ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತಿರುಮಲೇಶ್ – ನನ್ನ ಓದು

ಮಾಲಿನಿ ಗುರುಪ್ರಸನ್ನ
ಇತ್ತೀಚಿನ ಬರಹಗಳು: ಮಾಲಿನಿ ಗುರುಪ್ರಸನ್ನ (ಎಲ್ಲವನ್ನು ಓದಿ)

ತಿರುಮಲೇಶ್ ಅವರ ಸಾಹಿತ್ಯವನ್ನ ನಾನು ಸ್ಪಷ್ಟವಾಗಿ ಎರಡು ಭಾಗಗಳನ್ನಾಗಿಸಿ ನೋಡುತ್ತೇನೆ… ಒಂದು ಅವರ ಕಾವ್ಯ ಮತ್ತು ಕಥೆಗಳ ಪ್ರಪಂಚ, ಎರಡನೆಯದು ಅವರ ಅಂಕಣ ಬರಹಗಳು ಮತ್ತು ಇತರ ಬರಹಗಳ ಪ್ರಪಂಚ. ಪ್ರತಿಯೊಬ್ಬ ಮನುಷ್ಯನಲ್ಲೂ ಇರಬಹುದಾದ ಒಂದು ಒಳಜಗತ್ತು ಮತ್ತು ಒಂದು ಹೊರಜಗತ್ತು ಅವರ ಸಾಹಿತ್ಯದಲ್ಲೂ ದಾಖಲಾಗಿದೆ. . ತಿರುಮಲೇಶರ ಒಳಜಗತ್ತು ಈ ಕಾವ್ಯ ಮತ್ತು ಕಥಾ ಪ್ರಪಂಚ. ಅವರ ಹೊರಜಗತ್ತು ಅಂಕಣಬರಹಗಳು ಮತ್ತು ಇತರ ಲೇಖನಗಳ ಪ್ರಪಂಚ. ಮೇಲ್ನೋಟಕ್ಕೆ ಬಹಳ ಶಾಂತವಾಗಿ ಗೋಚರಿಸುವ, ಸಂಯಮದಿಂದ ಮಾತನಾಡುವ ಅವರು ಅಂತರಂಗದಲ್ಲಿ ಇರುವ ಅವರ ಪ್ರತಿಭಟನೆಗಳನ್ನ ಅವರ ಕಾವ್ಯ ಮತ್ತು ಕಥೆಗಳಲ್ಲಿ ಮಾತ್ರ ಹೊರಹೊಮ್ಮಿಸುತ್ತಾರೆ ಅಥವ ಅಭಿವ್ಯಕ್ತಿಸುತ್ತಾರೆ. ಅವರ ಮುಖವಾಡಗಳು ಕವನದಲ್ಲಿ ಕೌಪೀನವನ್ನೇ ಮುಖವಾಡವಾಗಿಸುವ ವ್ಯಂಗ್ಯ ಗಮನಿಸಬಹುದು. ಆದರೆ ಅವರ ಅಂಕಣ ಬರಹಗಳಲ್ಲಿ ಅವರು ಯಾವುದೇ ರೀತಿಯ ವೈಯಕ್ತಿಕ ರೆಫರೆನ್ಸುಗಳನ್ನ ದಾಖಲಿಸುವುದಿಲ್ಲ. ವ್ಯಂಗ್ಯಕ್ಕೆ ಆಸ್ಪದವಿಲ್ಲ.. ಅವರ ಅಂಕಣಬರಹಗಳನ್ನ ಗಮನಿಸಿದರೆ ನಾನು ಎಂಬ ವೈಯಕ್ತಿಕ ಹಿನ್ನೆಲೆ ಎಲ್ಲಿಯೂ ಬರುವುದಿಲ್ಲ.. ಅವರು ಆ ಲೇಖನಗಳನ್ನು ತಮ್ಮಿಂದ ದೂರವಿಟ್ಟೆ ಬರೆಯುತ್ತಾರೆ ಎಂಬ ಸಂದೇಹ ನನ್ನದು. ತಮ್ಮ ವಿಸ್ತಾರವಾದ ಓದಿನ ಬೆರಗನ್ನು ಓದುಗನಿಗೆ ದಾಟಿಸುವುದರಲ್ಲಿ ವಿಪರೀತ ಉತ್ಸುಕರಾಗಿರುವ ತಿರುಮಲೇಶ್ ತಮ್ಮ ಇತರ ಬರಹಗಳನ್ನು ಬಹಳ ಸಂಯಮದಿಂದ ನಿರೂಪಿಸುತ್ತಾರೆ. ಅವರ ಕಾವ್ಯದಲ್ಲಿ ಕಂಡುಬರುವ ತೀವ್ರತೆ, ರೋಷ, ಪ್ರತಿಭಟನೆ ಗಳನ್ನು ಅಂಕಣಬರಹಗಳಲ್ಲಿ ದಾಟಿಸುವುದಿಲ್ಲ.. ಅದಕ್ಕೇ ನನಗನ್ನಿಸುವುದು ಕಾವ್ಯ, ಕಥೆ ಅವರ ಒಳಜಗತ್ತು, ಅಂಕಣ ಬರಹಗಳು ಅವರ ಹೊರಜಗತ್ತು..

ತಿರುಮಲೇಶರು ಮೊದಲು ಅಡಿಗರ ಮಾರ್ಗದಲ್ಲೆ ನಡೆದು, ಅಡಿಗರನ್ನು ಅನುಸರಿಸಲು ಯತ್ನಿಸಿದ್ದ ನಂತರ ಅಡಿಗರಿಗಿಂತ ಭಿನ್ನ ಮಾರ್ಗವನ್ನು ಹಿಡಿಯಲು ಪ್ರಯತ್ನಪಟ್ಟು, ಅಡಿಗರಿಗೆ ಆಗಾಗ ತಮ್ಮ ಕವಿತೆಗಳ ಮೂಲಕವೇ ಟಾಂಗ್ ನೀಡಿದರೂ (ಕೂಮಂ ಭಟ್ಟರು ಎನ್ನುತ್ತಾ – ಅಡಿಗರ ಕೂಪಮಂಡೂಕದ ರೆಫರೆನ್ಸಲ್ಲಿ ಗೇಲಿ ಮಾಡಿ) ಅದು ಅವರ ತಾತ್ವಿಕ ವಿರೋಧವಷ್ಟೇ . ಬಹಳ ಪ್ರಮುಖವಾಗಿ ಅವರು ಕೆಂಡಸಂಪಿಗೆಯಲ್ಲಿ ಬರೆದ ಮಣ್ಣಿನ ವಾಸನೆ ಮತ್ತು ವಸ್ತು ಪ್ರತಿರೂಪ ವಿಚಾರ ಎಂಬ ಲೇಖನದಲ್ಲಿ ಟಿ.ಎಸ್.ಎಲಿಯಟ್ಟನ ಒಬ್ಜೆಕ್ಟಿವ್ ಕೊರಿಲೇಟಿವ್ ಪರಿಕಲ್ಪನೆಯನ್ನ ಮೊಟ್ಟಮೊದಲು ಕನ್ನಡಕ್ಕೆ ತಂದಿದ್ದು, ಸಮರ್ಥವಾಗಿ ಬಳಸಿಕೊಂಡಿದ್ದು ಅಡಿಗರು ಎನ್ನುವ ಮೂಲಕ ಅಡಿಗರ ಮಹತ್ವವನ್ನ ಗುರುತಿಸುತ್ತಾ. ಟಿ.ಎಸ್. ಎಲಿಯೆಟ್ ಪ್ರತಿಪಾದಿಸಿದ ಒಬ್ಜೆಕ್ಟಿವ್ ಕೊರಿಲೇಟಿವ್ ಪರಿಕಲ್ಪನೆಯನ್ನ ಮಣ್ಣಿನ ವಾಸನೆ ಎಂಬ ಬೀಜರೂಪದ ಪರಿಕಲ್ಪನೆಯಲ್ಲಿ ಅಡಕಗೊಳಿಸಿದ್ದಾರೆ ಎಂದು ಹೇಳುವ ಮೂಲಕ ಅಡಿಗರ ಬಗ್ಗೆ ಅವರಿಗೆ ಇದ್ದ ಗೌರವವನ್ನ ಮತ್ತು ತಮ್ಮ ವಸ್ತುನಿಷ್ಠ ಸ್ವಭಾವವನ್ನ ಅನಾವರಣಗೊಳಿಸಿದರು ಎಂದು ನಾನು ನಂಬಿದ್ದೇನೆ.

