ಇತ್ತೀಚಿನ ಬರಹಗಳು: ಡಾ. ಪ್ರೀತಿ ಕೆ.ಎ. (ಎಲ್ಲವನ್ನು ಓದಿ)
- ಅವರಿಬ್ಬರೂ ಪ್ರೇಮಿಗಳಲ್ಲ - ನವೆಂಬರ್ 20, 2022
- ಸಿಕ್ಕು - ಮೇ 28, 2022
- ಅಮ್ಮ ನೆನಪಾಗುತ್ತಾಳೆ - ಮೇ 8, 2022
ಕಣ್ಣುಗಳೂ ಮಾತು ಕಲಿತು
ಪಿಸುಗುಡುವ ವೇಳೆ
ಕೇಳಿಸದಂತೆ ಎದ್ದು ಹೋಗುತ್ತಾರೆ
ಹೃದಯಗಳು ಢವಗುಡುತ್ತಾ
ಏನೋ ಹೇಳಲು ತವಕಿಸುವಾಗಲೇ
ಕವಾಟಗಳನ್ನು ಮುಲಾಜಿಲ್ಲದೆ ಮುಚ್ಚಿ ಬಿಡುತ್ತಾರೆ
ಕೈಗಳೆರಡು ಬೆಸೆದುಕೊಂಡು
ಬಂಧ ಹೊಸೆವ ಗಳಿಗೆ ಬಂದಾಗಲೆಲ್ಲ
ಸರಕ್ಕನೇ ಕೈಯ ಹಿಂಪಡೆಯುತ್ತಾರೆ
ಜೀವದ ಕಣ ಕಣವೂ ಅದೇನೋ ಬೇಕೆಂದು
ಹಂಬಲಿಸಿದ್ದನ್ನು ಗಮನಿಸದವರಂತೆ
ಬೆನ್ನು ಹಾಕಿ ನಡೆದು ಬಿಡುತ್ತಾರೆ
ಪ್ರೀತಿಯ ನದಿಯೊಂದು
ಧುಮ್ಮುಕ್ಕಿ ಹರಿವ ಮೊದಲೇ
ನದಿಯ ದಿಕ್ಕನ್ನೇ ಬದಲಿಸಿಬಿಡುತ್ತಾರೆ
ಒಲವ ಕುರುಹೂ ಅವರಿಬ್ಬರ
ಜಗತ್ತನ್ನು ಒಂದಿನಿತೂ ಸೋಕಲಿಲ್ಲವೆಂಬಂತೆ
ಪ್ರಬುದ್ಧವಾಗಿ ನಟಿಸಿ ಗೆಲ್ಲುತ್ತಾರೆ
ಪ್ರೇಮವೊಂದು ಮೊಳಕೆಯೊಡೆಯುವ
ಮುನ್ನವೇ ಚಿವುಟಿ ಬಿಡುತ್ತಾರೆ
ಪದೇ ಪದೇ ಚಿವುಟುವಾಗ ಮಾತ್ರ
ನೋವಾಗಿ ಒಳಗೊಳಗೇ
ಸದ್ದಿಲ್ಲದಂತೆ ಅಳುತ್ತಾರೆ
ಅವರಿಬ್ಬರೂ ಪ್ರೇಮಿಗಳಲ್ಲ
ಆಗುವುದು ಸಾಧ್ಯವೂ ಇಲ್ಲ !
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