- ಮೌನದ ಶಕ್ತಿ.. - ಜೂನ್ 6, 2020
ಮೌನದ ಶಕ್ತಿ ಮಾತುಗಾರರಿಗೇಕೆ ಅರ್ಥವಾಗುವುದಿಲ್ಲ?
ಮೌನ ಮತ್ತು ಮಾತಿನ ಆಯ್ಕೆ ಬಂದಾಗ ಮೌನ ಹೆಚ್ಚು ಆಪ್ತವೆನಿಸುತ್ತದೆ. ಮೌನಕ್ಕೆ ಯಾವಾಗಲೂ ಮನಸ್ಸು ತಲೆಬಾಗುತ್ತದೆ. ಪರಿಸ್ಥಿತಿ ಎಂತಹದ್ದೇ ಇರಲಿ. ಮೌನ ನನಗೇ ಗೊತ್ತಿಲ್ಲದೇ ನನ್ನನ್ನು ಆವರಿಸಿ ಬಿಡುತ್ತದೆ. ಅದೇ ಮೌನದಿಂದ ಸಾಕಷ್ಟು ನೋವನ್ನೂ ಅನುಭವಿಸಿದ್ದೇನೆ. ಹಾಗಾಗಿ ಸಾಕಷ್ಟು ಬಾರಿ ಮೌನದ ಬದಲು ಮಾತನ್ನು ಆಯ್ಕೆ ಮಾಡಿಕೊಳ್ಳಬೇಕು ಎನಿಸಿದರೂ ಅದೇಕೋ ಮತ್ತೆ ಮೌನಕ್ಕೆ ಶರಣಾಗುತ್ತೇನೆ. ಪ್ರತಿ ಬಾರಿಯೂ ಮೌನಕ್ಕೆ ಶರಣಾದಾಗ ಮನಸ್ಸು ಇದೇ ಸರಿಯಾದ ನಿರ್ಧಾರ ಎಂದು ಹೇಳುತ್ತದೆ. ಇದೇ ಕಾರಣಕ್ಕೆ ಇರಬೇಕು ಮತ್ತೆ ಮತ್ತೆ ಮೌದ ಮೊರೆ ಹೋಗುತ್ತೇನೆ.
ಆದರೆ ಇದೇ ಮೌನವನ್ನು ಪ್ರತಿಯೊಬ್ಬರೂ ತಮ್ಮದೇ ರೀತಿಯಲ್ಲಿ ನನ್ನನ್ನು ವ್ಯಾಖ್ಯಾನಿಸಿದ್ದೂ ಇದೆ. ಮೌನವಾಗಿದ್ದುಕೊಂಡು ವ್ಯಕ್ತಿ ಅರ್ಥವಾಗುವಷ್ಟು ಮಾತಿನಲ್ಲಿ ಅರ್ಥವಾಗುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಮೌನಕ್ಕೆ ಅಂತಹ ಶಕ್ತಿಯಿದೆ. ಮೌನ ಏನನ್ನೂ ಬೇಕಾದರೂ ಮಾಡಿಸುತ್ತದೆ. ಆದರೆ ಎದುರಿಗಿರುವ ವ್ಯಕ್ತಿ ಮೌನವನ್ನು ಸರಿಯಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಎದುಗಿರುವವನು ಮಾತಿನ ಆಯ್ಕೆಗೆ ಬಿದ್ದು, ಮೌನವನ್ನು ಅಣಕ ಮಾಡಬಾರದು.
