ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಬಲು ಕಠಿಣ ಕಣೇ….ಮಹಿಳೆಯಾಗುವುದು…

ತೇಜಾವತಿ ಹೆಚ್. ಡಿ. (ಖುಷಿ)
ಇತ್ತೀಚಿನ ಬರಹಗಳು: ತೇಜಾವತಿ ಹೆಚ್. ಡಿ. (ಖುಷಿ) (ಎಲ್ಲವನ್ನು ಓದಿ)

ಬಲು ಕಠಿಣ ಕಣೇ
ಮಹಿಳೆಯಾಗುವುದು….
ಮುಂಜಾನೆ ಬೆಳಗಾಯಿತೆಂದರೆ ಗೊಣಗು
ಪಾತ್ರೆಗಳ ಸದ್ದು
ತಲೆಗೊಂದು ಒಗ್ಗರಣೆ
ಕರ್ಣಗಳಿಗೆ ಸುಪ್ರಭಾತ
ನಿದಿರೆ ಬಂದರದೇ ಸ್ವರ್ಗ
ಹಗಲೆಲ್ಲಾ ಘೋರ ನರಕ
ಇರುಳು ಬಿದ್ದ ದುಃಸ್ವಪ್ನಗಳ
ಅರೆಬರೆ ನೆನಪುಗಳು

ಎಲ್ಲೆಯಿಲ್ಲದ ವಿಸ್ತಾರವೇ ಚೆಂದ
ದಾರಿ ನಡಿಗೆ ಸ್ವಚ್ಛಂದ
ಗಡಿಯ ತಲುಪದ ಗುರಿಗೆ
ಪ್ರವಹಿಸುವ ಗುಣ

ಮೆಟ್ಟಿದ ನಿಂದನೆಯ ಗಣನೆಯಿಲ್ಲ ನನಗೆ
ಧ್ವನಿಯಾಗದ ಉಕ್ತಿಗಳು
ನೂರೆಂಟು ಅನುಭವದ ಹೆಜ್ಜೆಗುರುತುಗಳು
ಹಾಗೆಯೇ ಉಳಿದುಹೋಗಿವೆ.

ಅಲ್ಲಿ ಬೆಳಗುವ ತಾರೆ
ಇಲ್ಲಿ ಉರಿಯುವ ಜ್ವಾಲೆ…
ಚಿಮಣಿ ದೀಪದ ಬೆಳಕಿನಲ್ಲಿ
ಕಳೆದ ಗಾಢ ರಾತ್ರಿಗಳು
ಮೈಲುಗಟ್ಟಲೆ ಸಾಗಿ ಕಳಿತ
ಪಾದರಕ್ಷೆಯ ಸ್ಪರ್ಶವಿಲ್ಲದ ಅಂಗಾಲುಗಳು
ಉಸುಕಿನಲ್ಲಿ ತಿಕ್ಕಿ ತಿಕ್ಕಿ
ತುದಿಸವೆದ ಬೆರಳುಗಳು
ಇಳಿಹೊತ್ತಿನವರೆಗೆ ಊಟವಿಲ್ಲದೆ
ಹಸಿದು ತಾಳಹಾಕುತಿದ್ದ ಕರುಳುಗಳು

ಕಿಟ್ಟಗಟ್ಟಿದ ಒಲೆ ಹಚ್ಚಿ
ಹಿಟ್ಟು ಬೇಯಿಸಲು
ಊದಿದ ಊದುಗೊಳವೆಗಳು
ಹೊಗೆಯೂದರ ತುಂಬಿದ ಕಣ್ಣು ಎದೆಗೂಡುಗಳು…
ಈಗ ಇದಾವುದರ ಗುರುತೂ ಇಲ್ಲ ಬಿಡು..
ಆಧುನಿಕತೆಯ ಗಾಳಿ ಎಲ್ಲೆಲ್ಲೂ ಬೀಸಿದೆ

