- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ನಮ್ಮ ನಿತ್ಯ ಜೀವನದಲ್ಲಿ ಬೀಗಗಳ ಮಹತ್ವವೆಷ್ಟು ಅಂತ ನಾವು ಅರಿಯದವರಲ್ಲ. ಯಾವುದಕ್ಕೂ ಬೀಗ ಜಡಿದೆವೆಂದರೇ ನಮಗೆ ನಿಶ್ಚಿಂತೆ. ಮನೆ ಬಿಟ್ಟು ಹೊರಡುವಾಗೆಲ್ಲಾ ಬೀಗ ಸರಿಯಾಗಿ ಹಾಕೆದೇವೋ ಇಲ್ಲವೋ ಅಂತ ಜಗ್ಗಿ ಜಗ್ಗಿ ನೋಡಿ ಮನದಟ್ಟು ಮಾಡಿಕೊಳ್ಳುವುದರಲ್ಲಿ ಯಾರೂ ಹೊರತಲ್ಲ. ಆಧುನಿಕ ಪರಿಕರಣಗಳು ಬಂದ ಮೇಲಂತೂ ಅವು ಅನ್ಯರ ಕೈಯಲ್ಲಿ ಬಿದ್ದು ಪೋಲಾಗದಿರಲೆಂದು ಹೊಸ ಹೊಸ ತರದ ಬೀಗಗಳ ಆವಿಷ್ಕಾರ ನಡಿದಿರುವುದು ಸುಳ್ಳಲ್ಲ. ಮುಂಚೆ ಲ್ಯಾಂಡ್ ಲೈನ್ ಫೋನ್ ಗಳಿಗೆ ಇದ್ದ ಎಸ್ ಟಿಡಿ ಲಾಕ್, ಟಿವಿಗೆ ಚೈಲ್ಡ್ ಲಾಕ್, ಬ್ರೀಫ್ ಕೇಸುಗಳಿಗೆ ಮೂರು ಅಂಕೆಗಳ ಬೀಗ ಇಲ್ಲಿ ನೆನೆಯಬಹುದಾಗಿದೆ.
ಬೀಗದ ಭದ್ರತೆ ಎಷ್ಟೇ ಇರಲಿ, ಬೀಗದ ಕೈ ಕಳೆದಾಗ ಹೇಳಲಾರದಷ್ಟು ಕಿರಿಕಿರಿಯಾಗುವುದಿದೆ. ಬೀಗ ಹಾಕಿದಾಗ ಗಟ್ಟಿಯಾಗಿರಬೇಕೆಂದು ಬಯಸುವ ನಾವು, ಬೀಗದ ಕೈ ಮರೆತಾಗ ಅದು ಬೆಣ್ಣೆಯಂತೆ ಕರಗಿ ಅನುಕೂಲ ಮಾಡಿಕೊಡಬೇಕೆಂದು ಬಯಸುತ್ತೇವೆ. ಬೀಗದ ಕೈ ಮರೆತಾಗ ಚಿಕ್ಕ ಬೀಗ ಸಹ ಬೃಹದಾಕಾರವಾಗಿ ಕಾಣುತ್ತದೆ. ಇಷ್ಟು ಗಟ್ಟಿ ಬೀಗ ಹಾಕಿದ್ದಕ್ಕೆ ನಮ್ಮನ್ನು ನಾವೇ ಹಳಿದುಕೊಳ್ಳುತ್ತೇವೆ
ನನ್ನ ಬ್ರೀಫ್ ಕೇಸಿಗಿದ್ದ ಮೂರು ನಂಬರಿನ ಬೀಗ ನನಗೆ ತುಂಬಾ ಉಪಯೋಗಿಯಾಗಿತ್ತು. ನನ್ನ ಮಕ್ಕಳ ಕೈಗೆ ಸಿಗದ ಹಾಗೆ ನಾನದರ ಬೀಗ ಹಾಕಿ ಆರಾಮವಾಗಿರುತ್ತಿದ್ದೆ. ಒಂದು ದಿನ ಮಕ್ಕಳ ಮುಂದೆ ನನ್ನ ಬುದ್ಧಿವಂತಿಕೆ ತೋರಿಸುತ್ತಾ ಅದನ್ನು ಹೇಗೆ ಬದಲಿಸುವುದು, ಹೊಸ ಸೆಟ್ಟನ್ನು ಹೇಗೆ ಹೊಂದಿಸುವುದು ಎಂದು