- ಕನ್ನಡ ನಾಟ್ಕ ಇನ್ ತೆಲುಗು ದೇಶಂ ..! - ನವೆಂಬರ್ 22, 2023
- ಕನ್ನಡ ನಾಟ್ಯ ರಂಗ - ನವೆಂಬರ್ 21, 2023
- ಭವಿಷ್ಯದ ಔದ್ಯೋಗಿಕ ಕ್ಷೇತ್ರದಲ್ಲಿ ಕನ್ನಡಿಗರು - ನವೆಂಬರ್ 1, 2023
ದ್ವೀಪ ಸಮೂಹಗಳಿಂದಲೇ ನಿರ್ಮಿತವಾದ ಸ್ಟಾಕ್ ಹೋಂ ನಗರದ ಬಂದರಿನಿಂದ ಹತ್ತು ಅಂತಸ್ತಿನ ಒಂದು ದೊಡ್ಡ ಶಾಪಿಂಗ್ ಮಾಲ್ ಅನ್ನು ಹೋಲುವ ಒಂದು ಬೃಹತ್ ಹಡಗು ಬಾಲ್ಟಿಕ್ ಸಮುದ್ರದಲ್ಲಿ ನಿಧಾನಕ್ಕೆ ಚಲಿಸಲಾರಂಭಿಸಿತು. ಸಮುದ್ರ ಮಾರ್ಗದಲ್ಲಿ ಸಿಗುವ ಅನೇಕ ಚಿಕ್ಕ ಚಿಕ್ಕ ದ್ವೀಪಗಳನ್ನು ದಾಟಿ , ಸುಮಾರು ೨೨ ನಾಟಿಕಲ್ ವೇಗದಲ್ಲಿ (40 ಕಿಮಿ ಗಂಟೆಗೆ) ಸಾಗುತ್ತಿದ್ದ ಆ ಹಡಗಿನ ಹೆಸರು ಬಾಲ್ಟಿಕ್ ಕ್ವೀನ್. ಟಾಲಿನ್ ಎಂಬ ನಗರದ ಕಡೆಗೆ ನೂರಾರು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಡಗಿನಲ್ಲಿ ಇದ್ದವರಲ್ಲಿ ಕುಟುಂಬ ಸಮೇತ ನಾನೂ ಒಬ್ಬ. ಇಂತಹ ಹಡಗುಗಳಲ್ಲಿ ಬಾಲ್ಟಿಕ್ ಸಾಗರದಲ್ಲಿ ಅನೇಕ ಬಾರಿ ಪ್ರಯಾಣ ಕೈಗೊಂಡಿದ್ದೆನಾದರೂ ಆ ದಿನ ನಾನು ಉತ್ಸುಕನಾಗಿದ್ದು ಟಾಲಿನ್ ಭೇಟಿಗಾಗಿ. ಅಂದ ಹಾಗೆ ಟಾಲಿನ್ ನಗರ, ಈಸ್ಟೋನಿಯಾ ಎಂಬ ಪುಟ್ಟ ಸುಂದರ ಯುರೋಪಿಯನ್ ರಾಷ್ಟ್ರದ ರಾಜಧಾನಿ.
ಈಸ್ಟೋನಿಯಾ ದೇಶ ಒಂದು ಕಡೆಯಿಂದ ಸ್ವೀಡನ್ ಬದಿಯ ಬಾಲ್ಟಿಕ್ ಸಾಗರ ಹಾಗೂ ಫಿನ್ಲ್ಯಾಂಡ್ ನ ಕೊಲ್ಲಿಯಿಂದ ಆವೃತವಾಗಿದ್ದು ದಕ್ಷಿಣಕ್ಕೆ ಲಾಟ್ವಿಯಾ ಹಾಗೂ ಪೂರ್ವಕ್ಕೆ ರಷ್ಯಾದ ಗಡಿಭಾಗಕ್ಕೆ ಹೊಂದಿಕೊಂಡಿದೆ. ಕೆಲವು ವಾರಗಳ ಹಿಂದೆ ಭೇಟಿ ಕೊಟ್ಟಾಗ ರಷ್ಯಾ ಹಾಗೂ ಯುಕ್ರೇನ್ ಯುದ್ಧ ಮುಂದುವರೆದೇ ಇತ್ತು. ಸಾಲದ್ದಕ್ಕೆ, ನ್ಯಾಟೋ ಜೊತೆಗೆ ರಷ್ಯಾದ ಜಟಾಪಟಿ ಬೇರೆ. ಈಸ್ಟೋನಿಯಾ ನ್ಯಾಟೋ ಒಕ್ಕೂಟದ ಸದಸ್ಯನಾಗಿದ್ದು ರಷ್ಯಾದ ವಿರೋಧಿ ರಾಷ್ಟ್ರ. ಅಲ್ಲಿ ಯುದ್ಧದ ನೇರ ಪರಿಣಾಮ ಇಲ್ಲದಿದ್ದರೂ, ತೈಲ ಹಾಗೂ ಅನಿಲಗಳ ಬೆಲೆಗಳಲ್ಲಿ ಹೆಚ್ಚಿನ ಏರಿಕೆ ಆಗಿದ್ದು ಮಾತ್ರ ಹೌದು. ಈ ಸಮಯದಲ್ಲಿ ಕೂಡ ಈಸ್ಟೋನಿಯಾ ಪ್ರವಾಸಿಗರಿಗೆ ತೆರೆದಿದ್ದರಿಂದ ನಮ್ಮ ಪ್ರಯಾಣಕ್ಕೆ ಯಾವುದೇ ಧಕ್ಕೆ ಇರಲಿಲ್ಲ. ಅಚಾನಕ್ ಆಗಿ ರಷ್ಯಾದ ಕ್ಷಿಪಣಿಗಳು ನ್ಯಾಟೋ ಗೆ ಸೇರಿದ ಹಡಗಿನ ಮೇಲೆ ದಾಳಿ ನಡೆದರೆ ಮಾತ್ರ ಅದು ಬೇರೆ ವಿಷಯ. ಅಷ್ಟು ಬಿಟ್ಟರೆ, ಟಾಲಿನ್ ನಗರದ ಪ್ರಮುಖ ಆಕರ್ಷಣೆಗಳನ್ನು ನೋಡುವ ಉದ್ದೇಶ ಒಂದು ಕಡೆಯಾದರೆ, ಈಸ್ಟೋನಿಯಾದ ಇತಿಹಾಸ ಹಾಗೂ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಬಹುವಾಗಿ ಕೇಳಿದ್ದು ನನ್ನ ಹೆಚ್ಚಿನ ಆಸಕ್ತಿಗೆ ಕಾರಣವಾಗಿತ್ತು.
1991 ರಲ್ಲಿ ಸೋವಿಯತ್ ಒಕ್ಕೂಟ ವಿಭಜನೆಗೊಂಡು ಯುಕ್ರೈನ್, ಲಾಟ್ವಿಯಾ ,ಲಿಥುವೇನಿಯಾ, ತಾಜಕಿಸ್ತಾನ್ ಸೇರಿದಂತೆ ಸ್ವತಂತ್ರ ಗೊಂಡ ಹದಿನೈದು ರಾಷ್ಟ್ರಗಳಲ್ಲಿ ಒಂದು ಈ ಈಸ್ಟೋನಿಯಾ. ಕೇವಲ ೩೧ ವರ್ಷಗಳ ಹಿಂದೆ, ಸ್ವತಂತ್ರ ಗೊಂಡ ಹೊತ್ತಿನಲ್ಲಿ ಅಂಬ್ಯುಲೆನ್ಸ್ ಗಳಿಗೆ ಬೇಕಾದ ಇಂಧನ ಕೊಂಡುಕೊಳ್ಳುವಷ್ಟು ಕೂಡ ಗತಿಯಿಲ್ಲದ ಪುಟ್ಟ ದೇಶ ಇವತ್ತು ಪ್ರಪಂಚದಲ್ಲಿಯೇ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದು ಹೇಗೆ ಎಂಬುದೇ ಕೌತುಕದ ವಿಷಯ. ಅಲ್ಲಿನ ಮಾನವ ಅಭಿವೃದ್ಧಿ ಸೂಚ್ಯಂಕ ಕೂಡ ಉನ್ನತ ಮಟ್ಟದಲ್ಲಿ ಇರುವುದು ಈ ರಾಷ್ಟ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಲು ಕಾರಣ. ಅದು ಕೂಡ ಸಾಧ್ಯವಾಗಿದ್ದು ಕೇವಲ ಹದಿಮೂರು ಲಕ್ಷ ಜನ ಸಂಖ್ಯೆಯೊಂದಿಗೆ ಎಂದರೆ ಇನ್ನಷ್ಟು ಅಚ್ಚರಿಯಾದೀತು. ನಮ್ಮ ಭಾರತದ ಜಿಡಿಪಿ (GDP PPP ) ತಲಾದಾಯ ಎಂಟು ಸಾವಿರ ಡಾಲರಿನಷ್ಟು ಇದ್ದರೆ ಈಸ್ಟೋನಿಯಾದ್ದು ನಲವತ್ತ ನಾಲ್ಕು ಸಾವಿರದಷ್ಟು. ಆದರೆ ವಿಸ್ತಾರದಲ್ಲಿ ಕೇರಳಕ್ಕಿಂತ ಸ್ವಲ್ಪ ದೊಡ್ಡದು ಅಷ್ಟೇ.
ನಮ್ಮ ಹಡಗು ರಾತ್ರಿಯ ಸೂರ್ಯಾಸ್ತವನ್ನು ಕಣ್ಣಿಗೆ ತುಂಬಿಕೊಂಡು ವಿಶಾಲ ಸಾಗರದಲ್ಲಿ ಸರಾಗವಾಗಿ ಸಾಗುತ್ತಿತ್ತು. ಬೇಸಿಗೆಯ ಸಮಯದಲ್ಲಿ ನಿಮಗೆ ಬಾಲ್ಟಿಕ್ ಸಾಗರದಲ್ಲಿ ಆಗಾಗ ಖಾಸಗಿ ಬೋಟುಗಳು, ಸ್ಟೀಮರ್ ಗಳು, ಹಾಯಿ ದೋಣಿ, ನಾವೆಗಳು ಯಥೇಚ್ಚವಾಗಿ ಕಾಣ ಸಿಗುತ್ತದೆ. ಜೊತೆಗೆ ಬೃಹತ್ ಕ್ರೂಸ್ ನಂತಹ ಹಡಗುಗಳು. ಇಂತಹ ಹಡಗುಗಳಲ್ಲಿ ಹೆಚ್ಚು ಕಮ್ಮಿ ಒಂದು ಸಾವಿರದಷ್ಟು ವಸತಿಯ ಕ್ಯಾಬಿನ್ ಗಳು, ಸೂಪರ್ ಮಾರ್ಕೆಟ್,ಡ್ಯುಟಿ ಫ್ರೀ ಮದ್ಯದಂಗಡಿಗಳು,ರೆಸ್ಟೋರೆಂಟ್ ಗಳು, ಮಕ್ಕಳ ಆಟದ ಕೋಣೆಗಳು, ಮನರಂಜನೆ, ಸಂಗೀತ ದಿಂದ ಹಿಡಿದು ಎಲ್ಲ ತರದ ಸೌಲಭ್ಯಗಳೂ ಇರುವುದರಿಂದ ಪ್ರಯಾಣ ಎಂದಿಗೂ ಬೇಸರವೆನಿಸುವುದಿಲ್ಲ. ಹಡಗಿನ ಎತ್ತರದ ಭಾಗದಲ್ಲಿ ಹೋಗಿ ನಿಂತರೆ ಭವ್ಯ ನೀಲಿ ಆಕಾಶ, ಅದೇ ಬಣ್ಣದ ಸಾಗರ, ಅವೆರಡರ ನಿಗರ್ವಿ ವೈಶಾಲ್ಯತೆಗಳು ಕಾಲವನ್ನು ಸ್ಥಗಿತಗೊಳ್ಳುವಂತೆ ಮಾಡುತ್ತವೆ. ಆಗಾಗ ದೂರದಲ್ಲಿ ಕಾಣುವ ಹಸಿರು ಮರಗಳಿಂದಾವೃತ ದ್ವೀಪಗಳು,ಕ್ಷಿತಿಜದಂಚಲ್ಲಿ ಕೆಂಪು ಸೂರ್ಯಾಸ್ತ, ಮೇಲೆ ಮೋಡದ ಮುದ್ದೆಗೂ ಅದೇ ಬಣ್ಣದ ಎರಕ ಎಲ್ಲವೂ ಬೇರೆಯದೇ ಲೋಕದಲ್ಲಿ ನಮ್ಮನ್ನು ವಿಹರಿಸುವಂತೆ ಮಾಡುತ್ತದೆ. ವಿಸ್ಮಯದ ಸೃಷ್ಟಿಯ ಅಗಾಧತೆ, ಮೂಲದೊಟ್ಟಿಗೆ ಸಂಬಂಧ ಕಡಿದುಕೊಂಡ ನಮ್ಮನ್ನು ಮತ್ತೆ ಮರಳಿಸುವ ಹಿತಾನುಭವ ನೀಡುತ್ತದೆ. ಇಂಥವೆಲ್ಲ ನಮಗೆ ನಗರದ ಡಿಜಿಟಲ್ ಲೋಕದಲ್ಲಿ ನಿತ್ಯ ಕಾಣಸಿಗುವುದಲ್ಲ ಬಿಡಿ.
ಅಂತೂ ಬಾಲ್ಟಿಕ್ ಕ್ವೀನ್ ಬೆಳಗಿನ ಹತ್ತರ ಸುಮಾರಿಗೆ ಟಾಲಿನ್ ನ ಬಂದರನ್ನು ತಲುಪಿತು. ಅಲ್ಲಿಂದ ಹಾಪ್ ಎನ್ ಹಾಪ್ ಎಂಬ ತೆರೆದ ಪ್ರವಾಸಿ ಬಸ್ ಮೂಲಕ ಟಾಲಿನ್ ಸುತ್ತಲು ಅನುವಾದೆವು.
ಬಸ್ಸು ನಮ್ಮನ್ನು ಇಳಿಸಿದ ಮೊದಲ ನಿಲ್ದಾಣದಕ್ಕೆ ತಾಕಿಕೊಂಡೆ ಒಂದು ಬೃಹತ್ ಗೋಡೆ ಗೋಚರಿಸುತ್ತದೆ. ದಪ್ಪ ದಪ್ಪ ಸುಣ್ಣದ ಕಲ್ಲುಗಳಿಂದ ನಿರ್ಮಿತವಾದ ಒಂದು ದೈತ್ಯ ಕೋಟೆ ಅದು. ಇಲ್ಲಿಯ ಪ್ರತಿ ಕಲ್ಲಿಗೂ ಹದಿಮೂರನೇ ಶತಮಾನದಲ್ಲಿ ಓಡಾಡಿಕೊಂಡಿದ್ದ ಮನುಷ್ಯರನ್ನು ಕಂಡ ನೆನಪಿದೆ. ಅವು ತಮ್ಮ ಮೇಲೆ ಚೆಲ್ಲಿದ ಕೋಟೆ ಕಟ್ಟುವವರ ಬೆವರ ಹನಿಗಳನ್ನು ಹೀರಿ ಇಂಗಿಸಿಕೊಂಡಿವೆ. ವರ್ತಮಾನ ಇತಿಹಾಸವಾಗುವ ಗಳಿಗೆಗಳನ್ನು ನೋಡುತ್ತಾ ಇದೀಗ ೨೧ ನೆಯ ಶತಮಾನದ ಮೊಬೈಲ್ ಹಿಡಿದು ಬರುವವರನ್ನು ಕಣ್ಣರಳಿಸಿ ನೋಡುತ್ತಿವೆ.
ಇದು ೮೦೦ ವರ್ಷಗಳ ಹಿಂದೆ ಜರ್ಮನ್ ಖಡ್ಗಧಾರಿ ಸರದಾರರು ಕಟ್ಟಿದ ಟೂಂಪಿಯಾ ಕೋಟೆ. ಟೂಂಪಿಯಾ ಗುಡ್ಡದ ಮೇಲೆ ಇದ್ದಕ್ಕಾಗಿ ಆ ಹೆಸರು.
ಮುಂದೆ ಹದಿನೆಂಟನೆಯ ಶತಮಾನದ ಹೊತ್ತಿಗೆ ರಷ್ಯನ್ನರು ಇದರ ಮುಂಭಾಗಕ್ಕೆ ಹೊಂದಿಕೊಂಡಂತೆ ನಸುಗುಲಾಬಿ ಬಿಳಿ ಬಣ್ಣ ಬಳಸಿ ಇಟಲಿಯ ಬರೊಕೆ ಶೈಲಿಯಲ್ಲಿ ಒಂದು ಅರಮನೆ ಕಟ್ಟುತ್ತಾರೆ. ಅದನ್ನೇ ಇವತ್ತು ಈಸ್ಟೋನಿಯಾದ ಪಾರ್ಲಿಮೆಂಟ್ ಆಗಿ ಬಳಸಲಾಗುತ್ತಿದೆ. ರಿಜಿಕೊಗು ಎಂದು ಕರೆಯಲ್ಪಡುವ ಈ ಪಾರ್ಲಿಮೆಂಟ್ ನ ಮೇಲೆ ನೀಲಿ, ಕಪ್ಪು, ಬಿಳಿಯ ತ್ರಿವರ್ಣ ಧ್ವಜ ಅಂದು ಕೂಡ ಹಾರಾಡುತ್ತಿತ್ತು. ದೇಶದಲ್ಲಿ ಪ್ರಜಾಪ್ರಭುತ್ವವಿದೆ.
