- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ತೊದಲು ನುಡಿವ ಕಂದನನ್ನು
ಒಲ್ಲದ ಮನಸ್ಸಿಂದ ಪ್ರಿಸ್ಕೂಲಿಗೆ ಬಿಟ್ಟು
ಧಾವಂತದಿಂದ ಆಫೀಸಿಗೆ ಓಡುವಾಗ
ಹಳೇ ಸೀರೆ ಉಟ್ಟು ಶಾಲೆಗೆ
ಬಿಡಲು ಬರುತ್ತಿದ್ದ
ಅಮ್ಮ ನೆನಪಾಗುತ್ತಾಳೆ
ಡೈನಿಂಗು ಟೇಬಲ್ಲಿನ ಮೇಲೆ
ಹಬೆಯಾಡುತ್ತಿರುವ ತಿಂಡಿಯನ್ನಿಟ್ಟು
ಚೂರೇ ಚೂರು ಶುಂಠಿ ಹಾಕಿದ
ಚಹಾವನ್ನು ಆಸ್ವಾದಿಸಿಕೊಂಡು ಕುಳಿತಾಗ
ಅರ್ಧ ಆಯುಷ್ಯವನ್ನೇ
ಒಲೆಯ ಮುಂದೆ ಕಳೆದ
ಅಮ್ಮ ನೆನಪಾಗುತ್ತಾಳೆ
ಕುರ್ತ ಜೀನ್ಸುಗಳು, ಶರ್ಟು ಪ್ಯಾಂಟುಗಳು,
ಚೂಡಿದಾರ, ಸೀರೆಗಳೆಂದು
ಕಪಾಟಿನಲ್ಲಿ ಒಪ್ಪಓರಣವಾಗಿ
ಜೋಡಿಸಿಡುವಾಗ
ಅಪ್ಪ ತರುತ್ತಿದ್ದ ವರುಷಕ್ಕೆರಡು
ಸೀರೆಗಳನ್ನೇ ನಾಜೂಕಾಗಿ ಉಡುತ್ತಿದ್ದ
ಅಮ್ಮ ನೆನಪಾಗುತ್ತಾಳೆ
ವಿವಾಹ ವಾರ್ಷಿಕೋತ್ಸವದಂದು
ಸಂಗಾತಿ ಕೊಟ್ಟ ನೆಕ್ಲೇಸನ್ನು
ಕೊರಳಿಗೆ ಧರಿಸಿ ಕನ್ನಡಿ ನೋಡಿದಾಗ
ತವರಿಂದ ಕೊಟ್ಟ ಸರವನ್ನು
ಲೆಕ್ಕವಿಲ್ಲದಷ್ಟು ಸಲ ಗಿರವಿಗಿಟ್ಟು
ಕೊನೆಗೂ ತನ್ನದಾಗಿಸಿಕೊಂಡ
ಅಮ್ಮ ನೆನಪಾಗುತ್ತಾಳೆ
ತಿಂಗಳ ಮೊದಲ ವಾರ
ಸಂಬಳ ಬಂತೆಂದು ನೆನಪಿಸುವ
ಬ್ಯಾಂಕಿನ ಮೆಸ್ಸೇಜು ಓದುವಾಗ
ಯಾವತ್ತೋ ಒಮ್ಮೆ ದುಡ್ಡು ಬೇಕೆಂದಾಗ
ಅಪ್ಪನ ಎದುರು ದೈನೇಸಿಯಂತೆ ನಿಲ್ಲುತ್ತಿದ್ದ
ಅಮ್ಮ ನೆನಪಾಗುತ್ತಾಳೆ
ಇಂದು ಫೋಟೋದಲ್ಲಿ
ಧಾರಾಳವಾಗಿ ನಗುತ್ತಿರುವ ಅಮ್ಮ
ಅಂದು ನಿಜಕ್ಕೂ ನಗುತ್ತಿದ್ದಳೇ ಎಂಬ
ಪ್ರಶ್ನೆ ಅಕಾರಣವಾಗಿ ಮೂಡಿ
ಮರೆಯಾಗುತ್ತದೆ…
ಚಿತ್ರ ಕೃಪೆ- ಶುಚಿ ಕ್ರಿಶನ್
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