- ಬೆಳಗಲಿ ಈ ಅಗ್ರಹಾರ ಬೆಳಗುಲಿ - ಏಪ್ರಿಲ್ 18, 2026
- ಶ್ರೀ ಕೇಶವೇಶ್ವರ-ಪ್ರವಾಸಿ ಮಾರ್ಗದರ್ಶಿ ಫಲಕ - ಸೆಪ್ಟೆಂಬರ್ 7, 2025
- ಸಾಂಸ್ಕೃತಿಕ ನಗರಿಯಲ್ಲೊಂದು ಶಿಕ್ಷಣ ಕ್ರಾಂತಿ - ಜೂನ್ 8, 2025
ಅಗ್ರಹಾರ ಬೆಳಗುಲಿ: ಹರಿ-ಹರರ ಸಮನ್ವಯದ ಕೇಶವೇಶ್ವರ ದೇವಾಲಯ ಸಂರಕ್ಷಣೆಯತ್ತ ಒಂದು ಹೆಜ್ಜೆ
ನನಗೆ ಬಾಲ್ಯದಿಂದಲೂ ಐತಿಹಾಸಿಕ ದೇವಾಲಯಗಳ ಬಗ್ಗೆ ಒಂದು ಅವ್ಯಕ್ತವಾದ ಸೆಳೆತ. ಗೋಪಾಲಕೃಷ್ಣ ಅಡಿಗರ “ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು…” ಎಂಬ ಸಾಲುಗಳಂತೆ, ಈ ಸೆಳೆತಕ್ಕೆ ನಿರ್ದಿಷ್ಟ ಕಾರಣ ತಿಳಿಯದಿದ್ದರೂ, ನನ್ನ ಹುಟ್ಟೂರಾದ ತುರುವೇಕೆರೆಯ (ಹೊಯ್ಸಳರ ಕಾಲದ ‘ಸರ್ವಜ್ಞ ವಿಜಯ ನರಸಿಂಹಪುರ’) ದೇವಾಲಯಗಳು ಮತ್ತು ನನ್ನ ತಾಯಿಯ ಅಚಲವಾದ ದೈವಭಕ್ತಿ ನನ್ನ ಮೇಲೆ ಗಾಢವಾದ ಪ್ರಭಾವ ಬೀರಿದೆ.
ನಂತರದ ದಿನಗಳಲ್ಲಿ, ಸುಂದರ ದೇವಾಲಯಗಳ ಗೋಪುರಗಳಲ್ಲಿ ಮೂಡಿದ ಬಿರುಕುಗಳು, ಪಾಳುಬಿದ್ದ ಗೋಡೆಗಳು ನನ್ನನ್ನು ಚಿಂತೆಗೆ ಈಡುಮಾಡಿದವು. ಈ ಸ್ಮಾರಕಗಳಿಗೆ ಅವುಗಳ ಗತವೈಭವವನ್ನು ಮರಳಿ ನೀಡಬೇಕೆಂಬ ದೃಢ ನಿರ್ಧಾರವೇ ಇಂದು ನನ್ನನ್ನು ಐತಿಹಾಸಿಕ ದೇವಾಲಯಗಳ ಸಂರಕ್ಷಣಾ ಹಾದಿಯಲ್ಲಿ ಮುನ್ನಡೆಸುತ್ತಿದೆ. ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ ಮತ್ತು ಆರ್ಎಸ್ಎಸ್ನ (RSS) “ತನ್ ಸಮರ್ಪಿತ್ ಮನ್ ಸಮರ್ಪಿತ್” ಎನ್ನುವ ಸಮರ್ಪಣಾ ಭಾವವೇ ಈ ಕಾರ್ಯಕ್ಕೆ ಮೂಲ ಪ್ರೇರಣೆ.
ಅಗ್ರಹಾರ ಬೆಳಗುಲಿ: ಇತಿಹಾಸದ ಇಣುಕು ನೋಟ
ಹಾಸನ ಜಿಲ್ಲೆಯ ಅಗ್ರಹಾರ ಬೆಳಗುಲಿ ಗ್ರಾಮವು ಹೊಯ್ಸಳ ದೊರೆ ಎರಡನೇ ವೀರ ಬಲ್ಲಾಳನ ಕಾಲದಲ್ಲಿ (ಕ್ರಿ.ಶ. 1288) ಚತುರ್ವೇದ ಪಾರಂಗತರಿಂದ ಕೂಡಿದ ‘ಅಗ್ರಹಾರ’ವಾಗಿತ್ತು. ಇಲ್ಲಿನ ಶ್ರೀ ಕೇಶವೇಶ್ವರ ದೇವಾಲಯವನ್ನು ವೀರ ಬಲ್ಲಾಳನ ದಂಡನಾಯಕನಾದ ಕೇಶವ ದಂಡನಾಯಕ ನಿರ್ಮಿಸಿದನೆಂದು ಶಾಸನಗಳು ಹೇಳುತ್ತವೆ.
