ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕರಣ ಸೀಮೆಯ ದಾಟಿ

ಡಾ.ಗೋವಿಂದ ಹೆಗಡೆ ಅವರು ತೀಡಿದ ಕಾವ್ಯ ಚಂದನ....!
ಡಾ. ಗೋವಿಂದ್ ಹೆಗಡೆ
ಇತ್ತೀಚಿನ ಬರಹಗಳು: ಡಾ. ಗೋವಿಂದ್ ಹೆಗಡೆ (ಎಲ್ಲವನ್ನು ಓದಿ)

ಶ್! ಸುಮ್ಮನೆ ಇರು ಏ ಗಾಳಿ,
ಪೈರು ತುಂಬಿದ ಹೊಲಗಳ
ಹೊಕ್ಕು ಹುಯ್ಯಲಿಡಬೇಡ
ಅವನ ಕನಸುಗಳೀಗ
ಅವಳ ತೋಳುಗಳಲ್ಲಿ
ಉಯ್ಯಾಲೆ ತೂಗುತ್ತಿವೆ.

ಓ ಹಾಡುಗಳೇ ನಿಮ್ಮ ಬಣ್ಣ
-ದ ಪೋಷಾಕು, ಆ ಜಗಮಗ
ಒತ್ತರಿಸಿಡಿ
ಒಡಲ ರಾಗಗಳು ಎದೆಗೆ
ರಂಗು ಬಳಿದಿವೆ

ನೀವು, ಕವಿತೆಗಳೇ ತುಟಿ
ಬಿಗಿದು ಆಲಿಸಿರಿ
ಅವರ ಹೊಕ್ಕುಳಿನಿಂದ ಹೊಮ್ಮಿದ
ಒಂದೇ ಒಂದು ಸೊಲ್ಲು
ನಿಮ್ಮನ್ನು ಪೊರೆಯಬಹುದು

ಈ ಗಾಳಿ ಈ ಹಾಡು ಈ ಕವಿತೆ
ನಿರುಮ್ಮಳದಲ್ಲಿ
ವಿರಮಿಸುವಾಗ
ನದಿಯೊಂದು ಚಾಚುತ್ತದೆ
ಮಡಿಲು.
ಹಗಲ ಹಣ್ಣಾಗಿಸಿ
ಸಂಜೆಯಾಗಿಸುತ್ತದೆ
ಹೊಚ್ಚಿ ನೇವರಿಸುತ್ತ
ಕರುಳಿನ ತಲ್ಲಣಗಳ
ಒಪ್ಪಿಸಿಕೊಳ್ಳಿ, ಸಾಕು.

ಅಷ್ಟು ಸಾಕು-
ಕಣ್ಣು ಕಿವಿ ಮೂಗು
ನಾಲಗೆ ಕರಗಲು
ಮೈಯಳಿದು ಸೇರಲು
ರಂಗು ರಾಗ ರುಚಿ ರಕ್ತಿಗಳ
ಒಂದಾಗಿಸುತ್ತ