ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

“ಮೂಡಲ ಮನೆಯ ಮುತ್ತಿನ ನೀರಿನ
ಎರಕವ ಹೊಯ್ದ ,
ನುಣ್ಣನೆ ಎರಕsವ ಹೊಯ್ದ … “

ಸೂರ್ಯೋದಯದ ಸುಂದರ ವರ್ಣನೆ .. ಬೇಂದ್ರೆ ಅಜ್ಜನ ಕವನ . ಕೇಳುತ್ತಿದ್ದಂತೆ ಉದಯಿಸುವ ಬಾಲ ರವಿ ಕಣ್ಣಮುಂದೆ ಬರುವನು . ಕಣ್ಣು ಮುಚ್ಚಿ ರಾಗವನ್ನು ಆಸ್ವಾದಿಸುವೆವು.

” ದೋಣಿ ಸಾಗಲಿ ಮುಂದೆ ಹೋಗಲಿ
ದೂರ ತೀರಕೆ ಸೇರಲೀ.
ಬೀಸುಗಾಳಿಗೆ ಬೀಳುತೇಳುತ
ತೆರೆಯ ಮೇಲ್ಗಡೆ ಹಾರಲೀ “

ಈ ಕವನ ಜೀವನದ ರಹಸ್ಯ ,ಪಯಣದಲಿ ಬರುವ ಕಷ್ಟಗಳು ,ಆದರೂ ಸ್ಥೈರ್ಯದಿಂದ
ಗುರಿ ತಲುಪುವ ವೇದಾಂತವನ್ನು
ತಿಳಿಸಿಕೊಡುವದಲ್ಲವೇ!

ಈಶಾವಾಸ್ಯದ ಮಂತ್ರದ ವಾಕ್ಯಗಳ ಅರ್ಥ ಕೂಡ ಗೂಢ.ಇಲ್ಲಿ ಪೂರ್ಣ ಎಂದರೆ ಪರಬ್ರಹ್ಮ ತತ್ವ.ಇದೊಂದೇ ಆದಿಯಲ್ಲಿ ಇದ್ದದ್ದು.ಆದಿಯಲ್ಲಿ ಇದ್ದ ಪರಮಾತ್ಮನಲ್ಲಿ ಯಾವದೇ ದೋಷ,
ಕೊರತೆಗಳು ಇಲ್ಲ.ಸರ್ವವ್ಯಾಪಿ ಭಗವಂತ ನಿತ್ಯ ತೃಪ್ತನು.ಆದ್ದರಿಂದ ಆತ ಪೂರ್ಣನು.ಪೂರ್ಣಂ ಇದಂ ಎಂದರೆ ನಾವು…ಈ ಜಗತ್ತು.ಪೂರ್ಣವಾದ ಪರಬ್ರಹ್ಮನಿಂದ ನಾವಿರುವ ಪ್ರಪಂಚ,ಜೀವರಾಶಿ ಬಂದಿದೆ.ವ್ಯಾವಹಾರಿಕ ದೃಷ್ಟಿಯಲ್ಲಿ ಎಷ್ಟೇ ಬದಲಾವಣೆ ಕಂಡರೂ ಎಲ್ಲದರ ಹಿಂದೆ ಇರುವ ಪರಬ್ರಹ್ಮ ಸತ್ಯನಲ್ಲಿ ಯಾವ ಬದಲಾವಣೆ ಇರದು. ಆ ಅನಂತನಲ್ಲಿ ಕೂಡುವದು ಮತ್ತು ಕಳೆಯುವದು ಅರ್ಥವಿಲ್ಲದ ಮಾತು.
ಒಂದು ಜೇಬಿನಿಂದ ದುಡ್ಡು ತೆಗೆದು ಇನ್ನೊಂದು ಜೇಬಿಗೆ ಸೆರಿಸಿದಂತೆ.
ಲಾಭ , ನಷ್ಟ ಇಲ್ಲ.
ಹೀಗೆ ಕಾವ್ಯ ಪ್ರಪಂಚದಲ್ಲಿ ಕವಿಯೇ ಪ್ರಜಾಪತಿ.