ತೋರಿಸಿ, ಹೊಸ ನಂಬರುಗಳನ್ನು ಹೊಂದಿಸಿದೆ. ನನ್ನ ಮಗಳು ರಾತ್ರಿ ಅದರ ಮೇಲೆ ಪ್ರಯೋಗ ಮಾಡಿ ಬೇರೇ ನಂಬರುಗಳಿಗೆ ಹೊಂದಿಸಿದ್ದಾಳೆಂದು ನನಗೆ ತಿಳಿಯಲಿಲ್ಲ. ಮರುದಿನ ತೆಗೆಯಲು ನೋಡುತ್ತೇನೆ, ಬರದು. ಕೇಳಿದಾಗ ತಾನೇ ಬದಲಿಸಿರುವುದಾಗಿ ಹೇಳಿದಳು. ಆದರೆ ಅವಳಿಗೆ ಹೊಸದಾಗಿ ಹೊಂದಿಸಿದ ನಂಬರುಗಳು ಅನುಕ್ರಮವಾಗಿ ನೆನಪಿರಲಿಲ್ಲ. ಇನ್ನು ನನ್ನ ಪಾಡು ನೋಡಿ. ನನಗೆ ಗೊತ್ತಿದ್ದ ಗಣಿತದ ಬುದ್ಧಿಯನ್ನೆಲ್ಲಾ ಉಪಯೋಗಿಸಿ ಮೂರು ಅಂಕೆಗಳ ಅನುಕ್ರಮ ಸಾಧಿಸುತ್ತಾ ಒದ್ದಾಡಿ ಕೊನೆಗೂ ತೆಗೆದಾಗ ಹುಶ್ಶಪ್ಪ ಅನಿಸಿತ್ತು. ಅದರೊಳಗೆ ನನ್ನ ಆಫೀಸಿನ ಬೀಗದ ಕೈ ಇದ್ದಿದ್ದು ಅಂದೇನಾದರೂ ತೆಗೆಯಲು ಬಾರದಿದ್ದಲ್ಲಿ ಆಫೀಸರ್ ನ ಕೈಯಲ್ಲಿ ನನಗೆ ಮಂಗಳಾರತಿ ಆಗುತ್ತಿತ್ತು.
ನನ್ನ ಸ್ನೇಹಿತನೊಬ್ಬ ನಾಲ್ಕನೇ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದ. ಆ ಬಿಲ್ಡಿಂಗ್ ಗೆ ಲಿಫ್ಟ್ ಇರಲಿಲ್ಲ. ಹತ್ತುವಾಗ ಇಳಿಯುವಾಗ ಎಲ್ಲ ಒಮ್ಮೆ ಪರಾಂಬರಿಸಿಕೊಳ್ಳದಿದ್ದಲ್ಲಿ ಮತ್ತೊಮ್ಮೆ ಹತ್ತುವುದೋ ಇಳಿಯುವುದೋ ತಪ್ಪುತ್ತಿರಲಿಲ್ಲ. ಎಷ್ಟೋ ಸಲ ಅವನು ತನ್ನ ಮನೆ ಬೀಗದ ಕೈ ಇಡುತ್ತಿದ್ದ ಚೀಲವನ್ನು ಕೆಳಗೆ ಸ್ಕೂಟರ್ ನಲ್ಲಿ ಮರೆತು ಮೇಲೆ ಹತ್ತಿ ಹತಾಶನಾಗಿ ನಾಲ್ಕನೆಯ ಅಂತಸ್ತಿನ ನಾಕದ ಆರೋಹಣ/ಅವರೋಹಣ ಮಾಡಿದ್ದು ಇದೆ. ಮುಖದ ಮೇಲೆ ಒಂದು ಬಲವಂತದ ನಗೆಯಿಂದ ಸಕ್ಕರೆ ಕಾಯಿಲೆಯವರಿಗೆ ಈ ತರದ ವ್ಯಾಯಾಮವಾಗುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರೂ, ಕೆಂಪೇರಿದ ಅವನ ಮುಖದ ಹಿಂದೆ ಬೀಗದ ಮೇಲಿನ ಸಿಟ್ಟನ್ನು ಕಂಡಿದ್ದೇನೆ.
