‘ಸುಲಿದ ಬಾಳೆಯ ಹಣ್ಣಿನಂದದಿ
ಕಳೆದ ಸಿಗುರಿನ ಕಬ್ಬಿನಂದದಿ
ಅಳಿದ ಉಷ್ಣದ ಹಾಲಿನಂದದಿ
ಸುಲಭವಾಗಿರ್ಪ…’
ನಮ್ಮ ಕನ್ನಡ ಭಾಷೆಯ ಬಗ್ಗೆ ವಿಶೇಷ ಪ್ರೀತಿಯಿದ್ದ ನಮ್ಮ ತಂದೆ ಆಗಾಗ ಹಾಡುತ್ತಿದ್ದ ಸಾಲುಗಳಿವು. ಸಂಸ್ಕೃತದ ಮೇಲೆಯೂ ಅವರಿಗೆ ಅಪರಿಮಿತ ಗೌರವಪೂರ್ಣ ಅಭಿಮಾನ. ಇಂಗ್ಲಿಷ್‌ನಲ್ಲಿಯ ಗ್ರಾಮರ್‌ನಲ್ಲಿ ಏನೇ ಗೊಂದಲವಿದ್ದರೂ ಬಹಳ ಚೆನ್ನಾಗಿ ಪರಿಹರಿಸುತ್ತಿದ್ದರು. ಹಾಗೆಂದು ಈಗ ನಾನು ನಮ್ಮಣ್ಣನ ಭಾಷಾ ಪಾಂಡಿತ್ಯದ ಬಗ್ಗೆ ಹೇಳಲು ಹೊರಟಿಲ್ಲ. ಅವರ ಆ ದನಿ ನನ್ನ ಕಿವಿಯಲ್ಲಿ ರಿಂಗಣಿಸಿದಾಗಲೆಲ್ಲಾ ನನ್ನ ಮನಸ್ಸು ಒಂದು ಕಾಲದಲ್ಲಿ ನನ್ನದೆಂಬ ಆಪ್ತತೆಯಲ್ಲಿ ಓಡಾಡುತ್ತಿದ್ದ ನಮ್ಮ ಕಬ್ಬಿನ ಗದ್ದೆಯತ್ತ ಓಟಕೀಳುತ್ತದೆ.
ನಾಲೆ ಬಯಲಿನಲ್ಲಿದ್ದ ನಮ್ಮ ಕುಟುಂಬದವರಿಗೆ ಅನಾದಿಕಾಲದಿಂದಲೂ ಭತ್ತವಲ್ಲದೇ ಬೇರೆ ಬೆಳೆಯನ್ನು ಬೆಳೆಯುವುದೇ ತಿಳಿದಿರಲಿಲ್ಲ. ನಾಲೆಯಲ್ಲಿ ನೀರು ನಿಂತ ಕಾಲದಲ್ಲಿ ಬೆಳೆಯುತ್ತಿದ್ದ ಜೋಳ, ಅಪ್ಪಸೆಣಬು, ಹೆಸರು, ತಡಣಿಗಳೆಲ್ಲಾ ಬೆಳೆಯೆಂದೇ ಪರಿಗಣಿಸಲ್ಪಡುತ್ತಿರಲಿಲ್ಲ. ನಾಲೆಗೆ ನೀರುಬಿಟ್ಟ ತಕ್ಷಣ ಅವನ್ನೆಲ್ಲಾ ಗದ್ದೆಯಲ್ಲೇ ಕೆಸರಿನಲ್ಲಿ ತುಳಿದು ಗೊಬ್ಬರವಾಗಿಸಿ ಭತ್ತದ ನಾಟಿಗೆ ಸಿದ್ಧಗೊಳಿಸಿಬಿಡುತ್ತಿದ್ದರು. ಮೊದಲಿನಿಂದಲೂ ಭತ್ತವನ್ನು ಮಾತ್ರ ಬೆಳೆಯುತ್ತಿದ್ದ ನಮಗೆ ವರ್ಷಪೂರ್ತಿ ನಾವು ಹೊಟ್ಟೆ ತುಂಬಾ ಊಟ ಮಾಡಲು ಹಾಗೂ ಅತಿಥಿಗಳಿಗೆ ಇಕ್ಕಲು ಅನ್ನವಿರುತ್ತಿತ್ತೇ ವಿನಾ ಬೇರೆ ಯಾವುದೂ ಉಪಕಸುಬು ಇಲ್ಲದ್ದರಿಂದ ಹಣ ಎನ್ನುವುದು ಅತ್ಯಗತ್ಯ ಸಂದರ್ಭದಲ್ಲೂ ದುಡ್ಡಿಗಾಗಿಯೇ ಪರದಾಡುವಷ್ಟು ಅಪರೂಪವಾಗಿತ್ತು. ಇದನ್ನೆಲ್ಲಾ ಚಿಕ್ಕಂದಿನಿಂದಲೂ ನೋಡಿಕೊಂಡೇ ಬೆಳೆದಿದ್ದ ನಮ್ಮದೊಡ್ಡಣ್ಣ ಕೃಷಿಯಲ್ಲಿಯೇ ತೊಡಗಿದ ನಂತರ ಸ್ವಲ್ಪ ಭಾಗ ಗದ್ದೆಗೆ ವಾಣಿಜ್ಯ ಬೆಳೆ ಕಬ್ಬನ್ನು ಹಾಕುವ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಿಯೇ ಬಿಟ್ಟ. ನಾವಂತೂ ಸಿಹಿಸಿಹಿ ಕಬ್ಬನ್ನು ತಿನ್ನುವಖುಷಿಯಲ್ಲಿ ಕುಣಿದಾಡಿಯೇಬಿಟ್ಟೆವು. ಸರಿ, ಅದು ರಜೆಯ ಕಾಲವೂ ಆಗಿದ್ದರಿಂದ ಕಬ್ಬು ಸಂಬಂಧೀ ಕೆಲಸಗಳ ಹೊರೆ ಹೆಗಲೇರಿತು. ಕೆಲಸ ಮಾಡುವವರೊಂದಿಗೆ ಓರೆಯಾಗಿ ನೆಟ್ಟಿದ್ದ ಕಬ್ಬಿನ ತುಂಡುಗಳಿಗೆ ನೀರು ಹಾಕುವುದು, ಕಳೆ ಕೀಳುವುದು, ಕುಂಟೆ ಹೊಡೆದಾಗ ಮಣ್ಣನ್ನು ಬುಡಕ್ಕೆ ಕೊಡುವುದು, ಗೊಬ್ಬರ ಹಾಕುವುದು… ಎಲ್ಲವನ್ನೂ ನಾವೇ ಮಾಡುವಂತಾಗಿ ಕಬ್ಬು ತಿನ್ನುವುದು ಅಷ್ಟೇನೂ ಸುಲಭದ್ದಲ್ಲ ಎನ್ನುವುದು ಮನವರಿಕೆಯಾಗಲಾರಂಭಿಸಿತು. ಕಬ್ಬಿನದು ಹೊಸ ಬೇಸಾಯವಾದ್ದರಿಂದ ಅದರ ಬೆಳವಣಿಗೆಯ ಪ್ರತಿಹಂತವೂ ನಮಗೆ ಕೌತುಕ ಪೂರ್ಣವಾಗಿತ್ತು. ಕಬ್ಬು ಗಿಣ್ಣಿಕ್ಕಲಾರಂಭಿಸಿದಾಕ್ಷಣವೇ ಮುರಿದು ರುಚಿನೋಡುವ ಸಡಗರ ಪ್ರಾರಂಭವಾಯಿತು. ನಮಗೆ ನಿರೀಕ್ಷಿತ ಸಿಹಿಯಾಸ್ವಾದನೆಯಾಗದಿದ್ದರೂ ತೊಂಡೆ ಕಬ್ಬನ್ನು ತಿಂದಿದ್ದರಿಂದ ಗಂಟಲು ಕಟ್ಟಿ ಹಿರಿಯರಿಗೆ ನಮ್ಮ ಕಾರ್ಯವೈಖರಿಯ ಪರಿಚಯವಾಗುವಂತಾಯ್ತು.