ಕೋಟೆಗೆ ತಾಗಿಯೇ ಇರುವ ೨೧೫ ಮೆಟ್ಟಿಲುಗಳ ಎತ್ತರದ ಟಾಲ್ ಹರ್ಮನ್ ಎನ್ನುವ ವೀಕ್ಷಣಾ ಗೋಪುರ ಹಾಗೂ ಅದರ ನೆತ್ತಿಯ ಮೇಲೆ ಹಾರಾಡುವ ರಾಷ್ಟ್ರಧ್ವಜ ಹಾರಾಡುವುದನ್ನು ಕಾಣಬಹುದು.
ಅಲೆಕ್ಸಾಂಡರ್ ನೆವ್ಸ್ಕಿ ಕ್ಯಾಥೆಡ್ರಲ್
ಪಾರ್ಲಿಮೆಂಟ್ ಗೆ ಎದುರಾಗಿ ಒಂದು ಭವ್ಯ ರಷ್ಯನ್ ಸಂಪ್ರದಾಯದ ಅಲೆಕ್ಸಾಂಡರ್ ನೆವ್ಸ್ಕಿ ಕ್ಯಾಥೆಡ್ರಲ್ (ಬಿಷಪ್ ಗಳು ನಡೆಸುವ ಆರಾಧನಾ ಮಂದಿರ ) ಒಂದಿದೆ. ಅದು ರಷ್ಯಾದ ಅರಸರ ಆಳ್ವಿಕೆಯ ಕಾಲ. ಇದನ್ನು ೧೮೯೪ ಮತ್ತು ೧೯೦೦ ರ ನಡುವೆ ಮಿಖಾಯಿಲ್ ಪ್ರಿಯೋಬ್ರಾಜ್ಹೆನ್ಸ್ಕಿ ಎಂಬ ರಷ್ಯನ್ ವಾಸ್ತುಯೋಜಕ ವಿನ್ಯಾಸಗೊಳಿಸಿದ್ದ. ಸುಂದರ ಅಲಂಕೃತ ಈ ಕ್ಯಾಥೆಡ್ರಲ್ ಗೆ ೫ ಈರುಳ್ಳಿಯಾಕೃತಿಯ ಗೋಪುರಗಳಿದ್ದು, ಹನ್ನೊಂದು ಬೃಹತ್ ಗಂಟೆಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ ಅತೀ ದೊಡ್ಡ ಗಂಟೆಯ ತೂಕವೇ ಹದಿನಾರು ಟನ್ ಗಳಷ್ಟು ಇದ್ದು ಎಲ್ಲವನ್ನೂ ಸೈಂಟ್ ಪೀಟರ್ಸ್ ಬರ್ಗ್ ನಿಂದ ಎರಕ ಹೊಯ್ದು ಮಾಡಿಸಿ ತಂದಂತವುಗಳು. ನೆಲ ಫಿನ್ಲ್ಯಾಂಡ್ ಗ್ರಾನೈಟ್ ಗಳಿಂದ ಮಾಡಲಾಗಿದೆ. ಬಣ್ಣದ ಗಾಜಿನ ಕಿಡಕಿಗಳು, ಒಳಭಾಗದ ಮರದ ಪೆಟ್ಟಿಗೆಗಳ ಅಲಂಕಾರ ಎದ್ದು ತೋರುತ್ತವೆ.
ಈ ಮುಂಚೆ ಒಮ್ಮೆ ೧೯೧೮ ರಲ್ಲಿ ಕೂಡ ಮೊದಲ ಜಾಗತಿಕ ಯುದ್ಧ ಮುಗಿದು ಈಸ್ಟೋನಿಯಾ ಸ್ವಾತಂತ್ರ್ಯ ಘೋಷಿಸಿಕೊಂಡಾಗ ರಷ್ಯಾದ ಅತಿಕ್ರಮಣದ ಪ್ರತೀಕವಾಗಿ ಈ ಕ್ಯಾಥೆಡ್ರಲ್ ಅನ್ನು ನಿರ್ನಾಮ ಮಾಡುವ ಬಗ್ಗೆ ಪ್ರಸ್ತಾಪ ಇತ್ತಾದರೂ ಅದಕ್ಕೆ ಬೇಕಾಗಿರುವ ಅರ್ಥಿಕ ನಿಧಿ ಆ ಸಮಯದಲ್ಲಿ ಲಭ್ಯವಿಲ್ಲದ್ದರಿಂದ ಅದನ್ನು ನೆಲಸಮ ಮಾಡುವ ಕಾರ್ಯ ಕೈಗೂಡಲೇ ಲ್ಲ.
ಪುರಾತನ ಪಟ್ಟಣ
ಅಂತೆಯೇ ಟೂಂಪಿಯಾ ಗುಡ್ಡದಿಂದ ಕೆಳಗೆ ಇಳಿಯುತ್ತಲೇ ಎದುರಾದದ್ದು ಸಾವಿರ ವರ್ಷಗಳ ಇತಿಹಾಸ ಇರುವ ಒಂದು ಪುರಾತನ ಪಟ್ಟಣದ ಜಾಗಕ್ಕೆ. ಹದಿಮೂರನೆಯ ಶತಮಾನದಲ್ಲಿ ನಿರ್ಮಿತಗೊಂಡಿದ್ದ ಈ ಪ್ರದೇಶ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮಧ್ಯಕಾಲೀನ ಯುಗದ ವ್ಯಾಪಾರಿಗಳಿಗೆ ಸೇರಿದ್ದ ಸುಂದರ ವಿನ್ಯಾಸದ ಎತ್ತರದ ಮನೆಗಳು, ದಾಸ್ತಾನು ಮಳಿಗೆಗಳು, ಪುರಾತನ ಚರ್ಚುಗಳು ಮತ್ತು ಕಲ್ಲು ಹಾಸುಗಳಿಂದ ನಿರ್ಮಿತ ಸುಸಜ್ಜಿತ ಬೀದಿಗಳನ್ನು ಈಗಲೂ ಕಾಣಬಹುದು.
