ಹರೀಶ್,ಟಿ.ಜಿ ಮಿಹಿರ ಮೂಡುಬಿದಿರೆ
ಕೆವಿ ತಿರುಮಲೇಶರ ಈ ಕವಿತೆಯನ್ನು ಓದಿದಾಗ ನನಗೆ ಭಾರತೀಯ ಕಾವ್ಯಮೀಮಾಂಸೆಯ ನೆನಪಾಯಿತು. ಕವಿತೆಯೆಂದರೇನೆಂದು ಹೇಳುವಾಗ ಅಲ್ಲಿಬರುವ ಸೂತ್ರಪ್ರಾಯವಾದ ಮಾತುಗಳೆಲ್ಲ ನೆನಪಾದವು.
“ಕಾವ್ಯಂ ಗ್ರಾಹ್ಯಂ ಅಲಂಕಾರಾತ್”ಕಾವ್ಯವು ಅಲಂಕಾರಗಳಿಂದ ಶೋಭಿಸಬೇಕು. ಗುಣ,ರೀತಿ.ಶೈಲಿ, ಛಂದಸ್ಸು ಗಳು ಕಾವ್ಯಕ್ಕೆ ಪೋಷಕವಾಗಿ ಬರಬೇಕು “ನಾಕಾಂತಾಮಪಿ ನಿರ್ಭೂಷಂ ವಿಬಾತಿ ವನಿತಾ ಮುಖಂ.” ಅಲಂಕಾರಗಳಿಲ್ಲದೆ ವನಿತೆಯ ಮುಖವು ಶೋಭಿಸದು ,ಅಂತೆಯೇ ಕಾವ್ಯ. ಹೀಗೆನ್ನುವಾಗ ಕವಿ ಒಂಭತ್ತು ದಿನದ ಮುಂಡೋಡ್ಲು ಜಾತ್ರೆಯ ಚಿತ್ರವನ್ನು ತರುತ್ತಾರೆ, ಬಣ್ಣ ಬೇಗಡೆ ಅಂಗಡಿ ಮತ್ತವರ ಕಾಕು,ಹಗಲಿಗೊಂದು ನಮೂನೆಯಾದರೆ ಇರುಳಿನ ಬಣ್ಣದ ಬೆಳಕಿನಲ್ಲಿ ಮೈಮನಸೂರೆಗೊಳ್ಳುವ ಚಿತ್ರ.ಪೆಟ್ರೋಮ್ಯಾಕ್ಸ್ ಬೆಳಕಿನ ಪ್ರಖರತೆ, ಶಬ್ಧ, ಮತ್ತು ಬಿಸಿಯು ನೀಡುವ ಅನುಭವ ಒಂದೆಡೆಯಾದರೆ, ದೂರದಿ ಮಿನುಗುವ ಬುಡ್ಡೀದೀಪಗಳು ಕಟ್ಟಿಕೊಡುವ ಭಾವ ಮತ್ತೊಂದು ಬಗೆ, ಯಾರದ್ದೋ ಕರೆ,ಇನ್ನಾರದ್ದೋ ಸ್ಪರ್ಷ, ಯಾರೋ ಪರಿಚಿತನ ಮುಖನಿಡುವ ಭಾವ ಕ್ಕಿಂತ ಅಪರಿಚಿತನ ಮುಖವು ನೋಟವು ಇನ್ನೊಂದು ಆಯಾಮವನ್ನು ಸೂಚಿಸುತ್ತದೆ.
*ಹೊಸಬಟ್ಟೆತೊಟ್ಟು ಸುಮ್ಮನೆ ಅಲೆಯುವುದು ಕಣ್ಣಿಗೆ ಬೀಳ ಬೇಕು ಆಗ ಅವರೂ ದಿವ್ಯವೆನಿಸುತ್ತಾರೆ*
ಈ ಸಾಲು ಇಡೀ ಕವಿತೆಯ ಬೀಜರೂಪದ ಸಾಲು. ಕವಿತೆಯೆಂದರೆ ಹೊಸಬಟ್ಟೆತೊಟ್ಟು ಸುಮ್ಮನೆ ಸುಳಿವ ,ಕಣ್ಣಿಗೆ ಬೀಳುವಂತಹುದು. ಹೊಸಬಟ್ಟೆ ತೊಟ್ಟು ಸುಳಿದರೆ ಯಾರಿಗಾದರೂ ಕಣ್ಣಿಗೆ ಬಿದ್ದೇ ಬೀಳುತ್ತದೆ.
ಹಾಗಾಗಿ ಕವಿತೆ ನೇರ ನಿರೂಪಣೆಯಾಗಬಾರದು.
