ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

ಸಂಸ್ಕೃತ ನಾಟಕದ ಉಚ್ಛ್ರಾಯ ಕಾಲದಲ್ಲಿ ಅಶ್ವಘೋಷ, ಭಾಸ, ಶೂದ್ರಕ, ಕಾಳಿದಾಸ ಮತ್ತು ವಿಶಾಖದತ್ತ ಇವರ ಹೆಸರುಗಳನ್ನು ಸ್ಮರಿಸಬಹುದಾಗಿದೆ. ಈ ಕವಿಗಳ ಕಾಲಮಾನ, ಹುಟ್ಟಿದ ಊರು ಖಚಿತವಾಗಿ ಹೇಳಲು ಬರುವಂತಿಲ್ಲ. ಅವರ ಕೃತಿಗಳಲ್ಲಿ ಬರುವ ವರ್ಣನೆಗಳಿಂದ ಊಹಿಸಿ ಕೆಲವು ಸಂಗತಿಗಳನ್ನು ನಿರ್ಧರಿಸಲಾಗಿದೆ.

ದೀಪವು ಮಾತಾಡುವುದಿಲ್ಲ.ಆದರೆ ಅದರ ಪ್ರಕಾಶವು ಅದರ ಪರಿಚಯ ಮಾಡಿಕೊಡುವುದು.
ಇದರಂತೆ ನಮ್ಮ ಕವಿಗಳು ತಮ್ಮ ಹೆಸರನ್ನು ಹೇಳಿಕೊಂಡಿಲ್ಲ.
ಅವರ ಕೃತಿಗಳೇ ಅವರ ಪ್ರತಿಭೆಯನ್ನು ಸಾರುತ್ತವೆ. ಇವತ್ತಿನ ಕವಿಗಳಾದರೆ ತಮ್ಮ ಪರಿಚಯದೊಂದಿಗೆ‌‌ ಆತ್ಮಚರಿತ್ರೆಯನ್ನೇ ಕೊಡುತ್ತಾರೆ ಅಲ್ಲವೇ !!

ಅಶ್ವಘೋಶನ ಕಾಲ ಕ್ರಿ .ಶ.೧೦೦ ಎಂದರೆ, ಕವಿ ಭಾಸನ ಕಾಲ ಕ್ರಿ .ಶ .೩೦೦ ಎಂದು ಗುರುತಿಸಿದ್ದಾರೆ.
ವಿದ್ವಾಂಸರು ಭಾಸನ ನಾಟಕಗಳ ಸತ್ವವನ್ನು ಪರೀಕ್ಷಿಸುವದಕ್ಕಾಗಿ ಅವುಗಳನ್ನು ಬೆಂಕಿಯಲ್ಲಿ ಹಾಕಿದಾಗ , ಅವುಗಳಲ್ಲಿ ‘ಸ್ವಪ್ನವಾಸವದತ್ತ’ ಎಂಬ ಕೃತಿಯು ಬೆಂಕಿಯಲ್ಲಿ ಸುಡಲಿಲ್ಲವಂತೆ.

ಭಾಸೋ ಹಾಸ: ಎಂದಿದ್ದಾರೆ ಪಂಡಿತರು. ಭಾಸನು ನಿಜವಾಗಿ ಸರಸ್ವತಿಯ ” ಹಾಸ ” ! ಅಂದರೆ ಸಾಕ್ಷಾತ್ ಸರಸ್ವತಿಯ “ನಗು”ವೇ ಆಗಿದ್ದನು.
ಇವನ ಕೃತಿಗಳಲ್ಲಿ ಹಾಸ್ಯ ರಸವೇ ಪ್ರಧಾನ ಎಂದಂತೆ !

