ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀರಕ್ಷಾ ನಾಯ್ಕ್
ಇತ್ತೀಚಿನ ಬರಹಗಳು: ಶ್ರೀರಕ್ಷಾ ನಾಯ್ಕ್ (ಎಲ್ಲವನ್ನು ಓದಿ)

ತನ್ನವರಿಲ್ಲದೆ ಪಳಗುವುದು ಆ ಹೆಣ್ಣು ಅರಿತಿದ್ದಳೆ?
ಜೀವನದ ತೊಡಕುಗಳ ಬಿಡಿಸಲು ತಿಳಿದಿದ್ದಳೆ?
ಅವನ ಹೆಸರಿನ ಮಾಂಗಲ್ಯಕ್ಕೆ ಕೊರಳಾಗಿದ್ದಳವಳು
ಅರಿಶಿನ ಕುಂಕುಮ ಸಿಂಧೂರದಿ ಪರಿಪೂರ್ಣಳಾಗಿದ್ದಳವಳು
ಬಾಲೆಯಾಗಿ ಬೆಳೆದವಳ , ಕನ್ಯೆಯಾಗಿ ನಿಂತವಳ
ಮುತ್ತೈದೆತನಕ್ಕೆ ತೊಡಿಸಿದ ಕಾಲುಂಗುರವೇ ಸಾಕ್ಷಿಯಾಗಿತ್ತು.
ಕೂಸಾಗಿ ಅಂದು ಹೆಜ್ಜೆಯಿಡುತ ಎಡವಿದ್ದವಳು ಇಂದು
ತನ್ನವನ ಕಿರುಬೆರಳ ಹಿಡಿದು ನಡೆದಿದ್ದಳು
ಅವನುಸುರಿದ ಪದಗಳಿಗೆ ಹಿತ ವಚನದ ಭಾಷೆಗಳಿಗೆ
ಅಗ್ನಿಯೇ ಸಾಕ್ಷಿಯಾಗಿತ್ತು ಅವಳ ಸಪ್ತಪದಿಗೆ.
ಸಂಭ್ರಮದಿ ತುಟಿಯರಳಿ, ಹನಿ ನೀರು ಕಣ್ಣರಳಿ
ಭೂರಮೆಯ ಸ್ಪರ್ಶಿಸಿತ್ತು ಅದೇಕೋ ತಿಳಿಯದೆಯೇ..
ಒಡ ಹುಟ್ಟಿದವಳ ಒಡಲು ಕೆಂಡವಾಗಿತ್ತಂದು
ತನ್ನ ಪಥಕ್ಕೆ ತನ್ನವಳು ಎಂದು.
ಮಗುವಿನ ಮನದ ಮಾತಿನ ಸಾಹುಕಾರ
ಮಾತೇ ಮರೆತಂತೆ ನಿಂತಿದ್ದ ಸಹೋದರ.
ಗತ್ತಿನ ಮುಖವಾಡ ಕಳಚಿತ್ತು ಮೊದಲಬಾರಿ
ಗಂಭೀರತೆಯೇ ಕಳೆದು ಮಂಕಾಗಿದ್ದ ಮೊದಲಬಾರಿ.
ತಂದೆ ಎದೆಯ ಗಟ್ಟಿತನ ಅಂದು ಕರಗಿತ್ತು
ಕಿವಿಯಾದವಳಿಗೆ ಹೃದಯದ ಕೂಗು ಕೇಳಿಸಿತ್ತು
ತನ್ನೊಲವ ಧಾರೆಯೆರೆದ ಹೆತ್ತ ಕರುಳಂದು
ಮಗಳ ನೆನಪುಗಳ ಗತದಿಂದ ನೆನೆದಿತ್ತು.
ಅಂತರಾಳದ ವೇದನೆಯ ಅವಳ ಅಳು
ಅರಿಯಲಾರಲೇ ಹೆತ್ತಮ್ಮ ಹೇಳದೆಯೆ ಅವಳು ?
ತನ್ನವರಿಗಾಗಿ ಇಣುಕಿದ್ದಳು ಅವನ ಮಡದಿಯಾಗಿ
ಪುನಃ ತವರಿಗೆ ಬರುವುದು , ತಿಳಿದು ಅವಳು ಅತಿಥಿಯಾಗಿ