ಹೀಗೆ ಮಾತಿನ ಭರಕ್ಕೆ ಬಿದ್ದು ಮೌನಕ್ಕೆ ಅಣಕ ಮಾಡಿದ ಘಟನೆ ನನ್ನ ಬದುಕಿನಲ್ಲೂ ಸಾಕಷ್ಟು ಬಾರಿ ಬಂದು ಹೋಗಿದೆ, ಬರುತ್ತಲೂ ಇದೆ. ಹಾಗೆಂದ ಮಾತ್ರಕ್ಕೆ ಮಾತಿಗೆ ಬೀಳಬೇಕು ಎಂದು ಮಾತ್ರ ಎಂದಿಗೂ ಅನಿಸುವುದಿಲ್ಲ. ಮಾತಿಗೆ ಮಾತು ಬೆಳೆದು ವಾದಕ್ಕೆ ತಿರುಗುವ ತನಕ ಮಾತು ಬೆಳೆಸಬೇಕು ಎಂದೇ ಎನಿಸುವುದಿಲ್ಲ. ಮಾತು ಪ್ರಾರಂಭವಾಗುವುದಕ್ಕೂ ಮುನ್ನಾ ಮೌನ ತಾನಾಗಿಯೇ ಆವರಿಸಿಕೊಂಡು ಬಿಟ್ಟಿರುತ್ತದೆ. ಅದೇಕೋ ಗೊತ್ತಿಲ್ಲಾ ಇತ್ತೀಚಿನ ದಿನಗಳಲ್ಲಿ ನನಗಂತೂ ಮಾತಿಗೂ ವೈರಾಗ್ಯ ಬರುವುದಕ್ಕೆ ಆರಂಭವಾಗಿದೆ.
ಹೆಚ್ಚು ಹೆಚ್ಚು ಮೌನಕ್ಕೆ ಶರಣಾಗಬೇಕು ಎಂದೇ ಎನಿಸುತ್ತಿರುತ್ತದೆ. ಮೌನದಲ್ಲಿ ಅದೇನೋ ಒಂಥರಾ ಖುಷಿ ನನಗೆ. ಮನಸ್ಸಿಗೆ ಬೇಸರವಾದರೆ, ನೋವಾದರೆ ಅಥವಾ ಯಾರಾದರೂ ನೋವು ಮಾಡಿದರೂ ಅವರ ಜೊತೆಗೆ ಮಾತಿಗೆ ಇಳಿಯಬೇಕು. ಹೀಗೇಕೆ ಮಾಡಿದಿರಿ ಎಂದು ಕೇಳುಬೇಕು ಎನಿಸುವುದೇ ಇಲ್ಲ. ಸುಮ್ಮನೆ ನನ್ನಷ್ಟಕ್ಕೆ ನಾನೇ ಮೌನಕ್ಕೆ ಶರಣಾಗಿ ಬಿಡುತ್ತೇನೆ. ಎದುರಿನವರು ಹೇಳುತ್ತಾರೆ ಮಾತಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಾರದೇ ಎಂದು. ಆ ಕ್ಷಣಕ್ಕೆ ಹೌದು ಎನಿಸಿ ಮಾತಿಗೆ ಇಳಿದರೆ ಅದರ ಸ್ವರೂಪವೇ ಬದಲಾಗಿ ಬಿಡುತ್ತದೆ. ಮಾತಿನ ನಂತರದ ಪರಿಣಾಮ ನೆನಪಿಗೆ ಬಂದು ಮೌನ ತುಟಿ ಮೇಲೆ ಬಂದು ಕೂರುತ್ತದೆ.
ಮೌನದ ಆಳಕ್ಕೆ ಇಳಿದು ನೋಡುವಷ್ಟು ಶಕ್ತರೇ ಮಾತುಗಾರರು? ಅಥವಾ ಮಾತುಗಾರರಿಗೆ ಮೌನದ ಶಕ್ತಿ ಅರ್ಥವಾದೀತೇ? ಒಮ್ಮೊಮ್ಮೆ ಹೀಗೂ ಅನಿಸಿಬಿಡುತ್ತದೆ. ಮಾತಿನಲ್ಲಿ ಜರೆಯುವ ಬದಲು ಮೌನದ ಶಕ್ತಿಯನ್ನು ಅರಿತು ತೂಕದ ಮಾತನಾಡಿ. ಮಾತಿಗೂ ಬೆಲೆ ಬರುತ್ತದೆ. ಮಾತು ಬರುತ್ತದೆ ಎಂದು ಸುಮ್ಮನೆ ಬಡಬಡಿಸಿದರೆ ಮಾತೂ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ ಎಂಬುದನ್ನು ಮರೆಯದಿರಿ. ಸುಖಾಸುಮ್ಮನೆ ಮಾತು ಬರುತ್ತದೆಂದು ವಾದಕ್ಕೆ ಇಳಿಯದಿರಿ. ವಾದಕ್ಕೆ ಇಳಿದು ಮೌನಕ್ಕೆ ಅಪಮಾನ ಮಾಡದಿರಿ.
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