ಮೊನ್ನೆ ಮಕ್ಕಳು , ಮೊಮ್ಮಕ್ಕಳೊಂದಿಗೆ ನನ್ನ ಅಜ್ಜನ ಊರಿಗೆ ಹೋದಾಗ ಅವರು ಕಟ್ಟಿದ
೧೦೦ ವರುಷಗಳ ಹಿಂದಿನ ಮನೆ ಇನ್ನೂ ಗಟ್ಟಿಯಾಗಿ ಇದ್ದದ್ದು ಕಂಡು ಎಲ್ಲರಿಗೂ ಆಶ್ಚರ್ಯ ಆಯಿತು!
ಅದಕ್ಕೆ ಕಾರಣ ಗಟ್ಟಿಮುಟ್ಟಾದ ತಳಹದಿ ಕಾರಣ ಅಲ್ಲವೇ ?

ಹಾಗೆಯೇ ಇಂದಿನ ನಮ್ಮ,ಕಾವ್ಯ ಪ್ರಪಂಚವೇ ಆಗಲೀ , ಸಂಸ್ಕೃತಿಯೇ ಆಗಲಿ ಇಷ್ಟೊಂದು ಶ್ರೀಮಂತ ಆಗಿರಲು ನಮ್ಮ ಪೂರ್ವ ಸೂರಿಗಳು ಹಾಕಿದ ಭದ್ರ ತಳಹದಿಯೇ ಕಾರಣ
ಎಂಬುದರಲ್ಲಿ ಅನುಮಾನವಿಲ್ಲ.
ಆದ್ದರಿಂದ ಕವಿ ಪರಂಪರೆಯ ಪರಿಚಯ ಮಾಡಿಕೊಂಡರೆ
ಉಚಿತ ಎನಿಸುತ್ತದೆ.

ಕವಿಗಳ ರಚನೆ ಕಾವ್ಯ ಎನಿಸಿತು.
ಮಮ್ಮಟನ ( ‘ಕಾವ್ಯ ಪ್ರಕಾಶ’ ಪುಸ್ತಕ, ೧೧ ನೇ ಶತಮಾನ, ಕಾಶ್ಮೀರ) ಶಬ್ದಗಳಲ್ಲಿ ಹೇಳಬೇಕೆಂದರೆ ಕಾವ್ಯ ಮನುಷ್ಯನ ಮನದ ಅಂತರಾಳದ ನಾಡಿ…cord.
ಹೃದಯಕ್ಕೆ ಪರಮಾನಂದ ಕೊಡುವಂತಹದು. ಮಧುರವಾದ ಭಾಷೆಯಲ್ಲಿ ಉತ್ತಮ ವಿಚಾರಗಳ ಜತೆಗೆ ಶಬ್ದಾರ್ಥ ಸಹಿತವಾದದ್ದು ಕಾವ್ಯ.
‘ಶಬ್ದಾರ್ಥ ಸಹಿತಂ ಕಾವ್ಯಮ್’ ಎಂದನು ಭಾಮಹ ಕವಿ (‘ಕಾವ್ಯಾಲಂಕಾರ’ ಪುಸ್ತಕ, ೭ ನೇ ಶತಮಾನ, ಕಾಶ್ಮೀರ)
ದೋಷರಹಿತವಾದದ್ದು , ಶಬ್ದಾರ್ಥ ಸಹಿತವಾದದ್ದು ,ಗುಣ ಉಳ್ಳದ್ದು , ಅಲಂಕೃತವಾದದ್ದು ಎಂದು ಕಾವ್ಯಪ್ರಕಾಶ ಗ್ರಂಥ ಹೇಳುವದು.

ರಸವೇ ಕಾವ್ಯದ ಆತ್ಮ ಎಂದರು ಕೆಲವರು,
ಇನ್ನು ಕೆಲವರೆಂದರು ಧ್ವನಿ,ಕಾವ್ಯದ ಆತ್ಮ.

ಪದ್ಯದಲ್ಲಿ ಕವಿಯ ಕಲ್ಪನೆ ಅಲ್ಲದೆ ಅನುಭೂತಿ ಮೂಡಿರುತ್ತದೆ. ಛಂದಸ್ಸು, ಸಂಗೀತ
ಎಲ್ಲವೂ ಸಮ್ಮಿಳಿತವಾಗಿ ಮನೋಹರ ಆಗುತ್ತದೆ ಕಾವ್ಯ.