ಕಬ್ಬಿನ ಗದ್ದೆಯೊಳಗೆಲ್ಲಾ ಅಲ್ಲಲ್ಲಿ ಗಣಿಕೆ ಗಿಡಗಳು ಬೆಳೆದು ಯಥೇಚ್ಛವಾಗಿ ಹಣ್ಣುಬಿಡುತ್ತಿದ್ದವು. ನಾನಂತೂ ಬೊಗಸೆಗಟ್ಟಲೆ ಕಪ್ಪು ಬಣ್ಣದ ಫಳಫಳ ಹೊಳೆಯುವ ದಪ್ಪ ಕಾಳುಮೆಣಸಿನ ಗಾತ್ರದ ಹಣ್ಣುಗಳನ್ನು ತಿನ್ನುತ್ತಿದ್ದೆ. ಕೆಲವು ಗಿಡಗಳು ಕೆಂಪುಬಣ್ಣದ ಹಣ್ಣುಗಳನ್ನೂ ಬಿಡುತ್ತಿದ್ದವು. ಆದರೆ ಅವು ನನಗೆ ಇಷ್ಟವಾಗುತ್ತಿರಲಿಲ್ಲ. ಅಷ್ಟೊಂದು ಪರಮ ಪ್ರಿಯವಾದ ಹಣ್ಣಿಗೆ ʼಗಣಿಕೆʼ ಎನ್ನಲು ನನ್ನ ಮನಸ್ಸು ಒಪ್ಪದಿದ್ದರಿಂದ ನಮ್ಮ ತಂದೆಯಿಂದ ಅದರ ಸಂಸ್ಕೃತದ ಹೆಸರು ʼಕಾಕಮಾಚಿʼ ಎನ್ನುವುದನ್ನು ತಿಳಿದುಕೊಂಡು ಹಾಗೇ ಹೇಳುತ್ತಿದ್ದೆ. ಕಬ್ಬಿನ ಗದ್ದೆಯೊಳಗೆ ಗಣಪತಿಯನ್ನೂ ಇಟ್ಟುಕೊಂಡು ದಿನವೂ ಪೂಜೆ ಮಾಡುವಾಗ ʼಕಾಕಮಾಚೀ ಫಲಂ ನೇವೇದಯಾಮಿʼ ಎಂದು ಗಣೇಶನಿಗೂ ಅದನ್ನೇ ತಿನ್ನಿಸುತ್ತಿದ್ದೆ. ಆ ಗಿಡದ ಸೊಪ್ಪನ್ನು ಅಮ್ಮನಿಗೆ ತಂದು ಕೊಟ್ಟರೆ ಅಮ್ಮ ಬಹಳ ರುಚಿಕರವಾದ ಗೊಜ್ಜನ್ನು ಮಾಡುತ್ತಿದ್ದರು. ಅವರಿಗೆ ಒಂದು ಹೊತ್ತಿನ ತರಕಾರಿ ಚಿಂತೆ ಕಳೆಯಿತೆಂದು ಖುಷಿಯಾಗುತ್ತಿತ್ತು.
ʼಕಬ್ಬು ಸಿಹಿ ಅಂತ ಬುಡಹತ್ತ ತಿಂದ ಹಾಗೆʼ ಎಂಬ ಗಾದೆ ಮಾತನ್ನು ಆಗಾಗ ಮನೆಯಲ್ಲಿ ಬಳಸುತ್ತಿದ್ದರಿಂದ ಕಬ್ಬಿನ ಜೊಲ್ಲೆಯಾದಾಗ ಅದನ್ನು ತುದಿಯಿಂದ ಬುಡದ ಕಡೆಗೆ ತಿನ್ನಬೇಕು ಎಂದು ಹೊರನೋಟಕ್ಕೆ ಅರ್ಥಮಾಡಿಕೊಂಡೆವು. ಆ ಕ್ಷಣದಲ್ಲಿ ನಮಗೆ ಬೇಕಾಗಿದ್ದದ್ದೂ ಅಷ್ಟೇ! ನಮ್ಮ ತಂದೆ ಹೇಳ್ತಾಯಿದ್ದ ಒಂದು ಸಂಸ್ಕೃತದ ಕಥೆಯೂ ಇದಕ್ಕೆ ಪುಷ್ಠಿ ಕೊಡುವಂತಿತ್ತು.
ಕಾಳಿದಾಸನ ಕಾಲ 4-5 ನೇ ಶತಮಾನ. ಮಹರ್ಷಿ ವೇದ ವ್ಯಾಸರುಕ್ರಿ.ಪೂ 3000 ರಲ್ಲಿ ಆಷಾಢ ಪೂರ್ಣಿಮಾ ದಿನದಂದು ಜನಿಸಿದರು. ಅವರ ಗೌರವಾರ್ಥವಾಗಿ, ಗುರು ಪೂರ್ಣಿಮಾ ಮತ್ತು ವ್ಯಾಸಪೂರ್ಣಿಮ ಹಬ್ಬವನ್ನು ಪ್ರತಿವರ್ಷ ಆಷಾಢ ಶುಕ್ಲಪೂರ್ಣಿಮೆಯಂದು ಆಚರಿಸುತ್ತಾರೆ. ಆದರೆ ಕವಿಸಮಯದಲ್ಲಿ ಒಮ್ಮೆ ಮಹಾಕವಿ ಕಾಳಿದಾಸ ಮತ್ತು ವ್ಯಾಸ ಋಷಿಗಳು ಎದುರಾಗ್ತಾರೆ. ತಮ್ಮ ಕೃತಿಗಳಲ್ಲಿ ʼಚʼಕಾರವನ್ನೇ ಅಧಿಕವಾಗಿ ಬಳಸುತ್ತಿದ್ದ ವ್ಯಾಸರಿಗೆ ಕಾಳಿದಾಸ ʼಚʼಕಾರ ಕುಕ್ಷುಂಭರಯೇ ನಮಃʼ ಅಂದರೆ ʼಹೊಟ್ಟೆಯಲ್ಲಿ ʼಚʼಕಾರವನ್ನೇ ತುಂಬಿಕೊಂಡಿರುವವರಿಗೆ ನಮಸ್ಕಾರ ʼ ಅಂತಾರೆ. ಸಂಸ್ಕೃತದಲ್ಲಿ ʼಚʼ ಎಂದರೆ ʼಮತ್ತುʼ ಎಂದು ಅರ್ಥ. ಅದಕ್ಕೆ ವ್ಯಾಸರು ʼಚಂದ್ರಂಚ ಇಕ್ಷು ದಂಡಂಚ, ಸಮುದ್ರಂಚ, ಭಾರತಂಚಾಪಿ ವರ್ಣಯಾʼ ಎಂಬ ಸವಾಲೆಸೆಯುತ್ತಾರೆ. ಅರ್ಥಾತ್ ʼಚಂದ್ರನನ್ನು ಮತ್ತು ಕಬ್ಬನ್ನು ಮತ್ತು ಸಮುದ್ರವನ್ನು ಮತ್ತು ಮಹಾಭಾರತವನ್ನು ವರ್ಣಿಸುʼ ಎಂದು.