ಅಲ್ಲಿನ ಪುರ ಸಭೆಯ ಚೌಕದಲ್ಲಿ ವಿದೇಶಗಳಲ್ಲಿ ಸಾಧನೆಗೈದು ಬಂದವರನ್ನು ಅಭಿನಂದಿಸುವ ಪದ್ಧತಿ ಇತ್ತು. ಪ್ರತಿ ವರ್ಷ ನವೆಂಬರ್ ಮಧ್ಯದ ಸುಮಾರಿಗೆ ಎತ್ತರದ ಕ್ರಿಸ್ಮಸ್ ಮರವನ್ನು ನೆಡಲಾಗುತ್ತದೆ. ಅದೇ ವೇಳೆಯಲ್ಲಿ ಪ್ರಸಿದ್ಧ ಕ್ರಿಸ್ಮಸ್ ಮಾರುಕಟ್ಟೆ ಇಡುವುದನ್ನು ಕಾಣಬಹುದು.
೧೬೫೫ ರಲ್ಲಿ ದಾಸ್ತಾನು ಮಳಿಗೆಯಾಗಿದ್ದ ಇದೇ ಕಟ್ಟಡ ಇಂದು ೨೦೨೨ ರಲ್ಲಿ ನನ್ನ ಕ್ಯಾಮೆರಾಕ್ಕೆ ಸೆರೆಯಾದ ಗಳಿಗೆ.
ಕಾಡ್ರಿಯೋರ್ಗ್ ಪಾರ್ಕ್
ಟಾಲಿನ್ ನಲ್ಲಿ ಭೇಟಿ ಕೊಡಬಹುದಾದ ಇನ್ನೊಂದು ಸ್ಥಳ ಕಾಡ್ರಿಯೋರ್ಗ್ ಪಾರ್ಕ್. ಸುಂದರ ಹಸಿರು ಬನರಾಶಿಯಿಂದ ಆವೃತವಾಗಿರುವ ಈ ಉದ್ಯಾನವನದಲ್ಲಿ ಕೂಡ ರಷ್ಯಾದ ಪ್ರಭಾವವನ್ನು ಕಾಣಬಹುದು. ರಷ್ಯಾದ ಝಾರ್ ಆಗಿದ್ದ ಪೀಟರ್ ಮಹಾಶಯ ತನ್ನ ಹೆಂಡತಿ ಕಾಥರಿನ್ ಗಾಗಿ ೧೭೧೮ ರಲ್ಲಿ ಕಟ್ಟಿಸಿದ ಒಂದು ಅರಮನೆಯನ್ನು ಅಲ್ಲಿ ಕಾಣಬಹುದಾಗಿದೆ.
(ಕಾಡ್ರಿಯೋರ್ಗ್ ಅರಮನೆ )
ಸಮೀಪದಲ್ಲಿಯೇ, ಕುಮು ಕಲಾ ಸಂಗ್ರಹಾಲಯವನ್ನೂ ಕಾಣಬಹುದು. ಕಾಡ್ರಿಯೋರ್ಗ್ ಪಾರ್ಕ್ ನಲ್ಲಿ ಇರುವ ಇನ್ನೊಂದು ವಿಶೇಷ ರುಸಾಲ್ಕಾ ಸ್ಮಾರಕ. ೧೮೯೩ ರಲ್ಲಿ ಫಿನ್ಲ್ಯಾಂಡ್ ನತ್ತ ಸಾಗುತ್ತಿದ್ದ ರುಸಾಲ್ಕಾ ಎಂಬ ಯುದ್ಧ ನೌಕೆ ಸಮುದ್ರದಲ್ಲಿ ಮುಳುಗಿ ತೀರಿಕೊಂಡವರ ನೆನಪಿಗಾಗಿ ಈ ಸ್ಮಾರಕ ನಿರ್ಮಾಣಗೊಂಡಿದೆ. ಒಬ್ಬ ದೇವದೂತೆ ಶಿಲುಬೆ ಹಿಡಿದು ನೌಕೆ ಮುಳುಗಿದ ಕಡೆಗೆ ತೋರಿಸುವ ಕಂಚಿನ ಪುತ್ತಳಿ ಒಂದು ವಿಶೇಷ ಆಕರ್ಷಣೆ.