ಶೂದ್ರಕ ಕವಿಯ ಕಾಲ ಕ್ರಿ.ಶ. ಸುಮಾರು ೪೦೦ ಎನ್ನಲಾಗಿದೆ. ಇವನ ಕೃತಿಗಳಲ್ಲಿ “ಮೃಚ್ಛಕಟಿಕ “
ನಾಟಕ ಶ್ಲಾಘನೀಯವಾಗಿದೆ.
ನಂತರ ಮೂಡಿದ ಅನೇಕ ಸಾಹಿತ್ಯ ನಕ್ಷತ್ರಗಳಲ್ಲಿ ಕವಿಕುಲಗುರು ಎನಿಸಿದ ಕಾಳಿದಾಸ, ಭವಭೂತಿ, ವಿಶಾಖದತ್ತ ಹೀಗೆ ಅನೇಕರು.
ಕಾಳಿದಾಸನ ಹೆಸರು ಬರುತ್ತಲೇ,

“ಕಾವ್ಯೇಷು ನಾಟಕಂ ರಮ್ಯಂ
ನಾಟಕೇಷು ಶಕುಂತಲಾ
ತತ್ರಾಪಿ ಚತುರ್ಥ ಅಂಕ:
ತತ್ರಾ ಶ್ಲೋಕ ಚತುಷ್ಟಯ: “

(ಕಾವ್ಯಗಳಲ್ಲಿ ನಾಟಕವು ರಮ್ಯವಾದದ್ದು ‌.ಎಲ್ಲಾ ನಾಟಕಗಳಲ್ಲಿ ಶ್ರೇಷ್ಠ ,ಶಾಕುಂತಲ, ಶಾಕುಂತಲದಲ್ಲಿ ನಾಲ್ಕನೇ ಅಂಕ ಶ್ರೇಷ್ಠ. ಆ ನಾಲ್ಕನೇ ಅಂಕದಲ್ಲೂ ನಾಲ್ಕು ಶ್ಲೋಕಗಳು ಅತ್ಯಂತ ಪ್ರಮುಖ ಆಗಿವೆ.)

ಎಂಬ ಈ ಲೋಕ ಪ್ರಸಿದ್ಧ ಶ್ಲೋಕವನ್ನು ಮರೆಯುವುದು ಹೇಗೆ !

ಅವನು ಕುರುಬನಾಗಿದ್ದ, ಕಾಳಿಮಾತೆಯ ವರದಿಂದ ಕವಿ ಆದ.
ಹೀಗೇ ಕಾಳಿದಾಸನ ವಿಚಾರವಾಗಿ ಜನಜನಿತವಾದ ಅನೇಕ ಕಥೆಗಳಿವೆ.
ಕಾಳಿದಾಸನ ಸ್ಥಾನ, ಕಾಲ, ಅವನ ಜೀವನ ಚರಿತ್ರೆ ಇವೆಲ್ಲವೂ ಅನಿರ್ಣಯದಾಯಕ ಆಗಿವೆ.ಇದನ್ನ ನಿರ್ಣಯಿಸಲು ಚರಿತ್ರಕಾರರು ಕಿಂ ಕರ್ತವ್ಯ ಮೂಢರಾಗಿದ್ದಾರೆ.
ಕಾಲಿದಾಸ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನು, ಬಹಳ ಸುಂದರನಾಗಿದ್ದ ಎಂಬ ಹೇಳಿಕೆ ಕೆಲವರದಾದರೆ ಇನ್ನು ಕೆಲವರು ಅವನು ಪಶುಪಾಲಕ ಆಗಿದ್ದ ಎನ್ನುವರು.

ಇನ್ನೊಂದು ಕಥೆಯಂತೆ, ಅವನು ಬಹಳ ಮೂಢನಿದ್ದ. ಅವನ ಮದುವೆ ವಿದ್ಯೋತ್ತಮಾ ಎಂಬ ವಿದುಷಿಯೊಂದಿಗೆ ಆಗಿ ,ಅವಳಿಂದ ಅವಮಾನಿತನಾಗಿ ಹೊರದೂಡಲ್ಪಟ್ಟನು. ಇವನೂ ಛಲದಿಂದ ದೇವೀ ಉಪಾಸನೆ ಮಾಡಿ ಸರಸ್ವತಿಯ ವರದಾನ‌ ಪಡೆದು ವಿದ್ಯೋತ್ತಮಳ ಬಳಿ ಹೋದಾಗ,

“ಅಸ್ತಿ ಕಶ್ಚಿತ್ ವಾಗ್ವಿಲಾಸ: ?”
ಎಂದು ಪ್ರಶ್ನಿಸಿ ಅವನ ವಿದ್ವತ್ತನ್ನು ಶಂಕಿಸಿದಳು.

