ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕು.ಸ.ಮಧುಸೂದನರ ಎರಡು ಕವಿತೆಗಳು

ಕು.ಸ.ಮಧುಸೂದನ ರಂಗೇನಹಳ್ಳಿ
ಇತ್ತೀಚಿನ ಬರಹಗಳು: ಕು.ಸ.ಮಧುಸೂದನ ರಂಗೇನಹಳ್ಳಿ (ಎಲ್ಲವನ್ನು ಓದಿ)

1. ಊರೆಂದರೆ ಹೀಗೆ

ಮನೆಗಳ ಸಾಲುಗಳು
ಅವುಗಳ ಕಾಯಲು ನಾಯಿಗಳು
ವಾಕಿಂಗ್ ಕರೆದುಕೊಂಡು ಹೋಗುವ ಕೈಗಳು
ಬ್ರೆಡ್ಡು ಬಿಸ್ಕೇಟು ಹಾಕುವ ತಾಯಂದಿರು
ತಮಗು ಅದೇ ಬೇಕೆಂದು ಹಟ ಹಿಡಿಯುವ ಮಕ್ಕಳು
ಇದನೆಲ್ಲ ಕವಿತೆಯಾಗಿಸುವ ಹೆಂಗರುಳಿನ ಕವಿಗಳು
ಒಳ್ಳೆಯವರ ನಡುವೆಯೂ ಒಂದಿಬ್ಬರಾದರೂ ಕಳ್ಳರು
ಹಿಡಿಯಲಷ್ಟು ಪೋಲೀಸರು
ಸಿಕ್ಕಿಕೊಂಡವರ ಕೂಡಿ ಹಾಕಲು ಕಾರಾಗೃಹಗಳು
ನ್ಯಾಯ ತೀರ್ಮಾನ ಮಾಡಲು ನ್ಯಾಯಾಲಯಗಳು
ವಾದ ಮಂಡಿಸುವ ಕರಿಕೋಟಿನ ವಕೀಲರುಗಳು
ಗಲ್ಲಗಂಬಗಳು
ಹುರಿಗೊಳಿಸಿದ ತುಂಡಾಗಲಾರದಂತಹ
ಹಗ್ಗಗಳ ಸಿಂಬೆಗಳು
ಎಲ್ಲವನೂ ಮೌನದಲಿ ನೋಡುತ್ತ ನಿಲ್ಲುವ ಗೊಂಬೆ ಮನುಷ್ಯರು
ಸತ್ಯ ಬರೆದ ಕವಿಯ ಕೊಲ್ಲುವ ಇರಾದೆಯಲಿ
ತರಬೇತಿ ಪಡೆದು ಬಂದ ಕಟುಕರ ಪಡೆ
ಊರೆಂದರೆ ಹೀಗೇನೆ!
ನಾನೀಗ ಕಿವುಡಾಗಿದ್ದೇನೆ!
ತೋಟದೊಳಗೆ ಹೂ ಕೀಳುವ ಸಡಗರ
ಕಣ್ನೀರುಕೆನ್ನೆಮೇಲೆ ಉರುಳುತ್ತದೆ
ಅಲೆಗಳಿಗೂ ಕೋಪಬಂದಿದೆ
ದಡವ ಮುತ್ತಿಡದೆ ದೂರದಿಂದಲೇ ಹಿಂದಿರುಗುತ್ತಿವೆ
ಹೂಗಳ ಪ್ರೀತಿಸಲೆ ಬೇಕೆಂದಿಲ್ಲ
ಚೂರಿಗಳ ರಾಶಿಯೇ ಹೂದಾನಿಯ ಶೃಂಗರಿಸಿವೆ
ನನ್ನದೇ ಜನ ಬೆನ್ನಿಗೆ ಚೂರಿ ಇರಿದೂ ನಗುತ್ತಾರೆ
ರಕ್ತ ಒಸರುತ್ತದೆ ಕಣ್ಣೀರು ಹನಿಯುವುದಿಲ್ಲ
ನಾನೇ ಬರೆದ ಕವಿತೆಯ ಅಪರಿಚಿತರು ಹಾಡುತ್ತಾರೆ
ನಾನೀಗ ಕಿವುಡಾಗಿದ್ದೇನೆ

2. ಹಿಂದಿನ ರಾತ್ರಿಗಳು ಹೀಗಿರಲಿಲ್ಲ

ವಿಷಾದವಿತ್ತಾದರೂ
ಹೀಗೆ ಹಿಮಗಡ್ಡೆಯಂತೆ ಹೆಪ್ಪುಗಟ್ಟಿರಲಿಲ್ಲ
ದು:ಖವಿತ್ತಾದರೂ
ಹಾಳೆಯ ಮಸಿಯಂತೆ ಹರಡಿಕೊಂಡಿರಲಿಲ್ಲ
ಕಣ್ಣೀರಿತ್ತಾದರೂ
ಕೆನ್ನೆಗಳ ಹಾದಿಗುಂಟ ಹರಿದಿರಲಿಲ್ಲ
ಬೇಸರವಿತ್ತದರೂ
ಬದುಕು ಬಾರವೆನಿಸಿರಲಿಲ್ಲ
ನೀನಿರಲಿಲ್ಲವಾದರೂ
ಹೃದಯ ಖಾಲಿಯೆನಿಸಿರಲಿಲ್ಲ
ಕತ್ತಲಿತ್ತಾದರೂ
ಬೆಳಕು ಬಾರದೆನಿಸಿರಲಿಲ್ಲ
ಕವಿತೆಯಿತ್ತಾದರೂ
ಖಾಲಿ ಹಾಳೆಗಿಳಿಯಲಾರದೆನಿಸಿರಲಿಲ್ಲ
ಹಿಂದಿನ ರಾತ್ರಿಗಳುಹೀಗಿರಲಿಲ್ಲ
ಈ ರಾತ್ರಿ ಎಂದಿನಂತಿರುವುದಿಲ್ಲ!

ಕು.ಸ.ಮಧುಸೂದನ ರಂಗೇನಹಳ್ಳಿ