ಸ್ಥಳೀಯವಾಗಿ ‘ಬೆಟ್ಟೇಶ್ವರ’ ಎಂದು ಕರೆಯಲ್ಪಡುವ ಈ ದೇವಾಲಯವು ಒಂದು ಅಪರೂಪದ ದ್ವಿಕೂಟ ರಚನೆ. ಇಲ್ಲಿ ಶ್ರೀ ಕೇಶವ (ವಿಷ್ಣು) ಮತ್ತು ಶಿವ ಇಬ್ಬರಿಗೂ ಪ್ರತ್ಯೇಕ ಗರ್ಭಗುಡಿಗಳಿವೆ. ಇದು ಹೊಯ್ಸಳ ವಾಸ್ತುಶಿಲ್ಪದ ಭವ್ಯತೆಗೆ ಸಾಕ್ಷಿಯಾಗಿದೆ.
ಶ್ಲೋಕದ ಚಮತ್ಕಾರ: ಹರಿ-ಹರ ಅಭೇದ ತತ್ವ
ಈ ದೇವಾಲಯದ ಅತ್ಯಂತ ದೊಡ್ಡ ವಿಶೇಷತೆಯೆಂದರೆ ಅಲ್ಲಿನ ಹರಿ-ಹರ ಸಮನ್ವಯ ಭಾವ. ಶಿವ ಮತ್ತು ವಿಷ್ಣು ಇಬ್ಬರೂ ಒಂದೇ ಎಂದು ಸಾರುವ ಅದ್ಭುತ ಶ್ಲೋಕವೊಂದು ಇಲ್ಲಿದೆ:
“ಪಾಯತ್ ಕುಮಾರ ಜನಕಹ- ಶಶಿಖಂಡ ಮೌಳಿ!
ಶಂಖ ಪ್ರಭಶ್ಚ ನಿಧನಶಚ್ಚ ಗವಿಷಯಾನಃ!!”ಈ ಶ್ಲೋಕದ ಚಮತ್ಕಾರವೆಂದರೆ, ಮೊದಲ ಅಕ್ಷರವನ್ನು ಸೇರಿಸಿ ಓದಿದರೆ ಅದು ಶಿವನನ್ನು ಸ್ತುತಿಸುತ್ತದೆ, ಮೊದಲ ಅಕ್ಷರ ಬಿಟ್ಟು ಓದಿದರೆ ವಿಷ್ಣುವಿನ ಮಹಿಮೆಯನ್ನು ಸಾರುತ್ತದೆ. ಉದಾಹರಣೆಗೆ, ‘ಕುಮಾರ ಜನಕ’ ಎಂದರೆ ಶಿವ, ‘ಮಾರ ಜನಕ’ ಎಂದರೆ ವಿಷ್ಣು. ಇಂತಹ ಸಾಹಿತ್ಯಿಕ ವೈಶಿಷ್ಟ್ಯ ಈ ದೇವಾಲಯದ ಘನತೆಯನ್ನು ಹೆಚ್ಚಿಸಿದೆ.
ಸಂರಕ್ಷಣೆಯ ಹಾದಿ ಮತ್ತು ಅಭಿವೃದ್ಧಿ ಕಾರ್ಯಗಳು
ಕಾಲನ ಹೊಡೆತಕ್ಕೆ ಸಿಲುಕಿ ಶಿಥಿಲವಾಗಿದ್ದ ಈ ದೇವಾಲಯವನ್ನು ಪುನಶ್ಚೇತನಗೊಳಿಸಲು ‘ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ’ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ:
- ತಂತ್ರಜ್ಞಾನದ ಸ್ಪರ್ಶ: ಸ್ವಗ್ರಾಮ್ ಫೌಂಡೇಶನ್ ಬೆಂಗಳೂರು ಅವರ ಸಹಕಾರದೊಂದಿಗೆ ದೇವಾಲಯದ ಬಳಿ QR ಸ್ಕ್ಯಾನ್ ಕೋಡ್ ಇರುವ ಫಲಕ ಅಳವಡಿಸಲಾಗಿದೆ. ಇದನ್ನು ಸ್ಕ್ಯಾನ್ ಮಾಡಿದರೆ ದೇವಾಲಯದ ಸಂಪೂರ್ಣ ಇತಿಹಾಸ ಪ್ರವಾಸಿಗರಿಗೆ ಲಭ್ಯವಾಗುತ್ತದೆ.
