- ಬೇಂದ್ರೆಸಂಗೀತ: ಒಂದು ವಿಶ್ಲೇಷಣೆ - ಮಾರ್ಚ್ 18, 2024
- ದೂರ ತೀರದಿಂದ ಮುತ್ತುಗಳ ತಂದ ನಾವಿಕ - ಫೆಬ್ರುವರಿ 26, 2024
- ಐವತ್ತನೇ ಪುಸ್ತಕದ ಸಂಭ್ರಮದಲ್ಲಿ ಎನ್.ಎಸ್.ಎಸ್. - ಆಗಸ್ಟ್ 9, 2022
ರವೀಂದ್ರನಾಥ ಠಾಗೂರರ ಸಾಹಿತ್ಯದ ಕುರಿತ ಅಧ್ಯಯನದಲ್ಲಿ ರವೀಂದ್ರ ಸಂಗೀತ ಎನ್ನುವುದು ಒಂದು ಮಹತ್ವದ ಸಂಗೀತ. ರವೀಂದ್ರನಾಥ ಠಾಗೂರರು ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಸ್ವತ: ಸಿತಾರ್ ನುಡಿಸುತ್ತಿದ್ದರು. ರವೀಂದ್ರ ಸಂಗೀತವೆನ್ನುವುದು ಕಾಪಿರೈಟ್ ಕೂಡ ಪಡೆದುಕೊಂಡಂತಹ ಪದ್ದತಿಯಾಗಿದೆ. ಮುಖ್ಯ ರವೀಂದ್ರ ನಾಥ ಠಾಗೂರರೇ ಸಂಗೀತ ಸಂಯೋಜನೆ ಮಾಡಿರುವ ೨,೨೩೩ ರಚನೆಗಳಿವೆ. ರವೀಂದ್ರರು ಹಿಂದೂಸ್ತಾನಿ, ಜನಪದ ಮತ್ತು ಪಾಶ್ಯಾತ್ಯ ಹೀಗೆ ಮೂರು ನೆಲೆಗಳಲ್ಲಿ ಸಂಯೋಜನೆಗಳನ್ನು ಮಾಡಿದ್ದಾರೆ. ಅವರು ಬಳಸು ಪೂರ್ಬಿ (ನಮ್ಮ ಪೂರ್ವಿ ಕಲ್ಯಾಣಿ) ಭೂಪಾಲ್ (ನಮ್ಮ ಮೋಹನ) ಪರಾಗ್ (ನಮ್ಮ ಶಿವರಂಜಿನಿ) ರಾಗಗಳ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ಸ್ವರ ಬಿತಾನ್ ಎಂಬ ರವೀಂದ್ರ ಸಂಗೀತದ ಕುರಿತ ಚರ್ಚೆ ಮತ್ತು ವ್ಯಾಖ್ಯಾನಗಳು ೬೪ ಸಂಪುಟಗಳಲ್ಲಿ ಬಂದಿದೆ. ರವೀಂದ್ರರು ಪುರಾಣ, ವೇದ, ಉಪನಿಷತ್ತುಗಳನ್ನು ಸಾಹಿತ್ಯಕ್ಕೆ ತಂದರು. ಅದರ ಛಂದೋಗುಣಗಳನ್ನು ತಂದರು, ಕಾಳಿದಾಸನ ಮೇಘದೂತ ಮತ್ತು ಅಭಿಜ್ಞಾನ ಶಾಕುಂತಲ ಎರಡನ್ನೂ ಬಂಗಾಳಿಗೆ ತಂದರು. ಒಟ್ಟಾಗಿ ಸಂಗೀತದ ನೆಲೆಯಿಂದ ಅವರ ಸಾಹಿತ್ಯದ ಕುರಿತು ಮಹತ್ವದ ಚರ್ಚೆಗಳನ್ನು ನಡೆಸಬಹುದು.
