ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಕಲ್ಯಾಣ ಕರ್ನಾಟಕ ವಿಲೀನದ ವೀರಗಾಥೆ

ಮಲಿಕಜಾನ ಶೇಖ
ಇತ್ತೀಚಿನ ಬರಹಗಳು: ಮಲಿಕಜಾನ ಶೇಖ (ಎಲ್ಲವನ್ನು ಓದಿ)

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಸೈದ್ಧಾಂತಿಕ ತಳಹದಿಯಾದದ್ದು ರಾಷ್ಟ್ರೀಯವಾದ. ವಿದೇಶಿ ವಸ್ತುಗಳ ಬಹಿಷ್ಕಾರ, ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ, ಸ್ವರಾಜ್ಯ ಸ್ಥಾಪನೆಯಂತಹ ಧ್ಯೇಯಗಳನ್ನು ಹೊತ್ತುಕೊಂಡು ಉದಯಿಸಿದ ಭಾರತೀಯ ರಾಷ್ಟ್ರೀಯ ವಾದಕ್ಕೆ ಇನ್ನೊಂದು ಸವಾಲು ಇತ್ತು. ಅದೇ ಭಾರತ ಒಕ್ಕೂಟ ಸ್ಥಾಪನೆ. ಈ ಒಕ್ಕೂಟ ಸ್ಥಾಪನೆ ಮೂಲಕ ಸ್ವರಾಜ್ಯ ಸ್ಥಾಪನೆ ಮಾಡುವುದು ರಾಷ್ಟ್ರವಾದಿ ಚಳುವಳಿಯ ತಾರ್ಕಿಕ ಅಂತ್ಯವಾಗಿತ್ತು.

1704 ರಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಮರಣವಾದ ಮೇಲೆ ಆ ಸಾಮ್ರಾಜ್ಯದ ಅವನತಿ ಆರಂಭವಾಯಿತು. ಸಾಮ್ರಾಜ್ಯವೊಂದರ ಪ್ರಭುತ್ವದಲ್ಲಿ ಅರಾಜಕತೆ ಅನಾಯಕತ್ವ ಮೂಡಿದಾಗ ಸಾಮ್ರಾಜ್ಯ ಛಿದ್ರವಾಗಿ ಚಿಕ್ಕಪುಟ್ಟ ಆಳರಸರು ಹುಟ್ಟಿಕೊಳ್ಳುವುದು ಸಹಜ ಪ್ರಕ್ರಿಯೆ. ಇಂಥ ಸಂದರ್ಭದಲ್ಲಿ ಹುಟ್ಟಿಕೊಂಡ ರಾಜ್ಯಗಳಲ್ಲಿ ಹೈದರಾಬಾದಿನ ಅಸಫಿಯ ರಾಜವಂಶ ಕೂಡ ಒಂದು. 1724 ರಿಂದ1948ರ ವರೆಗೆ ಸುಮಾರು 225 ವರ್ಷಗಳ ಆಳ್ವಿಕೆಯಲ್ಲಿ ಏಳನೆಯ ಮತ್ತು ಕೊನೆಯ ದೊರೆಯಾದ ಮೀರ್ ಉಸ್ಮಾನ್ ಅಲಿ ಖಾನ್ ಅಂತಹ ಬಲಶಾಲಿಯಾದ ಅರಸನಲ್ಲ ಆದರೂ ಧಾರ್ಮಿಕ ದುರಾಭಿಮಾನಿ ಮಾತ್ರ ಆಗಿರಲಿಲ್ಲ.