ನಾನು ಮುಂಬೈನಲ್ಲಿದ್ದಾಗಿನ ಮಾತು. ಅಲ್ಲಿಯ ಫ್ಲಾಟಿನ ಬಾಗಿಲುಗಳೆಲ್ಲ ತಂತಾವೇ ಲಾಕಿಸಿಕೊಳ್ಳುವ ಬೀಗಗಳನ್ನು ಹೊಂದಿರುತ್ತವೆ. ನಮ್ಮ ಹತ್ತಿರ ಯಾವಾಗಲೂ ಬೀಗದ ಕೈ ಇರಲೇಬೇಕು. ಅದೇನಾದರೂ ಒಳಗೇ ಉಳಿದು ಬಾಗಿಲು ಬಿದ್ದರೇ ನಮ್ಮ ಬವಣೆ ಹೇಳತೀರದು. ಒಂದು ದಿನದ ರಾತ್ರಿಯ ವೇಳೆ ನಮ್ಮ ಮನೆಗೆ ಅದೇ ಬಿಲ್ಡಿಂಗಿನಲ್ಲಿರುತ್ತಿದ್ದ ಇಬ್ಬರು ಸ್ನೇಹಿತರು ಬಂದು ಹರಟುತ್ತಿದ್ದರು. ಇಬ್ಬರೂ ಒಬ್ಬಂಟಿಗರಾಗಿದ್ದು ಒಟ್ಟಿಗೆ ಒಂದೇ ಫ್ಲಾಟಿನಲ್ಲಿರುತ್ತಿದ್ದರು. ರಾತ್ರಿಯ ಹೊತ್ತಾದ್ದರಿಂದ ಬರ್ಮುಡ ( ನಿಕ್ಕರಿನ ಹೊಸ ಹೆಸರು) ಗಳಲ್ಲಿದ್ದರು. ಹನ್ನೊಂದಾಯಿತು. ಇನ್ನು ಹೊರಡುವ ಎಂದು ಬೀಗದ ಕೈಗಾಗಿ ತಡಕಾಡಿದರೆ ಎಲ್ಲಿದೆ ? ಇಬ್ಬರೂ ಮತ್ತೊಬ್ಬರು ಇಟ್ಟುಕೊಂಡಿರಬಹುದೆಂದು ಎಣಿಸಿ ತಮ್ಮದನ್ನು ಒಳಗೇ ಬಿಟ್ಟು ಬಂದಿದ್ದರು. ಇನ್ನು ಅವರ ಪಾಡು ಕೇಳಿ. ಕಾಲೊನಿಯಲ್ಲಿಯ ಬೀಗ ತೆಗೆಯುವನಲ್ಲಿಗೆ ಹೋದರು. ಅವನಾಗಲೇ ಕುದುರಿ ಏರಿಯಾಗಿತ್ತು. ಸ್ಟೇಷನ್ ಹತ್ತಿರ ಸಿಗಬಹುದೆಂದು ಅಲ್ಲಿಗೆ ಹೋದರು( ಬರ್ಮುಡಗಳಲ್ಲಿಯೇ ). ಅವನೂ ಮನೆಗೆ ಹೋಗಿಯಾಗಿತ್ತು. ಯಾರೋ ಅವನ ಮನೆ ತೋರಿಸಿದರು. ಅವನನ್ನು ಕರೆದುಕೊಂಡು ಬಂದರು. ಅವನದೋ ಭಾರೀ ಗತ್ತು. ಬಿಲ್ಡಿಂಗಿನ ಸೆಕ್ರೆಟರಿ ಬಂದು ಆ ಫ್ಲಾಟಿನಲ್ಲಿರುವುದು ಇವರೇ ಅಂತ ಖಾತ್ರಿ ಮಾಡಿದರೆ ಮಾತ್ರ ಅವನು ಬೀಗ ತೆಗೆಯುವುದಾಗಿ ಕಂಡಿಶನ್ ಹಾಕಿದ. ಆಗಾಗಲೇ ಹನ್ನೆರಡು ಗಂಟೆ. ಆ ಹೊತ್ತಿನಲ್ಲಿ ಅವರನ್ನು ಎಬ್ಬಿಸಿ, ಅವರ ಕೆಂಗಣ್ಣಿನ ತಾಪ ಭರಿಸಿ, ಅವರಿಂದ ಇವನಿಗೆ ಹೇಳಿಸಿ ಇವನನ್ನು ಬೀಗ ತೆಗೆಯಲು ಪುಸಲಾಯಿಸುವ ಹೊತ್ತಿಗೆ ಸಾಕುಸಾಕಾಗಿ ಹೋಗಿತ್ತು. ಅದೇನು ಕೈ ಚಳಕವೋ ಅವಂದು ! ಎರಡೇ ನಿಮಿಷದಲ್ಲಿ ಬೀಗ ತೆಗೆದ. ೨೫೦ ರುಪಾಯಿ ಮತ್ತು ಆಟೋ ಚಾರ್ಜು ತೆಗೆದುಕೊಂಡು ಹೋದ. ಅವತ್ತಿನಿಂದ ಇಬ್ಬರೂ ಬೀಗದ ಕೈಯನ್ನು ಚರ್ಮಕ್ಕೆ ಹೊಲಿದುಕೊಳ್ಳುತ್ತೇವೆಂದು ಆಣೆ ಮಾಡಿದ್ದರು.