” ನಿನ್ನ ಮಾತುಗಳಲ್ಲಿ ಏನಾದರೂ ವಾಕ್ ವಿಶೇಷ ಇದೆಯಾ .'”
ಎಂದು ಟೀಕಿಸಿದಳು

ಕಾಲಿದಾಸ ಛಲದಿಂದ ಅವಳ ಪ್ರಶ್ನೆಗೆ ಉತ್ತರ ಎಂಬಂತೆ “ಅಸ್ತಿ ” ಎಂಬ ಶಬ್ದದಿಂದ ” ಕುಮಾರ ಸಂಭವ ” ಎಂಬ ಮಹಾಕಾವ್ಯ ರಚಿಸಿದನು.

ಮುಂದೆ ” ಕಶ್ಚಿತ್ ” ಎಂಬ ಶಬ್ದದಿಂದ ಪ್ರಸಿದ್ಧವಾದ “ಮೇಘದೂತ ” ಕಾವ್ಯ ರಚನೆ ಮಾಡಿದನು.

” ವಾಕ್ ” ಈ ಶಬ್ದದಿಂದ ಮೊದಲು ಮಾಡಿ ” ರಘವಂಶ ” ಮಹಾಕಾವ್ಯ ವಿರಚಿತವಾಯಿತು.
ಕಥೆ ಏನೇ ಇರಲಿ, ಈ ಕಾವ್ಯಗಳು ಆ ಶಬ್ದಗಳಿಂದ ಪ್ರಾರಂಭ ಆದದ್ದಂತೂ ನಿಜ .

ಅವನ ಕೃತಿಗಳಲ್ಲಿ ಮಂಗಳಾಚರಣೆಯಲ್ಲಿ ಮಾಡುವ ಪ್ರಾರ್ಥನೆಯಿಂದ ಅವನು ಶಿವಾರಾಧಕನಾಗಿದ್ದ ಎಂಬುದು ಸ್ಪಷ್ಟ. ಎಲ್ಲಿಯೂ ತಾನು ದೇವಿಯ ಆರಾಧಕ ಎಂದು ಹೇಳಿಕೊಂಡದ್ದಿಲ್ಲ .

ಇನ್ನು ಕೆಲವು ವಿದ್ವಾಂಸರು ಹೇಳುವಂತೆ ಇವನ ಹೆಸರು
“ಕಾಲಿದಾಸ “ಎಂದೇ ಹೊರತು “ಕಾಲೀ ದಾಸ ” ಎಂದು ಅಲ್ಲ .
“ಕಾಲಿನ: ದಾಸ: ” ಎಂದು ಷಷ್ಠೀ ತತ್ಪುರುಷ ಸಮಾಸ ಮಾಡೀ “ಕಾಲದ ದಾಸ” ಎಂದು ಬಿಡಿಸುವರು.
“ಕಾಲ: ಅಸ್ಯ ಅಸ್ತಿ” ಅಂದರೆ ಕಾಲವೇ ಇವನ ವಶದಲ್ಲಿ ಇತ್ತು ಎಂಬರ್ಥ .

ಆತನನ್ನು ಪಶುಪಾಲಕ ಎಂದು ಹೇಳುವಾಗ ಅವನ ಸಂಚಾರೀ ಜೀವನವನ್ನು ಸೂಚಿಸಿರಬೇಕು‌.
ಈ ಎಲ್ಲ ವಾದ ವಿವಾದಗಳು ಪಂಡಿತರು “ಕಾವ್ಯ ಶಾಸ್ತ್ರ ವಿನೋದೇನ ಕಾಲೋ ಗಚ್ಛತಿ ಧೀಮತಾಮ್ ” ಅಂದರೆ ವಿದ್ವಾಂಸರು ಕಾವ್ಯ ಶಾಸ್ತ್ರವನ್ನು ಚರ್ಚಿಸುತ್ತ ವಿನೋದದಿಂದ ಆಡಿದ ಮಾತುಗಳೇ ಇರಬೇಕು ಎನ್ನುವರು. ಇದೊಂದು ವಿದ್ವಾಂಸರ ಕ್ರೀಡೆಯೇ ಆಗಿತ್ತು.

