ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸುಚಿತ್ರಾ ಹೆಗಡೆ
ಇತ್ತೀಚಿನ ಬರಹಗಳು: ಸುಚಿತ್ರಾ ಹೆಗಡೆ (ಎಲ್ಲವನ್ನು ಓದಿ)

ಹೂಮಾಲೆಯೊಂದು ಕಟ್ಟುತ್ತಿದ್ದೇನೆ
ಸಾವಧಾನತೆಯಿಂದ
ನಿಮಗ್ನಳಾಗಿ…

ಒಂದರ ಪಕ್ಕ ಇನ್ನೊಂದು
ಒಂದೇ ಸಮ ಬರುವಂತೆ
ಹೂವು ಇಟ್ಟು ಜೋಡಿಸಿ…

ಕುಸುಮ ಕೋಮಲ ಪಕಳೆ
ನೋವಾಗದಷ್ಟು ಸಡಿಲ
ಸಪೂರವಾದ ದಂಟುಮೈ
ಜಾರಿ ಬೀಳದಷ್ಟು ಬಿಗಿಯಾಗಿ…

ಅರಿವಿನ ದಾರದಿಂದ
ಸುತ್ತಿ ಸುಳಿದು ಮುತ್ತಿಕೊಳ್ಳುವ
ಗೋಜಲುಗಳ…

ಒಂದೊಂದಾಗಿ ಬಿಡಿಸಿಕೊಂಡು
ಕಂಡರೂ ಕಾಣದಂತೆ
ಸಂಯಮದ ಗಂಟು ಬಿಗಿದು…

ಮತ್ತೆ ಮುಂದಿನ ಹೂವು…
ಸಾವಧಾನತೆಯಿಂದ
ನಿಮಗ್ನಳಾಗಿ…

ಒಂದು ಸಲಕ್ಕೆ ಒಂದೇ ಹೂವು
ನೋಯದಂತೆ ಬೀಳದಂತೆ
ದಾರಗಳು ಸಿಕ್ಕಾಗದಂತೆ…

ಮಧ್ಯೆ ಬರುವ ನೂರೆಂಟು
ಚಿಂತೆಗಳ ನೆನಪುಗಳ ತಾಕಲಾಟಗಳ
ಬಿಡಿ ಹೂಗಳ ರಾಶಿಯನ್ನು…

ಒಂದೊಂದಾಗಿ ನಿಧಾನವಾಗಿ
ನಾಜೂಕಾಗಿ ನೇವರಿಸಿ
ದೂರ ಸರಿಸಿ … ಸರಿಸಿ…ಸರಿಸಿ…

ಒಂದು ಸಲಕ್ಕೆ ಒಂದೇ ಹೂವು
ಸಾವಧಾನತೆಯಿಂದ
ನಿಮಗ್ನಳಾಗಿ…

ಕೆಲವೇ ದಿನಗಳ ಹಿಂದೆ
ನಾವಾಡಿದ ಮಾತುಗಳು
ಓಡಾಟ ಸಲ್ಲಾಪ ನಗು ಅಳು…

ಹೂಗಳ ಮೃದುತ್ವ
ದಾರದ ಹರಿತ ಸ್ಪರ್ಶ​
ಒಟ್ಟೊಟ್ಟಿಗೇ ಅನುಭವಿಸುತ್ತ….

ಮತ್ತೆ ಹೂಗಳನ್ನು ಒಂದೊಂದಾಗಿ
ಜೋಡಿಸುತ್ತ…ಗಮನಿಸುತ್ತ…
ಎಲ್ಲವನ್ನೂ ಸ್ವಾಗತಿಸುತ್ತೇನೆ…

ಬಂದು ಕೆಲಸಮಯ ಇದ್ದು
ತಮ್ಮಷ್ಟಕ್ಕೆ ಹಾದುಹೋಗುವ ಭಾವಪಯಣವನ್ನು
ನಿರಾಳತೆಯಿಂದ ಅನುಭವಿಸುತ್ತೇನೆ….

ಸಾವಧಾನತೆಯಿಂದ
ನಿಮಗ್ನಳಾಗಿ…