ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ದರ್ಜೆ ಎರಡನೆಯದೇ

ತೇಜಾವತಿ ಹೆಚ್. ಡಿ. (ಖುಷಿ)
ಇತ್ತೀಚಿನ ಬರಹಗಳು: ತೇಜಾವತಿ ಹೆಚ್. ಡಿ. (ಖುಷಿ) (ಎಲ್ಲವನ್ನು ಓದಿ)

ಕಾಳಜಿ ಕನಿಕರ ಒಲುಮೆ ದುಡಿಮೆ ಎಲ್ಲದರಲ್ಲೂ ಮೊದಲು ನೀನೇ
ಆದರೆ
ದರ್ಜೆ ಎರಡನೆಯದೇ

ತ್ಯಾಗ ಬಲಿದಾನದಲ್ಲೂ ಕಡಿಮೆಯೇನಲ್ಲ
ಬಹುಶಃ
ಚರಿತ್ರೆಯ ಪುಟಗಳೂ ಪಕ್ಷಪಾತಿಗಳೇ ಇರಬೇಕು
ಮರೆಮಾಚಿಬಿಟ್ಟಿವೆ
ಒತ್ತಡಕ್ಕೋ ವ್ಯವಸ್ಥೆಗೋ ಅವಸ್ಥೆಗೋ ಮಣಿದು

ಶ್ರಮ ಪಾಲನೆ ಪೋಷಣೆ ಮುಂದಾಲೋಚನೆ ಅವರಿಗಿಂತ ತುಸು ಹೆಚ್ಚೇ
ಆದರೇನಂತೆ
ಅವರೆಲ್ಲಾ ಮೊದಲ ಸಾಲಿನ ಪ್ರತಿನಿಧಿಗಳು
ಅವರ ಕಷ್ಟ ನಷ್ಟ ಪಾಪ ಅವಮಾನ ಎಲ್ಲಕ್ಕೂ ಸರಿಪಾಲು
ಸಾಧನೆ ಲಾಭದಲ್ಲಿ ಶೂನ್ಯ ಬಾಳು
ಏಕೆಂದರೆ ದರ್ಜೆ…

ಇಷ್ಟಕ್ಕೂ ಮಾಪನದ ಮಾನದಂಡವೇನು
ಬದುಕುವ ರೀತಿಯೋ ಸರ್ವಕಾಲಿಕ ನೀತಿಯೋ
ಜೈವಿಕ ವ್ಯತ್ಯಾಸವೋ
ದರ್ಪ ಪ್ರತಿಷ್ಠೆ ಅಧಿಕಾರ ಶ್ರೇಷ್ಠತೆಗಳ ಮೆರವಣಿಗೆಯೋ
ಹೊತ್ತಿದ್ದೇ ಹೊತ್ತಿದ್ದು ಶತಮಾನಗಳ ಉದ್ದಗಲಕ್ಕೂ ಇರುವೆಯಾಗಿ ಆನೆಭಾರವ
ಹೆಗಲುಗಳಿಗಿಲ್ಲಿ ವಿಶ್ರಾಂತಿಯಿಲ್ಲ
ಕಪ್ಪು ಸುಕ್ಕುಗಟ್ಟಿದ ಕಣ್ಣುಗಳಲ್ಲಿ ಕಸುವಿಲ್ಲ
ಅಡ್ಡಗೋಡೆಯ ದೀಪದ ಮಿಣುಕಿನಲ್ಲಿ
ಗೋಚರಿಸುತ್ತಿರುವ ಉರಿಯುವ ತಾರೆಗಳು ಇನ್ನೂ ಅಸ್ಪಷ್ಟ

ಇರಬಹುದು
ನೀನು ಅವರಿಗಿಂತ ಜೋರು
ನಿನ್ನ ಧ್ವನಿಯ ಆಲಿಸಿ ಗುರುತಿಸುವವರು ಯಾರು
ಸದ್ದಡಗಿಸಿಬಿಟ್ಟಿದ್ದಾರೆ
ನಿರ್ವಾತ ಅವಾಸಕ್ಕೆ ದೂಡಿ

ಹಬ್ಬ ಜಾತ್ರೆ ಆಚರಣೆಗೆ ಮೀಸಲು ನಿನ್ನ ಪೂಜ್ಯ ಪಟ್ಟ ದೇವತೆಯ ಅಟ್ಟ
ಗುಡಿಯೊಳಗಿನ ಪೂಜಾರಿ ಮನೆಯೊಳಗೆ ವ್ಯಾಪಾರಿ ಅಳೆದು ತೂಗುತ್ತಿದ್ದಾನೆ ಸಾಮಾಜಿಕ ತಕ್ಕಡಿಯಲ್ಲಿ
ನಾ ಮೇಲೆ ನೀ ಕೆಳಗೆ
ಈ ಒಳ ಹೊರಗಿನ ಸೆರಗು ಬೆರಗು

ಬಿತ್ತಿದ್ದೇ ಉತ್ಕೃಷ್ಟವಾದರೆ
ಕಾಪಿಟ್ಟು ಬೆಳೆದ ಫಸಲು ಕನಿಷ್ಠವೇ
ಮೇಲು ಕೀಳು ಹೆಚ್ಚು ಕಡಿಮೆ ಒಂದು ಎರಡು ಹೀಗೆ ದರ್ಜೆಯಲ್ಲಿ ಯಾವಾಗಲು ಹಿಂದೆಯೇ

ಬದಲಾಗದ ದೃಷ್ಟಿಕೋನ ಬೆಂಬಿಡದ ಸಿದ್ಧಾಂತ
ತಳುಕು ಹಾಕಿಕೊಂಡ ಬದುಕು
ಸಂರಕ್ಷಿತ ದರ್ಜೆಗಳ ಸಹ ಪ್ರಯಾಣದಲ್ಲಿ ನಿನ್ನ ಸ್ಥಿತಿ ಅಸ್ತವ್ಯಸ್ತ.