ಮೇರು ತುಂಗಾಚಾರ್ಯ ಜೈನ ಕವಿ ವಿರಚಿತ ” ಪ್ರಬಂಧ ಚಿಂತಾಮಣಿ “ಯಲ್ಲಿ ಕಾಲಿದಾಸನು ಅವಂತಿ ರಾಜ ವಿಕ್ರಮಾದಿತ್ಯನ ಅಳಿಯನಾಗಿದ್ದನು ಎಂದು ಹೇಳಿದ್ದಾನೆ.

ಪ್ರತೀತಿಗಳು ಏನೇ ಇರಲೀ ಈ ಋಷಿಯಿಂದ ಜ್ಞಾನ ಪೂರ್ಣವಾದ ಉತ್ಕೃಷ್ಟ , ಜಗತ್ಪ್ರಸಿದ್ಧ ಕಾವ್ಯಗಳ
ರಚನೆ ಆದದ್ದು ಅತ್ಯಂತ ಅಭಿಮಾನಾಸ್ಪದ , ಹೆಮ್ಮೆಯ ವಿಷಯ .ಅವನ ಕೃತಿಗಳಂತೂ ಒಂದೊಂದು ಅನರ್ಘ್ಯ ರತ್ನಗಳು .

ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ, ಮಾಲವಿಕಾಗ್ನಿಮಿತ್ರಂ, ಇವು ಮೂರು ನಾಟಕ ಗ್ರಂಥಗಳು.

ರಘುವಂಶ, ಕುಮಾರ ಸಂಭವ ಇವೆರಡು ಮಹಾಕಾವ್ಯಗಳು. ಮೇಘದೂತ, ಋತುಸಂಹಾರ ಇವೆರಡು ಗೀತಕಾವ್ಯಗಳು. ‌ಇವು ಕವಿ ಶ್ರೇಷ್ಠ ಕಾಳಿದಾಸನ ಮೇರು ಕೃತಿಗಳು.

“ಪುರಾ ಕವೀನಾಂ ಗಣನಾ ಪ್ರಸಂಗೇ
ಕನಿಷ್ಠಿಕಾಧಿಷ್ಟತ ಕಾಲಿದಾಸಾ
ಅದ್ಯಪಿ ತತ್ ತುಲ್ಯ ಕವೆ: ಅಭಾವಾತ್ ಅನಾಮಿಕಾ ಸಾರ್ಥವತೀ ಬಭೂವ”

ಉತ್ತಮ ಕವಿಗಳ ಗಣನೆಯ ಪ್ರಸಂಗದಲ್ಲಿ ,ಕಾಲಿದಾಸ ಮೊದಲಿಗ ಎಂದು ಕಿರು ಬೆರಳನ್ನು‌ ಎತ್ತಲಾಯಿತು. ಎರಡನೆಯವರು ಯಾರು ಎಂದು ಹೆಸರಿಸಲು ಎತ್ತಿದ ಉಂಗುರದ ಬೆರಳು ಎತ್ತಿ ಹಿಡಿದದ್ದು ಹಾಗೇ ಉಳಿಯಿತು. ಎರಡನೆಯ ಸ್ಥಾನಕ್ಕೆ ಯಾವ ಕವಿಯ ಹೆಸರೂ ಸೂಚಿತವಾಗದೇ ಅದು ಇಂದಿಗೂ “ಅನಾಮಿಕ “ಎಂಬ ಹೆಸರನ್ನು
ಸಾರ್ಥಕಗೊಳಿಸಿಕೊಂಡಿದೆ ಎಂಬ
ಭಾವನೆ ಸಮಂಜಸ ಎನಿಸುವದಲ್ಲವೇ !! ಈ ಅನಾಮಿಕ ಬೆರಳಲ್ಲೇ ಉಂಗುರ ಧರಿಸುತ್ತೇವೆ. ಈ ಅನಾಮಿಕಾ (ಉಂಗುರದ ಬೆರಳು ) ಬೆರಳಿನಿಂದ ನಾಡಿಯೊಂದು ಹೃದಯಕ್ಕೆ ನೇರವಾಗಿ❤️❤️ ಹೋಗಿ ಅನಾಹಾತ ಚಕ್ರವನ್ನು ಜಾಗೃತಗೊಳಿಸುತ್ತದೆ. ಇದರಂತೆ ಕಾಳಿದಾಸನ ಕೃತಿಗಳು ಹೃದಯ ತಲುಪಿ ಅನೇಕ ರಸಗಳ ಉತ್ಪತ್ತಿಗೆ ಕಾರಣವಾಗುತ್ತವೆ.