- ಶುಚಿಗೊಳಿಸುವಿಕೆ: ಇತ್ತೀಚೆಗೆ (ಫೆಬ್ರವರಿ 21, 2026) ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (HPCL) ತಂಡದವರು ದೇವಾಲಯದ ಆವರಣ, ಗೋಪುರ ಹಾಗೂ ಐತಿಹಾಸಿಕ ಕೊಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದಾರೆ.
- ಹಸಿರೀಕರಣ: ದೇವಾಲಯದ ಸುತ್ತಲೂ 50ಕ್ಕೂ ಹೆಚ್ಚು ವಿವಿಧ ಬಗೆಯ ಹೂವಿನ ಗಿಡಗಳನ್ನು ನೆಟ್ಟು ಸುಂದರ ನಂದನವನ ನಿರ್ಮಿಸಲಾಗಿದೆ.
- ಧಾರ್ಮಿಕ ಜಾಗೃತಿ: ದೊಡ್ಡ ಪ್ರಮಾಣದ ರುದ್ರಾಭಿಷೇಕ ಮತ್ತು ಪಾರಾಯಣಗಳ ಮೂಲಕ ಜನರಲ್ಲಿ ಧಾರ್ಮಿಕ ಮತ್ತು ಐತಿಹಾಸಿಕ ಪ್ರಜ್ಞೆಯನ್ನು ಜಾಗೃತಗೊಳಿಸಲಾಗುತ್ತಿದೆ.
ತಲುಪುವ ಹಾದಿ
ಈ ಅದ್ಭುತ ದೇವಾಲಯವು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಿಂದ ತಿಪಟೂರು ಹೆದ್ದಾರಿಯಲ್ಲಿ ಬರುವ ನುಗ್ಗೆಹಳ್ಳಿಯಿಂದ ಕೇವಲ 7 ಕಿಲೋಮೀಟರ್ ದೂರದಲ್ಲಿದೆ. ಉತ್ತಮ ರಸ್ತೆ ಸಂಪರ್ಕ ಮತ್ತು ಬಸ್ ಸೌಲಭ್ಯವಿದೆ.
ಉಪಸಂಹಾರ:
ಐತಿಹಾಸಿಕ ಸ್ಮಾರಕಗಳು ನಮ್ಮ ಪೂರ್ವಜರು ನಮಗೆ ಬಿಟ್ಟುಹೋದ ಆಸ್ತಿ. ಕೇವಲ ಮಾತುಗಳಿಂದ ಅವುಗಳ ಸಂರಕ್ಷಣೆ ಸಾಧ್ಯವಿಲ್ಲ; ಅದಕ್ಕೆ ಕೃತಿ ರೂಪದ ಸೇವೆ ಅಗತ್ಯ. ಅಗ್ರಹಾರ ಬೆಳಗುಲಿಯ ಈ ಸಂರಕ್ಷಣಾ ಕಾರ್ಯವು ಇತರ ಪಾಳುಬಿದ್ದ ದೇವಾಲಯಗಳ ಜೀರ್ಣೋದ್ಧಾರಕ್ಕೆ ದಾರಿದೀಪವಾಗಲಿ. “ಚರೈವೇತಿ ಚರೈವೇತಿ” (ಸತತ ಮುನ್ನಡೆ) ಎಂಬ ಮಂತ್ರದೊಂದಿಗೆ ನಮ್ಮ ಇತಿಹಾಸವನ್ನು ಉಳಿಸುವ ಕಾರ್ಯ ಮುಂದುವರಿಯಲಿ.
ಹೆಚ್ ಪಿ ತಂಡದಿಂದ ಸ್ವಚ್ಛತಾ ಕಾರ್ಯಕ್ರಮ


ಅಗ್ರಹಾರ ಬೆಳಗುಲಿ ದೇವಾಲಯ @ ದಿನಾಂಕ 21/02/2026 ಶನಿವಾರ. ದೇವಾಲಯ ಮತ್ತು ದೇವಾಲಯ ಕೊಳ ಸ್ವಚ್ಛತೆ by HP ಕಂಪನಿ ತಂಡ.


ಅಗ್ರಹಾರ ಬೆಳಗುಲಿ “ಸಸಿ ನೆಡುವ “ಕಾರ್ಯಕ್ರಮ.