ಈ ಹಿನ್ನೆಲೆಯಲ್ಲಿ ಬೇಂದ್ರೆ ಸಂಗೀತ ಎನ್ನುವ ಸಾಧ್ಯತೆ ಇದೆಯೇ? ಅದಕ್ಕೆ ಕಾಪಿರೈಟ್ ಪಡೆಯಬಹುದೇ ಎನ್ನುವ ಚರ್ಚೆ ಹಿಂದೆ ಕೂಡ ನಡೆದಿದೆ. ಒಂದು ಗಮನಿಸಬೇಕಾದ ಸಂಗತಿ ಇದೆ. ನಮ್ಮಲ್ಲಿ ವಾಗ್ಗೇಯಕಾರರ ಕಲ್ಪನೆ ಇದೆ. ತಮ್ಮ ಸಾಹಿತ್ಯಕ್ಕೆ ತಾವೇ ಸಂಗೀತ ನೀಡುವುದು. ನಮ್ಮಲ್ಲಿ ಪುತಿನ ತಮ್ಮ ಗೀತ ನಾಟಕಗಳಲ್ಲಿ ರಾಗ ಮತ್ತು ತಾಳಗಳನ್ನು ಸೂಚಿಸುತ್ತಿದ್ದರು. ನವೋದಯದ ಬಹುತೇಕ ಬರಹಗಾರರಿಗೆ ಇಂತಹ ಸಂಗೀತದ ಹಿನ್ನೆಲೆ ಇತ್ತು. ವಾಗ್ಗೇಯಕಾರರು ಸೂಚಿಸಿದ ರಾಗಗಳ ಹೊರತಾಗಿ ಅವರ ಕೃತಿಗಳನ್ನು ಹಾಡುವುದೇ ಸಾಧ್ಯವಿಲ್ಲ. ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಪುರಂದರ ದಾಸರು ಎಲ್ಲರ ಮಟ್ಟಿಗೆ ಸತ್ಯ ಇದು. ರವೀಂದ್ರನಾಥ ಠಾಗೂರರು ಈ ಪರಂಪರೆಗೆ ಸೇರಿದವರು.
ಆದರೆ, ಬೇಂದ್ರೆ ಹಾಗಲ್ಲ. ಅವರಿಗೆ ಹಾಡಲು ರಾಗ ಹಾಕುವುದು ಮುಖ್ಯವೇ ಅಲ್ಲ. ‘ಇಳಿದು ಬಾ ತಾಯೆ’ಯನ್ನು ಕಾಳಿಂಗ ರಾವ್, ಬಾಳಪ್ಪ ಹುಕ್ಕೇರಿ, ಮೈಸೂರು ಅನಂತ ಸ್ವಾಮಿ, ವಿಜಯಭಾಸ್ಕರ್ ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸ್ವರ ಸಂಯೋಜನೆ ಮಾಡಿದ್ದಾರೆ. ನಾವು ಎಲ್ಲವನ್ನೂ ಇಷ್ಟಪಟ್ಟಿದ್ದೇವೆ. ಕವಿತೆಗೆ ಹಾಡುವ ಗುಣ ಕೊಡುವುದು ಬಹಳ ಸರಳ ಸಂಗತಿ. ಆದರೆ ಸಂಗೀತದ ಬೇರೆ ಸಾಧ್ಯತೆಗಳ ಕುರಿತು ಅವರಿಗೆ ಕುತೂಹಲವಿತ್ತು. ಶಬ್ದ ಮತ್ತು ಅರ್ಥ ಎರಡನ್ನೂ ದಾಟಿದ ನಾದದ ಕುರಿತು ಅವರಿಗೆ ಕುತೂಹಲವಿತ್ತು. ಪುಣೆಯಲ್ಲಿ ‘ ಇಂಟರ್ ನ್ಯಾಷನಲ್ ಬುಕ್ ಶಾಪ್’ ಎಂಬ ಅಂಗಡಿ ಇದೆ. ಅದರ ಒಡೆಯ ವಿಠಲ್ ರಾವ್ ದೀಕ್ಷಿತ್, ಬೇಂದ್ರೆಯವರಿಗೆ ಅವರೊಡನೆ ಅಪಾರ ಸ್ನೇಹ. ಅವರೊಡನೆ ನಡೆಯುತ್ತಿದ್ದ ಚರ್ಚೆಗಳೆಲ್ಲೂ ಸಂಗೀತದ್ದೇ. ಅಲ್ಲಿ ಒಮ್ಮೆ ಭಾಸ್ಕರ್ ಚಂದಾವರ್ಕರ್ ಬೇಂದ್ರೆಯವರನ್ನು ಭೇಟಿ ಮಾಡಿದರು. ‘ಭಾರತೀಯ ಸಂಗೀತ ಎಂದರೆ ೨೨/೭’ ಎಂದರು ಬೇಂದ್ರೆ. ಹೀಗೆ ಚಿಂತಿಸಿದವರಲ್ಲಿ ಬೇಂದ್ರೆಯವರೇ ಮೊದಲಿಗರು ಎನ್ನುತ್ತಾರೆ ಭಾಸ್ಕರ್ ಚಂದಾವರ್ಕರ್. ಮುಂದೆ ಪ್ರೊ.ಎಂ.ಡಿ.ರಾಮನಾಥನ್ ಕೂಡ ಬೇಂದ್ರೆಯವರ ಸಂಶೋಧನೆಯ ಶ್ರೇಷ್ಠತೆಯನ್ನು ಪ್ರಶಂಸಿಸಿದರು.
ಪೈ ಎಂದರೆ ೨೨/೭ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದನ್ನು ಸಂಗೀತಕ್ಕೂ ಹೊಂದಿಸಬಹುದು ಎಂದು ಸೂಚಿಸಿದವರು ಬೇಂದ್ರೆ. ಇದನ್ನು ಹೀಗೆ ವಿವರಿಸಬಹುದು. ಷಡ್ಜ, ಮಧ್ಯಮ, ಪಂಚಮ ಮೂರಕ್ಕೂ ನಾಲ್ಕು ಶ್ರುತಿಗಳಿವೆ. ದೈವತ ಮತ್ತು ರಿಷಭಕ್ಕೆ ಮೂರು ಶ್ರುತಿಗಳು. ನಿಷಾದಕ್ಕೆ ಎರಡು ಶ್ರುತಿಗಳು. ಹೀಗೆ ೨೨ ಶ್ರುತಿಗಳು ದೊರಕುತ್ತವೆ. ಅದನ್ನು ಸಪ್ತ ಸ್ವರಕ್ಕೆ ಹೊಂದಿಸಿದಾಗ ದೊರಕುವುದೇ ವೃತ್ತದ ಪರಿಧಿ ಮತ್ತು ವ್ಯಾಸಕ್ಕಿರುವ ಹೊಂದಾಣಿಕೆ. ಇದೇ ನಾದದ ಮೂಲ ಸೂತ್ರ.
ಇದು ಮಂತ್ರ ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ.