ಕಾಲಿದಾಸನ ಕಾಲಮಾನದ ಬಗೆಗೂ ಬೇರೆ ಬೇರೆ ಅಭಿಪ್ರಾಯಗಳುಂಟು. ನಿಶ್ಚಿತವಾಗಿ ನಿರ್ಧರಿಸಲಾಗದಿದ್ದರೂ ಕ್ರಿ .ಶ. ಸುಮಾರು ೪೦೦ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಹೊಳೆಯ ಶಿಲಾಶಾಸನ ಒಂದರಲ್ಲಿ ಕಾಲಿದಾಸನ ಹೆಸರು ಕಾಣಿಸಿಕೊಂಡಿದೆ.
ವಿಕ್ರಮಾದಿತ್ಯನ ” ನವಮಣಿ ” ಗಳಲ್ಲಿ ಇವನ ಹೆಸರು ಸೂಚಿತ ಆಗಿದೆ. ವಿಕ್ರಮಾದಿತ್ಯ ಎಂಬ ಹೆಸರಿನ ಅನೇಕ ರಾಜರು ಭರತ ಖಂಡವನ್ನು ಆಳಿರಬಹುದು.

ಕಾಲಿದಾಸನ ನಾಟಕದಲ್ಲಿ ಕಾವ್ಯ ,ನಾಟಕ ಎರಡರ ಗುಣಗಳೂ ಇವೆ . ” ಮಾಲವಿಕಾಗ್ನಿ ಮಿತ್ರ ” ನಾಟಕದಲ್ಲಿ ಒಂದು ಪ್ರಸ್ತಾವನೆ ಬರುತ್ತದೆ.

“ಪುರಾಣಮ್ ಇತಿ ಏವ ನ ಸಾಧು ಸರ್ವಂ .
ನ ಚಾಪಿ ಸರ್ವಂ ನವಮಿತಿ ಅವದ್ಯಂ”

ಸಾಮಾನ್ಯವಾಗಿ ಹಿರಿಯರು ತಮ್ಮ ಕಾಲದಲ್ಲಿ ಎಲ್ಲಾ ಚೆನ್ನಾಗಿತ್ತು ಎನ್ನುತ್ತ ಹೊಸದನ್ನು ಅಲ್ಲಗಳೆಯುವದುಂಟು!
ಆದರೆ ಕಾಳಿದಾಸ ಇಲ್ಲಿ ಸಮಾಧಾನ ಹೇಳಿದ್ದಾನೆ.

“ಹಳೆಯದೆಲ್ಲವೂ ಉತ್ತಮ ವಾದದ್ದೇ ಎಂದೇನಿಲ್ಲ. ಹೊಸದು ಎಂದು ಅಲ್ಲಗಳೆಯಲೂ ಬೇಕಿಲ್ಲ.
ಸಂತರು ಪರೀಕ್ಷಿಸಿ ಒಳ್ಳೆ ಯದನ್ನು
ಸ್ವೀಕರಿಸುವರು”.
ಅಂದು ಶ್ರೀ ರಾಮ ,ಪ್ರಜಾಪವಾದಕ್ಕೆ ಮಹತ್ವ ಕೊಟ್ಟು ಸೀತೆಯನ್ನು ಕಾಡಿಗೆ ಕಳಿಸಿದರೆ, ಇಂದು ಹಾಗೆ ಮಾಡಲಾದೀತೇ?
ಈ ಹೊಸ ಯುಗ ಇಷ್ಟೊಂದು ಸುವಿಧಗಳನ್ನು ನೀಡಿದಾಗ ಅದನ್ನು ಅಲ್ಲಗಳೆಯಬಹುದೇ ?