ಅದಕ್ಕುತ್ತರವಾಗಿ ʼಕಾಳಿದಾಸ ಪ್ರತಿ ಪರ್ವ ರಸೋದಯಃʼ ಎಂದು ಉತ್ತರಿಸುತ್ತಾನೆ. ಅಂದರೆ ಒಂದೊಂದು ಪರ್ವದಲ್ಲಿಯೂ ರಸವು ಹೆಚ್ಚಾಗುತ್ತದೆ ಎಂದು. ಪರ್ವ ಎಂದರೆ ಕಲೆ, ಗೆಣ್ಣು, ಅಲೆ, ಅಧ್ಯಾಯಮುಂತಾಗಿ ಅರ್ಥೈಸಿಕೊಳ್ಳಬಹುದು. ಶುಕ್ಲಪಕ್ಷದಲ್ಲಿ ಚಂದ್ರನು ದಿನದಿಂದ ದಿನಕ್ಕೆ ವೃದ್ಧಿಸುತ್ತಾನೆ. ಕಬ್ಬಿನ ಸಿಹಿಯು ಗೆಣ್ಣಿನಿಂದ ಗೆಣ್ಣಿಗೆ ಬುಡದ ಕಡೆಗೆ ಹೋದಂತೆ ಹೆಚ್ಚಾಗುತ್ತದೆ. ಹುಣ್ಣಿಮೆಯು ಸಮೀಪಿಸಿದಂತೆ ಸಮುದ್ರದ ಅಲೆಗಳು ಮೇಲೇರುತ್ತವೆ. ಮಹಾಭಾರತ ಗ್ರಂಥದಲ್ಲಿ ಅಧ್ಯಾಯದಿಂದ ಅಧ್ಯಾಯಕ್ಕೆ ಕುತೂಹಲವು ಹೆಚ್ಚಾಗಿ ರಸಾಸ್ವಾದನೆಯು ಗರಿಷ್ಠವಾಗುತ್ತದೆ ಎಂದು ನಮ್ಮ ತಂದೆ ವಿವರಿಸುವಾಗ ನಮಗೆ ಕಾಳಿದಾಸನ ವಾಕ್ಚಾತುರ್ಯಕ್ಕಿಂತ ಬಹಳ ಮುಖ್ಯವಾದದ್ದೆನಿಸುತ್ತಿದ್ದುದುಬುಡದ ಕಡಗೆ ತಿಂತಾತಿಂತಾ ಕಬ್ಬಿನ ಸಿಹಿ ಹೆಚ್ಚಾಗುತ್ತೆ ಅನ್ನೋದೇ ಆಗಿತ್ತು!
ಸುತ್ತಿನ ಬಯಲಿನಲ್ಲೆಲ್ಲಾ ನಮ್ಮದೊಂದೇ ಕಬ್ಬಿನ ಗದ್ದೆ ಇದ್ದುದರಿಂದ ಕಬ್ಬು ಗಿಣ್ಣಿಕ್ತಿದೆ ಎನ್ನುವುದು ಕಾಣಲಾರಂಭಿಸಿದಾಕ್ಷಣವೇ ಕದ್ದು ಕಬ್ಬು ಮುರಿಯುವವರ ಕಾಟವೂ ಶುರುವಾಯ್ತು. ನಮಗಂತೂ ರಜೆಯಿದ್ದರೆ ಸಾಕು ಬೆಳಗಿನಿಂದ ರಾತ್ರಿಯವರೆಗೂ ಕಬ್ಬಿನ ಗದ್ದೆ ಕಾಯೋದೇ ಕೆಲಸ. ನಮ್ಮ ಜೊತೆಗೆ ನಮ್ಮ ಟಾಮಿಯೂ ಬಹಳ ಉತ್ಸುಕತೆಯಿಂದ ಹೊರಟುಬಿಡುತ್ತಿತ್ತುಆಗಾಗ ಕಬ್ಬು ಮುರಿಯುವವರನ್ನು ಕಂಡಾಗ ʼಯಾರದು?ʼ ಎಂದು ಕೂಗುತ್ತಿದ್ದೆ. ನಮ್ಮತ್ತೆಯಾದರೆ ʼಯಾವೋನ್ಲಾ ಅವನುʼ ಎಂದೇ ಅಬ್ಬರಿಸುತ್ತಿದ್ದರು! ನಮ್ಮ ಚಲನವಲನವನ್ನು ವೀಕ್ಷಿಸುತ್ತಿದ್ದ ಟಾಮಿ ಒಂದು ದಿನ ಕಬ್ಬು ಮುರಿದುಕೊಂಡು ಓಡಿಹೋಗುತ್ತಿದ್ದವನ ಚಡ್ಡಿ ಹಿಡಿದು ನಿಲ್ಲಿಸಿದ್ದು ಬಹಳ ರೋಚಕ ಸುದ್ಧಿಯಾಗಿ ಎಲ್ಲೆಡೆ ರೆಕ್ಕೆಪುಕ್ಕಗಳೊಡನೆ ಹಾರಾಡಿ ಟಾಮಿ ಕಬ್ಬುಗಳ್ಳರಿಗೆ ಸಿಂಹಸ್ವಪ್ನವಾಯಿತು. ಇದು ಮರ್ಯಾದೆಯ ಪ್ರಶ್ನೆಯಾದ್ದರಿಂದ ಕ್ರಮೇಣ ಕಬ್ಬುಗಳ್ಳರ ಸಂಖ್ಯೆ ಕಮ್ಮಿಯಾಗಲಾರಂಭಿಸಿತು. ನಂತರ ಟಾಮಿ ತಾನೊಂದೇ ಗದ್ದೆಯನ್ನು ಸುತ್ತಿಬಂದು ಶಹಬ್ಬಾಸ್‌ಗಿರಿ ಪಡೆಯಲಾರಂಭಿಸಿದ್ದು ನಮಗೂ ಸ್ವಲ್ಪ ಬಿಡುವು ಸಿಕ್ಕಂತಾಗಿ ನಿರಾಳವಾಗಿ ತೆಗೆದುಕೊಂಡು ಹೋಗಿದ್ದ ಪುಸ್ತಕವನ್ನು ಓದಲು ಅನುಕೂಲವಾಗುತ್ತಿತ್ತು.