ಪುರಾತನ ನಗರದಿಂದ ಅನತಿ ದೂರದ ಹಚ್ಚ ಹಸಿರು ಜಾಗದಲ್ಲಿ ಪುರಾತನ ಕಾಲದ ಔಷಧಾಲಯವನ್ನು ನೋಡಬಹುದು. ಕೌಟುಂಬಿಕವಾಗಿ ಸುಮಾರು ಹತ್ತು ಪೀಳಿಗೆಗಳಿಂದ ನಡೆಸಿಕೊಂಡು ಬಂದಿರುವ ಯೂರೋಪಿನ ಅತ್ಯಂತ ಪ್ರಾಚೀನ ಮತ್ತು ಇಂದಿಗೂ ನಡೆಯುತ್ತಿರುವ ಗಿಡ ಮೂಲಿಕೆಗಳ ವೈದ್ಯಾಲಯ ಇದಾಗಿದೆ. ರಷ್ಯಾದ ಝಾರ್ ದೊರೆಗಳು ಕೂಡ, ರೀಪ್ ಟೀಕ್ ಅಥವಾ ಪುರಸಭಾ ಔಷಧಾಲಯ ಎಂದು ಕರೆಯಲ್ಪಡುವ ಇಲ್ಲಿಂದಲೇ ತಮಗೆ ಬೇಕಾದ ಔಷಧಿಗಳನ್ನು ತರಿಸಿಕೊಳ್ಳುತ್ತಿದ್ದರಂತೆ. ತಲೆ ನೋವಿಗೆ ಉಪಯೋಗಿಸುವ ಒಂದು ವಿಶಿಷ್ಟ ಕೆಂಪು ವೈನ್ ಹಾಗೂ ಮಾರ್ಜಿಪನ್ ನಿಂದ ಮಾಡಿದ ದ್ರವ್ಯಗಳನ್ನು ಒಳಗೊಂಡಂತೆ ಹದಿನೇಳನೆ ಶತಮಾನದ ಔಷಧಿಗಳು ಇಂದಿಗೂ ಖರೀದಿಗೆ ದೊರಕುತ್ತದೆ. ಈ ಹಳೆಯ ವೈದ್ಯ ಶಾಲೆಗಳ ಸಂಕೇತ ಒಂದು ಬಟ್ಟಲಿನಲ್ಲಿ ಸುತ್ತಿಕೊಂಡ ಹಾವು.
ಬಯಲು ಸಂಗ್ರಹಾಲಯ
ಈಸ್ಟೋನಿಯಾದ ಜನ ಜೀವನ, ವೇಷ ಭೂಷಣ, ಸಂಸ್ಕೃತಿ, ಕರ ಕುಶಲ ಹಾಗೂ ವೃತ್ತಿ ಜೀವನವನ್ನು ಬಿಂಬಿಸುವ ಬಯಲು ಸಂಗ್ರಹಾಲಯವನ್ನು ಇಲ್ಲಿ ಕಾಣಬಹುದು.
ವೈಕಿಂಗ್ ಸಾಂಪ್ರದಾಯಿಕ ದಿರಿಸಿನಲ್ಲಿ ಓರ್ವ ಈಸ್ಟೋನಿಗ
ಸಮುದ್ರ ತೀರದ ಮೀನುಗಾರಿಕಾ ಶೆಡ್ ಗಳು, ಗಾಳಿ ಯಂತ್ರ ಇತ್ಯಾದಿಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಕಾಡಿನ ಅಣಬೆಗಳಿಂದ ತಯಾರಿಸಿದ ರುಚಿಕರ ಸೂಪ್, ಹೆರಿಂಗ್ ಮೀನಿನ ಸಲಾಡ್, ಚೀಸ್ ಹಾಗೂ ನವಿಳುಕೋಸಿನಿಂದ ಮಾಡುವ, ಬೇಯಿಸಿ ಹಿಂಡಿದ ಮಾಂಸ ಹಾಗೂ ಆಲೂಗಡ್ಡೆಯಿಂದ ಮಾಡಿದ ವಿಭಿನ ಆಹಾರ ಪ್ರಕಾರಗಳನ್ನು ಸವಿಯುವ ಅವಕಾಶ ಇಲ್ಲಿ ಉಂಟು. ಪ್ರಸಿದ್ಧ ಕಾಲೇವ್ ಚಾಕೊಲೆಟ್ ಅಂಗಡಿಯಲ್ಲಿ ಸವಿಯಾದ ಬಾದಾಮಿ ಹಾಗೂ ಸಕ್ಕರೆಯಿಂದ ತಯಾರಿಸಿದ ಮಾರ್ಜಿಪಾನ್ ಅನ್ನು ಸವಿಯಬಹುದು.
ಟಿವಿ ಗೋಪುರ
ಟಾಲಿನ್ ನಲ್ಲಿ ನೋಡಲೇಬೇಕಾದ ಇನ್ನೊಂದು ವಿಶೇಷ ಆಕರ್ಷಣೆ ಟಿವಿ ಟವರ್ (ಟಿವಿ ಗೋಪುರ). ಬರೋಬ್ಬರಿ ೩೧೪ ಮೀಟರ್ ಗಳಷ್ಟು ಎತ್ತರದ ಗೋಪುರ ಬಾನಿನ ಮುಗಿಲುಗಳಿಗೆ ನಿಲುಕುವಷ್ಟು ಎತ್ತರ. ವೇಗದ ಲಿಫ್ಟ್ ನಲ್ಲಿ ಹೋದರೆ ಕೂಡ ೪೯ ಸೆಕಂಡ್ ಆದರೂ ಬೇಕು. ಇದನ್ನು ನಿರ್ಮಿಸಿದ್ದು ೧೯೮೦ ರ ಮಾಸ್ಕೋ ಒಲಿಂಪಿಕ್ಸ್ ಗಾಗಿ. ಆಗಿನ ಸೋವಿಯತ್ ಒಕ್ಕೂಟದಲ್ಲಿದ್ದ ಕಾಲದಲ್ಲಿ ಈಸ್ಟೋನಿಯದಲ್ಲಿ ಬೋಟುಗಳಿಗೆ ಸಂಬಂಧ ಪಟ್ಟ ಸ್ಪರ್ಧೆಗಳನ್ನು ಏರ್ಪಡಿಸಲು ಯೋಜಿಸಿದ್ದರ ಫಲವಾಗಿ ದೂರ ದರ್ಶನದ ಸಂಕೇತಗಳನ್ನು ಉತ್ತಮ ಮಟ್ಟದಲ್ಲಿ ಪ್ರಸಾರಿಸಲು ಇದನ್ನು ನಿರ್ಮಿಸಲಾಗಿತ್ತು. ಅಷ್ಟು ಎತ್ತರಕ್ಕೆ ತಲುಪಿ ಕೆಳಗೆ ಸುತ್ತ ನೋಡುವುದು ಎಂದರೆ ಸಾಹಸ ಹಾಗೂ ವಿಶೇಷ ಅನುಭವವೇ ಸರಿ.ಪ್ರಕೃತಿ ಸೌಂದರ್ಯದ ನಾಡು