ಮತ್ತು ತಿರುಮಲೇಶ್ ಅವರು ಸದಾ ಹೊಸತಿಗೇ ತುಡಿಯುವ ಕವಿ. ಅದು ಎಷ್ಟರ ಮಟ್ಟಿಗೆ ಎಂದರೆ ಅವರು ತಮ್ಮದನ್ನೇ ತಾವು ಮತ್ತೆ ಮತ್ತೆ ಅನುಕರಿಸಲು ಇಷ್ಟ ಪಡುವುದಿಲ್ಲ. ಪ್ರತೀ ಬಾರಿಯೂ ಅವರು ತಮ್ಮ ಓದುಗರ ನಿರೀಕ್ಷೆಯನ್ನು ಸುಳ್ಳು ಮಾಡುವುದರಲ್ಲೇ ಸುಖ ಕಾಣುತ್ತಾರೆ ಎಂಬುದು ನನ್ನ ಅನಿಸಿಕೆ. ಬಹುಶಃ ಅದು ತಿರುಮಲೇಶರನ್ನು ಓದಿದ ಓದುವ ಎಲ್ಲರ ಅಭಿಪ್ರಾಯ ಅಂತಲೂ ನನಗೆ ಅನಿಸುತ್ತದೆ. ಅವರು ಆರಂಭದಲ್ಲಿ ಅಡಿಗರ ಮಾರ್ಗವನ್ನು ಅನುಸರಿಸಿ ಹೊರಟರೂ, ನಂತರ ಅವರು ಆ ಮಾರ್ಗದಿಂದ ಪೂರ್ತಿಯಾಗಿ ಬೇರೆ ನಿಲ್ಲುವ ನಿಟ್ಟಿನಲ್ಲಿ ಪ್ರಯತ್ನಪಟ್ಟು ಯಶಸ್ವಿಯಾದರು.ಅಡಿಗರು ನಮ್ಮ ಭಾರತೀಯ ಪರಂಪರೆಯ, ಭಾರತೀಯ ಸಾಹಿತ್ಯದ, ಭಾರತೀಯ ಪುರಾಣದ ಪ್ರತೀ ಪ್ರಸಂಗವನ್ನು, ಪಾತ್ರವನ್ನೂ, ಪ್ರತಿಮೆಯನ್ನು ತಮ್ಮ ಕಾವ್ಯದಲ್ಲಿ ಬಹಳ ಸಮರ್ಥವಾಗಿ ಬಳಸಿದರು. ಅದನ್ನು ಅವರು ಎಷ್ಟು ಸೊಗಸಾಗಿ ಬಳಸಿಬಿಟ್ಟರು ಎಂದರೆ, ನಂತರ ಬರೆಯಲು ಬಂದವರಿಗೆ ಆ ಪ್ರತಿಮೆಗಳನ್ನು ಬಳಸಿ ಹೊಸತೇನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅನುಮಾನ ಬರುವಂತೆ ಬರೆದರು. ಇಂತಹ ಸಮಯದಲ್ಲಿ ತಿರುಮಲೇಶರು ಬರೆಯುತ್ತ ಮುನ್ನಡೆದಾಗ ನಮ್ಮ ಭಾರತೀಯ ಪರಂಪರೆ, ಪುರಾಣವನ್ನು ಬಳಸಿಕೊಳ್ಳುವಲ್ಲಿ ನಿರಾಸಕ್ತಿ ತೋರಿದ್ದು ಸಹಜವೇ ಆಗಿದೆ ಅಂತ ನನಗನ್ನಿಸುತ್ತದೆ . ಅದರ ಬದಲು ತಾವು ಅತ್ಯಂತ ಶ್ರದ್ಧೆಯಿಂದ ಅಭ್ಯಸಿಸಿದ ಪಾಶ್ಚಾತ್ಯ ಸಾಹಿತ್ಯ, ಪುರಾಣದ ಪಾತ್ರಗಳನ್ನ ಪ್ರತಿಮೆಗಳನ್ನು ತಮ್ಮ ಕಾವ್ಯದಲ್ಲಿ ಮತ್ತು ಕಥನಗಳಲ್ಲಿ ಬಳಸಿಕೊಳ್ಳುತ್ತಾ ಅದರ ಮೂಲಕ ಹೊಸತನ್ನ ಹೇಳಲಿಕ್ಕೆ ಅವರು ಪ್ರಯತ್ನಿಸುತ್ತಾರೆ. ಕೆ.ವಿ.ಟಿಯವರನ್ನ ಬರಹವನ್ನ ಅರ್ಥ ಮಾಡಿಕೊಳ್ಳಲು ಸ್ವಲ್ಪ ಹೆರಾಕ್ಲಿಟಿಸ್, ಕಾಂಟೋ ಮೊದಲಾದ ತತ್ವಜ್ಞಾನಿಗಳನ್ನ, ಅಥವಾ ಕಮೂ, ಕಾಫ್ಕಾ ಅಂಥ ಲೇಖಕರನ್ನ ಓದಿಕೊಂಡರೆ ಒಳಿತು, ಇಲ್ಲದಿದ್ದರೆ ಅವರನ್ನ ಅರ್ಥ ಮಾಡಿಕೊಳ್ಳಲು ಕಷ್ಟ ಎಂಬ ಅಭಿಪ್ರಾಯವೂ ಇದೆ. ಅದರ ಮೂಲಕಾರಣ ಅವರು ತಮಗಾಗಿ ಹೊಸದಾಗಿ ಕೆತ್ತಿದ, ಅಡಿಗರು ಹಿಡಿದ ಹಾದಿಗಿಂತ ಭಿನ್ನವಾದ ಹಾದಿ

ಪಾಶ್ಚಾತ್ಯ ಸಾಹಿತ್ಯದ ಪ್ರತಿಮೆಗಳನ್ನಷ್ಟೇ ತಿರುಮಲೇಶ್ ಅವರು ತಮ್ಮ ಬರಹಗಳಲ್ಲಿ ಬಳಸಿಕೊಂಡರೂ ಭಾರತೀಯ ಪುರಾಣ, ಸಾಹಿತ್ಯದ ಪಾತ್ರಗಳಿಗೆ ತಮ್ಮ ಕಾವ್ಯ ಪ್ರಪಂಚದಲ್ಲಿ ಪ್ರವೇಶ ನೀಡದಿದ್ದರೂ ( ಪಾಪಿಯೂ ನಂತರದ ಕೃತಿಗಳಲ್ಲಿ. ಮಹಾಪ್ರಸ್ಥಾನ ಮುಂತಾದವುಗಳು ಪಾಪಿಯೂ ಮುನ್ನ ಬಂದವುಗಳು ) ಭಾರತೀಯ ಸಾಹಿತ್ಯವನ್ನು ಅವರು ಎಂದಿಗೂ ಕಡೆಗಣಿಸಿದವರಲ್ಲ. ಸಂತ ಶಿಶುನಾಳ ಶರೀಫರನ್ನ ಕನ್ನಡದ ಮೊದಲ ನವ್ಯ ಕವಿ ಎಂದು ಕರೆದರು. ಶಿಶುನಾಳ ಶರೀಫರ ಕಾಲದಲ್ಲಿ ಯೂರೋಪಿನಲ್ಲಿ ಕೂಡಾ ನವ್ಯಕ್ಕೆ ಮೂಲವಾಗಿದ್ದ ಮಾಡ್ರನಿಸಂ ಹುಟ್ಟಿ ಬಂದಿರಲಿಲ್ಲ ಎಂದು ಹೇಳುವ ಮೂಲಕ ಕನ್ನಡ ಸಾಹಿತ್ಯದ ಅಥವಾ ಶಿಶುನಾಳ ಶರೀಫರ ಪ್ರಾಮುಖ್ಯತೆಯನ್ನು ಎತ್ತಿಹಿಡಿಯುತ್ತಾರೆ. ಇಪ್ಪತ್ತನೇ ಶತಮಾನದ ಆದಿಭಾಗದಲ್ಲಿ ಪ್ರಪಂಚದಲ್ಲಿ ಮಾಡ್ರನಿಸಂ ಆರಂಭವಾದರೆ, ಅದಕ್ಕೂ ಒಂದು ಶತಮಾನದ ಮುನ್ನವೇ ಶಿಶುನಾಳ ಶರೀಫರು ಅದನ್ನು ತಮ್ಮ ಕಾವ್ಯದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳುತ್ತಾರೆ. ಮತ್ತು ಶಿಶುನಾಳ ಶರೀಫರು ಶಬ್ಧಲೀಲೆಯನ್ನ ಅದ್ಭುತವಾಗಿ ಉಪಯೋಗಿಸಿದವರು ಎಂದು ತಿರುಮಲೇಶ್ ಗುರುತಿಸುತ್ತಾರೆ. ಇವರ ನಂತರ ಈ ಶಬ್ಧಲೀಲೆ ಅಥವಾ ನಾದಲೀಲೆಯನ್ನ ಬಳಸಿಕೊಂಡವರಲ್ಲಿ ಬಹುಶಃ ಬೇಂದ್ರೆಯೊಬ್ಬರೇ ಅಗ್ರಗಣ್ಯರು ಎಂದು ಹೇಳುತ್ತಾರೆ. ಈ ರೀತಿ, ಕನ್ನಡದ ಅಥವಾ ಭಾರತೀಯ ಸಾಹಿತ್ಯವನ್ನ ಕಡೆಗಣಿಸದೆ ತಮ್ಮ ಕಾವ್ಯದಲ್ಲಿನ ಹೊಸತನಕ್ಕಾಗಿ ಪಾಶ್ಚಾತ್ಯ ಪ್ರತಿಮೆಗಳತ್ತ ಕೈ ಚಾಚಿದರೂ, ತಿರುಮಲೇಶರ ಕಾವ್ಯದ ಅಂತರಂಗ ಮಾತ್ರ ಭಾರತೀಯತೆಯೇ ಎಂದು ನನಗೆ ಅನ್ನಿಸುತ್ತದೆ. ಮನುಷ್ಯ ಸಹಜ ಸ್ವಭಾವಗಳಿಗೆ ಪಾಶ್ಚಾತ್ಯ ಅಥವ ಭಾರತೀಯ ಪ್ರತಿಮೆಗಳು ಈ ಎರಡರಲ್ಲಿ ಯಾವುದನ್ನು ತೆಗೆದುಕೊಂಡರೂ ಅದು ಬಿಂಬಿಸುವುದು ಅಥವ ಪ್ರತಿಪಾದಿಸುವುದು ಮನುಷ್ಯ ಸಹಜ ಸ್ವಭಾವವನ್ನೆ.ಹಾಗಾಗಿ ಅವರು ಹೇಳುವ ರೀತಿ ಭಿನ್ನವಾಗಿದ್ದರೂ ಅದು ಅನನ್ಯ.

ಜನ್ಮದಿನದ ಶುಭಾಶಯಗಳು ತಿರುಮಲೇಶ್ ಸರ್..
??