ಗದ್ಯದಲ್ಲಿ ಈ ಎಲ್ಲ ಬಂಧನಗಳಿಲ್ಲ.
ಅದಕ್ಕೇ ಕೆಲವರೆಂದರು
“ಗದ್ಯನೀರಸ ಭೋಜನ “
ಆದರೆ ಗದ್ಯವೂ ಅಷ್ಟೇ ಸ್ವಾರಸ್ಯಕರ
ಆಗಬಲ್ಲದು . ಗದ್ಯದಲ್ಲಿ ಎರಡು ಭಾಗ.
ಕಥೆ ಮತ್ತು ಆಖ್ಯಾಯಿಕಾ.
ಕಥೆ ಕವಿಕಲ್ಪಿತ ಇದ್ದು ವಕ್ತಾ ನಾಯಕನೇ ಇರಬಹುದು.
ಐತಿಹಾಸಿಕ ಪ್ರಸಂಗಗಳಿಗೆ ಸಂಬಂಧಿಸಿದಂತೆ ಗದ್ಯವಿದ್ದರೆ ಅದು ಆಖ್ಯಾಯಿಕಾ ಎನಿಸುವದು.ಇಲ್ಲಿ ಕೂಡಾ ವಕ್ತಾ ನಾಯಕನೇ ಇರುವನು.
ಮತ್ತೆ ಇವುಗಳಲ್ಲಿ ಒಳಭೇದಗಳಿವೆ.
ಅದನ್ನು ಮುಂದೊಂದು ಅಂಕಣದಲ್ಲಿ ಪ್ರಸ್ತುತ ಪಡಿಸುವೆ.

ಕ: ಅಹಮ್ (ನಾನು ಯಾರು ? ),
ಕುತ:ಆಗತ ಅಹಮ್ (ನಾನು ಎಲ್ಲಿಂದ ಬಂದೆ ? ) ಎಂದು ಮುಂತಾಗಿ ಜಿಜ್ಞಾಸೆ ಇರುವಂತೆ ಈ ಕವಿಪರಂಪರೆಯ ಬಗೆಗೂ ಜಿಜ್ಞಾಸೆ ಇರುವದು ಸಹಜ. ವೇದಗಳೆಲ್ಲವೂ ಅಪೌರುಷೇಯ ಎಂದು ಹೇಳುವರು. ಇವುಗಳನ್ನು ಬರೆದ ಯಾವ ಋಷಿಯೂ ತನ್ನ ಹೆಸರನ್ನು ಹೇಳಿಕೊಂಡಿಲ್ಲ.

ಅನೇಕ ಪುರಾತನ ಮಹಾಕಾವ್ಯಗಳು ಋಷಿಗಳಿಂದ ರಚಿಸಲ್ಪಟ್ಟಿದ್ದು ಅವು ಸಿಕ್ಕಿಲ್ಲ.ಯಾಸ್ಕ ,ಪಾಣಿನೀ ಇವರ ಕಾವ್ಯಗಳು ದೊರಕಿವೆ.ಪಾಣಿನಿಗೆ
” ವ್ಯಾಕರಣದ ಸಿಂಹ ” ಎಂಬ ಬಿರುದು ಇದೆ .ವರರುಚಿ ಎಂಬ ಕವಿ ಕ್ರಿ.ಪೂ. ೧೬ ಮತ್ತು ೧೭ ನೇ ಶತಮಾನಗಳ ಮಧ್ಯದವನು. ಪಾಣಿನಿಯ ಸೂತ್ರಗಳಿಗೆ ವಾರ್ತಿಕೆಗಳನ್ನು ಬರೆದವನು.
ಇವನು ವಿಕ್ರಮಾದಿತ್ಯನ ಆಸ್ಥಾನದ ೯ ರತ್ನಗಳಲ್ಲಿ ಒಬ್ಬನು .
ಇವನ ನಂತರ ಬಂದ ಕವಿ ಪತಂಜಲಿ.
ಕುಮಾರ ಗುಪ್ತನ ಕಾಲದಲ್ಲಿ ವತ್ಸಭಟ್ಟಿ ಇಂದ ಪ್ರಶಸ್ತಿ ಎಂಬ ಕಾವ್ಯದ ರಚನೆ ಆದ ದಾಖಲೆ ಇದೆ.
೪ನೇ ಶತಮಾನದ ಕೊನೆಯ ಭಾಗ
ಸಮುದ್ರ ಗುಪ್ತನ ಆಳ್ವಿಕೆಯಲ್ಲಿ ಹರಿಸೇನ ಎಂಬ ಕವಿಯು ಚಂಪೂ ಕಾವ್ಯದಲ್ಲಿ ರಚನೆ ಮಾಡಿದನು.

ಆಮೇಲೆ ಬರುವದು ಸಂಸ್ಕೃತ ಕಾವ್ಯ ಪ್ರಪಂಚವನ್ನು ಮಂತ್ರಮುಗ್ಧ ಮಾಡಿದ ಮಹಾಕವಿ ಕಾಲಿದಾಸನ
ಹೆಸರು.ಇವನು ವಿಕ್ರಮಾದಿತ್ಯನ ಆಸ್ಥಾನ ಕವಿ . ಕಾಳಿದಾಸ ೫ ನೇ ಶತಮಾನದ ಕವಿ ಎನ್ನಬಹುದು. ರಘುವಂಶ,ಕುಮಾರಸಂಭವ ಮಹಾಕಾವ್ಯಗಳನ್ನು ಬರೆದದ್ದಲ್ಲದೇ ಅನೇಕ ಪ್ರಸಿದ್ಧ ನಾಟಕಗಳು ಕಾಲಿದಾಸನ ಹೆಸರನ್ನು ಅಜರಾಮರ ಗೊಳಿಸಿವೆ.

ಮುಂದೆ ಭವಭೂತಿ ತನ್ನ ‘ಉತ್ತರರಾಮಚರಿತೆ’ ಯಿಂದ ಪ್ರಸಿದ್ಧಿ ಪಡೆದನು.
ಕವಿ ಅಶ್ವಘೋಶ ರಚಿಸಿದ ಮಹಾಕಾವ್ಯ ‘ಬುದ್ಧಚರಿತ’. ಇದರಲ್ಲಿ ೧೭ ಸರ್ಗಗಳು. ‌
ಸಿಲೋನದ ಅರಸ ಕುಮಾರದಾಸ ಕವಿಯಾಗಿದ್ದನು. ಇವನು ರಚಿಸಿದ ಕಾವ್ಯ” ಜಾನಕಿ ಹರಣ “. ಇಲ್ಲಿ ೨೦ ಸರ್ಗಗಳು.ರಾವಣನಿಂದ ಸೀತಾಪಹರಣ, ಇಲ್ಲಿಯ ಕಥಾವಸ್ತು. ಕುಮಾರದಾಸ ಕಾಲಿದಾಸನ ಅನುಕರಣೆ ಮಾಡಿದ್ದಾನೆ ಎಂದು ಪ್ರತೀತಿ.

ಕವಿ ಪರಂಪರೆಯಲ್ಲಿ ಮುಂದೆ ಬರುವವರು ಭಟ್ಟಿ ಹಾಗೂ ಭರ್ತೃಹರಿಯರ ಹೆಸರು . ಇಬ್ಬರೂ ವ್ಯಾಕರಣ ಪಂಡಿತರು.
ಭಾರವೀ ಕವಿ ದಾಮೋದರ ಎಂಬ ಹೆಸರಿನಿಂದಲೂ ಗುರುತಿಸಿಲ್ಪಡುವನು.
ಭಾರವೆ: ಅರ್ಥಗೌರವಂ…. ಗೂಢಾರ್ಥದ ಕವನ ಬರೆದ ಎತ್ತಿದ ಕೈ ಈತ.

ನಂತರ ಭೋಜರಾಜನ ಆಶ್ರಯದಲ್ಲಿ ಕವಿ ಮಾಘನು ಬರೆದ ಶಿಶುಪಾಲ ವಧ…ಎಂಬ ಮಹಾಕಾವ್ಯ ರಚಿಸಿದನು.
ಶಿವಸ್ವಾಮಿನ್ ಎಂಬ ಕವಿ ರಾಜಾ ಅವಂತಿವರ್ಮನ ಆಶ್ರಯದಲ್ಲಿದ್ದ. ಇವನು ಬರೆದಿದ್ದು “ಕಫ್ಹನ ಅಭ್ಯುದಯ ಕಾವ್ಯ ,ಬುಧ್ಧನಿಗೆ ನಮಿಸುವ ಪ್ರಾರ್ಥನೆಯಿಂದ ಪ್ರಾರಂಭ ಆಗುತ್ತದೆ .
ಜಿನಸೇನ ಎಂಬ ಇನ್ನೊಬ್ಬ ಕವಿ ಕಾಲಿದಾಸನ ಮಟ್ಟದಲ್ಲಿ ಎಣಿಸಲ್ಪಡುವನು.