ದಿನಾಂಕ 21.2. 2026 ರಂದು ಶನಿವಾರ ಚನ್ನರಾಯಪಟ್ಟಣ ತಾಲೂಕು ಅಗ್ರಹಾರ ಬೆಳಗುಲಿ ಗ್ರಾಮದಲ್ಲಿ -ಹಿಂದೂಸ್ತಾನ್ ಪೆಟ್ರೋಲಿಯಂ (HP) ಕಂಪನಿ ಹಾಸನ ಟರ್ಮಿನಲ್ ಇವರಿಂದ ನಡೆದ ದೇವಾಲಯದ ಗೋಪುರಗಳು ಮತ್ತು ಸುತ್ತಲ ಸ್ವಚ್ಛತಾ ಕಾರ್ಯ. -ದೇವಾಲಯದ ಐತಿಹಾಸಿಕ ಕಲ್ಯಾಣಿ ಸ್ವಚ್ಛತಾ ಕಾರ್ಯ- ದೇವಾಲಯದ ಸುತ್ತ ಹೂವಿನ ಗಿಡಗಳ ನೆಡುವ ಕಾರ್ಯಕ್ರಮ ನೆರೆದಿದ್ದ ಭಕ್ತರಲ್ಲಿ ತುಂಬಾ ಸಂತೋಷ ತಂದಿತು.
ಈ ಕಾರ್ಯಕ್ರಮವು ಜಲ ಮೂಲಗಳ ಸಂರಕ್ಷಣೆ ಮತ್ತು ಐತಿಹಾಸಿಕ ಸ್ಮಾರಕದ ಸ್ವಚ್ಛತೆಯ ಶ್ರೇಷ್ಠ ಕಾರ್ಯವಾಗಿತ್ತು. ಅಲ್ಲದೆ ಈ ಕಾರ್ಯಕ್ರಮವು ಇತರ ಗ್ರಾಮಗಳ ಜನರು ತಮ್ಮ ತಮ್ಮ ಗ್ರಾಮಗಳ ದೇವಾಲಯಗಳ ಸ್ವಚ್ಛತೆ ದೇವಾಲಯದ ಕಲ್ಯಾಣಿಗಳ ಸಂರಕ್ಷಣೆಗೆ ಪ್ರೇರಣೆ ನೀಡುವಂತಿತ್ತು.
ಈ ಕಾರ್ಯಕ್ರಮದಲ್ಲಿ ಹಿಂದೂಸ್ತಾನ್ ಪೆಟ್ರೋಲ್ ಕಂಪನಿಯ ಹಾಸನ ಟರ್ಮಿನಲ್ ನ ಜನರಲ್ ಮ್ಯಾನೇಜರ್ ರಾದ ಶ್ರೀಯುತ ಪ್ರಕಾಶ್ ರವರು ಮಾತನಾಡುತ್ತಾ- ಈ ರೀತಿ ಐತಿಹಾಸಿಕ ದೇವಾಲಯಗಳು ಮತ್ತು ಕಲ್ಯಾಣಿಗಳು( ಜಲ ಮೂಲಗಳನ್ನು ಸಂರಕ್ಷಿಸುವುದು) ಸಂಸ್ಥೆಯ ಸಂಸ್ಥೆಯ ಸೇವಾ ಕಾರ್ಯವಾಗಿದೆ.
ಈ ರೀತಿಯ ಕಾರ್ಯಕ್ರಮಗಳು ಸ್ವಚ್ಛ ಭಾರತ ಸಂದೇಶಗಳನ್ನು ಸಾರುತ್ತದೆ ಎಂದು ತಿಳಿಸಿದರು. ಮುಂದುವರೆದು ಇಂತಹ ಐತಿಹಾಸಿಕ ಮಹತ್ವ ( ದೇವಾಲಯ ನಿರ್ಮಾಣ ಕಾಲ ಶಾಲಿವಾಹನ ಶಕ 1210 ಅಂದರೆ ಪ್ರಸ್ತುತಕ್ಕೆ ಸಲ್ಲುವ 737 ವರ್ಷಗಳ ಹಿಂದೆ. ಹೊಯ್ಸಳರ ದೊರೆ ಎರಡನೇ ವೀರ ಬಲ್ಲಾಳನ ದಂಡನಾಯಕನಾಗಿದ್ದ ಕೇಶಿರಾಜ ನಿಂದ ನಿರ್ಮಿತವಾದ ದೇವಾಲಯ) ದೇವಾಲಯವನ್ನು ಸ್ವಚ್ಛ ಮಾಡಿದ್ದ ಹೆಮ್ಮೆ ಮತ್ತು ಸಂತೋಷ ಸಂಸ್ಥೆ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಐತಿಹಾಸಿಕ ಸ್ಮಾರಕಗಳ ಸಂರಕ್ಷಣಾ ವೇದಿಕೆ ಸಂಚಾಲಕರಾದ ಟಿ. ವಿ. ನಟರಾಜ ಪಂಡಿತ್ ರವರು ಮಾತನಾಡುತ್ತಾ- ದೇವಾಲಯದ ಐತಿಹಾಸಿಕ ಮಹತ್ವ ಹಿನ್ನೆಲೆ ವಿವರಿಸಿದರು- ದೇವಾಲಯವು ಸ್ಥಳೀಯ ಗ್ರಾಮಸ್ಥರ ಸಂಕಲ್ಪದಿಂದ ರಾಜ್ಯ ಪುರಾತತ್ವ ಇಲಾಖೆಯ ಸಂರಕ್ಷಿತವಾಗಬೇಕಾದ ಸ್ಮಾರಕಗಳ ಪಟ್ಟಿಗೆ ಸೇರಿದ್ದರೂ – ದೇವಾಲಯವು ದಿನದಿಂದ ದಿನಕ್ಕೆ ಶಿತಿಲತೆಯನ್ನು ಹೊಂದಿತ್ತಿರುವುದರಿಂದ- ದೇವಾಲಯದ ಸಂರಕ್ಷಣೆಯ ಕಾರ್ಯವನ್ನು 2025-26 ne ಸಾಲಿನಲ್ಲಿಯೇ ಆರಂಭಿಸುವಂತೆ ಮಾನ್ಯ ಲೋಕಸಭಾ ಸದಸ್ಯರು ಮತ್ತು ಮಾನ್ಯ ಶಾಸಕರ ಮೂಲಕ ರಾಜ್ಯ ಪುರಾತತ್ವ ಇಲಾಖೆ ಮೇಲೆ ಒತ್ತಡ ತರುವಂತೆ ಮಾಡಲು ಮನವಿ ಮಾಡಿದರು.
ದೇವಾಲಯದ ಅಭಿವೃದ್ಧಿ ಸಂರಕ್ಷಣೆಯಲ್ಲಿ ಗ್ರಾಮಸ್ಥರ ಪಾತ್ರ ಬಹಳ ಮಹತ್ವವಾದದ್ದು ಎಂದು ತಿಳಿಸಿದರು.
ಇದೇ ಸಮಯದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿಮ್ಸ್ ಸಂಸ್ಥೆಯ ಡಾಕ್ಟರ್ ಜಗದೀಶ್ ಡಾಕ್ಟರ್ ಉದಾಸಿ ಮಠ.ಮತ್ತು ಇತಿಹಾಸ ಆಸಕ್ತರಾದ ಸೃಜನ್ ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅರ್ಚಕರಾದ ಶ್ರೀರಾಮ್ಪ್ರಸಾದ್ ರವರ ಸೇವಾ ಕಾರ್ಯ ಮತ್ತು ಗುಡಿ ಗೌಡರ ದೇವಾಲಯ ಸಂರಕ್ಷಣೆಯ ಆಸಕ್ತಿ ಪ್ರಶಂಸೆಗೆ ಒಳಗಾಯಿತು.
ಒಟ್ಟಿನಲ್ಲಿ ಈ ಕಾರ್ಯಕ್ರಮ ದೇವಾಲಯದ ಅಭಿವೃದ್ಧಿಗೆ ಗ್ರಾಮಸ್ಥರಲ್ಲಿ ನವ ಚೈತನ್ಯ ಮೂಡಿಸಿದೆ
ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.







ಪಂಡಿತ್ಜಿ…..ನಿಮ್ಮೆಲ್ಲರ ಕಾರ್ಯ ಅತ್ಯಂತ ಶ್ಲಾಘನೀಯ. ಪಾರಂಪರಿಕ ಮೌಲ್ಯವನ್ನು ಸಂರಕ್ಷಿಸುವ ಮೂಲಕ ಈ ನೆಲದ ಅನ್ನದ, ನೀರು, ಗಾಳಿ ಋಣಕ್ಕೆ ಸಲ್ಲಿಸುತ್ತಿರುವ ಕೃತಜ್ಞತಾ ಭಾವ ಅನುಕರಣೀಯ ಮತ್ತು ಮಾದರಿ ಎನಿಸಿದೆ. ನಿಜಕ್ಕೂ ಬೆಳಗುಲಿ ಬೆಳಗಲೇ ಬೇಕು. ಹೃತ್ಪೂರ್ವಕ ಧನ್ಯವಾದಗಳೊಂದಿಗೆ
ಶ್ರೀಪಾದ ಬಿಚ್ಚುಗತ್ತಿ ಯಲಸಿ