“ಹಿಂದೂ-ಮುಸ್ಲಿಂ ಇಬ್ಬರೂ ನನ್ನ ಎರಡು ಕಣ್ಣುಗಳು” ಎಂದು ಈತ ಹೇಳುತ್ತಿದ್ದ.ಆದರೆ ಅಂದ ಹಾಗೆ ನಡೆದುಕೊಳ್ಳಲಿಲ್ಲ. ಅದಕ್ಕೆ ಪ್ರಮುಖ ಕಾರಣಗಳು ಎರಡು. ಒಂದು ಕಾಶಿಂ ರಜವಿ ಎಂಬ ವಕೀಲನ “ಇತ್ತೆಹಾದ್” ಪಕ್ಷದ ಪ್ರಭಾವ ಅವನ ಮೇಲೆ ಬೀಳತೊಡಗಿತ್ತು. ಎರಡನೇಯದು ಇದೇ ಸಮಯಕ್ಕೆ ಜನ್ಮತಾಳಿದ “ದೀನದಾರ್” ಎನ್ನುವ ಸಂಘಟನೆ.ಕಾಶಿಮ ರಜನಿ ಮತ್ತು ಅವನು ಸ್ಥಾಪಿಸಿದ “ರಜಾಕಾರ” ಎಂಬ ಸೈನ್ಯದ ಕುಮ್ಮಕ್ಕಿಗೆ ಬಲಿಯಾದ ನಿಜಾಮ್ ದೊರೆ ಮೀರ್ ಉಸ್ಮಾನ್ ಅಲಿ ಖಾನ್ ತಾನು ಭಾರತ ಒಕ್ಕೂಟ ಸೇರಲು ನಿರಾಕರಿಸಿ “ಅಸಫ್ ಝಾ” ಧ್ವಜದ ಕೆಳಗೆ ಸ್ವತಂತ್ರವಾಗಿ ಉಳಿಯುವ ಕನಸು ಕಾಣತೊಡಗಿದ. ಬ್ರಿಟಿಷ್ ಸರಕಾರದ ಕೊನೆಯ ಗವರ್ನರ್ ಜನರಲ್ ಮೌಂಟ್ ಬ್ಯಾಟನ್ ಹೈದ್ರಾಬಾದ್ ಸಂಸ್ಥಾನವನ್ನು ಶಾಂತರೀತಿಯಿಂದ ಭಾರತದೊಂದಿಗೆ ವಿಲೀನಗೊಳಿಸಬೇಕೆಂದು ತುಂಬಾ ಪ್ರಯತ್ನಿಸಿದ. ಹೈದರಾಬಾದ್ ನಿಜಾಮ ಖಾಸಿಂ ರಜ್ವಿಯ ಸಲಹೆ ಮತ್ತು ಮೀರ್ ಲಿಯಾಖತ್ ಅಲಿ ಎಂಬ ಮಂತ್ರಿಯ ಮಾತುಗಳಿಗೆ ಮರುಳಾಗಿ ಹೋದ.ಇವರೊಂದಿಗೆ ಇನ್ನೊಬ್ಬ ಮಂತ್ರಿ ಮೋಯಿನ್ ನವಾಬ್ ಜಂಗ್ ಸೇರಿಕೊಂಡು ಹೈದರಾಬಾದಿನ ಭವಿಷ್ಯ ಬರೆಯಲು ಹೊರಟರು.

ಆದರೆ ಅಂದಿನ ಕಾಂಗ್ರೆಸ್ ಅಧ್ಯಕ್ಷರಾದ ಸ್ವಾಮಿ ರಮಾನಂದತೀರ್ಥರ ನೇತೃತ್ವದಲ್ಲಿ “ಮಾಡು ಇಲ್ಲವೇ ಮಡಿ” ಎನ್ನುವ ಸಂದೇಶದೊಂದಿಗೆ ವಿಲೀನ ಚಳುವಳಿಯ ಕಿಡಿ ಹೊತ್ತಿತು.ಆಗಲೇ ರಜಾಕಾರರ ಹಾವಳಿ ಮತ್ತು ಕೋಮುಗಲಭೆಗಳ ಪ್ರಭಾವದಿಂದ ಈ ಭಾಗದಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳ ಲೂಟಿ ಮತ್ತು ಪ್ರಾಣ ಹಾನಿಗಳು ನಡೆದುಹೋಗಿದ್ದವು. ಅಂದಿನ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲರು 13-ಸಪ್ಟೆಂಬರ್-1948 ರಂದು ವಿಲೀನ ಪ್ರಕ್ರಿಯೆಗೆ ಒಪ್ಪಲಾರದ ಹೈದರಾಬಾದ್ ಸಂಸ್ಥಾನದ ವಿರುದ್ಧ ಐತಿಹಾಸಿಕ ಪೊಲೀಸ್ ಕಾರ್ಯಾಚರಣೆಗೆ ಆಜ್ಞೆ ಮಾಡಿದರು. ಭಾರತೀಯ ಸೇನಾಧಿಕಾರಿ ಜನರಲ್ ಚೌಧರಿಯವರ ನಾಯಕತ್ವದಲ್ಲಿ ಹೈದರಾಬಾದ್ ಸಂಸ್ಥಾನದ ಮೇಲೆ ಎಂಟು ದಿಕ್ಕುಗಳಿಂದ ದಾಳಿ ನಡೆಸಲಾಯಿತು. ಕೊನೆಗೆ ಹೈದರಾಬಾದ್ ನಿಜಾಮನು 18- 9-1948 ರಂದು ಶರಣಾಗತನಾಗಿ ಭಾರತ ಒಕ್ಕೂಟಕ್ಕೆ ಹೈದರಾಬಾದ ಪ್ರಾಂತವನ್ನು ಸೇರಿಸುವ ಪತ್ರಕ್ಕೆ ಸಹಿ ಹಾಕಿದನು. ಕಾಶಿಮ್ ರಜ್ವಿ ತಲೆತಪ್ಪಿಸಿಕೊಂಡು ಭಾರತ ವಿಭಜನೆಯಿಂದ ಸೃಷ್ಟಿಯಾದ ಪಾಕಿಸ್ತಾನ ಸೇರಿದನು.

ಈ ಐತಿಹಾಸಿಕ ಘಟನೆಯ ನೆನಪಿನಲ್ಲಿ ಇತ್ತೀಚೆಗೆ ಪ್ರತಿವರ್ಷ ಸಪ್ಟೆಂಬರ್ 17ನ್ನು “ಹೈದರಾಬಾದ ಕರ್ನಾಟಕ ವಿಮೋಚನಾ ದಿನ” ಎಂದು ಆಚರಿಸಲಾಗುತ್ತದೆ. ಕಲಬುರ್ಗಿ, ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ ಜಿಲ್ಲೆಗಳು ಅಂದಿನ ಹೈದರಾಬಾದ್ ಪ್ರಾಂತ್ಯಕ್ಕೆ ಸೇರಿದ್ದವು. ಆಡಳಿತದ ಅನುಕೂಲಕ್ಕಾಗಿ ಬಳ್ಳಾರಿಯನ್ನು ಕೂಡ ಈಗ ಹೈದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿಯೇ ಗುರುತಿಸಲಾಗುತ್ತಿದೆ. ಮತ್ತು ಈಗ ಈ ಭಾಗವನ್ನು “ಕಲ್ಯಾಣ ಕರ್ನಾಟಕ” ಎಂದು ಹೆಸರಿಸಲಾಗಿದೆ. ಆದರೆ ಈ ದಿನವನ್ನು “ವಿಮೋಚನಾ ದಿನಾಚರಣೆ” ಅಥವಾ “ವಿಲೀನ ದಿನಾಚರಣೆ”ಯಾವ ಹೆಸರಿನಿಂದ ಗುರತಿಸಬೇಕು ಎಂಬ ದ್ವಂದ್ವ ಇನ್ನೂ ಜೀವಂತವಾಗಿದೆ. ಈ ಭಾಗದ ಜನರಿಗೆ ಇದು ನಿಜಾಮನ ಕಪಿಮುಷ್ಠಿಯಿಂದ ಬಿಡಿಸಿಕೊಂಡ ವಿಮೋಚನೆಯ ದಿನ ಎಂಬ ಸಂತೋಷವಿದೆ.ಆದರೆ ಭಾರತದ ರಾಷ್ಟ್ರೀಯ ಒಕ್ಕೂಟದ ವಿಷಯದಲ್ಲಿ ನೋಡಿದರೆ ಇದು ವಿಲೀನ ದಿನವೇ ಹೌದು. ಹೈದರಾಬಾದ್ ಸಂಸ್ಥಾನದ ಸಾಮಾನ್ಯ ಪ್ರಜೆಗಳು ನಿಜಾಮಶಾಹಿಯ ಅಸಫಜಾಹ ಧ್ವಜವನ್ನು ಕಳಚಿ ತ್ರಿವರ್ಣ ಧ್ವಜವನ್ನು ಅಂಗೀಕರಿಸಿದ್ದಾರೆ. ಮತ್ತು ಆನಾ, ಪಾವಲಿ, ಸೇರ, ಕರೆನ್ಸಿಯನ್ನು ತೆಗೆದುಹಾಕಿ ಭಾರತ ಸರಕಾರದ ರೂಪಾಯಿಯನ್ನು ಸ್ವೀಕರಿಸಿ ಭಾರತೀಯತೆಯ ಚಿಹ್ನೆಗಳಿಗೆ ಅರ್ಪಿಸಿಕೊಂಡದ್ದು ಇದೇ ದಿನ.ಆದ್ದರಿಂದ ಇಂದು ಈ ಭಾಗದ ಜನರು ಭಾರತದಲ್ಲಿ ನಿಜವಾಗಿ ಒಂದುಗೂಡಿದ ದಿನವಾಗಿದೆ.ಈ ಕಾರಣಕ್ಕಾಗಿ ಸಪ್ಟೆಂಬರ್ ಹದಿನೇಳನ್ನು ಹೈದರಾಬಾದ್-ಕರ್ನಾಟಕದ “ವಿಲೀನ ದಿನ”ವೆಂದು ಆಚರಿಸುವುದೇ ಸರಿಯಾದ ಪರಿಪಾಠ ಆಗಬಹುದು.