ಮಹಾಕಾವ್ಯಗಳ ಬಗೆಗೆ ಕವಿಪರಂಪರೆ ತಿಳಿದು ಕೊಂಡಾಗ ಲಘು ಕಾವ್ಯದ ಅರಿವೂ ಅವಶ್ಯ ಅಲ್ಲವೇ !
ಹಾಗಾದರೆ ಲಘು ಕಾವ್ಯದ ಲಕ್ಷಣ ಏನು?
ಹೆಸರೇ ಹೇಳುವಂತೆ ಲಘು ಕಾವ್ಯಗಳಲ್ಲಿ ಸರ್ಗಗಳು ಇರುವುದಿಲ್ಲ.ವರ್ಣನೆಯೂ ದೀರ್ಘ ಇರುವುದಿಲ್ಲ‌.ಇವು ಶೃಂಗಾರ ,ಪ್ರೇಮ,
ಧಾರ್ಮಿಕ ಅಥವಾ ಉಪದೇಶ ಪರ,ಪ್ರಭೋದಕವಾಗಿ ಇರುತ್ತವೆ.

ಮನಸಿಗೆ ಶಾಂತಿ ಸಮಾಧಾನ ಪ್ರದವಾಗಿ ಮುಕ್ತಿ ಮಾರ್ಗವನ್ನು ಸೂಚಿಸುವ ಬ್ರಹ್ಮ ಸತ್ಯದ ಶೋಧಪ್ರದ ಸಾಹಿತ್ಯ ಇಲ್ಲಿ ಕಾಣಬಹುದು.ನೀತಿ ,ಆಚಾರವನ್ನು ಕಲಿಸುತ್ತವೆ. ಸ್ತೋತ್ರ ,ಧಾರ್ಮಿಕ ಕಾವ್ಯಗಳು ಲಘುಕಾವ್ಯ ಎನಿಸುತ್ತವೆ.
ಸುಭಾಷಿತಗಳು, ಸ್ತೋತ್ರ ಗಳು ಈ ವರ್ಗದಲ್ಲಿ.
ಜಯದೇವನ ‘ಗೀತಗೋವಿಂದ’ವನ್ನು
ಲಘು ಕಾವ್ಯದ ಸಾಲಿನಲ್ಲಿ ನೆನೆಸ ಬಹುದು.

ಸಂದೇಶ ಕಾವ್ಯ, ಇನ್ನೊಂದು ಪ್ರಕಾರದ ಕಾವ್ಯ ಎನಿಸಿದೆ. ರಾಮನ ಸಂದೇಶ ಹನುಮಂತನಿಗೆ, ಕೃಷ್ಣ ಶಾಂತಿದೂತನಾದ ಪ್ರಸಂಗ ,ಕಾಲಿದಾಸನ
ಮೇಘದೂತ ಇವೆಲ್ಲ ಸಂದೇಶ ಕಾವ್ಯಗಳು .

ಚಿತ್ರಕಾವ್ಯವೂ ಒಂದು ಪ್ರಕಾರ. ನಲೋದಯ , ಕೀಚಕವಧೆ,ಈ ಸಂಕ್ಷಿಪ್ತ ಕಥೆಗಳು ಚಿತ್ರ ಕಾವ್ಯ ಪ್ರಕಾರಕ್ಕೆ ಉದಾಹರಣೆಗಳು‌. ಇಲ್ಲಿ ಅಕ್ಷರಗಳನ್ನು , ಶಬ್ದಗಳನ್ನು ಬೇರೆ ಬೇರೆ ಅರ್ಥಕೊಡುವ ಹಾಗೆ ಜೋಡಿಸುತ್ತಾರೆ .pun on the words ,ಶ್ಲೇಷ ಎನ್ನುವರು .