ಕಬ್ಬಿನ ಗದ್ದೆಯ ಮಧ್ಯೆ ಅಲ್ಲಲ್ಲಿ ಕರಲು ಉಂಟಾಗಿ ಆ ಪ್ರದೇಶದಲ್ಲಿ ಕಬ್ಬು ಬೆಳೆಯದೇ ಬಾಲ್ಡ್ಹೆಡ್ನಂತೆ ಹಾಗೇ ಉಳಿದುಬಿಡುತ್ತಿತ್ತು. ಹತ್ತಿರದಲ್ಲಿದ್ದ ನಮ್ಮ ಹೇಮಾವತಿ ಹೊಳೆಗೆ ಬಟ್ಟೆ ಒಗೆಯಲು ಬರುತ್ತಿದ್ದ ಅಕ್ಕಪಕ್ಕದ ಹಳ್ಳಿಯ ಹೆಂಗಸರು ಕಬ್ಬಿನ ಗದ್ದೆಯ ಹೊರಭಾಗದ ಕರಲಿನಲ್ಲಿದ್ದ ಒಂದು ರೀತಿಯ ಮರಳು ಮಿಶ್ರಿತ ಬಿಳಿ ಪುಡಿಯನ್ನು ಚೌಳು ಎನ್ನುತ್ತಾ ಬಟ್ಟೆ ಸೆಣೆಯಲು ತೆಗೆದುಕೊಂಡು ಹೋಗುತ್ತಿದ್ದರು. ಅದು ವಾಶಿಂಗ್ ಸೋಡ ಅಂತ ನಮ್ಮಣ್ಣ ಹೇಳುತ್ತಿದ್ದ. ಒಮ್ಮೆ ನಮ್ಮಕಬ್ಬಿನ ಗದ್ದೆಯ ಮಧ್ಯದಲ್ಲಿದ್ದ ಕರಲಿನಲ್ಲಿ ಜಾಗವಿದ್ದುದರಿಂದ ನಾನು ತೆಗೆದುಕೊಂಡು ಹೋಗಿದ್ದ ರಾಜಯೋಗ ಎನ್ನುವ ಪುಸ್ತಕವನ್ನು ಓದುತ್ತಾ ಹಾಗೇ ಪುಸ್ತಕದಲ್ಲಿ ವಿವರಿಸಿದಂತೆ ಧ್ಯಾನಾಭ್ಯಾಸವನ್ನು ಮಾಡುತ್ತಾ ಕುಳಿತುಬಿಟ್ಟಿದ್ದೆ. ನನ್ನನ್ನು ಹುಡುಕುತ್ತಾ ಬಂದ ನಮ್ಮಕ್ಕ ಎಲ್ಲೂ ಕಾಣದೇ ಕೂಗಿದರೂ ಪ್ರತ್ಯುತ್ತರವಿಲ್ಲದೇ ಕಂಗಾಲಾಗಿದ್ದಾಗ ಟಾಮಿಯ ಮಾರ್ಗದರ್ಶನದಲ್ಲಿ ಕರಲಿಗೆ ಬಂದು ಕಣ್ಣು ಮುಚ್ಚಿಕೊಂಡು ಕುಳಿತಿದ್ದ ನನ್ನನ್ನು ನೋಡಿದ ಅವಳಿಗೆ ಪಕ್ಕದಲ್ಲಿದ್ದ ಪುಸ್ತಕದಿಂದ ಎಲ್ಲಾ ಸುಸ್ಪಷ್ಟವಾಗಿತ್ತು. ಅಂದೇ ಆ ಪುಸ್ತಕವನ್ನು ಮತ್ತೆಂದೂ ನನಗೆ ಸಿಗದಂತೆ ನನ್ನಿಂದ ಮುಚ್ಚಿಟ್ಟಿದ್ದರಿಂದ ಧ್ಯಾನಮಾರ್ಗದಿಂದ ನನ್ನನ್ನು ವಿಮುಖಳಾಗಿಸಿದ ಕೀರ್ತಿ ಅವಳದಾಯಿತು.


ಕಬ್ಬು ಬಲಿತಂತೆ ನಮಗೆ ಕಬ್ಬಿನ ಗದ್ದೆಯೇ ಪರಮ ಪ್ರಿಯವಾಗಿ ʼಕುರಿ ಕಾಯೋ ತೋಳ ಅಂದರೆ ಸಂಬಳವೇ ಬೇಡʼ ಎನ್ನುವಂತೆ ನಾವು ಕಬ್ಬಿನ ಗದ್ದೆಯಲ್ಲೇ ಝಾಂಡಾ ಊರಿ ಯಾವಾಗ ನೋಡಿದರೂ ಕಬ್ಬಿನ ಜಲ್ಲೆ ಸಿಗಿಯುವ ಕಾಯಕದಲ್ಲಿ ತೊಡಗಿದೆವು. ಒಳ್ಳೆಯ ತಾಜಾ ಕಬ್ಬನ್ನು ಆರಿಸಿ ಕಾಲಿನಿಂದಲೇ ಲಟ್ಟನೆ ಮುರಿದುಕೊಂಡು ಮೇಲಿನ ಗರಿಯಿರುವ ತೊಂಡೆಯ ಭಾಗವನ್ನು ಮುರಿದೆಸೆದು ತುದಿಯಿಂದ ಬುಡದ ಕಡೆಗೆ ಸಿಗಿಯಲಾರಂಭಿಸಿದರೆ, ಆ ಸಿಹಿಸಿಹಿ ರಸವನ್ನು ಹೀರುತ್ತಾ ತನ್ಮಯಾನಂದದಲ್ಲಿರುತ್ತಿದ್ದ ನಮಗೆ ಪ್ರತಿ ಪರ್ವ ರಸೋದಯವೇ!ಇದರಿಂದ ಊಟ ಮಾಡಲೂ ಆಗದಂತೆ ನಾಲಿಗೆ ಒಡೆದು ಉರಿಯುತ್ತಿತ್ತು. ʼಸದಾ ಕಬ್ಬು ಸಿಗೀತಿದ್ರೆ ಇನ್ನೇನಾಗುತ್ತೆ. ಒಳ್ಳೆ ರಸವಾಗಿರೋ ಕಬ್ಬನ್ನ ಮುರುಕೊಂಡು ಮನೇಗೆ ತಂದು ರಾತ್ರಿ ಊಟ ಆದ ಮೇಲೆ ತಿನ್ನಬೇಕು,ʼ ಎಂದು ಆಗಾಗ ಅಮ್ಮ ಹೇಳುತ್ತಿದ್ದರು. ಕಬ್ಬಿನ ಗದ್ದೆಯೊಳಗೆ ನುಗ್ಗಿ ಯಾವ ಕಬ್ಬು ತಿನ್ನಲು ಯೋಗ್ಯವಾಗಿದೆ ಎನ್ನುವುದನ್ನು ಪರಿಶೀಲಿಸಿ ಮುರಿದು ತರುವಷ್ಟು ಪಳಗಿಬಿಟ್ಟಿದ್ದೆವು. ಈ ಪ್ರಯತ್ನದಲ್ಲಿ ಗರಗಸದಂತೆ ಅಂಚಿದ್ದ ಕಬ್ಬಿನ ಗರಿಯ ಹೊಡೆತದಿಂದ ಕೈಕಾಲೆಲ್ಲಾ ಬಾಸುಂಡೆ ಬಂದಂತಾಗಿ ನೀರು ಬಿದ್ದರೆ ಸಾಕು ಚುಮುಚುಮು ಉರಿಯುತ್ತಿತ್ತು. ಮೈಮೇಲೆಲ್ಲಾ ಕಬ್ಬಿನ ಗರಿ ಬರೆದ ಬರೆಬರೆ ಚಿತ್ತಾರಗಳು! ಈ ಎಲ್ಲಾ ಸಡಗರಗಳ ನಡುವೆ ಆಲೆಮನೆ ಹಾಕಿಸಿದ್ದು ಹೊಸ ಸಂಭ್ರಮಕ್ಕೆ ನಾಂದಿಯಾಯಿತು. ಕಬ್ಬನ್ನು ಮೂಲರೂಪದಲ್ಲಿ ಸವಿಯುತ್ತಿದ್ದ ನಮಗೀಗ ಕಬ್ಬಿನ ಹಾಲಿನ ರಸಧಾರೆ!


ಈ ಮೊದಲು ಸುತ್ತಿನ ಹಳ್ಳಿಗಳಲ್ಲಿ ಯಾರದ್ದಾದರೂ ಆಲೆಮನೆ ಹಾಕಿದಾಗ ಅವರು ಕೊಡದಲ್ಲಿ ಕಬ್ಬಿನ ಹಾಲು ತುಂಬಿಕೊಂಡು, ತುಳುಕದಂತೆ ತೊಂಡೆಯನ್ನು ಮುಳುಗಿಸಿ ತಂದುಕೊಡುತ್ತಿದ್ದರು. ನಮಗೋ ಒಬ್ಬರೇ ಅಷ್ಟೂ ಹಾಲನ್ನೂ ಕುಡಿದುಬಿಡಬೇಕೆಂಬ ಆಸೆ. ಆದರೆ ಅಮ್ಮ ನಮಗೆಲ್ಲಾ ಒಂದೊಂದು ಲೋಟ ಕಬ್ಬಿನಹಾಲು ಕೊಟ್ಟು ಉಳಿದದ್ದರಲ್ಲಿ ಹಾಲುಬಾಯಿ ಮಾಡಿ ನಮ್ಮನಮ್ಮ ಊಟದ ತಟ್ಟೆಗಳಿಗೇ ಹಾಕಿ ಒಬ್ಬೊಬ್ಬರಿಗೆ ಒಂದೊಂದು ತಟ್ಟೆ ಕೊಡುತ್ತಿದ್ದರು. ನಮಗೆ ಇನ್ನೂ ದೊಡ್ಡ ತಟ್ಟೆ ಬೇಕು ಎಂದು ದಾಂಧಲೆ ಎಬ್ಬಿಸಿಕೊಂಡು ಬಲು ಕಾಯೇಶಾಗಿ ತಿನ್ನಲು ಪ್ರಾರಂಭಿಸುತ್ತಿದ್ದ ನಮಗೆ ಅರ್ಧ ತಟ್ಟೆಯಷ್ಟು ತಿನ್ನುವುದರಲ್ಲಿ ಸಾಕುಸಾಕಾಗುತ್ತಿತ್ತು.