ನಮ್ಮ ಭೇಟಿ ಕೇವಲ ಟಾಲಿನ್ ಗೆ ಸೀಮಿತವಾಗಿತ್ತದರೂ ಹಾಗೆ ನೋಡಿದರೆ ಪೂರ್ತಿ ಈಸ್ಟೋನಿಯ ಐವತ್ತು ಪ್ರತಿಶತ ಕಾಡಿನಿಂದಲೇ ಕೂಡಿದ್ದು ಪ್ರಕೃತಿ ಸೌಂದರ್ಯ ಎಲ್ಲೆಡೆಗೂ ಕಾಣಬಹುದು. ರಾಷ್ಟ್ರೀಯ ಉದ್ಯಾನವನಗಳು, ಸರೋವರಗಳು, ದ್ವೀಪಗಳು, ಪರ್ವತಗಳು ಹಾಗೂ ಜಲಪಾತಗಳಿಗೆ ಅಷ್ಟೇ ಅಲ್ಲದೇ ರಮಣೀಯ ಬೀಚುಗಳಿಗೆ ಕಮ್ಮಿಯೇನಿಲ್ಲ. ಇನ್ನೊಂದು ವಿಶೇಷ ಎಂದರೆ ಈಸ್ಟೋನಿಯಾದ ದೊಡ್ಡ ದ್ವೀಪವಾದ ಸಾರೆಮಾದಲ್ಲಿನ ೩೫೦೦ ವರ್ಷಗಳ ಹಿಂದೆ ಬ್ರಹ್ಮಾಂಡದಿಂದ ಬಂದ ಧೂಮಕೇತುಗಳು ಬಡಿದು ಉಂಟಾದ ಒಂದು ಹೊಂಡ. ಇಂದಿಗೂ ನೀರು ಕಮ್ಮಿಯಾದಾಗ ಆ ಹೊಂಡ ಉಂಟುಮಾಡಿದ ಧೂಮಕೇತುವಿನ ತುಂಡನ್ನು ಕಾಣಬಹುದು.
ಈಸ್ಟೋನಿಯಾದ ಉತ್ತರಕ್ಕೆ ಟುಹಾಲ ಎಂಬ ಹಳ್ಳಿಯಲ್ಲಿ ಮೂರು ಸಾವಿರ ವರ್ಷಕ್ಕೂ ಹಿಂದೆ ಮನುಷ್ಯರು ಇದ್ದ ಅನೇಕ ಕುರುಹುಗಳು,ಧಾರ್ಮಿಕ ನಂಬಿಕೆಯ ಕಲ್ಲುಗಳನ್ನು ಇಂದಿಗೂ ಕಾಣಬಹುದಾಗಿದೆ. ಅಲ್ಲಿನ , ಮಾಟಗಾತಿಯ ಬಾವಿ ಎಂದು ಜನಪದದಲ್ಲಿ ಕರೆಯಲ್ಪಡುವ ಸ್ಥಳದಲ್ಲಿ ಚಪ್ಪಟೆ ಕಲ್ಲಿನ ಮೇಲೆ ನೈಸರ್ಗಿಕವಾಗಿ ನೀರು ಉಕ್ಕೇರುವ ರೀತಿಯನ್ನು ನೋಡಲು ಅನೇಕ ಪ್ರವಾಸಿಗರು ಬರುತ್ತಾರೆ.
ಇಂಥಹ ಸಾಂಸ್ಕೃತಿಕ, ಪ್ರಾಕೃತಿಕ ಸಂಪಧ್ಭರಿತ ಈಸ್ಟೋನಿಯಾ ದೇಶ ಕಳೆದ ಸಾವಿರ ವರ್ಷಗಳಲ್ಲಿ ಸುತ್ತ ಮುತ್ತಲಿನ ಅನೇಕ ಆಳರಸರ ದಾಳಿಗೆ, ಆಳ್ವಿಕೆಗೆ ಒಳಗಾಗಿತ್ತು. ಪ್ರಮುಖವಾಗಿ, ಡೆನ್ಮಾರ್ಕಿನ ಡೇನರ, ಸ್ವೀಡ್ನನ್ನಿನ ಅರಸರ, ಆ ನಂತರ ರಷ್ಯಾದ ನಿಯಂತ್ರಣದಲ್ಲಿ ಈಸ್ಟೋನಿಯಾ ಒಳಪಟ್ಟಿತ್ತು. ಕ್ರಿಶ್ಚಿಯನ್ ಮತ ಬರುವುದಕ್ಕೆ ಮುಂಚೆ ಇಲ್ಲಿ ವೈಕಿಂಗ್ ಹಾಗೂ ಪೇಗನ್ ಸಂಸ್ಕೃತಿ ಚಾಲ್ತಿಯಲ್ಲಿತ್ತು. ಆದರೆ ಇಂದಿನ ಈಸ್ಟೋನಿಯನ್ನರು ಯಾವುದೇ ಧರ್ಮ ದೇವರುಗಳಿಗೆ ಜೀವನದಲ್ಲಿ ಪ್ರಾಮುಖ್ಯತೆ ಕೊಡುವುದಿಲ್ಲ. ಇತಿಹಾಸ ಏನೇ ಇರಲಿ, ವರ್ತಮಾನ ಹಾಗೂ ಭವಿಷ್ಯದತ್ತ ಯೋಚಿಸುವ, ಯೋಜಿಸುವ ನಾಗರಿಕತೆ ಹೇಗೆ ಸುಭಿಕ್ಷವಾಗಿ, ನೆಮ್ಮದಿಯಾಗಿ ಇರಬಲ್ಲುದು ಎಂಬುದಕ್ಕೆ ಈಸ್ಟೋನಿಯಾ ಒಂದು ಜ್ವಲಂತ ಉದಾಹರಣೆ. ಅಭಿವೃದ್ದಿ ಎಂದ ಮಾತ್ರಕ್ಕೆ, ಅಲ್ಲಿನ ಜನರು ಇವತ್ತಿಗೂ ಪ್ರಕೃತಿಯೊಂದಿಗಿನ ಒಡನಾಟವನ್ನು ಎಂದೂ ತೊರೆದಿಲ್ಲ ಎಂಬುದನ್ನು ಗಮನಿಸಬೇಕು.