“ಗತೋಸ್ತುಮರ್ಕೋ ಬಾತಿಂದು ಯಾಂತಿವಾಸಾಯ ಪಕ್ಷಿಣಾ:ಇತ್ಯಮೇವಾದಿ ಕಿಮ್ ಕಾವ್ಯಂ ವಾರ್ತಾಮುಮೇನಾ ಪ್ರಚಕ್ಷತೆ”ಹೊರಹೊರ ನಿರೂಪಣೆಗಳು ಕಾವ್ಯವಲ್ಲ,ಅವು ವಾರ್ತೆ. ಹಾಗಾಗಿ ಕಾವ್ಯವಾಗಬೇಕಾದರೆ ಅದು ಮಾಮೂಲಿಗಿಂತ ಬಿನ್ನವಾಗಬೇಕು.
“ತಿಲಕಂ ಭಿಬೃತಿ ಸೂಕ್ತಿರ್ಬಾನೈಕ ಉಚಿತಂ ಪದಂ ,ಚಂದ್ರಾನೈವ ಕಸ್ತೂರಿ ತಿಲಕಂ ಶ್ಯಾಮೇವ ಚಂದನಂ” ಚಂದ್ರಾನನೆಗೆ ಕಸ್ತೂರಿಯು ,ಶ್ಯಾಮಾಳಿಗೆ ಚಂದನವು ಹೇಗೆ ಸೊಗಸೋ ಹಾಗೆ ಉಚಿತವಾದ ಪದಗಳು ಕಾವ್ಯಕ್ಕೆ ತಿಲಕಪ್ರಾಯ. ಹಾಗಾಗಿ ಮಾಮೂಲಿ ದಿನಗಳ ಬದಲಿಗೆ ಬಣ್ಣ ಬೇಗಡೆಯ ಜಾತ್ರೆಯೇ ಸೊಗಸು. ಮಾತುಗಳನ್ನು ಸೊಗಸಾಗಿ ಆಡುವುದೇ ಕಾವ್ಯ. ಕಾಳಿದಾಸನ “ಹರಶಿರಶ್ಚಂದ್ರಿಕಾ ಧೌತ್ಯಹರ್ಮ್ಯಂ” ಇದಕ್ಕೊಂದು ಚಂದದ ಉದಾಹರಣೆ ಅಥವಾ “ಆಲೆ ಆಡುತ್ತಾವೆ ,ಗಾಣ ತಿರುಗುತ್ತಾವೆ,ನವಿಲು ಸಾರಂಗ ಕುಣೀತಾವೆ ಬಳೆಗಾರ ಅಲ್ಲೈತೆ ನನ್ನ ತವರೂರು” ಈ ಉದಾಹರಣೆಗಳನ್ನೇ ನೋಡಿ. ಇಲ್ಲಿ ಎರಡೂ ಕಡೆ ತನ್ನಮನೆಯ ಪರಿಚಯವನ್ನು ಮಾಡಿಕೊಡಲಾಗಿದೆ.
‘ಇಲ್ಲೇ ಮುಂದೆ ಹೋಗಿ ಎಡಕ್ಕೆ ತಿರುಗಿ’ಎಂಬುದಕ್ಕಿಂತ ಎಷ್ಟು ಹೃದ್ಯವಾಗಿ ಪರಿಚಯಿಸಲಾಗಿದೆ ನೋಡಿ. ಇದೇ ಕಾವ್ಯ. ದೊಡ್ಡ ಹುಡುಗನನ್ನು ಸೊಂಟದ ಮೇಲೆ ಹೊತ್ತುಕೊಂಡು ಏಸುವನ್ನು ನೋಡಲು ಹೋದ ಹುಡುಗಿಯನ್ನು ನೋಡಿ ಏಸು ಕನಿಕರದಿಂದ” ಆ ಹುಡುಗನನ್ನು ಇಳಿಸು” ಎಂದದ್ದಕ್ಕೆ ಆಕೆ ಹೇಳುವ ಮಾತೇ ನಿಜವಾದ ಕಾವ್ಯ.”ಈತ ಹುಡುಗನಲ್ಲ ಈತ ನನ್ನ ತಮ್ಮ”ಕವಿಯ ಪ್ರಕಾರ ಇದು ಕಾವ್ಯ,ಇದೇ ಕಾವ್ಯ, ಜಾತ್ರೆಯ ಉಲ್ಲಾಸ ,ಬಣ್ಣ, ಬೆಳಕು,ಪರಿಚಿತ ಜನ,ಅಪರಿಚಿತ ಜನ ,ಶರಬತ್ತು ಗರ್ದಿಗಮ್ಮತ್ತುಗಳು ಸೇರಿ ನಮ್ಮ ಹೃದಯದಲ್ಲೊಂದು ಹೇಳಲೇಬೇಕಾದ ಫೀಲಿಂಗ್ ಬರುತ್ತದಲ್ಲ ,ಇದೇ ಕವಿತೆ, ಅಂದರೆ ಜಾತ್ರೆಯ ಉದ್ದೀಪಿಸುವ ಸಂತೋಷದಲ್ಲಿ ಸಹಜವಾಗಿ ಹೊರಹೊಮ್ಮುವ ಮಾತುಗಳಂತೆ ಮನಮೋಹಕವಾಗಿರುತ್ತವೆ.