ಆಲೆಮನೆ ಹಾಕಿದ ನಂತರ ನಮ್ಮ ಬರ ತೀರುವಷ್ಟು ಕಬ್ಬಿನ ಹಾಲನ್ನು ಕುಡಿದದ್ದೇ ಕುಡಿದದ್ದು. ಹಿರಿಯರು ನೋಡಿದರೆ ಅಷ್ಟೊಂದು ಒಟ್ಟಿಗೆ ಕುಡಿಯೋದು ಒಳ್ಳೆಯದಲ್ಲ ಅಂತ ಬೈತಾರೆಂದು ಬೆಳಗಾದ ತಕ್ಷಣವೇ ಗದ್ದೆಗೆ ಹೋಗಿ ಅವರು ಬರುವ ಮೊದಲೇ ಕುಡಿದುಬಿಡುತ್ತಿದ್ದೆವು. ನಮ್ಮ ಆಲೆಮನೆಯವರಿಗೂ ನಮ್ಮ ಈ ಒಳಗುಟ್ಟು ಗೊತ್ತಾಗಿ ನಾವು ಒಳ್ಳೆಯ ಹದವಾದ ಕಬ್ಬನ್ನು ಆರಿಸಿಕೊಂಡು ಗಾಣಕ್ಕೆ ಕೊಟ್ಟು ಹಾಲನ್ನು ಚೊಂಬಿನಲ್ಲಿ ತುಂಬಿಸಿಕೊಂಡು ಇನ್ನೇನು ಕುಡಿಯಬೇಕೆಂಬಾಕ್ಷಣವೇ ʼನಿಮ್ಮತ್ಯಾರು ಬಂದ್ರುʼ ಎಂದುಬಿಡುತ್ತಿದ್ದರು. ನಾವು ಆ ಚೊಂಬಿನ ಹಾಲನ್ನು ದೊಡ್ಡ ಒಲೆಯ ಮೇಲೆ ಕೊತಕೊತನೆ ಕುದಿಯುತ್ತಿದ್ದ ಪಾಕವಿದ್ದ ಕೊಪ್ಪರಿಗೆಯೊಳಗೇ ಸುರಿದು ಬಿದ್ದಂಬೀಳ ಓಡಿಹೋಗುತ್ತಿದ್ದೆವು.ಒಂದೆರಡು ಸಾರಿ ಹೀಗೇ ಮಾಡಿ ಅವರು ಮಜಾ ತೆಗೆದುಕೊಳ್ಳುತ್ತಿದ್ದುದನ್ನು ಗಮನಿಸಿದ ನಂತರ ನಮ್ಮೊಳಗೇ ಒಂದು ಒಪ್ಪಂದ ಮಾಡಿಕೊಂಡು ಒಬ್ಬರು ಊರ ರಸ್ತೆಯ ಕಡೆಗೆ ನೋಡುತ್ತಿದ್ದು ಉಳಿದವರು ಕಬ್ಬಿನ ಹಾಲು ಕುಡಿಯುವ ವ್ಯವಸ್ಥೆ ಮಾಡಿಕೊಂಡೆವು.ಆದರೂ ಎಷ್ಟೇ ಕಬ್ಬಿನಹಾಲನ್ನು ಕುಡಿದರೂ ಕಬ್ಬನ್ನು ನೇರವಾಗಿ ತಿಂದಷ್ಟು ಖುಷಿ ಸಿಗುತ್ತಿರಲಿಲ್ಲ. ನಂತರದ ದಿನಗಳಲ್ಲಿ ಈ ನೆನಪಿನಲ್ಲಿ ಮೂಡಿದ ʼವಿಮರ್ಶೆʼ ಎಂಬ ಒಂದು ಹನಿ ಹೀಗಿದೆ:
ಕಬ್ಬನ್ನು ಕಬ್ಬಿನಂತೆಯೇ
ಆಸ್ವಾದಿಸದೇ
ಹಾಕಿದೆ ಗಾಣಕ್ಕೆ,
ರಸ ಸೋರಿ
ಕೈ ಚಾಚಬೇಕಾಯ್ತು
ಸಿಪ್ಪೆಗೆ!
ಆಲೆಯ ಮನೆಯ ಆ ಬಿಸಿಬಿಸಿ ಬೆಲ್ಲದ ಕಂಪಿನಲ್ಲಿ ʼಹಸಿವಾದಡೆ ಊರೊಳಗೆ ಭಿಕ್ಷಾನ್ನಗಳುಂಟು, ತೃಷೆಯಾದಡೆ ಕೆರೆಹಳ್ಳ ಬಾವಿಗಳುಂಟು…ʼ ಎಂಬ ತಾಯಿ ಅಕ್ಕ ಮಹಾದೇವಿಯ ವಚನದಂತೆ ಹಸಿವಾದಾಗ ಬಿಸಿಬೆಲ್ಲ, ಬಾಯಾರಿಕೆಯಾದಾಗಲೆಲ್ಲಾ ಕಬ್ಬಿಹಾಲು ಸೇವಿಸುತ್ತಾ ರಜೆಯ ಹಗಲನ್ನೆಲ್ಲಾ ಗದ್ದೆಯಲ್ಲೇ ಕಳೆದುಬಿಡುತ್ತಿದ್ದೆವು. ನಮ್ಮ ಟಾಮಿಗೆ ಸಂಪೂರ್ಣ ಶರಣಾಗಿ ಸಖ್ಯವನ್ನು ಬೆಳೆಸಿಕೊಂಡು ಸುತ್ತಮುತ್ತಿನ ನಾಯಿಗಳೆಲ್ಲಾ ಅಚ್ಚಿನ ಮಣೆಗೆ ಹಾಕುವಾಗ, ಸಾಗಿಸುವಾಗ ಅಲ್ಲಲ್ಲಿ ಬೀಳುತ್ತಿದ್ದ ಬೆಲ್ಲವನ್ನು ತಿಂದುಕೊಂಡು ನಮ್ಮಂತೆಯೇ ಅಪ್ಪಟ ಸಿಹಿಜೀವಿಗಳಾಗಿ ಅಲ್ಲೇ ಬೀಡಾರ ಹೂಡಿದವು. ಆಗಾಗ ಮನೆಗೆ ಬರುತ್ತಿದ್ದ ನೆಂಟರಿಷ್ಟರನ್ನು ಆಲೆಮನೆಗೂ ಕರೆತಂದು ವಿಶೇಷ ಆತಿಥ್ಯವನ್ನು ಮಾಡಲಾರಂಭಿಸಿದರು ಹಿರಿಯರು. ಕಬ್ಬಿನ ಹಾಲಿಗೆ ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದ ಏಲಕ್ಕಿ-ಕಾಳು ಮೆಣಸುಗಳ ಪುಡಿ ಹಾಕಿ, ನಿಂಬೆರಸ ಹಿಂಡಿ ಸ್ಪೆಷಲ್ ಜ್ಯೂಸ್ ಮಾಡಿ ಕೊಟ್ಟರೆ ಅವರಂತೂ ಹಿಂದೆ-ಮುಂದೆ ನೋಡದೆ ಕುಡಿದದ್ದೂ ಕುಡಿದದ್ದೇ! ನಮಗೆ ಸ್ವಲ್ಪವೂ ಉಳಿಸದೇ ಅವರೇ ಮುಗಿಸಿದಾಗ ʼಕೈಗೆಟುಕದ ದ್ರಾಕ್ಷಿ ಹುಳಿʼ ಎನ್ನುವಂತೆ ʼಇವರಿಗೆ ಕಬ್ಬಿನ ಹಾಲಿನ ಒರಿಜಿನಲ್ ಟೇಸ್ಟೇ ಗೊತ್ತಿಲ್ಲʼ ಎಂದುಕೊಳ್ಳುತ್ತಿದ್ದೆವು ನಾವು!