ಎಲ್ಲವನ್ನೂ ಮೀರಿ
ತಪಕ್ಕೆ ಅಣಿಯಾದ
ವಿರಾಗಿಯಾಗಿರುವೆ ನಾನಿಂದು
ಈಗೀಗ ಪ್ರಪಂಚ ಅಣಕ ನಗೆಯ ಬೀರಿದೆ ಕಣೆ..
ಅರಸಿ ಹೊರಟಿದ್ದೇನೆ ಬುದ್ಧಬೆಳಕ..
ಅಲ್ಲಮನ ಮನೆಹೊಕ್ಕು
ಬಾಬಾ ಸಾಹೇಬರ ಜ್ಞಾನದಾಹವ ಹಂಬಲಿಸಿ
ಬಸವನ ಕಾಯಕ ನೆಚ್ಚಿ ಕನಕನ ನುಡಿ ಆಲಿಸಿ
ಮತ್ತೆ ಹುಟ್ಟಬೇಕೆನಿಸಿದೆ ನನಗೆ…

ಉರಿಯುವ ದೀಪಕ್ಕೆ
ಗಾಳಿಯ ಹಂಗಿದೆ ಕಣೆ..
ಗಾಳಿಗೆ ದಿಕ್ಕಿನ ಹಂಗಿದೆ
ಎಷ್ಟು ಉರಿದರೂ ನಾವು
ಅಮರರಾಗುವುದಿಲ್ಲ ನೋಡು.. !
ಇದೇ ವಾಸ್ತವ…

ನಾಯಿಕೊಡೆಗಳಂತಹ
ಕಾಂಕ್ರೀಟಿನ ವಿವಿಧ ವಿನ್ಯಾಸದ
ವಿಲಾಸಿ ಅರಮನೆಗಳಿಗೆ
ವೈಭವದ ಫಲಕಗಳು… !
ಮನೆಮಂದಿಯ ನಾಮಧೇಯ
ಕವಿ ನಟ ಅಧ್ಯಕ್ಷ ಸಂಸ್ಥಾಪಕ ಹೀಗೆ
ನೂರೊಂದು ಮೇರು ಹುದ್ದೆಗಳ
ಸ್ಟಾರ್ ಪ್ಲೇಟ್ ಗಳ ತೋರಿಕೆ.. !
ಬಹಿರಂಗದಲ್ಲಿ ನಿಲುಕದ ನಕ್ಷತ್ರ !
ಅಂತರಂಗದಲ್ಲಿ ಬೇಕೇ…. ಈ ಬದುಕು..?

ತುಳಿದ ಕಲ್ಲುಮುಳ್ಳುಗಳು
ಸೃಷ್ಟಿಯಾದ ಕಂದಕಗಳು
ನಡೆದ ಅಂತರ್ ಕದನ ಅಪರಿಮಿತ ತಿರುವುಗಳು
ಅಳಿಯದೇ ಉಳಿದ ಹಗೆಯ ಕಲೆಗಳು
ಎಷ್ಟೇ ಬಾರಿ ಹುಳಿಹಚ್ಚಿ ಉಜ್ಜಿದರೂ
ಮಿರಿಮಿರಿ ಮಿನುಗದೆ
ಕಿಲುಬಿಡಿದ ಪಾತ್ರೆಯೊಳಗಿನ ಕೊಳಕು ಕಲೆಗಳು…

ಮುಂದಿಟ್ಟ ಹೆಜ್ಜೆ ಹಿಂದೆ ಸರಿಸಿಲ್ಲ ನಾನು
ಮೂಡಿಸಬೇಕೆಂದಿರುವೆ
ಬದಲಾವಣೆಯ ಚಿರಮುದ್ರೆಯ..
ಮಹಿಳೆಯಾಗುವ ಛಲ ಎದೆಯೊಳಗೆ
ಆದರೆ ಬಲು ಕಠಿಣ ಕಣೇ
ಮಹಿಳೆಯಾಗುವುದು
ಬಲು ಕಠಿಣ ಕಣೇ
ಅವರೊಪ್ಪುವಂಥ ಮಹಿಳೆಯಾಗುವುದು…