ತಾನೆ ತಾನೆ ಸಮರ್ಥಛಂದ: ದೃಗಭಂದ ದಿ
ಗ್ಭಂಧ: ಪ್ರಾಣದ ಕೆಚ್ಚು ಕೆತ್ತಿರಚಿಸಿದೆ; ಉಸಿರ
ಹೆದೆಗೆ ಹೂಡಿದ ಗರಿಯ ನಿರಿಯುಟ್ಟು ಬರು
ತಿದೆ ತೂರಿ ಲೀಲೆಯನಾಯಾಸ
(ಗಾರುಡಿಗ)
ಎಂದು ಬೇಂದ್ರೆ ಇದನ್ನು ವಿವರಿಸುತ್ತಾರೆ. ನಾದದ ಒಳನೂಲನ್ನು ಎಳೆದೆಳದು ನೋಡಿದಾಗ ಶ್ರುತಿಯ ವ್ಯಾಪ್ತಿ ಅರಿವಾಗುತ್ತದೆ. ‘ಪರಾವಾಣಿ’ಯಂತೆ ಪಶ್ಯಂತಿ, ಮಧ್ಯಮಾ ಮಾರ್ಗಗಳ ಮೂಲಕ ‘ವೈಖರಿ’ಯಾಗಿ ಹೊರ ಹೊಮ್ಮುವ ‘ದರ್ಶನ’ವನ್ನು ಬೇಂದ್ರೆ ನಾದ ಸೂತ್ರ ಹೇಳುತ್ತದೆ.
ಗ್ರಹಗೋಲ ಸಂಗೀತ ತಾನ ತಾನದ ನನೆಯ
ಭಾವದ ಪರಿಸ್ಪಂದ ಆತ್ಮ ಆತ್ಮವೇ ತಾನು
ವಾಚ್ಯವರ್ಣಗಳಲ್ಲಿ ನವಿರು ನವಿಲನ ಕೇಕೆ
ಶ್ರೀ ಅನಿರ್ವಾಚ್ಯಕ್ಕೆ ಬೇರೆ ಭಾಷ್ಯವು ಬೇಕೆ
(ನಾದ ಮಯೂರ)
ಶ್ರೀ ರಾಗವನ್ನು ಹಾರ್ಮೋನಿಯಂ ಮೂಲಕ ನುಡಿಸಿದರೆ ರಿಷಭ ಸಿಗುವುದು ಕಷ್ಟ. ಏಕೆಂದರೆ ಈ ರಾಗದಲ್ಲಿರುವುದು ಕೋಮಲ ರಿಷಭ. ಈ ರಾಗ ಹಾಡುವಾಗ ಕುಮಾರ ಗಂಧರ್ವರು ಹಾರ್ಮೋನಿಯಂನವರಿಗೆ ನಿಲ್ಲಿಸಿ ಎನ್ನತ್ತಿದ್ದರಂತೆ. ಇದನ್ನು ಬೇಂದ್ರೆ ಅನಿರ್ವಾಚ್ಯ ಎಂದು ಕರೆಯುತ್ತಾರೆ. ಅಂದರೆ ಲಯವಾದ ನಾದ ಕೂಡ ಚಕ್ರದಲ್ಲಿ ಬಹಳ ಮುಖ್ಯವಾಗುತ್ತದೆ.
ಬೇಂದ್ರೆಯವರ ನಾದ ವಿನ್ಯಾಸವನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ, ಶಬ್ದ-ಅರ್ಥ, ವಾಚ್ಯ-ಸೂಚ್ಯ ಹೀಗೆ ಸರಳವಾಗಿ ನೋಡಿದರೆ ಬೇಂದ್ರೆ ಸಿಕ್ಕುವವರೇ ಅಲ್ಲ. ಅವರ ‘ಗಂಗಾವತರಣ’ ಕವಿತೆಯನ್ನೇ ನೋಡೋಣ. ಇದು ಮೂರು-ಐದು ಮಾತ್ರೆಗಳ ಲಯದಲ್ಲಿ ಆರಂಭವಾಗುತ್ತದೆ. ‘ದಿಗ್ ದಿಗಂತದಲಿ’ ಎಂಬ ಪದ ಸಮೂಹವನ್ನೇ ನೋಡಿ ಗಣ ವಿಭಜನೆ ಪ್ರಕಾರ ‘ದಿಗ್ ದಿ’ ಎನ್ನುವುದು ಒಂದು ಘಟಕ. ಆದರೆ ‘ದಿಗ್ ದಿ’ ಎನ್ನುವುದು ಒಂದು ಪದವೂ ಅಲ್ಲ ಪ್ರಕೃತಿಯೂ ಅಲ್ಲ. ನಾವು ಇಲ್ಲಿ ನಿಲ್ಲದೇ ಮುಂದಿನ ಗಣಕ್ಕೆ ಧಾವಿಸಬೇಕು, ಪೂರ್ತಿ ಯತಿ ದೊರಕುವುದು ‘ಚರಾಚರಗಳಿಗೆ’ ಎನ್ನುವಲ್ಲಿ. ಇಲ್ಲಿ ಇನ್ನೊಂದು ವಿಶೇಷವೆಂದರೆ ‘ಚರಾ’ ಎಂಬ ಗಣ ಗುರು ಲಘುವಾಗಿರದೆ ಲಘು ಗುರುವಾಗುವುದು ಕನ್ನಡ ಭಾಷೆಯ ಸಾಧಾರಣ ಲಕ್ಷಣವಲ್ಲ. ಇದು ಬೇಂದ್ರೆ ಕಾವ್ಯ ತಳೆಯುವ ನಾದ ವಿನ್ಯಾಸ. ‘ಇಳಿದು;’ ‘ಹರನ’ ‘ಹರಿಯ’ ‘ಋಷಿಯ’ ಎಂಬ ಲಘು ಮಾತ್ರೆಗಳಲ್ಲಿಯೇ ಮುಂದುವರೆದು ‘ದೇವ ದೇವರನು’ ಎನ್ನುವಲ್ಲಿ ವಿಶಿಷ್ಟ ನಿಲುಗಡೆ ಪಡೆಯುತ್ತದೆ. ಸಂಗೀತದ ಪರಿಭಾಷೆಯಲ್ಲಿ ಹೇಳುವುದಾದರೆ ಇದ್ದಕಿದ್ದಂತೆ ಚತುಶ್ರತಿ ದೈವತ, ಕೈಶಕೀ ನಿಷಾದಗಳು ಬಂದು ಬಿಡುತ್ತವೆ. ನಿಮಗೆ ಷಡ್ಜ ಎಲ್ಲಿದೆ ಎಂದು ತಿಳಿಯುವದೇ ಈ ಸಾಲು ಬಂದಾಗ. ಹೀಗಿದ್ದರೂ ಇದನ್ನು ಅಹಿರ್ ಭೈರವ್ ಎನ್ನುವುದು ಕಷ್ಟ. ಇಲ್ಲಿಂದ ಮುಂದೆ ಬೇಂದ್ರೆ ಮೂರು-ಐದನ್ನು ಬದಲಾಯಿಸಿ ಐದು-ಮೂರನ್ನು ತರುತ್ತಾರೆ. ‘ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ’ ಹೀಗೆ ಸ್ವಲ್ಪ ಹಿಂದೆ ‘ಕರು ಕಂಡ ಕರುಳೆ’ ಕೂಡ ಬಂದಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಅಕಾರಂತ ಅಕ್ಷರಗಳೊಂದಿಗೆ ಏಕಾರಂತ ಅಕ್ಷರಗಳಿರುವ ಪದಗಳು ನಿರಂತರವಾಗಿ ಬಂದಿವೆ. ಮುಂದಿನ ಏಳು ಸಾಲುಗಳಲ್ಲಿ ಏಕಾರಂತ ಪದಗಳೇ ಬರುತ್ತವೆ. ಇಲ್ಲಿ ಗಮಕರಹಿತ ಗಾಂಧಾರ ಬರುತ್ತದೆ. ಇದರಿಂದ ಗಂಗೆಯ ಅಧ:ಪತನ ಚಿತ್ರಿತವಾಗಿದೆ. ಇಡೀ ಕವಿತೆಯನ್ನು ಶಬ್ದ ಅದಕ್ಕೆ ಅರ್ಥ ಹೀಗೆ ಓದಿದರೆ ಏನೂ ಸಿಕ್ಕುವುದಿಲ್ಲ. ಅದು ರೂಪಿತವಾಗಿರುವುದೇ ನಾದಗುಣದಿಂದ.
ಹಾಗೇ, ‘ಹಕ್ಕಿ ಹಾರುತಿದೆ ನೋಡಿದಿರಾ’ ಕವಿತೆ ನೋಡಿ ಇದರ ಪಲ್ಲವಿ ೩-೫-೫-೨ ವಿನ್ಯಾಸದಲ್ಲಿದೆ. ‘ಹಕ್ಕಿ’ ಮತ್ತು ‘ಹಾರುತಿದೆ’ ಎರಡು ಪದಗಳ ನಡುವಿನ ನಾದ ವಿನ್ಯಾಸದಿಂದ ಹಾರುವ ಸ್ಪಷ್ಟ ಅನುಭೂತಿ ಮೂಡುತ್ತದೆ. ಚರಣ ನಾಲ್ಕು ಮಾತ್ರಗಳ ನಾಲ್ಕು ಗಣದಲ್ಲಿದ್ದರೂ ೫+೩ ಅಥವಾ ೩+೫ ಹೀಗೆ ಕೂಡ ಜೋಡಣೆಯಾಗುತ್ತವೆ. ‘ನೀಲ ಮೇಘಮಂಡಲ’ ಇಲ್ಲಿ ಎಂಟು ಮಾತ್ರಗಳಿದ್ದರೂ ಒಡೆಯುವುದು ಕಷ್ಟ. ‘ಸೂರ್ಯಚಂದ್ರರನ್ನು’ ಕೂಡ ಹಾಗೆಯೇ. ಇಡೀ ಕವಿತೆಯಲ್ಲಿ ಹಕ್ಕಿಯ ಹಾರಾಟ ಕಾಣಿಸುತ್ತದೆ. ಕೇಳಿಸುತ್ತದೆ. ಬರೀ ಅರ್ಥದ ನೆಲೆ ಹಿಡಿದರೆ ಇದು ಸಿಗದು.
ಬೇಂದ್ರೆಯವರು ಬಳಸುವ ಇನ್ನೊಂದು ಸಂಗೀತದ ಪರಿಕಲ್ಪನೆ ‘ಅಚಲ ಷಡ್ಜ’ದ್ದು. ಷಡ್ಜ ಎನ್ನುವ ಹೆಸರಿನಲ್ಲಿಯೇ ಅದು ಆರು ಸ್ವರಕ್ಕೂ ಜನಕ ಎಂಬ ಕಲ್ಪನೆ ಇದೆ. ಇದನ್ನು ವಿಸ್ತರಿಸಿ ಬೇಂದ್ರೆ ಏಳು, ಒಂಬತ್ತು ಮತ್ತು ಹದಿಮೂರನೆಯ ಸ್ವರಗಳನ್ನು ಸಂವಾದಿ ಎನ್ನುತ್ತಾರೆ. ಇದು ಸ-ಮ ಮತ್ತು ಸ-ಪಗಳ ಸಂಬಂಧದ ಕುರಿತಾಗಿದೆ. ಈ ೭-೯-೧೩ ಎಂಬ ಸಂಖ್ಯೆಗಳು ವೇದ ಮೂಲಗಣಿತ ಎಂದು ಕರೆಯುವ ಇಂದ್ರಪ್ರಸ್ಥ ಮತದಿಂದ ಬಂದಿದ್ದು. ಬೇಂದ್ರೆಯವರಿಗೆ ಇದರ ಬಗ್ಗೆ ನಂಬಿಕೆ ಇತ್ತು, ಅದನ್ನು ಅವರು ತಮ್ಮ ಕವಿತೆಗಳ ಬೇರೆ ಬೇರೆ ನೆಲೆಯಲ್ಲಿ ತಂದರು.