ರಸ್ತೆ ಬದಿಯೇ ಆಲೆಮನೆ ಇದ್ದುದರಿಂದ ದಾರಿಹೋಕರೆಲ್ಲಾ ಒಮ್ಮೆ ಆಲೆಮನೆಗೆ ವಿಸಿಟ್ ಕೊಟ್ಟು ಕಬ್ಬಿನ ಹಾಲು ಕುಡಿದುಕೊಂಡು ಒಂದೆರಡು ಕಬ್ಬಿನ ಜಲ್ಲೆಗಳನ್ನೂ ತೆಗೆದುಕೊಂಡು ಗದ್ದೆಯ ಓನರ್ ಗಳಾದ ನಮ್ಮ ಕಡೆಗೂ ನೋಡದೇ ತಮ್ಮದೇ ಸ್ವಂತ ಗದ್ದೆಯೇನೋ ಎಂಬ ಆಢ್ಯತೆಯಲ್ಲಿ ಹೋಗಲಾರಂಭಿಸಿದರು. ಹಗಲಿನಿಂದ ರಾತ್ರಿಯವರೆಗೂ ಗದ್ದೆ ಕಾದು ಯಾರೂ ಒಂದು ಜಲ್ಲೆ ಕಬ್ಬನ್ನೂ ಮುರಿಯದಂತೆ ನೋಡಿಕೊಂಡದ್ದಷ್ಟೇ ನಮ್ಮ ಪಾಲಿಗುಳಿಯಿತು. ಕಬ್ಬಿನ ಹಾಲು ಹಾಗೂ ಅದರ ಉತ್ಪನ್ನಗಳ ರುಚಿ ಎಷ್ಟೇ ಸಿಹಿಸಿಹಿಯಾಗಿದ್ದು ನಮ್ಮನ್ನು ಪರವಶಗೊಳಿಸಿದ್ದರೂ ಗಾಣಕ್ಕೆ ಕಟ್ಟಿದ್ದ ಎತ್ತುಗಳ ಪಾಡನ್ನು ನೋಡಿದಾಗ ಬಹಳ ಹಿಂಸೆಯೆನಿಸುತ್ತಿತ್ತು. ಅವುಗಳನ್ನು ಪಕ್ಕೆ ಕಟ್ಟಿದಾಗ ಅವಕ್ಕೆ ಕಬ್ಬನ ಗರಿಯನ್ನು ಕೊಟ್ಟು ಉಪಚರಿಸಹೋದರೆ ಸದಾ ಆಲೆಮನೆಯಲ್ಲೇ ಇರುತ್ತಿದ್ದ ಅವುಗಳಿಗೆ ಅದೇನೂ ರುಚಿಸುವಂತೆ ಕಂಡುಬರುತ್ತಿರಲಿಲ್ಲ.
ಈ ನಡುವೆ ನಮ್ಮ ಆಲೆಮನೆ ಗೌಡರು ಮಕ್ಕಳಾದ ನಮ್ಮ ಮೇಲಿನ ಪ್ರೀತಿಯಿಂದ ತೊಂಡೆ ಕಬ್ಬಿನ ತುದಿಗೆ ಪಾಕದ ಬೆಲ್ಲ ಸುತ್ತಿ ಸುತ್ತುಬೆಲ್ಲ ಮಾಡಿ ತಿನ್ನಲು ಕೊಡುತ್ತಿದ್ದರು. ತಟ್ಟೆಯಲ್ಲಿ ಸಂಕ್ರಾಂತಿಯ ಎಳ್ಳು ಮಿಶ್ರಣದಂತೆ ಎಳ್ಳು, ನೆಲಗಡಲೇಬೀಜ, ಹುರಿಗಡಲೆ, ಕೊಬ್ಬರಿಚೂರು ಎಲ್ಲಾ ತೆಗೆದುಕೊಂಡು ಅದರಮೇಲೆ ಬಿಸಿಬಿಸಿ ಬೆಲ್ಲದ ಪಾಕ ಹಾಕಿ ತಟ್ಟೆಬೆಲ್ಲದ ಸಮಾರಾಧನೆಯಾಗುತ್ತಿತ್ತು. ಇನ್ನು ಪ್ರತಿ ಪಾಕ ಸುರಿದ ನಂತರವೂ ಕೊಪ್ಪರಿಗೆ ತಳದ ಬೆಲ್ಲದ ಹುಡಿಯನ್ನು ಉಂಡೆ ಮಾಡಿ ಉಂಡೆಬೆಲ್ಲದ ಸೇವನೆಯಾಗುತ್ತಿತ್ತು. ಬಿಸಿಬಿಸಿ ಉಂಡೆಬೆಲ್ಲವನ್ನು ಆ ಅಂಗೈಯಿಂದ ಈ ಅಂಗೈಗೆ ಪಟಪಟನೆ ಎಸೆದುಕೊಂಡು ತಿನ್ನುತ್ತಿದ್ದುದೇ ಮೋಜು. ಇನ್ನೇನು ಕಬ್ಬೆಲ್ಲಾ ಅರೆದು ಮುಗಿದು ಆಲೆಮನೆ ಕೆಲಸ ಮುಕ್ತಾಯ ಹಂತಕ್ಕೆ ಬಂದಾಗ ನಮಗೆ ಏನನ್ನೋ ಕಳೆದುಕೊಂಡ ಭಾವ. ಆಗಲೇ ಮನೆಯಲ್ಲಿ ಜೋನಿಬೆಲ್ಲವನ್ನು ಡಬ್ಬಿಗಳಲ್ಲಿ ಶೇಖರಿಸಿ ಇಟ್ಟಿರುತ್ತಿದ್ದರು. ದಿನವೂ ಬೆಳೆಗ್ಗೆ ತಿಂಡಿ (ನಮ್ಮ ಕಡೆ ತಿಂಡಿ ಅಂದರೇ ರೊಟ್ಟಿಯಾದ್ದರಿಂದ) ರೊಟ್ಟಿಗೆ ಜೋನಿಬೆಲ್ಲ ನೆಂಚಿಕೊಂಡು ತಿನ್ನುವಾಗಲೆಲ್ಲಾ ಆಲೆಮನೆಯದೇ ಮಾತುಕತೆ! ಇನ್ನೂ ಒಂದು ವರ್ಷ ಕಾಯಬೇಕು, ಕೂಳೆಕಬ್ಬಿನ ಗಾಣ ಹಾಕಿಸುವುದಕ್ಕೆ.
ಆಲೆಮನೆಯ ಗಾಣವನ್ನು ಬಿಚ್ಚಿಕೊಂಡು ಹೋಗುವ ದೃಶ್ಯ ಕಣ್ಣೆದುರು ಬಂದಾಗಲೆಲ್ಲಾ ನನಗನ್ನಿಸುವುದು:
ಬಡಿಬಡಿದು
ಬಡಿಗೆಯಾಗಿಯೇ ಸವೆಯಿತು
ಬಂಗಾರ ಹೊಳಪಾಯಿತು,
ಅರೆದರೆದು
ಗಾಣವಾಗಿಯೇ ಉಳಿಯಿತು
ಕಬ್ಬು ರಸವಾಗಿ ಹರಿಯಿತು,ʼ ಎಂದು
ಬಡಿಗೆ ಮತ್ತು ಗಾಣವೂ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಿ ತಮ್ಮ ಅಸ್ಥಿತ್ವವನ್ನು ಸಾರ್ಥಕಗೊಳಿಸಿಕೊಂಡಿವೆಯಲ್ಲವೆ ಎನಿಸದಿರದು.
ಕ್ರಮೇಣ ನಮ್ಮ ಅಕ್ಕಪಕ್ಕದ ಗದ್ದೆಯವರೂ ಕಬ್ಬನ್ನು ಬೆಳೆದು ಎಲ್ಲೆಲ್ಲೂ ಕಬ್ಬೇ ಕಂಗೊಳಿಸಲಾರಂಭಿಸಿ ಕಬ್ಬುಗಳ್ಳರು ಹಂಚಿಹೋಗಿ ನಮ್ಮ ಕಬ್ಬುಬೆಳೆಯ ಮೇಲಿನ ಒತ್ತಡ ಕಡಿಮೆಯಾಯಿತು. ಮುಂದಿನ ಸಾರಿ ಇನ್ನೇನು ಗಾಣ ಹಾಕಿಸಬೇಕೆನ್ನುವಾಗ ಕಬ್ಬುಗಳಿಂದ ಸೂಲಂಗಿ ಹೊರಟು ʼಈಗ ಬೇಡ ಇಳುವರಿ ಕಮ್ಮಿಯಾಗುತ್ತೆʼ ಎಂಬ ಹಿರಿಯರ ಅಭಿಪ್ರಾಯದಿಂದ ಮುಂದೂಡಲ್ಪಟ್ಟಿತು. ಮತ್ತೊಮ್ಮೆ ಆಲೆಮನೆಯ ಸಂಭ್ರಮದ ನಿರೀಕ್ಷೆಯಲ್ಲಿದ್ದ ನಮಗೆ ತಾತ್ಕಾಲಿಕ ನಿರಾಶೆಯೇ ಆಯಿತು.ಕಬ್ಬಿನ ಗಿಡಗಳೆಲ್ಲಾ ಬಿಳಿಯ ಬೊಂಬಾಯಿ ಮಿಠಾಯಿಯಂಥಾ ಹೂಗಳಿಂದಾವೃತವಾಗಿ ಗದ್ದೆಯು ಹಿಮಾಚ್ಛಾದಿತವಾದಂತೆ ಕಾಣಲಾರಂಭಿಸಿತು. ಆದರೆ ತಿನ್ನಲು ಕಬ್ಬನ್ನು ಮುರಿದುಕೊಂಡಾಗ ಜಲ್ಲೆಯೊಳಗೆ ಕೊಳವೆಯಂತಾಗಿದ್ದು ಸಿಹಿಯೂ ಕಡಿಮೆಯಾಗಿದೆಯೆನಿಸಿ ಹಿರಿಯರ ಆತಂಕದೊಂದಿಗೆ ನಮ್ಮದೂ ಸಹಸ್ಪಂದನೆಯಾಯಿತು.
ಇಷ್ಟರಲ್ಲೇ ಬಯಲಿನಲ್ಲೆಲ್ಲಾ ಕಬ್ಬನ್ನು ಬೆಳೆದ ನಂತರ ನಮ್ಮೂರಿಗೆ ಶುಗರ್ ಫ್ಯಾಕ್ಟರಿ ಬರುತ್ತೆ ಎನ್ನುವ ರೂಮರ್ ಪ್ರಾರಂಭವಾಯಿತು. ನಾವೂ ಬೇರೆಬೇರೆ ಊರುಗಳಿಗೆ ಓದಲು ಹೋಗಿ ಮೊದಲಿನಂತೆ ಗದ್ದೆಯೊಂದಿಗಿನ ಗಳಸ್ಯ ಕಂಠಸ್ಯ ಕಮ್ಮಿಯಾಗಲಾರಂಭಿಸಿತು.
ಕಾಲೇಜಿನಲ್ಲಿ ಆರ್ಗ್ಯಾನಿಕ್ ಕೆಮಿಸ್ಟ್ರಿ ಓದುತ್ತಿದ್ದಾಗ ಕೇನ್ ಶುಗರ್ಸುಕ್ರೋಸ್ ನ ಸ್ಟ್ರಕ್ಚರಲ್ ಫಾರ್ಮುಲಾ ಬರೆಯುವಾಗ ಅದರ ಮೂಲಬೆಲ್ಲರಾಯನ ನೆನಪಾಗದಿರುತ್ತಿರಲಿಲ್ಲ. ಆಹಾ ಬಿಸಿಬೆಲ್ಲವೆ! ನಾನೇನಾದರೂ ಬಾಯ್ತಪ್ಪಿ ಬೆಲ್ಲ ಎಂದರೂ ದೇಶದ ವಿವಿಧಮೂಲೆಗಳಿಂದ ಬಂದವರಲ್ಲಿದ್ದ ಕನ್ನಡಿಗರು ಅವರ ಕಡೆ ಬೆಲ್ಲ ಎಂದರೆ… ಎಂದು ಹೇಳಿ ನಾನು ಮತ್ತೆಂದೂ ಜೋರಾಗಿ ಆ ನನ್ನ ಪರಮ ಪ್ರಿಯಸಿಹಿ ಕಣಜದ ನಾಮವನ್ನು ಹೇಳದಂತೆ ಮಾಡಿಬಿಡುತ್ತಿದ್ದರು. ನಮ್ಮ ಶರ್ಕರ ಪಿತನನ್ನು ನಾನು ಮನದಲ್ಲೇ ನೆನೆದು ಆಸ್ವಾದಿಸುತ್ತಿದ್ದೆ. ಕಬ್ಬು ಇನ್ನೇನು, ಪುರಾಣಗಳಲ್ಲಿ ಕಾಮದೇವನು ಕಬ್ಬಿನ ಬಿಲ್ಲು ಮತ್ತು ಹೂವಿನಬಾಣಗಳನ್ನು ಬಳಸಿಯೇ ಪ್ರೇಮಿಗಳನ್ನು ಹೊಡೆಯುತ್ತಾನೆಂಬ ಕಥೆಯೇ ಇದೆಯಲ್ಲ. ಅದನ್ನೂ ʼಇಕ್ಷುಚಾಪನ ಗೆಲಿದನೆʼ ಎಂದು ಗಣಪತಿಗೆ ಹೇಳುತ್ತಾರೆಂಬ ಕಥೆಯನ್ನೂ ಅಜ್ಜಿ ಹೇಳುತ್ತಿದ್ದರು. ಇಕ್ಷುಚಾಪ ಎಂದರೆ ಕಬ್ಬನ್ನು ಬಿಲ್ಲಾಗಿ ಹೊಂದಿದ್ದ ಮನ್ಮಥ ಎನ್ನುವುದನ್ನೂ ಬಿಡಿಸಿ ಅರ್ಥೈಸುತ್ತಿದ್ದರು. ನಮಗಂತೂ ಆ ಕಥೆಗಳನ್ನು ಕೇಳಲು ಒಂದು ರೀತಿಯ ರೋಚಕತೆಯಿಂದ ಕೂಡಿದ ಕುತೂಹಲ.