“ಪೃಥ್ವಿವ್ಯಾಂ ತ್ರೀಣಿ ರತ್ನಾನಿ ..
ಜಲಂ ,ಅನ್ನಂ , ಸುಭಾಷಿತಮ್.”

(ಅನ್ನ ,ನೀರು ಎಷ್ಟು ಅವಶ್ಯಕವೋ ಅಷ್ಟೇ ಅವಶ್ಯಕ ಮೂರನೇ ರತ್ನ ಎನಿಸಿದ ಸುಭಾಷಿತವೂ.)
ಇದೂ ಕಾವ್ಯದ ಒಂದು ಭಾಗ.

ಕವಿ ಪರಂಪರೆಯಲ್ಲಿ ಕವಯಿತ್ರಿಯರೂ ಇದ್ದಾರೆ .
ಹಾಗಾಗಿ,ಮಹಿಳೆಯರು ವಿಷಾದ ಪಡಬೇಕಾಗಿಲ್ಲ!!???
ವೇದ ಮಂತ್ರಗಳನ್ನು ಬರೆದವರಲ್ಲಿ ಕೆಲವರು ಸ್ತ್ರೀಯರೂ ಇರುವರು. ಘೋಷ ಎಂಬ ರಾಜಕುಮಾರಿಯ ಹೆಸರು ಇದರಲ್ಲಿ ಪ್ರಮುಖ. ಸೀತಾ ,ವಿಜಯಾಂಕಾ , ಸುಭದ್ರಾ ,ಪ್ರಭುದೇವಿ ಎಂಬ ಕವಯಿತ್ರಿ ಯರ ಹೆಸರೂ ಹಲವೆಡೆ ಕೇಳಿಬರುತ್ತದೆ. ಹಲವು ರಾಜಕುಮಾರಿಯರು ಕವಯಿತ್ರಿಯರಾಗಿದ್ದರು.

ಈ ಎಲ್ಲ ಕಾವ್ಯಗಳಲ್ಲದೇ ಅನೇಕ ಗದ್ಯಕಾವ್ಯಗಳೂ ಇವೆ. ಪಂಚತಂತ್ರ, ಹಿತೋಪದೇಶ ,ಹರ್ಷಚರಿತ ,ಕಾದಂಬರಿ,ಅವಂತಿಕಾ ಸುಂದರಿಯಕಥೆ,
ದಶಕುಮಾರ ಚರಿತ ಮೊದಲಾದ ಕಾವ್ಯಗಳನ್ನು ಗದ್ಯಕಾವ್ಯಗಳಾಗಿ ಗುರುತಿಸಬಹುದು.

ಗದ್ಯ ,ಪದ್ಯ ಮಿಶ್ರಿತ ಚಂಪೂ ಕಾವ್ಯವೆನಿಸಿದೆ.
ದೃಶ್ಯಕಾವ್ಯವಾದ ನಾಟ್ಯಶಾಸ್ತ್ರ ಪಂಚಮವೇದ ಎನಿಸಿದೆ. ಸಂಗೀತ, ಸಂಭಾಷಣೆ,ಅಭಿನಯ, ಅನುಕರಣೆ ಇವು ನಾಟಕದ ಅಂಗಗಳು. ಬ್ರಹ್ಮನ ಆದೇಶದ ಮೇರೆಗೆ ಭರತಮುನಿಯಿಂದ ನಾಟ್ಯಶಾಸ್ತ್ರವು ಬರೆಯಲ್ಲಟ್ಟಿತು ಎಂಬ ಕಥೆಯಿದೆ.

ವೇದ ವೇದಾಂತ ಓದಲು ಬಾರದವರಿಗೆ ನಾಟಕ, ನೃತ್ಯ ರೂಪದಲ್ಲಿ ಕಥೆಯ ಸಾರ, ಸಂದೇಶ, ಮನರಂಜನ, ಶಿಕ್ಷಣ ಇದು ನಾಟ್ಯಶಾಸ್ತ್ರದ ಉದ್ದೇಶ.

ನೋಡಿದಿರಾ ನಮ್ಮ ಕವಿಪರಂಪರೆ ಎಷ್ಟು ಶ್ರೀಮಂತವಾಗಿದೆ . ಹೆಮ್ಮೆಯ ವಿಷಯ ಅಲ್ಲವೇ !