ಹೀಗೆ ಹೇಳ್ತಾ ಹೋದರೆ ಇನ್ನೂ ಹಲವಾರಿವೆ. ಕಂಪ್ಯೂಟರ್ ತೆಗೆಯಲು ಹೋಗಿ ಪಾಸ್ ವರ್ಡ್ ( ಇದೇ ಅದರ ಬೀಗದ ಕೈ ಯಲ್ಲವೇ) ಮರೆತು ಕೈಕಟ್ಟಿ ಕೂತದ್ದು ( ಜುರಾಸಿಕ್ ಪಾರ್ಕ್ ನೆನಪಿಗೆ ತಂದುಕೊಳ್ಳಿ), ಬೀರುವಿನ ಬೀಗದಕೈ ಸಿಗದೇ ರಿಪೇರಿ ಮಾಡಿಸಿಯಾದ ಮೇಲೆ ಅದು ಬಹು ಜಾಗ್ರತೆಯಾದ ಸ್ಥಳದಲ್ಲಿ ಅಡಗಿಸಿಟ್ಟು ಸಿಕ್ಕಿ ನಮ್ಮನ್ನು ಅಣಕಿಸಿದ್ದು ಇಂಥವು ನಮಗಾಗಿರದ ಅನುಭವಗಳೇನಲ್ಲ. ಇನ್ನೂ ಕೆಲವು ಅಸಹನೀಯವೆನಿಸಿದ್ದೂ ಇವೆ. ಅರ್ಜಿಂಟಿನಲ್ಲಿ ಪ್ಯಾಂಟಿನ ಮೇಲೆ ಶೌಚಕ್ಕೆ ಹೋದಾಗ ಬೀಗದಕೈ ಗೊಂಚಲು ಕಿಸೆಯಿಂದ ಜಾರಿ ಅದರ ಕುಣಿಯಲ್ಲಿ ಬೀಳುವುದು, ನಮ್ಮ ವಾಹನದ ಕೀಲಿಕೈ ಕಳೆದುಹೋಗಿ ವಾಹನವನ್ನು ಅತ್ತಿತ್ತ ಅಲುಗಾಡಿಸುತ್ತ ತಲೆ ಕೆಡಿಸಿಕೊಳ್ಳುತ್ತಿರುವಾಗ ದಾರಿಯಲ್ಲಿ ಹೋಗುವವರು ಸಂಶಯದ ದೃಷ್ಟಿಯಿಂದ ನೋಡುವುದು ಇಲ್ಲಿ ಉದಾಹರಿಸಬಹುದಾಗಿದೆ.
ಬೀಗಗಳ ಇಷ್ಟು ಗಟ್ಟಿತನದ ಗುಣಗಳಿಂದಲೋ ಏನೋ, ಗಂಡಿನ ಕಡೆಯವರಿಗೆ ಮದುವೆಗಳಲ್ಲಿ “ ಬೀಗರು” ಎನ್ನುವುದು ! ಅವರನ್ನು ಒಲಿಸಿಕೊಳ್ಳುವುದೆಂದರೆ, ಏನು ಮಾಡಬೇಕೋ ಗೊತ್ತಿಲ್ಲದ ಬೀಗದಕೈಯಿಂದ ಅವರಿಗೆ ಬೇಕಾದ್ದು ಒದಗಿಸುವುದು ಮತ್ತೆ ಪ್ರಸನ್ನರನ್ನಾಗಿ ಮಾಡಿಕೊಳ್ಳುವುದು.
ಈ ಥರದ ಪ್ರತಿ ಅನುಭವದ ನಂತರ ಇನ್ನು ಮುಂದೆ ತುಂಬ ಜಾಗ್ರತೆಯಾಗಿರಬೇಕೆಂದು ನಿಶ್ಚಯಿಸಿ, ಅದನ್ನು ಕಾರ್ಯರೂಪಕ್ಕೆ ತರುವಾಗ, ಇನ್ನೊಂದು ತರದ ಅನುಭವ ಧುತ್ತೆಂದು ನಿಲ್ಲುವುದೇ ಜೀವನ ಅಲ್ಲವೇ ! ಬೀಗದ ಪ್ರಕರಣಗಳೂ ಇದಕ್ಕೆ ಹೊರತಲ್ಲ. ಬೀಗಗಳು ಹಾಕುವುದೂ ತಪ್ಪುವುದಿಲ್ಲ, ಬೀಗದ ಕೈಗಳು ಕಳೆದುಕೊಳ್ಳುವುದೂ ತಪ್ಪುವುದಿಲ್ಲ, ಕೈ ಕೈ ಹಿಸುಕಿಕೊಳ್ಳುವುದೂ ತಪ್ಪುವುದಿಲ್ಲ. ಇದುವೇ ಜೀವ ಇದು ಜೀವನ !!
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