ಸಂಖ್ಯೆ ಎಂಬುದು ಆಕೃತಿ ಭಾಷೆ
ಆಕೃತಿ ಎಂಬುದು ಸಂಖ್ಯೆಯ ಆಸೆ
ಸಂಖ್ಯಾಕೃತಿಯಲಿ ಗುಣಮೈದೋರೆ
ಕ್ರಿಯಾಶೀಲವಾಯಿತು ಆ ಹೋರೆ
ಎನ್ನುವ ಬೇಂದ್ರೆ ಅದರ ಮೂಲಕವೇ ದರ್ಶನವನ್ನು ಕಾಣಲು ಪ್ರಯತ್ನಿಸಿದ್ದಾರೆ.
ಕಾಣಬೇಕಂಬವರಿಗೆ
ಕಾಣು ಶಂಕರನಾರಾಯಣಾ-೫೧೨೦೨೧೫’
ಎಂದು ಭಂ ಭಂ ಭೋಲಾನಾಥ ಕವಿತೆಯಲ್ಲಿ ಬರೆಯತ್ತಾರೆ. ಈ ೫೧೨೦೨೧೫ ಎನ್ನುವುದೇ ಅಚಲ ಷಡ್ಜದ ಮೂಲ ಸೂತ್ರ. ಇದರ ವಿಸ್ತಾರವೇ ತಾರಕ ರಾಮ ಮಂತ್ರ. ಇವೆಲ್ಲವೂ ಬೇಂದ್ರೆ ಕಾವ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸಿವೆ.
‘ಷಡ್ಜ’ ಎನ್ನುವುದು ಅಸ್ತಿತ್ವ, ಇದು ಇಡೀ ಸಂಗೀತದ ವ್ಯಕ್ತ ರೂಪ, ಇದು ವಿಶ್ವವೀಣೆಯ ಮೊದಲ ತಂತಿ. ಇದನ್ನು ಸ್ಥಾಯಿ ತತ್ವವೆಂದೂ ಕರೆಯಬಹುದು. ಶ್ರೀವಿದ್ಯೆಯ ಇದು ‘ನಾದ’ ‘ನೀನು’ ಎಂಬ ಎರಡನೆಯ ತಂತಿ ‘ಪಂಚಮ ಭಾವ’. ಇದನ್ನು ‘ಬಿಂದು’ ಎಂದೂ ಕರೆಯಲಾಗುತ್ತದೆ. ಇದು ಸ್ತ್ರೀ ತತ್ವ. ಬೇಂದ್ರೆಯವರ ಕಾವ್ಯದ ನೆಲೆಯಾದ ಮಾತೃ ತತ್ವ. ‘ನಾದ-ಬಿಂದು’ ಸೇರಿದಾಗಲೇ ಸೃಷ್ಟಿ ಸಾಧ್ಯ. ಅವೆರಡು ಸೇರಿದಾಗಲೇ ಜಗತ್ತು ಮುಂದುವರೆಯುವುದು ಸಾಧ್ಯ. ಸಯಿಂದ ಪವರೆಗೆ ಇರುವುದು ‘ಪಂಚಮ ಭಾವ’ ಇದನ್ನೇ ಬೇಂದ್ರೆ ‘ಆನು’ ಎಂದು ಕರೆಯುತ್ತಾರೆ. ಹಾಗೆ ಪಯಿಂದ ಸವರೆಗಿನದು ‘ಮಧ್ಯಮ ಭಾವ’ ಇದನ್ನು ಬೇಂದ್ರೆ ‘ತಾನು’ ಎಂದು ಕರೆಯುತ್ತಾರೆ. ನೀವು ಷಡ್ಜ ಪಂಚಮಭಾವದಲ್ಲಿದ್ದರೆ ಪಂಚಮಕ್ಕಾಗಿ ನಿರ್ದಿಷ್ಟ ಸ್ಥಾನ ಮೀಸಲಿರುತ್ತದೆ, ಅದರ ನಂತರ ದೈವತ ಬರುತ್ತದೆ. ಷಡ್ಜ ಮಧ್ಯಮ ಭಾವದಲ್ಲಿ ನುಡಿಸುತ್ತಿರುವಾಗ ಆ ಸ್ಥಾನ ಪಂಚಮ ಮತ್ತು ದೈವತದ ನಡುವೆ ಬರುತ್ತದೆ. ಇದೇ ಬೇಂದ್ರೆಯವರ ಪ್ರಕಾರ ‘ಪ್ರಮಾಣ ಶ್ರುತಿ’. ನಾಕುತಂತಿ ಕವಿತೆ ಬಿಂಬಿಸುತ್ತಿರುವುದು ಅದನ್ನೇ.