ಶಾಂತಿ ಸುಭೀಕ್ಷೆಯ ದೇಶ
೩೧ ವರ್ಷಗಳ ಹಿಂದೆಯಷ್ಟೇ ಸೋವಿಯತ್ ಒಕ್ಕೂಟದಿಂದ ಸ್ವತಂತ್ರ ಗೊಂಡ ನಂತರ ದೇಶ ಪ್ರಗತಿಯತ್ತ ದಾಪುಗಾಲು ಹಾಕಿತು. ೯೯ ಪ್ರತಿಶತ ಆಡಳಿತ ಸೇವೆಗಳು ಒಆನ್ಲೈನ್ ಆಗಿರುವ ಒಂದು ದೇಶ ಜಗತ್ತಿನಲ್ಲಿ ಇದ್ದರೆ ಅದು ಈಸ್ಟೋನಿಯಾ ಎಂದು ಹೇಳಬಹುದು. ಇಲ್ಲಿ ಚುನಾವಣೆ ಕೂಡ ಒನ್ಲೈನ್ ವೋಟಿಂಗ್ ಮೂಲಕವೇ ನಡೆಯುತ್ತದೆ. ಇಂದಿನ ಅಧ್ಯಕ್ಷ ಒಬ್ಬ ಬಯೋ ವಿಜ್ಞಾನಿ ಹಾಗೂ ಓರ್ವ ಮಹಿಳೆ ದೇಶದ ಪ್ರಧಾನಿ.ತಂತ್ರಜ್ಞಾನದ ನವೋದ್ಯಮಗಳು ತ್ವರಿತ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹುಟ್ಟಿಕೊಳ್ಳುತ್ತಿವೆ. ಒಂದಲ್ಲ ಎರಡಲ್ಲ, ಸ್ಕೈಪ್, ಬೋಲ್ಟ್, ಟ್ರಾನ್ಸ್ ಪರ್ ವೈಸ್ ಸೇರಿದಂತೆ ಹತ್ತು ಯುನಿಕಾರ್ನ್ ಗಳು ಈ ಚಿಕ್ಕ ಹದಿಮೂರು ಲಕ್ಷ ಒಟ್ಟು ಜನಸಂಖ್ಯೆಯ ದೇಶದಲ್ಲಿ ಸೃಷ್ಟಿಯಾಗಿವೆ ಎಂದರೆ ಅಚ್ಚರಿಯಾದೀತು. ಸೈಬರ್ ಸೆಕ್ಯುರಿಟಿ ಹಾಗೂ ಈ ಗವರ್ನನ್ಸ್ ನಲ್ಲಿ ಜಗತ್ತಿನಲ್ಯೇ ಮಂಚೂಣಿಯಲ್ಲಿರುವ ದೇಶ . ಸುಮಾರು ೭೦ ಪ್ರತಿಶತ ಈಸ್ಟೋನ್ನಿಗರು ಹಾಗೂ ೨೯ ಪ್ರತಿಶತ ರಷ್ಯನ್ನರು ಇರುವ ದೇಶದಲ್ಲಿ ಪ್ರಗತಿಯ ಕೆಲಸವಷ್ಟೇ ಸಾಗುತ್ತಿದ್ದು, ಯಾವುದೇ ರಾಜಕೀಯ, ಭ್ರಷ್ಟಾಚಾರ, ಇಲ್ಲವೇ ಐತಿಹಾಸಿಕ, ಧಾರ್ಮಿಕ ದ್ವೇಷಗಳಿಗೆ ಆಸ್ಪದ ಇಲ್ಲದ್ದು ಅನುಕರಣೀಯ. ಟಾಲಿನ್ ಭೇಟಿ ಮುಗಿಸಿ, ನಮ್ಮ ಬಾಲ್ಟಿಕ್ ಕ್ವೀನ್ ಹಡಗು ಇದೀಗ ಸ್ಟಾಕ್ ಹೋಮಿನತ್ತ ಬಂದ ಹುರುಪಿನಿಂದಲೇ ಹಿಂದಿರುಗತೊಡಗಿತು. ಟಾಲಿನ್ ನ ಭೇಟಿಯ ಸ್ಮರಣಿಕೆಗಾಗಿ ಕೊಂಡುಕೊಂಡ ಒಂದು ಲೋಹದ ಗಂಟೆ ಮಾತ್ರ ಇಂದಿಗೂ ಮಧುರ ಸದ್ದುಗಳನ್ನು ಹೊರಡಿಸುತ್ತ ಈಸ್ಟೋನಿಯಾದ ನೆನಪುಗಳನ್ನು ಕೆದಕುವ ಪ್ರಯತ್ನ ಆಗಾಗ ಮಾಡುತ್ತಿರುತ್ತದೆ..
ಹೆಚ್ಚಿನ ಬರಹಗಳಿಗಾಗಿ
ದಡಗ ಗ್ರಾಮದ ಇತಿಹಾಸ
ಅರಿಶಿನಗುಂಡಿ ಜಲಪಾತ
ಟಿಬೆಟಿಯನ್ ಕ್ಯಾಂಪಿಗೆ ಭೇಟಿ