ನಾಟಕವು ಭಿನ್ನ ಭಿನ್ನ ರುಚಿಗಳ ಜನರ ಏಕೀಕೃತ ಸಮಾರಾಧನೆ ಎಂದು ಕಾಳಿದಾಸನ ಅಭಿಪ್ರಾಯ.

ಇನ್ನು ” ತತ್ರರಮ್ಯಾ ಶಾಕುಂತಲಾ ” ಇದಕ್ಕೆ ಬರೋಣ. ಇಲ್ಲಿ ಕವಿಯ ಪ್ರತಿಭೆ ಪರಿಪಕ್ವಗೊಂಡಿದೆ.
ರಚನಾ ಕೌಶಲ್ಯ, ಭಾವಸೌಷ್ಠವ, ಭಾಷಾ ಮಾಧುರ್ಯ, ಅಲಂಕಾರ, ಸಾಲಂಕೃತವಾದ ಪದಾವಳಿಗಳು, ಪ್ರಕೃತಿಯ ಚಿತ್ರಣ ಇತ್ಯಾದಿ ರಸಪರಿಪಾಕದಿಂದ ಮೂಲಕಥೆಯನ್ನು ಎಲ್ಲರೀತಿಯಲ್ಲಿ ಮೀರಿಸಿದೆ.ಮೂಲಕಥೆ ಮಹಾಭಾರತದಲ್ಲಿ, ಪದ್ಮಪುರಾಣದಲ್ಲಿ ಕಾಣಿಸುತ್ತದೆ. ನೀರಸವಾದ ಮೂಲಕಥೆ ಕೆಲವು ಚಿಕ್ಕ ಚಿಕ್ಕ ಪರಿವರ್ತನೆಗಳೊಂದಿಗೆ‌ ಇಲ್ಲಿ ರಸಭರಿತ ಆಗಿದೆ. ಶೃಂಗಾರ ,ಕರುಣ ರಸಗಳ ಸಂಚಾರದ ಅನುಭವ ಈ ರಚನೆಯಲ್ಲಿ ಆಗುವದು.

ಶಕುಂತಲ ಎಂದರೆ ಕಾಳಿದಾಸನ ಅಭಿಜ್ಞಾನ ಶಾಕುಂತಲದ ‘ಅಭಿಜ್ಞಾನ’ವಾಗುತ್ತದೆಯೇ ಹೊರತು ವ್ಯಾಸರ ಶಕುಂತಲೆಯನ್ನು ಮರೆಸಿಬಿಟ್ಟಿದೆ.
ಭೀಭತ್ಸ ಒಂದನ್ನು ಬಿಟ್ಟು ಎಲ್ಲ ರಸಗಳು ಇಲ್ಲಿ ಹರಿದರೂ ಶೃಂಗಾರ ರಸವು ಸರ್ವಾತಿಶಾಯಿ.
ಅದಕ್ಕೇ ಕೆಲವು ಮಡಿವಂತರು, ಸ್ತ್ರೀಪರವಾದಿಗಳು ದುಷ್ಯಂತನನ್ನು ಸ್ತ್ರೀ ಲೋಲುಪ ,ಮೋಸಗಾರ ಎಂದೆಲ್ಲ ಹಳಿಯುವರು. ಆದರೆ ಅವನ ಪ್ರಕೃತಿ ಅಂದರೆ ಸ್ವಭಾವ ಧರ್ಮಪರ ಎಂದೇ ಕವಿ ತೋರಿಸಿದ್ದಾನೆ.

ಮನೋವೈಜ್ಞಾನಿಕತೆ ಇಲ್ಲಿದೆ ಎಂಬುದನ್ನು ಕಥೆ ಮುಂದೆ ಸಾಗಿದಂತೆ ಕಾಣುವೆವು.ಕಣ್ಣಿಗೆ ಕಂಡದ್ದೇ ಸತ್ಯ ಎನಲಾಗದು. ಪ್ರಕೃತಿ ವರ್ಣನೆ ಮತ್ತು ಮನೋಭಾವ ಗಳ ವರ್ಣನೆಯೊಂದಿಗೆ ಇದು ಅಸಾಧಾರಣ ಕೃತಿ ಎನಿಸಿದೆ.

