- ನಿನ್ನಂತೆ ನಾನೂ… - ಜನವರಿ 9, 2022
- ಮೀನು ಬೇಟೆಗೆ ನಿಂತ ದೋಣಿ ಸಾಲು; ಈ ಅಲ್ಪ ಕಂಡಂತೆ. - ಅಕ್ಟೋಬರ್ 10, 2021
- ಸ್ತ್ರೀ ಅಂದರೆ ಅಷ್ಟೇ ಸಾಕೆ? - ಏಪ್ರಿಲ್ 13, 2021
ಹುತ್ತ ಬಿಟ್ಟ ಹಾವು
ಸರಿದಾಡುತ್ತ ಹರಿದದ್ದೇ ಹಾದಿ
ಚಿತ್ತದೊಳಗೆ ಚಿಟ್ಟೆ ಹುಟ್ಟಿ
ಹಾರಿದಾಗೊಮ್ಮೊಮ್ಮೆ ಎದ್ದು ನಿಂತು
ಎದೆ ಸೀಳುವ ನೋಟ
ಸರಕ್ಕನೆ ಚಾಚಿ ಒಳಗೆಳೆದುಕೊಂಡ ನಾಲಿಗೆ
ಜಗದ ರುಚಿ ನೋಡುವ ಹೂಟ
ಇದ್ದೂ ಇಲ್ಲದಂತೆ ಇದ್ದ ಹೆಡೆ
ಕಾದ ಎಣ್ಣೆಗೆಸೆದ ಹಪ್ಪಳ
ಅರಳಿದಂತರಳಿ ಹಾವು
ಹೆಡೆ ಬಿಚ್ಚಿ ಹೂವು
ಕಲ್ಲು ಮುಳ್ಳು ಮಣ್ಣು
ಹೂವಲ್ಲದ ಹಾದಿ
ಹುಳ ಹುಪ್ಪಟೆ ಇಲಿ ಕೀಟ
ಹಸಿವ ನಾಲಿಗೆಗೆ ಊಟ
ನುಂಗಿದ್ದು ಗಂಟಲಿಗಿಳಿದು
ಹೊಟ್ಟೆ ಹೊಕ್ಕು ಆಮೆ ನಡಿಗೆಯ ಓಟ
ದಕ್ಕಿದ್ದಿಷ್ಟು ದಕ್ಕದ್ದೆಷ್ಟು
ಸವೆದ ಹಾದಿಯ ಪಾಠ
ಹೊತ್ತದ್ದು ಹೊರಸಿದ್ದು
ಹೊರೆ
ಆಗಾಗ ಕಳಚಿ ಪೊರೆ
ಇಳಿಸಿಕೊಳ್ಳುವ ಪರಿ
ಮಿರ ಮಿರ ಮಿಂಚುವ
ತ್ವಕ್ಕು
ಜೀವ ಮತ್ತೆ ಮತ್ತೆ ಹೊಕ್ಕು
ಹೊರಳಿದ ಕುರುಹು
ಕಳಚಿ ಕೊಂಡಂತೆ ಏರುವ ಅರಿವ ಹರಹು
ಜಗಿದು ಅರೆದೂ
ಅರಗದೇ ಉಳಿದದ್ದು ವಿಷ
ಹಲ್ಲಡರಿ ಕೂತು ಹಾವು ನಾಗರ
ಮೆಟ್ಟಿ ಒತ್ತಿ ಹೊಡೆದು ಅಸ್ತಿತ್ವ
ಅಳಿಸಲೋಸುಗ ಬರುವ ಬುದ್ಧಿ ಭಾವಗಳ ಕುಕ್ಕಿ
ವಿಷವೇರಿಸುವಾತುರ
ಬುಸ್ಸ್…ಬುಸ್ಸ್…..ನಿಶ್ಯಬ್ಧ
ಬೆಚ್ಚಿಸೋ ಶಬ್ಧ
ಕಚ್ಚಿದೆಡೆ ಹಲ್ಲಿಳಿದು ವಿಷವಡರಿ ಜೀವ
ಜೀವವೇ ಸ್ತಬ್ಧ
..
ಹುತ್ತ ಬಿಟ್ಟ ಹಾವು
ಚಿತ್ತ ಹೊಕ್ಕಿತು ನೋಡ
ಹೊಕ್ಕ ಚಿತ್ತದೊಳು ಹುತ್ತ ಮೂಡಿತು ನೋಡ
ಚಿತ್ತದೊಳು ಹುತ್ತ
ಹುತ್ತದೊಳು ಹಾವು
ಹಾವಿನೊಳು ಚಿತ್ತ
ಚಿತ್ತದೊಳು ಹುತ್ತ
ಹುತ್ತದೊಳು ಹಾವು…
ಇನ್ನೆಷ್ಟು ಹಾವೋ
ಇನ್ನೆಷ್ಟು ವಿಷವೋ
ನೀಲಿಗಟ್ಟಿದೆ ಗುರುವೆನ್ನ ಕಂಠ
ನಿನ್ನಂತೆ ನಾನೂ ನೀಲಕಂಠ!
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