕಾರಣವೇನು ?” ಅಂದ್ರು. ಅವರ ದನಿಯೊಳಗ ಎಂಥಾ ಆರ್ದ್ರತೆ ಇತ್ತು ಅಂತೀರಿ, ನನಗಂತೂ ಅಳೂನ ಬಂತು. ತಡಕೊಂಡು , ಹೀಂಗ, ಹಿಂಗಿಂಗ, ನಿಮ್ಮ ಕಡೆ ಇದಕ್ಕ ಪರಿಹಾರ ಅದ ಅಂತ ಒಬ್ಬರು ಇಲ್ಲಿಗೆ ಕಳಸಿದರು ಅಂದ್ಯಾ. ಇಷ್ಟು ಅಂದಿದ್ದ ತಡ , ಇಲ್ಲೀತನಕ ಶಾಂತಿಯೇ ಮೂರ್ತಿವೆತ್ತಂತಿದ್ದ ಮಹಾರಾಜರು ಏಕಾ ಏಕಿ ಕೆಂಡಾಮಂಡಲರಾಗಿ ಜಮದಗ್ನಿಗೂ ಮಿಗಿಲಾಗಿ ಕಾಣಾಕತ್ತಿದರು !!
“ಏನಂದಿಲೇ , ಹುಚ್ಚ ನನಮಗನ ? ಆ ನಿಧಿಯಂಥಾಕಿ ಈ ಜಗತ್ತಿನ್ಯಾಗ ಎಲ್ಲೆರ ಸಿಕ್ಕಿದ್ರ ನಾನ್ಯಾಕ ಇಲ್ಲಿ ತನಕ ಬಂದು ಈ ಕುಂಡಿ ಹರಿಯೂ ಥಂಡ್ಯಾಗ ಲಂಗೋಟಿ ಹಾಕ್ಕೊಂಡು , ದಿನಕ್ಕೊಂದು ಆಲೂಗಡ್ಡಿ ತಿನಕೋಂತ ಅಡ್ಡಾಡತಿದ್ದ್ಯಾ ?” ಅಂದಾವರ, ನನ್ನ ಜಾಡಿಸಿ ಒದ್ದರs ಹೇಳತೀನಿ ನಿಮಗ, ಅಲ್ಲಿಂದ ಜಾರಿ ಉರುಳಕೋಂತ, ಉರುಳಕೋಂತ ಧೊಪ್ಪಂತ ಕೆಳಗ ಬಿದ್ದ್ಯಾ. ಬಿದ್ದದ್ದು ಖಾತರಿಯಾಗಿ ಕೈಯಾಗಿನ ಹೂಗುಚ್ಛ, ಪಾನಿಪುರಿಗಾಗಿ ಸುತ್ತ ಕೈ ಸವರಾಡಾಕತ್ತಿದ್ದ್ಯಾ.
ಏನಾತರಿ ನಿಮಗ ? ಕಾಟಾದ ಮ್ಯಾಲಿಂದ ಕೆಳಗ ಹೆಂಗ ಬಿದ್ದರಿ ? ಅನ್ನೂ ಧ್ವನಿ ಕೇಳಿಸ್ತು. ನಾನಂದೆ,
“ಬಾರಿಮಾಸಿ ಮಹಾರಾಜರು ಒದ್ದರು “
ಹೂಂ ಮತ್ತ ? ಸೂರ್ಯ ನೋಡಿದರ ನೆತ್ತಿಮ್ಯಾಲ ಬಂದಾನ. ಇನ್ನ ಹಾಸಿಗ್ಯಾಗs ಬಿದ್ದಕೊಂಡಿದ್ರ ಬಂದ ಓದೀಲಾರದ ಏನ ಮಾಡತಾನಂವಾ. ಏಳ್ರಿ, ಅಂಗಳದಾನ ಕಸ, ಕುಟ್ರಿ ಬಿದ್ದೈತಿ. ” ಅಂದು ” ಸಂಜೀತನ ಸಿನಿಮಾ, ಟಿವಿ ನೋಡೂದು, ಬೆಳ್ಳಬೆಳತನ ಬಡಬಡಸೂದು. ಈ ಲಾಕ್ ಡೌನ್ ಬಾಯಾಗ ಮಣ್ಣ ಹಾಕಲಿ. ಯಾವಾಗರ ಮುಗಿತದನೋ ಅನಸೇದ ನನಗಂತೂ ” ಅಂತ ವಟಗೂಡಕೊಂತ ಆಕಿ ಹೋದಾಗಲೇನ ನಾ ಎಲ್ಲಿ ಅದೀನಿ ಅಂತ ನನಗ ಅರಿವಾಗಿದ್ದು.
ಅಂದ್ಹಾಂಗ ,
ನಿಮಗೆಲ್ಲರ ಆ ನಿಧಿಮಾ ಕಂಡ್ರ ಹೇಳ್ರಿ. ಪಟ್ಟಂತ ಹೋಗಿ ಒಂದು ಹೂಗುಚ್ಛ ಮತ್ತ ಒಂದು ಪ್ಲೇಟ್ ಪಾನಿಪುರಿ ಕಟ್ಟಿಸಕೊಂಡು ಬಂದ ಬಿಡ್ತೀನಿ.
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