ವಿಶ್ವ ಸಾಮರಸ್ಯದ ‘ಓಂ’ಕಾರವನ್ನು ‘ಅ-ಉ-ಮ ಸಂವಾದ’ ಕವಿತೆಯ ಮೂಲಕ ಬೇಂದ್ರೆ ವಿಶ್ಲೇಷಿಸಿದ್ದಾರೆ. ಇದನ್ನು ಅವರು ಬೀಜಾಕ್ಷರವಾಗಿ ಬಳಸಿಕೊಂಡರು. ಬೀಜಾಕ್ಷರಗಳು ತಾತ್ವಿಕತೆಯ ನೆಲಗಟ್ಟು. ಅದನ್ನು ಅರ್ಥದ ರೂಪದಲ್ಲಿ ನೋಡಲಾಗದು. ಸರ್ವವೂ ಏಕದಲ್ಲಿ ಲೀನವಾಗುವ ಅಲ್ಲಿಂದಲೇ ಸರ್ವವೂ ಉದಯಿಸುವ ಮೂಲ ಸಾಧ್ಯತೆಯನ್ನು ಬೇಂದ್ರೆ ಅನ್ವೇಷಿಸುತ್ತಿದ್ದರು. ‘ಪ್ರಣವ ಪ್ರವೀಣ’ ಎನ್ನುವ ಅವರ ಕವಿತೆ ನಾದಸ್ತಂಭ ಗಗನದಲ್ಲಿ ಗುಡುಗುವುದನ್ನು ಕೇಳುತ್ತದೆ. ಇದು ಅನಾಹತವು ‘ಆಹತ’ವಾಗಿ ಮೂಡುವ ಬೆರಗು.
ದದವಾ ದದದೋಂ ದದದಮ ದತ್ತೋಂ
ದಿಕ್ತಟ ತಟವಟ ಧಿಗಿದಂ ಧಿಕ್ತೋಂ
ರ್ನಿದ್ವಂದ್ವದೊಳೆದ್ದಿತು ಓಂ ನಾದ
ತಾಂಡವೇಶ್ವರನ ಅಖಂಡ ವಾದ
(ಸಹಸ್ರ ತಂತ್ರಿ)
ಇದು ಬೇಂದ್ರೆ ಪರಿಭಾವಿಸಿಕೊಂಡ ಸಂಗೀತ. ಇಲ್ಲಿ ಸಾಹಿತ್ಯ-ಸಂಗೀತ-ಅಧ್ಯಾತ್ಮ ಹೀಗೆ ಹಲವು ನೆಲೆಗಳು ಒಟ್ಟಾಗಿ ಸೇರಿವೆ. ಹೀಗಾಗಿ ಇದನ್ನು ‘ಬೇಂದ್ರೆ ಸಂಗೀತ’ ಎನ್ನುವುದಕ್ಕಿಂತ ‘ಬೇಂದ್ರೆ ಉಪನಿಷತ್’ ಅನ್ನುವುದೇ ಸರಿಯಾದ ಪರಿಕಲ್ಪನೆ ಆಗಬಹುದು ಎನ್ನುವುದು ನನ್ನ ಗ್ರಹಿಕೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