“ಅಭಿಜ್ಞಾನ ಶಾಕುಂತಲ”, ಇದು ೭ ಅಂಕಗಳ ನಾಟಕ. .ದುಷ್ಯಂತ ಶಕುಂತಲೆಯರ ಪ್ರೇಮಗಾಥೆ. ವ್ಯಾಸರ ಕಥೆಗಿಂತ ಸ್ವಲ್ಪ ಭಿನ್ನ. ಅಲ್ಲಿ ಅದು ಧರ್ಮಸ್ಯ ಮೂಲಂ ಅರ್ಥಂ ಎಂದಾದರೆ ಇಲ್ಲಿ ಧರ್ಮಸ್ಯ ಮೂಲಂ ಕಾಮ ಆಗಿದೆ. ಏನೇ ಆದರೂ ಪುರುಷಾರ್ಥಗಳ ಸಾಧನೆ ಧರ್ಮದ ಚೌಕಟ್ಟಿನಲ್ಲಿ ಎಂಬುದು ಸ್ಪಷ್ಟ .

ಜಗತ್ ಪ್ರಸಿದ್ಧವಾದ ಈ ನಾಟಕ ಅನೇಕ ಭಾಷೆಗಳಲ್ಲಿ ಭಾಷಾಂತರ ಹೊಂದಿದೆ. ವಿಶ್ವದಾದ್ಯಂತ ಮನ್ನಣೆ ಪಡೆದಿದೆ.

ನಾನ್ಯಾಕೆ ಈ ಅಂಕಣಕ್ಕೆ” ಶಾಕುಂತಲ” ಆಯ್ಕೆ ಮಾಡಿದೆ ಅದಕ್ಕೆ ಒಂದು ಕಾರಣ ಹೇಳಿಬಿಡ್ಲಾ!?

ನಾನು ಮದುವೆ ಆಗಿ ಅತ್ತೆ ಮನೆಗೆ
ಹೋದ ಹೊಸದರಲ್ಲಿ ನನ್ನ ಅಜ್ಜ,
ಮಾತಾಮಹರು ಒಂದು ಪತ್ರ ಬರೆದಿದ್ದರು.ಅದರಲ್ಲಿ ಶಾಕುಂತಲದ ನಾಲ್ಕನೇ ಅಂಕದ ಪ್ರಸಿದ್ಧ ಶ್ಲೋಕ ಬರೆದು ಗೃಹಿಣಿಯ ಕರ್ತವ್ಯ ಏನು ಎಂದು ಉಪದೇಶಿಸಿದದರು.ಅದು ಕಣ್ವರು ಶಕುಂತಲೆಗೆ ಹೇಳಿದ್ದು. ಇಂದಿಗೂ ಪಂಚಶೀಲ ಎನಿಸಿದೆ ಎಂದರೆ ತಪ್ಪಾಗಲಾರದು.

ಈ ಶ್ಲೋಕವನ್ನು ನಾಲ್ಕನೇ ಅಂಕ ಬಂದಾಗ ತಿಳಿದು ಕೊಳ್ಳೋಣ !
೧೯೬೨ ರಲ್ಲಿ ಬರೆದ ಪತ್ರ ನನ್ನ ಖಜಾನೆಯಲ್ಲಿ ಸುರಕ್ಷಿತವಾಗಿದೆ.
ಅಲ್ಲಿ ಇಟ್ಟು ಬೀಗ ಹಾಕಿ ಅವರ ಸಂದೇಶ ಮರೆತಿಲ್ಲ ಹಾಂ ಮತ್ತ !!
ಅವರು ತೋರಿಸಿದ ಕಾಲಿದಾಸ ಲಿಖಿತ ಮಾರ್ಗದಲ್ಲಿ ನನ್ನ ಜೀವನ ಪೂರ್ಣತ್ವ ಕಂಡಿದೆ.