ನಮ್ಮ ಮದುವೆಯಾದ ಹೊಸತರಲ್ಲಿ ನನ್ನವರು ನಮ್ಮೂರಿಗೆ ಬಂದಿದ್ದಾಗ ನಮ್ಮ ಬೆಟ್ಯಾಲಿಯನ್ ಅವರನ್ನು ಕಬ್ಬಿನಗದ್ದೆಗೆ ಕರೆದುಕೊಂಡು ಹೊರಟಿತು. ಒಳ್ಳೆ ಕಬ್ಬುಗಳನ್ನು ಆರಿಸಿ ಮುರಿದು ತಂದು ಎಲ್ಲರೂ ತಿನ್ನಲಾರಂಭಿಸಿದೆವು. ಮಲೆನಾಡಿನವರಾದ ನನ್ನವರು ಕಬ್ಬನ್ನು ತಿನ್ನುತ್ತಿದ್ದ ವೈಖರಿಯನ್ನು ನೋಡಿ ನಮ್ಮಣ್ಣನ ಮಗ ʼಮಾವಂಗೆ ಕಬ್ಬು ತಿನ್ನಕ್ಕೆ ಬರಲ್ವಾʼ ಎಂದು ಅಚ್ಚರಿ ವ್ಯಕ್ತಪಡಿಸಿದ. ಇವರೂ ಪರಮ ಸಾಹಸ ಪಡುತ್ತಾ ಕೊಳಲಿನಂತೆ ಕಬ್ಬನ್ನು ಹಿಡಿದುಕೊಂಡು ಮುಂದಿನ ಹಲ್ಲುಗಳಲ್ಲಿ ಕಚ್ಚುತ್ತಾ ತಿನ್ನಲು ನಡೆಸುತ್ತಿದ್ದ ಪ್ರಯತ್ನವನ್ನು ನೋಡಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಕಬ್ಬನ್ನು ತಿನ್ನುವ ವಿಧಾನವನ್ನು ತಿಳಿಸಿಕೊಡಬೇಕಾಯಿತು. ಕನ್ನಡದ ಹಿರಿಯ ಸಾಹಿತಿ ಪಂಜೆ ಮಂಗೇಶರಾಯರ ಜಯಂತಿ ಅಂಗವಾಗಿ ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ಕವಿತೆಯಲ್ಲಿ ʼಕಚ್ಚಿದರೆ ಕಬ್ಬಾಗಿ, ಹಿಂಡಿದರೆ ಜೇನಾಗಿʼ ಎಂದು ವರ್ಣಿಸಿದ್ದಾರೆ. ಆಹಾ ನಮ್ಮ ಕಬ್ಬಿನ ವೈಭವವೇ!
ನಮ್ಮದೇ ಸಂಸಾರದ ಹೆಚ್ಚುತ್ತಿದ್ದ ಜವಾಬ್ಧಾರಿಗಳ ನಡುವೆ ಊರಿಗೆ ಹೋಗುವುದೂ ಕಡಿಮೆಯಾಗಿ ಕ್ರಮೇಣ ನಮ್ಮ ಗದ್ದೆಗೆ ನಾನು ಅಪರಿಚಿತಳಾಗುವಂತಾಯ್ತು. ಒಮ್ಮೆ ಊರಿಗೆ ಹೋಗಿದ್ದಾಗ ಆಗಾಗ ಮೂಗಿಗೆ ಅಪ್ಪಳಿಸುತ್ತಿದ್ದ ತೀಕ್ಷ್ಣವಾದ ವಾಸನೆಯು ಶುಗರ್ ಫ್ಯಾಕ್ಟರಿಯಿಂದ ಬರುತ್ತಿರುವುದು ಎಂದು ತಿಳಿಯಿತು. ಅದು ಶುಗಾರ್ ಬೈಪ್ರಾಡಕ್ಟ್ ಮೊಲಾಸೆಸ್‌ನ ವಾಸನೆ ಅಂತ ಅಣ್ಣ ಹೇಳಿದ. ಸಕ್ಕರೆಯ ಉಪೋತ್ಪನ್ನ ಕಾಕಂಬಿ ಎಂದು ಕನ್ನಡ ಮಾಧ್ಯಮದಲ್ಲಿಯೂ ಓದಿದ್ದೆ. ಆದರೆ ಅದಕ್ಕೆ ಇಷ್ಟೊಂದು ಕಟುವಾಸನೆ ಇರುತ್ತದೆಂದು ತಿಳಿದಿರಲಿಲ್ಲ. ಹಾಗೇನಾದರೂ ಹೇಳಿದರೆ ʼನಿಮ್ಮದೆಲ್ಲಾ ಪುಸ್ತಕದ ಬದನೇಕಾಯಿʼ ಅಂದುಬಿಡ್ತಾನೆ ಅಂತ ಸುಮ್ಮನಾದೆ. ʼಫ್ಯಾಕ್ಟರಿ ಶುರುವಾದಾಗಿನಿಂದ ಈ ಗಬ್ಬು ನಾತದ್ದೇ ಪಜೀತಿಯಾಗಿದೆʼ ಎಂದು ಅಮ್ಮ ಅಲವತ್ತುಕೊಂಡರು. ಈಗ ಯಾರಿಗೂ ಆಲೆಮನೆ ಹಾಕಕ್ಕೆ ಪರ್ಮಿಷನ್ ಕೊಡಲ್ಲ. ಎಲ್ಲರೂ ಕಬ್ಬನ್ನ ಫ್ಯಾಕ್ಟರಿಗೇ ಹೊಡೆಯಬೇಕು ಎಂಬ ಸುದ್ಧಿಯಿಂದ ಆಲೆಮನೆಯನ್ನು ನೋಡಲು ಉತ್ಸುಕರಾಗಿದ್ದ ಮಕ್ಕಳಿಗೆ ನಿರಾಸೆಯೇ ಆಯಿತು.
ವರ್ಷಕ್ಕೊಮ್ಮೆ ಸಂಕ್ರಾಂತಿ ಹಬ್ಬಕ್ಕೆ ತರುವ ಕಬ್ಬನ್ನಷ್ಟೇ ನಾವೀಗ ಸಂಪ್ರದಾಯದಂತೆ ತಿನ್ನುತ್ತಿರುವುದು. ಅದೂ ಮಕ್ಕಳಿಗೆ ತುಂಬಾ ಇಷ್ಟ ಅಂತ ತರುತ್ತಿದ್ದ ಕಬ್ಬನ್ನು ತುಂಡರಿಸಿ ಅಲ್ಲಿಟ್ಟು–ಇಲ್ಲಿಟ್ಟು-ಫ್ರಿಝ್‌ನೊಳಗೂ ಇಟ್ಟು ಕಡೆಗೂ ತಿನ್ನುವುದನ್ನೇ ಮರೆತು ಒಣಗಿ ಕಟ್ಟಿಗೆಯಂತಾದಾಗ ಡಸ್ಟ್ ಬಿನ್ ನತ್ತ ಕಳಿಸುವುದೂ ವರ್ಷಕ್ಕೊಮ್ಮೆ ನಡೆದೇ ಇದೆ. ಆದರೆ ಕಬ್ಬಿನ ಜಲ್ಲೆಯನ್ನು ಸಿಗಿದು ತಿಂದದ್ದು ಯಾವುದೋ ಕನಸಿನಂತಾಗಿದ್ದು ಈಗ ಅಮ್ಮನ ಕಬ್ಬು ಮೋಹವನ್ನರಿತ ಮಕ್ಕಳು ʼಕಳೆದ ಸಿಗುರಿನʼ ಕಬ್ಬನ್ನು ಸಣ್ಣಸಣ್ಣ ಚೂರುಗಳನ್ನು ಮಾಡಿ ಒಂದು ಪ್ಲೇಟಿಗೆ ಹಾಕಿ ತಂದು ಕೊಟ್ಟಾಗ ಒಂದೊಂದೇ ಚೂರನ್ನುಅಳಿದುಳಿದ ಹಲ್ಲುಗಳಿಂದ ಜಗಿದು ರಸಾಸ್ವಾದನೆ ಮಾಡುತ್ತಾ ನಮ್ಮ ಕಬ್ಬಿನ ಗದ್ದೆಯೊಳಗೆ ತೂರಿಕೊಂಡು ಸಾಗುತ್ತೇನೆ
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