ಉಮರ್ ಕಯ್ಯಾಂ ಹೇಳುವಂತೆ ಮರ,ನೆರಳು,ನದಿಯ ಮಂಜುಳ ನಿನಾದ ,ಮಧಿರೆ,ನಲ್ಲೆಯ ಗಾನ, ನಲ್ಗಾವ್ಯಗಳ ಸಂಗವು ನವನವೋನ್ಮೆಷಶಾಲಿನಿಯಾಗಿರುವಂತೆ, ಜಾತ್ರೆ,ಬಣ್ಣ,ಬೇಗಡೆ, ಶರಬತ್ತುಗಳ ರಸಪಾಕವೇ ಕವಿತೆ. ಆದರೆ ಈ ರೂಪ ರಂಗು ಗಳೂ ಶಾಶ್ವತವೇನಲ್ಲ, ಜಾತ್ರೆಯ ಮೂರುದಿನದ ನಂತರ ಎಲ್ಲವೂ ಮಾಯವಾಗುವ ಹಾಗೆ ಕವಿತೆಯೂ ನಮ್ಮಲ್ಲಿ ತಳಮಳವನ್ನು ತರುತ್ತದೆಂಬ ಮಾತು ಒಪ್ಪಿತವಾಗುವುದು ಕೊಂಚ ಕಷ್ಟ.ಯಾಕಂದರೆ ಅಕ್ಷರ,ಸಾಹಿತ್ಯಕ್ಕೆ ವಿನಾಶವಿಲ್ಲ.ಅದು ಸದಾ ಹೊಳೆವ ತಾರೆ .ಹೀಗಾಗಿ ಕವಿತೆಯ ಮೊದಲಿನ ಭಾಗವನ್ನು ಅನುಲಕ್ಷಿಸಿ ಹೇಳುವುದಾದರೆ ಕಾವ್ಯದ ಕುರಿತಾದ ಕಾವ್ಯಮೀಮಾಂಸೆಯ ತತ್ವಗಳನ್ನು ತುಂಬಾ ಸರಳವಾದ ಮಾತುಗಳಲ್ಲಿ ಮತ್ತು ತೀರಾ ಪರಿಚಿತವಾದ ಜಾತ್ರೆಯ ಅವರಣದೊಂದಿಗೆ ಕಟ್ಟಿ ಕೊಟ್ಟಿ
ರುವ ಕೆ ವಿ ತಿರುಮಲೇಶರ “ಹೇಗಿರಬೇಕು ಕವಿತೆ:ಒಂದು ದೃಷ್ಟಿ ” ಕವನವು ತನ್ನ ನವಿರಾದ ನಿರೂಪಣೆಯ ಮೂಲಕ ಗಮನ ಸೆಳೆಯುತ್ತದೆ.ಕವಿತೆಯ ಶೀರ್ಷಿಕೆಯೇ ಹೇಳುವಂತೆ ಇದು ಕವಿತೆಯೆಂದರೇನೆಂಬ ಪ್ರಶ್ನೆಗೆ ಕವಿ ತನ್ನ ವಿಚಾರವೆಂಬ ದೃಷ್ಟಿಯಿಂದ ನೀಡಿದ ಉತ್ತರ.ಆದರೆ ಇಡೀ ಕವಿತೆಯನ್ನು ಓದಿದಾಗ ಈ ದೃಷ್ಟಿ ಜಗತ್ತಿನ ಎಲ್ಲ ಕವಿಗಳ ದೃಷ್ಟಿ ಕೂಡಾಹೌದು.
ಹೆಚ್ಚಿನ ಬರಹಗಳಿಗಾಗಿ
ಹಣತೆ – ನಸುಕು ಕವಿಗೋಷ್ಠಿ
ತಿರುಮಲೇಶ್ ಮೇಷ್ಟ್ರಿಗೆ
ತಿರುಮಲೇಶ್- ೮೦:ವಿಶೇಷ ಸಂಚಿಕೆ